ನೆನಪಿನ ಕೋಶದೊಳಗೆ ಸಿಹಿ ತುಂಬುವ ಕೋಲ್ಜೇನು

Date: 25-01-2023

Location: ಬೆಂಗಳೂರು


''ಮಕ್ಕಳಿಗಾಗಿ ಬರೆಯುವುದು ನಾವು ತಿಳಿದುಕೊಂಡಂತೆ ಸುಲಭದ ವಿಷಯವೇನಲ್ಲ. ಅದರಲ್ಲೂ ನಮ್ಮದೇ ಬಾಲ್ಯವನ್ನು ಇಟ್ಟುಕೊಂಡು ಅದರ ಮೂಲಕ ಮಕ್ಕಳನ್ನು ತಲುಪುವುದು ಬರಹದ ಮೂಲಕ ದೊಡ್ಡವರನ್ನು ತಲುಪುವುದಕ್ಕಿಂತ ಕಷ್ಟ. ಆದರೆ ಬರವಣಿಗೆಯನ್ನು ತುಸು ಸೂಕ್ಷ್ಮಗೊಳಿಸಿಕೊಂಡರೆ, ಲಾಲಿತ್ಯದ ಸಂಗಾತ ಮಾಡಿಕೊಂಡರೆ ಇದು ಸಿದ್ದಿಸುತ್ತದೆ'' ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮಣ್ಣ ಬೀಗಾರ ಅವರ ‘ಕೋಲ್ಜೇನು’ ಸಂಕಲನದ ಕುರಿತು ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದಾರೆ.

ಲೇಖಕ: ತಮ್ಮಣ್ಣ ಬೀಗಾರ
ಕೃತಿ: ಕೋಲ್ಜೇನು
ಪ್ರಕಾಶನ ಅಭಿನವ ಪ್ರಕಾಶನ
ಬೆಲೆ: 100/-

ಮಲೆನಾಡಿನಲ್ಲಿ ವರ್ಷಪೂರ್ತಿ ಹಣ್ಣುಗಳಿಗೇನೂ ಬರವಿಲ್ಲ. ಒಂದಲ್ಲ ಒಂದು ಕಾಡುಹಣ್ಣುಗಳು ನಮ್ಮ ಬಾಲ್ಯವನ್ನು ಸಮೃದ್ಧಿಗೊಳಿಸಿದ್ದು ನೆನಪಿಸಿಕೊಂಡರೆ ಆಹಾ ಬಾಲ್ಯವೇ ಎನ್ನಿಸದೆ ಇರಲಾರದು. ಶಾಲೆ ಪ್ರಾರಂಭವಾಗುವ ಜೂನ್ ತಿಂಗಳ ಸಮಯದಲ್ಲಿ ಮಳೆ ಧೋ ಎಂದು ಸುರಿಯುವಾಗ ಮೇ ತಿಂಗಳಲ್ಲಿ ಮುಗಿಯದ ಪಿಳ್ಳೆಹಣ್ಣು ಎಂಬ ನೇರಳೇಹಣ್ಣಿನಂತಹದ್ದು ಸಿಗುತ್ತಿತ್ತು. ಬಹುಶಃ ಅದನ್ನು ಕುಂಟುನೇರಳೆ ಎಂದೂ ಕರೆಯುತ್ತಿದ್ದ ನೆನಪು. ಶಾಲೆಗೆ ಹೊರಟವರು ಕಾಡನ್ನೆಲ್ಲ ಹುಡುಕಿ ಅದನ್ನು ತಿನ್ನುತ್ತ ಸಾಗುತ್ತಿದ್ದೆವು. ಆದರೆ ಶಾಲೆಗೆ ಹೋದರೆ ಅಲಿ ತರಗತಿ ಶಿಕ್ಷಕರಾಗಿದ್ದ ಅಮ್ಮ ಬಾಯಿ ನೋಡಿದ ತಕ್ಷಣ ನುಕ್ಕೆ ಬರಲು ತೆಗೆದುಕೊಂಡು ಭಾರಿಸುತ್ತಿದ್ದರು. ಹೀಗಾಗಿ ಬಾಯ ನೀಲಿ ಆಗುವುದನ್ನು ತಡೆಯಲು ಚಳ್ಳೆಹಣ್ಣು ಹುಡುಕಿ ತಿನ್ನುತ್ತಿದ್ದೆವು. ಬೇರೆಯವರಿಗೆ ಚಳ್ಳೆಹಣ್ಣು ತಿನ್ನಿಸುವ ಮಾತು ಬಿಡಿ. ನಮ್ಮ ನಮ್ಮಲ್ಲೇ ಚಳ್ಳೆಹಣ್ಣು ತಿನ್ನಲು ಪೈಪೋಟಿ ನಡೆಯುತ್ತಿತ್ತು ಅಂದರೆ ನೀವು ನಂಬಲೇಬೇಕು. ಹುಳಿ ಹುಳಿಯಾದ ಚಳ್ಳೆಹಣ್ಣು ಪಿಳ್ಳೆಹಣ್ಣಿನಿಂದ ನೀಲಿಗಟ್ಟಿದ ಬಾಯಿಯನ್ನು ಸ್ವಚ್ಛಮಾಡುತ್ತಿತ್ತು. ಹೀಗಾಗಿ ಪಿಳ್ಳೆಹಣ್ಣು ತಿಂದವರು ಕಡ್ಡಾಯವಾಗಿ ಚಳ್ಳೆಹಣ್ಣು ತಿಂದು ಏನೂ ತುಂಟತನ ಮಾಡದ ಸುಬಗರಂತೆ ಶಾಲೆ ಸೇರುತ್ತಿದ್ದೆವು. ಸಂಜೆ ಮನೆಗೆ ಹಿಂದಿರುಗುವಾಗಲೂ ಇದೇ ಕಥೆಪುನರಾವರ್ತನೆಯಾಗುತ್ತಿದ್ದು. ಜೂನ್, ಜುಲೈ ಮುಗಿದರೆ ಅಗಷ್ಟ್ ಸಮಯಕ್ಕೆ ಬಿಕ್ಕೆ ಹಣ್ಣು ಕಾಡು ತುಂಬುತ್ತಿತ್ತು. ಒಗರು ರುಚಿಯ ಕಾಯಿ, ಹೋಳಿಗೆಯ ಹೂರಣದಂತಹ ಹಣ್ಣು ಸಾಮಾನ್ಯವಾಗಿ ಸಪ್ಟೆಂಬರ್ ಕೊನೆಯವರೆಗೂ ನಮ್ಮ ಬಾಯಿ ತಲುಬಿಗೆ ಒದಗುತ್ತಿತ್ತು. ನಂತರ ಖೋಖೋ ಹಣ್ಣು, ಮಜ್ಜಿಗೆ ಹಣ್ಣು, ಹಲಗೆ ಹಣ್ಣು, ರಂಜಲ ಹಣ್ಣು ಸಾಲಾಗಿ ನಮಗೆ ರಸದೌತಣ ನೀಡುತ್ತಿದ್ದವು. ಮಾಚನಲ್ಲಿ ವಾರ್ಷಿಕ ಪರೀಕ್ಷೆ ಮುಗಿಸಿದರೆ ಸಂಪಿಗೆ ಹಣ್ಣು, ಮಾವಿನ ಮಿಡಿ, ಗೇರು ಹಣ್ಣು, ಕವಳಿ ಹಣ್ಣುಗಳು ನಮಗಾಗಿ ಕಾಯುತ್ತಿರುತ್ತಿದ್ದವು. ನಡುವೆ ನಮಗೆ ಏನೂ ಸಿಕ್ಕದ ಸಮಯದಲ್ಲಿ ದಾಸಾಳ ಹಣ್ಣಿನ ಗಿಡ ವರ್ಷದ ಮುನ್ನೂರ ಅರವತ್ತೈದು ದಿನವೂ ನಮಗೆಂದು ಕೆಂಬಣ್ಣದ ಹಣ್ಣನ್ನು ಹೊತ್ತು ನಿಂತಿರುತ್ತಿತ್ತು. “ಅಕ್ಕೋರು ಮನೆಲಿ ಮಗಳಿಗೆ ಊಟಾನೇ ಹಾಕೂದಿಲ್ಲ ಅಂತಾರೆ. ಅದೆಂತಕ್ಕೆ ಹಾಗೆ ಕಾಡು ಅಲಿತೀಯೆ?” ಅಮ್ಮ ಸದಾ ಬೈಯ್ಯುತ್ತಿದ್ದರೂ ಅದು ನನಗಲ್ಲ ಎಂಬಂತೆ ಹಾಯಾಗಿರುತ್ತಿದ್ದ ಬಾಲ್ಯಕ್ಕೆ ಒಮ್ಮೆ ತುಂಡುಗುಪ್ಪು ಹಾಕಿ ಹೋಗಿ ಬರುವಂತೆ ಮಾಡಿದ್ದು ತಮ್ಮಣ್ಣ ಬೀಗಾರರ ಕೋಲ್ಜೇನು ಸಂಕಲನ.

ಮಕ್ಕಳಿಗಾಗಿ ಬರೆಯುವುದು ನಾವು ತಿಳಿದುಕೊಂಡಂತೆ ಸುಲಭದ ವಿಷಯವೇನಲ್ಲ. ಅದರಲ್ಲೂ ನಮ್ಮದೇ ಬಾಲ್ಯವನ್ನು ಇಟ್ಟುಕೊಂಡು ಅದರ ಮೂಲಕ ಮಕ್ಕಳನ್ನು ತಲುಪುವುದು ಬರಹದ ಮೂಲಕ ದೊಡ್ಡವರನ್ನು ತಲುಪುವುದಕ್ಕಿಂತ ಕಷ್ಟ. ಆದರೆ ಬರವಣಿಗೆಯನ್ನು ತುಸು ಸೂಕ್ಷ್ಮಗೊಳಿಸಿಕೊಂಡರೆ, ಲಾಲಿತ್ಯದ ಸಂಗಾತ ಮಾಡಿಕೊಂಡರೆ ಇದು ಸಿದ್ದಿಸುತ್ತದೆ. ಕೋಲ್ಜೇನು ಇಂತಹದ್ದೊಂದು ಬಾಲ್ಯದ ಲಹರಿ. ಓದುತ್ತ ಹೋದಂತೆ ನಮ್ಮದೇ ಬಾಲ್ಯ ಕಣ್ಣೆದುರು ತೆರೆದುಕೊಳ್ಳುತ್ತದೆ. ಅಜ್ಜಿಗುಂಡಿ ಎಂಬುದು ಅಜ್ಜಿಯಂತೆ ಕಾಣುವ ಒಂದು ಬಂಡೆಗಲ್ಲು ನದಿಯ ಹರಿವಿಗೆ ಅಡ್ಡವಾಗಿ ನಿಂತಿದ್ದರಿಂದ ಆದ ಹೊಂಡ. ಮಕ್ಕಳಿಗೆ ಪ್ರೀತಿಯ ಆಡುವ ತಾಣ. ಆದರೆ ರಸ್ತೆ ಕಾಮಗಾರಿಗೆಂದು ಆ ಅಜ್ಜಿ ಬಂಡೆಯನ್ನು ಸ್ಪೋಟಿಸಿ ಬಳಸಿಕೊಂಡಿದ್ದರಿಂದ ಗುಂಡಿ ಮಾಯವಾಗಿ ಮಕ್ಕಳಿಗೆ ಸಿಗುವ ಈಜಿನ ಖುಷಿ ಇಲ್ಲದಂತಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಆಗುವ ಅವಾಂತರಗಳನ್ನು ಈ ಲೇಖನ ಮಾರ್ಮಿಕವಾಗಿ ಚಿತ್ರಿಸಿದೆ. ನದಿ ಪಾರು ಕೂಡ ಇದೇ ತರಹದ್ದು. ಕೊಡಸಳ್ಳಿ ಎಂಬ ಊರಲ್ಲಿ ಆಣೆಕಟ್ಟು ಕಟ್ಟಿ ಇಡಿ ಊರಿಗೆ ಊರನ್ನೇ ಕಲ್ಲೇಶ್ವರ ಹಳವಳ್ಳಿ ಮುಂತಾದ ಕಡೆ ಸ್ಥಳಾಂತರ ಮಾಡಲಾಗಿದೆ. ಆದರೆ ಬಾಲ್ಯದಲ್ಲಿ ಈಜಾಡಿದ ಕಾಳಿ ಇಲ್ಲಿ ತಡೆಯೊಡ್ಡಿಸಿಕೊಂಡು ಊರನ್ನೇ ಆಪೋಷಣ ತೆಗೆದುಕೊಳ್ಳುವಂತೆ ಮಾಡಿ ಊರನ್ನೇ ಎತ್ತಂಗಡಿ ಮಾಡುವಂತೆ ಮಾಡಲಾಗಿದೆ. ಸಿಂಡ್ರೆಲ್ಲಾ ಗೊಂಬೆ ತೋರಿಸಿ ಬದುಕನ್ನು ಮೂರಾಬಟ್ಟೆ ಮಾಡುವ ಚಿತ್ರಣ ಇಲ್ಲಿದೆ. ಇಲ್ಲಿನ ಗುಂಡಪ್ಪ ಮತ್ತು ಹಾವು ಲೇಖನದಲ್ಲಿ ಬರುವ ಗುಂಡಪ್ಪ ಎಲ್ಲ ಮಕ್ಕಳ ಪ್ರತಿನಿಧಿಯಂತೆ ಕಾಣಿಸುತ್ತಾನೆ. ಹಳ್ಳಿಗಳಲ್ಲಿ ಹೆಚ್ಚಿನ ಮಕ್ಕಳು ಗುಂಡಪ್ಪನAಥವರೇ. ಶಾಲೆಗೆ ಹೋಗುವ ದಾರಿಯಲ್ಲಿ ಸಿಗುವ ಹಳ್ಳ ಕೊಳ್ಳ ಹಾಯುತ್ತ ಅಲ್ಲಿ ಕಾಣುವ ಎಲ್ಲ ಕೀಟ ಪ್ರಾಣಿಗಳನ್ನು ಕುತೂಹಲದಿಂದ ಗಮನಿಸುತ್ತ, ಕೈಯ್ಯಲ್ಲೊಂದು ಕೋಲು ಹಿಡಿದು ಆ ಕೋಲಿನಿಂದ ಎಲ್ಲ ಪಾಣಿ, ಕೀಟಗಳನ್ನು ಆಟ ಆಡಿಸಿ, ಗೋಳು ಹೊಯ್ದುಕೊಳ್ಳುತ್ತ, ಏನೂ ಸಿಗಲಿಲ್ಲವೆಂದರೆ ಹಾದಿ ಬದಿಯ ಗಿಡ ಪೊದೆಗಳನ್ನು ಆ ಕೋಲಿನಿಂದ ಬಡಿಯುತ್ತ ಹೋಗುವವರೇ ಹೆಚ್ಚು. ಹಿಂದೆಲ್ಲ ಹಳ್ಳಿಯ ಮಕ್ಕಳಿಗೆ ಹಾವು, ಚೇಳಿನ ಭಯವಿರಲಿಲ್ಲ. ಭಯವಿರಲಿಲ್ಲ ಎನ್ನುವುದಕ್ಕಿಂತ ಅದೂ ನಮ್ಮಂತೆಯೆ ಒಂದು ಪ್ರಾಣಿ ಎಂಬ ಸಹಜ ಭಾವವಿರುತ್ತಿತ್ತು.ಆದರೆ ಇತ್ತೀಚೆಗೆ ಹಳ್ಳಿಯ ಮಕ್ಕಳೂ ತುಂಬ ಸೂಕ್ಷ÷್ಮವಾಗುತ್ತಿದ್ದಾರೆ. ಚಿಕ್ಕದೊಂದು ಕಟ್ಟಿರುವೆಗೂ ಹೆದರಿ ನಡುಗುವ ಮಕ್ಕಳನ್ನು ಈಗ ನೋಡುತ್ತಿದ್ದೇವೆ. ಹಿಂದೆ ಇದ್ದ ಕಟ್ಟಿರುವೆಯ ಸಾಲಿಗೆ ಉಟ್ಟು ಹಾಕಿದರೆ ಕೊನೆಯ ಪಕ್ಷ ಎಂಜಲು ಉಗುಳು ಸಾಕು ಎನ್ನುವ ಸಣ್ಣಪುಟ್ಟ ಪರಿಹಾರೋಪಾಯಗಳು ಇಂದಿನ ಮಕ್ಕಳಿಗೆ ತಿಳಿದಿರುವುದಿಲ್ಲ ಎಂಬುದು ವಿಷಾದನೀಯ.

ಪುಸ್ತಕದಲ್ಲಿ ಇನ್ನೊಂದು ನೆನಪಿಡಬೇಕಾದ ಪಾತ್ರವೆಂದರೆ ಜೇನು ತಿಮ್ಮಣ್ಣ. ಒಂದು ಮರಕ್ಕೆ ಒಂದೇ ಸಲ ಕಟ್ಟಿದ ಇಪ್ಪತ್ತೆಂಟು ಗೂಡನ್ನು ತೆಗೆದು ಜೇನು ಸಂಗ್ರಹಿಸುವ ಎದೆಗಾರಿಕೆ ಬಹಳಷ್ಟು ಜನರಿಗೆ ಇರುವುದಿಲ್ಲ. ದಟ್ಟ ಕಾಡಿನ ನಡುವೆ ಇರುವ ಯಾವುದೋ ಕಣಿವೆಯ ಯಾವುದೋ ಓರೆಯಲ್ಲಿ ಆಕಾಶ ತಾಗುವಂತಿರುವ ಬೃಹತ್ ಗಾತ್ರದ ಮರವನ್ನು ಹತ್ತುವ ಮಾತಿರಲಿ, ಆ ಮರದ ಬುಡ ತಲುಪುವುದೂ ಸಾಮಾನ್ಯರಿಗೆ ಸಾಧ್ಯವಾಗದ ಮಾತಾಗಿರುವಾಗ ಜೇನು ತಿಮ್ಮಣ್ಣ ಅಂತಹ ಮರಗಳನ್ನು ಹತ್ತಲು ಮಾಡುವ ಉಪಾಯಗಳೇ ಒಂದು ತರಹದ ರೋಮಾಂಚನಕಾರಿ ಅನುಭವ. ಕತ್ತಿಯಿಂದ ಮರಕ್ಕೆ ಹೊಡೆದು ಕಾಲಿಟ್ಟು ಹತ್ತುವುದು. ಸಮೀಪದ ಮತ್ತೊಂದು ಮರಕ್ಕೆ ಹತ್ತಿ ಆ ಮರದಿಂದ ಕೊಕ್ಕೆ ಸಿಕ್ಕಿಸಿ ಎಳೆದುಕೊಂಡು ಆ ಮರವನ್ನು ಎಳೆದುಕೊಂಡು ಅದಕ್ಕೆ ದಾಟುವುದು ಇಂತಹುದ್ದೆಲ್ಲ ಸಾಹಸಮಯ ಕೃತ್ಯಕ್ಕೆ ಜೇನು ತಿಮ್ಮಣ್ಣ ಎತ್ತಿದ ಕೈ. ಇಂದಿಗೂ ನಮ್ಮೂರ ಕಡೆಯಲ್ಲಿ ಇರುವ ಗೊನೆ ಕೊಯ್ಯುವವರು ಇಂತಹ ಹಲವಾರು ಪ್ರಯೋಗಗಳನ್ನು ಮಾಡುತ್ತಿರುವುದನ್ನು ಕಾಣಬಹುದು.

ನಾನು ಎರಡನೇ ತರಗತಿಯಲ್ಲಿರುವಾಗ ಅಪ್ಪನ ಸೈಕಲ್ ಒಡಪಾಡ್ಲು ಹೊಡೆಯುವುದನ್ನು ಕಲಿತಿದ್ದೆ. ಅದು ಕುಮಟಾ ಶಿರಸಿ ರಸ್ತೆ. ಈಗ ವಾಹನ ದಟ್ಟಣಿ ಇರುವ ಆ ರಸ್ತೆಯಲ್ಲಿ ಅಂದು ಅಷ್ಟೇನೂ ವಾಹನ ಸಂಚಾರ ಇರಲಿಲ್ಲ. ಎದುರಿಗೆ ಬರುತ್ತಿದ್ದ ಟ್ರಕ್ ನವನು ನಾನು ನನ್ನ ಗೆಳತಿ ಸೈಕಲ್ ಹೊಡೆಯುವ ಚಂದಕ್ಕೆ ಟಕ್ ಸೈಡಿಗೆ ನಿಲ್ಲಿಸಿಕೊಂಡು ಬಿಟ್ಟಿದ್ದ. ಈ ಹುಡುಗಿಯರು ಬಿದ್ದು, ಊರ ಜನರು ತನ್ನನ್ನು ತದುಕಿದರೆ ಎಂಬ ಭಯಕ್ಕೆ. ಆದರೂ ನಾವು ಬಿಡದೇ ಅವನ ಟ್ರಕ್ ಗೆ ಡಿಕ್ಕಿ ಹೊಡೆದು ಕುಪ್ಪೆಯಾಗಿ ಬಿದ್ದಿದ್ದೆವು. ಡ್ರೈವರ್ ಸ್ವತಃ ಇಳಿದು ಬಂದು ನಮ್ಮನ್ನು ಎತ್ತಿದ್ದ ಕಥೆ ಮಾವನ ಸೈಕಲ್ ಓದುವಾಗ ಬೇಡವೆಂದರೂ ಕಣ್ಣೆದುರು ಸಿನೇಮಾದಂತೆ ಸುರುಳಿ ಸುರುಳಿಯಾಗಿ ಸುತ್ತಿ ಹೋಗುತ್ತದೆ.

ಮಕ್ಕಳ ಪುಸ್ತಕ, ಬಾಲ್ಯದ ಲಹರಿ ಎನ್ನುವುದು ನಿಜವಾದರ ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿ ಲೇಖಕರು ಹೇಳುವ ಕೆಲವು ಅಂಶಗಳನ್ನು ಸೂಕ್ಷö್ಮವಾಗಿ ಗಮನಿಸಿದೆ ಇದು ಒಂದು ರೀತಿಯ ಎರಡು ತಲೆಮಾರುಗಳ ನಡುವಿನ ಸೇತುವೆಯಂತೆ ಗೋಚರಿಸುತ್ತದೆ. ಮಕ್ಕಳಿಗೆ ಇಂದಿನ ಕಾಲಮಾನದಲ್ಲಿ ಸಿಗದ ಯಥೇಶ್ಚ ಬಾಲ್ಯದಿಂಆಗಿ ಮುರುಟಿ ಹೋಗುತ್ತಿರುವ ಅವರ ವಯೋಸಹಜವಾದ ಕುತೂಹಲ ಹಾಗೂ ಹುಮ್ಮಸ್ಸನ್ನು ಹೇಳುತ್ತಲೇ ಮಕ್ಕಳಿಗೆ ಒದಗಿಸಬೇಕಾದ ಸ್ವಚ್ಛಂದ ಅವಕಾಶಗಳ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ. ಮೂರು ಹೊತ್ತೂ ಪರೀಕ್ಷೆಯ ಗುಮ್ಮನನ್ನು ತೋರಿಸಿ

ಸಹಜವಾಗಿ ಬೆಳವಣಿಗೆಯಾಗಬೇಕಿದ್ದ ಬೌದ್ಧಿಕತೆಯನ್ನು ಕೃತಕವಾಗಿ ಬೆಳೆಸಲು ಯತ್ನಿಸುವ ನಮ್ಮ ಮೂರ್ಖತನದ ಕಡೆ ಬೆರಳು ಮಾಡಿ ತೋರಿಸುತ್ತದೆ.

ಇಡೀ ಸಂಕಲನ ನಮ್ಮ ಬಾಲ್ಯದ ನೆನಪನ್ನು ಅಲೆ ಅಲೆಯಾಗಿ ಮುನ್ನಲೆಗೆ ತಂದು ತುಟಿಯಲ್ಲಿ ನಗು ಸುಳಿಯುವಂತೆ ಮಾಡುತ್ತದೆ. ಬಾಲ್ಯದ ನೆನಪುಗಳೆಂದರೆ ಗೆದ್ದಲು ಹುಳುವಿನ ಹುತ್ತವಿದ್ದಂತೆ. ಒಂದು ನೆನಪು ಹೊರಬಂದರೆ ಸಾಕು ಪುತಪುತನೆ ಒಂದರ ಹಿಂದೆ ಒಂದರಂತೆ ನೆನಪುಗಳು ಮುನ್ನುಗ್ಗುತ್ತಲೇ ಇರುತ್ತವೆ. ಬಾಲ್ಯದ ನೆನಪುಗಳ ಜಡಿಮಳೆಯಲ್ಲಿ ಕೊಚ್ಚಿಕೊಂಡು ಹೋಗುವ ಮಧುರ ಅನುಭಪ ಪಡೆಯಲಾದರೂ ಈ ಪುಸ್ತಕವನ್ನು ಓದಲೇ ಬೇಕು.

ಈ ಅಂಕಣದ ಹಿಂದಿನ ಬರಹಗಳು:
ಆಂಗ್ಲ ಸಾಹಿತ್ಯದ ಓದಿಗೆ ಮೊದಲ ಮೆಟ್ಟಿಲಾಗಬಲ್ಲ ಅನುವಾದಿತ ಕತೆಗಳು
ಮಗುವಾಗಿಸುವ ಸುಂದರ ಹೂ ಮಾಲೆ
ಬಸವಳಿದ ಬಾಳಿಗೆ ಬೆಳಕು ನೀಡಬೇಕಿದೆ ಕಂದೀಲು
ಕಿರಿದರಲ್ಲೇ ಮೆರೆವ ಹಿರಿತನದ ಚುಟುಕುಗಳು
ಹಾಸ್ಯದ ಲೇಪನವಿಟ್ಟು ಮಕ್ಕಳ ಮನಸ್ಥಿತಿಯನ್ನು ಬಿಂಬಿಸುವ ಕಥೆಗಳು
ಭೂತ ವರ್ತಮಾನಗಳ ಬೆಸೆಯುವ ಕಥಾನಕ
ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ
ತಣ್ಣಗೆ ಕಥೆಯಾಗಿ ಹರಿಯುವ ಗಂಗಾವಳಿ
ಬದಲಾವಣೆಗಾಗಿ ಆತ್ಮಾವಲೋಕನವೊಂದೇ ಮಾರ್ಗ
ವಿಸ್ತಾರ ವಿಷಯದ ಗುಟುಕು ನೀಡುವ ಮಾಯದ ಕಥೆಗಳು
ಅಚ್ಚರಿಗೆ ನೂಕುವ ಹೊಳಹುಗಳು
ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...