ನಿರೀಕ್ಷೆಗಳಿಲ್ಲವಾದರೆ ನಿರಾಳ

Date: 24-12-2021

Location: ಬೆಂಗಳೂರು


‘ಪ್ರೀತಿ, ಪ್ರೇಮ, ಮಮತೆ, ವಾತ್ಸಲ್ಯ, ಸ್ನೇಹ, ಮಮಕಾರ, ಸಹಕಾರ, ಉಪಕಾರ, ಸತ್ಕಾರಗಳ ನಿರೀಕ್ಷೆಯು ಇನ್ನಿಲ್ಲದಂತೆ ಅಡಿಗಡಿಗೂ ಬದುಕನ್ನು ನೋಯಿಸಿ ಧೂಳಿಪಟ ಮಾಡಿ ಬಿಡುತ್ತವೆ. ಈ ಎಲ್ಲಾ ನಿರೀಕ್ಷೆಗಳು ಒಂದಲ್ಲಾ ಒಂದು ರೀತಿಯಲ್ಲಿ ನೋವುಗಳಿಂದ ತೋಯ್ದು ಬಿಟ್ಟಿರುವಂತದ್ದೇ’ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ಅವರು ತಮ್ಮ ಅನಂತಯಾನ ಅಂಕಣದಲ್ಲಿ ಮನುಷ್ಯನ ಮನಸ್ಸಿನ ಸಂಕೀರ್ಣ ಸಮಸ್ಯೆಗಳು ಮತ್ತು ನಿರಾಳವಾಗಿ ಬದುಕಬಲ್ಲ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ.

ಸರಳ ಬದುಕನ್ನು ಜಟಿಲವಾಗಿಸುವ ಕಲೆ ಮನುಷ್ಯ ಜೀವಿಗೆ ಸಿದ್ದಿಸಿದಷ್ಟು ಪ್ರಾಯಶಃ ಇನ್ಯಾವುದೇ ಜೀವಿಗೆ ಸಿದ್ಧಿಸಿಲ್ಲ. ಜೀವರಾಶಿಯ ಯಾವುದೇ ಪಂಗಡಕ್ಕೂ ಇಲ್ಲದ ಅಷ್ಟೂ ತಕರಾರುಗಳು ಮನುಷ್ಯ ವರ್ಗಕ್ಕೆ ಮಾತ್ರ ಸೀಮಿತ. ನಿತ್ಯವೂ ಬೇಕು-ಬೇಡ, ಸರಿ-ತಪ್ಪುಗಳ ನಡುವಿನ ಗುದ್ದಾಟ, ಹೋರಾಟ. ಸ್ಪಷ್ಟತೆಯನ್ನು ಕಾಣದ, ನಿಖರ ಹಾದಿಯನ್ನು ಗುರುತಿಸಲಾಗದ ದ್ವಂದ್ವವು ಉಸಿರಿರುವ ತನಕವೂ ಜೊತೆಯಲ್ಲೇ ಸಾಗುತ್ತಿರುತ್ತದೆ. ಹಾಗಂತ ಇವಷ್ಟನ್ನೂ ಹೊತ್ತುಕೊಂಡು ಬಂದೆವೆಂದು ತಿಳಿದಿರೆ? ಒಂದಷ್ಟು ಹೌದು. ಮಿಕ್ಕವಷ್ಟೂ ಇಲ್ಲಿದ್ದೇ ಕಟ್ಟಿಕೊಂಡವುಗಳು.

ಕಟ್ಟಿಕೊಂಡು ಬಂದ ಬುತ್ತಿಯನ್ನು ತೆರೆದು ನೋಡುವ ಗೋಜಿಗೆ ಹೋಗಿರುವುದಿಲ್ಲ. ಹಾಗಾಗಿ ಅಲ್ಲೇನಿದೆ ಎಂಬುದರ ಕಲ್ಪನೆಯೇ ಇರುವುದಿಲ್ಲ. ಏನಿದ್ದರೂ ಹೊಸದೊಂದು ಬುತ್ತಿಯನ್ನು ಕಟ್ಟಿಕೊಳ್ಳುವ ಕಾಯಕದಲ್ಲಿ ಸರ್ವವೂ ಮಗ್ನ. ನಿರ್ದಿಷ್ಟ ಗೊತ್ತು ಗುರಿ ಇಲ್ಲದ ಮತ್ತು ಕೆಲವೊಮ್ಮೆ ಸ್ಪಷ್ಟತೆಯ ಗುರಿ ಇರುವ ಮಂದಿಯಲ್ಲೂ ಗೊಂದಲಗಳು ಇಲ್ಲವೆಂದಲ್ಲ. ಇವೆ ಮತ್ತು ಅವು ಇದ್ದಿದ್ದೇ. ಎಲ್ಲಿಂದ ಹುಟ್ಟುತ್ತವೆ ಈ ಗೊಂದಲಗಳು? ಯಾಕಾಗಿ ಕೊರೆಯುತ್ತಿರುತ್ತವೆ? - ಪ್ರಶ್ನೆಗಳು ಮೊಳೆಯುತ್ತಲೇ ಇರುತ್ತವೆ. ಯಾವ್ಯಾವುದರದ್ದೋ ಗೀಳು, ಇನ್ಯಾರದ್ದೋ ಹಂಬಲದಲ್ಲಿ ದಿನ ದೂಡುತ್ತಿರುತ್ತೇವಲ್ಲ, ಹಾಗಾಗಿ ಉತ್ತರಗಳನ್ನು ಹೊತ್ತಿರುವ ಪ್ರಶ್ನೆಗಳತ್ತ ನಾವು ಸುಳಿಯುವುದೇ ಇಲ್ಲ.

ಆತಂಕಗಳಿಂದ ತುಂಬಿದ ಜೀವಪಾತ್ರೆಯು ಪ್ರಶ್ನೆಗಳಲ್ಲೇ ಹುದುಗಿರುವ ಉತ್ತರಗಳನ್ನು ತುಂಬಿಸಿಕೊಳ್ಳಲು ಒಂದಷ್ಟು ಯತ್ನಿಸುತ್ತಿರುತ್ತದೆ ನಿಜ. ಅಂತಹ ಸಾಧ್ಯತೆಗಳಿರುವ ಹಾದಿಯನ್ನು ತುಳಿಯುವ ಬುದ್ದಿ ಆ ಕ್ಷಣದಲ್ಲಿ ಹೊಳೆದರೂ ನಿರ್ಧಾರ ತೆಗೆದುಕೊಳ್ಳಲಾಗದೆ ಮಂಕಾಗಿ ಕುಂತಿರುತ್ತೇವೆ. ಈಡೇರಬೇಕೆನ್ನುವ ಬಯಕೆಗಳು, ಅರಳಬೇಕೆನ್ನಿಸುವ ಕನಸುಗಳು ಎಲ್ಲವೂ ಒಂದಾಗಿ ಹುಟ್ಟುವ ನಿರೀಕ್ಷೆಯು ಬಹಳ ಎತ್ತರವಾದದ್ದು. ಎತ್ತರಕ್ಕೇರಬೇಕಾದರೆ ಬಹಳಷ್ಟು ನಡೆಯಬೇಕು. ಎತ್ತರದತ್ತ ದೃಷಿ ಹಾಯಿಸಲು ಕತ್ತೆತ್ತಿ ನೋಡಬೇಕು. ಎಷ್ಟೂ ಅಂತ ಸವೆಯಲು ಸಾಧ್ಯ? ಎತ್ತಿದ ಕತ್ತಿನ ಭಾರವನ್ನು ಭುಜ ಎಷ್ಟು ಹೊತ್ತು ಹೋರಬಹುದು? ಸ್ಪುಟತೆ ಬೇಕಿರುವುದೇ ಇಂತಹದ್ದೊಂದು ಘಟ್ಟದಲ್ಲಿ.

ಕಂಡುಕೊಳ್ಳಲು ಸಾಧ್ಯವಿರುವ ಸ್ಪಷ್ಟತೆಯು ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಅದರ ಬಗ್ಗೆ ತಿಳಿಯಲು ಆಸಕ್ತಿ ಇರುವುದಿಲ್ಲವಷ್ಟೆ. ಒಂದೊಮ್ಮೆ ಅರಿತರೂ ಸ್ವೀಕರಿಸುವ ಧೈರ್ಯವಿರುವುದಿಲ್ಲ. ಸ್ಪಷ್ಟತೆಯನ್ನು ಮೂಡಿಸುವಲ್ಲಿ ಹುಳುಕುಗಳು ಯಾವತ್ತಿಗೂ ಅಡ್ಡಿಯೇ. ಹಾಗಿರಲು ಗೊಂದಾಲಪುರದಿಂದ ತಪ್ಪಿಸಿಕೊಳ್ಳಲು ಕಂಡುಕೊಳ್ಳುವ ದಾರಿ, ಉಪಾಯಗಳು ಹಲವಾರು. ಅವೆಲ್ಲವೂ ಇನ್ನೊಬ್ಬರ ಹೊಟ್ಟೆಪಾಡಿಗಾಗಿ ಎರಡು ಕಾಸು ಮಾಡಲಿಕ್ಕಿರುವ ಸರಕುಗಳಷ್ಟೇ. ಅಲ್ಲಿಂದ ಬರುವ ಉಪಾಯಗಳು ಜೀವಕ್ಕೆ ಅಪಾಯ ತರುವುದೇ ಹೆಚ್ಚು. ಕೈಯಾರೆ ಕಟ್ಟಿದ ಗೊಂದಲದ ಗೂಡನ್ನು ಕೆಡುಹ ಬೇಕಾದವರು ನಾವೇ ಹೊರತು ಅನ್ಯರಲ್ಲ. ಅಷ್ಟಕ್ಕೂ ನಾವು ಕಟ್ಟಿಕೊಳ್ಳಲು ಬಯಸುವ ಬದುಕು ಭಗವಂತನಿಟ್ಟು ಕಳುಹಿಸಿದ ಬಾಳಿನಂತಲ್ಲವಲ್ಲ! ***

ಏಕಾನೇಕ ಗೊಂದಲಗಳು ಬಾಳನ್ನು ಅಸ್ತವ್ಯಸ್ತಗೊಳಿಸಿ ಬಿಡುತ್ತವೆ. ಅಷ್ಟಕ್ಕೇ ಸಂಕಟಗಳು ಅಚ್ಚರಿಯ ಆಕಾರ ಪಡೆದು ಹೆಗಲೇರಿ ಕುಳಿತಿರುತ್ತವೆ. ಆದರವು ನಮ್ಮ ಜೊತೆಗೇ ಬೆಳೆದು ಬಂದಿರುತ್ತವೆ ಎಂಬುದರತ್ತ ಗಮನ ಹರಿಸಿರುವುದಿಲ್ಲ. ಕೂತಲ್ಲಿ, ನಿಂತಲ್ಲಿ, ನಡೆದಲ್ಲಿ, ಮಲಗಿದಲ್ಲೆಲ್ಲಾ ಬೆನ್ನಿಗಂಟಿಕೊಂಡ ಸಾವಿನಂತೆ ಗಲಿಬಿಲಿ, ತತ್ತರಗಳು ಜೊತೆಯಲ್ಲೇ ಇರುತ್ತವೆ. ಅದರ ಇರುವಿಕೆಯ ಅರಿವಾಗಲೀ, ಕೊಡುವ ಕೆಲವೊಂದು ಸೂಚನೆಗಳಾಗಲಿ ಗೊತ್ತೇ ಆಗಿರುವುದಿಲ್ಲ. ಕೆಲವರಿಗಂತೂ ಗೊತ್ತಾಗುವ ಹೊತ್ತು ಜೀವನದುದ್ದಕ್ಕೂ ಬರುವುದೇ ಇಲ್ಲ. ಎಡವಿ, ಮುಗ್ಗರಿಸಿ ಬೀಳಿಸಿ ನೋಯುವಂತೆ ಮಾಡಿದರೂ ತಿಳಿವಿನ ಅರಿವು ಮೂಡದಿರುವುದಕ್ಕೆ; ಹುಟ್ಟುತ್ತಲೇ ಜತೆಯಾದ ಸಾವು ಕೂಡಾ ಬೇಸರಿಸಿ ಸುಮ್ಮನಾಗಿ ಬಿಡುತ್ತದೆ. ಕೆಲವೊಮ್ಮೆ ಸಾಯುವುದು ತುಂಬಾ ಸುಲಭವಾಗಿರುತ್ತದೆ. ಆದರೆ ಜೀವಿಸುವುದು ತುಂಬಾ ಕಷ್ಟ.

ಒಂದೊಂದೇ ಗಂಟುಗಳಲ್ಲಿ ಬಂದಿಯಾಗಿ ಬಿಡುವ ಕಗ್ಗಂಟಿಗೆ ಅಂಟಿಕೊಂಡದ್ದೇ ಅವರವರೇ ಬಿಗಿದ ಗಂಟುಗಳ ಲೆಕ್ಕ ಯಾರಿಗೂ ಸಿಗುವುದಿಲ್ಲ ಪಕ್ಕಾ. ಕಟ್ಟಿದ ಮತ್ತು ಕಟ್ಟಿಸಿಕೊಂಡ ಗಂಟುಗಳನ್ನು ಆಗಿಂದಾಗ್ಗೆ ಬಿಡಿಸಿಕೊಳ್ಳದಿದ್ದರೆ ಅದರಿಂದಾಗುವ ಪ್ರಮಾದವೇ ಹೆಚ್ಚು. ಸೃಷ್ಟಿ-ಲಯಗಳೆರಡೂ ನಡೆಯುವುದು ಕೂಡ ನಮ್ಮೊಳಗೇ. ಗಂಟನ್ನು ಕಟ್ಟುವವರೂ ನಾವೇ, ಬಿಡಿಸುವವರೂ ನಾವೇ. ನಮ್ಮೆಲ್ಲ ಸುಖ-ದುಃಖಗಳಿಗೂ ನಾವು ಕಾರಣರೇ ಹೊರತು ವಿಷಯ, ಪರಿಸರ, ಪರಿಸ್ಥಿತಿ ಹಾಗೂ ಅನ್ಯರಂತೂ ಅಲ್ಲವೇ ಅಲ್ಲ. ನಮ್ಮನ್ನು ನಮಗೆ ಅರಿತುಕೊಳ್ಳಲು ಸಾಧ್ಯವಿರುವಷ್ಟು ಇತರರಿಗದು ಸಾಧ್ಯವಿದೆಯೇ? ಆದರೂ ನಮ್ಮೊಳಗೆ ಇಣುಕು ಹಾಕುವತ್ತ ಮಗ್ನರಾಗುವುದಿಲ್ಲ. ಒಳಕ್ಕಿಳಿದು ಬಗೆದು ನೋಡುವಷ್ಟು ಧೈರ್ಯವೂ ಇರುವುದಿಲ್ಲ ಬಿಡಿ. ಈ ನಿಟ್ಟಿನಲ್ಲಿ ಅಧೈರ್ಯವನ್ನು ಹೋಗಲಾಡಿಸಲೆಂದೇ ಹುಟ್ಟಿರುವ ಹಲವಾರು ಉಪಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಹಾಗಂತ ಪರಿಹಾರ, ನೆಮ್ಮದಿ ದೊರಕಿತೇ? ಎಂದು ಕೇಳಿದರೆ, ಸ್ಪಷ್ಟ ಉತ್ತರವಿರುವುದಿಲ್ಲ. ಒಂದು ವೇಳೆ 'ಸಿಕ್ಕಿತು' ಎಂದು ಹೇಳಿದರೂ ಮನಸ್ಸು ಮತ್ತೆ ನಮ್ಮನ್ನೇ ಪ್ರಶ್ನಿಸುತ್ತದೆ. ಹೌದೇನು? ಪರಿಹಾರ ಸಿಕ್ಕಿತೇ? ನೆಮ್ಮದಿಯಿಂದ ಇದ್ದೇನೆಯೇ? ನಾನೆಣಿಸಿದಂತೆಯೇ ಫಲ ದೊರಕಿದೆಯೇ? ಎಂಬ ಸಂಶಯದ ಪ್ರಶ್ನೆಗಳ ಸರಪಳಿಯಿಂದ ಸ್ವಯಂ ಬಂಧಿಯಾಗಿ ಬಿಡುವ ಸಂಕೀರ್ಣ ಸ್ಥಿತಿಗೆ ನಮ್ಮನ್ನು ನಾವು ಒಡ್ಡಿಕೊಂಡು ಬಿಡುತ್ತೇವೆ.

ವರ್ತಮಾನದ ತಲ್ಲಣಗಳನ್ನು ಜೊತೆಗಿಟ್ಟುಕೊಂಡು ಬಾಳುವ ಬಾಳು ಮತ್ತದು ನೀಡುವ ಸುಖವು- ಗತದ ನೆನಪಲ್ಲೂ ಇಲ್ಲ. ಭವಿಷ್ಯದ ನಿರೀಕ್ಷೆಯಲ್ಲೂ ಇಲ್ಲ. ಇರುವೆದೆಲ್ಲವೂ ಕೇವಲ ವರ್ತಮಾನದಲ್ಲಿ ಮಾತ್ರ. ಈ ಕ್ಷಣದ ದುಃಖಗಳು ಹೊಮ್ಮಿಸುವ ನೋವುಗಳಲ್ಲಿ ಸುಖಗಳಿರುವಂತೆಯೇ, ಸೌಖ್ಯದ ನಿರೀಕ್ಷೆಯೂ ಕೂಡಾ ನೋವನ್ನು ಹೊತ್ತು ತರುವುದುಂಟು. ನಿರೀಕ್ಷೆಯೊಳಗೆ ಸುಖವಿರುವುದೇನೋ ನಿಜ. ಆದರೆ ಅದು ಎಷ್ಟರ ಮಟ್ಟಿಗಿನ ಮತ್ತು ಎಂತಹ ನಿರೀಕ್ಷೆ ಎನ್ನುವ ನಿರ್ಣಯ ಆಯಾ ಜೀವಕ್ಕೆ ಬಿಟ್ಟದ್ದು. ಕಣ್ಣಿಗೆ ಕಾಣುತ್ತಲೇ ‘ಥಟ್’ ಎಂದು ಕಾಣೆಯಾಗಿ ಬಿಡುವ, ಇನ್ನೇನು ಹಿಡಿದೇ ಬಿಟ್ಟೆನೆಂದು ಮುಂಗೈ ಚಾಚಿದರೆ ಸರಕ್ಕನೆ ಕೈ ಜಾರಿ ಓಡಿ ಹೋಗುವ ಮಾಯಾಮೃಗದಂತೆ...ಒಣಗಿದ ಗಂಟಲ ಪಸೆ ಆರಿಸಲು ಕಾಣಿಸುವ ಮರುಭೂಮಿಯ ಓಯಸೀಸಿನಂತೆ-ನಿರೀಕ್ಷೆ. ನಿರೀಕ್ಷೆಯೇ ಇಲ್ಲದ ವರ್ತಮಾನ ಸಹ್ಯವೆನಿಸಿಕೊಳ್ಳುತ್ತದೆ.

ಪ್ರೀತಿ, ಪ್ರೇಮ, ಮಮತೆ, ವಾತ್ಸಲ್ಯ, ಸ್ನೇಹ, ಮಮಕಾರ, ಸಹಕಾರ, ಉಪಕಾರ, ಸತ್ಕಾರಗಳ ನಿರೀಕ್ಷೆಯು ಇನ್ನಿಲ್ಲದಂತೆ ಅಡಿಗಡಿಗೂ ಬದುಕನ್ನು ನೋಯಿಸಿ ಧೂಳಿಪಟ ಮಾಡಿ ಬಿಡುತ್ತವೆ. ಈ ಎಲ್ಲಾ ನಿರೀಕ್ಷೆಗಳು ಒಂದಲ್ಲಾ ಒಂದು ರೀತಿಯಲ್ಲಿ ನೋವುಗಳಿಂದ ತೋಯ್ದು ಬಿಟ್ಟಿರುವಂತದ್ದೇ. ನಿರೀಕ್ಷೆಗಳ ಹೊತ್ತ ಬಾಳು ಅಸಹನೀಯವಾದುದು ಎನ್ನುವುದು ಕ್ರಮೇಣ ಅರ್ಥವಾಗುತ್ತಾ ಹೋಗುತ್ತದೆ. ಹೊತ್ತನ್ನೂ ಮೀರಿ ಕುಳಿತು ಕಾಯುವ ನಿರೀಕ್ಷೆಗಳು ತೀವ್ರ ನೋವಿಗೆ ಕಾರಣವಾಗುತ್ತವೆ. ಹುಟ್ಟಿಸಿದ ಕರ್ಮಕ್ಕೆ ಅಪೇಕ್ಷಿಸುವ ಪ್ರೀತಿಯ ನಿರೀಕ್ಷೆ.. ಬಾಳಿಗೊಂದು ಅರ್ಥ ಬರೆಯಲೆಂದು ಕಟ್ಟಿಕೊಂಡ ಬಂಧದಿಂದ ಬಯಸುವ ಪ್ರೇಮದ ನಿರೀಕ್ಷೆ, ಸಾಂಗತ್ಯದ ಒಲುಮೆಯಲ್ಲಿ ಬಯಸುವ ಸುಖದ ತಂಗಾಳಿಯ ನಿರೀಕ್ಷೆ, ಕುಸಿದ ಜೀವಕ್ಕೆ ಆಸರೆಯಾದೀತೆಂದು ಭಾವಿಸಿ ಸ್ನೇಹ ಹಸ್ತ ಚಾಚಿಕೊಂಡ ಬಂಧದ ನಿರೀಕ್ಷೆ, ಒಂದಷ್ಟು ಸತ್ಕರ್ಮಗಳು ಒಳಿತು ಮಾಡಲಿವೆ ಎಂಬ ಪುಣ್ಯದ ನಿರೀಕ್ಷೆ, ದೀರ್ಘಾಯಸ್ಸನ್ನು ಅಪೇಕ್ಷಿಸುವ ಸ್ವಾರ್ಥದ ನೀರಿಕ್ಷೆ, ಉತ್ತಮ ಕಾರ್ಯಕ್ಷಮತೆಯ ಪ್ರದರ್ಶನದಿಂದ ಉದ್ಯೋಗದಲ್ಲಿ ಮೇಲೇರುತ್ತೇನೆಂಬ ಯಶಸ್ಸಿನ ನಿರೀಕ್ಷೆ, ಲೌಕಿಕದ ಸುಖಗಳನ್ನು ಪಡೆಯಲು ಬೇಕಿರುವ ಧನರಾಶಿಯ ನಿರೀಕ್ಷೆಗಳಿಗೆಲ್ಲದಕ್ಕೂ ಅಂತ್ಯವೇ ಇರುವುದಿಲ್ಲ. ಕೊನೆಯೇ ಕಾಣದ ನಿರೀಕ್ಷೆಗಳ ಪಟ್ಟಿ ನಿತ್ಯದ ಬದುಕಲ್ಲಿ ಏರುತ್ತಲೇ ಹೋಗುತ್ತವೆ.

ಹತ್ತು ಹಲವು ಸ್ತರಗಳಲ್ಲಿ ಕಾಣ ಬಯಸುವ ವಿವಿಧ ರೂಪ-ಭಾವಗಳ ನಿರೀಕ್ಷೆಯು ಸಮಾಧಾನ ತರುವುದಕ್ಕಿಂತಲೂ ಅಸಮಾಧಾನವನ್ನು ಸೃಷ್ಟಿಸುವುದೇ ಹೆಚ್ಚು. ಯಾವಾಗ ನೀರಿಕ್ಷೆಗಳು ಇರುವುದಿಲ್ಲವೋ ಆಗಲೇ ಬದುಕು ತಿಳಿಯೆನಿಸುವುದು. ಅಲ್ಲಿಯವರೆಗೆ ಬಾಳು ಕದಡಿದ ಕೊಳದಂತೆ. ರಾಡಿಗೊಂಡ ಕೊಳದಲ್ಲಿ ಸ್ಪಟಿಕ ಜಲವನ್ನು ನಿರೀಕ್ಷಿಸಲಾದೀತೇ? ಕದಡಿದ ನೀರು ತಿಳಿಯಾದರೆ ನೀರು ಸ್ಫಟಿಕದಂತಿರುತ್ತದೆ. ಅಂತೆಯೇ ಮನಸ್ಸು ತಿಳಿಗೊಂಡಿತೆಂದಾದರೆ ನಿರೀಕ್ಷೆಗಳು ದೂರವಾದುವು ಎಂದೇ ಅರ್ಥ. ನಿರೀಕ್ಷೆ ಮತ್ತು ಉತ್ಕಟ ಆಸೆಗಳಿಲ್ಲದ ಜೀವಯಾನದಲ್ಲಿ ಶಾಂತಿ -ಸುಖ-ನೆಮ್ಮದಿಯೇ ಅಧಿಕ. ಆಂತರ್ಯದಲ್ಲಿ ಹೆಚ್ಚೆಚ್ಚು ಏಕಾಂತದತ್ತ ಜಾರುತ್ತಾ ಹೋದಂತೆ ಬಾಹ್ಯದಲ್ಲಿ ಮೌನವು ಎದ್ದು ಕುಳಿತು ಬಿಡುತ್ತದೆ. ಮೌನವನ್ನು ಹೊದೆದ ಬಾಳು ಸವಿಯಾಗಿಯೂ, ಬಿಗಿಯಾಗಿಯೂ ಮೂಡಿ ತೀವ್ರವಾಗಿ ಉಲ್ಬಣಿಸುವ ತಳಮಳಗಳಿಗೆ ಸಹಜ ಸಾಂತ್ವನ ನೀಡುತ್ತದೆ.

ಎಂತೆಂತಹ ಘಟನೆಗಳು ಚರಿತ್ರೆಯಲ್ಲಿ ಅದೆಷ್ಟು ನಡೆದಿಲ್ಲ? ಚರಿತ್ರೆಯಲ್ಲಿ ಇಲ್ಲದ್ದು ಯಾವುದಿದೆ? ಬದುಕಲ್ಲಿ ಏನೇ ನಡೆದರೂ ಚಿಂತಿಸಿ ಕೊರಗುವ ಅಗತ್ಯವಿಲ್ಲ. ಕಾರಣ -"ಚರಿತ್ರೆಯಲ್ಲಿ ಎಲ್ಲವೂ ಇದೆ"! ನಾವು ಮತ್ತು ನಮ್ಮದ್ಯಾವುದೂ ಹೊಸತಲ್ಲ ಎಂಬ ಸ್ಥಿತಪ್ರಜ್ಞೆ. ಯಾರಿಂದಲೂ, ಯಾವುದರಿಂದಲೂ ಯಾವುದೇ ನಿರೀಕ್ಷೆಗಳೇ ಇಲ್ಲವೆನ್ನಿ- 'ಬಂದರೆ ಒಳಿತು ಬಾರದಿರೆ ಲೇಸು'- ತಟಸ್ಥ ಮನಸ್ಥಿತಿಯಲ್ಲಿ ನೆಲೆ ನಿಲ್ಲುವ ರೀತಿ. ಹಂಬಲ-ನಿರೀಕ್ಷೆಗಳಿಲ್ಲದೆ ವಿಶೇಷವೆನಿಸಿಕೊಳ್ಳದೆ. ಸಾಮಾನ್ಯನೆನಿಸಿಕೊಂಡು ಪಡೆದುಕೊಳ್ಳುವ ಶಾಂತಿ ಸಮಾಧಾನವನ್ನು ವರ್ತಮಾನವೇ ಕರುಣಿಸುವುದು.

ಗತಕ್ಕೆ ಜೋತು ಬೀಳದೆ, ಭಾವೀಗಾಗಿ ಕಾದು ಕುಳಿತುಕೊಳ್ಳದೆ ಪಾಲಿಗೆ ಬಂದಂತಹ ಬಾಳನ್ನು ಅನುಭವಿಸಿ ವರ್ತಮಾನದಲ್ಲಿ ಜೀವಿಸಿದುದರ ಫಲಶ್ರುತಿಯಾಗಿ ಅನುಭವದ ಮಾತುಗಳು ಹುಟ್ಟಿಕೊಳ್ಳುತ್ತವೆ. ಬಂದರೆ ಒಳಿತೆನ್ನುವ..ಬಾರದಿರೆ ಲೇಸೆನ್ನುವ..ಮನಸ್ಥಿತಿಯ ಜೊತೆ ಜೊತೆಗೆ ಚರಿತ್ರೆಯಲ್ಲಿ ಇಲ್ಲದ್ದು ಯಾವುದೂ ಇಲ್ಲವೆಂದು ಅರಿತು ಯಾವಾಗ ಜೀವಿಸುತ್ತೇವೆಯೋ ಆಗಲೇ ಸತ್ಯದ ದರ್ಶನವಾಗುವುದು.

ಈ ಅಂಕಣದ ಹಿಂದಿನ ಬರೆಹಗಳು:
ದಾರುಣ ಅಂತ್ಯ ಹೇಳುವ 'ನಗ್ನಸತ್ಯ'
ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...