ನಾನು ಕೃಷಿ ಲೇಖಕನಲ್ಲ,ಕೃಷಿಕ ಲೇಖಕ: ನರೇಂದ್ರ ರೈ ದೇರ್ಲ


2020ನೇ ಸಾಲಿನ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ "ಕನ್ನಡ ಕೃಷಿ ಪುಸ್ತಕ" ಪ್ರಶಸ್ತಿಯು ಡಾ.ನರೇಂದ್ರ ರೈ ದೇರ್ಲ ಅವರ ‘ಬೇರು ಬದುಕು’ ಪುಸ್ತಕಕ್ಕೆ ಸಂದಿದೆ. ಈ ಕುರಿತು ಬುಕ್ ಬ್ರಹ್ಮ ತಂಡದೊಂದಿಗೆ ಸಾಹಿತಿ ಡಾ.ನರೇಂದ್ರ ರೈ ಅವರ ಮಾತುಕತೆ ನಿಮ್ಮ ಓದಿಗಾಗಿ..

ಪ್ರಥಮವಾಗಿ ಅಭಿನಂದನೆಗಳು.. ನಿಮ್ಮ ‘ಬೇರು ಬದುಕು’ ಕೃತಿಯು ‘ಕನ್ನಡ ಕೃಷಿ ಪ್ರಶಸ್ತಿ’ಗೆ ಭಾಜನವಾಗಿರುವ ಬಗ್ಗೆ ನಿಮ್ಮ ಪ್ರತಿಕ್ರಿಯೆ.?

ಧನ್ಯವಾದಗಳು..ಖುಷಿಯಾಗ್ತಿದೆ..ನಮ್ಮಲ್ಲಿ ರೈತ, ಭೂಮಿ, ಕೃಷಿ, ಪ್ರಕೃತಿ ಪರಿಸರವು ಇಂದು ಸ್ವಲ್ಪ ನಿರ್ಲಕ್ಷಿತವಾಗಿದೆ. ಈ ವಿಷಯದ ಬಗ್ಗೆ ಬರೆಯುವವರು ಬೆರಳೆಣಿಕೆಯಷ್ಟು ಬರಹಗಾರರು ಮಾತ್ರ. ನಮ್ಮ ಸಾಹಿತ್ಯ,ಕಲೆ, ಜನಪದಕ್ಕೂ ಬುನಾದಿಯಾಗಿರುವುದು ಕೃಷಿ-ನೆಲ-ನೆಲಪದ..ಈ ನೆಲಪದವೇ ನಿರ್ಲಕ್ಷ್ಯಕ್ಕೆ ಒಳಗಾಗಿರುವಾಗ ರೈತ - ಭೂಮಿಯ ಸಂಬಂಧವನ್ನು ಬಗೆದುತೋರಿಸುವ ಪ್ರಯತ್ನವನ್ನು ನಾನು ಅನೇಕ ವರ್ಷಗಳಿಂದ ಮಾಡುತ್ತಲೇ ಬಂದಿದ್ದೇನೆ. ನನ್ನ ಪತ್ರಿಕೋದ್ಯಮದ ಅವಧಿಯಲ್ಲಿ ನಾನು ಹೆಚ್ಚು ಬರೆದದ್ದು, ರೈತ, ಕೃಷಿ, ಈ ಭೂಮಿಯ ಬಗ್ಗೆ. ಹೀಗಿರುವಾಗ ಕೃಷಿಯ ಬಗ್ಗೆ ಕಾಳಜಿ ಹೊಂದಿ, ಕೃಷಿ ತಜ್ಞತೆಯನ್ನು ಬೆಳೆಸುವ, ಕೃಷಿ ಪದವೀಧರರನ್ನು ಸೃಷ್ಟಿಸುವ ವಿಶ್ವವಿದ್ಯಾನಿಲಯ ನನ್ನ ಪ್ರಯತ್ನವನ್ನು ಗುರುತಿಸಿಕೊಂಡಿರುವುದು ಖುಷಿಯ ವಿಚಾರ..ಈ ಪ್ರಶಸ್ತಿ ನನ್ನ ಜವಾಬ್ದಾರಿ ಮತ್ತು ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನಮ್ಮ ದೇಶದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲಿಹೋದರೂ ಬೇರೆ ಬೇರೆ ಸಾಧಕರ ಪ್ರತಿಮೆಗಳನ್ನು ನಿಲ್ಲಿಸಿದ್ದಾರೆ. ಸ್ವಾತಂತ್ಯ್ರ ಹೋರಾಟಗಾರರು, ಮುತ್ಸದ್ದಿ ರಾಜಕಾರಣಿ, ಕಲಾವಿದರು, ಸಿನಿಮಾ ರಂಗದವರ ಪ್ರತಿಮೆ ನಿಲ್ಲಿಸಿದ್ದಾರೆ. ಇಂದಿನ ಹಾಗೂ ಮುಂದಿನ ತಲೆಮಾರಿಗೆ ಅಂತಹ ಸಾಧಕರ ಜೀವನ ಚರಿತ್ರೆಯೂ ಸಿಗುತ್ತದೆ. .ಆದರೆ ಸಾಧಕರೆಲ್ಲರೂ ಸೇರಿ, ಈ ದೇಶದ ಬೆನ್ನೆಲುಬು ಎನ್ನಿಸಿಕೊಂಡಿರುವ ಅನ್ನದಾತರ ಬಗ್ಗೆ ಬರೆಯುವ, ಅನ್ನದಾತನ ಪ್ರತಿಮೆಯನ್ನು ಸೃಷ್ಟಿಸಿ ಸಮಾಜಕ್ಕೆ ಪರಿಚಯಿಸುವ ಪ್ರಯತ್ನ ಮಾಡಬೇಕಿದೆ. ಇಂತಹ ನಿರ್ಲಕ್ಷಿತ ಸಮುದಾಯದ ಬಗ್ಗೆ ನಾನು ಬರೆಯುವುದು ಹಾಗೂ ಬರೆದಿರುವುದನ್ನು ಗುರುತಿಸಿರುವುದು ಖುಷಿಯ ವಿಚಾರ..

ಏನಿದು ಬೇರು ಬದುಕು..? ಈ ಕೃತಿಯ ಬಗ್ಗೆ ತಿಳಿಸುವಿರಾ..?

‘ಬೇರು ಬದುಕು’ ಎಂಬುದು ವಿಜಯವಾಣಿ ಪತ್ರಿಕೆಗೆ ನಾನು ಏಳು ವರ್ಷಗಳ ಕಾಲ ಬರೆದ ಕೃಷಿ ಅಂಕಣಗಳ ಸಂಗ್ರಹವಾಗಿದೆ.ಆರಂಭದಲ್ಲಿ ಪ್ರತಿ ವಾರ ನನ್ನ ಕೃಷಿ ಲೇಖನ ಪ್ರಕಟವಾಗುತ್ತಿತ್ತು.ನಂತರ ನನ್ನ ವೈಯಕ್ತಿಕ ಕಾರಣದಿಂದ ಬರವಣಿಗೆ ಅಷ್ಟಾಗಿ ಸಾಧ್ಯವಾಗದೆ ಅಂಕಣ ಬರಹವು ಅನಿಯತವಾಗಿ ಎರಡು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಪ್ರಕಟವಾಗಲು ಪ್ರಾರಂಭವಾಯ್ತು.ಅದನ್ನು ನಾನು ನಾಲ್ಕು ಸಂಪುಟದಲ್ಲಿ ಪ್ರಕಟಿಸಿದೆ. ಅದರ ಮೊದಲ ಸಂಪುಟಕ್ಕೆ 5 ವರ್ಷಗಳ ಹಿಂದೆ ಕೃಷಿ ಪ್ರಶಸ್ತಿ ಬಂದಿತ್ತು. ನಂತರ ‘ನೆಲಮುಖಿ’ ಎಂಬ ಎರಡನೆಯ ಆವೃತ್ತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಯಿತು. ಇದು ನನ್ನ ನಾಲ್ಕನೇ ಸಂಪುಟ..ಇದನ್ನು ಬರೆಯುವಾಗ ಪತ್ರಿಕೆಯವರು ಕೊಟ್ಟಿರುವ ಸೂಚನೆ ಅಂದರೆ ನೀವು ಕೃಷಿಯ ಬಗ್ಗೆ ಬರೆಯಬೇಕೆಂದು..ಕೃಷಿಯ ಬಗ್ಗೆ ಬರೆಯುವುದು ಒಂದು ರೀತಿಯಲ್ಲಿ ಸುಲಭವೂ ಹೌದು,ಕಷ್ಟವೂ ಹೌದು..ಯಾವ ಬೆಳೆಗೆ ಯಾವ ಖಾಯಿಲೆ, ಯಾವ ಖಾಯಿಲೆಗೆ ಎಷ್ಟು ಔಷಧಿ ಸಿಂಪಡಿಸಬೇಕು ಅಂತ ಬರೆಯುವ ಕೆಲಸ ಮಾಡುವುದು ಸುಲಭ ನಿಜ. ಆದರೆ ನಾನು ಹಾಗೆ ಮಾಡಲಿಲ್ಲ. ಸಂಶೋಧನೆ ಮಾಡಿ ಅಂಕಣ ಬರೆಯುತ್ತಿದ್ದೆ. ಆ ಅಂಕಣ ಬರೆಯುವಾಗ ನನ್ನ ಹೆಸರಿನ ಜೊತೆಗೆ ಡಾಕ್ಟರೇಟ್ ಪದವಿಯನ್ನು ಬಳಸುತ್ತಿರಲಿಲ್ಲ. ಬಳಸಿದರೆ ನಾನು ತಜ್ಞ ಎಂದಾಗುತ್ತದೆ..ನಾನು ತಜ್ಞನಲ್ಲ. ನಾನೊಬ್ಬ ಕೃಷಿಕ. ನಾನು ಕೃಷಿ ಲೇಖಕನಲ್ಲ,ಕೃಷಿಕ ಲೇಖಕ. ಆ ಕಾರಣದಿಂದಾಗಿ ಕೃಷಿ ಮತ್ತು ಜನರಿಗಿರುವ ಸಂಬಂಧ, ನಮ್ಮ ಪರಂಪರಾಗತ ರೈತರ ಜ್ಞಾನ, ಇವೆಲ್ಲವನ್ನು ಬಗೆದು ಬರೆಯುವ ಪ್ರಯತ್ನ ನಾನು ಈ ಅಂಕಣದಲ್ಲಿ ಮಾಡಿದ್ದೇನೆ. ಬರೀ ಕೃಷಿಕರಿಗಷ್ಟೆ ಅಲ್ಲದೆ ಕೃಷಿಯೇತರರಿಗೂ ಈ ಲೇಖನಗಳು ಮೆಚ್ಚುಗೆಯಾಗಿವೆ..

‘ಹಸಿರು ಉಸಿರು’ ಕೃತಿಗೆ 5 ವರ್ಷಗಳ ಹಿಂದೆ ಇದೇ ಪ್ರಶಸ್ತಿ ಲಭ್ಯವಾಗಿತ್ತು. ಒಂದೇ ಪ್ರಶಸ್ತಿಯನ್ನು ಎರಡು ಬಾರಿ ಪಡೆದುಕೊಂಡಿರಿ..ಹೇಗನ್ನಿಸುತ್ತದೆ..?

ತುಂಬ ಖುಷಿಯೂ,ಅದಕ್ಕಿಂತ ಹೆಚ್ಚಿಗೆ ಬೇಸರವೂ ಆಗ್ತಿದೆ. ಕೃಷಿಯ ಬಗ್ಗೆ ನನಗಿಂತ ಚೆನ್ನಾಗಿ ಬರೆಯುವವರಿದ್ದಾರೆ. ಆದರೆ ಈ ವರ್ಷದ ಸ್ಪರ್ಧೆಗೆ ಅವರ ಕೃತಿ ಬಂದಿಲ್ಲವಲ್ಲ. ಮತ್ತೆ ನನ್ನದಕ್ಕೇ ಬಂತಲ್ಲ ಎಂಬ ನೋವಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಕೃತಿಗಳು ಮತ್ತು ಸ್ಪರ್ಧೆಗಳು ಬರಬೇಕು, ಇರಬೇಕು ಎಂಬುದು ನನ್ನ ಆಸೆ.

ಇಂದಿನ ಕೃಷಿಯ ಬಿಕ್ಕಟ್ಟುಗಳು, ರೈತರ ಸಮಸ್ಯೆಗಳನ್ನು ನೀವು ನೋಡುವ ವಿಧಾನ..?

ನಾವು ಕೃಷಿಯ ಬಿಕ್ಕಟ್ಟನ್ನು ಪ್ರಭುತ್ವದ ದಾರಿಯಲ್ಲಿ ನೋಡಲು ಸಾಧ್ಯವಾಗುತ್ತದೆ. ಮತ್ತು ರೈತರ ದಾರಿಯಲ್ಲಿ ನೋಡುವುದಕ್ಕೂ ಸಾಧ್ಯವಾಗುತ್ತದೆ. ಪ್ರಭುತ್ವ ಅಂದರೆ ಸರಕಾರ ಪ್ರತಿ ಚುನಾವಣೆಯ ಸಂದರ್ಭದಲ್ಲಿ ರೈತರನ್ನು ದೊಡ್ಡ ಮಟ್ಟದಲ್ಲಿ ಟಾರ್ಗೆಟ್ ಮಾಡಿ ಮತ ಬ್ಯಾಂಕ್ ನೆಲೆಯಲ್ಲಿ ಯೋಚನೆ ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ಅನೇಕ ಸಬ್ಸಿಡಿ, ಸಾಲ ಸೌಲಭ್ಯಗಳನ್ನು ಪ್ರತಿ ಸರ್ಕಾರ ಪ್ರಕಟಿಸುವುದಿದೆ. ಆದರೆ ನಿಜವಾಗಿಯೂ ರೈತ ನೆಲೆಯಲ್ಲಿ ಮಾರುಕಟ್ಟೆಯ ಸಮಸ್ಯೆ, ಬಿತ್ತನೆ ಬೀಜದ ಸಮಸ್ಯೆ, ಆರ್ಥಿಕ ಶಕ್ತಿಯನ್ನು ವೃದ್ಧಿಸುವ ವಿಚಾರ ಇರಬಹುದು, ಇಂಧನ ಸೌಲಭ್ಯ, ಮಾರುಕಟ್ಟೆಯೊಂದಿಗೆ ಸುಲಭವಾಗಿ ಬೆಸೆಯುವ ಯತ್ನ, ಸಾಗಾಟದ ವಿಚಾರ , ಸಂಗ್ರಹಾಲಯ..ಹೀಗೆ ಅನೇಕ ವಿಷಯದಲ್ಲಿ ಬೇರೆ ಕ್ಷೇತ್ರಗಳಿಗಿಂತ ಹೆಚ್ಚಿಗೆ ಸಮಸ್ಯೆ ಕೃಷಿ ಕ್ಷೇತ್ರದಲ್ಲಿದೆ. ಈ ಸಮಸ್ಯೆಗಳನ್ನು ಅರಿಯಲು ಅವರ ಸಮೀಪ ಇದ್ದು, ಯೋಚಿಸುವ ಸರಕಾರಗಳು ಬರಬೇಕು. ಆದರೆ ಇಂದು ಮತಮೌಲ್ಯಗಳ ನೆಲೆಯಲ್ಲಿ ರೈತರನ್ನು ಪ್ರೀತಿಸುವ ಸರ್ಕಾರಗಳು ಬರುತ್ತಿವೆಯೇ ಹೊರತು, ರೈತ ಮೌಲ್ಯದ ನೆಲೆಯಲ್ಲಿ ಯೋಚಿಸುವ ಸರ್ಕಾರಗಳು ಬಂದಾಗ ಬಹುಷಃ ರೈತರ ಅನೇಕ ಸಮಸ್ಯೆಗಳಿಗೆ ಉತ್ತರ ಸಿಗಬಹುದೇನೋ..

ಉತ್ತರ ಕರ್ನಾಟಕದ ರೈತರ ಸಮಸ್ಯೆಗಳ ಬಗ್ಗೆ ನೀವು ಪ್ರತಿಕ್ರಿಯಿಸುವುದಾದರೆ..

ನಮ್ಮ ಕರಾವಳಿ ಭಾಗದಲ್ಲಿ ಅಡಿಕೆಗೆ ರೇಟ್ ಚೆನ್ನಾಗಿದೆ. ಈ ಕಾರಣದಿಮದಾಗಿ ಕರೋನಾ ಸಂದರ್ಭದ ನಡುವೆಯೂ ನಮ್ಮ ರೈತರಿಗೆ ಅಷ್ಟು ಒತ್ತಡ ಬೀಳಲಿಲ್ಲ. ಆದರೆ ಉತ್ತರ ಕರ್ನಾಟಕದ ಬೆಳೆಗಳು ಅಲ್ಪ ಕಾಲದ ಬೆಳೆಗಳೇ ಹೆಚ್ಚು..ಅಲ್ಲಿನ ರೈತರು ಟೊಮೆಟೋ, ಆಲೂಗಡ್ಡೆ ಯಂತಹ ತರಕಾರಿಗಳು, ದ್ರಾಕ್ಷೆಯಂತಹ ಹಣ್ಣುಗಳ ಬೆಳೆಗಾರರು ಸಮಸ್ಯೆಗೆ ಒಳಗಾಗಿದ್ದಾರೆ. ಕರಾವಳಿಯ ಬೆಳೆಯನ್ನು 2-3 ವರ್ಷ ಸಂಗ್ರಹಿಸಿಡಲು ಸಾಧ್ಯವಿದೆ. ಆದರೆ ಅವರ ಕೃಷಿ ಉತ್ಪನ್ನಗಳು ಹೆಚ್ಚಿಗೆ ಬಾಳುವುದಿಲ್ಲ.ಇಂತಹ ಸಂದರ್ಭದಲ್ಲಿ ತಕ್ಷಣಕ್ಕೆ ತತ್ ಸ್ಥಳದಲ್ಲಿ ಸ್ಪಂದಿಸುವ ಕಾನೂನು, ಯೋಜನೆ, ಯೋಚನೆಗಳು ರೈತರ ಪರವಾಗಿ ಹುಟ್ಟಿಕೊಳ್ಳಬೇಕು ಎಂಬುದು ನನ್ನ ಆಶಯ.

ಡಾ. ನರೇಂದ್ರ ರೈ ದೇರ್ಲ ಅವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

‘ಬೇರು ಬದುಕು’ ಕೃತಿಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

MORE FEATURES

ಸೃಜನಶೀಲ ಸಾಹಿತ್ಯ ಕೃತಿಯ ಸೊಗಸಾದ ಓ...

25-10-2021 ಬೆಂಗಳೂರು

‘ಬ್ಯಾರಿಕೊನ ‘ವಿದೌಟ್ ಬ್ಲಡ್’ ಕಾದಂಬರಿಯು ದುರಾಸೆ ಹಾಗೂ ಅಧಿಕಾರಕ್ಕಾಗಿ ಹಪಾಹಪಿಸುವ ಮನುಷ್ಯನ ಕ್ರ...

ಅಭಿವ್ಯಕ್ತಿಗೆ ಇಡೀ  ಬದುಕಿದೆ: ಟಿ....

25-10-2021 ಬೆಂಗಳೂರು

‘ಶಾಂತಾ ಅವರ ಕವಿತೆಗಳಲ್ಲಿ ಹದಿಹರೆಯದ ಕವಿಯ ರಭಸ ಇಲ್ಲ. ಜೀವನಾನುಭವದಿಂದ  ಮಾಗಿದ ಗೃಹಿಣಿ ಯೊಬ್ಬಳ ಆತ್ಮಾವಲ...

ಅಪಾತ್ರರಾದ ಜನರ ಬದುಕಿನ ಚಿತ್ರಣ - ...

23-10-2021 ಬೆಂಗಳೂರು

‘ವಿಕೃತ ಸಮಾಜದಲ್ಲಿ ಹಣವೇ ಎಲ್ಲವನ್ನು ಆಳುತ್ತದೆ! ಬಲಾಡ್ಯರೇ ಇನ್ನೂ ಮುಗ್ಧರ ದನಿಯನ್ನ ಗಹಗಹಿಸಿ ಕೊಲ್ಲುತ್ತಾರೆ!&...