ನಾನು, ಅಪ್ಪ, ಅವ್ವ ಮತ್ತು ಕಿರಿಸ್ತಾನಿಕೆ: ಒಂದು ಸಂದಿಗ್ಧಮಯ ಸಂಬಂಧ!- ಚಿನುವ ಅಚೆಬೆ

Date: 10-10-2021

Location: ಬೆಂಗಳೂರು


ಲೇಖಕ, ಅನುವಾದಕ ಕೇಶವ ಮಳಗಿ ಅವರ ಹೊಸ ಅಂಕಣ ‘ಲೋಕೋತ್ತರ’. ಈ ಅಂಕಣದಲ್ಲಿ ಮೊದಲಿಗೆ ಜಗತ್ ಪ್ರಸಿದ್ಧ ಲೇಖಕ, ಕಾದಂಬರಿಕಾರ, ಕವಿ, ಆಲ್ಬರ್ಟ್ ಚಿನುವ ಲುಮೊಗು ಅಚೆಬೆ ಅವರ ಬಾಲ್ಯ, ಅಪ್ಪ-ಅವ್ವರ ನೆನಪುಗಳನ್ನು ಕಥಿಸುತ್ತಲೇ, ‘ಇಗೊ’ ಬುಡಕಟ್ಟಿನ ಕುಟುಂಬವೊಂದನ್ನು ಕ್ರಿಶ್ಚಿಯಾನಿಟಿ ಪ್ರಭಾವಿಸಿದ್ದು, ಬದುಕಿನ ವಿಧಾನವಾದುದ್ದನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. 

ಚಿನುವ ಅಚೆಬೆ: ವಿಶ್ವಮಾನ್ಯ ಲೇಖಕ, ಕಾದಂಬರಿಕಾರ, ಕವಿ, ಉಪನ್ಯಾಸಕ ಆಲ್ಬರ್ಟ್ ಚಿನುವ ಲುಮೊಗು ಅಚೆಬೆ ಹುಟ್ಟಿದ್ದು 1930, ನೈಜೀರಿಯಾದ ಒಗಿದಿ ಎಂಬಲ್ಲಿ. ಬೆಳೆದದ್ದು ಇಗೊ ಎಂಬ ಪುಟ್ಟ ಪಟ್ಟಣದಲ್ಲಿ. ಇಬಾದನ್‌ನ ವಿಶ್ವವಿದ್ಯಾಲಯದ ಕಾಲೇಜ್‌ನಲ್ಲಿ ಇಂಗ್ಲಿಶ್‌ ಮತ್ತು ಸಾಹಿತ್ಯದ ವ್ಯಾಸಂಗದ ನಂತರ, ಅಚೆಬೆ ಕೆಲಕಾಲ ಶಿಕ್ಷಕರಾಗಿ ದುಡಿದರು. ಕವಿ ಕ್ರಿಸ್ಟೋಫರ್ ಒಕಿಗೋ ಅವರೊಂದಿಗೆ ಸೇರಿ 1967 ರಲ್ಲಿ ಪ್ರಕಾಶನ ಸಂಸ್ಥೆಯೊಂದನ್ನು ಸ್ಥಾಪಿಸಿದರು. 1969 ರಲ್ಲಿ ಗೇಬ್ರಿಯಲ್ ಒಕಾರ ಮತ್ತು ಸೈಪ್ರಿಯನ್ ಎಕ್ವೆನ್ಸಿ ಎಂಬ ಇಬ್ಬರು ಲೇಖಕರ ಜೊತೆಗೆ ವಿವಿಗಳಲ್ಲಿ ಉಪನ್ಯಾಸ ನೀಡಲು ಅಮೆರಿಕಾಗೆ ತೆರಳಿದರು. ಅಲ್ಲಿಂದ ವಾಪಸಾದ ನಂತರ ಯುನಿವರ್ಸಿಟಿ ಆಫ್ ನೈಜೀರಿಯಾದಲ್ಲಿ ಸಂಶೋಧನಾ ವಿದ್ಯಾರ್ಥಿಯಾದರು. ನಂತರ ಅಲ್ಲಿಯೇ ಇಂಗ್ಲಿಶ್‌ ಉಪನ್ಯಾಸಕರಾದರು (1976-81). 

‘ಥಿಂಗ್ಸ್ ಫಾಲ್ ಅಪಾರ್ಟ್’ (1958) ಇವರ ಮೊದಲ ಕಾದಂಬರಿ. ಅವರ ತಾಯ್ನಾಡಲ್ಲಿ ಮಿಶನರಿಗಳ ಆಗಮನದ ಸಂದರ್ಭದ ಹಾಗೂ ವಸಾಹತುಶಾಹಿ ಆಡಳಿತ ಕಾಲದ ಸಾಂಪ್ರದಾಯಿಕ ಜೀವನ ಶೈಲಿಯನ್ನು ಇದರಲ್ಲಿ ಚಿತ್ರಿಸಿದ್ದಾರೆ. ಅದರ ಮುಂದುವರಿದ ಭಾಗವನ್ನು ‘ನೋ ಲಾಂಗರ್ ಎಟ್ ಈಸ್’ (1960), ‘ಆರೋ ಆಫ್‌ ಗಾಡ್‌’ಗಳಲ್ಲಿ ಕಾಣಬಹುದು. ಇವನ್ನು ಆಫ್ರಿಕನ್‌ ತ್ರಿವಳಿ ಎಂದು ಗುರುತಿಸುವುದು ವಾಡಿಕೆ. ಅಚೆಬೆ 2007ರಲ್ಲಿ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ ಅಚಿಬೆಯವರು 2013 ಮಾರ್ಚ್ 21ರಂದು ಮೆಸಾಚುಸೆಟ್ಸ್‌ನ ಬಾಸ್ಟನ್‌ನಲ್ಲಿ 82 ನೆಯ ವಯಸ್ಸಿನಲ್ಲಿ ತೀರಿಕೊಂಡರು.  

ಪ್ರಸ್ತುತ ಪ್ರಬಂಧವು ಅವರ ಬಾಲ್ಯ, ಅಪ್ಪ-ಅವ್ವರ ನೆನಪುಗಳನ್ನು ಕಥಿಸುತ್ತಲೇ, ‘ಇಗೊ’ ಬುಡಕಟ್ಟಿನ ಕುಟುಂಬವೊಂದನ್ನು ಕ್ರಿಶ್ಚಿಯಾನಿಟಿ ಪ್ರಭಾವಿಸಿದ್ದು, ಬದುಕಿನ ವಿಧಾನವಾದುದನ್ನು ತೆರೆದಿಡುತ್ತದೆ.  

ಚಿನುವ ಅಚೆಬೆ..
ನನ್ನ ಅಪ್ಪ ಹುಟ್ಟಿದ್ದು 1880ರಲ್ಲಿ, ನಮ್ಮದು ಪೂರ್ವ ನೈಜಿರಿಯದ ‘ಇಗೊ’ ಬುಡಕಟ್ಟು. ಇಂಗ್ಲಿಶ್‌ ಮಿಶನರಿಗಳು ಆಗಲಿನ್ನೂ ಈ ನೆಲದಲ್ಲಿ ಕಾಲಿಡುವ ಸಮಯಕ್ಕೆ ಅಪ್ಪ ಹುಟ್ಟಿದ್ದ. ಆರಂಭಿಕ ಘಟ್ಟದಲ್ಲಿಯೇ ಮತಾಂತರಗೊಂಡಿದ್ದ ಅಪ್ಪ ವಿಧೇಯ ಕ್ರಿಶ್ಚಿಯನ್‌ ಧರ್ಮದ ವಿಧೇಯ ವಿದ್ಯಾರ್ಥಿಯಾಗಿದ್ದ. 1904ರ ಸುಮಾರಿಗೆಲ್ಲ ತಕ್ಕಮಟ್ಟಿಗಿನ ಶಿಕ್ಷಿತನಾಗಿದ್ದ ಆತನನ್ನು ಶಿಕ್ಷಕ ಮತ್ತು ಆಂಗ್ಲ ಮಿಶನರಿಯ ಬೋಧಕನೆಂದು ನೇಮಕ ಮಾಡಿಕೊಳ್ಳಲಾಗಿತ್ತು. 

ಅಪ್ಪ: ಶ್ರದ್ಧಾವಂತ ಕಿರಿಸ್ತಾನ

ಮಿಶನರಿ ಹುಟ್ಟು ಹಾಕಿದ್ದ ಹೊಸತನ ಮತ್ತು ಬೆರಗಿನ ಬದಲಾವಣೆಗಳು ಅಪ್ಪನಲ್ಲಿ ಎಷ್ಟು ಆಳವಾಗಿ ಬೇರೂರಿದ್ದವೆಂದರೆ ಆತ ತನ್ನ ಮೊದಲ ಮಗನಿಗೆ ಫ್ರಾಂಕ್‌ ಒಕೋಫು (ಹೊಸ ಶಬ್ದ) ಎಂದು ಹೆಸರಿಟ್ಟಿದ್ದ. ವಿಧಿ, ಅಪ್ಪನ ಕುರಿತು ನಿಷ್ಠುರಿಯಾಗಿತ್ತು. ಆತನ ಅವ್ವ ಎರಡನೆಯ ಮಗುವಿನ ಹೆರಿಗೆಯಲ್ಲಿ ನೀಗಿಕೊಂಡಿದ್ದಳು. ನಿರ್ದಯಿ ನಾಗರಿಕ ಯುದ್ಧದಿಂದ ತನ್ನ ಹುಟ್ಟು ನೆಲದಲ್ಲಿಯೇ ಪರದೇಸಿಯಾಗಿದ್ದ ಅಪ್ಪನ ಅಪ್ಪ, ಅಂದರೆ ನನ್ನ ಅಜ್ಜ ‘ಅಚೆಬೆ’ ಕೂಡ ಹೆಂಡತಿಯ ಸಾವಿನ ಬಳಿಕ ಬಹಳ ದಿನ ಬಾಳು ನಡೆಸಿರಲಿಲ್ಲ. ಅಪ್ಪನನ್ನು ಜೋಪಾನ ಮಾಡಿದ್ದು ‘ಉಧೋ’ ಎನ್ನುವ ಹೆಸರಿನ ಆತನ ಸೋದರ ಮಾವ. ಅಪ್ಪನ ಈ ಸೋದರ ಮಾವ, ಅಂದರೆ ನನ್ನ ಚಿಕ್ಕ ಅಜ್ಜ, ಬಹಳ ದಯಾಳು ಮತ್ತು ಉದಾರಿಯಾಗಿದ್ದ. ತನ್ನ ಊರಿನಲ್ಲಿ ಕ್ರಿಶ್ಚಿಯನ್‌ ಮಿಶನರಿಯ ಜನರನ್ನು ಮೊದಲಿಗೆ ಬರ ಮಾಡಿಕೊಂಡಿದ್ದು ಈ ಚಿಕ್ಕಜ್ಜನೇ ಅಂತೆ. ಆದರೆ, ‘ನಮ್ಮಂಥ ಸಂಸಾರಸ್ಥರು ಬದುಕುವ ಮನೆಯಲ್ಲಿ ಈ ಗೋಳು ತುಂಬಿದ ಕಿರಿಸ್ತಾನರ ಹಾಡು ಕೇಳಲಾಗದು’, ಎಂದು ಇಗರ್ಜಿಗರನ್ನು ಊರ ಬಯಲಿಗೆ ಸಾಗ ಹಾಕಿದ್ದನಂತೆ. ಹೀಗಿದ್ದರೂ, ತನ್ನ ಸೋದರಳಿಯ ಅವರೊಂದಿಗೆ ಹಾಡುವುದಕ್ಕೆ, ಅವರ ಉಪದೇಶಾಮೃತ ಕೇಳುವುದಕ್ಕೆ ಅಡ್ಡಿಪಡಿಸಲಿಲ್ಲವಂತೆ. 

ನನ್ನ ಚಿಕ್ಕಜ್ಜ ಮತ್ತು ಅಪ್ಪನ ನಡುವಿದ್ದ ಸಂಬಂಧ ನನಗೆ ಪಾಠದಂತಿತ್ತು. ಅಲ್ಲೊಂದು ಆಳವಾದ, ಅಲೌಕಿಕವಾದ ಬೆಸುಗೆಯನ್ನು ಹೊಂದಿದಂತಿತ್ತು. ಅಪ್ಪ, ಚಿಕ್ಕಜ್ಜನ ಬಗೆಗೆ ಸೂಚಿಸುತ್ತಿದ್ದ ಗೌರವ ಮತ್ತು ತನ್ನ ಸೋದರ ಮಾವನ  ಬಗ್ಗೆ ಮಾತನಾಡಿದಾಗ ಆತನ ದನಿಯಲ್ಲಿ ಆಗುತ್ತಿದ್ದ ಬದಲಾವಣೆಗಳಿಂದ ನನಗದರ ಅನುಭವವಾಗುತ್ತಿತ್ತು. ತನ್ನ ಕೊನೆಗಾಲದಲ್ಲಿ ಕಂಡ ಕನಸೊಂದರ ಕುರಿತು ಅಪ್ಪ ನನಗೆ ಹೇಳಿದ್ದ. ದೂರ ಲೋಕದ ಪಯಣಿಗನಂತಿದ್ದ ಆತನ ಸೋದರ ಮಾವ ವಿರಮಿಸಿ, ಇಲ್ಲಿ ಎಲ್ಲ ಸುಖವಾಗಿದೆಯೆ? ಎಂದು ವಿಚಾರಿಸಲೆಂಬಂತೆ ಅಪ್ಪನ ಮನೆಗೆ ಬಂದಿದ್ದನಂತೆ. ಸುಣ್ಣಬಣ್ಣ ಬಳಿದ, ಮಣ್ಣಿನ ಗೋಡೆಗಳ, ಕಬ್ಬಿಣದ ಸರಳಿನ ಛಾವಣಿಯಿರುವ ಸೋದರಳಿಯನ ‘ಆಧುನಿಕ’ ಮನೆಯನ್ನು ಹೊಗಳಿದನಂತೆ.

ಅಪ್ಪ ಸ್ವಭಾವತ ಮಹಾ ಮೌನಿ. ಆತನಿಗೆ ಇನ್ನಷ್ಟು ಪ್ರಶ್ನೆಗಳನ್ನು ಕೇಳದಿದ್ದುದ್ದಕ್ಕೆ ಯಾವಾಗಲೂ ಪರಿತಪಿಸುತ್ತೇನೆ. ಇದ್ದರೂ, ನಾನು ತಿಳಿಯಬೇಕಿದ್ದ ವಿಷಯಗಳ ಕುರಿತು ಹೇಗೋ ಕಷ್ಟಪಟ್ಟು ಹೇಳುತ್ತಿದ್ದುದೂ ನನಗೆ ಗೊತ್ತಿದೆ. ಉದಾಹರಣೆಗೆ, ಆತನ ಯೌವ್ವನದ ದಿನಗಳಲ್ಲಿ ತನ್ನ ಸೋದರ ಮಾವನನ್ನು ಮತಾಂತರಗೊಳಿಸಲು ಪ್ರಯತ್ನಿಸಿದ್ದನ್ನು ಅರ್ಧಂಬರ್ಧ ಅರುಹಿದ್ದ. ತನಗೆ ಗೌರವವಾಗಿ ದೊರಕಿದ ಮೂರು ಪದಕಗಳನ್ನು ಅಪ್ಪನಿಗೆ ತೋರಿಸುತ್ತ ಚಿಕ್ಕ ಅಜ್ಜ ಹೇಳಿದ್ದನಂತೆ: ‘ಅಲ್ಲಾ, ಇವನ್ನೇನಪ್ಪಾ ಮಾಡೋದು? ನನ್ನನ್ನು ಯಾರಿಗಪ್ಪ ಕೊಟ್ಟುಕೊಳ್ಳಲಿ? ನಾನು ಯಾರು ಅನ್ನೊದೊಂದು ಇರುತ್ತಲ್ಲ, ಅದನೇನಪ್ಪ ಮಾಡೋದು? ಇತಿಹಾಸ ಅಂತ ಇದೆಯಲ್ಲ ಅದನ್ನೇನಪ್ಪ ಮಾಡಲಿ?’ 

ವಿಷಮ ಸನ್ನಿವೇಶದಲ್ಲಿ ಹುಟ್ಟಿದ ನಿರ್ಗತಿಕ ಸಂತಾನವಾಗಿದ್ದ, ಖಂಡದ ಅತಿರೇಕ, ಅಸ್ತವ್ಯಸ್ತತೆ, ದಂಗೆ-ಬಂಡಾಯಗಳಿಗೆ ವಾರಸುದಾರನಾಗಿದ್ದವನೊಬ್ಬ ಕಿರಿಸ್ತಾನ ದೈವಜ್ಞರು ನೀಡಿದ ಹೊಸ ವಿವರಣೆ, ವ್ಯಾಖ್ಯಾನವನ್ನು ಹಾಗೂ  ಪರಿಹಾರವನ್ನು ಒಪ್ಪಿಕೊಳ್ಳುವುದು, ಆ ವಿಚಾರಗಳನ್ನು ಬಾಚಿ ತಬ್ಬಿಕೊಳ್ಳುವುದು ಅಚ್ಚರಿದಾಯಕವೇ ಅಲ್ಲವೆ?

ಬುಡಕಟ್ಟಿನ ಪ್ರಜ್ಞೆ: ‘ಉಧೋ’ ಅಜ್ಜ
ಅಪ್ಪನ ಸೋದರ ಮಾವ `ಉಧೋ’ನಾದರೂ ತನ್ನ ಸಮುದಾಯದಲ್ಲಿ ನೀತಿವಂತವೆಂದು ಹೆಸರಾದ, ವಿಶಾಲ ಮನಸ್ಸಿನ ನಾಯಕ. ತನ್ನ ಬುಡಕಟ್ಟು ಮಹಾಗೌರವವಾದ ‘ಹಿರಿಯ ಯಜಮಾನ’ (ಎನ್‌ಸೇ಼ ನ ಓಸೊ಼) ಪದವಿಯನ್ನು ನೀಡಿದಾಗ, ಆತ ಏರ್ಪಡಿಸಿದ್ದ ಭಾರೀ ಔತಣವೇ ಮಹಾ ಬೆರಗಿನಂತಿತ್ತು. ಅರಿಯದ ಊರಿಂದ, ಯಾರೋ ಅಪರಿಚಿತರು ಬಂದು, ಏನೋ ಹೇಳಿದ ಮಾತ್ರಕ್ಕೆ ಬುಡಕಟ್ಟಿನ ಗರಿಮೆ ಬಿಟ್ಟು ಕೊಡಲಾದೀತೆ?

ನಾನು, ನನ್ನ ಅಪ್ಪ ಮತ್ತು ಆತನ ಸೋದರ ಮಾವ ಹೊಂದಿದ್ದ ಜಿಜ್ಞಾಸೆಗಳ ವಾರಸುದಾರನಾಗಿದ್ದೆ. ‘ಉಧೋ’ ತಾನು ನಂಬಿದ್ದನ್ನು ಬಲವಾಗಿ ಹಿಡಿದುಕೊಂಡಿದ್ದ. ಅಂತೆಯೇ, ಸೋದರಳಿಯನಿಗೆ ಉಳಿದ ಉತ್ತರಗಳನ್ನು ಹುಡುಕಿಕೊಳ್ಳುವ ಅವಕಾಶವನ್ನೂ ನೀಡಿದ್ದ. ಅಪ್ಪನ ಕ್ರಿಶ್ಚಿಯನ್‌ ನಂಬಿಕೆ ಅನೇಕ ಸಮಸ್ಯೆಗಳನ್ನೇನೋ ಬಗೆಹರಿಸಿತು. ಆದರೆ, ಬದುಕಿನ ಅರ್ಥಗಳನ್ನಲ್ಲ. ಶಿಕ್ಷಣದ ಕುರಿತು ಅಪ್ಪನಿಗಿದ್ದ ಒಲುಮೆ, ನಾವು ಒಂದು ಕುಟುಂಬವನ್ನು ನೋಡುತ್ತೇವೆಯೋ ಅಥವಾ ಒಟ್ಟಾರೆಯಾಗಿ ಮಾನವ ಸಮಾಜವನ್ನು ನೋಡುತ್ತೇವೆಯೋ ಎಂಬ ಆತನ ಪ್ರಶ್ನೆ; ಏಳಿಗೆಯು ಯಾವಾಗಲೂ ಪುರೋಗಾಮಿ ಎನ್ನುವ ನಂಬಿಕೆ ಹಾಗೂ ಇತಿಹಾಸವು ನಿರ್ದಿಷ್ಟವಾಗಿ ರೂಪಿಸಿ, ಅವಕಾಶ ಒದಗಿಸಿಕೊಡುವಾಗ ಪ್ರತಿ ತಲೆಮಾರು ಅದನ್ನು ಗುರುತಿಸಿ, ಬಿಗಿದಪ್ಪ ಬೇಕು, ಎನ್ನುವ ಆತನ ವಿಶ್ವಾಸಗಳೇ ಅಪ್ಪ ನನಗೆ ನೀಡಿದ ಅತಿದೊಡ್ಡ ಕೊಡುಗೆಗಳಾಗಿವೆ. 

ಇಂದು ನಾನು ನನ್ನ ಅಜ್ಜನ-ಉಧೋ ಒಸಿನಯಿ- ಶ್ರದ್ಧೆಯಲ್ಲಿ ಅಡಗಿದ್ದ ಮಹಾ ಮೌಲ್ಯವನ್ನು ಕಾಣಬಲ್ಲೆ. ಅದೇರೀತಿ, ಮೂವತ್ತೈದು ವರ್ಷಗಳ ಕಾಲ ಒಂದೇ ಶ್ರದ್ಧೆಯಿಂದ ಧರ್ಮಬೋಧನೆ ಮಾಡಿದ ನನ್ನ ಅಪ್ಪನಿಗೆ-ಇಸಾಯಿ ಅಚೆಬೆ- ಶರಣು ಹೇಳಬಲ್ಲೆ. ಆತನ ದೈವ-ಧರ್ಮ ಕಾರ್ಯಗಳಿಂದ ಅನೇಕರು ಉದ್ಧಾರವಾದರು. ಕ್ರಿಶ್ಚಿಯನ್‌ ಮಿಶನರಿಗಳ ಮುಖ್ಯ ಕೆಲಸವೇ ಆಗಿದ್ದ ಶಿಕ್ಷಣದಿಂದ ನಾನು ಅಪಾರವಾದ ಫಲವನ್ನು ಪಡೆದೆ. ಮಿಶನರಿಗಳ ಕೆಲಸ ಮತ್ತು ಧರ್ಮಶ್ರದ್ಧೆಗಾಗಿ ಅಪ್ಪನಿಗೆ ಅವುಗಳ ಮೇಲೆ ಅಪಾರ ಗೌರವ. ಹಾಗೆಯೇ ನನಗೂ. ಆದರೆ, ಮಿಶನರಿಗಳ ಕುರಿತು ನನ್ನ ತಂದೆಗೆ ಅಗತ್ಯವೆಂದು ಕಾಣದಿದ್ದ ಸಂದೇಹಗಳನ್ನೂ ನಾನೂ ಹೊಂದಿದ್ದೇನೆ. ಯುರೋಪಿಯನ್ ಕ್ರಿಶ್ಚಿಯನ್ನರು ಏಸುವಿನ ‘ಸತ್ಯಸಂದೇಶ’ವನ್ನು ಪಸರಿಸಲು ಹಾಗೂ ಕತ್ತಲಕೂಪದಿಂದ ನಮ್ಮನ್ನು ರಕ್ಷಿಸಲು ಹಡಗುಗಳಲ್ಲಿ ನಮ್ಮ ಖಂಡದತ್ತಸಾಗಿ ಬಂದರು. ಆದರೆ, ಇವರ ನೌಕೆಗಳು ನಮ್ಮಲ್ಲಿಗೆ ಬರುವ ಶತಮಾನಗಳ ಮುಂಚೆಯೇ, ಇದೇ ಯುರೋಪಿಯನ್‌ ವಣಿಜರು ನಮ್ಮ ಪೂರ್ವಜರನ್ನು ಭಯಾನಕ ಗುಲಾಮಿ ವ್ಯಾಪಾರಕ್ಕೆ ನೂಕಲು ಅಟ್ಲಾಂಟಿಕ್‌ ಸಾಗರದಲ್ಲಿ ಕಿಕ್ಕಿರಿದ್ದಿದ್ದರು. ಇದರಿಂದ ನಮ್ಮ ಖಂಡದ ಕತ್ತಲು ಕಳೆಯಿತೆ? ಅಥವಾ ಇನ್ನಷ್ಟು ಕತ್ತಲು ವ್ಯಾಪಿಸಿತೆ? ಎನ್ನುವುದು ಎಷ್ಟು ಮುಖ್ಯ? ಎಂದು ನನ್ನಷ್ಟಕ್ಕೆ ಕೇಳಿಕೊಳ್ಳುವೆ. 

ಅಪ್ಪನ ಕುರಿತು ನನಗಿರುವ ದಟ್ಟ ನೆನಪುಗಳೆಂದರೆ ಆತ ನಡೆಸುತ್ತಿದ್ದ ಧರ್ಮಭೋದನೆ ಮತ್ತು ಶಿಕ್ಷಕ ವೃತ್ತಿ. ಆತ ತನ್ನ ಸಣ್ಣ ಗ್ರಂಥಾಲಯದಲ್ಲಿ ಸದಾ ಓದಿನಲ್ಲಿ ತೊಡಗಿರುತ್ತಿದ್ದ. ಗ್ರಂಥಾಲಯದಲ್ಲಿ ನಕಾಶೆ ಮತ್ತು ಹತ್ತಾರು ಚಿತ್ರಪಟ್ಟಿಕೆಗಳು ಗೋಡೆಯನ್ನು ಅಲಂಕರಿಸಿದ್ದವು. ಮಕ್ಕಳನ್ನು ಓದಲು ಪ್ರೇರೇಪಿಸುವಂತೆ ರ್‍ಯಾಕುಗಳಲ್ಲಿ ಜೋಡಿಸಿದ ಪುಸ್ತಕಗಳಿದ್ದವು. ಆತ ಆಗೀಗ ಮಾಯಾಮಂತ್ರದ ಕಥೆಗಳನ್ನು ದೊಡ್ಡಪುಸ್ತಕಗಳಿಂದ ಹೆಕ್ಕಿದ ಪುಟ್ಟ ಆಕರ್ಷಕ ಕಥೆಗಳನ್ನು ಹೇಳುತ್ತಿದ್ದ.  

ಒಗಿದಿಯಲ್ಲಿದ್ದ ಸೇಂಟ್‌ ಫಿಲಿಪ್‌ ಚರ್ಚ್‌ ನಮ್ಮ ಕುಟುಂಬದ ಕೇಂದ್ರಬಿಂದುವಾಗಿತ್ತು. ಅದನ್ನು ಊರ ಹೊರಗಿನ ಹುಲ್ಲುಗಾವಲಿನಲ್ಲಿ ಕಟ್ಟಿಗೆ, ಮಣ್ಣು, ಕಲ್ಲು, ಸಿಮೆಂಟ್‌ ಬಳಸಿ ಕಟ್ಟಲಾಗಿತ್ತು. ಚರ್ಚ್‌ ನಿರ್ಮಾಣದಲ್ಲಿ ಬುನಾದಿ ಕೆಲಸದಿಂದಲೇ ಅಪ್ಪನೂ ಪಾಲ್ಗೊಂಡಿದ್ದ. ಭಾನುವಾರದ ಆರಾಧನೆಯಲ್ಲಿ ಸ್ತ್ರೋತ್ರಗಳನ್ನು ಇಗೊ ಭಾಷೆಗೆ ಅನುವಾದಿಸಿ ಹೇಳಲಾಗುತ್ತಿತ್ತು. ಭಾನುವಾರದ ಆರಾಧನಾ ಸೇವೆಯು ಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತಿತ್ತು. ಕೆಲವರು ಸಭೆ ಮುಗಿಯುವ ವೇಳೆಗೆ ತೂಕಡಿಸುತ್ತ ನಿದ್ರೆಗೆ ಜಾರುತ್ತಿದ್ದುದೂ ಉಂಟು! ಕೆಲವೊಮ್ಮೆ ಇಗೊ ಭಾಷೆಯಿಂದ ಇಂಗ್ಲಿಶಿಗೆ ಅನುವಾದಿಸುವಾಗ ಆಭಾಸಗಳೂ ಆಗುತ್ತಿದ್ದು ನಗೆಯುಕ್ಕಿಸುತ್ತಿದ್ದವು. 

ಅವ್ವನ ನೆನಪು: ಗಟ್ಟಿಗಿತ್ತಿ ನೇರವಂತ ಹೆಣ್ಣು
ಅವ್ವ ಎಂದೊಡನೆಯೇ ಕಣ್ಣೆದುರು ಕಾಣಿಸಿಕೊಳ್ಳುವ ಸ್ಪಷ್ಟ ಚಿತ್ರ: ‘ಗಟ್ಟಿತನ ಮತ್ತು ಮೌನ’. ಆಕೆ ವಾಚಾಳಿಯೂ ಅಲ್ಲ, ಹಾಗೆಂದು, ಸಂಕೋಚದವಳು ಅನ್ನುವಂತೆಯೂ ಇರಲಿಲ್ಲ. ಆಕೆ ಹೊರಗಿನ ಜಂಜಡಗಳಿಂದ ತಪ್ಪಿಸಿಕೊಂಡು ಸದಾ ತನ್ನೊಳಗಿನ ಲೋಕದಲ್ಲಿ ಲೀನವಾದವಳಂತೆ ಕಾಣುತ್ತಿದ್ದಳು. ಮೌನಕ್ಕಿರುವ ಸ್ವಾಂತನದ ಮತ್ತು ಸಾಮರ್ಥ್ಯಗಳನ್ನು ನಾನು ಕಲಿತಿದ್ದು ಆಕೆಯಿಂದಲೇ. ಆಕೆಯ ಶಿಕ್ಷಣವೇ ಅವಳನ್ನೊಬ್ಬ ಮುಂದಾಳು ಗುಣದ ಹೆಣ್ಣನ್ನಾಗಿ ಮತ್ತು ಪಾರಂಪರಿಕ ಬುಡಕಟ್ಟಿನ ರೀತಿ-ರಿವಾಜು ಅರಿತ ಗರತಿಯನ್ನಾಗಿ ಮಾಡಿತ್ತು. ಆಕೆ ಎಲ್ಲರನ್ನೂ ಗೌರವದಿಂದ ಕಾಣುತ್ತ ಅವರಲ್ಲಿ ಆತ್ಮವಿಶ್ವಾಸವುಕ್ಕಿಸಬಲ್ಲವಳಾಗಿದ್ದಳು. ಆಕೆ ಮಾಡುವ ಕೆಲಸಗಳಿಗೆ ತಾನೇ ತಾನಾಗಿ ಘನತೆ ಪ್ರಾಪ್ತವಾಗುತ್ತಿತ್ತು.

ನಮ್ಮ ಕಾಲದಲ್ಲಿ ಧರ್ಮಗಳ ನಡುವಿನ ಆಂತರಿಕ ತಿಕ್ಕಾಟ ಇನ್ನೂ ನಡೆದೇ ಇದ್ದರೂ ನಾವು ಮಾತ್ರ ಪಕ್ಕಾ ಕಿರಿಸ್ತಾನರಾಗಿದ್ದೆವು. ಜನ ಇಬ್ಭಾಗವಾಗಿದ್ದರು. ಒಂದು ಘಟನೆಯಲ್ಲಂತೂ ಇದು ಎದ್ದು ಕಾಣುವಂತೆ ಹೊರಬಂತು. ನಮ್ಮ ಮನೆಯ ಅಂಗಳದಲ್ಲಿದ್ದ ಬಾದಾಮಿ ಗಿಡದಿಂದ ಅವ್ವ ಹಣ್ಣನ್ನು ಉದುರಿಸುವುದನ್ನು ಹಾದಿಹೋಕರಾರೋ ನೋಡಿದರು. ಬುಡಕಟ್ಟು ನಂಬಿಕೆಯಂತೆ ಹೆಣ್ಣು ಬಾದಾಮಿ ಹಣ್ಣನ್ನು ಕೀಳುವುದು ನಿಷಿದ್ಧ! ಅವು ಹಣ್ಣಾಗಿ ಕೆಳಗೆ ಉದುರಿದಾಗ ಪುರುಷರು ಮಾತ್ರ ಆಯಬಹುದಾಗಿತ್ತು. ಮಹಿಳೆಯರು ಆ ಹಣ್ಣನ್ನು ಮುಟ್ಟುವಂತಿರಲಿಲ್ಲ. ಇದೇ ಇಗೊ ಬುಡಕಟ್ಟಿನ ನಂಬಿಕೆ-ಆಚರಣೆ. ಹಾದಿಹೋಕರು ಹಿರೀಕರಿಗೆ ದೂರು ನೀಡಿದರು. ಸರಿ, ಪವಿತ್ರ ಹಣ್ಣು ಮೈಲಿಗೆಯಾದುದನ್ನು ಇತ್ಯರ್ಥಪಡಿಸಲು ಪುರುಷರ ಪಂಚಾಯಿತಿ ಸೇರಿತು. ಆದರೆ, ಧೃತಿಗೆಡದ ಅವ್ವ, ಹಣ್ಣು ಉದುರಿಸುವ ಅಧಿಕಾರ ತನಗಿದೆ ಎಂದು, ಅಲ್ಲದೇ, ಮರವು ತನ್ನ ಮನೆಯ ಅಂಗಳದಲ್ಲಿರುವುದರಿಂದ ಆ ಹಕ್ಕು ಇನ್ನೂ ಹೆಚ್ಚು ಎಂದು, ವಾದಿಸಿದಳು. ಬುಡಕಟ್ಟು ಕಟ್ಟಳೆ ಮುರಿದ ಹೆಂಗಸನ್ನು ಶಿಕ್ಷಿಸಬೇಕು, ಎಂಬ ಅಭಿಪ್ರಾಯ ಬಂದರೂ ಅದು ಅಲ್ಲಿಯವರೆಗೆ ಹೋಗಲಿಲ್ಲ. ಆವರೆಗೆ ಅವ್ವ ಇಷ್ಟೊಂದು ಗಟ್ಟಿಗಿತ್ತಿ ಎಂಬುದರ ಅರಿವೇ ನನಗಿರಲಿಲ್ಲ. ಕ್ರಿಶ್ಚಿಯಾನಿಟಿಯು ಅವ್ವಳಿಗೆ ಮಹಿಳೆಯ ಹಕ್ಕು ಮತ್ತು ಬಿಡುಗಡೆಯ ಕುರಿತು ಕಲಿಸಿತ್ತು.  

ನನ್ನ ಬಾಲ್ಯದ ಪ್ರಜ್ಞೆ ಮತ್ತು ಕಲಾವಂತಿಕೆಗಳು ಮನೆಯೊಳಗೆ ನನ್ನ ತಂದೆತಾಯಿಗಳು ಆಚರಿಸುತ್ತಿದ್ದ ಕ್ರಿಶ್ಚಿಯಾನಿಟಿ ಮತ್ತು ಮನೆಯ ಹೊರಗೆ ಆಚರಣೆಯಲ್ಲಿದ್ದ ನಮ್ಮ ಪೂರ್ವಿಕರ ನಂಬಿಕೆಯಾಗಿದ್ದ, ಪುರಾತನವಾಗಿದ್ದ `ಇಗೊ’ ಬುಡಕಟ್ಟು ನಂಬಿಕೆಗಳ ನಡುವಿನ ತಿಕ್ಕಾಟದಲ್ಲಿ ಹುಟ್ಟುವ ಪ್ರತಿಫಲದಿಂದ ರೂಪುಗೊಂಡಿತು, ಎಂದು ಹೇಳಬಹುದು. ನಾವು ಕಿರಿಸ್ತಾನರಾಗಿದ್ದರೂ ಬುಡಕಟ್ಟಿನ ಅನೇಕ ಬಂಧುಬಳಗದೊಂದಿಗೆ ನಮ್ಮ ಸಂಪರ್ಕವಿತ್ತು. ಮತ್ತು ಹೊಸಧರ್ಮಿಯರಾದ ನಾವು ಅವರನ್ನು ವಿಧರ್ಮಿಯರು (ಹೀಥನ್ನರು) ಎಂದು ಹೀಗಳೆಯುತ್ತಿದ್ದೆವು! ಅಪ್ಪ-ಅಮ್ಮನ ಗಮನ ನನ್ನ ಮೇಲಿಲ್ಲ ಎಂದು ತಿಳಿದಿದ್ದೆ ಬೈಗಿನ ಸಮಯದಲ್ಲಿ ನಾನು ಈ ಬಳಗದವರ ಮನೆ ಹೊಕ್ಕುತ್ತಿದ್ದೆ. ಅವರೆಲ್ಲ ತಮ್ಮ ಆಚಾರ-ಆಚರಣೆಗಳಿಂದ ಸಂತೃಪ್ತರಾಗಿದ್ದಂತೆ ನನಗೆ ಕಾಣುತ್ತಿತ್ತು! ಅವರೇಕೆ ಉಳಿದವರಂತೆ ಕಿರಿಸ್ತಾನರಾಗಲು ಒಪ್ಪುತ್ತಿಲ್ಲ? ಇದನ್ನು ಕಂಡುಕೊಳ್ಳಲೇಬೇಕು ಎಂದು ನನಗನ್ನಿಸುತ್ತಿತ್ತು. (1996)

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...