ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ

Date: 02-10-2021

Location: ಬೆಂಗಳೂರು


‘ಕವಿತೆಯನ್ನು ಅತ್ಯಂತ ಸಹಜವಾಗಿ ಸಂಭವಿಸುವ ವಿದ್ಯಮಾನವಾಗಿ ಪರಿಭಾವಿಸುವಲ್ಲಿ ರಂಗಮ್ಮ ಇತರ ಕವಿಗಳಿಗಿಂತ ಭಿನ್ನವಾಗುತ್ತಾರೆ’ ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ತೆರೆದಷ್ಟೂ ಅರಿವು ಅಂಕಣದಲ್ಲಿ ಕವಿ ರಂಗಮ್ಮ ಹೊದೇಕಲ್ ಅವರ ನೋವೂ ಒಂದು ಹೃದ್ಯಕಾವ್ಯ ಕೃತಿಯ ಕುರಿತು ವಿಶ್ಲೇಷಿಸಿದ್ದಾರೆ.

ಕಾವ್ಯ ಏಕಾಂತದ ಪಿಸುದನಿ; ಲೋಕಾಂತದ ದರ್ಶನ ಎನ್ನುವ ಕವಯತ್ರಿ ರಂಗಮ್ಮ ಹೊದೇಕಲ್ ಅನುಭವದ ತೀವ್ರತೆಯನ್ನು ದರ್ಶನದ ಎತ್ತರಕ್ಕೆ ಥಟ್ಟನೆ ಮುಟ್ಟಿಸಿ ಬೆರಗು ಮೂಡಿಸುತ್ತಾರೆ. ನಾವು ಕವಿತೆಯಿಂದ ಬಯಸುವುದೂ ಇದನ್ನೇ. ಥಟ್ಟನೆ ಸತ್ಯವನ್ನು ಸ್ಪರ್ಷಿಸುವ ಅನುಭವವನ್ನೇ. ಅನುಭವವು ಅನುಭಾವವಾಗಿ ಮೈಹೊರಳಿಸುವ ಈ ರೂಪಾಂತರದ ಕ್ಷಣಗಳನ್ನು ಭಾಷೆಗೆ ಒಗ್ಗಿಸುವುದೂ ಒಂದು ಸವಾಲು. ಅದನ್ನು ರಂಗಮ್ಮ ಅತ್ಯಂತ ಸಹಜವಾಗಿ ಸಿದ್ದಿಸಿಕೊಂಡಿದ್ದಾರೆ. ಅಲ್ಲಮಪ್ರಭು ಹೇಳುವಂತೆ ಶಿಲೆಯೊಳಗಣ ಪಾವಕದಂತೆ, ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಿನ ನಿಶ್ಯಬ್ದದಂತೆ ಈ ಅನುಭವ ಮತ್ತು ಭಾಷೆಯ ಸಂಬಂಧ. ಮೇಲೆ ಕಾಣುವ ಸಿಪ್ಪೆಯೇ ತಿರುಳಲ್ಲ, ಆದರೆ ಸಿಪ್ಪೆಯ ಹೊರತಾಗಿ ಒಳಗಿರುವ ತಿರುಳು ಕಾಣಲಾರದು. ಕಾಣುವ ಲೋಕಸಂಗತಿಗಳ ಒಳಗೆ ಕಾಣದಂತಿರುವ ಆದರೆ ಕಾಣಬೇಕಾಗಿರುವ ಸತ್ಯಗಳನ್ನು ಇದು ಸೂಚಿಸುತ್ತದೆ. ಇದನ್ನೆಲ್ಲ ಏಕಾಂತದ ಪಿಸುದನಿಯ ಭಾವತೀವ್ರತೆಯಲ್ಲಿ ಹೊಮ್ಮಿಸುವ ರಂಗಮ್ಮ ಲೋಕದರ್ಶನಕ್ಕೆ ಬೇಕಾದ ಭಾಷೆಯಲ್ಲಿ ಅದನ್ನು ಕಟ್ಟುತ್ತಾರೆ. ಮೇಲ್ನೋಟಕ್ಕೆ ಚುಟುಕುಗಳಂತೆ ತೋರುವ “ನೋವೂ ಒಂದು ಹೃದ್ಯಕಾವ್ಯ” ದ ರಚನೆಗಳು ಬರಿಯ ಪ್ರಾಸಬದ್ಧವಾದ ಶಬ್ದ ಚಮತ್ಕಾರಗಳಲ್ಲ. ಇವು ಭಾಷೆಯನ್ನು ಎದೆಯ ಕಾವಲ್ಲಿ ಕರಗಿಸಿ ಸೂಕ್ಷ್ಮಗೊಳಿಸಿಕೊಂಡಂಥವು. ಎದೆಯ ತೇವದಲ್ಲಿ ಅದ್ದಿತೆಗೆದಂಥ ಅಕ್ಷರಗಳನ್ನು ಬೀಜರೂಪದಲ್ಲಿ ಹುದುಗಿಸಿಕೊಂಡಂಥವು. ಈ ಕವಯತ್ರಿ ಬದುಕನ್ನು ಕಾವ್ಯವಾಗಿ ಭಾವಿಸುತ್ತಾರೋ, ಅಥವಾ ಅವರಿಗೆ ಕಾವ್ಯವೇ ಬದುಕಿನ ಕಣ್ಣಾಗಿ ತೆರೆದುಕೊಳ್ಳುತ್ತದೋ ಎಂಬ ಚಕಿತತೆಗೆ ನಮ್ಮನ್ನು ದೂಡುತ್ತಾರೆ.

ಬದುಕು ಹೆಜ್ಜೆ ಹೆಜ್ಜೆಗೂ ಒಡ್ಡುವ ಸವಾಲುಗಳನ್ನು ತಣ್ಣಗೆ ಸ್ವೀಕರಿಸುತ್ತಾ ತಮ್ಮದೇ ಬೆಳಕಿನ ದಾರಿಯೊಂದನ್ನು ನಿರ್ಮಿಸಿಕೊಳ್ಳವ ತಾದಾತ್ಮ್ಯ ರಂಗಮ್ಮನಿಗಿದೆ. ಈ ತಪದ ಹಿಂದೆ ಅಪಾರ ವೇದನೆಯಿರುವುದು ಸುಳ್ಳಲ್ಲ. ಆದರೆ ನೋವನ್ನು ಕಾವ್ಯವಾಗಿಸುವುದೆಂದರೆ ಅದರೊಂದಿಗೆ ಬದುಕುತ್ತಲೇ ನೋವನ್ನು ದಾಟುವುದು. ಹಾಗೆ ದಾಟಲು ಪ್ರೀತಿಯನ್ನು ಸೇತುವೆಯಾಗಿಸಿಕೊಳ್ಳುವ ಕವಯತ್ರಿ ನೋವನ್ನೂ ಪ್ರೇಮದ ಬೆರಳಲ್ಲಿ ನೇವರಿಸುತ್ತಾರೆ.

ಒಂದು
ನೋವಿತ್ತು
ನೇವರಿಸಿದೆ
ಕವಿತೆಯಾಯಿತು
ಕವಿತೆಯನ್ನು ಅತ್ಯಂತ ಸಹಜವಾಗಿ ಸಂಭವಿಸುವ ವಿದ್ಯಮಾನವಾಗಿ ಪರಿಭಾವಿಸುವಲ್ಲಿ ರಂಗಮ್ಮ ಇತರ ಕವಿಗಳಿಗಿಂತ ಭಿನ್ನವಾಗುತ್ತಾರೆ. ಕಾವ್ಯದಮೂಲಕ ಏನನ್ನೋ ಸಾಧಿಸುವ ಹಮ್ಮಿಗಿಂತ ಕಾವ್ಯದ ಮೂಲಕ ನಿಜವನ್ನು ಕಾಣುವ ಹಂಬಲವಿಲ್ಲಿ ಮಡುಗಟ್ಟಿದೆ. ಕವಿತೆಗೆ ಉದ್ದೇಶಗಳಿರಬಾರದು. ಅದನ್ನು ಸಹಜವಾಗಿ ಆಗಲು ಬಿಡಬೇಕು. ಬದುಕೂ ಸಹ ಹಾಗೆಯೇ. ಅದು ವಿಕಸಿಸುತ್ತ ಆಗುತ್ತಿರುತ್ತದೆ. ಎದೆ ತೆರೆದರೆ ನಮ್ಮೊಳಗನ್ನೂ ಅರಳಿಸುತ್ತದೆ.

ಯಾವ ಹೂವೂ
ಮೆಚ್ಚುಗೆಗೆಂದೇ ಅರಳುವುದಿಲ್ಲ!
ಯಾವ ನೋವೂ
ಕರುಣೆಗಾಗಿ ಕವಿತೆಯಾಗುವುದಿಲ್ಲ!
ಕವಿತೆಯ ಉದ್ದೇಶರಾಹಿತ್ಯವೇ ಕವಿಯನ್ನು ಸಿದ್ದಮಾದರಿಗಳಿಂದ ಬಿಡುಗಡೆಮಾಡುತ್ತದೆ. ಕವಿತೆಯನ್ನು ಬರಿಯ ಯೋಚಿಸಲಾಗದು ಅದನ್ನು ಧ್ಯಾನಿಸಬೇಕು ಎಂಬುದನ್ನು ಇಲ್ಲಿನ ಕವಿತೆಗಳು ಕಾಣಿಸುತ್ತವೆ. ಕವಿತೆಯನ್ನು ವಿಮರ್ಶೆಯ ಒರಟು ಕೈಗಳಲ್ಲಿ ಹಿಡಿಯ ಹೋದರೆ ಅದು ಮುರಿದುಹೋಗುತ್ತದೆ. ತರ್ಕವು ಹೊಮ್ಮಿಸುವ ಅರ್ಥಗಳನ್ನು ದಾಟಿ ಸದಾ ಚಲಿಸುತ್ತಲೇ ಇರುವ ಹಕ್ಕಿಯಂಥದು ಕಾವ್ಯ. ಅದಕ್ಕೆ ಜಗದ ಮನುಷ್ಯರು ಕಟ್ಟಿಕೊಂಡ ಕೃತಕ ಬೇಲಿಗಳ ಹಂಗಿಲ್ಲ. ಜಾತಿ ಮತಗಳೆಂಬ, ಬಡವ ಬಲ್ಲಿದರೆಂಬ, ಹೆಣ್ಣು ಗಂಡೆಂಬ ತರತಮಗಳು ನಿಧಾನವಾಗಿ ಮನುಷ್ಯನಾಳದಲ್ಲಿ ಹಿಂಸೆಯೊಂದನ್ನು ಹುಟ್ಟಿಹಾಕುತ್ತವೆ. ಜಗತ್ತು ಉದ್ವಿಗ್ನಗೊಳ್ಳುತ್ತದೆ. ಇಂಥ ದ್ವಂದ್ವ ಗ್ರಹಿಕೆಗಳನ್ನು ಕಳಚಿಕೊಂಡು ಬೆತ್ತಲಾಗುವುದು ಸಹಜದ ಧರ್ಮ. ಇದನ್ನೇ ರಂಗಮ್ಮ ‘ಹೂಧರ್ಮ’ ವೆನ್ನುತ್ತಾರೆ.

ತರತಮವಿರದೆ
ಪರಿಮಳ ಹಂಚುವ
ಹೂ ಧರ್ಮ
ನನ್ನ ದಾರಿ!
ಈ ದಾರಿ ಸಂತರು ಆರಿಸಿಕೊಂಡ ಪ್ರೇಮದ ದಾರಿ. ಗೋಡೆಗಳನ್ನು ಕೆಡವುತ್ತ ಬಯಲಾಗುವ ದಾರಿ. ನಮ್ಮ ಒಳಜೀವ ಇಂಥ ಗೋಡೆಗಳ ನಡುವೆ ನಮಗೇ ಅಪರಿಚಿತವಾಗಿರುತ್ತದೆ. ನಿಜದ ಮಿಂಚು ಛಕ್ಕನೆ ಬೆಳಗುವ ಕ್ಷಣವೊಂದು ನಮಗೆ ನಮ್ಮನ್ನೇ ಪರಿಚಯಿಸುತ್ತದೆ. ಆದರೆ ಇದೇ ತರತಮದ ಜಗತ್ತಿನಲ್ಲೇ ನಾವು ಬದುಕಬೇಕಾದುದು ಅನಿವಾರ್ಯ. ಅಲ್ಲಿ ನೋಯೂವುದೂ ಅನಿವಾರ್ಯ. ರೂಕ್ಷ ಜಗತ್ತಿನಲಿ ಸೂಕ್ಷ್ಮಗೊಂಡ ಅರಿವಿನೊಂದಿಗೆ ಬದುಕುವ ಸಂಕಟವಿದು.

ಗಂಧವಾಗಲು
ಬೇರು ಎಷ್ಟು ನೋಯಬೇಕೋ..
ಘಮವಾಗಲು
ದಾರಿ ಎಷ್ಟು ಸವೆಯಬೇಕೋ..

ಈ ಪರಿಮಳದ ಹಾದಿಯಲಿ ನಡೆದವರೆಲ್ಲ ಪಾಡುಗಳನ್ನು ಹಾಡಾಗಿಸುವ ಕೆಚ್ಚಿನವರೇ. ಹಾಗೆ ಪರಿವರ್ತನೆಗೊಂಡಮೇಲೆ ಲೋಕವನ್ನು ನೋಡುವ ನೋಟಪಲ್ಲಟವಾಗುತ್ತದೆ. ವಿಶ್ವದೊಂದಿಗೆ ಸಹಜೀವನ ನಡೆಸುವ ಪ್ರಜ್ಞೆ ಜಾಗೃತಗೊಳ್ಳುತ್ತದೆ. ಏಕಾಂತವು ಲೋಕಾಂತದಲ್ಲಿ ಕರಗುತ್ತಾ ದ್ವಂದ್ವವಳಿಯುತ್ತದೆ.

ಕಾಲ
ಸೋಂಕಿಲ್ಲದ
ವಿಶ್ವದೊಟ್ಟಿಗಿನ
ಸಹಜೀವನವೇ
ಏಕಾಂತ!
ಮನುಷ್ಯರಾಗಿ ಸಂವೇದಿಸುವುದಷ್ಟೇ ಅಲ್ಲ ಮರ ಮಣ್ಣು ಹಕ್ಕಿ ಆಕಾಶ ಎಲ್ಲವೂ ಆಗಿ ಸಂವೇದಿಸುವ ಸೂಕ್ಷ್ಮತೆಯೊಂದು ಒಳಗೊಳಗೆ ಅರಳತೊಡಗುತ್ತದೆ. ಇದನ್ನು ಜ್ಞಾನದ ಪರಿಭಾಷೆಯಲ್ಲಿ ವಿವರಿಸಲಾಗದು. ಇದು ಅನುಭೂತಿಯ ಮಾರ್ಗ. ವಿಶ್ವದ ಸಕಲಚರಾಚರಗಳಲ್ಲೂ ತನ್ನನ್ನೇ ಕಾಣಬಯಸುವ ವಿಶ್ವಾತ್ಮಕ ಭಾವ.

ಮರಗಳು ಬರೆಯುವ
ಕವಿತೆಯನ್ನು
ಬರೆಯಲಾಗದ್ದಕ್ಕೆ
ವಿಷಾದಿಸುತ್ತೇನೆ!

ಗೊತ್ತು ಬಿಡಿ
ಆಕಾಶಕ್ಕೆ ಮುಖ ನೆಟ್ಟ
ನೀವು
ನೆಲದ ಕಣ್ಣಿನಮೇಲೆ ಕಾಲೂರಿದ್ದೀರಿ!

ನಮ್ಮ ಪಾಲಿನ ಆಕಾಶದಲ್ಲಿ
ನಾವು ಹಾಡುತ್ತಿರಬೇಕಷ್ಟೆ!
ಕೊರಳಿದ್ದಲ್ಲಿ ಹಾಡುಗಳು
ಅರಳುತ್ತಿರುತ್ತವೆ!
ಇಂಥ ಜೀವದ ಮಾತುಗಳನ್ನು ಕವಿಯು ಶೋಧಿಸಿಕೊಳ್ಳುತ್ತಿರುವುದು ಕವಿತೆಯ ಒಳಮಾರ್ಗದಲ್ಲಿ. ಇಲ್ಲಿ ಕೇಳುವ ಪಿಸುಮಾತು ಜೀವಭಾಷೆಯನ್ನು ಕಾವ್ಯಭಾಷೆಯಾಗಿಸಿಕೊಂಡ ಮಾತು. ಆತ್ಮಕ್ಕಂಟಿದ ಎಲ್ಲ ಗುರುತು ಕಳಚಿ ಕೊನೆಗೆ ಹೆಣ್ಣೆಂಬ ಅರಿವನ್ನೂ ಕಳಚಿನಿಂತ ಬಯಲಾದ ಸಂವೇದನೆಯಿದು. ಇಂಥ ಕುರುಹಿಲ್ಲದ ಅರಿವಿನ ನಿರಾಳವನ್ನು ಪದ್ಯದಲ್ಲಿ ಕಟ್ಟುವುದು ನಿಜಕ್ಕೂ ಸವಾಲು. ಇಲ್ಲಿನ ಈ ಪುಟ್ಟ ಪದ್ಯಗಳು ಝೆನ್ ಉಕ್ತಿಗಳಂತೆ ಪದಗಳನ್ನು ಬಾಣವಾಗಿಸಿಕೊಂಡು ಅರ್ಥದ ಎಲ್ಲೆಯನ್ನೂ ದಾಟಿ ಪ್ರಜ್ಞೆಯ ಹೊಸ ವಿಸ್ತಾರಗಳನ್ನು ಬೆಳಗುತ್ತವೆ. ಆದ್ದರಿಂದ ಈ ಸಂಕಲನದ ತುಂಬ ಬೆಳಕಿನ ಹಲವು ಭಾವಭಂಗಿಗಳುಹರಿದಾಡುತ್ತಿವೆ. ನಮ್ಮ ಪ್ರಜ್ಞೆಯಾಳದಲ್ಲೇ ಇರುವ ಬೆಳಕನ್ನು ಮರೆಮಾಚುವ ತಮಂಧದ ಕುರಿತೂ ಕವಯತ್ರಿ ಯೋಚಿಸುತ್ತಾರೆ.

ತಮಂಧವನ್ನು ಮೀರಿ
ತಥಾಗತನಾಗುವುದು
ಹೇಗೆ ಜೀಯ!
ಒಳಗಿನ ತಮಕೆ
ತಲೆಮಾರುಗಳ ನಂಟು !
ಅನಾದಿ ಕತ್ತಲನ್ನು ಗೆದ್ದುಬರುವ ಜಿದ್ದು ಬದುಕಾದರೆ, ಕತ್ತಲು ಬೆಳಕೆಂಬ ದ್ವಂದ್ವವನ್ನೇ ಮೀರುವುದು ಅರಿವು. ಅರಿವಿಗೆ ಬದುಕಿನ ಮೈಯ ಜರೂರಿದೆ. ಕತ್ತಲ ಇರುವಿಕೆಯೇ ಬೆಳಕಿನ ಹಂಬಲಕ್ಕೆ ಕಾರಣವಾಗಿದೆ. ನಾನೆಂಬುದು ಸ್ಪಷ್ಟವಾಗಲು ನೀನೆಂಬ ‘ಅನ್ಯ’ದ ಇರುವು ಹೇಗೆ ಅಗತ್ಯವೋ ಹಾಗೇ ಕತ್ತಲು ಬೆಳಕಿನ ಸಂಬಂಧ.

ಬೆಳಕಿನ
ವಿಳಾಸ ಹೇಳಿದ್ದೇ
ಕತ್ತಲು!

ಬೆಳಕೆಂಬುದೇ
ಎಷ್ಟೊಂದು ಕುರುಡಾಗಿಸುವಾಗ
ನಿಷ್ಪಾಪಿ ಕತ್ತಲನ್ನು
ಹೇಗೆ ದೂರಬಹುದು!
ಇಂಥ ಮಿಂಚಿನಲ್ಲಿ ಮೀಯಿಸುವ ಉಕ್ತಿಗಳು ಸಂಕಲನದುದ್ದಕ್ಕೂ ಇವೆ. ಕತ್ತಲು ಬೆಳಕೆಂಬ ನೋಟದ ಕಣ್ಕಟ್ಟುಗಳನ್ನು ಕಳಚಿಕೊಂಡ ರಚನೆಗಳಿವು. ಕಾರ್ಯಕಾರಣ ಸಂಬಂಧ ಪ್ರಜ್ಞೆಯಿಂದ ರಚಿಸಿಕೊಂಡ ಅರಿವು ಆ ಸಂಬಂಧವನ್ನೇ ಕಳಚಿಟ್ಟರೆ ಜಗತ್ತು ಬೇರೆಯೇ ಆಗಿ ತೋರಬಲ್ಲದೆಂಬ ಗುಟ್ಟನ್ನುಅವು ಗರ್ಭದಲ್ಲಿಟ್ಟುಕೊಂಡಿವೆ.

ಅದೃಶ್ಯರಾದರೆಂದು
ಹೇಗೆ ದೂರಬಹುದು
ಪ್ರಭುವೇ
ತಿರುವುಗಳನ್ನು
ಅಲ್ಲಗಳೆಯಬಹುದೇ..
ನಾವು ಭಾವಿಸುವ ಲೋಕ ಹಾಗೂ ನಿಜದಲ್ಲಿ ಇರುವ ಲೋಕದ ಸಂಬಂಧಾಂತರಗಳನ್ನು ಹಾಗೆ ಸಮ್ಮನೆ ಮುಂದಿಟ್ಟು ಬೆರಗು ಮೂಡಿಸುವ ಕವಿತೆಯ ಕ್ರಮವಿದು. ಇರುವು ಹಾಗೂ ಅರಿವಿನ ದ್ವಂದ್ವವನ್ನು ನಿವಾರಿಸಿಕೊಳ್ಳವ ದಾರಿಯನ್ನು ಇವು ಉಪದೇಶ, ಘೋಷಣೆಗಳ ಅಹಂಭಾವವಿಲ್ಲದೇ ಮೆಲ್ಲಗೆ ಉಸುರಿ ಮುಂದೆಹೋಗುತ್ತವೆ. ನಮ್ಮೊಳಗೊಂದು ಸಂಚಲನವನ್ನು ಸೃಷ್ಟಿಸಿದ ಅರಿವೇ ಇಲ್ಲದಂತೆ!. ರಂಗಮ್ಮ ಕವಿಯೋ ತತ್ವಜ್ಞಾನಿಯೋ ಅಥವಾ ಇವೆರಡೂ ಅಲ್ಲದ ನೆಲದ ಕರುಣೆಯ ಸ್ವರವೋ ಎಂಬ ಅಚ್ಚರಿಯೊಂದು ನಮ್ಮಲ್ಲಿ ಉಳಿದುಹೋಗುತ್ತದೆ.

ಒಂದು ಬಗೆಯ ಧ್ಯಾನಶೀಲ ನಿರುಮ್ಮಳತೆಯಿಂದ, ಸಮಚಿತ್ತದಿಂದ ಬರೆಯುವಂತೆ ತೋರುವ ರಂಗಮ್ಮನಲ್ಲೂ ಅಳಲುಗಳ ಕಡಲೇ ಇದೆ. ಆದರೆ ಅದು ಬರೀ ಅಳುವಲ್ಲ. ಜಗದ ದುಃಖವನ್ನು ತನ್ನೊಳಗೆ ಧರಿಸಿ ಅದನ್ನು ದಾಟುವ ಮೌನ ಹೋರಾಟವದು. ಈ ಅಳಲನ್ನು ಯಾರೊಂದಿಗೆ ಹಂಚಿಕೊಳ್ಳುವುದು? ಎಂದು ತಿಳಿಯದ ಏಕಾಂತದಲ್ಲಿ ತಳಮಳಿಸುತ್ತ ನಡೆಸುವ ಸ್ವಗತವಿದು. ಇಲ್ಲಿ ಪ್ರಭುವೇ, ಜೀಯಾ ಎಂದೆಲ್ಲ ಕರೆದರೂ ಆ ಅವಲಂಬನವೂ ಕೊನೆಗೆ ಕಾಣೆಯಾಗುತ್ತದೆ. ‘ಮನುಷ್ಯರೇ ಕಾಣೆಯಾಗಿರುವಲ್ಲಿ ದೇವರಿರುವುದು ಸಾಧ್ಯವೆ?’ ಎಂಬ ಮಾರ್ಮಿಕ ಪ್ರಶ್ನೆಯೇಳುತ್ತದೆ. ಕತ್ತರಿಸಿದರೂ ಮತ್ತೆ ಚಿಗುರುವ ರೆಕ್ಕೆ ಹಾಗೂ ಅರಳುವ ಹೂವುಗಳು ಅಪಾರ ಜೀವನಪ್ರೀತಿಯ ಪಾಠಹೇಳುತ್ತ ಸಂತೈಸುತ್ತವೆ. ನಿಸರ್ಗದ ವಿವೇಕವನ್ನು ಅರಗಿಸಿಕೊಂಡು ಕವಿತೆ ಮೈದಾಳುತ್ತದೆ. ಜೀವ ಕತ್ತರಿಸುವವರ ಎದುರು ಮತ್ತೆ ಮತ್ತೆ ಜೀವಂತಗೊಳ್ಳುವ ಕಸುವು ನೀಡುತ್ತದೆ. ತನ್ನನ್ನು ತಾನೇ ಮರುರಚಿಸಿಕೊಳ್ಳುವ ಸೃಷ್ಟಿಶೀಲತೆಯಿದು.

ಹೆಚ್ಚೆಂದರೆ ನೀವು
ನನ್ನ ಕಣ್ಣಲ್ಲಿ
ನೀರು ತುಳುಕಿಸಬಹುದು!
ಒಳಗಿನ ಬೆಳಕ
ಕಸಿಯಲಾರಿರಿ

ಕಲ್ಲು ಒಗೆದವರನ್ನು
ಶಪಿಸಬೇಕೆಂದುಕೊಂಡೆ
ಮೆಟ್ಟಿಲುಗಳು ನೆನಪಾದವು!
ಒಳಗಿನ ಅಂತಃಸತ್ವವನ್ನು ಯಾರೂ ಕಸಿಯಲಾರರು ಎಂಬ ಅದಮ್ಯ ಆತ್ಮವಿಶ್ವಾಸದಲ್ಲಿ ಮಾತಾಡುವ ಕವಿತೆಗೆ ಅಹಂ ಇಲ್ಲ. ಹೊಡೆದ ಕಲ್ಲುಗಳನ್ನೇ ಮೆಟ್ಟಿಲಾಗಿಸಿ ಮೇಲೇರುವ ಕೆಚ್ಚು ಇದೆ. ನೊಂದಷ್ಟೂ ಹೂಹಣ್ಣು ಕೊಡುವ ಅವ್ವತನವನ್ನು ಹೀರಿಕೊಂಡ ಈ ಕವಿತೆಗಳು ಕಾರುಣ್ಯದ ಭಾಷೆಯಲ್ಲಿ ಮಾತಾಡುತ್ತವೆ. ‘ಇರಿಯುವವರಿಗೂ ಹೃದಯ ಇದೆಯೆಂದಾದರೆ ಆ ಹೃದಯಕ್ಕೆರಡು ಕಣ್ಣು ತೊಡಿಸು’ ಎಂದು ಪ್ರಾರ್ಥಿಸುತ್ತವೆ. ‘ನೆಲದ ಕಣ್ಣಿನ ಕಾರುಣ್ಯವೇ ಹೂವಿನ ನಗೆ’ಯೆಂದು ಸಂಭ್ರಮಿಸುತ್ತದೆ.

ಬೆಳಕೆಂದರೆ ಕರುಣೆ
ಇಳಿಯುತ್ತದೆ ಹೇಗಾದರೂ
ಕಣ್ಣು ತೆರೆಯಬೇಕಷ್ಟೇ!

ಕರುಣೆ ಕಣ್ತೆರೆದರೆ ಬೆಂಕಿಯನ್ನೂ ಬೆಳಕಾಗಿಸುವ ಮರ್ಮ ಗೊತ್ತಾಗುತ್ತದೆ. ‘ಅವರು ಹಚ್ಚುತ್ತಲೇ ಹೋದರು: ನಾವೂಬೆಳಗಿಕೊಂಡೇ ನಡೆದೆವು’ ಎಂಬಲ್ಲಿದು ಛಕ್ಕನೆ ಹೊಳೆಯುತ್ತದೆ. ಬೆಂಕಿ ಎಂಬ ಶಬ್ದವನ್ನು ಉಚ್ಚರಿಸದೇ ಅದನ್ನು ಹೊಳೆಯಿಸುವ ಪರಿಯನ್ನಿಲ್ಲಿ ಗಮನಿಸಬೇಕು. ಹೊಸ ನೋಟ ಕ್ರಮವೊಂದು ತನ್ನ ಭಾಷೆಯನ್ನೂ ಧರಿಸಿ ಬಂದ ಬೆರಗಿನಂತೆ ಇದು ತೋರುತ್ತದೆ.

ಹೂ ಸ್ಪರ್ಷಕ್ಕೆಲ್ಲ ಕಲ್ಲರಳುವಂತಿದ್ದರೆ
ಜಗದ ಕಲ್ಲೆದೆಗಳೆಲ್ಲ ಹೂವಾಗುತ್ತಿದ್ದವು
ಎಂದು ಕನಸುವ ಕವಯತ್ರಿ ಹೂವಿನ ಮಗ್ಗುಲಲ್ಲೇ ಮುಳ್ಳಿರುವುದನ್ನೂ, ಕರುಣೆ ಕ್ರೌರ್ಯಗಳೆರಡೂ ಒಂದೇ ದಾರಿಯಲ್ಲಿ ಸಾಗುವ ವೈರುಧ್ಯಗಳನ್ನೂ ಗುರುತಿಸದಿರುವುದಿಲ್ಲ. ಆದರೆ ಬೆಂಕಿ ಬೆಳಕಾಗುವ, ಕ್ರೌರ್ಯ ಕರುಣೆಯಾಗುವ ರೂಪಾಂತರದಲ್ಲಿ ಅವರಿಗೆ ನಂಬಿಕೆಯಿದೆ. ಅದಕ್ಕೆಂದೇ ಅವರಲ್ಲಿ ನೋವೂ ಒಂದು ಹೃದ್ಯಕಾವ್ಯವಾಗುತ್ತದೆ.

ನೋವೂ
ಹೂವಾಗಲಿ
ತೊಟ್ಟು ಕಳಚಿ
ಬೀಳುತ್ತದಲ್ಲ!

ಬದುಕು ಭಾವಗಳು ಪಕ್ವಗೊಂಡಮೇಲೆ ಎಲ್ಲ ಕಣ್ಕಟ್ಟುಗಳೂ ಕಳಚಿ ಬೀಳುವುದು ಪ್ರಕೃತಿ. ಎಲ್ಲ ಬೌದ್ಧಿಕ ಅಹಂಕಾರವನ್ನು ನಿರಚಿಸುತ್ತಾ ಪ್ರೇಮ ಹಾಗೂ ಕಾರುಣ್ಯಗಳಲ್ಲಿ ಅರಳುವದನ್ನೂ ಹಾಗೇ ತಂತಾನೇ ಕಳಚಿಬೀಳುವುದನ್ನೂ ನಿರಾಳವಾಗಿ ಕಾಣಿಸುವ ಕನ್ನಡಿಯಂತೆ ಈ ಕಾವ್ಯ ಭಾಸವಾಗುತ್ತದೆ.
ನೋವೂ ಒಂದು ಹೃದ್ಯಕಾವ್ಯ ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಈ ಅಂಕಣದ ಹಿಂದಿನ ಬರೆಹಗಳು:
ಫಣಿಯಮ್ಮ ಎಂಬ ಹೊಸ ಪುರಾಣ:

‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ

ಹೊತ್ತು ಗೊತ್ತಿಲ್ಲದ ಕಥೆಗಳು

ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ

ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು

ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...

ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ

ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ

ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ

ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...