ನಾವೆಂದೂ ಅರಿಯಲು ಬಯಸದ ವಲಸೆ ಕಾರ್ಮಿಕರ ಬದುಕಿನ ಚಿತ್ರಣ..


ದೆಹಲಿ ಸಮೀಪದ ಗಾಜಿಯಾಬಾದ್‌ನಿಂದ ಶುರುವಾದ ಈ ಪ್ರಯಾಣ ಕೊನೆಗೊಳ್ಳುವುದು ಬಿಹಾರದ ಸಹರ್ಸಾದಲ್ಲಿ. ಈ ಏಳು ಮಂದಿ ತಮ್ಮ ಪ್ರಯಾಣದ ವೇಳೆ ಅನುಭವಿಸಿದ ಸವಾಲುಗಳನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ವಿನೋದ್ ಕಾಪ್ರಿ ತಮ್ಮ '1232 km: The Long Journey Home' ಕೃತಿಯಲ್ಲಿ ಕಟ್ಟಿಕೊಟ್ಟಿದ್ದರು. ಈ ಪುಸ್ತಕವನ್ನು ಪತ್ರಕರ್ತ ಸತೀಶ್ ಜಿ. ಟಿ. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ..1232 ಕಿ.ಮೀ. : ಮನೆ ಸೇರಲು ಸಾಗಿದ ದೂರ ಕೃತಿಯ ಮಾಹಿತಿಯೊಂದಿಗೆ ಆಯ್ದ ಭಾಗ ನಿಮ್ಮ ಓದಿಗಾಗಿ..

ಪುಸ್ತಕದ ಕುರಿತು ಮಾಹಿತಿ:

ಕೊರೊನಾ ಹರಡದಂತೆ 2020ರಲ್ಲಿ ಹೇರಲಾದ ದೇಶವ್ಯಾಪಿ ಲಾಕ್‌ಡೌನ್, ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸ, ಆಹಾರ ಮತ್ತು ಆಶ್ರಯವಿಲ್ಲದೆ ಅತಂತ್ರರಾಗುವ ಸನ್ನಿವೇಶ ನಿರ್ಮಾಣವಾಗಲು ಕಾರಣವಾಯಿತು. ಅಸಹಾಯಕರಾದ ಕಾರ್ಮಿಕರು ಹೇಗಾದರೂ ಸರಿ ಮನೆ ತಲುಪಬೇಕೆಂದು ನಡೆದುಕೊಂಡು, ಸೈಕಲ್ ತುಳಿಯುತ್ತ ಊರುಗಳ ಹಾದಿ ಹಿಡಿದರು.

ರಿತೇಶ್, ಆಶಿಶ್, ರಾಮ್‌ಬಾಬು, ಸೋನು, ಕೃಷ್ಣ, ಸಂದೀಪ್ ಮತ್ತು ಮುಕೇಶ್ ಬಿಹಾರ ಮೂಲದ ವಲಸೆ ಕಾರ್ಮಿಕರು. ಇತರರ ಹಾಗೆ ಇವರೂ ಕೂಡ ತಮ್ಮ ಬೈಸಿಕಲ್‌ಗಳಲ್ಲಿ ಊರು ತಲುಪಲು ಹೋದರು. ಏಳು ದಿನಗಳ ಕಾಲ ಪೊಲೀಸರು ಹಾಗೂ ಆಡಳಿತ ವ್ಯವಸ್ಥೆಯ ಕೌರ್ಯ, ಹಸಿವು, ಅವಮಾನ, ಹತಾಶೆ ಎಲ್ಲವನ್ನೂ ಎದುರಿಸಿಯೂ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು. ದೆಹಲಿ ಸಮೀಪದ ಗಾಜಿಯಾಬಾದ್‌ನಿಂದ ಶುರುವಾದ ಈ ಪ್ರಯಾಣ ಕೊನೆಗೊಳ್ಳುವುದು ಬಿಹಾರದ ಸಹರ್ಸಾದಲ್ಲಿ. ಈ ಏಳು ಮಂದಿ ತಮ್ಮ ಪ್ರಯಾಣದ ವೇಳೆ ಅನುಭವಿಸಿದ ಸವಾಲುಗಳನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ವಿನೋದ್ ಕಾಪ್ರಿ ತಮ್ಮ '1232 km: The Long Journey Home' ಕೃತಿಯಲ್ಲಿ ಕಟ್ಟಿಕೊಟ್ಟಿದ್ದರು. ಈ ಪುಸ್ತಕವನ್ನು ಪತ್ರಕರ್ತ ಸತೀಶ್ ಜಿ. ಟಿ. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ನಮ್ಮೊಡನೆ ಇದ್ದರೂ ನಾವೆಂದೂ ಅರಿಯಲು ಬಯಸದ ವಲಸೆ ಕಾರ್ಮಿಕರೆಂಬ ಮನುಷ್ಯ ಜೀವಿಗಳ ಬದುಕನ್ನು,ನಮ್ಮ ಹೊಣೆಗೇಡಿತನವನ್ನು ನಮಗೆ ಪರಿಚಯಿಸುವ '1232 ಕಿ.ಮೀ.' ಕೃತಿ ಎಲ್ಲರೂ ಓದಲೇಬೇಕಿರುವ ಪುಸ್ತಕ.

ಲೇಖಕರ ಬಗ್ಗೆ:

ವಿನೋದ್ ಕಾಪ್ರಿ ಅವರು ಸಿನಿಮಾ ನಿರ್ದೇಶಕ. ಅವರು ನಿರ್ದೇಶಿಸಿದ ‘ಕಾಂಟ್ ಟೇಕ್ ದಿಸ್ ಶಿಟ್ ಎನಿಮೋರ್’(2014) ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ವಿಮರ್ಶಕರ ಮನ್ನಣೆಗೆ ಪಾತ್ರವಾದ ಅವರ ‘ಪಿಹು’(2017) ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಅವರು 23 ವರ್ಷಗಳ ಕಾಲ ಅಮರ್ ಉಜಾಲ, ಜೀ ನ್ಯೂಸ್, ಸ್ಟಾರ್ ನ್ಯೂಸ್, ಇಂಡಿಯಾ ಟಿವಿ ಮತ್ತು ಟಿವಿ೯ ವಾಹಿನಿಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು.

ಅನುವಾದಕರ ಬಗ್ಗೆ:

‘1232 ಕಿ.ಮೀ.’ ಪ್ರಸ್ತುತ ‘ದಿ ಹಿಂದು’ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಸತೀಶ್ ಅವರ ಮೂರನೇ ಅನುವಾದಿತ ಕೃತಿ. ಇವರು ಅಜಿತ್ ಪಿಳ್ಳೈಯವರ ‘ಇದು ಯಾವ ಸೀಮೆಯ ಚರಿತ್ರೆ’ ಕೃತಿಯನ್ನು ಅನುವಾದಿಸಿದ್ದಾರೆ. ವಿನೋದ್ ಮೆಹ್ತಾ ಅವರ ‘ಲಖನೌ ಹುಡುಗ’ ಕೃತಿಯನ್ನು ಶಶಿ ಸಂಪಳ್ಳಿಯವರೊಡನೆ ಕನ್ನಡಕ್ಕೆ ತಂದಿದ್ದಾರೆ. ಮೂಲತಃ ಚಿತ್ರದುರ್ಗದವರಾದ ಸತೀಶ್, ಮೈಸೂರು ಮಾನಸ ಗಂಗೋತ್ರಿಯಲ್ಲಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ನಂತರ ವಿಜಯ ಟೈಮ್ಸ್ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇವರು ರಚಿಸಿದ ಪತ್ರಕರ್ತ ಬಿ ವಿ ವೈಕುಂಠರಾಜು ಅವರ ಬದುಕು-ಬರಹ ಕುರಿತ ಕೃತಿ ನಾಟಕ ಅಕಾಡೆಮಿಯಿಂದ ಪ್ರಕಟವಾಗಿದೆ.

ಆಯ್ದ ಭಾಗ:

ಗುರುತು, ಹೆಸರು ಇಲ್ಲದ ಮುಖಗಳು
ಪ್ರಯಾಣಕ್ಕೆ ಮುನ್ನ ಆದದ್ದೇನು?

ಅಂದು 2020 ರ ಏಪ್ರಿಲ್ 12. ಟ್ವಿಟರ್‌ನಲ್ಲಿ ನಾನೊಂದು ಪೋಸ್ಟ್ ನೋಡಿದೆ. ಮೂವತ್ತು ಜನ ಕಾರ್ಮಿಕರು ನಾಲ್ಕು ದಿನಗಳಿಂದ ಸರಿಯಾದ ಊಟ ಸಿಗದೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಲೋನಿಯಲ್ಲಿ ಕಷ್ಟಪಡುತ್ತಿದ್ದಾರೆ ಎಂದು ತಿಳಿಯಿತು. ಅಂದಿಗೆ ರಾಷ್ಟçವ್ಯಾಪಿ ಲಾಕ್‌ಡೌನ್ ಘೋಷಿಸಿ ಹತ್ತೊಂಬತ್ತು ದಿನಗಳಾಗಿದ್ದವು. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಪ್ರಧಾನಿ ಲಾಕ್‌ಡೌನ್ ಘೋಷಿಸಿದ್ದರು.

ಲಾಕ್‌ಡೌನ್ ಜಾರಿಗೆ ಬಂದ ನಂತರದ ದಿನಗಳಲ್ಲಿ ದೇಶಾದ್ಯಂತ ಎರಡು ಪ್ರಮುಖ ವಿಷಯಗಳ ಸುತ್ತ ಚರ್ಚೆ ನಡೆಯುತ್ತಿದ್ದವು. ಮೊದಲನೆಯದು, ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಆರೋಗ್ಯ ಕಾರ್ಯಕರ್ತರಿಗೆ ಅತ್ಯಗತ್ಯವಾಗಿದ್ದ ವೈಯಕ್ತಿಕ ರಕ್ಷಣಾ ಕಿಟ್‌ಗಳ (ಪಿಪಿಇ) ಕೊರತೆ. ಹಾಗೂ ಇನ್ನೊಂದು ವಿಷಯವೆಂದರೆ, ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೊರಟು ನಿಂತಿದ್ದು. ಆದರೆ ಮುಖ್ಯವಾಹಿನಿಯ ಮಾಧ್ಯಮ ಎರಡೂ ವಿಷಯಗಳನ್ನು ನಿರ್ಲಕ್ಷಿಸಿತ್ತು. ಅವರೆಲ್ಲಾ ತಬ್ಲಿಗಿ ಜಮಾತ್‌ನ ನೆಪ ಇಟ್ಟುಕೊಂಡು ಮುಸಲ್ಮಾನರನ್ನು ಗುರಿಯಾಗಿಸಿ ‘ಕೊರೊನಾ ಜಿಹಾದ್'ನಲ್ಲಿ ಮುಳುಗಿದ್ದರು. ಸರಕಾರವೂ ಈ ಎರಡು ಬಹುಮುಖ್ಯ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನಿದ್ರೆಗೆ ಜಾರಿತ್ತು. ಇನ್ನೊಂದೆಡೆ ವಿರೋಧ ಪಕ್ಷದವರು ಸತ್ತಂತಿದ್ದರು. ಸಾಮಾಜಿಕ ಮಾಧ್ಯಮದ ತಾಣಗಳಲ್ಲಿ ಮಾತ್ರ ವೈದ್ಯರು, ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿದ್ದ ಕೊರತೆ ಹಾಗು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು.

ನನಗೆ ಈ ಟ್ವಿಟರ್ ಪೋಸ್ಟ್ ಕಣ್ಣಿಗೆ ಬಿದ್ದಿದ್ದು ಇದೇ ಹೊತ್ತಲ್ಲಿ. ಟ್ವಿಟರ್‌ನ ಆ ಪೋಸ್ಟ್ನಲ್ಲಿ ಒಂದು ಫೋನ್ ನಂಬರ್ ಇತ್ತು. ಅದು ರಾಮ್‌ಬಾಬು ಪಂಡಿತ್‌ದು. ಆ ನಂಬರ್‌ಗೆ ಕರೆ ಮಾಡಿದಾಗ ರಿತೇಶ್ ಎಂಬ ವ್ಯಕ್ತಿ ಉತ್ತರಿಸಿದ. ತನ್ನ ಪೂರ್ತಿ ಹೆಸರು ರಿತೇಶ್ ಕುಮಾರ್ ಪಂಡಿತ್ ಎಂದು ಪರಿಚಯ ಮಾಡಿಕೊಂಡ. ಅವರ ಜೊತೆ ೩೦ ಜನ ಕಾರ್ಮಿಕರಿದ್ದು, ಎಲ್ಲರೂ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂದು ತಿಳಿಯಿತು. ಲೋನಿಯ ಲೇಬರ್ ಚೌಕ್‌ನ ಬಳಿ ನೆಲೆಸಿದ್ದ ಅವರ ಬಳಿ ಆಹಾರ ಸಾಮಾಗ್ರಿಯಾಗಲಿ, ದುಡ್ಡಾಗಲಿ ಉಳಿದಿರಲಿಲ್ಲ. ಅವರೆಲ್ಲಾ ಬಿಹಾರದ ಸಹರ್ಸಾ, ಸಮಷ್ಟಿಪುರ ಹಾಗೂ ದರ್ಭಾಂಗ ಜಿಲ್ಲೆಯವರು. ಅಷ್ಟೂ ಜನ ಇಕ್ಕಟ್ಟಿನ ನಾಲ್ಕು ಕೋಣೆಗಳಲ್ಲಿ ನೆಲೆಸಿದ್ದರು. ಸರಕಾರ ಅಥವಾ ಜಿಲ್ಲಾಡಳಿತ ಏನಾದರೂ ನೆರವು ನೀಡಿದೆಯೇ ಎಂದು ಕೇಳಿದಾಗ, ‘ಯಾವ ಸರಕಾರ?, ಯಾವ ಆಡಳಿತ? ನೀವು ಯಾವ ಸರಕಾರ, ಯಾವ ಆಡಳಿತದ ಬಗ್ಗೆ ಮಾತನಾಡುತ್ತಿದ್ದೀರಿ' ಎಂದು ನನ್ನನ್ನೇ ಪ್ರಶ್ನಿಸಿದರು.

ಅಷ್ಟು ಮಾತನಾಡುವಾಗ ಅವರೆಲ್ಲಾ ದಣಿದಿದ್ದಾರೆ, ಇನ್ನು ಕಾಯುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ನನಗರ್ಥವಾಯ್ತು. ಅವರು ಕಟ್ಟಡದ ಕೆಲಸ ಹಾಗು ಹತ್ತಿರದ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರೆಂದು ರಿತೇಶ್ ಬಳಿ ಮಾತನಾಡಿದಾಗ ಗೊತ್ತಾಯಿತು. ಅವರಲ್ಲೊಬ್ಬ ಮೆಕ್ಯಾನಿಕ್, ಮತ್ತೊಬ್ಬ ಟೈಲ್ಸ್ ಕೆಲಸದವ, ಇನ್ನೊಬ್ಬನಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಕೆಲಸ ಗೊತ್ತು. ಉಳಿದವರು ಭಾರ ಹೊರುವ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಘೋಷಿಸಿದ ಒಂದು ವಾರದ ಹಿಂದಷ್ಟೇ ಹೊಸ ಕಂಟ್ರಾಕ್ಟರ್ ಜೊತೆ ಕೆಲಸ ಮಾಡಲು ಶುರುಮಾಡಿದ್ದರು.

ಅದುವರೆಗೆ ದಿನಗಳು ಹೇಗೋ ಕಳೆದವು. ಆ ನಂತರವೇ ಸಮಸ್ಯೆಗಳು ಆರಂಭವಾದದ್ದು. ಕಂಟ್ರಾಕ್ಟರ್ ಕರೆ ಮಾಡುವುದನ್ನು ನಿಲ್ಲಿಸಿದ. ಕಾರ್ಮಿಕರಿಗೆ ಕೊಡಬೇಕಾಗಿದ್ದ ದುಡ್ಡು ಕೊಡಲಿಲ್ಲ. ಇವರೇ ಆತನಿಗೆ ಫೋನ್ ಮಾಡಿ ಕೇಳಿದಾಗ ಅವನಿಂದ ಕೆಲಸ ಮಾಡಿಸಿಕೊಂಡವರು ಕೊಟ್ಟಿಲ್ಲ, ಹಾಗಾಗಿ ತಾನು ಕೊಡುವ ಸ್ಥಿತಿಯಲ್ಲಿಲ್ಲ ಎಂದನಂತೆ. ಬೇರೆ ದಾರಿ ಇಲ್ಲದ ಈ ಕೆಲಸಗಾರರು, ತಾವು ಉಳಿಸಿದ್ದ ಅಷ್ಟೋ ಇಷ್ಟನ್ನೂ ಖರ್ಚು ಮಾಡಿ ಊಟದ ವ್ಯವಸ್ಥೆ ಮಾಡಿಕೊಂಡಿದ್ದರು. ಅದೂ ಬೇಗ ಬೇಗ ಖಾಲಿಯಾಗುತ್ತಿತ್ತು. ಏಪ್ರಿಲ್ 8ರ ಹೊತ್ತಿಗೆ ಏನೂ ಉಳಿದಿರಲಿಲ್ಲ.

ರಿತೇಶ್‌ಗೆ ತಾನು ಹಾಗೂ ತನ್ನ ಸಹವಾಸಿಗಳ ಪರಿಸ್ಥಿತಿಯ ಬಗ್ಗೆ ಸಣ್ಣದೊಂದು ವೀಡಿಯೋ ಮಾಡಿ ವಾಟ್ಸಾಪ್‌ಗೆ ಕಳುಹಿಸಲು ಸಾಧ್ಯವೇ ಕೇಳಿದೆ. ಆಯ್ತು ಎಂದ. ಸ್ವಲ್ಪ ಹೊತ್ತಿನಲ್ಲಿಯೇ ಒಂದಲ್ಲ ಐದು ವೀಡಿಯೋ ಕ್ಲಿಪ್‌ಗಳು ಬಂದವು. ಅವರ ಖಾಲಿ ಪಾತ್ರೆಗಳನ್ನು ಒಂದು ವೀಡಿಯೋದಲ್ಲಿ ತೋರಿಸಿದರೆ, ಮತ್ತೊಂದರಲ್ಲಿ ಖಾಲಿ ಎಲ್‌ಪಿಜಿ ಸಿಲಿಂಡರ್. ಅವರಲ್ಲಿಯೇ ಒಬ್ಬರು ಒಂದೇ ಕೈಯಲ್ಲಿ ಸಿಲಿಂಡರ್‌ನ್ನು ಎತ್ತಿ ಹಿಡಿದು ಖಾಲಿಯಾಗಿರುವುದನ್ನು ತೋರಿಸಿದ್ದರು. ಇನ್ನೊಂದು ವೀಡಿಯೋ ತುಣುಕಿನಲ್ಲಿ ಅವರ ಪಕ್ಕದ ಕೋಣೆಯಲ್ಲಿದ್ದ ಕಾರ್ಮಿಕರ ಪರಿಸ್ಥಿತಿ ದಾಖಲಾಗಿತ್ತು. ರಿತೇಶ್ ಕಳುಹಿಸಿದ ವೀಡಿಯೋ ತುಣುಕುಗಳು ಯಾವುದೇ ವೃತ್ತಿಪರ ವರದಿಗಾರನನ್ನೂ ನಾಚಿಸುವಂತಿದ್ದವು.

ಆ ವೀಡಿಯೋಗಳ ಮೂಲಕ ನನಗೆ ರಾಮ್‌ಬಾಬು, ರಿತೇಶ್ ಹಾಗೂ ಆಶಿಶ್ ಕುಮಾರ್ ಮುಖಗಳು ಪರಿಚಯವಾದವು. ತಕ್ಷಣವೇ ಆ ವೀಡಿಯೋ ಕ್ಲಿಪ್‌ಗಳನ್ನು ಟ್ವಿಟರ್‌ಗೆ ಹಾಕಿದೆ. ಕೆಲವು ಪ್ರಮುಖ ವ್ಯಕ್ತಿಗಳಿಗೆ ಟ್ಯಾಗ್ ಮಾಡಿದ್ದೆ. ಕೆಲ ನಾಗರಿಕರು ಹಾಗೂ ಗಾಜಿಯಾಬಾದ್‌ನ ಪೊಲೀಸರು ಪ್ರತಿಕ್ರಿಯಿಸಿದರು. ಉತ್ತರ ಪ್ರದೇಶದ ಸಹಾಯವಾಣಿ ಕೂಡ ಅವರಿಗೆ ಅಗತ್ಯ ನೆರವು ತಲುಪಿಸುವ ಭರವಸೆ ನೀಡಿತು. ಆದರೆ ಹಲವು ಗಂಟೆಗಳ ನಂತರವೂ ಯಾವ ನೆರವೂ ಅವರಿಗೆ ತಲುಪಲಿಲ್ಲ.

ಸ್ವಲ್ಪ ಹೊತ್ತಿನಲ್ಲಿಯೇ ಲೇಬರ್ ಚೌಕ್ ಹತ್ತಿರ ನೆಲೆಸಿದ್ದ ರೋಹಿತ್ ಎಂಬ ಪತ್ರಕರ್ತ ನನ್ನನ್ನು ಸಂಪರ್ಕಿಸಿದರು. ಅವರು ರಿತೇಶ್‌ನನ್ನು ಭೇಟಿಯಾಗಿ ನೆರವು ತಲುಪಿಸಲು ಪ್ರಯತ್ನಿಸುತ್ತೇನೆ ಎಂದರು. ಕೆಲ ಸಮಯದ ನಂತರ ರಿತೇಶ್ ನನಗೆ ಕರೆ ಮಾಡಿದ. ಪತ್ರಕರ್ತ ರೋಹಿತ್, ಅವರನ್ನು ಭೇಟಿ ಮಾಡಿ ೩೦ ಜನರ ಗುಂಪಿಗೆ ನಾಲ್ಕು ದಿನಗಳಿಗೆ ಬೇಕಾಗುವ ಆಹಾರ ಸಾಮಾಗ್ರಿ ಕೊಳ್ಳಲು ಅಗತ್ಯವಿದ್ದಷ್ಟು ಹಣ ನೀಡಿದ್ದರು. ಆಮೇಲೆ ರಿತೇಶ್ ಅಂಗಡಿಯಿಂದ ತಂದ ಪದಾರ್ಥಗಳ ವೀಡಿಯೋ ಕೂಡ ಕಳುಹಿಸಿದ. ಜೊತೆಗೆ ಅಗತ್ಯ ಸಾಮಾಗ್ರಿ ಖರೀದಿಸಲು ಹೊರಗಡೆ ಹೋಗಿದ್ದಾಗ ಅವರ ಸಹಚರ ಸಂದೀಪ್ ಕುಮಾರ್‌ಗೆ ಪೊಲೀಸರು ಹೀನಾಯವಾಗಿ ಬಾರಿಸಿದ್ದನ್ನೂ ಹೇಳಿದ. ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಂದೀಪ್ ಹೊರಗೆ ಹೋಗಿದ್ದ ಎನ್ನುವುದು ಪೊಲೀಸರ ಲಾಟಿ ಏಟಿಗೆ ಕಾರಣ. ಊಟಕ್ಕೇನೂ ಇಲ್ಲದೆ ಖರೀದಿಸಲು ಹೊರ ಬಂದಿದ್ದೇನೆ ಎಂದರೂ ಪೊಲೀಸರು ಕರುಣೆ ತೋರಿಸಿರಲಿಲ್ಲ.

ನಾಲ್ಕು ದಿನಗಳ ನಂತರ ರಿತೇಶ್ ಮತ್ತೆ ಫೋನ್ ಮಾಡಿದ. ಖರೀದಿಸಿದ್ದ ಆಹಾರ ಸಾಮಾಗ್ರಿ ಎಲ್ಲಾ ಖಾಲಿ. ಐದು ಸಾವಿರ ರೂಪಾಯಿಗಳಲ್ಲಿ ಖರೀದಿಸಿದ ಆಹಾರ ಪದಾರ್ಥ ಮತ್ತೆಷ್ಟು ದಿನಗಳಿಗೆ ಆಗಲಿಕ್ಕೆ ಸಾಧ್ಯ? ಅವರು 30 ಜನರಿದ್ದಾರೆ.

ಆಗ ನನಗೆ ಅರ್ಥವಾಯಿತು. ಪೊಲೀಸರು, ಆಡಳಿತ ವ್ಯವಸ್ಥೆಯ ಸಹಾಯವಾಣಿ, ಶಾಸಕರು ಎಲ್ಲರೂ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸುತ್ತಾರೆಯೇ ಹೊರತು, ನಿಜಕ್ಕೂ ಅವರು ಯಾವ ರೀತಿಯ ನೆರವನ್ನೂ ನೀಡುವುದಿಲ್ಲ. ಅವರ ಉದ್ದೇಶ ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ ಇಮೇಜಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಷ್ಟೆ. ನಾನು ರಿತೇಶ್‌ನ ಬ್ಯಾಂಕ್ ಖಾತೆ ಸಂಖ್ಯೆ ಪಡೆದು 5000 ರೂ.ಗಳನ್ನು ಕಳುಹಿಸಿದೆ. ಗೊತ್ತಿತ್ತು, ಅದು ಕೂಡ ಸಾಕಾಗುವುದಿಲ್ಲ ಎಂದು. ಮೂರು ದಿನಗಳ ನಂತರ ಮತ್ತೆ ರಿತೇಶ್ ಕರೆ ಮಾಡಿದ. ನಾನು ಕರೆ ಸ್ವೀಕರಿಸಿದ ಕೂಡಲೇ, "ಸರ್, ನಾನು ಈ ಬಾರಿ ನಿಮ್ಮಿಂದ ಯಾವುದೇ ನೆರವು ಕೇಳಲು ಫೋನ್ ಮಾಡಿಲ್ಲ" ಎಂದ. ಗಾಬರಿಯಾಗಿ, ‘ಮತ್ತೆ ಏಕೆ?' ಎಂದೆ. ಅತ್ತ ರಿತೇಶ್ ಕಡೆಯಿಂದ ಬಂದ ಉತ್ತರದಿಂದ ನನ್ನ ಎದೆ ಒಡೆದಂತಾಯ್ತು.

ಸತೀಶ್ ಜಿ.ಟಿ ಅವರ ಬಗೆಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.. 

‘1232 ಕಿ. ಮೀ ಮನೆ ಸೇರಲು ಸಾಗಿದ ದೂರ’ ಕೃತಿಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

 

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...