ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

Date: 28-11-2021

Location: ಬೆಂಗಳೂರು


ಕವಿ, ಲೇಖಕಿ ಪಿ. ಚಂದ್ರಿಕಾ ಅವರು ‘ತೇಲುವ ಪಾದಗಳು’ ಅಂಕಣದಲ್ಲಿ ತಮ್ಮ ಅನುಭವ ಕಥೆಗಳನ್ನು ದಾಖಲಿಸಲಿದ್ದಾರೆ. ಅಂಕಣದ ಮೊದಲ ಭಾಗವಾಗಿ ಬಾಲ್ಯದ ಕೌತುಕವೊಂದಕ್ಕೆ ಕತೆಯ ರೂಪ ನೀಡಿದ್ದಾರೆ.

ನನ್ನ ನೆನಪುಗಳೆಲ್ಲವೂ ಶುರುವಾಗುವುದು ತುಂಬಾ ಸಣ್ಣವಳು- ಅಂದರೆ ಸುಮಾರು ಏಳು ಎಂಟು ವರ್ಷಗಳಿದ್ದಾಗಿನಿಂದ. ದಾರಿಯಲ್ಲಿ ಹೋಗುವವರು ನನ್ನ ಕೆನ್ನೆಯನ್ನು ಸವರದೆ ಮುಂದೆ ಹೋಗುತ್ತಿರಲಿಲ್ಲ ಅಂಥಾ ದುಂದನೆಯ ಕೆನ್ನೆಗಳು. ಆಗೆಲ್ಲಾ ನನಗೆ ನಾಚಿಕೆಯಾಗಿ, ಅಳಲು ಶುರು ಮಾಡುತ್ತಿದ್ದೆ. ನನ್ನನ್ನು ಎಲ್ಲರೂ ‘ಮುಟ್ಟಿದರೆ ಮುನಿ’ ಎಂದೇ ಕರೆಯುತ್ತಿದ್ದರು.

ರಜಾ ಬಂದಿತೆಂದರೆ ಸಾಕು ಸಂಭ್ರಮ ಅಜ್ಜಿಯ ಮನೆಯದ್ದೇ ಕನಸು. ಅಜ್ಜಿಯ ಮನೆ ಎಂದರೆ ಆಂಧ್ರಾದ ಮೂಲೆಯಲ್ಲಿದ್ದ ಒಂದು ಕಗ್ಗ ಹಳ್ಳಿ ನ್ಯಾಮದ್ದಲ. ಈಗಲೂ ಊರೇನೂ ಬದಲಾಗಿಲ್ಲವಾದರೂ ಊರ ಜನರು ಮಾತ್ರ ಬದಲಾಗಿದ್ದಾರೆ. ಅಜ್ಜಿಯ ಮನೆಯ ಹಿಂದೆ ದೊಡ್ದ ಹಿತ್ತಲು. ಅದನ್ನು ದೊಡ್ಡಿ ಎಂದು ಕರೆಯುತ್ತಿದ್ದರು. ಬಹಿರ್ದೆಸೆಗೆ ಹೋಗಲಿಕ್ಕೆ ಗುಂಡಿ ತೋಡಿ ಎರಡು ಕಲ್ಲುಗಳನ್ನು ಹಾಕಿ, ತೆಂಗಿನ ಗರಿಯಿಂದ ಮರೆ ಮಾಡಿದ್ದರು. ಅದರಲ್ಲಿ ಬಿದ್ದುಬಿಟ್ಟರೆ ಎನ್ನುವ ಕಾರಣಕ್ಕೆ ಅಲ್ಲಿಗೆ ನಾನು ಹೋಗುತ್ತಿರಲಿಲ್ಲ. ನನ್ನ ಹಾಗಿರುವ ಯಾವ ಮಕ್ಕಳು ಹೋಗುತ್ತಿರಲಿಲ್ಲ. ಹಿತ್ತಲಲ್ಲಿದ್ದ ಹುಣಸೇ ಮರಕ್ಕೆ ಸದಾ ಜೋತು ಬಿದ್ದಿರುತ್ತಿದ್ದ ಕೋತಿಗಳು ನಮ್ಮ ಕೈಲಿರುವ ಏನನ್ನೂ ಬಿಡುತ್ತಿರಲಿಲ್ಲ. ಕೋತಿ ಬಂತು ಎಂದು ಕೂಗಿದರೆ ಸಾಕು ಮುತ್ತಜ್ಜಿ ಕೋಲನ್ನು ಹಿಡಿದು ಕೋತಿಯ ಹಾಗೆ ಚೀರುತ್ತಾ ಬರುತ್ತಿದ್ದಳು. ಅವಳ ಕೂಗಿಗೆ ಹೆದರಿ ಕೋತಿಗಳು ದಿಕ್ಕಾಪಾಲಾಗಿ ಓಡುತ್ತಿದ್ದವು. ಅಜ್ಜಿಗಿರುವ ಆಶಕ್ತಿಯನ್ನು ಅಚ್ಚರಿಯಿಂದ ನೋಡುತ್ತಿದ್ದೆವು.

ದೊಡ್ಡ ಅಡುಗೆ ಮನೆ, ಸದಾ ಉರಿಯುತ್ತಲೇ ಇದ್ದ ಒಲೆ, ತಾತನ ಅಮ್ಮ ಅಂದರೆ ನನಗೆ ಮುತ್ತಜ್ಜಿ, ಹಣ್ಣು ಹಣ್ಣು ಮುದುಕಿ, ಹೆಸರು ರುಕ್ಮಿಣಮ್ಮ. ಅವಳ ಕೈಗಳನ್ನು ಮುಟ್ಟುತ್ತಾ ಅಜ್ಜಿ ನಿನ್ನ ಚರ್ಮ ಆಕೆ ಹೀಗೆ ಮೈದಾ ಹಿಟ್ಟಿನ ಹಾಗಿದೆ ಎನ್ನುತ್ತಿದ್ದೆ. ಅದಕ್ಕೆ ಅಜ್ಜಿ ‘ಹಾ ಹಗಲೂ ಮೂರು ಹೊತ್ತು ನಿನ್ನ ತಾತ ನನ್ನ ಅಡುಗೆ ಮಾಡಲಿಕ್ಕೆ ಒಲೆ ಮುಂದೆ ಹಚ್ಚಿದ್ದಾನಲ್ಲ ಅದಕ್ಕೆ ನನ್ನ ಚರ್ಮ ಹೀಗಾಗಿದೆ’ ಎಂದು ನಗುತ್ತಿದ್ದಳು. ತಾತನ ಮೇಲೆ ಕೋಪ ಬಂದರೂ ಒಲೆಯ ಮುಂದೆ ಹೋದರೆ ಚರ್ಮವೆಲ್ಲಾ ಕರಗಿ ಮೈದಾ ಹಿಟ್ಟಿನ ಹಾಗೆ ಆಗುತ್ತದೆ ಎಂಬ ಕಲ್ಪನೆ ಬಂದುಬಿಟ್ಟಿತ್ತು, ಎಂದಾದರೂ ಅಡುಗೆ ಮನೆಗೆ ಬಾ ಎಂದು ಮುತ್ತಜ್ಜಿ ಕರೆದರೂ ನಾನು ಹೋಗುತ್ತಿರಲಿಲ್ಲ.

ರಾತ್ರಿಗಳು ಅಷ್ಟೇ ಅಂಗಳದಲ್ಲಿ ಹಗ್ಗದ ಮಂಚದ ಮೇಲೆ ತೆಳು ಸೀರೆಯೊಂದನ್ನು ಹಾಸಿ ಮಲಗುತ್ತಿದ್ದಳು. ನನ್ನ ಚಿಕ್ಕಮ್ಮ ಆ ಮರದಿಂದ ದೆವ್ವ ಬರಿ ಉತ್ತೇ ಊರೊಳಗಿನಿಂದ ಮೊನ್ನೆ ಸತ್ತನಲ್ಲಾ ಆ ಶಾಮ ಬರುತ್ತಾನೆ ಎಂದೆಲ್ಲಾ ಹೇಳುತ್ತಿದ್ದರೆ ಅಜ್ಜಿ ಮುಂದಕ್ಕೆ ಚಾಚಿದ ಉಬ್ಬು ಹಲ್ಲುಗಳನ್ನು ತನ್ನ ತುಟಿಗಳಿಂದ ಮುಚ್ಚಿಕೊಂಡು ನಗಲು ಯತ್ನಿಸುತ್ತಿದ್ದಳು. ಚಿಕ್ಕಮ್ಮನಿಗೆ ಕೋಪಬಂದು ನಿನ್ನ ಹುಲಿ ಹಿಡಿದುಕೊಂಡು ಹೋಗ ರಾತ್ರಿಗಳಲ್ಲಿ ಹೀಗೆ ಬಯಲಲ್ಲಿ ಒಂಟಿಯಾಗಿ ಮಲಗುತ್ತೀಯಲ್ಲಾ ಎಂದು ಬೈಯ್ಯುತ್ತಿದ್ದಳು. ರಾತ್ರಿ ಒಂಟಿ ಮಲಗಿದಾಗ ದೆವ್ವ ಬಂದರೆ ಏನು ಮಾಡುತ್ತೀಯಾ? ಎಂದು ನನ್ನ ಬಾಲ ಭಾಷೆಯಲ್ಲಿ ಕೇಳಿದರೆ, ಛೂಂ ಮಂತ್ರ ಹಾಕಿ ಓಡಿಸಿಬಿಡುತ್ತೇನೆ ಎನ್ನುತ್ತಿದ್ದಳು. ನನಗೋ ಮುತ್ತಜ್ಜಿ ಹಾಗೆ ಮಾಡುವುದನ್ನ, ದೆವ್ವ ಓಡಿಹೋಗುವುದನ್ನು ಕಲ್ಪಿಸಿಕೊಂಡು ಎಂಥಕ್ಕೋ ಸಂತೋಷಪಡುತ್ತಿದ್ದೆ. ಮುತ್ತಜ್ಜಿ ನನ್ನ ಹತ್ತಿರ ಕೂಡಿಸಿಕೊಂಡು ಮಗೂ ಉಸಿರು ಹೋದಮೇಲೆ ಹೆಸರೆಲ್ಲಿಯದ್ದು? ದೇಹ ಇದ್ದರೆ ಮಾತ್ರಾ ತೊಂದರೆದೇಹ ಇಲ್ಲದ ಮೇಲೆ ಎಲ್ಲವೂ ನಿರಾಳವೇ ಎನ್ನುತ್ತಿದ್ದಳು. ಹಾಗಾದರೆ ದೆವ್ವ ಇಲ್ಲವೋ ಎಂದಾಗ ಉತ್ತರಿಸದೆ ನಗುತ್ತಿದ್ದಳು. ನಿನ್ನ ಮುತ್ತಜ್ಜ ಹತ್ತಿರಾವೂ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಬರುತ್ತವೆ ಎನ್ನುತ್ತಿದ್ದಳು ಚಿಕ್ಕಮ್ಮ.

ಮುತ್ತಜ್ಜಿಯ ಕಿವಿಗಳು ದೊಡ್ಡದಾಗಿ ನೇರವಾಗಿದ್ದವು. ತೀರಾ ಸಾಮಾನ್ಯವಾಗಿದ್ದ ಮುತ್ತಜ್ಜಿ ಈಗೀಗ ಕಣ್ಣಲ್ಲಿ ಹೊಳಪು ಜಾಸ್ತಿಯಾಗ್ತಾ ಇದೆಯೆಂದೂ ಅವಳು ಯಾವುದೋ ಅಲೌಕಿಕ ಶಕ್ತಿಯನ್ನು ಸಿದ್ಧಿಸಿಕೊಂಡಿದ್ದಾಳೆ ಎನ್ನುತ್ತಿದ್ದಳು ಅಮ್ಮ. ಊರವರೂ ಹಾಗೇ ನಂಬುತ್ತಿದ್ದರು. ಎಳೆಗೂಸುಗಳಿಗೆ ಹುಷಾರಿಲ್ಲ ಎಂದರೆ ಕರೆದುಕೊಂಡು ಬರುತ್ತಿದ್ದರು. ಅಮ್ಮಾ ಎಂದು ತಂದ ಮಗುವನ್ನು ನೋಡಿದ ತಕ್ಷಣ ಮುತ್ತಜ್ಜಿಗೆ ಗೊತ್ತಾಗಿಡುತ್ತಿತು. ‘ಅಲ್ವೇ ಮಗುವನ್ನು ಒಬ್ಬನ್ನೇ ಬಿಟ್ಟು ನೀನು ಅಡುಗೆ ಮನೆ ಸೇರಿಬಿಟ್ಟರೆ ಹೇಗೆ? ಒಂಟಿಯಾಗಿ ಬಿಡಬಾರದು ಆಸೆಯಿರುವವರ ದೃಷ್ಟಿ ಎಲ್ಲೆಲ್ಲಿಂದಾ ಹೇಗೆ ತಾಕುತ್ತೋ ಗೊತ್ತಿರಲಲ್ಲ’ ಎಂದು ಒಂದು ಕಡೆ ಕೂತು ತನ್ನ ಮಡಿಲಿಗೆ ಮಗುವನ್ನು ತೆಗೆದುಕೊಳ್ಳುತ್ತಿದ್ದಳು. ಕಳ್ಳ, ಕಳ್ಳಿ ಎಂದೆಲ್ಲಾ ಮಗುವನ್ನು ಮುದ್ದು ಮಾಡುತ್ತಾ, ‘ಭಗವಂತಾ ನೀನು ಕೊಟ್ಟ ಕೂಸು ಅಭಾಶುಭಾ ತಿಳೀದು. ಇದನ್ನ ನೀನು ತಾನೇ ಕಾಪಾಡಬೇಕು’ ಎಂದು ತನ್ನ ಕೆಂಪು ಸೀರೆಯ ಸೆರಗನ್ನು ಬೋಳು ತಲೆಯ ಮೇಲಿಂದ ಸರಿಸಿ ಸೆರಗಿನಿಂದ ಮಗುವಿಗೆ ಮೂರುಸಲ ನೀವಾಳಿಸಿ ದೃಷ್ಟಿ ತೆಗೆದು ನಂತರ ವಾಪಾಸು ಕೊಡುತ್ತಿದ್ದಳು. ಯಾವ ಜಾತಿ ಎಂತ ನೋಡುತ್ತಿರಲಿಲ್ಲ ಮುಸಲ್ಮಾನರೂ ತಮ್ಮಮಕ್ಕಳನ್ನು ಕರೆತರುತ್ತಿದ್ದರು. ಅಮ್ಮಮ್ಮ ಮಾತ್ರ ಗೊಣಗುತ್ತಾ ಮುಟ್ಟದೆ ಕೆಲಸ ಮಾಡಿಕೊಡಬಹುದಲ್ಲಾ ಎಂದು ಗೊಣಗುತ್ತಾ ಹಂಡೆಯುರಿಯನ್ನು ಜಾಸ್ತಿ ಮಾಡುತ್ತಿದ್ದಳು. ತಾತನಿಗೂ ಹೇಳುತ್ತಿದ್ದಳು, ಶಾಸ್ತ್ರಿಗಳ ಮನೆತನದಲ್ಲಿ ಇದೆಂಥಾ ಅನಾಚಾರ ಅಂತ? ನಮ್ಮ ಕಡೆಯವರು ಈಗಲೂ ನನ್ನ ನೋಡಿ ಆಡಿಕೊಂಡು ನಗುತ್ತಾರೆ ಎನ್ನುತಿದ್ದಳು. ತಾತ ಮಾತಾನಾಡುತ್ತಿದ್ದುದೆ ಕಡಿಮೆ. ಆಡಿದರೆ ಖಡಾಖಂಡಿತ. ಅಮ್ಮಮ್ಮನಿಗೆ ಇದೆಲ್ಲ ಗೊತ್ತಿಲ್ಲ ಅಂತ ಅಲ್ಲ. ಇನ್ನೂ ಮದುವೆಗಿರುವ ಮಕ್ಕಳು, ಆಚಾರವಿಚಾರಗಳನ್ನು ಬರುವವರು ನೋಡುತ್ತಾರಲ್ಲಾ ಎನ್ನುವ ಸಂಕಟ. ಮುತ್ತಜ್ಜಿ ಅಮ್ಮಮ್ಮನಿಗೆ ಏನೇ ಅದು ನಿನ್ನ ಗೊಣಗಾಟ. ಮಗುವನ್ನು ಮುಟ್ಟುವುದರಿಂದ ಖಾಯಿಲೆ ಹೋಗುತ್ತೇ ಎನ್ನುವುದೇ ಅವರ ನಂಬಿಕೆಯಾದರೆ ನಾನಾದರೂ ಏನು ಮಾಡಲಿ? ಇಷ್ಟಕ್ಕೂ ಆ ಹಸು ಕಂದಗಳು ಯಾವ ಜಾತಿ ಅಂತ ಅಂದುಕೊಳ್ಳುತ್ತಿರುವೆ? ಎನ್ನುತ್ತಿದ್ದಳು.

ಸುತ್ತಮುತ್ತ ಹಳ್ಳಿಗಳಿಂದ ಅಜ್ಜಿಯ ಮನೆಗೆ ಖಾಯಿಲೆ ಎಂದು ಮಂತ್ರದ ನೀರನ್ನು ಹಾಕಿಸಿಕೊಳ್ಳಲು ಜನ ಬರುತ್ತಿದ್ದರು. ಮುತ್ತಜ್ಜಿ ತನ್ನ ನಡುಗುವ ಕೈಗಳಿಂದ ಭಾವಿಯಿಂದ ನೀರನ್ನು ಸೇದಿ ಸೂರ್ಯನಿಗೆ ತೋರಿಸಿ ಏನೋ ಮಣಗುಟ್ಟುತ್ತಾ, ಖಾಯಿಲೆ ಬಂದ ವ್ಯಕ್ತಿಯ ಮೇಲೆ ಆ ನೀರನ್ನು ಧಡಾರನೆ ಸುರಿಯುತ್ತಿದ್ದಳು. ಸಣ್ಣ ಮಕ್ಕಳಾದರೆ ಉಸಿರುಗಟ್ಟಿ ಜೋರಾಗಿ ಅಳುತ್ತಿದ್ದರು. ದೊಡ್ಡವರು ಒದ್ದೆಯಾದ ಮೈಯ್ಯಲಿ ನಡುಗುತ್ತಾ ಕಟ್ಟೆಯ ಮೆಲೆ ಐದುಪೈಸೆಯಲ್ಲೋ ಹೆಚ್ಚೆಂದರೆ ಹತ್ತು ಪೈಸೆಯನ್ನೋ ಇಟ್ಟು ಹೋಗುತ್ತಿದ್ದರು. ಹಾಗೆ ಇಟ್ಟು ಹೋಗುವಾಗ ಅವರ ಮುಖವನು ನಿರುಕಿಸುತ್ತಿದ್ದೆ. ನಾಳೆ ತಣ್ಣೀರು ಸುರಿದಿದ್ದರಿಂದ ಮತ್ತಷ್ಟು ಹುಷಾರಿಲ್ಲದಾಗಿ ಏನಾದರೂ ಹೆಚ್ಚೂ ಕಡಿಮೆ ಆದರೆ? ಈ ಜನ ಬಂದು ಜಗಳ ಮಾಡಿದರೆ? ಪ್ರಶ್ನೆ ಕಾಡುತ್ತಲೇ ಇರುತ್ತಿತ್ತು ಆದರೆ ಉಳಿದವರಿಗೆ ಯಾರಿಗೂ ಇಂಥಾ ಪ್ರಶ್ನೆಗಳೇ ಬರುತ್ತಿರಲಿಲ್ಲ ಅನ್ನಿಸುತ್ತೆ ಎಲ್ಲರೂ ನಿರಾಳವಾಗಿರುತ್ತಿದ್ದರು. ಆಮೇಲೇ ಯಾವಾಗಲೋ ಬಂದು ಮಗೂಗೆ ಹುಷಾರಾಯ್ತು ಅಂತ ಸೇರು ರಾಗಿಯನ್ನೋ ಹುರಳಿಯನ್ನೋ ಕೊಟ್ಟು ಹೋಗುತ್ತಿದ್ದರು. ಆಗೆಲ್ಲಾ ನನಗೂ ಹಾಗೆ ತಾಮ್ರದ ಪುಟ್ಟ ಬಿದಿಗೆಯಲ್ಲಿ ನೀರನ್ನು ತೆಗೆದು ಸೂರ್ಯನಿಗೆ ಹಿಡಿದು ಯಾರ ನೆತ್ತಿಗಾದರೂ ಸುರಿಯಬೇಕು ಅನ್ನಿಸುತ್ತಿತ್ತು. ಅದಕ್ಕೇನು ಮಾಡುವೆಯಂತೆ ಎಂದು ಮುತ್ತಜ್ಜಿ ನಗುತ್ತಿದ್ದಳು

ಸ್ನಾನ ಮಾಡಿ ಬಂದು ಅಡುಗೆಗೆ ಕುಳಿತರೆ ಅದೇ ಅವಳ ಧ್ಯಾನ. ಅದೇನು ಹಾಕುತ್ತಿದ್ದಳೋ ಅವಳ ಹಾಗೆ ಅಡುಗೆ ಮಾಡಿದವರನ್ನು ಮಾತ್ರ ನಾನು ಕಾಣಲೇ ಇಲ್ಲ. ಎಳೆಯ ಬಾಳೆಯ ಎಲೆಯಷ್ಟು ತೆಳ್ಳಗಿನ ಕೈ ಸೊರಗಿದ್ದ ಮೈ. ತಿನ್ನುತ್ತಿದ್ದುದು ಒಂದೇ ಹೊತ್ತು. ಆದರೆ ಇಡೀ ದಿನ ಪಾದರಸದಷ್ಟು ಚುರುಕಿನ ಓಡಾಟ. ಒಮ್ಮೆ ಬಾಗಿಲ ಹೊಸ್ತಿಲ ಮೇಲೆ ಹಾವೊಂದು ಮಲಗಿಕೊಂಡುಬಿಟ್ಟಿತ್ತು. ಹೊಸ್ತಿಲೆಂದರೆ ಸಣ್ಣದಲ್ಲ ನೆಲದಿಂದ ಒಂದಡಿ ಮೇಲಿನದ್ದು. ನಾನೋ ನೋಡದೆ ಒಂದು ಕಾಲನ್ನು ಆಚೆಗೆ ಹಾಕಿಬಿಟ್ಟಿದ್ದೆ. ಹಾವು ಮೈಹೊರಳಿಸದೆ ಬುಸ್ ಎಂದಿತ್ತು. ಅಲ್ಲೆ ಇದ್ದ ಮುತ್ತಜ್ಜಿ ಓಡಿಬಂದು ನನ್ನ ಕೈಹಿಡಿದು ಆಚೆಗೆ ಎಳೆದುಕೊಂಡು ಹಾವಿಗೆ ಒಂದೇ ಸಮನೆ ಬೈಯ್ಯ ಹತ್ತಿದಳು. ಎಲ್ಲು ಜಾಗ ಇಲ್ಲ ಅಂತ ಗಡದ್ದಾಗಿ ತಿಂದು ಇಲ್ಲಿ ಬಂದು ಮಲಗಿದ್ದೀಯಾ? ಊರತುಂಬ ಬೇಕಾದಷ್ಟು ಜಾಗಗಳಿವೆ ಮನೆಯೇ ಯಾಕೆ ಬೇಕು ಯಾರ ಮನೆಗೂ ಹೋಗಕೂಡದು ಎಂದೆಲ್ಲಾ ಹೇಳುತ್ತಿದ್ದರೆ ನಾನು ನಡುಗುತ್ತಾ ನಿಂತಿದ್ದೆ. ಹಾವು ಅವಳ ಮಾತನ್ನು ಕೇಳಿತು ಎನ್ನುವಹಾಗೆ ಅಲ್ಲಿಂದ ನಿಧಾನಕ್ಕೆ ಚಲಿಸುತ್ತಾ ಹೊರಗೆ ಹೋಗೇಬಿಟ್ಟಿತು. ಹಾವುಗಳು ಇವಳ ಮಾತನ್ನ ಕೇಳುತ್ತದಲ್ಲಾ ಎಂದು ಅನ್ನಿಸಿ ನನಗೆ ನಿಜಕ್ಕೂ ಅಚ್ಚರಿಯಾಗಿತ್ತು. ಹಿಡಿಯ ದೇಹ, ಹಾವು, ಕೋತಿ, ಹಸು ಎಲ್ಲವೂ ಇವಳ ಮಾತನ್ನು ಹೇಗೆ ಕೇಳುತ್ತವೆ?ಅಷ್ಟೆಲ್ಲಾ ಯಾಕೆ ದೆವ್ವಗಳೂ ಕೂಡಾ ಇವಳ ಮಾತನ್ನ ಕೇಳುತ್ತಾ ಇದ್ದವೆಂದರೆ ಇವಳ ಒಳಗಿನ ಶಕ್ತಿ ಎಂಥಾದ್ದಿರಬೇಕು ಎನ್ನುವಾಚ್ಚರಿಯಲ್ಲಿ ಮುತ್ತಜ್ಜಿಯನ್ನು ನೋಡುತ್ತಾ ಕೂತುಕೊಳ್ಳುತ್ತಿದ್ದೆ. ಮುತ್ತಜ್ಜಿ ನಾನೇ ಆಶ್ಚರ್ಯವೆನೋ ಎನ್ನುವಂತೆ ಕೆನ್ನೆ ಸವರುತ್ತಿದ್ದಳು.

ಅಮ್ಮಮ್ಮನ ಮನೆಯಲ್ಲಿ ಸಂಜೆಯಾಯಿತೆಂದರೆ ಭಜನೆ ಶುರುವಾಗುತ್ತಿತ್ತು. ಅಮ್ಮಮ್ಮ ಬಾಬಾರ ಭಕ್ತರಾಗಿದ್ದರು. ಬಾಬಾರ ಪೋಟೋ ಮನೆಯ ಎಲ್ಲಾ ಕಡೆಯೂ ರಾರಾಜಿಸುತ್ತಿತ್ತು. ಅವರ ಭಜನೆಯನ್ನು ನೋಡುತ್ತಿದ್ದ ನನ್ನ ಒಳಗೂ ಒಂದು ಚೈತನ್ಯ ಹೊಕ್ಕಂತಾಗಿ ಆವೇಶ ಭರಿತಳಾಗುತ್ತಿದ್ದೆ. ಗುರುವಾರವಂತೂ ಮನೆಯ ತುಂಬಾ ದೂಪ ಧೂಮ ತುಂಬಿ ಬೇರೆಯದ್ದೇ ಲೋಕವನ್ನು ಸೃಷ್ಟಿ ಮಾಡುತ್ತಿತ್ತು. ಬೆಳಗ್ಗೆ ತಾತ ದೇವರ ಪೂಜೆಯನ್ನು ಸಾಂಗೋಪಾಂಗವಾಗಿ ವೇದೋಕ್ತ ರೀತಿಯಲ್ಲಿ ಮುಗಿಸುತ್ತಿದ್ದರು. ಎರಡು ಹಿಡಿಯನ್ನೂ ದಾಟಿ ವಿಗ್ರಹಗಳಿರುತ್ತಿದ್ದವು. ಹಾಗಾಗಿ ದಿನಾ ನೈವೇದ್ಯ ಆಗಬೇಕಿತ್ತು. ಅಮ್ಮಮ್ಮ ಮಡಿಯನ್ನು ಉಟ್ಟು ನೈವೇದ್ಯವನ್ನು ತಂದು ದೇವರ ಮುಂದೆ ಇಡುತ್ತಿದ್ದಳು. ಅದರ ಮೇಲೆ ತುಳಸಿ ನೀರನ್ನು ಹಾಕಿ ತಾತ ಪೂಜೆ ಕೊನೆಯಾಗಿಸುತ್ತಿದ್ದ. ಮುತ್ತಜ್ಜ ಮಾತ್ರ ಎಂದೂ ದೇವರಮನೆಗೆ ಹೋಗುತ್ತಿರಲಿಲ್ಲ. ಅದು ಯಾಕೆಂದು ನನಗೆ ಈಗಲೂ ಅಚ್ಚರಿಯೇ. ಕೇಳಿದರೆ ಎಲ್ಲವೂ ಒಳಗೆ ನಡೆಯುತ್ತೆ ಮಗೂ. ಒಳಗಿಗೂ ಹೊರಗಿಗೂ ಸಂಬಂಧವೇ ಇರಲ್ಲ ಎನ್ನುತ್ತಿದ್ದಳು. ಪೂಜೆಯ ಹೊತ್ತೊಂದನ್ನು ಬಿಟ್ಟರೆ ಅಮ್ಮಮ್ಮ ಕೂಡಾ ಕರ್ಮಠವಾಗೇನೂ ಇರುತ್ತಿರಲಿಲ್ಲ. ಅಕ್ಕಪಕ್ಕದ ಮನೆಯವರು ಹೊಲಕ್ಕೆ ಹಾಕಲು ಕಡಲೆಕಾಯಿಯನ್ನು ಬೀಜಕ್ಕಾಗಿ ಸುಲಿಯುತ್ತಾ ಇದ್ದರೆ ಈ ಮನೆಯ ಜನ ಕೂಡಾ ಹೋಗಿ ಕೂಡುತ್ತಿದ್ದರು. ಹಲ್ಲಿನಿಂದ ನಿಧಾನವಾಗಿ ಕಾಯನ್ನು ಕಚ್ಚಿ ಒಳಗಿನ ಬೀಜಕ್ಕೆ ಸ್ವಲ್ಪವೂ ಏಟಾಗದ ಹಾಗೆ ಎಳೆದು ಹಾಕುತ್ತಿದ್ದರೆ ಸಿಪ್ಪೆ ಬೀಜವನ್ನು ಬೇರೆ ಮಾಡುವ ಕೆಲಸ ನಮ್ಮಂಥ ಹುಡುಗರ ಪಾಲಿಗೆ ಇರುತ್ತಿತ್ತು. ಹುಡುಗರೆಲ್ಲಾ ಚೀಕು ಕಾಳಿಗೆ ಮುಗಿಬಿದ್ದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಒಂದು ಪಾವು ಸುಲಿದರೆ ಐದು ಪೈಸೆ ಕೊಡುತ್ತಿದ್ದರು. ದುಡ್ಡಿನ ಮಾತು ಆಮೇಲಿನದ್ದು ಆದರೆ ಅಲ್ಲಿ ಪ್ರಸ್ತಾಪ ಆಗುತ್ತಿದ್ದ ಸಂಗತಿಗಳು ನನಗೆ ಪೂರ್ತಿ ಅರ್ಥ ಆಗದಿದ್ದರೂ ಏನೋ ಕುತೂಹಲಕ್ಕೆ ಎಡೆಮಾಡಿಕೊಡುತ್ತಿದ್ದವು.

ದೊಡ್ಡ ಹಜಾರ ಎತ್ತರದ ಹೊಸ್ತಿಲು ಒಳಗೆ ಮಕ್ಕಳನ್ನು ತೂಗಲಿಕ್ಕೆ ಹತ್ತಿಯ ಸೀರೆ ಕಟ್ಟಿ ಮಾಡಿದ್ದ ಜೋಲಿ (ಮನೆಯಲ್ಲಿ ಮಕ್ಕಳಿರಲಿ ಇಲ್ಲದಿರಲಿ ಆ ಜೋಲಿಯನ್ನು ಯಾವತ್ತೂ ತೆಗೆದಿದ್ದನ್ನು ನಾನು ನೋಡಲಿಲ್ಲ. ಯಾರೆ ಮಕ್ಕಳನ್ನು ಕರೆತಂದರೂ ಜೋಲಿಯಲ್ಲಿ ಹಾಕಿ ತೂಗುತ್ತಿದ್ದರು) ಹಜಾರ ದಾಟಿದರೆ ದೊಡ್ಡ ಅಡುಗೆ ಮನೆ, ಈಚೆ ಬದಿಯಲ್ಲಿ ಬಚ್ಚಲು. ಹೊರಗಿನಿಂದ ಬೆಂಕಿ ಹಾಕಿ ನೀರನ್ನು ಕಾಯಿಸುತ್ತಿದ್ದರು. ಅಲ್ಲೊಂದು ಮೋಟಾದ ಗೋಡೆಯಿತ್ತು. ಮುತ್ತಜ್ಜಿ ತನ್ನ ಬಳಿ ಸಮಸ್ಯೆಯನ್ನೇನಾದರೂ ಹೇಳಿಕ್ಕೆ ಯಾರಾದರೂ ಬಂದರೆ ಆ ಗೋಡೆಗೆ ಒಪ್ಪಿಸುವಂತೆ ಹೇಳುತ್ತಿದ್ದಳು. ಕೆಲವೊಮ್ಮೆ ಅಪರೂಪಕ್ಕೆ ಗಿಡಕ್ಕೋ, ಮರಕ್ಕೋ ಅಥವಾ ಕೊಟ್ಟಿಗೆಯಲ್ಲಿದ್ದ ಕಪಿಲೆಗೋ, ಗೌರಿಗೋ ಒಪ್ಪಿಸುವಂತೆಯೂ ಹೇಳುತ್ತಿದ್ದಳು. ಮುತ್ತಜ್ಜಿ ಎಲ್ಲಿ ಹೇಳುತ್ತಿದ್ದಳೋ ಅಲ್ಲಿಗೆ ಜನ ಹೋಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಹೇಳಿ ಬಂದ ಮೇಲೆ ಮುತ್ತಜ್ಜಿ ಅವರಿಗೆ ಏನನ್ನೋ ಹೇಳುತ್ತಿದ್ದಳು. ಕಣ್ಣಲ್ಲಿ ನೀರನ್ನಿರಿಸಿಕೊಂಡೋ, ತುಟಿಯಲ್ಲಿ ನಗುವನ್ನು ತುಳುಕಿಸಿಯೋ ಜನ ಅಲ್ಲಿಂದ ಎದ್ದು ಹೊರಡುತ್ತಿದ್ದರು. ನನಗೆ ಇನ್ನೂ ಗೊತ್ತಾಗದ ಸಂಗತಿ ಎಂದರೆ ಅವರೆಲ್ಲಾ ಮುತ್ತಜ್ಜಿಯ ಹತ್ತಿರ ಏನನ್ನು ಹೇಳಿಕೊಳ್ಳಲು ಬರುತ್ತಿದ್ದರು ಮತ್ತು ಅವರ ಮಾತುಗಳನ್ನೇ ಕೇಳಿಸಿಕೊಳ್ಳದ ಮುತ್ತಜ್ಜಿ ಅವರಿಗೆ ಏನನ್ನು ಹೇಳುತ್ತಿದ್ದಳು ಎನ್ನುವುದು.

ಒಮ್ಮೆ ಬಯಲಲ್ಲಿ ಹಗ್ಗದ ಮಂಚದ ಮೇಲೆ ಮಲಗಿ ಆಕಾಶ ನೋಡುವಾಗ ಮುತ್ತಾ ನಿಂಗೆ ಶಕ್ತಿಗಳಿವೆಯಾ? ಎಂದಿದ್ದೆ. ಮುತ್ತಜ್ಜಿ ನೀಲಿಕಣ್ಣಿನ ದೇವತೆಯ ಕಥೆಯನ್ನು ಹೇಳಿದ್ದಳು, ‘ನೋಡು ಆಕಾಶದಲ್ಲಿ ಕಾಣ್ತಾ ಇದೆಯಲ್ಲಾ ಆ ನಕ್ಷತ್ರಾನೇ ಅವಳ ಕಣ್ಣನ್ನ ಸೇರಿದ್ದು ಅದಕ್ಕೆ ಅವಳ ಕಣ್ಣು ನೀಲಿಯಾಯ್ತು’ ಎಂದಿದ್ದಳು. ನೋಡ್ತಾ ನೋಡ್ತಾ ಆ ನಕ್ಷತ್ರ ಬೆಳಕಿನ ರೇಖೆಯಾಗಿ ಮುತ್ತಜ್ಜಿಯ ಕಣ್ಣುಗಳ ಆಳಕ್ಕೆ ಇಳಿದೇ ಬಿಟ್ಟಿತ್ತು ‘ಮುತ್ತಾ’ ಎಂದೆ. ಅವಳ ಕಣ್ಣುಗಳು ನೀಲಿ ನೀಲಿ ಕಂಡು ನಾನು ನಡುಗಿ ಹೋಗಿದ್ದೆ. ಮುತ್ತಜ್ಜಿ ಯಾರಿಗೂ ಹೇಳಬೇಡ ಎಂದು ತನ್ನ ಸೆರಗಿನಲ್ಲಿ ನನ್ನನ್ನು ಮರೆಯಾಗಿಸಿಕೊಂಡು ನನಗಾಗಿ ಒಂದು ಹಾಡನ್ನು ಹೇಳಿದ್ದಳು. ನಾನು ಹಾಡಿನಲ್ಲಿ ತೇಲುತ್ತಾ ತೇಲುತ್ತಾ ಸುಖದಿಂದ ಕಣ್ಣುಗಳನ್ನು ಮುಚ್ಚಿಬಿಟ್ಟೆ. ನನ್ನ ಕಣ್ಣುಗಳ ಮುಂದೆ ಬೆಳಕಿನ ಊಟೆಯೊಂದು ಸಣ್ಣದಾಗಿ ಬಿಚ್ಚಿಕೊಳ್ಳುತ್ತಾ ಹೋಯಿತು. ಅಲ್ಲಿ ಅಸ್ಪಷ್ಟವಾಗಿ ಎರಡು ಆಕೃತಿಗಳು ಕಾಣುತ್ತಿದ್ದವು. ಬರುತ್ತಾ ಬರುತ್ತಾ ಆ ಆಕಾರಗಳು ಸ್ಪಷ್ಟವಾಗುತ್ತಾ ಹೋದವು. ಮುತ್ತಜ್ಜಿ ಮತ್ತು ನಾನು, ನಮ್ಮ ಕೈಗಳು ಒಂದರೊಳಗೊಂದು ಸೇರಿಹೋಗಿದ್ದವು.

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...