ನನ್ನೊಳಗಿನ ಕವಿತೆ…!


’ಕವಿತೆಯೆಂದರೆ ನನಗದು ಅಮ್ಮನ ಮಡಿಲು, ಅಪ್ಪನ ಹೆಗಲು, ಅಣ್ಣನ ಅಂಗೈ ಮತ್ತು ಅವನ ಅಪ್ಪಿದ ತೋಳೊಳಗಿನ ಹರವಾದ ಎದೆ’ ಎಂದು ಭಾವುಕವಾಗುವ ಕವಯತ್ರಿ ಶ್ರೀದೇವಿ ಕೆರೆಮನೆ ಅವರು, ತಮ್ಮ ‘ಮೈ ಮುಚ್ಚಲೊಂದು ತುಂಡುಬಟ್ಟೆ’ ಶೀರ್ಷಿಕೆಯ ಹೊಸ ಕವನ ಸಂಕಲನದಲ್ಲಿ ತಮ್ಮ ಕಾವ್ಯದ ನಂಟು , ಅದರ ಗ್ರಹಿಕೆಯ ರೀತಿ ಕುರಿತು ಬರೆದ ಮಾತುಗಳು ಇಲ್ಲಿವೆ.

ಕವಿತೆ ನನ್ನೊಳಗನ್ನು ನಾನು ತೆರೆದುಕೊಳ್ಳುವುದಕ್ಕೆ ಒಂದು ಮಾರ್ಗ ಎಂದು ಹೇಳಿದರೆ ಬಹುಶಃ ನಾನೇನೂ ಹೇಳಿದಂತಾಗುವುದಿಲ್ಲ. ಆದರೂ ಈ ಮಾತು ಎಲ್ಲವನ್ನೂ ಒಳಗೊಂಡಂತೆಯೂ ಕೂಡ. ಮನಸ್ಸು ತೀರಾ ನೊಂದಾಗಲೂ, ಖುಷಿಯಂತೆ ಹಕ್ಕಿಯಾಗಿ ಹಾರಿದಾಗಲೂ ನಾನು ಅಭಿವ್ಯಕ್ತಿಸಲು ಆಯ್ದುಕೊಳ್ಳುವುದು ಕವಿತೆಯನ್ನೇ. ಹೀಗಾಗಿ ಕವಿತೆಯೆಂದರೆ ನನಗದು ಅಮ್ಮನ ಮಡಿಲು, ಅಪ್ಪನ ಹೆಗಲು, ಅಣ್ಣನ ಅಂಗೈ ಮತ್ತು ಅವನ ಅಪ್ಪಿದ ತೋಳೊಳಗಿನ ಹರವಾದ ಎದೆ. ಬೇಸರ ಹಾಗೂ ಸಂತಸವನ್ನು ಹಂಚಿಕೊಳ್ಳುವ ನನ್ನೆಲ್ಲ ಪ್ರೀತಿಪಾತ್ರರ ಕಣ್ಣ ಹಾರೈಕೆಯೇ ಕವಿತೆ ಎಂದು ಎಷ್ಟೋ ಸಲ ಅನ್ನಿಸಿದೆ.

ನನ್ನ ಹದಿನಾಲ್ಕು ಪುಸ್ತಕಗಳ ಓಟದಲ್ಲಿ ಎರಡು ಗಜಲ್ ಸಂಕಲನ, ಇನ್ನೊಂದು ಬೈ ಟೂ ಚಹಾ ಸಂಕಲನ ಸೇರಿದಂತೆ ಈ ಸಂಕಲನ ಏಳನೆ ಕವನ ಸಂಕಲನ. ಏಳು ಕವನ ಸಂಕಲನಗಳಾದ ಮೇಲಾದರೂ ಕವಿತೆಯಲ್ಲೊಂದು ಗಾಂಭೀರ್ಯತೆ ಬರಬೇಕು ಎಂದು ನೀವೇನಾದರೂ ಆಶಿಸುವುದೇ ಆದರೆ ದಯವಿಟ್ಟು ಕ್ಷಮಿಸಿಬಿಡಿ. ಯಾರಿಗೂ ಅರ್ಥವಾಗದ ಗಂಭೀರ ಕವಿತೆಗಳನ್ನು ಬರೆದು, ಮೂಗು ಮೇಲೇರಿಸಿ ಗಂಟು ಮುಖ ಹಾಕಿ ಕುಳಿತುಕೊಳ್ಳುವುದರಲ್ಲಿ ನನಗೆ ಯಾವ ನಂಬಿಕೆಯೂ ಇಲ್ಲ. ಯಾಕೆಂದರೆ ಶ್ರೇಷ್ಠ ಕವಿಗಳೆಂದು ಹೊಗಳಿಸಿಕೊಂಡ ಗುಂಪಿನ ನಡುವೆ ಆತ್ಮವಿಶ್ವಾಸದಿಂದ ಮಾತನಾಡುವಂತೆ, ತಲೆಯ ಮೇಲೆ ಬುಟ್ಟಿ ಹೊತ್ತು ಮನೆಮನೆಗೆ ಮೀನು ಮಾರಲು ಬರುವ ಮಂಕಾಳಿಯೊಂದಿಗೂ ನಾನು ಸಲೀಸಾಗಿ ಬೆರೆಯಬಲ್ಲೆ. ಸಂತೆಯಲ್ಲಿ ಬೀದಿ ಬದಿಗೆ ತರಕಾರಿ ಮಾರಲು ಕುಳಿತುಕೊಳ್ಳುವ ಹೆಂಗಸೊಂದಿಗೆ ಕುಕ್ಕುರುಗಾಲಿನಲ್ಲಿ ಕುಳಿತು ಹರಟೆಹೊಡೆಯಬಲ್ಲೆ. ರಸ್ತೆಯಂಚಿನ ಪೆಟ್ಟಿಗೆಯಂಗಡಿಯ ಎದುರು ನಿಂತು ಚಹಾ ಕುಡಿಯುವಂತಹ ಚಿಕ್ಕ ಪುಟ್ಟ ಸಂತೋಷದಲ್ಲೇ ಬದುಕಿನ ಖುಷಿ ಇದೆ ಎಂದು ನಂಬಿಕೊಂಡವಳು ನಾನು. ಹೀಗಾಗಿ ನನ್ನ ಕವಿತೆಗಳೂ ನಿಮಗೆ ಯಾವ ಮೇಲರಿಮೆ ಇಲ್ಲದ, ರೂಪಕಗಳ ಹಂಗನ್ನು ಅತಿಯಾಗಿ ಹೊತ್ತುಕೊಳ್ಳದ ಸೀದಾ ಸಾದ ಕವಿತೆಗಳೆನಿಸಿದರೆ ನಾನೇನೂ ಮಾಡಲಾರೆ.

ಹಾಗೆ ನೋಡಿದರೆ, ಈ ಬದುಕು ನಿಜಕ್ಕೂ ವಿಸ್ಮಯದ ತವರು. ಅದರೊಳಗೆ ಕವಿತೆ ಮಿಳಿತವಾಗಿಬಿಟ್ಟರಂತೂ ಅದೊಂದು ಅದ್ಭುತ ಪ್ರಪಂಚವೇ ಸರಿ. ಈ ಕವಿತೆ ನನಗೆ ಏನೆಲ್ಲವನ್ನೂ ಕೊಟ್ಟಿದೆ, ನಾಲ್ಕು ಜನರಲ್ಲಿ ಹೆಮ್ಮೆಯಿಂದ ತಲೆ ಎತ್ತುವುದನ್ನು ಕಲಿಸಿದೆ, ಹೇಗೆ ವಿನೀತಳಾಗಬೇಕು ಎಂಬುದನ್ನೂ ತಿಳಿಸಿದೆ, ನನ್ನತನವನ್ನು ಕಾಯ್ದುಕೊಳ್ಳುವುದನ್ನೂ ಇದು ನನಗೆ ರೂಢಿ ಮಾಡಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ನಾನು ಅರ್ಥಮಾಡಿಕೊಳ್ಳುವುದನ್ನು ಹೇಳಿಕೊಟ್ಟಿದೆ. ಕವಿತೆ ಎಂದರೆ ನನ್ನ ಪಾಲಿಗೆ ಗುರು, ತಪ್ಪಿದರೆ ಕಿವಿ ಹಿಡಿದು ದಂಡಿಸುವ ಶಿಕ್ಷಕ, ಕೈ ಹಿಡಿದು ನಡೆಸುವ ನನ್ನೊಳಗಿನ ಚೇತನವೇ ಆಗಿಬಿಟ್ಟಿರುವಾಗ ನಾನು ಕವಿತೆಯ ಬಗ್ಗೆ ಮತ್ತೇನನ್ನು ಹೇಳಲು ಸಾಧ್ಯ.

ನಾನು ಒಂದು ಕವಿತೆ ಬರೆಯಲು ತೆಗೆದುಕೊಳ್ಳುವ ಸಮಯ ತೀರಾ ಕಡಿಮೆ. ತಲೆಯೊಳಗಿನ ವಿಷಯ ಹೆಪ್ಪುಗಟ್ಟುತ್ತಿದ್ದಂತೆಯೇ ಅದನ್ನು ಟೈಪಿಸಿಬಿಡುವುದೇ ಹೆಚ್ಚು. ಅಷ್ಟಾಗಿಯೂ ಮರು ಓದಿಗೆ ತಿದ್ದಬೇಕು ಎನ್ನಿಸಿದರೆ, ನನ್ನ ಮೊದಲ ಓದುಗರು ಅದರ ಬಗ್ಗೆ ಸಲಹೆ ನೀಡಿದಾಗ ಮಾತ್ರ ತಿದ್ದುವ ಗೋಜಿಗೆ ಹೋಗುವವಳು ನಾನು. ಮನಸ್ಸನ್ನು ಹಗುರಗೊಳಿಸಿಕೊಳ್ಳಲು ನಾನು ಬರೆಯುವುದೇ ಹೆಚ್ಚಾಗಿರುವಾಗ ಅದಕ್ಕೊಂದು ಕಟ್ಟುಪಾಡು ಹಾಕಿಕೊಳ್ಳುವುದೇ ಇಲ್ಲ. ಅದೂ ಅಲ್ಲದೇ, ನನ್ನ ಹೆಚ್ಚಿನ ಕವಿತೆಗಳು ಮೊಬೈಲ್ ನಲ್ಲೇ ಟೈಪ್ ಆಗಿ ಕಂಪ್ಯೂಟರ್ ನ ಪೋಲ್ಡರ್ ಸೇರಿಬಿಟ್ಟರೆ ಮುಗಿದು ಹೋಯಿತು. ಮುಂದೆ ಸಂಕಲನ ಮಾಡುವಾಗಲೇ ಅದರ ನೆನಪು. ಕವಿತೆಯೆಂದರೆ ನನಗೆ ಎಂದೂ ಅಲಂಕಾರದ ಮೊರೆ ಹೋಗದ ನಮ್ಮೂರಿನ ಬೇಡ್ತಿ ದೇವತೆ.

ಇತ್ತೀಚಿನ ದಿನಗಳಲ್ಲಿ ಕವಿತೆ ಎಂಬುದು ಸಮಯ ಕೊಲ್ಲುವ ಸಾಧನ ಎಂಬ ಭಾವ ಹುಟ್ಟುತ್ತಿರುವಾಗ ಕವಿತೆ ನನ್ನ ಜನರ ನೋವನ್ನು ಹಿಡಿದಿಡುವ ಕಣಜದಂತೆ ತೋರುತ್ತದೆ. ಕೇವಲ ಅಲಂಕಾರಿಕ ಶಬ್ಧಗಳ ಮಾಯಾಜಾಲದಲ್ಲಿ ರೋಮಾಂಟಿಕ್ ಭಾವನೆಗಳನ್ನು ಕಟ್ಟಿಕೊಡುವುದಷ್ಟೇ ಕವಿತೆ ಎನ್ನುವ ಕಾಲಘಟ್ಟದಲ್ಲಿ ನಾವಿರುವಾಗ ಜನರ ನೋವನ್ನು ಹಿಡಿದಿಡುವ ಕವಿತೆಗೆ ನನ್ನ ಮೊದಲ ಆದ್ಯತೆ. ಕವಿತೆಯೆಂಬುದು ಜನರ ಪ್ರತಿ ಭಾವಗಳ ಸಂಗಾತ ಎಂದೇ ನನಗೆ ಪದೇ ಪದೆ ಎನ್ನಿಸುತ್ತದೆ. ಹೀಗಾಗಿ, ಕವಿತೆ ನನಗೆ ಯಾವ ಬಣ್ಣವನ್ನೂ ಹಚ್ಚದೇ, ಪ್ರಭಾವಳಿ, ಭುಜಕೀರ್ತಿ ಧರಿಸದೇ ಯಕ್ಷಗಾನದ ಬಯಲಾಟದ ರಂಗ ಮಂಚದ ಮೇಲೇ ನರ್ತಿಸುವ ಬೆಡಗು. ಬಾಲಗೋಪಾಲಕರ ಮುಗ್ಧ ಹೆಜ್ಜೆ, ಒಮ್ಮೊಮ್ಮೆ ಆರ್ಭಟಿಸುವ ಚಂಡೆ. ನಡುವೆ ಬರುವ ಸ್ತ್ರೀ ಪಾತ್ರ. ಕವಿತೆ ನನ್ನ ಸುತ್ತಮುತ್ತಲಿನ ಜಗತ್ತು.... ಅಷ್ಟೇ ಅಲ್ಲ ನನ್ನೊಳಗಿನ ಬದುಕು ಕೂಡ.

ನನ್ನ ಕವಿತೆಯನ್ನು ಪ್ರೀತಿಯಿಂದ ಓದಿ ಯಾವತ್ತೂ ಪ್ರೀತಿಯಿಂದ ಪ್ರತಿಕ್ರಿಯಿಸುವರು ತಂದೆ ಸಮಾನರಾದ ಎಸ್ ಜಿ ಸಿದ್ದರಾಮಯ್ಯ ಸರ್. ನನ್ನ ಗೆಜ್ಜೆ ಕಟ್ಟದ ಕಾಲಲ್ಲಿ ಸಂಕಲನದ ಕವಿತೆಗಳಿಗೆ ವಿಶಿಷ್ಟ ಆಯಾಮ ಒದಗಿಸಿದವರು ಇವರು. ಕವಿತೆ ಹೀಗೆಲ್ಲ ಧ್ವನಿಸುತ್ತದೆಯೇ ಎಂದು ನಾನೇ ಬೆರಳು ಕಚ್ಚಿಕೊಳ್ಳುವಂತೆ ಮಾಡಿ ನನ್ನ ಸಂಭ್ರಮವನ್ನು ಹೆಚ್ಚಿಸಿದ್ದಲ್ಲದೇ ಈ ಸಂಕಲನಕ್ಕೂ ವಿಶಿಷ್ಟ ಮುನ್ನುಡಿ ಬರೆದುಕೊಟ್ಟಿದ್ದಾರೆ. ಇನ್ನು ನಾನು ಪ್ರೀತಿಯಿಂದ ಸುಬ್ಬಣ್ಣ ಎಂದು ಕರೆಯುವ ಸುಬ್ಬು ಹೊಲೆಯಾರ ನನ್ನ ಕವಿತೆಗಳ ಬಗ್ಗೆ ತೀರಾ ನಿಷ್ಟುರವಾಗಿ ಹೇಳುವವರು. ನನಗೆ ಅರಿವಿಲ್ಲದಂತೆ ನನ್ನ ಪ್ರತಿ ನಡೆಯನ್ನೂ ಗಮನಿಸುತ್ತ, ಎಚ್ಚರಿಕೆ ನೀಡುವ ನನ್ನ ಬೆನ್ನ ಹಿಂದಿನ ಅಭಯ ಹಸ್ತ ಇವರು. ಬೆನ್ನುಡಿಗಾಗಿ ಅವರನ್ನು ಕೇಳಿದಾಗಲೂ ನನ್ನ ಕವಿತೆಯನ್ನು ಓದುತ್ತ,ತಿದ್ದುತ್ತಲೇ ಬರೆದುಕೊಟ್ಟಿದ್ದಾರೆ. ನನ್ನ ಕವಿತೆಯನ್ನು ಮೌನವಾಗಿ ಗಮನಿಸುತ್ತಲೇ ಅನಿವಾರ್ಯ ಎನಿಸಿದರೆ ಮಾತ್ರ ಸಲಹೆ ನೀಡುವ ಕಾವ್ಯ ಪಯಣದ ಸಹ ಪಥಿಕ ಗಿರೀಶ ಜಕಾಪುರೆ ಕವನಗಳನ್ನು ವಿಶ್ಲೇಷಿಸಿದ್ದಾರೆ. ಇವರೆಲ್ಲರ ಪ್ರೀತಿಗೆ ಬೇರೆ ಮಾತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಪ್ರೀತಿಯಿಂದ ಕವನಗಳನ್ನು ಅವಲೋಕಿಸಿ, ಪಂಚಿಂಗ್ ಹೆಸರಿಡಬೇಕು ಎನ್ನುತ್ತ ಸಂಕಲನಕ್ಕೆ ಹೆಸರು ಸೂಚಿಸಿದ ಪ್ರತಿಭಾ ನಂದಕುಮಾರ ಮೇಡಂ ಅವರಿಗೆ ಪ್ರೀತಿಯ ನೆನಕೆಗಳು.

ಬರೆಯಲು ಪ್ರಾರಂಭಿಸಿದ ಪ್ರತಿಯೊಬ್ಬರಿಗೂ ಇರುವ ಆಸೆಯೆಂದರೆ ಪ್ರಜಾವಾಣಿ ದೀಪಾವಳಿ ಕವಿತೆ/ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆಯಬೇಕೆಂಬುದು. 2018 ರ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಪಡೆದ ಪ್ರಥಮ ಬಹುಮಾನ ಕವಿತೆಯ ಬಗ್ಗೆ ಆತ್ಮವಿಶ್ವಾಸ ಹೆಚ್ಚಿದೆ. ನನ್ನ ಹೆಮ್ಮೆಗೆ ಕೋಡು ಮೂಡಿಸಿದ ಪ್ರಜಾವಾಣಿ ಸಂಪಾದಕೀಯ ಬಳಗ ಹಾಗೂ ನನ್ನ ಕವಿತೆಯನ್ನು ಆಯ್ಕೆ ಮಾಡಿ ಚಂದದ ವಿಶ್ಲೇಷಣೆ ಹಾಗೂ ಪ್ರೋತ್ಸಾಹದಾಯಕ ಮಾತುಗಳನ್ನಾಡಿದ ಲೋಕೇಶ ಅಗಸನಕಟ್ಟೆ ಹಾಗೂ ಕವಿತಾ ರೈ ಅವರಿಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು. ಕವನಗಳನ್ನು ಪ್ರಕಟಿಸಿದ ಎಲ್ಲ ಪತ್ರಿಕೆಗಳ ಸಂಪಾದಕ ಬಳಗಕ್ಕೂ ನಾನು ಆಭಾರಿ. “ಎಲ್ಲ ಕಟ್ಟುಪಾಡು, ಚೌಕಟ್ಟನ್ನು ಮುರಿಯುವುದೇ ಕವಿತೆ “ಎಂದು ಪದೇ ಪದೆ ಹೇಳಿ, ನನ್ನೊಳಗೆ ಒಂದು ಕೆಟ್ಟ ಸ್ವಾತಂತ್ರ್ಯದ ವಾಂಛೆಯನ್ನು ಬೆಳೆಸಿ ಕವಿತೆಯ ಎಲ್ಲ ಸಿದ್ಧ ಸೂತ್ರಗಳನ್ನು ಗಾಳಿಗೆ ತೂರಲು ಪ್ರೇರೇಪಿಸಿದ ಜಿ.ಪಿ ಬಸವರಾಜು ಸರ್ ರಿಗೆ ಧನ್ಯವಾದ ಹೇಳದೇ ಹೇಗಿರಲಿ? ನನ್ನೆಲ್ಲ ಕೆಲಸಗಳಿಗೆ ಬೆನ್ನೆಲುಬು ಪ್ರವೀಣ ಮತ್ತು ಹೆಮ್ಮೆಯಲ್ಲಿ ಭಾಗಿಯಾಗುವ ನನ್ನದೇ ಕವನಗಳಾದ ಸುಪ್ರಿತ್ , ಪ್ರಣಿತ್ ಹಾಗೂ ಸೂರ್ವೆ, ಹಿರೇಗುತ್ತಿಯ ಬಾಂಧವರಿಗೆ ಧನ್ಯವಾದ ಹೇಳಿದರೆ ನಾಟಕೀಯವಾದೀತು.

ಕವನ ಸಂಕಲನಗಳನ್ನು ಪ್ರಕಟಿಸುವುದಕ್ಕೇ ಪ್ರಕಾಶಕರು ಹಿಂಜರಿಯುತ್ತಿರುವ ಈ ಕಾಲಘಟ್ಟದಲ್ಲಿ ನನ್ನ ಕವನ ಸಂಕಲನವನ್ನು ಮಾಡಿಕೊಡಲು ಒಪ್ಪಿರುವ ‘ಪಲ್ಲವ ’ ಪ್ರಕಾಶನಕ್ಕೊಂದು ಧೈರ್ಯಕ್ಕೊಂದು ಸಲಾಂ. ಪುಟ ವಿನ್ಯಾಸ ಮಾಡಿದ ಶ್ರೀಮತಿ ಬಿ, ರಶ್ಮಿ, ಆಕರ್ಷಕ ಮುಖಪುಟ ಮಾಡಿಕೊಟ್ಟ ಕೆ. ಎಂ ನಿರಂಜನ್ ಸುಂದರವಾಗಿ ಮುದ್ರಿಸುವ ಜವಾಬ್ಧಾರಿ ಹೊತ್ತ ಎಲ್ ಕೆ ಪ್ರೆಸ್ ಇಂಕ್ ಇವರಿಗೂ ನಾನು ಆಭಾರಿ.

MORE FEATURES

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...