ನಿರಂತರ ‘ನೃತ್ಯ ಸಂಭ್ರಮ’


''ಕರ್ನಾಟಕ ಸಂಗೀತ ಪಿತಾಮಹರೆನಿಸಿರುವ ಪುರಂದರ ದಾಸರು ಸಂಗೀತ ಕಲಿಕೆಗೆ ಹಾಕಿಕೊಟ್ಟಿರುವ ಮಾರ್ಗವನ್ನು ಅನುಸರಿಸಿ, ಸರಳೆವರಸೆಯ ಸ್ವರವಿನ್ಯಾಸಗಳು, ಲಂಬೋದರ ಲಕುಮಿಕರ ಮತ್ತು ಕೆರೆಯ ನೀರನು ಕೆರೆಗೆ ಚೆಲ್ಲಿ ಪಿಳ್ಳಾರಿ ಗೀತೆಗಳನ್ನು ಬಹಳ ಸುಂದರವಾಗಿ ಪ್ರದರ್ಶಿಸಿದ ಮತ್ತೊಂದು ಪುಟಾಣಿಗಳ ತಂಡ, ನೋಡುಗರಲ್ಲಿ ಭರವಸೆಯನ್ನು ತುಂಬಿತು'' ಎನ್ನುತ್ತಾರೆ ಸುಗ್ಗನಹಳ್ಳಿ ಷಡಕ್ಷರಿ. ಅವರು ಶಾಸ್ತ್ರೀಯ ನೃತ್ಯಕ್ಷೇತ್ರದ ಕುರಿತು ಬರೆದಿರುವ ಲೇಖನ ನಿಮ್ಮ ಓದಿಗಾಗಿ...

ನಮ್ಮ ಕರ್ನಾಟಕದಲ್ಲಿ ಶಾಸ್ತ್ರೀಯ ನೃತ್ಯಕ್ಷೇತ್ರ ಬಹಳ ಶ್ರೀಮಂತವಾಗಿ ಬೆಳೆಯುತ್ತಿದೆ. ನಮ್ಮ ಯುವ ಕಲಾವಿದರು ಬಹಳ ಬದ್ಧತೆಯಿಂದ ಕಾರ್ಯೋನ್ಮುಖರಾಗಿರುವುದು ಇದಕ್ಕೆ ಕಾರಣ. ಆ ಹಿನ್ನೆಲೆಯಲ್ಲಿ ಶ್ರೀ ಸೋಮಶೇಖರ್ ಚೂಡಾನಾಥ್ ಮತ್ತು ಶ್ರೀಮತಿ ಸೌಮ್ಯ ಸೋಮಶೇಖರ್ ದಂಪತಿ ಕೂಡ, ತಮ್ಮ ನಿರಂತರ ಸ್ಕೂಲ್ ಆಫ಼್ ಡಾನ್ಸ್ ಮೂಲಕ ಹಲವಾರು ಪ್ರತಿಭಾವಂತರನ್ನು ತಯಾರುಮಾಡುವ ಜವಾಬ್ದಾರಿಯನ್ನು ಬಹಳ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಮೊನ್ನೆ ತಮ್ಮ ನೃತ್ಯ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಪ್ರದರ್ಶನವನ್ನು ‘ನೃತ್ಯ ಸಂಭ್ರಮ’ ಶೀರ್ಷಿಕೆಯಲ್ಲಿ ಆಯೋಜನೆ ಮಾಡಿದ್ದರು.

ಸೋಮಶೇಖರ್-ಸೌಮ್ಯ ದಂಪತಿಗಳು ಭರತನಾಟ್ಯ ಮತ್ತು ಕಥಕ್ ಎರಡೂ ನೃತ್ಯ ಶೈಲಿಗಳಲ್ಲಿ ಬಹಳ ಪ್ರತಿಭಾವಂತರು. ದೇಶ-ವಿದೇಶಗಳಲ್ಲಿ ನಿರಂತರ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. ತಮ್ಮ ನೃತ್ಯ ಶಾಲೆಯಲ್ಲಿ ತಾವು ಪ್ರತಿನಿಧಿಸುವ ಎರಡೂ ಶೈಲಿಗಳಲ್ಲಿ ನೂರಾರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಹಾಗಾಗಿ ಅಂದಿನ ಪ್ರದರ್ಶನದಲ್ಲಿ ಎರಡೂ ಪದ್ಧತಿಗಳಲ್ಲಿ ಮಕ್ಕಳು ಬಹಳ ಸುಂದರ ಪ್ರದರ್ಶನವನ್ನು ನೀಡಿದರು.

ಕಾರ್ಯಕ್ರಮವನ್ನು ಚಕ್ರವಾಕ ರಾಗದಲ್ಲಿ ಸಂಯೋಜನೆಗೊಂಡಿರುವ ಪುಷ್ಪಾಂಜಲಿ ಮತ್ತು ಗಜಾನನಯುತಂ ಕೀರ್ತನೆಯೊಂದಿಗೆ ಆರಂಭಿಸಲಾಯಿತು. ಕಲಾವಿದರು ಬಹಳ ಉತ್ಸಾಹದಿಂದ ನರ್ತಿಸಿದರು. ಕರಾರುವಕ್ಕಾದ ಪದಚಲನೆ, ಖಚಿತವಾದ ಹಸ್ತವಿನ್ಯಾಸಗಳಿಂದ ತಮಗಾಗಿರುವ ಪಾಠಾಂತರವನ್ನು ಪ್ರದರ್ಶಿಸಿದರು. ಭರತನಾಟ್ಯ ಶೈಲಿಯ ಈ ಪ್ರಸ್ತುತಿಯ ನಂತರ ಕಲಾವಿದರು ಕಥಕ್ ಶೈಲಿಯಲ್ಲಿ ‘ಗಂ ಗಣಪತೇ’ ನರ್ತಿಸಿದರು. ಕಥಕ್ ಶೈಲಿಯ ಸುಂದರ ವಿನ್ಯಾಸಗಳ, ಕವಿತಾ ಮಾದರಿಯ ಈ ಪ್ರಸ್ತುತಿ ನೋಡುಗರಿಗೆ ಮುದ ನೀಡಿತು. ಮುಂದುವರಿದು ನೃತ್ಯಶಾಲೆಗೆ ಈಗಷ್ಟೇ ಪ್ರವೇಶ ಪಡೆದಿರುವ ಪುಟ್ಟಪುಟ್ಟ ಮಕ್ಕಳು ‘ಅಸಂಯುತ ಹಸ್ತ’ ಪ್ರದರ್ಶಿಸುವ ಮೂಲಕ, ನೃತ್ಯಶಾಲೆಯ ಕಲಿಕಾವಿಧಾನದ ಮಾರ್ಗವನ್ನು ಪರಿಚಯಿಸಿದರು.

ಕರ್ನಾಟಕ ಸಂಗೀತ ಪಿತಾಮಹರೆನಿಸಿರುವ ಪುರಂದರ ದಾಸರು ಸಂಗೀತ ಕಲಿಕೆಗೆ ಹಾಕಿಕೊಟ್ಟಿರುವ ಮಾರ್ಗವನ್ನು ಅನುಸರಿಸಿ, ಸರಳೆವರಸೆಯ ಸ್ವರವಿನ್ಯಾಸಗಳು, ಲಂಬೋದರ ಲಕುಮಿಕರ ಮತ್ತು ಕೆರೆಯ ನೀರನು ಕೆರೆಗೆ ಚೆಲ್ಲಿ ಪಿಳ್ಳಾರಿ ಗೀತೆಗಳನ್ನು ಬಹಳ ಸುಂದರವಾಗಿ ಪ್ರದರ್ಶಿಸಿದ ಮತ್ತೊಂದು ಪುಟಾಣಿಗಳ ತಂಡ, ನೋಡುಗರಲ್ಲಿ ಭರವಸೆಯನ್ನು ತುಂಬಿತು. ಮುಂದುವರಿದು ಮತ್ತೊಂದು ತಂಡ ‘ಆಂಗಿಕಂ ಭುವನಂ ಯಸ್ಯ’ ಧ್ಯಾನಶ್ಲೋಕಕ್ಕೆ ಅಭಿನಯವನ್ನು ಪ್ರದರ್ಶಿಸಿತು.

ಒಂದು ರೀತಿಯಲ್ಲಿ ಅಂದಿನ ಪ್ರದರ್ಶನದ ಕೇಂದ್ರ ಕೃತಿಯಾಗಿ ಶುದ್ಧಸಾವೇರಿ ರಾಗದಲ್ಲಿ ಜಯದೇವ ಕವಿಯ ದಶಾವತಾರ ಕೃತಿಯನ್ನು ಆರಿಸಿಕೊಳ್ಳಲಾಗಿತ್ತು. ಪ್ರತಿ ಅವತಾರದ ವಿಸ್ತೃತ ವರ್ಣನೆಯನ್ನು ಮಕ್ಕಳು ಸುಂದರವಾಗಿ ನಿರೂಪಿಸಿದರು. ಮಕ್ಕಳ ಗ್ರಹಿಕೆಗೆ ಹೊಂದುವಂತೆ ಬಹಳ ಕುಶಲತೆಯಿಂದ ಈ ಭಾಗಕ್ಕೆ ಸೋಮು-

ಸೌಮ್ಯ ದಂಪತಿ ನೃತ್ಯ ಸಂಯೋಜನೆ ಮಾಡಿದ್ದರು. ಆದಿಶಂಕರಾಚಾರ್ಯರ ಶಿವಷಡಕ್ಷರಿ ಸ್ತೋತ್ರದ ಪ್ರಸ್ತುತಿಯೂ ಬಹಳ ಭಕ್ತಿಪೂರ್ಣವಾಗಿ ನಿರೂಪಿತವಾಯಿತು.

ನಮ್ಮ ಕನ್ನಡದಲ್ಲಿ ದಶಕಗಳಿಂದ ಓದುಗರ ಮೆಚ್ಚುಗೆಗೆ ಪಾತ್ರವಾಗಿರುವ ಹಲವು ಬಾಲಪದ್ಯಗಳಿವೆ. ಅವುಗಳಲ್ಲಿ ಒಂದು ‘ಧರಣಿ ಮಂಡಲ ಮಧ್ಯದೊಳಗೆ’. ಈ ಪದ್ಯವನ್ನು ಗುರುದಂಪತಿಗಳು ಬಹಳ ಸುಂದರವಾಗಿ ನೃತ್ಯಕ್ಕೆ ಅಳವಡಿಸಿದ್ದರು. ಪಾತ್ರಗಳಿಗನುಗುಣವಾಗಿ ಆಹಾರ್ಯವನ್ನು ಧರಿಸಿ ಮಕ್ಕಳು ಸಂಭ್ರಮದಿಂದ ನರ್ತಿಸಿದರು. ರೇವತಿ ರಾಗದಲ್ಲಿ ದಯಾನಂದ ಸರಸ್ವತಿಗಳ ‘ಭೋ ಶಂಭೋ’ ಕೃತಿ ಕೂಡ ಅಚ್ಚುಕಟ್ಟಾಗಿ ಪ್ರದರ್ಶಿಸಲ್ಪಟ್ಟಿತು.

ಕಥಕ್ ಶೈಲಿಯ ‘ಗೀತ್ ತ್ರಿವಟ್’ ಪ್ರಸುತ್ತಿಯಲ್ಲಿ ಕಲಾವಿದರು ಆ ಶೈಲಿಯ ಸೊಬಗು, ಲಯವಿನ್ಯಾಸ, ಜುಗಲ್ಬಂಧಿ ಕಲ್ಪನೆ ಎಲ್ಲವನ್ನೂ ಸೊಗಸಾಗಿ ಸಾದರಪಡಿಸಿದರು. ಕಾವಡಿ ಚಿಂಡು ಪ್ರಸ್ತುತಿಯೂ ಸುಂದರವಾಗಿತ್ತು. ರಾಷ್ಟ್ರಕವಿ ಕುವೆಂಪು ಅವರ ಭೈರವನಾರಿ ಕವನವನ್ನು ದೃಶ್ಯಶ್ರೀಮಂತಿಕೆಯಲ್ಲಿ ಕಲಾವಿದರು ಸಾದರಪಡಿಸಿದರು. ವಲ್ಲಬಾಚಾರ್ಯರ ಮಧುರಾಷ್ಟಕವನ್ನು ಕಥಕ್ ಶೈಲಿಯಲ್ಲಿ ನರ್ತಿಸುವ ಮೂಲಕ ಅಂದಿನ ಪ್ರದರ್ಶನವನ್ನು ಸಂಪನ್ನಗೊಳಿಸಲಾಯಿತು.

ಸುಮಾರು ಎಂಭತ್ತಕ್ಕೂ ಹೆಚ್ಚು ಕಲಾವಿದರು ಅಂದಿನ ಪ್ರಸ್ತುತಿಯ ಭಾಗವಾಗಿ, ನೃತ್ಯಶಾಲೆಯೊಂದರ ವಾರ್ಷಿಕೋತ್ಸವ ಹೇಗಿರಬೇಕು ಎಂಬುದಕ್ಕೆ ಮಾದರೆಯೆನಿಸುವ ರೀತಿ ಸಾಕರಾಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದ ರೇವಾ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರಾದ ಡಾ. ಬೀನಾ ಹಾಗೂ ಶ್ರೀ ಅನಂತ್ ನಾಗರಾಜ್ ಮತ್ತು ಶ್ರೀಮತಿ ಚೈತ್ರ ಅನಂತ್ ದಂಪತಿಗಳು, ಪ್ರದರ್ಶನವನ್ನು ಮೆಚ್ಚಿಕೊಂಡದ್ದಲ್ಲದೆ, ಕೊನೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಬಹಳ ಸಂತೋಷದಿಂದ ಸ್ಮರಣಿಕೆಗಳನ್ನು ವಿತರಿಸಿ, ಸೋಶೇಖರ್-ಸೌಮ್ಯ ದಂಪತಿಗಳ ಬದ್ಧತೆಯನ್ನು ಶ್ಲಾಘಿಸಿದರು.

-ಸುಗ್ಗನಹಳ್ಳಿ ಷಡಕ್ಷರಿ

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...