ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ

Date: 03-01-2021


ಚಲಿಸುತ್ತಿರುವ ಜಗತ್ತನ್ನು ವಿವರಗಳೊಂದಿಗೆ ಸೆರೆ ಹಿಡಿಯುವ ಹಂಬಲದ ತಾಜಾತನದಿಂದಾಗಿ ಪೂರ್ಣಚಂದ್ರ ತೇಜಸ್ವಿಯವರ ಕಥನಗಳು ಹೊಳೆಯುತ್ತವೆ ಎಂದು ಅಭಿಪ್ರಾಯಪಡುವ ಕವಯತ್ರಿ-ವಿಮರ್ಶಕಿ ಡಾ. ಗೀತಾ ವಸಂತ ಅವರು , ತೇಜಸ್ವಿಯ ‘ನಿಗೂಢ ಮನುಷ್ಯರು’ ಕತೆಯನ್ನು ಹಲವು ಆಯಾಮಗಳಲ್ಲಿ ಹೀಗೆ ವಿಶ್ಲೇಷಿಸುತ್ತಾರೆ.

ತೇಜಸ್ವಿಯವರ ಬರಹಗಳ ಲೋಕವು, ಲೋಕ ವ್ಯವಹಾರಗಳಲ್ಲೇ ಅವಿತಿರುವ ಅಲೌಕಿಕ ಕ್ಷಣಗಳನ್ನು ದರ್ಶನ ಮಾಡಿಸುವ ಬಗೆಯಿಂದಾಗಿ ವಿಸ್ಮಯದ್ದೆನಿಸುತ್ತದೆ. ಅದು ಕಾಲ ಪ್ರವಾಹದಲ್ಲಿ ಕಣ್ಣು ಕೀಲಿಸಿ ಕುಳಿತ ಧ್ಯಾನಸ್ಥನೊಬ್ಬನ ಅವಲೋಕನದಂತೆಯೂ, ಸಿದ್ದ ಮಾದರಿಗಳನ್ನು ತಲೆಗೇ ಹಾಕಿಕೊಳ್ಳದೇ ಸದಾ ತನ್ನ ಮುರಿದು ಕಟ್ಟುವ ಚಟುವಟಿಕೆಯಲ್ಲಿ ಮಗ್ನವಾದ ಮಗುವಿನ ತುಂಟತನದಂತೆಯೂ ಏಕಕಾಲದಲ್ಲಿ ಕಾಣುತ್ತಾ ಹೋಗುತ್ತದೆ. ಜಗತ್ತನ್ನು ಅರ್ಥಮಾಡಿಕೊಳ್ಳುವಲ್ಲಿ ಎರಡು ಕ್ರಮಗಳಿವೆ. ಒಂದು ತತ್ವಶಾಸ್ತ್ರೀಯ ನೆಲೆಯಲ್ಲಿ ಅರ್ಥ ಹುಡುಕುವುದು ಇನ್ನೊಂದು ಅನುಭವಗಳ ಮೂಲಕವೇ ಅರ್ಥಮಾಡಿಕೊಳ್ಳುತ್ತ ಹೋಗುವುದು. ಅನುಭವಗಳು ಬಹುರೂಪಿಯಾಗಿರುವುದರಿಂದ ಅದರ ಸಾಧ್ಯತೆಗಳು ಅನಂತವಾಗಿರುತ್ತದೆ. ಚಲಿಸುತ್ತಿರುವ ಜಗತ್ತನ್ನು ಅದರೆಲ್ಲ ವಿವರಗಳೊಂದಿಗೆ ಸೆರೆಹಿಡಿಯುವ ಹಂಬಲದ ತಾಜಾತನದಿಂದಾಗಿ ತೇಜಸ್ವಿಯವರ ಕಥನಗಳು ಹೊಳೆಯುತ್ತವೆ. ಅನುಭವಗಳನ್ನು ಕಲಾಕೃತಿಯಾಗಿಸುವಲ್ಲಿ ತೇಜಸ್ವಿಯವರು ಆರಂಭದಲ್ಲಿ ನವ್ಯದ ಸಾಂಕೇತಿಕ ಮಾದರಿಯನ್ನು ಅನುಸರಿಸಿದ್ದರೂ ಕೊನೆಯಲ್ಲಿ ತಮ್ಮದೇ ಆದ ಭಿನ್ನ ಜಾಡನ್ನು ಕಟ್ಟಿಕೊಂಡರು. ಕಲಾವಿದನ ಪ್ರಜ್ಞೆಯೇ ಕೇಂದ್ರವಾದ ಬರವಣಿಗೆಯಿಂದ ಆಚೆ ಪರಿಸರದ ಪ್ರಜ್ಞೆಯನ್ನು ಕೇಂದ್ರವಾಗಿರಿಸಿಕೊಂಡು ನೋಡುವ ಕ್ರಮದೆಡೆಗೆ ಅವರು ಚಲಿಸುತ್ತಾರೆ. ತಮ್ಮ ಕಥನದಲ್ಲಿ ಅವರು ಎರಡು ಜಗತ್ತನ್ನು ಒಳಗೊಳ್ಳುತ್ತಾರೆ. ಒಂದು ವಿಶ್ವರಹಸ್ಯವನ್ನು ಒಳಗೊಂಡ ಪರಿಸರದ ಅನಂತ ಜಗತ್ತು. ಇನ್ನೊಂದು ಮನುಷ್ಯ ಪ್ರಜ್ಞೆಯೊಳಗಿನ ರಹಸ್ಯಮಯ ಅನೂಹ್ಯ ಜಗತ್ತು. ಈ ಜಗತ್ತುಗಳೆರಡೂ ನಿಗೂಢ ಜಗತ್ತುಗಳೇ. ಏಕೆಂದರೆ, ಅವು ನಮ್ಮ ಉದ್ದೇಶಗಳನ್ನು ಮೀರಿ ವರ್ತಿಸುತ್ತವೆ. ಆದ್ದರಿಂದಲೇ ನಮಗೆ ಅಸಂಗತವಾಗಿ ತೊರುತ್ತವೆ. “ ಮನುಷ್ಯ ಪ್ರಾಣಿ ಪ್ರಕೃತಿಯ ಉದ್ದೇಶ ಪೂರ್ವಕ ಸೃಷ್ಟಿ ಎಂಬುದೇ ಸುಳ್ಳು. ಉದ್ದೇಶಗಳೆಲ್ಲ ನಾವೇ ಆರೋಪಿಸಿಕೊಂಡಿರುವುದು. ಈ ಮಿಥ್ಯಾರೋಪವನ್ನು ನೀವು ಬಿಟ್ಟ ಮಾರನೆಯ ಕ್ಷಣವೇ ಹೊಸದೊಂದು ವಿಶ್ವರೂಪ ದೃಗ್ಗೋಚರವಾಗುತ್ತದೆ.” ಎಂದು ತೇಜಸ್ವಿಯವರು ಹೇಳುವುದು ಅವರ ಬರವಣಿಗೆಯ ಮಾಂತ್ರಿಕ ಲೋಕದ ಕೀಲಿ ಕೈಯಂತಹುದು.
ಮನುಷ್ಯ ಪ್ರಜ್ಞೆ ಹಾಗೂ ಪರಿಸರದ ನಡುವಿನ ಅನೂಹ್ಯ ಸಂಬಂಧವನ್ನು ಕಟ್ಟುತ್ತಲೇ ತೇಜಸ್ವಿಯವರ ಕತೆಗಳು ಸಂಭವಿಸುತ್ತವೆ. ಹೀಗೆ ಕಟ್ಟುವಾಗ ಮೊದಲು ಕಾಣಬೇಕು!. ಕಾಣ್ಕೆ ಎಂಬಂಥ ಭಾರದ ಶಬ್ದಗಳನ್ನು ತೇಜಸ್ವಿ ಒಪ್ಪುತ್ತಿದ್ದರೋ ಇಲ್ಲವೋ ಎಂಬುದು ಬೇರೆ ಮಾತು. ಅವರ ನಿಗೂಢ ಮನುಷ್ಯರು ಕತೆಯಲ್ಲಿ ಒಂದು ಮಾತು ಬರುತ್ತದೆ. “ಅಸಂಖ್ಯಾತ ಅನುಭವಗಳು ಎದ್ದೆದ್ದು ಮುಳುಗುವ ಕಡಲು ಈ ಪ್ರಜ್ಞೆ. ಅನುಭವದ ಆಳಕ್ಕೆ ಇಳಿಯುತ್ತಾ ಬುದ್ದಿ ಅದರ ಅರ್ಥ ತಿಳಿದುಕೊಳ್ಳುವ ಸಾಮರ್ಥ್ಯ ಕಳೆದುಕೊಂಡು ಬಿಡುತ್ತದೆ. ಅನುಭವ ಎಂಬುದು ನರಮಂಡಲದ ಮೇಲೆ ಹರಿದಾಡುವ ವಿದ್ಯತ್ ಆಗಿಬಿಡುತ್ತದೆ.”. ಇಂಥ ವಿದ್ಯುತ್ ಸ್ಪರ್ಶದ ಅನುಭವವನ್ನು ಓದುಗರ ಸಂವೇದನೆಗೆ ಪರಿಚಯಿಸುವ ಮಹತ್ವಾಕಾಂಕ್ಷೆಯ ಬರವಣಿಗೆಯಾಗಿ ಅವರ ಹಲವು ಕತೆಗಳು ಕಾಣಿಸುತ್ತವೆ. ನಿಸರ್ಗ ಹಾಗೂ ಪ್ರಜ್ಞೆಯ ಲಯಗಳನ್ನು ಸೂಕ್ಷ್ಮವಾಗಿ ಅರಿತು ನುಡಿಸುವ ಸಂಗೀತಗಾರನಂಥ ಪ್ರತಿಭೆಯನ್ನು ಅವರ ನಿಗೂಢ ಮನುಷ್ಯರು ಕಥೆಯ ಮೂಲಕ ಗುರುತಿಸಬಹುದು. ಮಳೆ, ಭೂಕಂಪ, ಗುಡ್ಡ ಕುಸಿತಗಳಲ್ಲಿ ಊರುಗಳೇ ಕಣ್ಮರೆಯಾಗುವ, ದಾರಿಗಳು ಕರಗುವ ಪ್ರಕೃತಿಯ ಲಯ ಭೀಷಣತೆಯಲ್ಲಿ ಈ ಕತೆ ಬಿಚ್ಚಿಕೊಳ್ಳುತ್ತಾ ಮನುಷ್ಯರ ನಿಗೂಢತೆಯನ್ನೂ ಬಗೆದಿಡುತ್ತದೆ. ಪ್ರಕೃತಿ ಎಂಬುದು ಆಗಿ ಇರುವುದಿಲ್ಲ. ಅದು ಆಗುತ್ತಾ ಇರುವ ವಿದ್ಯಮಾನ. ಹಾಗೆಯೇ ಮನುಷ್ಯನೂ ಆಗಿ ಇರದೇ ಆಗುತ್ತಲೇ ಇರುತ್ತಾನೆ. ಮನುಷ್ಯನ ಕೊನೆಯಿಲ್ಲದ ಹುಡುಕಾಟದಲ್ಲಿ ಅವನ ಗಾಳಕ್ಕೆ ಸಿಕ್ಕಷ್ಟೇ ಅವನ ಬದುಕು. ಈ ಕತೆಯಲ್ಲಿ ಬರುವ ಜಗನ್ನಾಥ, ರಂಗಪ್ಪ, ಗೋಪಾಲಯ್ಯ ಮೂವರೂ ನಿಗೂಢವಾಗಿಯೇ ಕಾಣುತ್ತಾರೆ. ಅವರು ತಮ್ಮ ರಹಸ್ಯಗಳನ್ನು ಅಡಗಿಸಿಟ್ಟು ಬೇರೇನೋ ಆಗಿ ತೋರಿಸಿಕೊಳ್ಳುತ್ತಾ ಹೋಗುತ್ತಾರೆ. ಜೀವನ್ಮರಣದ ಮಧ್ಯೆ ಗೆರೆಯೇ ಇಲ್ಲದಂಥ ಕ್ಷಣಗಳಲ್ಲಿ ಪೊರೆ ಕಳಚಿದಂತೆ ಅವರು ತಮ್ಮೊಳಗನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಇದೊಂದು ಅಂತರ್ ಪಯಣ. ಸೀಳು ವ್ಯಕ್ತಿತ್ವಗಳಲ್ಲಿ ಬದುಕುತ್ತಿರುವ ಇವರು ತಮ್ಮ ಆಂತರ್ಯವನ್ನು ತಾವೇ ಕಂಡು ಚಕಿತಗೊಳ್ಳುವ ಕ್ಷಣಗಳನ್ನು ಈ ಪಯಣದಲ್ಲಿ ಕಾಣುತ್ತಾರೆ. ವಾಸ್ತವವಾಗಿಯೂ ಕತೆ ಆರಂಭವಾಗುವುದು ಜಗನ್ನಾಥ ಹಾಗೂ ರಂಗಪ್ಪರು ಉಗ್ರಗಿರಿ ಶಿಖರವನ್ನೇರಲು ಪಯಣ ಆರಂಭಿಸುವ ಮೂಲಕವೇ. ಆದರೆ ಅವರ ಗುರಿಯಾದ ಶಿಖರ ದೂರದಿಂದ ಕಾಣಿಸುತ್ತಿದ್ದರೂ ದಾರಿಗಳು ಗೊಂದಲಗೊಳಿಸುತ್ತವೆ. ಜೋರುಮಳೆಯಲ್ಲಿ ಅವರ ಕಾರಿನ ಚಕ್ರಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಳ್ಳುವ ಮೂಲಕ ಆ ಕಾಡಿನ ನಡುವಿನ ನಿಗೂಢ ಜಗತ್ತನ್ನು ಅವರು ಪ್ರವೇಶಿಸುತ್ತಾರೆ.
ಮೂರು ನಾಲ್ಕು ದಿನಗಳೇ ಕಳೆದರೂ ಮಳೆ ನಿಲ್ಲದಾಗಿ ಅವರು ಸಮೀಪದಲ್ಲಿದ್ದ ಗೋಪಾಲಯ್ಯನ ಮನೆಯಲ್ಲಿ ಅನಿವಾರ್ಯ ಅತಿಥಿಗಳಾಗುತ್ತಾರೆ. ಮಹಾಮಳೆಗೆ ಸಿಲುಕಿ ದಾರಿಗಳೆಲ್ಲ ಮುಳುಗಿ ಜಗತ್ತನ್ನು ಸಂಪರ್ಕಿಸುವ ಕೊಂಡಿಗಳೇ ಕಳಚಿ ಹೋಗುತ್ತವೆ. ಮಳೆ ಅಬ್ಬರಿಸುತ್ತ ಸುತ್ತಲಿನ ಲೋಕ ಮಸಕಾಗುತ್ತ ಮನುಷ್ಯನ ಒಳಲೋಕ ಬಚ್ಚಿಟ್ಟ ಕೆಂಡದಂತೆ ನಿಗಿನಿಗಿಸುತ್ತದೆ. ಅವರು ಮೂವರೂ ಒಟ್ಟಿಗಿದ್ದೂ ಒಬ್ಬರಿಗೊಬ್ಬರು ಅಪರಿಚಿತರಂತಿರುತ್ತಾರೆ. ಮನೆಯಲ್ಲಿ ದಿನಸಿಗಳೆಲ್ಲ ತೀರುತ್ತಾ ಬಂದಾಗ ಉಳಿವಿನ ಎಚ್ಚರ ಅವರನ್ನು ನಿದ್ದೆ ಮಾಡಗೊಡುವುದಿಲ್ಲ. ಒಲೆಯೊಳಗಿದ್ದ ಎರಡೇ ಎರಡು ಕೆಂಡವನ್ನು ಗೋಪಾಲಯ್ಯ ಆರದಂತೆ ನೋಡಿಕೊಳ್ಳಲು ಹೇಳುವುದು, ಬೆಂಕಿ ಪೆಟ್ಟಿಗೆಯನ್ನು ಮುಗಿಯದಂತೆ ಎಚ್ಚರವಹಿಸುವುದು ಇಂಥ ಕ್ರಿಯೆಗಳಲ್ಲಿ ಅದು ಕಾಣಿಸುತ್ತದೆ. ಕತೆಯಲ್ಲಿ ಪ್ರಕೃತಿಯ ಲೀಲೆಯ ಮುಂದೆ ಮನುಷ್ಯನ ಬದುಕು ಎಷ್ಟು ಕ್ಷುದ್ರ ಎಂಬ ಅರಿವು ಕ್ಷಣಕ್ಷಣಕ್ಕೂ ಆಗುತ್ತ ಹೋಗುತ್ತದೆ. ಪದೇ ಪದೆ ಸಂಭವಿಸುವ ಭೂಕಂಪಗಳು, ಗುಡ್ಡ ಕುಸಿತ, ಬೃಹತ್ ಬಂಡೆಗಳು ಉರುಳುವುದು ಇವೆಲ್ಲ ಈ ಮೂವರ ಪ್ರಜ್ಞೆಯನ್ನು ತಲ್ಲಣಗೊಳಿಸುತ್ತಲೇ ಹೋಗುತ್ತವೆ. ಮಳೆಯಿಂದ ಕವಿದ ಕತ್ತಲಲ್ಲಿ ಸುತ್ತಲಿನ ದೃಶ್ಯ ಪ್ರಪಂಚವೇ ಅಳಿದು ಹೋದಂತೆನಿಸುತ್ತದೆ. ಯಾವುದೋ ಕಾಲಾತೀತ ಪ್ರಪಂಚದಲ್ಲಿರುವಂತೆ ಅವರಿಗೆ ವಿಸ್ಮೃತಿ ಕವಿಯತೊಡಗುತ್ತದೆ. ಆಗೆಲ್ಲ ಅವರ ಒಳಗಿನ ಪ್ರಪಂಚ ಹೆಚ್ಚು ದೀಪ್ತವಾಗಿ ಕಾಣುತ್ತದೆ. ಕತೆಯಲ್ಲಿ ಕವಿದ ಮಾಯೆ ಆಗಾಗ ಮುಸುಕು ತೆರೆದು ದರ್ಶನದಂತೆ ಹೊಳೆದು ಮಾಯವಾಗುತ್ತದೆ. ಈ ಮೂಡುವ ಮುಳುಗುವ ಪ್ರಕೃತಿಯ ಲೀಲೆಯು ಈ ಮೂವರ ಮನಸ್ಸಲ್ಲೂ ತೋರುತ್ತದೆ. ಎಲ್ಲೋ ಒಂದು ಬಿಂದುವಿನಲ್ಲಿ ಇವರ ಒಳ ಪ್ರಪಂಚ ಹಾಗೂ ಹೊರ ಪ್ರಪಂಚಗಳು ಬೆರೆತು ಹೋಗುತ್ತ ವಿಸ್ಮಯಕ್ಕೆ ದೂಡುತ್ತವೆ. “ಆಗೊಮ್ಮೆ ಭಯಂಕರವಾಗಿ ಗಾಳಿ ಬೀಸಿತು. ಲೋರಿಯ ಛತ್ರಿ ಹಿಮ್ಮೊಗವಾಗಿ ಮಡಚಿಕೊಂಡಿತು. ತಲೆಯಮೇಲೆ ಇದ್ದಕ್ಕಿದ್ದಂತೆ ಬಯಲಾದಂತಾಯ್ತು. ಜಗನ್ನಾಥ ತಲೆಯೆತ್ತಿ ನೋಡಿದ. ಭಯಂಕರವಾದ ಶಿಖರ. ಇನ್ನೇನು ಅದರ ತಲೆಯ ಮೇಲೆ ಬೀಳುವಂತೆ ಇದ್ದ ನೆತ್ತಿ ಮತ್ತು ಬಂಡೆಗಳು ಹಠಾತ್ತಾಗಿ ಮುಸುಕು ಮುಸುಕಾಗಿ ಕಾಣ್ಕೆಯೋ ಎಂಬಂತೆ ಜಗನ್ನಾಥನಿಗೆ ಮಂಜಿನಲ್ಲಿ ಕ್ಷಣಕಾಲ ಕಾಣಿಸಿಕೊಂಡವು. ಒಂದು ಸಾರಿ ಜಗನ್ನಾಥನ ಮೈ ಜುಂ ಎಂದಿತು. ಗೋಪಾಲಯ್ಯನ ಕಡೆ ತಿರುಗಿ ‘ಯಾವುದು ಈ ಶಿಖರ’ ಎಂದು ಕೇಳುವ ವೇಳೆಗಾಗಲೇ ಮೋಡಗಳ ದಟ್ಟಣೆಯಲ್ಲಿ ಗಿರಿ ಅಂತರ್ಧಾನವಾಗಿತ್ತು”(ಪು 105 ನಿಗೂಢ ಮನುಷ್ಯರು) ಇರುವ ಜಗತ್ತು ಹಾಗೂ ಕಾಣುವ ಜಗತ್ತುಗಳ ಈ ದ್ವಂದ್ವಮಯ ನೆರಳು ಬೆಳಕಿನಾಟವನ್ನು ತೇಜಸ್ವಿ ಇಂಥ ಪ್ರತಿಮೆಗಳಲ್ಲಿ ಛಕ್ಕನೆ ಕಾಣಿಸುತ್ತ ಹೋಗುತ್ತಾರೆ.
ಮಳೆಯ ಮಾಯೆಯಲ್ಲಿ ಕಾಲ ದೇಶಗಳಿಗೆ ತಾವು ಅತೀತವಾಗಿ ಬದುಕುತ್ತಿದ್ದೇವೆಂದು ಅವರಿಗೆ ಅನಿಸಿದಷ್ಟೂ ಅವರು ತಮ್ಮ ಮುಚ್ಚಿಟ್ಟ ಗುರುತುಗಳನ್ನು ಕಳೆದುಕೊಳ್ಳುತ್ತ ಹೋಗುತ್ತಾರೆ. ಪ್ರಕೃತಿಯ ಲಯದಲ್ಲಿ ಲಯವಾಗುತ್ತ ಹೋಗುತ್ತಾರೆ. ಕಂಪನದಿಂದಾಗಿ ಆಗಾಗ ತಂಬೂರಿಯಂತೆ ಜುಂಯ್ ಜುಂಯ್ ಗುಡುವ ಭೂಮಿಯ ಲಯ ಆವರಿಸಿಕೊಳ್ಳುತ್ತ ಹೋಗುತ್ತದೆ. ಮಳೆಯ ಕುಗ್ಗದ ಆರ್ಭಟದಲ್ಲಿ ಗುಡ್ಡಗಳೇ ಇಬ್ಬಾಗವಾಗಿ ಬ್ರಹತ್ ಪ್ರಾಣಿಗಳಂತೆ ಚಲಿಸುತ್ತಾ ಕೆಳಗೆ ಜಾರುತ್ತವೆ. ಹಾಗೆ ಜಾರಿದ ಗುಡ್ಡವೊಂದು ಗೋಪಾಲಯ್ಯನ ಏಲಕ್ಕಿ ತೋಟದ ಮೇಲೆಯೇ ಕುಸಿದು ಕುಳಿತುಕೊಳ್ಳುತ್ತದೆ. ಅಲ್ಲೊಂದು ತೋಟ ಮಾಡಿದ್ದರು ಎಂಬ ಕುರುಹೇ ಅಳಿಸಿಹೋಗುತ್ತದೆ. ಹಿಂದೆ ಹಾಗೆ ಊರಿಗೆಊರೇ ನಾಶವಾಗಿದ್ದ ಕುರುಹುಗಳನ್ನು ಗೋಪಾಲಯ್ಯ ಗಮನಿಸಿರುತ್ತಾನೆ. ವಿಶ್ವದ ವಿಶಾಲವಾದ ಕ್ಯಾನ್ವಾಸಿನಲ್ಲಿ ಕ್ಷಣಭಂಗುರವಾದ ಬದುಕಿನ ದರ್ಶನಗಳು ಅವನಿಗಾಗಿರುತ್ತವೆ. ಈ ಪ್ರಳಯ ಸದೃಶ ಮಳೆಯಲ್ಲಿ ಅವನಿಗೆ ಇದು ಜಗತ್ತಿನ ಕೊನೆ, ಎಲ್ಲ ಅನುಭವಗಳ ಶಿಖರ, ಇನ್ನು ಬೆಳಗಾಗುವುದೇ ಇಲ್ಲವೆನಿಸತೊಡಗುತ್ತದೆ. ಎಲ್ಲಿ ಹೋದರೂ ಎತ್ತರದಲ್ಲಿ ಕಾಣುವ ಆ ಉಗ್ರಗಿರಿ ಶಿಖರ ತಮ್ಮ ಮೇಲೇ ಬೀಳುವುದೇನೋ ಎಂಬಂತೆ ಭಯದ ಕೇಂದ್ರವಾಗಿ ಕಾಡುತ್ತ ಹೋಗುತ್ತದೆ.
ಜೀವ ಸಾವುಗಳ ನಡುವೆ ಜೋಕಾಲಿಯಾಡುವ ಇಂಥ ಕ್ಷಣಗಳಲ್ಲೇ ಗೋಪಾಲಯ್ಯನಿಗೆ ಅಸ್ತಿತ್ವದ ಕುರಿತ ಪ್ರಶ್ನೆಗಳು ಮೂಡುತ್ತವೆ. ಗೋಪಾಲಯ್ಯನೆಂಬ ಹೆಸರಿನಲ್ಲಿ ಈ ಕ್ಷಣದಲ್ಲಿ ಬದುಕುತ್ತಿರುವ ನಾನು ಯಾರು? ಎಂಬ ಪ್ರಶ್ನೆಯೊಂದು ಅವನೊಳಗೆ ಉಲ್ಬಣಿಸುತ್ತದೆ. ಅವನೇ ಅಂದುಕೊಳ್ಳುವಂತೆ “ಇದಕ್ಕೂ ತತ್ವಶಾಸ್ತ್ರಕ್ಕೂ ಸಂಬಂಧವೇ ಇಲ್ಲ. ಇದು ನನ್ನ ಜೀವನದ ಭೌತಸತ್ಯ. ಸುಬ್ಬರಾಯ ಕವಿ, ಆಯುರ್ವೇದ ವೈದ್ಯ, ವಿಜ್ಞಾನಿ...ಮೊದಲಿನಿಂದಲೂ ಅನೇಕ ವ್ಯಕ್ತಿತ್ವಗಳಾಗಿ ಬಾಳುವುದು ನನಗೊಂದು ವಿನೋದವಾಗಿ ಹೋಗಿತ್ತು. ನಿಶ್ಚಿತ ಹೆಸರು ಉದ್ದೇಶಗಳೊಂದಿಗೆ ನಿಶ್ಚಿತ ಕಾಲಾವಧಿಯವರೆಗೆ ಬದುಕುವುದು ನನಗೆ ಸಂತೋಷದಾಯಕ ವಿಚಾರವಾಗಿತ್ತು.” (ಪು 124 ಅದೇ) ತನ್ನ ಅಸ್ತಿತ್ವವನ್ನೇ ಬದಲಿಸಿಕೊಳ್ಳುತ್ತ ಹೋಗುವ ಗೋಪಾಲಯ್ಯನಿಗೆ ತಾನು ನಿಜವಾಗಿ ಎಲ್ಲಿದ್ದೇನೆಂಬ ಜಿಜ್ಞಾಸೆ. ಗುಪ್ತಚರ ಶಾಖೆಗೂ ಸೇರಿದ್ದ ಅವನಿಗೆ ಸಮಾಜದ ಅವ್ಯಕ್ತ ನಿಗೂಢ ಸ್ತರಗಳ ಪರಿಚಯವಾಗಿರುತ್ತದೆ. ಒಡೆದ ಅಮೀಬಗಳಂಥ ಅಸಂಖ್ಯ ವ್ಯಕ್ತಿತ್ವದ ವ್ಯಕ್ತಿಗಳನ್ನು ನೋಡಿ ಅವನು ದಂಗಾಗಿ ಹೋಗುತ್ತಾನೆ. ಮನುಷ್ಯಕೂಡ ಪ್ರತಿಕ್ಷಣವೂ ಆಗುತ್ತಿರುತ್ತಾನೆ. ಅವನು ಎಲ್ಲಿಯೂ ಸ್ಥಿರವಾಗಿ ಇರುವುದಿಲ್ಲವೆಂಬ ಅರಿವಿನ ದಿಗ್ಭ್ರಾಂತಿಯಿದು. ಕಾಮತನೋ, ಡಿಸೋಜನೋ, ಜಾಧವನೋ ರಾಯಪ್ಪನೋ ಆಗಿ ರೂಪಾಂತರಗೊಳ್ಳುತ್ತ ತನ್ನ ದೇಹದಲ್ಲಿ ಇವರೆಲ್ಲ ಆಗಿಹೋಗಿದ್ದಾರೆ, ತನಗೊಂದು ಚಿರಂತನ ವ್ಯಕ್ತಿತ್ವವೇ ಇಲ್ಲವೆಂದು ಅವನಿಗನಿಸುತ್ತದೆ. ಪರಕಾಯ ಪ್ರವೇಶ ಮಾಡುತ್ತ ತಾನೇ ಕಳೆದುಹೋದ ಕಳವಳ ಗೋಪಾಲಯ್ಯನದು. ಮದುವೆಯಾಗಿದ್ದ ತಾನು ಗಂಡನಾಗಿಯೂ ಪರಕಾಯ ಪ್ರವೇಶ ಮಾಡಿದ್ದೆನೆಂದೇ ಆತನಿಗನಿಸುತ್ತದೆ. “ಅಸಂಖ್ಯಾತ ಅನುಭವಗಳು ಎದ್ದೆದ್ದು ಮುಳುಗುವ ಕಡಲು ಈ ಪ್ರಜ್ಞೆ. ನಾನೆಂದರೆ ಇದನ್ನೆಲ್ಲ ಸೇರಿಸಿದ ಜ್ಞಾಪಕ. ಒಂದಕ್ಕೂ ಒಂದರ್ಥವೂ ಇಲ್ಲ.”( ಪು 125 ಅದೇ) ಎಂದುಕೊಳ್ಳುವ ಅವನು ನೆನಪಿನ ಗುಳ್ಳೆಗಳಲ್ಲಿ ಬದುಕಿರುವ ವ್ಯಕ್ತಿಯಂತೆ ತೋರುತ್ತಾನೆ. ವ್ಯಕ್ತಿತ್ವದ ನಿಗೂಢತೆಯನ್ನು ಆಳಕ್ಕಿಳಿದು ನೋಡುವ ನಿಗೂಢ ಮನುಷ್ಯರು ಝೆನ್ ಕಥೆಯಂತೆ ಅನುಭವ ನೀಡುತ್ತದೆ.
ಈ ಅಮೂರ್ತಾನುಭವಗಳ ಜೊತೆಗೆ ಈ ಕತೆಯಲ್ಲಿ ಇನ್ನೊಂದು ಜಗತ್ತಿದೆ. ಅದು ಇನ್ನೂ ಆಧುನಿಕ ಪರಿಸರಕ್ಕೆ ತೆರೆದುಕೊಳ್ಳದ ಜಗತ್ತು. ಅದರಲ್ಲಿ ಮರಸರ, ಕಾಂಪ್ರ, ಕಳುಪ ಮುಂತಾದವರಿದ್ದಾರೆ. ಕಾರನ್ನು ಕೆಸರಿನಿಂದ ಹೊರತೆಗೆಯಲು ಸಹಾಯಕ್ಕಾಗಿ ಬಂದ ಇವರು ಜಗನ್ನಾಥ ಹಾಗೂ ರಂಗಪ್ಪರಿಗೆ ಇತಿಹಾಸಪೂರ್ವದ ಗುಹೆಗಳಿಂದ ಹೊರಬಂದ ಆದಿಮಾನವರ ಹಾಗೆ ಕಾಣುತ್ತಾರೆ. ನಾಗರಿಕವೆನಿಸಿಕೊಂಡ ಭಾವನೆಗಳಿಂದ ದೂರವೇ ಇರುವ ಇವರು ತಮ್ಮ ಮೃಗೀಯತೆಯನ್ನು ಮರೆತಿಲ್ಲ. ಗೋಪಾಲಯ್ಯನ ತೋಟದಲ್ಲಿ ದುಡಿಯಲು ಬಂದ ಇವರೊಳಗೆ ಸದಾ ಕಲಹಗಳು. ಮಂಗಗಳನ್ನು ಕೊಂದು ಸುಟ್ಟು ಅದನ್ನು ತನ್ನ ಬಿಡಾರದೊಳಗೆ ನೇತುಹಾಕುವ ಮರಸರನ ವಿಚಿತ್ರಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಯಾವ ತರ್ಕವೂ ಸಮರ್ಪಕವಲ್ಲ. ತನ್ನ ಪುಟ್ಟಮಗ ತೀರಿಹೋದಾಗಲೂ ಆತ ಶವವನ್ನು ಸುಮ್ಮನೆ ಬಿಡಾರದ ಹಿಂಬದಿಯ ಕಾಡಿನಲ್ಲಿ ಎಸೆದುಬಿಡುತ್ತಾನೆ. ಶವವನ್ನು ಮಣ್ಣು ಮಾಡಿದರೆ ಮತ್ತೆ ಹುಟ್ಟಿ ಬರಲು ಆಗುವುದಿಲ್ಲ ಎಂಬುದು ತನ್ನ ಜಾತಿಯಲ್ಲಿರುವ ನಂಬುಗೆ ಎಂದು ಹಠ ಹಿಡಿಯುತ್ತಾನೆ. ಆ ಶವದ ವಾಸನೆಗೆ ಅಲ್ಲಿ ಇರಲಾಗುವುದಿಲ್ಲವೆಂದೂ, ಅಲ್ಲಿ ನರಿಗಳು ಬಂದು ಊಳಿಡುತ್ತವೆಂದೂ ಉಳಿದವರು ಗೋಪಾಲಯ್ಯನಿಗೆ ದೂರು ಹೇಳುತ್ತಾರೆ. ಕೊನೆಯಲ್ಲಿ ಮರಸರ ಹಂದಿ ಹಿಡಿಯಲು ತನ್ನ ಮಗನ ಶವವನ್ನೇ ಒಡ್ಡಿಬಿಡುತ್ತಾನೆ. ಗೋಪಾಲಯ್ಯ ಹೋಗಿ ನೋಡಿದಾಗ ಅಲ್ಲಿನ ಭೀಬತ್ಸ ದ್ರಶ್ಯಕ್ಕೆ ಅವರ ನರಗಳೆಲ್ಲ ತಣ್ಣಗಾಗಿ ಪರಿಸ್ಥಿತಿಯ ಭೀಕರತೆಯೂ ಅರಿವಾಗದಂತೆ ಪ್ರಜ್ಞೆಗೆ ಜೋಮುಹಿಡಿದ ಅನುಭವವಾಗುತ್ತದೆ. ನಾವು ಕಟ್ಟಿಕೊಂಡ ನಾಗರಿಕ ಪರಿಸರ, ಭಾವನಾತ್ಮಕ ಪರಿಸರಗಳೆಲ್ಲ ಅಲ್ಲಿ ಸುಳ್ಳಾಗಿ ಬಿದ್ದಿರುತ್ತವೆ. “ನೋಡಿ ಹೇಗಿದೆ ಈ ವಿಚಿತ್ರ ಪ್ರಪಂಚ! ಬ್ರಾಹ್ಮಣ ಪ್ರಪಂಚಕ್ಕೆ ಹೇಸಿದಿರಲ್ಲಾ! ಅದರಿಂದ ಒಂದು ಹಂತ ಕೆಳಗಿಳಿದರೆ ಲೇವಾದೇವಿಯ ಲೆಕ್ಕಾಚಾರದ ವೈಶ್ಯಪ್ರಪಂಚ. ಅಲ್ಲಿಂದ ಕೆಳಗಿಳಿದರೆ ಈ ಶೂದ್ರ ಪ್ರಪಂಚ. ಇನ್ನೂ ಕೆಳಗಿಳಿದರೆ ಪಿಶಾಚ, ನರಭಕ್ಷಕ ಪ್ರಪಂಚ. ನೋಡಿ ಹೇಗಿದೆ! ಮಗನ ಹೆಣಾನೇ ಒಡ್ಡಿ ಹಂದಿ ಹಿಡಿಯೋಕೆ ಹೊರಟಿದ್ದಾನೆ. ನೋಡಿ ಬೇಕಾದರೆ, ಈ ಮಳೆ ಹೀಗೇ ನಾಲ್ಕು ದಿನ ಹಿಡಿಯಲಿ ನಮ್ಮನ್ನೇ ತಿಂತಾನೆ ಇವನು.” (ಪು 124 ಅದೇ)ಎನ್ನುವ ಮೂಲಕ ಗೋಪಾಲಯ್ಯ ನಾವು ಭದ್ರವಾಗಿ ಕಟ್ಟಿಕೊಂಡಿರುವ ನಂಬಿಕೆಯ ಗುಳ್ಳೆಗಳು ಒಡೆಯುವಂತೆ ಮಾಡುತ್ತಾರೆ. ಭಯ, ಹಸಿವು, ನಿದ್ರೆ, ಮೈಥುನ ಈ ಎಲ್ಲ ಮೂಲ ಪ್ರವ್ರತ್ತಿಗಳಿಗೆ ಶಿಷ್ಟಾಚಾರದ ಮುಸುಕು ಹಾಕಿಕೊಂಡ ಮೂಲಮಾನವನ ದರ್ಶನವಾದಂತೆ ಗೋಪಾಲಯ್ಯ ನಡುಗುತ್ತಾನೆ. ಹಿಂದೆ ಅವನೊಮ್ಮೆ ರಹೀಮನೆಂಬ ಮುಸ್ಲಿಂ ಹೆಸರಿನಲ್ಲಿ ಬದುಕಿದ್ದಾಗ ನಡೆದ ಘಟನೆಯೂ ಹೀಗೇ ಭಯಾನಕವೇ. ಮಲೆಗೌಳಿಗರ ಹುಡುಗಿಯೊಬ್ಬಳನ್ನು ಮುಸ್ಲಿಂ ಹುಡುಗನೊಬ್ಬ ಅತ್ಯಾಚಾರ ಮಾಡಿದ್ದನೆಂಬ ವದಂತಿ ಹರಡಿ ದ್ವೇಷ ವಾತಾವರಣವುಂಟಾಗಿರುತ್ತದೆ. ಕೆಲವರು ಮುಸ್ಲಿಮರ ಮನೆಗಳಿಗೆಲ್ಲಾ ಬೆಂಕಿ ಹಚ್ಚುತ್ತಾರೆ. ಮುಸ್ಲಿಂ ಹೆಸರಿನ ಇವನನ್ನೂ ಪಾತಕಿಯೆಂದೇ ಭಾವಿಸಿ ಉದ್ರಿಕ್ತ ಗುಂಪು ಹೊಡೆಯತೊಡಗುತ್ತದೆ. ಆಗ ಗೋಪಾಲಯ್ಯ ತಾನು ಹಿಂದೂ ಎಂದು ಎಷ್ಟೇ ಚೀರಾಡಿದರೂ ಅವರು ಕೇಳುವುದಿಲ್ಲ. ಅವನ ಲಿಂಗವನ್ನು ಹಿಡಿದು ಪರೀಕ್ಷೆ ನಡೆಸುತ್ತಾರೆ. ನಗ್ನಗೊಳಿಸಿ ಅಮಾನುಷವಾಗಿ ಹೊಡೆದು ಬಿಟ್ಟುಹೋಗುತ್ತಾರೆ. ನಾಗರಿಕನೆನಿಸಿಕೊಂಡ ಮನುಷ್ಯನೊಳಗಿನ ಕ್ರೌರ್ಯದ ಕಾಣದ ಮುಖಗಳು ಗೋಪಾಲಯ್ಯನನ್ನು ಕಲಕಿರುತ್ತವೆ.
ಪತ್ತೇದಾರಿ ಕತೆಯಂತೆ ಬಿಚ್ಚಿಕೊಂಡ ಈ ಕತೆ ಮನುಷ್ಯಲೋಕದ ಅಸಂಖ್ಯ ನಿಗೂಢತೆಗಳನ್ನು ತೆರೆದಿಡುತ್ತಾ ಹೋಗುತ್ತದೆ. ಪ್ರಕೃತಿಯ ಕೊನೆಯಿಲ್ಲದ ಸೃಷ್ಟಿ-ಲಯಗಳ ಅತಾರ್ಕಿಕ ಲೀಲೆಯನ್ನು ದರ್ಶನ ಮಾಡಿಸುತ್ತದೆ. ಕತೆಯಲ್ಲಿ ಬರುವ ಪಾತ್ರಗಳೆಲ್ಲವೂ ಪೂರ್ತಿ ತಾವೇನೆಂಬುದನ್ನು ಬಿಚ್ಚಿಕೊಳ್ಳದ ಗಹನತೆಯಲ್ಲಿ ಉಳಿದುಬಿಡುತ್ತವೆ. ಕತೆಯಲ್ಲಿ ನೆರಳಿನಂತೆ ಬಂದು ಹೋಗುವ ಶಾರಿ ಎಂಬ ಮೂಕಪಾತ್ರವು ಕತೆಯ ಕೊನೆಯಲ್ಲಿ ಬಿಚ್ಚಿಕೊಳ್ಳುತ್ತದೆ. ತಂಬೂರಿಯಂತೆ ಕಂಪಿಸುವ ಭೂಮಿ ಹಾಗೂ ಬೆಟ್ಟಗಳ ಮೇಲಿನಿಂದ ಉರುಳುವ ಬಂಡೆಗಳಿಂದ ತಪ್ಪಿಸಿಕೊಂಡು ಹೊರಹೋಗಲು ರಂಗಪ್ಪಹಾಗೂ ಜಗನ್ನಾಥರು ಬಯಸಿದರೆ, ಗೋಪಾಲಯ್ಯ ಅಲ್ಲೇ ಕೊನೆಯಾಗಲು ಬಯಸುತ್ತಾನೆ. ‘ಒಡೆದ ಬದುಕುಗಳನ್ನು ಬದುಕಿ ಸಾಕಾಗಿದೆ. ವ್ಯಕ್ತಿತ್ವದ ವಿದಳನದಲ್ಲಿ ಯಾವುದೇ ಸ್ವಾರಸ್ಯವಿಲ್ಲ’ ಎನ್ನುವ ಆತ ತತ್ವಜ್ಞಾನಿಯಂತೆ ತೋರುತ್ತಾನೆ. ಕೊನೆಗೂ ಅಲ್ಲಿಂದ ಪಾರಾಗುವ ದಾರಿಯೊಂದು ಉಳಿದವರಿಗೆ ಕಾಣುವ ಮೂಲಕ ಕತೆ ಕೊನೆಯಾಗುತ್ತದೆ. ದಾರಿಗಳೆಲ್ಲ ಗುರಿಮುಟ್ಟಲೇಬೇಕು ಎಂಬ ನಂಬಿಕೆಯನ್ನು ಹುಸಿಮಾಡುವ ಪಶ್ಚಿಮ ಘಟ್ಟದ ಎಷ್ಟೋ ದಾರಿಗಳು ತಮ್ಮಲ್ಲೇ ಕೊನೆಯಾಗುವುದೂ ಉಂಟು!. ನಿಶ್ಚಿತ ತರ್ಕದಾಚೆಗೆ ಉಳಿದೇಬಿಡುವ ನಿಗೂಢಗಳನ್ನು ಕತೆ ತನ್ನೊಳಗೆ ಬಚ್ಚಿಟ್ಟುಕೊಂಡ ಅನಭವದ ಇದೇ ಬಗೆಯದು. ಪಯಣದಿಂದ ಆರಂಭವಾಗಿ ಪಯಣ ಮುಗಿಸದೇ ದಾರಿಯಂಚಿನಲ್ಲಿ ನಿಲ್ಲುವ ಕತೆ, ಮುಗಿಯದೇ ನಮ್ಮೊಳಗೆ ಕಂಪನವಾಗಿ ‘ತಂಬೂರಿಯಂತೆ ಜುಂಯ್ ಗುಡುತ್ತ’ ಉಳಿದುಬಿಡುತ್ತದೆ. ನಿಸ್ಸಂಶಯವಾಗಿ ‘ನಿಗೂಢ ಮನುಷ್ಯರು’ ತೇಜಸ್ವಿಯವರೊಳಗಿನ ಕಾಣ್ಕೆಗಳನ್ನು ತೆರೆದಿಟ್ಟ ಕತೆ.. ಮುಂದೆ ಅವರ ಕಥನ ಕ್ರಮವು ಭಿನ್ನ ಸ್ವರೂಪಗಳನ್ನು ತಳೆಯುತ್ತಾ ನಡೆದರೂ, ನಿಗೂಢತೆಯ ಕುರಿತ ಕುತೂಹಲ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಯಾಕೆಂದರೆ, ಅವರು ಉದ್ದೇಶ ರಹಿತವಾಗಿ ಹರಿಯುವ ಕಾಲಪ್ರವಾಹದಲ್ಲಿ ಕಣ್ಣು ಕೀಲಿಸಿ ಕುಳಿತವರು. ಆಗುತ್ತಲೇ ಇರುವ ನಿಗೂಢ ಜಗತ್ತಿಗೆ ಬೆರಗಾದವರು.

ಈ ಹಿಂದಿನ ಅಂಕಣ ಬರಹಗಳು:

ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ

ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...