ನಿನಗೇ ಬರೆದ ಪತ್ರ

Date: 22-11-2022

Location: ಬೆಂಗಳೂರು


”ಯಾವನೊ ಒಬ್ಬ ಸೆಲೆಬ್ರಿಟಿ, ಯಾವನೊ ಒಬ್ಬ ನಿನ್ನ ಮೇಲಧಿಕಾರಿ ನಿನಗೆ ಪ್ರತಿ ಮುಂಜಾನೆ ನಾಲ್ಕೈದು ಗುಡ್‌ ಮಾರ್ನಿಂಗ್‌ ಕಳಿಸ್ತಾನೆ ಅಂದರೆ, ಅದರ ಹಿಂದೆ ಪ್ರೀತಿ ಇದೆ ಅಂತ ತಿಳೀಬೇಡ. ಅದೆಲ್ಲ ಸ್ಕೀಮ್‌ ಅಂತ ಯಾಕೆ ನಿನಗೆ ತಿಳಿಯಲ್ಲ” ಎನ್ನುವುದನ್ನು ತಮ್ಮ ಅಂಕಣ ಬರಹದಲ್ಲಿ ಹೇಳುತ್ತಾರೆ ಲೇಖಕ ರಾಮಲಿಂಗಪ್ಪ ಟಿ ಬೇಗೂರು. ಅವರು ತಮ್ಮ `ನೀರು ನೆರಳು' ಅಂಕಣದಲ್ಲಿ ತಂದೆ ಮಗಳಿಗಾಗಿ ಬರೆದ ‘ನಿನಗೇ ಬರೆದ ಪತ್ರ’ವನ್ನು ಪ್ರಸ್ತುತಪಡಿಸಿದ್ದಾರೆ.

ಏನವ್ವಿ, ಎಲ್ಲಿದೀಯ?

ಹೇಗಿದೀಯ ಅಂತ ಕೇಳೋ ಅಗತ್ಯವಿಲ್ಲ. ಈ ಪತ್ರನ ಅನಗತ್ಯ ಲಂಬಿಸಲ್ಲ. ಸಮಾಧಾನವಾಗಿ ನಿಧಾನವಾಗಿ ಓದ್ಕೊ:

ನೀನು ನಿನ್ನ ಮನೋರಾಜಿಯಿಂದ ಏನಾದರು ಮಾಡಿದರೆ ಅದರ ಬಗ್ಗೆ ಕೊರಗದೆ ಅದರ ಪರಿಣಾಮಗಳನ್ನ ಎದುರಿಸೊ ದಾರಿ ಕಂಡುಕೊ. ನಿನಗೆ ಇಷ್ಟವಿಲ್ಲದ, ನಿನಗೆ ತೊಂದರೆ ಆಗೊ ಕೆಲಸ ಕಡಾಖಂಡಿತವಾಗಿ ಮಾಡಬೇಡ. ಯಾರಾದರು ಹಂಗೆ ಮಾಡೋಕೆ ಬಲವಂತ ಮಾಡಿದರೆ. ನಿರಾಕರಿಸು. ಅವರು ಮುನಿಸಿಕೊಂಡಾರು, ಏನಾದರೂ ಅಂದುಕೊಂಡಾರು ಅಂತ ಸಹಿಸಿ ಏನೂ ಮಾಡಬೇಡ. ಏನೂ ಕೇಳಬೇಡ. ನೀನು ಏನೆ ಮಾಡಿದರು ಅದು ನಿನಗೆ ಸರಿ ಅನ್ನಿಸಬೇಕು. ಅದರಿಂದ ನಿನಗೂ ಇನ್ನೊಬ್ಬರಿಗೂ ಉಪದ್ರ ಆಗಬಾರದು. ನಿನ್ನ ಇಷ್ಟದ ಬಾಳು ಬಾಳೋಕೆ ಬಿಡದೆ ಅದಕ್ಕೆ ಯಾರಾದರು ಅಡ್ಡಿ ಮಾಡಿದರೆ ಸಕಾರಣದಿಂದ ಅಂಥವರನ್ನು ದೂರ ಇಡು. ನನ್ನನ್ನೂ ಕೂಡ.

ಯಾವುದೆ ಕಾರಣಕ್ಕು ನೀನು ತಪ್ಪು ಮಾಡಿಲ್ಲದೆ ಇದ್ದರೆ ಒಪ್ಪಿಕೊಳ್ಳಬೇಡ. ಪ್ರೀತಿಪಾತ್ರರ ಬಳಿ ನಾಟಕ ಆಡೋದು; ಸುಳ್ಳು ಹೇಳೋದು; ಹೈಡ್ ಮಾಡೋದು ಇವೆಲ್ಲ ಅಗತ್ಯ ಇಲ್ಲ. ಅವೆಲ್ಲ ಮ್ಯಾನೇಜ್ ಮಾಡಕ್ಕೆ ಸಮಯ ಸೋರಿಹೋಗಿ, ಆಯಾಸ ಆಗಿ ದಾರಿ ತಪ್ತಿ. ಅನಗತ್ಯ ಒತ್ತಡ ಕ್ರಿಯೇಟ್ ಆಗುತ್ತೆ. ದುಡಿಮೆಗಾಗಿ, ಜ್ಞಾನಕ್ಕಾಗಿ ತೊಡಗಿಸಿಕೊಳ್ಳುವ ಮನಸ್ಥಿತಿ ಹಾಳಾಗುತ್ತೆ. ಪ್ರೀತಿಯೂ ನಾಶವಾಗಿ ಅಪನಂಬಿಕೆ ಹುಟ್ಟುತ್ತೆ. ನೆಮ್ಮದಿಯೂ ನಾಶವಾಗುತ್ತೆ. ನಿರಾಸೆ, ನೆಗೆಟಿವ್ ಥಿಂಕಿಂಗ್ ಬೆಳೆಯುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸಿನ ದೃಢತೆ, ಸ್ವಾಭಿಮಾನ, ಕಾನ್ಫಿಡೆನ್ಸ್‌ ಕೆಡುತ್ತೆ. ಸಂಬಂಧಗಳ್ನ ಸುಮ್ಮನೆ ಮ್ಯಾನೇಜ್ ಮಾಡೋದು ಬೇಡ. ಹೊರೆ ಅನ್ನಿಸೊ ಹತ್ತಾರು ಸ್ನೇಹ ಸಂಬಂಧಗಳಿಗಿಂತ ಖರೆ ಅನ್ನಿಸೊ ಒಂದೆರಡೆ ಸ್ನೇಹ ಸಂಬಂಧಗಳು ಸಾಕು.

ನೀನು ಅವನನ್ನು ಪ್ರೀತಿಸುತ್ತಿದ್ದೀಯಾ? ನಿಜ ಹೇಳು. ಪ್ರೀತಿಸುವುದೆ ನಿಜವಾದರೆ; ನೇರ ಸರಳ ಇರು. ನಿನ್ನ ಅನಿವಾರ್ಯತೆಗಳನ್ನು ಮುಚ್ಚಿಡದೆ ಹೇಳಿಕೊ. ಬೈದರೆ ಬೈಸಿಕೊ. ಅದಕ್ಕೆ ಹುಸಿ ಅಭಿಮಾನ - ಈಗೊ ಅಡ್ಡ ಬರಬಾರದು. ಹಾಗೊಂದು ವೇಳೆ ಅನಗತ್ಯ ಈಗೋ ಇದ್ದರೆ ಅದನ್ನ ಕಳಚಿ ಹಾಕು. ಈಗೋ ಇರುವ ಕಡೆ ಪ್ರೀತಿ ಇರಲ್ಲ. ನಾನು ದೊಡ್ಡವಳು, ನಾನು ಬುದ್ಧಿವಂತೆ, ಸುಂದರಿ, ನನ್ನ ಕುಟುಂಬ ಅಂಥದ್ದು, ನನ್ನ ಜಾತಿ ಇಂಥದ್ದು, ನನ್ನ ಆದಾಯ ಇಂತಿಷ್ಟು ಈ ಎಲ್ಲ ನಾನು ನನ್ನ ಅಂಬೋವು ಇರೊ ಕಡೆ ಪ್ರೀತಿ ಇರಲಾರದು. ಅಂದರೆ ಅಹಂಕಾರ ಇರೊ ಕಡೆ ಪ್ರೀತಿ ಇರಲಾರದು. ಸ್ವಾಭಿಮಾನ ಇರಬೇಕು; ಆದೆ ಅತಿ ಆಗಬಾರದು. ಸ್ವಾಭಿಮಾನ ಮತ್ತ ಅಹಂಕಾರಗಳ ನಡುನ್‍ ಗೆರೆ ಬಹಳ ತೆಳುವಾದ್ದು.

ನೀನು ಯಾರನ್ನು ಪ್ರೀತಿ ಮಾಡುತ್ತೀಯೊ ಅವರ ಜೊತೆ ಪ್ರಾಮಾಣಿಕವಾಗಿ ಇರು. ನಿಷ್ಠೆಯಿಂದ ಇರಲು ಪ್ರಯತ್ನಿಸು. ನಿಷ್ಠೆಯಿಂದ ಇರುವುದಕ್ಕೆ ಆಗುವುದಿಲ್ಲ ಅಂದರೆ ಕನಿಷ್ಟ ಪ್ರಾಮಾಣಿಕವಾಗಿ ಇರು. ಅದರಿಂದ ಸಂಬಂಧಕ್ಕೆ ಧಕ್ಕೆ ಆದರು ನಾಟಕದ ಸಂಬಂಧ ಮಾಡುವ ಅಗತ್ಯ ಇಲ್ಲ. ಹಾಗೊಂದು ವೇಳೆ ನಿಷ್ಟೆ, ಪ್ರಾಮಾಣಿಕತೆ, ನಿಜಾಯಿತಿ ಇಲ್ಲಾಂದ್ರೆ ಅದು ಪ್ರೀತೀನೆ ಅಲ್ಲ.

ನಿಷ್ಠೆ ಅಂದರೆ ಲೈಂಗಿಕ ನಿಷ್ಠೆ ಮಾತ್ರ ಅಲ್ಲ. ಓಪನ್ ಮೈಂಡೆಡ್‍ನೆಸ್, ಸಂಪೂರ್ಣ ತೆರೆದ, ಯಾವ ಮುಚ್ಚುಮರೆಯು ಇಲ್ಲದ ಸಂಪೂರ್ಣ ಕೊಟ್ಟುಕೊಳ್ಳುವಿಕೆ. ಸರಂಡರ್ಡ್ ಸ್ಥಿತಿ. ಎರಡಲ್ಲದ ಒಂದುತನ. ನನ್ನದು ಬೇರೆ ನಿನ್ನದು ಬೇರೆ ಎಂಬ ಭೇದವಿಲ್ಲದ, ಖಾಸಗಿತನವಿಲ್ಲದ ಎರಡಳಿದ ಒಂದುತನ. ಪ್ರೈವಸಿ ಇದ್ದಲ್ಲಿ ಪ್ರೀತಿ ಇರಲ್ಲ. ಅದು ನಮ್ಮ ಸ್ವಂತಿಕೆಯ ನಾಶ ಅಂತ ಯಾರಿಗಾದರು ಅನ್ನಿಸಿದರೆ ಅದು ಆಧುನಿಕ ಜೀವನದ ಭ್ರಮೆ. ಈಗ ಇವನು, ಇವನು ಇಲ್ಲದಾಗ ಅವನು ಅಂದರೆ ಅದು ವ್ಯಭಿಚಾರ. ಈ ವ್ಯಭಿಚಾರ ದೇಹಕ್ಕೆ ಮಾತ್ರವಲ್ಲ ಮನಸ್ಸಿಗು ಸಂಬಂಧಿಸಿದ್ದು. ಒಟ್ಟಿಗೆ ಹಲವು ಲೈಂಗಿಕ ಸಂಬಂಧಗಳನ್ನು ಇಟ್ಟುಕೊಳ್ಳಲು ಸಾಧ್ಯ ಅನ್ನುವ ನಾಗರೀಕತೆ ಇನ್ನೂ ನಮ್ಮಲ್ಲಿ ಬಂದಿಲ್ಲ.

ನೀವು ಪರಸ್ಪರ ಭೇಟಿ ಮಾಡಿದಾಗ, ಇಬ್ಬರೂ ಅಪ್ಪಿಕೊಂಡಾಗ ಏನೋ ಸಾಲದು ಅನ್ನಿಸಿ ಇನ್ನೂ ಬೆಸಕೊಳ್ಳಬೇಕು, ಒಳಗೆ ಸೇರಿಹೋಗಬೇಕು ಅನ್ನಿಸೋದಾದರೆ; ಅದು ನಿಜವಾದ ಪ್ರೀತಿ. ಆದರೆ ದೈಹಿಕವಾಗಿ ದೂರ ಇರುವಾಗ ಹೆದರಿಕೆ, ಮಾನಸಿಕ ದೂರ, ಹೈಡಿಂಗ್, ಸುಳ್ಳು ಬರಬಾರದು. ಹಾಗೊಂದು ವೇಳೆ ಬಂದರೆ ಆ ಪ್ರೀತಿ ನಿಜವಲ್ಲ. ಅವನಿಗೆ ಗೊತ್ತಾದರೆ ಮಾತ್ರ ತಪ್ಪು, ಗೊತ್ತಾಗದೆ ಏನಾದರು ಮಾಡಿದರೆ ಅದು ತಪ್ಪಲ್ಲ. ಅಂದರೆ ತಪ್ಪು ಮಾಡುವುದು ತಪ್ಪಲ್ಲ; ಮಾಡಿ ಸಿಕ್ಕಿಹಾಕಿಕೊಳ್ಳುವುದು ತಪ್ಪು ಎಂಬ ಭಾವನೆ ನಿನ್ನಲ್ಲಿ ಇದ್ದರೆ; ನಿನ್ನಂತಹ ನಾಟಕಕಾರ್ತಿ; ಪ್ರೇಮದ್ರೋಹಿ ಇನ್ನೊಬ್ಬಳಿರಲು ಸಾಧ್ಯವಿಲ್ಲ. ನೀನು ಪಕ್ಕಾ ಡಿಮಾರಲೈಸ್‌ ಆಗಿದ್ದಿ ಅಂತ.

ನಮ್ಮ ಅರಿವಿಗೆ ಬರದೆ ಏನಾದರೂ ತಪ್ಪು ಘಟಿಸುವುದಕ್ಕೆ ಕ್ಷಮೆ ಉಂಟು. ನಮ್ಮ ಇಚ್ಛೆಗೆ ವಿರುದ್ದ ಬಲಾತ್ಕಾರ ಆದಾಗಲು ಅದು ನಮ್ಮ ತಪ್ಪಲ್ಲ. ಅದರಾಚೆಗು ಜೀವನ ಇರುತ್ತದೆ. ಅದನ್ನ ರೂಪಿಸಿಕೊಳ್ಳಬೇಕು. ಗೊತ್ತಿದ್ದೂ ಗೊತ್ತಿದ್ದೂ ನನಗೆ ಬೇಕಾದ್ದು ನಾ ಮಾಡುವವಳು ಅಂತ ಲೈಂಗಿಕ ಸ್ವೇಚ್ಛೆ ತೆಗೆದುಕೊಂಡರೆ ಅದೆ ನಿನ್ನ ನಾಶದ ಆರಂಭ. ಅವನೂ ನಿನ್ನ ಹಾಗೆಯೆ ಕಣ್ಣಾಮುಚ್ಚಾಲೆ ಆಡಿದರೆ ಆಗ ನೀನೇನು ಮಾಡುತ್ತಿ. ದೇಹಸಂಗಾತಿಗಳನ್ನು ಹಾಗೆ ಬಟ್ಟೆಯ ಹಾಗೆ ಆಗಾಗ ಬದಲಿಸಲು ಆಗುವುದಿಲ್ಲ. ಅದು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದೂ ಅಲ್ಲ. ದೇಹ ಅಂದರೆ ಬರಿಯ ದೇಹವಲ್ಲ ಅದು ಅಡಿಯಿಂದ ಮುಡಿವರೆಗಿನ ಮನಸ್ಸು.

ದೈಹಿಕವಾಗಿ ದೂರ ದೂರ ಇರುವಾಗ ಮಾನಸಿಕವಾಗಿಯು ನನ್ನ ಲೋಕ ಬೇರೆ ನಿನ್ನ ಲೋಕ ಬೇರೆ ಅಂತ ಇರಬಹುದಾ?

ಅವನಿಗೆ ಬೇಸರ ಆಗ್ತದೆ ಅಂತ ನೀನೂ ನಿನಗೆ ಬೇಸರ ಆಗ್ತದೆ ಅಂತ ಅವನೂ ಪರಸ್ಪರ ಪರ್ಸನಲ್ ಥಿಂಗ್ಸ್ ಹೈಡ್ ಮಾಡ್ತಾ ಹೋದರೆ ಇಬ್ಬಂದಿತನದ ಮ್ಯಾನೇಜ್ಮೆಂಟ್‌ಲಿ ವ್ಯಕ್ತಿತ್ವ ಹರಿದುಹೋಗಲ್ಲವೆ? ಏನನ್ನೂ ಹೆಚ್ಚು ಕಾಲ ಹೈಡ್ ಮಾಡೋಕೆ ಆಗಲ್ಲ. ಒಂದಲ್ಲ ಒಂದು ದಿನ ಎಲ್ಲವು ಬತ್ತಲಾಗೇ ಆಗುವುದು. ಆಗ ಆಗುವ ಮಾನಸಿಕ ಆಘಾತ ತಡಕೊಳ್ಳಲು ಆಗುವುದಿಲ್ಲ. ಇವಳು ಮೊದಲಿಂದಲು ಹೀಗೇ ಇದ್ದಳಾ? ಎಲ್ಲ ನಾಟಕ ಮಾಡುತ್ತಿದ್ದಳಾ ಅನ್ನಿಸಿದರೆ ಚರಿತ್ರೆಗೆಲ್ಲ ಹೊಸ ಅರ್ಥ ಬಂದುಬಿಡುತ್ತದೆ. ಹಳೆಯದೆಲ್ಲ ಬೇರೆಯದೇ ಆಗಿ ಕಾಣಲು ತೊಡಗುತ್ತದೆ. ಸಂಬಂಧ ಒಡೆದುಹೋಗುತ್ತದೆ. ಈಗ ನೀನು ಮಾಡುತ್ತಿರುವ ಪ್ರೀತಿ ಒಡೆದರೆ?! ನಿಮಗೆ ಈ ಬ್ರೇಕಪ್‌ ಅನ್ನುವುದು ಸಾಮಾನ್ಯ ಸಂಗತಿ ಆಗಿಬಿಟ್ಟಿದೆ!

ನಾವು ಮಾಡುವುದು ಏನೆ ಆಗಿರಲಿ ಅದರ ಬಗ್ಗೆ ನಮಗೆ ಖಚಿತವಾದ ನಿರ್ಣಯ, ನಿಲುವು, ಇರಬೇಕು. ಯಾರದೆ ಸ್ನೇಹ ಕೇವಲ ವ್ಯವಹಾರಿಕ ಅಲ್ಲ. ಅವನ್ಯಾರೊ ನಿನ್ನ ಕರೆದರೆ ಹೋಗಬೇಕ ಬೇಡವಾ ಅಂತ ನೀನೆ ನಿರ್ಧರಿಸು. ನೀನಾಗೆ ಯಾರನ್ನಾದರು ಕರಕೊಂಡರೆ ಸ್ನೇಹ, ನಾಟಕ, ಪ್ರೀತಿ, ಕಾಮಗಳ ವ್ಯತ್ಯಾಸ ನಿನಗೆ ತಿಳಿದಿರಬೇಕು. ಗುಡ್‌ ಟಚ್‌, ಬ್ಯಾಡ್‌ ಟಚ್‌, ಗುಡ್‌ ಲುಕ್‌, ಬ್ಯಾಡ್‌ ಸ್ಟೇರಿಂಗ್‌ ನಿನಗೆ ತಿಳಿದಿರಬೇಕು. ನಿನಗೆ ಸ್ನೇಹ ಅಮೂಲ್ಯ ಅನ್ನಿಸಿದರೆ ಬೆಳೆಸು. ಆದರೆ ಸ್ನೇಹವೆ ನಿನ್ನ ಶೋಷಣೆಯಾ? ನಿನ್ನ ಸಮಯವನ್ನು ಬೇರೆಡೆ ತೊಡಗಿಸುವ ಅನಿವಾರ್ಯ ಇದ್ದಾಗ ನೀನು ಸ್ನೇಹಿತರ ಅಗತ್ಯಕ್ಕೆ ಸಮಯ ನೀಡುವುದು ಸರಿಯಾ? ಯೋಚಿಸು. ಪ್ರಾಣ ಹೋಗುವಷ್ಟು ಸಮಯದ ಅಭಾವ ಇರುವಾಗ ಜಾತ್ರೆಗೆ ಹೋಗುವುದು ತರವೆ? ಒಬ್ಬರ ಮನೆಗೆ ಇಂದು ಜಾತ್ರೆಗೆ ಹೋದರೆ ನಾಳೆ ಸ್ವತಃ ನಾವೂ ಜಾತ್ರೆ ಮಾಡಬೇಕಾಗುತ್ತೆ. ಐದೊ ಹತ್ತೊ ಮಂದಿ ಸ್ನೇಹಿತರು ಇದ್ದರೆ ಐದೊ ಹತ್ತೊ ಜಾತ್ರೆಗೆ ಹೋಗಬೇಕು. ಆಗ ನಿನ್ನ ಸಾಧನೆ ಕತೆ?

ಮದುವೆಯಾದ ನಡುವಯಸ್ಸಿನ ಹಿರಿವಯಸ್ಸಿನ ಗಂಡಸರು ನಿನ್ನ ಕಂಡಾಗ ಅತಿಯಾಗಿ ಪ್ರೀತಿ, ಕಾಳಜಿ ತೋರಿಸುತ್ತಾರಾ? ನಿನಗೆ ಅಪಾಯ ಒದಗಿದಾಗ, ಅನನುಕೂಲ ಒದಗಿದಾಗ ಸಹಾಯಕ್ಕೆ ಧಾವಿಸುತ್ತಾರಾ? ಸುಮ್ಮನೆ ಅನಗತ್ಯ ಹೊಗಳುತ್ತಾರಾ? ತಾವಾಗೆ ಮೇಲೆ ಬಿದ್ದು ಹಣ ಕೊಡಲು ಬರುತ್ತಾರಾ? ಅವರನ್ನು ಶಂಕೆಯಿಂದ ನೋಡು. ಅಂಥವರು ಪ್ರೀತಿ, ಕಾಮ, ಕಾಳಜಿಗಳ ನಡುವೆ ವ್ಯತ್ಯಾಸ ಅಳಿಸಿಹಾಕುತ್ತಾರೆ. ಸರಿ ತಪ್ಪುಗಳ ನಡುವೆ ವ್ಯತ್ಯಾಸ ಅಳಿಸಿಹಾಕುತ್ತಾರೆ. ನಿನ್ನನ್ನು ಡಿಮಾರಲೈಸ್ ಮಾಡುತ್ತಾರೆ. ನಡುವಯಸ್ಕ, ಹಿರಿ ಅನುಭವಿ ಕಾಮಿಗಳ ಜೊತೆ ಹರೆಯದ ಹುಡುಗಿ ಸಂಕಷ್ಟ, ಸಂತೋಷಗಳ ನಡುವಿನ ವ್ಯತ್ಯಾಸವನ್ನು ನೀತಿ ಅನೀತಿಗಳ ನಡುವಿನ ವ್ಯತ್ಯಾಸಗಳನ್ನು ಕಳೆದುಕೊಳ್ಳುತ್ತಾಳೆ. ಹರೆಯದ ಹುಡುಗರು ಹೀಗೆ ಮಾಡುವುದಿಲ್ಲ ಅಂತಲ್ಲ, ಆದರೆ ಅಂಥ ಸಾಹಸ ಮಾಡುವ ಮದುವೆ ಆಗದ ಹುಡುಗರ ಸಂಖ್ಯೆ ಕಮ್ಮಿ. ನಿನ್ನ ಹುಡುಗರಲ್ಲಿ ಗೊತ್ತಲ್ಲ; ನಾಣಿ, ಮಂಜ, ರುದ್ರ, ವಿವೇ, ಗುಂಡ, ಅವಿ, ಇಂಥವರೂ ಇರುತ್ತಾರೆ. ನಾಗ, ಗೋಣಿ, ಶಂಗಿ, ಗುರಗ ಇಂಥವರೂ ಇರುತ್ತಾರೆ. ಇನ್ನು ಮೂರನೆ ಥರ ಶಾಮದೇವನಂಥವರೂ ಇರುತ್ತಾರೆ. ಯಾರ ಜೊತೆ ಹೇಗಿರುತ್ತಿ ಎಂಬುದರ ಮೇಲೆ ನಿನ್ನನ್ನು ಅವರು ನಡೆಸಿಕೊಳ್ಳುತ್ತಾರೆ. ಎಲ್ಲ ಸಮಯಗಳಲ್ಲು ನಿನ್ನದೆ ವಿವೇಚನೆ ನಿನ್ನಲ್ಲಿ ಇರಬೇಕು.

ಯಾವನೊ ಒಬ್ಬ ಸೆಲೆಬ್ರಿಟಿ, ಯಾವನೊ ಒಬ್ಬ ನಿನ್ನ ಮೇಲಧಿಕಾರಿ ನಿನಗೆ ಪ್ರತಿ ಮುಂಜಾನೆ ನಾಲ್ಕೈದು ಗುಡ್‌ ಮಾರ್ನಿಂಗ್‌ ಕಳಿಸ್ತಾನೆ ಅಂದರೆ, ಅದರ ಹಿಂದೆ ಪ್ರೀತಿ ಇದೆ ಅಂತ ತಿಳೀಬೇಡ. ಅದೆಲ್ಲ ಸ್ಕೀಮ್‌ ಅಂತ ಯಾಕೆ ನಿನಗೆ ತಿಳಿಯಲ್ಲ. ಆ ವಿಜಿ ನಡುವಯಸ್ಕ, ಆ ಕುಮರಜ್ಜ ಮುದುಕ ಇಂಥವರ ಜೊತೆ ನೀನು ಏಕಾಂತವಾಗಿ ಇರುತ್ತಿ, ಬಹಿರಂಗವಾಗಿ ತಬ್ಬಿಕೋತಿ, ಮುತ್ತಿಡ್ತಿ, ಮನೆಗೆ ಒಬ್ಬೊಂಟಿ ಬಿಟ್ಟುಕೋತಿ ಅಂದರೆ ನೀನೇನು ಓದೋಕೆ ಹೋಗಿದೀಯೊ ವೆರೈಟಿ ಸಂಬಂಧಗಳನ್ನ ಅನುಭವಿಸೋಕೆ ಹೋಗಿದೀಯೊ! ಯಾವನೊ ಒಬ್ಬ ನಿನಗೆ ಧಾರಾಳ ಸಾಲ ಕೊಡೋಕೆ ತಯಾರಿದಾನೆ, ಧಾರಾಳ ದುಡ್ಡು ಖರ್ಚು ಮಾಡೋಕೆ ತಯಾರಿದಾನೆ, ನಿನಗೆ ಯಾವಾಗ ಕಷ್ಟ ಆಗುತ್ತೆ ಹೇಳು ನಾನು ನಿನ್ನ ಜೊತೆ ಇರ್ತೀನಿ ಅಂತ ಭರವಸೆ ಕೊಡ್ತಾನೆ, ಜಾತಿ ಕಾರ್ಡ್‌ ಬಳಸ್ತಾನೆ, ಲಿಂಗನ್ಯಾಯದ ಕಾರ್ಡ್‌ ಬಳಸ್ತಾನೆ ಅಂದರೆ ನಿನಗೆ ಅವರೆಲ್ಲ ಒಳ್ಳೆಯವರ ಥರ ಕಾಣ್ತಾರಾ? ಈ ದೊಡ್‌ ಸಂಬಳದ ಜನ ತಮ್ಮ ಸುಖಕ್ಕೆ ಬಡವನ ಮಗಳನ್ನ ಬಳಸ್ತಾರೆ ಅನ್ನೋದು ನಿನಗೆ ಗೊತ್ತಾಗಲ್ವಾ? ಪ್ರೀತಿ, ಕಾಳಜಿ, ಕಾಮಗಳ ನಡುವಣ ವ್ಯತ್ಯಾಸ ನಿನಗೆ ಗೊತ್ತಾಗಲ್ವಾ? ಕಾಳಜಿಯ ದಾರಿಯಲ್ಲಿ ಬಂದರೂ ಅಲ್ಲಿಗೇ ಬರುತ್ತಾರೆ; ಲವ್‌ ನಾಟಕದ ದಾರಿಯಲ್ಲಿ ಬಂದರೂ ಅಲ್ಲಿಗೇ ಬರುತ್ತಾರೆ; ಹೆಣ್ಣು ಎಂದರೆ ಇವರಿಗೆ ಒಂದು ಜೋಡಿ ಸ್ತನ, ಮುಂದೆ ಯೋನಿ ಹಿಂದೆ ಪಿರ್ರೆ ಅಷ್ಟೆ. ಇಡೀ ಜೀವನ ಜೊತೆಗಿರ್ತೀರಾ ಅಂದರೆ ಗುಟ್ಟಾಗಿ ಜೊತೇಲಿರೋಣ ಅಂತಾರೆ! ಎಷ್ಟು ಸಂಬಂಧ ಬೇಕವ್ವಿ ನಿನಗೆ? ನನ್‌ ದೇಹ ನನ್‌ ಹಕ್ಕು ಅಂದರೆ ಇದೇನಾ?

ನಿನ್ನ ಪ್ರಯಾರಿಟಿ ಯಾವುದು? ಆಯ್ಕೆ ಮತ್ತು ಸಮಯದ ಹೊಂದಾಣಿಕೆ ನಮ್ಮದೆ ಜವಾಬ್ದಾರಿ. ಅಲ್ಲಿಗೆ ಹೋಗಲ್ಲ ಅಂದವಳು ಹೋದೆ. ಕರೆದರು, ಹೋದೆ. ಕರೆದರೆ, ಬಲವಂತ ಮಾಡಿದರೆ ಅವರು ಬೇಜಾರಾಗ್ತಾರೆ ಅಂತ ಹೋಗಬೇಕಾ? ವಾಟ್ ಈಸ್ ದಿಸ್ ನಾನ್ಸೆನ್ಸ್? ನಿನ್ನ ಸಮಯ ಏನಕ್ಕೆ ಬಳಸ್ತಿ?

೧೦-೦೦ ಗಂಟೆಯಿಂದ -೦೦ ನಡುವೆ ನನಗೆ ಒಂದು ಮೆಸೇಜ್ ಹಾಕೋಕು ಬಿಡುವು ಆಗಲಿಲ್ಲವಾ? ಮನಸಾಗಲಿಲ್ಲವಾ? ಅಥವಾ ಮೊಬೈಲ್ ನೋಡೋಕೆ ಆಗದೆ ಇರುವ ಯಾವುದೊ ಕಾರ್ಯ ಇದ್ದು ನಾನು ಬೈತೀನಿ ಅಂತ ಅದನ್ನ ಹೈಡ್ ಮಾಡ್ತಿದೀಯಾ? ಯಾವುದು ನಿಜ?

ಇದನ್ನು ಹೇಳಿದರೆ ನಾನು ಬೈತೀನಿ ಅಂತ ನೀನು ಎಷ್ಟು ಲೀಲಾಜಾಲವಾಗಿ ಸುಳ್ಳು ಹೇಳ್ತಿ!!! ಹೈಡ್ ಮಾಡ್ತಿ!!!
ನಾರ, ವಿಶು, ಪಾಟಿ, ಕೃತಿ, ಚಾಂದಿ ನಿನ್‌ ಸುತ್ತ ಇದ್ದ ಸಂಬಂಧಿಕರಿಗೆ ಮಾಡುವ ಪ್ರಯೋಗ ನನಗು ಮಾಡ್ತೀಯ!!! ಸಂಬಂಧಗಳಲ್ಲಿ ವ್ಯತ್ಯಾಸ ಇರಬೇಕು ಮಗ. ಅಡಿಗೆ ಮನೆ, ದೇವರ ಕೋಣೆ, ವಾಶ್‌ ರೂಮ್‌ ಎಲ್ಲ ಬೇರೆ ಬೇರೆ ಕಣೊ. ನಾನು ಕಲಿಸಿದ ತಂತ್ರ ನನ್ನ ವಿರುದ್ಧವೆ ಪ್ರಯೋಗನಾ!!! ಆ ನಾರ, ವಿವೆ, ಮಂಟ, ಗುಂ ಎಷ್ಟು ಬಟ್ಟೆ ಬದಲಾಯಿಸ್ತಿ!? ಹಾಗಾದರೆ ಈಗ ಪ್ರೀತಿ ಮಾಡ್ತಾ ಇರೋನನ್ನ ಏನ್‌ ಮಾಡ್ತಿ?

ಕೆಲವರು ಫೋನ್ ಮಾಡಿದರೆ ನನ್ನ ಎದುರು ಅವರೊಟ್ಟಿಗೆ ನೀ ಮಾತಾಡಲ್ಲ. ಒಂದು ವೇಳೆ ಮಾತಾಡಿದರು ಇತ್ತಿಂದ ನಿನ್ನ ದನಿ ಕೇಳಿದ ಕೂಡಲೆ ಅವರು ಅತ್ತ ಅಲರ್ಟ್ ಆಗ್ತಾರೆ. ಸಹಜವಾಗಿ ನಿನ್ನ ನಿಜ ಸಂಬಂಧದಲ್ಲಿ ಮಾತಾಡಲ್ಲ. ನೀನು ಯಾರೊ ನಿನ್ನ ಸಂಬಂಧಿಗಳ ಹತ್ತಿರ ಇದ್ದಿ ಅಂತ ನಿನ್ನ ಅಸಹಜ ದನಿ ಕೇಳಿದ ಕೂಡಲೆ ಅವರಿಗೆ ಗೊತ್ತಾಗಿ ಬಿಡ್ತದೆ. ನೀನು ಬಹುವಚನ ಬಳಸಿದ ಕೂಡಲೆ ಅವರೂ ಬಹುವಚನ ಬಳಸ್ತಾರೆ. ನೀನು ಶಿಷ್ಟಾಚಾರ ತೋರಿದ ಕೂಡಲೆ ಅವರೂ ಶಿಷ್ಟಾಚಾರ ತೋರ್ತಾರೆ. ಅಷ್ಟೆ ಯಾಕೆ. ನನ್ನ ಜೊತೆ ಮಾತಾಡುವಾಗಲು ಎಷ್ಟೊ ಸಲ ನೀನು ನನ್ನ ಸರ್ ಅಂತ ಅಂದಾಗ ನಾನೂ ನಿನ್ನ ಮೇಡಮ್ ಅಂದಿದೀನಲ್ಲ! ಹೊರಗಿನ ಜಗತ್ತಿನಲ್ಲು ಇದೆಲ್ಲ ಬೇಕಾ? ತಂದೆ ಹತ್ತಿರನು ಡ್ರಾಮಾನಾ? ಕಳ್ಳಕಳ್ಳರು ಸಂತೆಗೆ ಹೋದ ಹಾಗೆ ನಿಮ್ಮ ನಿಮ್ಮಲ್ಲೆ ಒಳೊಪ್ಪಂದ ಇದ್ದಾಗ ನಿಮ್ಮನ್ನು ಪುರಾವೆ ಸಮೇತ ಹಿಡಿಯಲು ಆಗ್ತದಾ?

ನಾನು ಎಷ್ಟು ತೆರೆದಂತೆ ಇದ್ದರೂ, ಇದೆಲ್ಲ ಮಾಡಬೇಡ ಮಗಾ ಅಂತ ಎಷ್ಟೆ ಹೇಳಿದರೂ ನೀನು ಅಲ್ಲಿ ಹೋದ ಕೂಡಲೆ ಚೇಂಜ್!!! ಪ್ರೈವಸಿ ಅಂದರೆ ಏನು? ನಿನಗೆ ಬೇಕಾದ್ದನ್ನ ಕದ್ದು ಮಾಡೋಕೆ ಅವಕಾಶ ಅಂತನಾ? ಬದುಕೊಂದು ತೆರೆದ ಪುಸ್ತಕದ ಥರ ಇರಬೇಕು ಮಗ. ಖಾಸಗಿ, ಸಾರ್ವಜನಿಕ ಅಂತ ಭೇದ ಇರಬಾರದು. ಸ್ವಾತಂತ್ರ್ಯ ಅಂದರೆ ಸ್ವೇಚ್ಛೆ ಅಲ್ಲ. ಸ್ವ ಇಚ್ಛೆ. ಅಂದರೆ ನಮ್ಮ ನಿರ್ಣಯ, ಹೆಜ್ಜೆಗಳಿಗೆಲ್ಲ ನಾವೆ ಹೊಣೆ ಆಗುವ ಹೆಚ್ಚಿನ ಜವಾಬ್ದಾರಿಯ ಅವಕಾಶ. ಸ್ವಂತಿಕೆಯನ್ನು ಕಟ್ಟಿಕೊಳ್ಳುವ ಅವಕಾಶ. ಅಪಾಯಗಳನ್ನು ಎದುರಿಸುವ ಸವಾಲು.

ನನಗೆ ಗೊತ್ತಿರೋದು ಇಷ್ಟು. ನನಗೆ ಗೊತ್ತಿಲ್ಲದೆ ಇರೋದು ಇನ್‌ ಎಷ್ಟೊ. ನನಗೆ ಗೊತ್ತಿರೊ ಒಂದೆಳೆ ಹಿಡಿದು ನಾ ಏನೊ ಇಷ್ಟು ಹೇಳ್ತಾ ಇದೀನಿ. ಪ್ರತಿಯೊಬ್ಬರಿಗು ಅವರವರದೆ ಆತ್ಮಸಾಕ್ಷಿ ಅಂತ ಇರ್ತದೆ. ನಿನಗು ಇರುತ್ತೆ. ಅದನ್ನ ಕೇಳಿಕೊ. ಅದೆ ನಿನಗೆ ಗೈಡ್ ಮಾಡಬಹುದು.

ಎಂದೂ ಇಲ್ಲದೆ ಇವತ್ತು ಇಷ್ಟೊಂದು ಮಾತು ಆಡ್ತಾನಲ್ಲ ಅಂತ ನಿನಗೆ ಅನ್ನಿಸಬಹುದು. ಕೆರೆ ಕೋಡಿ ಆಗೋದು ತುಂಬಿದ ಮೇಲೆನೆ. ಕೊನೆ ಹನಿ ಹನಿಯೆ ಹೌದು. ಒಂದೆ ಹನಿ ಹೌದು. ಅದರ ಹಿಂದೆ ದೊಡ್ ಕೆರೆನೆ ಇರುತ್ತಲ್ಲ. ಅದೆಲ್ಲ ಸೇರಿ ಕೊನೆ ಹನಿಗೆಬೆಲೆ. ಒಡಲು ತುಂಬಿದ ಮೇಲೆ ಒಂದೊಂದು ಹನಿಯೂ ಅಗಾಧ. ಹಳೆ ಹನಿಹನಿ ಸೇರಿ ಸೇರಿ ಆಮೇಲಾಮೇಲೆ ಸಣ್ಣದಕ್ಕು ಬೆಲೆ ಹೆಚ್ಚು ತೆರಬೇಕು.

ಪ್ರತಿಯೊಬ್ಬರ ಸಮಯವೂ ಅಮೂಲ್ಯ. ನಿನ್ನದೂ ಹಾಗೇ ನನ್ನದೂ. ದೀರ್ಘ ಬರಹಕ್ಕಾಗಿ ನಿನ್ನ ಸಮಯ ಹೆಚ್ಚು ತಗೊಂಡಿದ್ರೆ ಕ್ಷಮೆ ಇರಲಿ ಮಗಾ. ಆದರು ನಾನು ಇಷ್ಟೆಲ್ಲ ಹೇಳಿದ್ದಕ್ಕೆ ನಿನಗೆ ಬೇಸರವಾಗಿದ್ದರೆ ಸಾರಿ ಕೇಳಲ್ಲ. ನೀನು ಮಾಡಿರುವ ತಪ್ಪು ಸಾಮಾನ್ಯ ಅಲ್ಲ. ಇತ್ತೀಚೆಗೆ 45 ವರ್ಷ ವಯಸ್ಸಿನ ಮೇಲಧಿಕಾರಿ ಜೊತೆ ಎಣ್ಣೆ ಪಾರ್ಟಿ ಮಾಡಿ ಇಬ್ಬರೂ ಎಲ್ಲೆಲ್ಲಿ ಅಡ್ಡಾಡಿ ಎಲ್ಲಿಗೆ ಬಂದಿರಿ ಅಂತ ವರದಿ ಬಂದಿದೆ. ಆ ಲೋಫರ್‌ ನಿನ್ನ ವಯಸ್ಸಿನ ಹುಡುಗ ಕೂಡ ಇಡೀ ರಾತ್ರಿ ನಿನ್ನ ಜೊತೆ ಇದ್ದದ್ದು ಒಂದೆರಡು ಸಲ ಅಲ್ಲ. ನಾನು ಮತ್ತೆ ಮತ್ತೆ ನಿನಗೆ ಹೇಳಿದ ಗೆರೆ, ತಪಸ್ಸು, ಸಾಧನೆ ಎಲ್ಲ ಬುರ್ನಾಸ? ಈಗ ಪ್ರೀತಿ ಮಾಡ್ತಾ ಇರೋನನ್ನ ಏನ್‌ ಮಾಡ್ತಿ ಹೇಳು? ಈ ಸಲ ಊರಿಗೆ ಬರುವುದನ್ನು ನೀನು ತಪ್ಪಿಸುವ ಹಾಗಿಲ್ಲ. ಎಲ್ಲ ಖುಲ್ಲಾಖುಲ್ಲ ನೇರ ಮಾತಾಡಬೇಕು. ಈ ನಗರಗಳೆ ಹೀಗೆ ಸಂತೆಯಲ್ಲು ಏಕಾಂತ ತಂದುಕೊಡ್ತವೆ. ಎಲ್ಲರೂ ಇದ್ದರೂ ಯಾರೂ ಇರಲ್ಲ! ನಮ್ಮ ಗ್ಯಾನ ನಮಗೆ ಇರದಿದ್ದರೆ ಹೇಗೆ?

ಕಳೆದ ಸಲ ಬಂದಾಗ ʼನಾನು ಯಾರ ಜೊತೆಗೊ ಮಲಗಿದ್ದೆ ಅಂತ ನಿನಗೆ ಯಾರಾದರು ಚಾಡಿ ಹೇಳಿದರೆ ಏನು ಮಾಡ್ತಿʼ ಅಂತ ಮಗ್ಧವಾಗಿ ಕೇಳಿದ್ದೆ ನೆನಪಿದೆಯಾ? ಆಗ ನಾನೇನು ಹೇಳಿದೆ? ನನಗೆ ನೀನೇ ಅಂತಿಮ ನೀನು ಏನು ಹೇಳ್ತೀಯೊ ಅದನ್ನು ಮಾತ್ರ ನಂಬ್ತೀನಿ, ಅವರಿವರು ನೂರು ಹೇಳಲಿ ಅದೆಲ್ಲ ನನಗೆ ಮುಖ್ಯ ಅಲ್ಲ ಅಂತ ನಿನ್ನ ತಲೆ ಮೇಲೆ ಕೈ ಇಟ್ಟು ಹೇಳಿದೆ ನೆನಪಿದೆಯಾ? ಆದರೆ ಈಗ ಎಷ್ಟೊಂದು ಸಲೀಸಾಗಿ ಸುಳ್ಳು ಹೇಳಿದೆ! ನಡೆದದ್ದನ್ನು ಸಾಕ್ಷಿ ಸಮೇತ ಹೇಳಿದ ಯಾರನ್ನೋ ನಂಬಲಾ? ಕಣ್ಣೆದುರೆ ಸುಳ್ಳು ಹೇಳಿದ ನಿನ್ನ ನಂಬಲಾ? ಒಮ್ಮೆ ನಂಬಿಕೆ ಕಳಕೊಂಡರೆ ಮತ್ತೆ ಗಳಿಸುವುದು ಕಷ್ಟ ಮಗಾ. ಅವರು ನಿನ್ನನ್ನು ವ್ಯಭಿಚಾರಿ, ಸಿಕ್ಕ ಸಿಕ್ಕವರ ಜೊತೆ ಮಲಗೋಕೆ ಬಂದವಳಾ ಇಲ್ಲಿಗೆ ಅಂತೆಲ್ಲಾ ಅಂದಾಗ ನನಗೆಷ್ಟು ನೋವಾಯಿತು ಗೊತ್ತಾ!? ನಿನ್ನ ಒಂಟಿತನ ನೀಗೋಕೆ ಕೆಲವು ಸಂಬಂಧ ಮಾಡ್ಕೊಳ್ತಿ. ಏನೋ ಒಂದು ಬಾಂಡಿಂಗ್ ಬೆಳೆಯುತ್ತೆ. ಆಮೇಲೆ ಅವುನ್ನೆಲ್ಲ ಸುಲಭವಾಗಿ ಕಡಕೊಳ್ಳೋಕೆ ಆಗಲ್ಲ. ಅವೆ ನಿನ್ನ ಹಿಂಡಿ ಹಾಕಿಬಿಡ್ತಾವೆ ಮಗಾ. ನೀನು ಅಲ್ಲಿಗೆ ಹೋಗಿರೋದಾದರು ಏನಕ್ಕೆ?

ನನ್ನ ಕಂಟ್ರೋಲ್‌ ಮಾಡಬೇಡ ಅಂತೀಯಲ್ಲ; ಹು ಮನೇಲೆ ಬುರ್ಖಾ ಹಾಕಿ ಬೀಗ ಹಾಕಿಬಿಡು ಅಂತೀಯಲ್ಲ! ಏನಾದರು ಹೇಳಿದರೆ ಜನರೇಶನ್‌ ಗ್ಯಾಪ್‌ ಅಂತೀಯಲ್ಲ! ಇದೆಲ್ಲ ನನ್ನ ಪ್ರಕಾರ ಜನರೇಶನ್‌ ಬ್ರಿಜ್. ಐ ಡೋಂಟ್‌ ಲೈಕ್‌ ದಿಸ್‌ ಮಿಡ್ಲ್‌ಕ್ಲಾಸ್‌ ಡರ್ಟಿ ಮೊರಾಲಿಟಿ ಅಂತೀಯಲ್ಲ! ಐ ಹೇಟ್‌ ಮಾರಲ್‌ ಪೋಲಿಸಿಂಗ್‌ ಅಂತೀಯಲ್ಲ? ಏನಾಗಿದೆ ನಿನಿಗೆ! ನಾನು ಡರ್ಟಿ ಮಾರಲ್‌ ಪೋಲೀಸ್ ಅಲ್ಲ. ಇದನ್ನೆಲ್ಲ ನಾ ಹೇಳಲೇಬೇಕಿತ್ತು. ಹೇಳಿದ್ದೇನೆ. ನೀ ಹೇಗೆ ತಗೊಳ್ತೀಯೊ ತಗೊ. ಈ ಪತ್ರದ ಮೊದಲ ಪ್ಯಾರಾ ಈಗ ಮತ್ತೊಮ್ಮೆ ಓದಿಕೊ. ಐ ಡೋಂಟ್‌ ಸ್ಟಿರ್ ವಾಟರ್ ಸಿಂಪ್ಲಿ.

ಯೆಸ್‌ ರಿಯಲಿ ಯುವರ್ಸ್
ನಾಟ್‌ ಯುವರ್‌ ಒನ್‌ ಆಫ್‌ ಶುಗರ್‌ ಡ್ಯಾಡಿಸ್ ಆರ್‌ ಶುಗರ್‌ ಕ್ಯಾಂಡಿ ಬಾಯ್ಸ್.‌
ಒನ್‌ ಅಂಡ್‌ ಓನ್ಲಿ ರಿಯಲ್‌ ಡ್ಯಾಡಿ.
ಓನ್ಲಿ ಲವ್‌ ಮಗಾ. ಬೈ ಬೈ.

- ರಾಮಲಿಂಗಪ್ಪ ಟಿ. ಬೇಗೂರು

ಈ ಅಂಕಣದ ಹಿಂದಿನ ಬರೆಹಗಳು:
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಆಧುನಿಕತೆ ಸೃಷ್ಟಿಸುವ ಸಾಮಾಜಿಕ ವಿಪ...

06-12-2022 ಬೆಂಗಳೂರು

“ಜಾಗತಿಕ ನೆಲೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಯ ಯುವ ಪೀಳಿಗೆ ಎತ್ತ ಸಾಗುತ್ತಿದೆ. ಅದಕ್ಕೆ ಕಾರಣವಾಗ...

ರುದ್ರಾಕ್ಷಿ ಮಹತ್ವ...

05-12-2022 ಬೆಂಗಳೂರು

“ರುದ್ರಾಕ್ಷಿ ಧಾರಣೆಯಿಂದ ಹುಟ್ಟು-ಸಾವುಗಳನ್ನು ಗೆಲ್ಲಬಹುದೆಂದು ಕೆಲವು ವಚನಕಾರರು ಹೇಳಿದ್ದಾರೆ. ರುದ್ರಾಕ್ಷಿ ಧಾ...

ಶಶಿರೇಖಾ ಅವರ ಬದುಕಿನ ಯಾನ...

04-12-2022 ಬೆಂಗಳೂರು

“'ನನಗೆ ನನ್ನ ಮನೆಯಲ್ಲಿ ಚಿಕ್ಕ ಲೈಬ್ರರಿ ಮಾಡಬೇಕು ಎನ್ನುವ ಪುಟ್ಟ ಕನಸಿದೆ. ನಾನು ಕಲಿತಿರುವ ಎಲ್ಲ ಕೆಲಸಗಳನ...