"ನಿಶ್ಯಬ್ಧ ಜಾತ್ರೆ" ಎಂದೆನಿಸುವ ವಿಭಿನ್ನತೆ ಮತ್ತು ಜರ್ಮನ್ ಟೆರ್ಮಿನ್ ಕ್ಯಾಲೆಂಡರ್

Date: 17-10-2021

Location: ಬೆಂಗಳೂರು


‘ಭಾರತ ದೇಶದಲ್ಲಿ ಜನಸಾಮಾನ್ಯರು ಕ್ಯಾಲೆಂಡರ್ ನ ವಾರಗಳು ಮತ್ತು ದಿನಾಂಕವನ್ನು ಅನುಸರಿಸಿ ಕೆಲಸ ಮತ್ತು ಜೀವನವನ್ನು ಸಾಗಿಸುವುದು ಸಹಜವೆನಿಸಿದರೆ, ಜೆರ್ಮನಿ ದೇಶದಲ್ಲಿ ಇದೇ ಕ್ಯಾಲೆಂಡರ್ ಜನರ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ’ಎನ್ನುತ್ತಾರೆ ವಿದುಷಿ.ನಂದಿನಿ ನಾರಾಯಣ್. ಅವರು ತಮ್ಮ ಬಣ್ಣವಿರದ ಬದುಕು ಅಂಕಣದಲ್ಲಿ ಜರ್ಮನ್ ದೇಶದ ವಿಶೇಷ ಆಚರಣೆಗಳ ಕುರಿತು ವಿಶ್ಲೇಷಿಸಿದ್ದಾರೆ.

ಸಮಯ ಪ್ರಜ್ಞೆ ಎಂಬ ಶಬ್ಧಕ್ಕೆ ಈ ದೇಶದಿಂದಲೇ ಅರ್ಥ ಹುಟ್ಟಿಕೊಂಡಿಹುದೆಂಬಂತೆ ಈ ದೇಶಕ್ಕೆ ಬರುವ ಪ್ರವಾಸಿಗರಲ್ಲಿ ಅಥವಾ ನೆಲೆಸಿಹ ಜನಸಾಮಾನ್ಯರಲ್ಲಿ ಸಮಯ ಪ್ರಜ್ಞೆಯು ಜಾದುವಿನಂತೆ ಅವರನ್ನರಿಯದೆಯೇ ಅವರಲ್ಲಿ ಅಳವಡಿತವಾಗುವುದೇ ಈ ದೇಶದ ಜೀವನಕ್ರಮದಲ್ಲಿನ ಶಿಸ್ತು ಹಾಗೂ ಸುಂದರತೆ. ಹೌದು! ವಿಶ್ವದ ಎರಡನೆಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾದ ಮತ್ತು ವಿಶ್ವದ ಅಗ್ರ ಔದ್ಯೋಗಿಕ ದೇಶಗಳಲ್ಲಿ ಒಂದಾಗಿರುವ, ಶ್ರೀಮಂತ ಮತ್ತು ಶಿಸ್ತಿನ ದೇಶವೆಂದೊಡನೆ ವಿಶ್ವದ ನೋಟವೇ ಜೆರ್ಮನಿ ರಾಷ್ಟ್ರದತ್ತ. ಜರ್ಮನ್ ಫೆಡರಲ್ ಆಫೀಸ್ ಆಫ್ ಸ್ಟ್ಯಾಟಿಸ್ಟಿಕ್ಸ್ ನ ಮೂಲಗಳಂತೆ 2021ಆರಂಭದಲ್ಲಿ 83,2 ಮಿಲಿಯನ್ ಜನಸಂಖ್ಯೆ ಇರುವ ಜರ್ಮನಿಯ ಇತಿಹಾಸದ ಚಿತ್ರಣವನ್ನು ಹಿಂತಿರುಗಿ ನೋಡಿದಾಗ, ಸೋತುಗೆದ್ದ ಸಮರೋತ್ತರ ಇತಿಹಾಸದ ಕಥನಗಳು ಕಣ್ಣ ಕಟ್ಟಿ ಮನ ಮುಟ್ಟುವುದು. ಇಲ್ಲಿನ ಇತಿಹಾಸದ ಪುಟಗಳಲ್ಲದೆ ಈ ದೇಶದ ಸಂಸ್ಕೃತಿ ಮತ್ತು ಇಲ್ಲಿನ ಜನರ ಜೀವನಶೈಲಿಯ ದಿನಚರಿಗಳ ಪುಟಗಳಲ್ಲಿ ಕಣ್ಣುಗಳು ತನ್ನ ಹೆಜ್ಜೆಗಳನ್ನಿಟ್ಟಾಗ ಕಾಣುವ ಕಥನಗಳ ಮೆರವಣಿಗೆ ಮತ್ತಷ್ಟು ಅದ್ಭುತ ಮತ್ತು ಕುತೂಹಲಕರ. ಹಬ್ಬಗಳ ಆಚರಣೆ ವಿಜೃಂಭಣೆಯಿಂದ ಕೂಡಿದ್ದರೂ ಮತ್ತೊಂದು ಕ್ಷಣ " ನಿಶ್ಯಬ್ಧ ಜಾತ್ರೆ" ಎಂದೆನಿಸುವ ವಿಭಿನ್ನತೆ. ಲವಲವಿಕೆಗೆ ಅರ್ಥವನ್ನು ಹುಡುಕುವಂತಾಗಿಸುವ ಸಮಾಜದ ಬಣ್ಣವಿರದ ಬದುಕಿನ ವಾತಾವರಣವು ನಿಜಾರ್ ಅಹಮದ್ ರವರ "ಮತ್ತದೇ ಬೇಸರ" ಸಾಲುಗಳನ್ನು ಮೆಲಕು ಹಾಕುವಂತಾಗಿಸುವುದು, ಒಂದೊಂದು ನಿಮಿಷಕ್ಕಿರುವ ಬೆಲೆಯ ಪಾಠವನ್ನು ಕಲಿಸಿಕೊಡುವ ಜೀವನಕ್ರಮ, ಇವುಗಳನ್ನೆಲ್ಲಾ ಅಕ್ಷರ ಗೊಂಬೆಗಳ ಅಭಿನಯದೊಂದಿಗೆ ಚಿತ್ರಗಳನ್ನಾಗಿ ಬಿಂಬಿಸುವ ಪ್ರಯತ್ನವೇ ಈ " ಟೆರ್ಮಿನ್ ಕ್ಯಾಲೆಂಡರ್" .

ಜರ್ಮನಿಯ “ಟೆರ್ಮಿನ್ ಕ್ಯಾಲೆಂಡರ್” ನ ಪ್ರಾಮುಖ್ಯತೆ:
ಏನಿದು "ಟೆರ್ಮಿನ್ ಕ್ಯಾಲೆಂಡರ್" ಹೊಸ ಪದದಂತೆ ಎಂದು ಯೋಚಿಸುವ ಮುನ್ನ ಅರ್ಥವನ್ನು ತಿಳಿದು ಕೊಳ್ಳೋಣ. ಭಾರತದಲ್ಲಿ ಹಿಂದೂ ಸಂವತ್ಸರ ಆರಂಭವಾಗುವ ಯುಗಾದಿಯಿಂದ ನವ ಪಂಚಾಗವನ್ನು ಅನುಸರಿಸುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ. 1957 ರಲ್ಲಿ ಕ್ಯಾಲೆಂಡರ್ ಸುಧಾರಣೆಯ ಸಮಿತಿಯು ಇಡೀ ಭಾರತಕ್ಕೆ ಏಕೀಕೃತ ಕ್ಯಾಲೆಂಡರ್ ಸ್ಥಾಪಿಸಿರುವುದರ ಹೊರತಾಗಿಯೂ ಹಲವು ಸ್ಥಳೀಯ ವ್ಯತ್ಯಾಸಗಳು ಅಸ್ತಿತ್ವದಲ್ಲಿದ್ದು, ಆಡಳಿತಾತ್ಮಕ ಉದ್ದೇಶಗಳಿಗಾಗಿ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಯಲ್ಲಿ ಮುಂದುವರಿದಿದೆ. ಭಾರತ ದೇಶದಲ್ಲಿ ಜನಸಾಮಾನ್ಯರು ಕ್ಯಾಲೆಂಡರ್ ನ ವಾರಗಳು ಮತ್ತು ದಿನಾಂಕವನ್ನು ಅನುಸರಿಸಿ ಕೆಲಸ ಮತ್ತು ಜೀವನವನ್ನು ಸಾಗಿಸುವುದು ಸಹಜವೆನಿಸಿದರೆ, ಜೆರ್ಮನಿ ದೇಶದಲ್ಲಿ ಇದೇ ಕ್ಯಾಲೆಂಡರ್ ಜನರ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಹೊಸ ವರ್ಷದಾರಂಭವಾಗುವ ಎಂಟು-ಆರು ತಿಂಗಳುಗಳ ಮುಂಚಿತವಾಗಿಯೇ ಎಲ್ಲರ ಮನೆಯಲ್ಲಿ ಮುಂದಿನ ವರುಷದ ಕ್ಯಾಲೆಂಡರುಗಳು ಮೈನೆರೆದು ಮಿನುಗುತ್ತಿರುತ್ತದೆ. ಮದುವೆಗೆ ಮೂರು ದಿನಗಳ ಹಿಂದೆ ಮದರಂಗಿ ಹಚ್ಚುವ ಮದುಮಗಳಿಗೆ ಆರು ತಿಂಗಳಿಗೆ ಮುಂಚಿತವಾಗಿಯೇ ಕೈಗಳಿಗೆ ಮದರಂಗಿ ಹಾಕಿದರೆ ಇದೇನಿದೆಂದು ಆಶ್ಚರ್ಯಚಕಿತರಾಗುವಂತೆ, ಮುಂಬರುವ ವರುಷದ ಕಾಲೆಂಡರ್ ಡೈರಿಗಳಲ್ಲಿ ಅದರ ಹಿಂದಿನ ವರುಷದ 3-4 ನೇ ಮಾಸಗಳಿಂದಲೇ ನೇಮಕಾತಿಗಳ ಮದರಂಗಿಯನ್ನು ಹಾಕಲು ಆರಂಭವಾಗುತ್ತದೆ. ಆ ಡೈರಿ ಅಥವಾ ಕ್ಯಾಲೆಂಡರ್ ಅನ್ನು ಜರ್ಮನ್ ಭಾಷೆಯಲ್ಲಿ " ಟೆರ್ಮಿನ್ ಕ್ಯಾಲೆಂಡರ್" ಎಂದು ಕರೆಯಲ್ಪಡುವುದು. ಕನ್ನಡದಲ್ಲಿ ಅನುವಾದಿಸಿದರೆ "ನೇಮಕಾತಿ ಕ್ಯಾಲೆಂಡರ್ ಅಥವಾ ನೇಮಕಾತಿ ಪಂಚಾಗ" ಎಂದು ಕರೆಯಬಹುದು. ಜೆರ್ಮನಿಗೆ ನೆಲೆಸಲು ಬಂದ ಆರಂಭದಲ್ಲಿ ನನಗೂ ನಿಮ್ಮ ಹಾಗೆ ಇದು ಒಂದು ಸಾಮಾನ್ಯ ಕ್ಯಾಲೆಂಡರ್ ಡೈರಿ ಯಂತೆ ಕಂಡದ್ದು, ವಾರಗಳು ಉರುಳುತ್ತಾ ಬ್ರಹ್ಮನ ನಿಘಂಟಿನಂತೆ ಕಾಣತೊಡಗಿತು. ಗಂಡ ಹೆಂಡತಿಯರು ಅನುಸರಿಸಿಕೊಂಡು ಹೋಗುವುದಕ್ಕಿಂತ ಮುಖ್ಯವಾಗಿ, ಮಕ್ಕಳು ಪೋಷಕರ ಮಾತು ಅನುಸರಿಸುತ್ತಾರೋ ಇಲ್ಲವೋ, ಅಷ್ಟು ಏಕೆ ಅವರೇ ಅವರವರ ಇಚ್ಛೆಯಂತೆ ಇರುತ್ತಾರೋ ಇಲ್ಲವೋ ಆದರೆ ಎಲ್ಲರೂ ಜೀವನ ನಡೆಸುವುದು ಈ ಟೆರ್ಮಿನ್ ಕ್ಯಾಲೆಂಡರ್ನ ಅಪ್ಪಣೆಯಂತೆ.

"ಟೆರ್ಮಿನ್ ಕ್ಯಾಲೆಂಡರ್ ನ ಮಹತ್ವವನ್ನು ಮೊದಲಬಾರಿ ಅರಿತದ್ದು".
1995ರಲ್ಲಿ ಜೆರ್ಮನಿ ದೇಶಕ್ಕೆ ನಾನು ನೆಲೆಸಲು ಬಂದ ಆರಂಭಿಕ ಕಾಲದಲ್ಲಿ, ಒಮ್ಮೆ ನನ್ನ ನೃತ್ಯಶಾಲೆಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳಲ್ಲಿ, ಆ ವರ್ಷದ ಕೊನೆಯ ತಿಂಗಳು ಒಂದು ನೃತ್ಯ ಕಾರ್ಯಕ್ರಮವಿದೆ ಎಂದು, ಆಗಿನ್ನೂ ಮಾರ್ಚ್ ತಿಂಗಳು ಆಗಿದ್ದರಿಂದ ಅಭ್ಯಾಸ ಮಾಡಲು ಸಾಕಷ್ಟು ಸಮಯವಿದ್ದು ಆಸಕ್ತರು ತಮ್ಮ ಹೆಸರನ್ನು ಸೂಚಿಸಿ ಎಂದೊಡನೆ. ಒಮ್ಮೆಲೇ " ಆನ್ ವೆಲ್ಷೆ ಡಾಟ್ಟುಮ್ ಬಿಟ್ಟೆ" ಎಂಬ ಗುಂಪು ಧ್ವನಿ ಕೇಳಿತು. ಅಂದರೆ ಯಾವ ದಿನಾಂಕದಂದು ಎಂಬ ಪ್ರೆಶ್ನೆ ಉದ್ಭವಿಸಿತು. ನಾನೊಂದು ದಿನಾಂಕವನ್ನು ಹೇಳಿದ್ದೆ ತಡ, ಎಲ್ಲರೊ ತಮ್ಮ ತಮ್ಮ ಚೀಲಗಳತ್ತ ಓಡಿ ಡೈರಿಗಳನ್ನು ಹೊರತೆಗೆದು ನೋಡತೊಡಗಿದರು. ಒಂದಿಬ್ಬರು ನಮ್ಮ ಡೈರಿ ತಂದಿಲ್ಲ ಹಾಗಾಗಿ ಮುಂದಿನ ತರಗತಿಯಲ್ಲಿ ತಿಳಿಸುತ್ತೇವೆ ಎಂದರು. ನಾನು ಹಾಗೇ ಮಿಕಿ ಮಿಕಿ ಕಣ್ಣು ಮಿಟುಕಿಸಿಕೊಂಡು ನೋಡುತ್ತಿದ್ದಂತೆ ಒಬ್ಬಳು 11 ವರ್ಷದ ವಿದ್ಯಾರ್ಥಿ ಅವಳ ಕೈಯಲ್ಲೊಂದು ಡೈರಿ ಹಿಡಿದು ನನ್ನ ಮುಂದೆ ಹಾಜರಾಗಿ " ನೋಡಿ ನೀವು ದಿನಾಂಕವನ್ನು ತಿಳಿಸದೇ ತಿಂಗಳನ್ನು ಮಾತ್ರ ಸೂಚಿಸಿ ಸ್ಪಷ್ಟ ಮಾಹಿತಿಯನ್ನು ನೀಡಲಿಲ್ಲವಾದರೊ, ನನ್ನ ಟೆರ್ಮಿನ್ ಕ್ಯಾಲಂಡರ್ನ ಪ್ರಕಾರದಂತೆ ನಾನು ಡಿಸೆಂಬರ್ ತಿಂಗಳಿನಲ್ಲಿ ಹೊರ ರಾಜ್ಯದಲ್ಲಿರುತ್ತೇನೆ ಹಾಗಾಗಿ ನಾನು ಭಾಗವಹಿಸಲು ಸಾಧ್ಯವಿಲ್ಲ. ಮುಂದಿನ ಬಾರಿ ನಿಮ್ಮಿಂದ ಸಂಪೂರ್ಣ ಮಾಹಿತಿಯನ್ನು ನಿರೀಕ್ಷಿಸುತ್ತೇನೆ ದಾಂಕಶೂನ್ (ಧನ್ಯವಾದ) " ಎಂದು ಹೇಳಿ ತನ್ನ ಡೈರಿಯನ್ನು ತನ್ನ ಚೀಲದಲ್ಲಿಟ್ಟು ಬಂದು ತನ್ನ ಜಾಗದಲ್ಲಿ ನಿಂತುಕೊಂಡಳು. ನನಗೆ ಆ ಕ್ಷಣಕ್ಕೆ ಮಾತು ಬರದವಳಂತೆ ಸ್ತಬ್ಧಳಾಗಿ ನಿಂತುಬಿಟ್ಟಿದ್ದೆ. ಮುಂದೆ ಸಾಲಾಗಿ ಎಲ್ಲರ ಕೈಯಲ್ಲೂ ಟೆರ್ಮಿನ್ ಕ್ಯಾಲೆಂಡರ್ಗಳೇ ಕಾಣುತ್ತಿತ್ತು. 11 ವಯಸ್ಸಿಗೇ ಆ ಚಿಕ್ಕ ಹುಡುಗಿ ತನ್ನಲ್ಲಿ ಅಪಾಯಿಂಟ್ಮೆಂಟ್ ಇಲ್ಲ ಎಂದು ಹೇಳುವುದರ ಜೊತೆಗೆ ಸ್ಪಷ್ಟ ಮಾಹಿತಿ ನಿರೀಕ್ಷಿಸುತ್ತೇನೆ ಎಂದು ಹೇಳಿದ ದಿಟ್ಟತನದ ಅವಳ ನೇರ ಮಾತು ಗಳು ನನಗೆ " ಟೆರ್ಮಿನ್ ಕ್ಯಾಲೆಂಡರ್" ಇಲ್ಲಿನ ಜೀವನಶೈಲಿಯಲ್ಲಿ ಎಷ್ಟು ಮುಖ್ಯ ಪಾತ್ರವಹಿಸುತ್ತದೆ ಎಂಬುದನ್ನು ಮೊದಲಬಾರಿಗೆ ಅರ್ಥೈಸಿಕೊಟ್ಟಿತ್ತು. ಆ ವಿದ್ಯಾರ್ಥಿನಿಯ ಸಂಭಾಷಣೆಯಂತೆ ಇರುತ್ತದೆ ಸಾಮಾನ್ಯವಾಗಿ ಇಲ್ಲಿಯೇ ಹುಟ್ಟಿ ಬೆಳೆದ ಮಕ್ಕಳ ಹಾಗೂ ವ್ಯಕ್ತಿಗಳ ಸಂಭಾಷಣೆ. ಒಟ್ಟಿನಲ್ಲಿ ಇಲ್ಲಿ ಚಿಕ್ಕ ಮಕ್ಕಳಿನಿಂದ ಪ್ರತಿಯೊಬ್ಬರೂ ಟೆರ್ಮಿನ್ ಕ್ಯಾಲೆಂಡರ್ ಇಲ್ಲದೆ ಏನನ್ನೂ ನಿರ್ಧರಿಸಲಾರರು. ಬಹಳ ಆಶ್ಚರ್ಯವೆನಿಸುವುದು, ಸಹಜವಾಗಿ ಕುಟುಂಬದವರೆಲ್ಲಾ ಸೇರಿಕೊಂಡು ಊಟಕ್ಕೆ ಹೊರಗೆ ಹೋಗಲು ಸಹ ಪ್ರತಿಯೊಬ್ಬರೂ ತಮ್ಮ ಟೆರ್ಮಿನ್ ಕ್ಯಾಲೆಂಡರ್ ನಲ್ಲಿ ಒಮ್ಮೆ ಕಣ್ಣು ಹಾಯಿಸುತ್ತಾರೆ. ತಮ್ಮ ಕೆಲಸ ಕಾರ್ಯ, ತರಬೇತಿ, ಈಜು, ಸ್ನೇಹಿತರ ಭೇಟಿ, ಆಸ್ಪತ್ರೆ, ಟಿವಿ ನಲ್ಲಿ ನೋಡಬೇಕಿರುವ ಕಾರ್ಯಕ್ರಮದ ಸಮಯ ಇತ್ಯಾದಿ ತಮ್ಮ ಸಂಪೂರ್ಣ ದಿನದ, ವಾರದ, ತಿಂಗಳ ಮತ್ತು ವರ್ಷಪೂರ್ತಿಯ ದಿನಚರಿಯನ್ನೇ ಆ ಟೆರ್ಮಿನ್ ಕ್ಯಾಲೆಂಡರ್ನಲ್ಲಿ ನಿಗಧಿಪಡಿಸಿಟ್ಟುಕೊಂಡಿರುತ್ತಾರೆ. ನಮ್ಮಲ್ಲಿ ಈ ಡೈರಿಯನ್ನು ಅನುಸರಿಸುವ ಪದ್ಧತಿ ಇಲ್ಲವೆಂದಲ್ಲ ನಮ್ಮಲ್ಲಿಯೂ ಇರುವುದು. ಆದರೆ ಇಷ್ಟು ಕರಾರಾಗಿ ಒಂದು ಟಿವಿ ನೋಡಲು, ಕುಟುಂಬದ ಜೊತೆ ಒಂದು ಚಿಕ್ಕ ವಾಕಿಂಗ್ ಹೋಗಿಬರಲು ಸಹ ನೇಮಕಾತಿ ಮಾಡಿಕೊಳ್ಳುವಷ್ಟು ನಮ್ಮ ಸಾಮಾನ್ಯ ಜನರ ಜೀವನದಲ್ಲಂತೂ ಕಂಡುಬರುವುದಿಲ್ಲ.

"ಆಕ್ಟೋಬರ್‌ ಫೆಸ್ಟ್" ನ ಇತಿಹಾಸ
ಈಗ ಸೆಪ್ಟೆಂಬರ್ ಕಳೆದು ಆಕ್ಟೋಬರ್‌ ತಿಂಗಳು ಆರಂಭವಾದ್ದರಿಂದ ಇಲ್ಲಿನ ಕ್ಯಾಲೆಂಡರ್ ನಲ್ಲಿ ಗುರುತಿಸಲ್ಪಡುವ ಈ ತಿಂಗಳಿನ ವಿಶೇಷ ಆಚರಣೆಯ ಬಗ್ಗೆ ಬಣ್ಣಿಸದೇ ಇರಲಾಗದು. ಮ್ಯೂನಿಚ್‌ನಲ್ಲಿರುವ "ಆಕ್ಟೋಬರ್‌ಫೆಸ್ಟ್" ವಿಶ್ವದ ಅತಿದೊಡ್ಡ ಜಾನಪದ ಉತ್ಸವವಾಗಿದೆ. ಇದನ್ನು ಬವೇರಿಯನ್ ರಾಜಧಾನಿಯಲ್ಲಿ 1810 ರಿಂದ ವಾರ್ಷಿಕವಾಗಿ ಸೆಪ್ಟೆಂಬರ್ ಮಧ್ಯದಿಂದ ಅಕ್ಟೋಬರ್ ಆರಂಭದವರೆಗೆ ನಡೆಸಲಾಗುತ್ತದೆ ಮತ್ತು ಇದು ನಗರದ ಪ್ರಮುಖ ಆರ್ಥಿಕ ಅಂಶವಾಗಿದೆ.

ಅಕ್ಟೋಬರ್ 12, 1810 ರಂದು ಬವೇರಿಯಾದ ರಾಜಕುಮಾರ ಲುಡ್ವಿಗ್ ಮತ್ತು ರಾಜಕುಮಾರಿ ಥೆರೆಸ್ ಅವರ ವಿವಾಹದ ಸಂದರ್ಭದಲ್ಲಿ, ಅಕ್ಟೋಬರ್ 17 ರಂದು ಕುದುರೆ ಓಟ ಸೇರಿದಂತೆ ಹಲವಾರು ಖಾಸಗಿ ಮತ್ತು ಸಾರ್ವಜನಿಕ ಆಚರಣೆಗಳು ಮ್ಯೂನಿಚ್‌ನಲ್ಲಿ ನಡೆದವು. ಇದನ್ನು ಥೆರೆಸಿನ್ವೀಸ್ ("ಥೆರೆಸ್ ಗ್ರೀನ್") ಎಂದು ಕರೆಯಲಾಯಿತು. ಮುಂದಿನ ವರ್ಷ ಈ ಓಟವನ್ನು ರಾಜ್ಯ ಕೃಷಿ ಮೇಳದೊಂದಿಗೆ ಸಂಯೋಜಿಸಲಾಯಿತು. ಮೊದಲು 15 ನೇ ಶತಮಾನದಲ್ಲಿ ಕಾರ್ಲ್‌ಸ್ಟರ್ ಮುಂದೆ ನಡೆಯಿತು ಮತ್ತು ನಂತರ ಜಾಕೋಬಿಡಲ್ಟ್‌ನ ಭಾಗವಾಯಿತು. (" ಆಂಡ್ರಿಯಾಸ್ ಮೈಕೆಲ್ ಡಲ್" ಎಂಬ ರಾಷ್ಟ್ರೀಯ ಕಾವಲುಗಾರನ ಪ್ರಮುಖ ಪಾತ್ರದಲ್ಲಿ, ವಧು ಮತ್ತು ವರನ ಮುಂದೆ ಸಾರ್ವಜನಿಕ ಗೌರವಕ್ಕಾಗಿ ಪ್ರದರ್ಶನ ಮತ್ತು ಪ್ರದರ್ಶನದೊಂದಿಗೆ ಕುದುರೆ ಓಟವನ್ನು ಪ್ರಸ್ತಾಪಿಸಲ್ಪಟ್ಟಿತು, ಈ ಯೋಜನೆಗೆ ಕಾರಣವಾದ ಮೂಲ ಕಲ್ಪನೆಯು ವೇತನ ತರಬೇತುದಾರ ಮತ್ತು ನ್ಯಾಷನಲ್ ಗಾರ್ಡ್ "ಫ್ರಾಂಜ್ ಬಾಮ್‌ಗಾರ್ಟ್ನರ್" ಅವರ ಕಾಯ್ದೆಯಿಂದ ಬಂದಿದೆ ಎಂದು ಹಸ್ತಾಂತರಿಸಲಾಗಿದೆ. ಆದಾಗ್ಯೂ, ಹಬ್ಬದ ಮೂಲದ ಬಗ್ಗೆ ಈ ಊಹೆಯು ವಿವಾದಾಸ್ಪದವಾಗಿದೆ.)

ಬವೇರಿಯಾ ನೆಪೋಲಿಯನ್ ಯುದ್ಧಗಳಲ್ಲಿ ಭಾಗಿಯಾಗಿದ್ದರಿಂದ 1813 ರಲ್ಲಿ ಆಕ್ಟೋಬರ್ ಫೆಸ್ಟ್ ರದ್ದಾದ ನಂತರ ಮತ್ತೆ ಹಬ್ಬವು 1814 ರಿಂದ ವರ್ಷದಿಂದ ವರ್ಷಕ್ಕೆ ಬೆಳೆಯಿತು. ಮರಗಳನ್ನು ಹತ್ತುವುದು, ಬೌಲಿಂಗ್ ಗಲ್ಲಿಗಳು ಮತ್ತು ಸ್ವಿಂಗ್‌ಗಳನ್ನು ರೇಸ್‌ಕೋರ್ಸ್‌ಗೆ ಸೇರಿಸಲಾಯಿತು. 1818 ರಲ್ಲಿ ಮೊದಲ ಏರಿಳಿಕೆಯ ಅತ್ಯಂತ ಎತ್ತರದ ಆಟಸ್ಥಂಬವನ್ನು ಸ್ಥಾಪಿಸಲಾಯಿತು. ಗೆಲ್ಲಲು ಪಿಂಗಾಣಿ, ಬೆಳ್ಳಿ ಮತ್ತು ಆಭರಣಗಳು ಇದ್ದರಿಂದ ಹಲವಾರು ಲಾಟರಿ ಟಿಕೆಟ್ಗಳು ನಿರ್ದಿಷ್ಟವಾಗಿ ಬಡ ನಗರವಾಸಿಗಳನ್ನು ಆಕರ್ಷಿಸಿದವು. 1819 ರಲ್ಲಿ ಮ್ಯೂನಿಚ್ ನಗರದ ಪಿತೃಗಳು ಉತ್ಸವದ ನಿರ್ವಹಣೆಯನ್ನು ವಹಿಸಿಕೊಂಡರು. ಅಂದಿನಿಂದ ಆಕ್ಟೋಬರ್‌ ಫೆಸ್ಟ್ ಅನ್ನು ಪ್ರತಿ ವರ್ಷವೂ ಯೋಜಿಸಿದಂತೆ ಆಚರಿಸಲ್ಪಟ್ಟಿತು. ಬವೇರಿಯಾದ ಸುಮಾರು 20 ಮೀಟರ್ ಎತ್ತರದ ಪ್ರತಿಮೆಯು 1850 ರಿಂದ ಹಬ್ಬದ ಹುಲ್ಲುಗಾವಲಿನಲ್ಲಿ ಗೋಚರಿಸಿದೆ. 1853 ರಲ್ಲಿ ಬವೇರಿಯಾದ ತಪ್ಪಲಿನಲ್ಲಿರುವ ಹಾಲ್ ಆಫ್ ಫೇಮ್ ಪೂರ್ಣಗೊಂಡಿತು. ಮುಂದಿನ ವರ್ಷಗಳಲ್ಲಿ ಕೆಲವು ಹಬ್ಬಗಳನ್ನು ರದ್ದುಗೊಳಿಸಲಾಯಿತು. ಇದಕ್ಕೆ ಕಾರಣವೆಂದರೆ 1854 ಮತ್ತು 1873 ರಲ್ಲಿ ಎರಡು ಕಾಲರಾ ಸಾಂಕ್ರಾಮಿಕ ರೋಗಗಳು ಅಲ್ಲದೆ, 1866 ರಲ್ಲಿ ಆಸ್ಟ್ರೋ-ಪ್ರಶ್ಯನ್ ಯುದ್ಧ ಮತ್ತು 1870 ರಲ್ಲಿ ಫ್ರಾಂಕೋ-ಜರ್ಮನ್ ಯುದ್ಧ.

19 ನೇ ಶತಮಾನದ ಅಂತ್ಯದ ವೇಳೆಗೆ, ಆಕ್ಟೋಬರ್‌ ಫೆಸ್ಟ್ ಹೆಚ್ಚು ಜನಪ್ರಿಯವಾದ ಹಬ್ಬವಾಗಿ ಈಗ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇದನ್ನು ಸೆಪ್ಟೆಂಬರ್‌ನ ಕೊನೆಯ ದಿನಗಳಿಗೆ ಮುಂದೂಡಲಾಯಿತು ಮತ್ತು ವಿಸ್ತರಿಸಲಾಯಿತು. ಅಂದಿನಿಂದ, ಅಕ್ಟೋಬರ್‌ನಲ್ಲಿ ಆಕ್ಟೊಬರ್‌ಫೆಸ್ಟ್ ಸಾಮಾನ್ಯವಾಗಿ ಕೊನೆಯ ವಾರಾಂತ್ಯದಲ್ಲಿ ಬರುತ್ತದೆ. 1914 ರಿಂದ 1918 ರವರೆಗೆ ಮೊದಲ ವಿಶ್ವಯುದ್ಧದ ಕಾರಣ ಉತ್ಸವವನ್ನು ರದ್ದುಗೊಳಿಸಲಾಯಿತು, 1919 ಮತ್ತು 1920 ರಲ್ಲಿ ಸಣ್ಣ "ಶರತ್ಕಾಲದ ಹಬ್ಬ" ವನ್ನು ಮಾತ್ರ ಆಚರಿಸಲಾಯಿತು. 1923 ಮತ್ತು 1924 ರ ಅಂತ್ಯದಲ್ಲಿ ಹಣದುಬ್ಬರ ಮತ್ತು ಕರೆನ್ಸಿ ಬದಲಾವಣೆಯ ಕಾರಣದಿಂದಾಗಿ ಆಕ್ಟೋಬರ್ ಫೆಸ್ಟ್ ಇರಲಿಲ್ಲ ಹಾಗೂ 1939 ರಿಂದ 1945 ರವರೆಗೆ ಎರಡನೇ ಮಹಾಯುದ್ಧದ ಸಮಯದಲ್ಲಿ ಯಾವುದೇ ಹಬ್ಬ ಇರಲಿಲ್ಲ. 1946 ರಿಂದ 1948 ರವರೆಗಿನ ಯುದ್ಧಾನಂತರದ ಅವಧಿಯಲ್ಲಿ "ಶರತ್ಕಾಲದ ಹಬ್ಬ" ವನ್ನು ಆಚರಿಸಲಾಗಿತ್ತು. ಯುದ್ಧದ ನಂತರ ಮೊದಲ ಆಕ್ಟೋಬರ್ ಫೆಸ್ಟ್ ಸೆಪ್ಟೆಂಬರ್ 1949 ರಲ್ಲಿ ನಡೆಯಿತು.

20 ನೇ ಶತಮಾನದ ಅಂತ್ಯದ ವೇಳೆಗೆ, 1818 ಆಹಾರ ಮತ್ತು ಪಾನೀಯ ಬೂತ್‌ಗಳನ್ನು ಪರಿಚಯಿಸಲಾಯಿತು. ಬೂತ್‌ಗಳು ಒಳಗಿನ ಬಾಲ್ಕನಿಗಳು ಮತ್ತು ಬ್ಯಾಂಡ್‌ಸ್ಟ್ಯಾಂಡ್‌ಗಳೊಂದಿಗೆ ಪ್ಲೈವುಡ್‌ನಿಂದ ಮಾಡಿದ ದೊಡ್ಡ ಬಿಯರ್ ಹಾಲ್‌ಗಳಾಗಿ ಅಭಿವೃದ್ಧಿ ಹೊಂದಿದವು. ಪ್ರತಿಯೊಂದು ಮ್ಯೂನಿಚ್ ಬ್ರೂವರ್‌ಗಳು ತಾತ್ಕಾಲಿಕ ರಚನೆಗಳಲ್ಲಿ ಒಂದನ್ನು ನಿರ್ಮಿಸುತ್ತವೆ, 6,000 ಆಸನ ಸಾಮರ್ಥ್ಯಗಳನ್ನು ಹೊಂದಿವೆ. ಮ್ಯೂನಿಚ್‌ನ ಮೇಯರ್ ಉತ್ಸವವನ್ನು ತೆರೆಯಲು ಮೊದಲ ಒಂದು ಲೀಟರ್ ಬೀಯರ್ ಮಗ್ ಅನ್ನು ಬವೇರಿಯನ್ ಉದ್ಗಾರದೊಂದಿಗೆ, "ಓ'ಜಾಫ್ಟ್!" ಎಂದು ತಟ್ಟಿ, „ಆಕ್ಟೋಬರ್ ಫೆಸ್ಟ್ ಅನ್ನು ತೆರೆಯಲಾಗಿದೆ“ ಎಂದು ಘೋಷಿಸಲಾಗುತ್ತದೆ. ಆಕ್ಟೋಬರ್ ಫೆಸ್ಟ್‌ನಲ್ಲಿ ಒಟ್ಟು ಬಿಯರ್ ಬಳಕೆ 75,800 ಹೆಕ್ಟೊಲಿಟರ್‌ಗಳಷ್ಟು (ಸುಮಾರು 2 ಮಿಲಿಯನ್ ಗ್ಯಾಲನ್‌ಗಳು). ಬಿಯರ್ ಮಾರಾಟ ಬಂಡಿಗಳ ಮತ್ತು ಫ್ಲೋಟ್‌ಗಳ ಜೊತೆಗೆ ಜಾನಪದ ವೇಷಭೂಷಣಗಳನ್ನು ಹೊಂದಿರುವ ಮೆರವಣಿಗೆಗಳಲ್ಲಿ ಬ್ರೂವರಿಗಳನ್ನು ಪ್ರತಿನಿಧಿಸಲಾಗುತ್ತದೆ. ಇತರ ಮನರಂಜನೆಯು ಆಟಗಳು, ಮನೋರಂಜನಾ ಸವಾರಿಗಳು, ಸಂಗೀತ ಮತ್ತು ನೃತ್ಯವನ್ನು ಒಳಗೊಂಡಿದೆ. ಆಕ್ಟೋಬರ್ ಫೆಸ್ಟ್ ಪ್ರತಿ ವರ್ಷ ಆರು ದಶಲಕ್ಷಕ್ಕೂ ಹೆಚ್ಚು ಜನರನ್ನು ಸೆಳೆಯುತ್ತದೆ, ಅವರಲ್ಲಿ ಹೆಚ್ಚಿನವರು ಪ್ರವಾಸಿಗರು. ಈ ಜಾನಪದ ಹಬ್ಬದ ವಿಶೇಷತೆಯೇ ಮದ್ಯಪಾನೀಯವಾದ ಒಂದು ಲೀಟರ್ ಅಳತೆಯಷ್ಟು "ಬಿಯೆರ್" ಮಾರಾಟ ಮತ್ತು ಸೇವನೆ. ಪಿಂಗಾಣಿ ಮಗ್ ಗಳನ್ನು ಈ ಹಬ್ಬದ ಸಾಂಪ್ರದಾಯಿಕ ಪದ್ಧತಿಯಾಗಿ ಬಳಸುವುದು ವಾಡಿಕೆಯಲ್ಲಿದೆ. ಮದ್ಯಪಾನೀಯವಾದ ಬಿಯರ್ ಮತ್ತು ಜರ್ಮನ್ ಆಹಾರವನ್ನು ಒಳಗೊಂಡಿರುವ ಈ ಜನಪ್ರಿಯ ಆಚರಣೆಗಳು ಬವೇರಿಯಾದ "ಗೆಮ್ಯೂಟ್ಲಿಶ್" ( ಆರಾಮದಾಯಕ) ಸೌಹಾರ್ದತೆಯ ಪುನರುತ್ಪಾದನೆಯ ಪ್ರಯತ್ನವಾಗಿದೆ.

"ಆಕ್ಟೋಬರ್‌ ಫೆಸ್ಟ್" ನ ವಿಶೇಷ ಉಡುಗೆತೊಡುಗೆಗಳು:
ಈ ಜಾನಪದ ಉತ್ಸವದಲ್ಲಿ ವಿಶೇಷವಾದ ಉಡುಗೆತೊಡಿಗೆಗಳನ್ನು ಧರಿಸಲಾಗುತ್ತದೆ. ಗಂಡಸರು ಲೆದರ್ ಪ್ಯಾಂಟ್, ಸೊಂಟದಲ್ಲೊಂದು ಸುಂದರ ಕಲಾ ವಿನ್ಯಾಸದೊಂದಿಗೆ ಅಲಂಕೃತಗೊಂಡ ಲೆದರ್ ಪಟ್ಟಿ ಮತ್ತು ಲೆದರ್ ಶೊ ಗಳನ್ನು ಧರಿಸಿಕೊಂಡು ಬಂದರೆ, ಹೆಂಗಸರು " ಡ್ರಿಂಡೆಲ್" ಎಂಬ ಅತ್ಯಂತ ಸಾಂಪ್ರದಾಯಿಕ ಸುಂದರ ಗಿಡ್ಡ ಅಥವಾ ಉದ್ದನೆಯ ಫ್ರಾಕ್ ಮಾದರಿಯ ಬಟ್ಟೆಯನ್ನು ಧರಿಸುತ್ತಾರೆ. ಈ ವಿಶೇಷವಾದ ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಈ ಹಬ್ಬದ ಸುಂದರತೆಗೆ ಮೆರಗುನೀಡುತ್ತದೆ. ಈ ಡ್ರಿಂಡೆಲ್ ಒಂದು ವಿಶೇಷ ಸಂದೇಶವನ್ನು ನೀಡುವಂತಹದ್ದು. ಒಬ್ಬ ಮಹಿಳೆ ತನ್ನ ಡ್ರಿಂಡೆಲ್ ಏಪ್ರನ್ ಅನ್ನು ಹೇಗೆ ಕಟ್ಟುತ್ತಾಳೆ ಎಂಬುದು ಬಹಳಷ್ಟು ಹೇಳುತ್ತದೆ. ವಿಶೇಷವಾಗಿ ನೀವು ಪ್ರೀತಿಯನ್ನು ಹುಡುಕುತ್ತಿದ್ದರೆ ಗಮನ ಕೊಡಿ! ನೀವು ಏಪ್ರನ್ ರಿಬ್ಬನ್ ಅನ್ನು ಎಡಕ್ಕೆ ಕಟ್ಟಿದರೆ, ಅದು ನೀವು ಸಿಂಗಲ್ ಎಂದು ಸೂಚಿಸುತ್ತದೆ. ಏಪ್ರನ್ ರಿಬ್ಬನ್ ಅನ್ನು ಬಲಕ್ಕೆ ಕಟ್ಟಿದರೆ ಈಗಾಗಲೇ ನೀವು ನಿಮ್ಮ ಪ್ರಿಯಕರನನ್ನು ಆಯ್ಕೆಮಾಡಿಕೊಂಡಿದ್ದೀರೆಂದು. ಮಧ್ಯಕ್ಕೆ ಕಟ್ಟಲಾಗಿದ್ದರೆ ಅವಳು ಇನ್ನು ಬಹಳ ಚಿಕ್ಕ ಹುಡುಗಿಯೆಂದು. ನೀವೇನಾದರೂ ಈ ಜಾನಪದ ಉತ್ಸವಕ್ಕೆ ಬಂದದ್ದೇ ಆದರೆ ಹುಡುಗರು ತಪ್ಪದೇ ಏಪ್ರನ್ ರಿಬ್ಬನ್ ಅನ್ನು ಗಮನಿಸಿ. ಹಾಗಾದರೆ ನಮ್ಮ ಹೆಣ್ಣು ಮಕ್ಕಳು ನೀವು ಯಾವ ಕಡೆಗೆ ಏಪ್ರನ್ ರಿಬ್ಬನ್ ಅನ್ನು ಕಟ್ಟಿಕೊಳ್ಳುತ್ತೀರೆಂದು ಯೋಚಿಸಿಟ್ಟುಕೊಳ್ಳಿ.

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...