ನಿವೃತ್ತಿಯ ನಂತರ ಬರವಣಿಗೆಯೇ ನನಗೆ ಆಸರೆಯಾಯಿತು

Date: 06-01-2022

Location: ಬೆಂಗಳೂರು


‘ಅಕಾಡೆಮಿಕ್ ವಲಯದ ನಿರ್ಲಕ್ಷ್ಯವನ್ನು ನಾನೂ ನಿರ್ಲಕ್ಷಿಸಿ ನನ್ನ ಕೆಲಸದಲ್ಲಿ ತೊಡಗಿಕೊಂಡಿದ್ದೆ. ನಿವೃತ್ತಿಯ ನಂತರ ಮುಂದೇನು ಎಂಬ ಪ್ರಶ್ನೆ ಉದ್ಭವಿಸಿದಾಗ ಬರವಣಿಗೆಯೇ ನನಗೆ ಆಸರೆಯಾಯಿತು’ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರು ತಮ್ಮ ಪತ್ರತಂತು ಮಾಲಾ ಅಂಕಣದಲ್ಲಿ ನಿವೃತ್ತಿಯ ನಂತರ ತಾವು ತೊಡಗಿಸಿಕೊಂಡ ಸಾಹಿತ್ಯಕ್ಷೇತ್ರದ ಸ್ಪಂದನೆಗಳ ಕುರಿತು ವಿಶ್ಲೇಷಿಸಿದ್ದಾರೆ.

ಅಕಾಡೆಮಿಕ್ ವಲಯದ ನಿರ್ಲಕ್ಷ್ಯವನ್ನು ನಾನೂ ನಿರ್ಲಕ್ಷಿಸಿ ನನ್ನ ಕೆಲಸದಲ್ಲಿ ತೊಡಗಿಕೊಂಡಿದ್ದೆ. ನಿವೃತ್ತಿಯ ನಂತರ ಮುಂದೇನು ಎಂಬ ಪ್ರಶ್ನೆ ಉದ್ಭವಿಸಿದಾಗ ಬರವಣಿಗೆಯೇ ನನಗೆ ಆಸರೆಯಾಯಿತು. ಪತ್ರಿಕಾ ವ್ಯವಸಾಯದಿಂದಾಗಿ ಪತ್ರಿಕೆಯ ಸಂಪಾದಕೀಯ ಮೊದಲಾದ ಬರಹಗಳು, ಪುಸ್ತಕ ವಿಮರ್ಶೆ/ಸಿನಿಮಾ-ನಾಟಕ ವಿಮರ್ಶೆಗಳು ಹೊರತು ಬೇರೇನೂ ಬರೆಯಲು ಸಾಧ್ಯವಾಗಿರಲಿಲ್ಲ. ಶೆಕ್ಸ್ ಪಿಯರ್, ಟಾಲಸ್ಟಾಯ್, ಹೆನ್ರಿ, ಲಾರೆನ್ಸ್ ಮೊದಲಾದವರ ಮಹತ್ವದ ಕೃತಿಗಳ ಅನುವಾದ, ಕನ್ನಡ ಕಾದಂಬರಿ ಪರಂಪರೆ ಗುರುತಿಸುವ ಸಂಪ್ರಬಂಧ ಹೀಗೆ ಹಲವಾರು ಯೋಜನೆಗಳು ತಲೆಯಲ್ಲಿದ್ದವು. ಬರೆಯುವುದಂತೂ ಸರಿ, ಬರೆದುದನ್ನು ಪ್ರಕಟಿಸುವವರು ಯಾರು? ಆಗ ನನ್ನ ಕೈಹಿಡಿದವರು ‘ಅಂಕಿತ' ಪ್ರಕಾಶನದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಮತ್ತು ಶ್ರೀಮತಿ ಪ್ರಭಾ.

ಓ.ಹೆನ್ರಿಯ ಆಯ್ದ ಕಥೆಗಳನ್ನು ಅನುವಾದಿಸಿ ಅವರ ಕೈಯ್ಯಲ್ಲಿಟ್ಟೆ. ಅದನ್ನು ಪ್ರಕಟಿಸಿದರು. ಓದುಗರಿಂದ, ಮಿತ್ರರಿಂದ ಬಂದ ಪ್ರತಿಕ್ರಿಯೆಗಳು ಪ್ರೋತ್ಸಾಹದಾಯಕವಾಗಿದ್ದುದು ನನ್ನ ಬರವಣಿಗೆಯ ಬದುಕಿಗೆ ಭರಪೂರ ತಂದಿತ್ತು. ಬಹುಶ: ನಿವೃತ್ತಿಯ ನಂತರ ಕನ್ನಡ ಪತ್ರಕರ್ತರ್ಯಾರೂ ನನ್ನಷ್ಟು ಬರೆದಿರಲಾರರು ಎಂದರೆ ಅದು ಅಹಂಕಾರವಲ್ಲ, ವಿನಮ್ರತೆಯ ತಪ್ಪೊಪ್ಪಿಗೆ(ಕನ್ಫೆಷನ್ ಸ್ಟೇಟ್ಮೆಂಟ್). ನಿವೃತ್ತಿಯ ನಂತರದ ಈ ಇಪ್ಪತ್ತೆರಡು ವರ್ಷಗಳಲ್ಲಿ ಪ್ರಕಟವಾಗಿರುವ ನನ್ನ ಕೃತಿಗಳ ಸಂಖ್ಯೆ ನಲವತ್ತಕ್ಕೂ ಹೆಚ್ಚು. ಹೀಗೆ ನನಗೆ ಶಕ್ತಿ ತುಂಬಿದ ಬಾಳ ಸಂಗಾತಿ ಶ್ರೀಮತಿ ಸರಳಾ, ಓದುಗರು ಮತ್ತು ಪ್ರಕಾಶಕರಿಗೆ ನಾನು ಆಭಾರಿಯಾಗಿದ್ದೇನೆ. ಪತ್ರಿಕಾ ವ್ಯವಸಾಯದಲ್ಲಿ, ಇಂದಿನ ಧಾವಂತದ, ಕೊರಳುಕೊಯ್ಯುವ ಸ್ಪರ್ಧೆಯ. ಕೊರಳುಹಿಚುವ ವ್ಯವಸ್ಥೆಯ ಕಾಲದಲ್ಲೂ ಪತ್ರಕರ್ತನಾಗಿ ಸಕ್ರಿಯರಾಗಿದ್ದುಕೊಂಡೂ ನಿರರ್ಗಳವಾಗಿ-ಪ್ರೊಲಿಫಿಕ್ ಆಗಿ-ಶ್ರೀ ಜೋಗಿಯವರು ಬರೆಯುತ್ತಿರುವುದು ನನ್ನ ಅರಿವಿಗೆ ಬಂದಿದೆ. ಸಂತೋಷಪಟ್ಟಿದ್ದೇನೆ. ಜೋಗಿಯವರೇ, ಇದು ನನ್ನ ಅಭಿಮಾನದ ನುಡಿ.

ಅನೇಕೆ ಮಂದಿ ಮಿತ್ರರು, ಅಭಿಮಾನಿಗಳು ನನ್ನ ಕೃತಿಗಳ ಬಗ್ಗೆ ಪತ್ರಮುಖೇನ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅವು:

ಮಾನ್ಯ ಜಿ.ಎನ್.ರಂಗನಾಥ ರಾವ್
ಅವರಿಗೆ,

ನಮಸ್ಕಾರ,
ನಿಮ್ಮ ‘ಮಹಾಪ್ರಸ್ಥಾನ' ಹಾಗೂ ‘ಓ ಹೆನ್ರಿಯ ಕಥೆಗಳು' ಇಂದು ಮಂಗಳೂರಿನಲ್ಲಿ ಕೊಂಡೆ. ಅದ್ಭುತವಾಗಿ ಪ್ರಕಟವಾಗಿದೆ. ತಕ್ಷಣ ನಿಮಗೆ ತಿಳಿಸಬೇಕು ಎನಿಸಿತು. ಹಾಗಾಗಿ ಈ ಪತ್ರ.

ಹೇಗಿದ್ದೀರಿ ಸರ್,
ನಾನು ಪ್ರಜಾವಾಣಿಯಿಂದ ದೂರ ಸರಿದು ಈಗ ‘ಈ’ ಟೀವಿಗಾಗಿ ಮಂಗಳೂರಿನಲ್ಲಿದ್ದೇನೆ. ಮಂಗಳೂರು ನನ್ನ ಆಯ್ಕೆ. ಇನ್ನು ಕೆಲ ವರ್ಷಗಳು ಇಲ್ಲಿಯೇ ಇರುವ ಬಯಕೆ.

‘ಪ್ರಜಾವಾಣಿ' ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರೂ ಕೊನೆಗಾಲದಲ್ಲಿ ಪ್ರಜಾವಾಣಿಯೇ ನನ್ನ ಕೈ ಬಿಟ್ಟಿತು. ನನ್ನ ಬಡ್ತಿ ತಡೆಹಿಡಿದದ್ದು ನಿಜಕ್ಕೂ ಬೇಸರ ತರಿಸಿತು. ಹಾಗಾಗಿ ಪ್ರಜಾವಾಣಿಗೆ ವಿದಾಯ ಪತ್ರ ಬರೆಯಬೇಕಾಯಿತು. ಇದು ನನಗೆ ಮೇಲ್ನೋಟಕ್ಕೆ ಕಂಡು ಬಂದ ಕಾರಣಗಳು. ಆದರೆ ನನ್ನ ಬಡ್ತಿ ತಡೆಹಿಡಿಯುವಲ್ಲಿ ಯಾವ್ಯಾವ ಕಾರಣಗಳಿವೆ ಎಂಬುದು ನಿಮಗೆ ಗೊತ್ತು. ಒತ್ತಡದ ದೃಷ್ಟಿಯಿಂದ ಪ್ರಜಾವಾಣಿಗೆ ಹೋಲಿಸಿದರೆ ‘ಈ’ ಟೀವಿ ಕೆಲಸ ವಾಸಿ. ಮಾಧ್ಯಮ ಬದಲಾದ್ದರಿಂದ ಒಂದಿಷ್ಟು ಹೊಸತನವೂ ಇದೆ.

ನಿಮ್ಮ ನಿವೃತ್ತ ಬದುಕು ಚಟುವಟಿಕೆಯಿಂದಲೇ ಕೂಡಿದೆ ಎಂಬುದು ಹೊರಬರುತ್ತಿರುವ ಪುಸ್ತಕಗಳಿಂದ ಗೊತ್ತಾಗುತ್ತಿದೆ.
ವಂದನೆಗಳೊಂದಿಗೆ,
ಜಿ.ಎನ್ ಮೋಹನ್
* * * * * *
ಡಾ.ಎಚ್.ಕೆ.ರಂಗನಾಥ್

01-2-02

ಸನ್ಮಾನ್ಯ ರಂಗನಾಥ ರಾವ್ ಅವರಲ್ಲಿ ವಿಜ್ಞಾಪನೆಗಳು,
ತಾವು ಕೃಪೆಮಾಡಿ ಕಳುಹಿಸಿದ ‘ಓ ಹೆನ್ರಿ ಕತೆಗಳು' ನನ್ನ ಕೈ ಪುಸ್ತಕವಾಗಿ ಓದಿಸಿಕೊಳ್ಳುತ್ತಿದೆ. ಸೊಗಸಾದ ತಿಳಿಗನ್ನಡದಲ್ಲಿ "ಮನಂಬಗುವಂತೆ" ಆತನ ಕತೆಗಳನ್ನು ಕನ್ನಡಕ್ಕೆ ತಂದು ಉಪಕಾರ ಮಾಡಿದ್ದೀರಿ-ಭಾಷೆಗೂ-ನಾಡಿಗೂ ಅದು ಮಹದುಪಕಾರ.
ಎದೆತುಂಬಿ ತಮ್ಮನ್ನು ಅಭಿನಂದಿಸುತ್ತಿದ್ದೇನೆ.

ನಮಸ್ಕಾರ
ತಮ್ಮವ
ರಂಗನಾಥ್

ಶೇಕ್ಸ್ ಪಿಯರನ ವಿಶ್ವಮಾನ್ಯ ನಾಟಕಗಳಲ್ಲಿ ಒಂದು ‘ರೋಮಿಯೋ ಜೂಲಿಯಟ್', ಮತ್ತೊಂದು ‘ಆ್ಯಂಟನಿ ಕ್ಲಿಯೋಪಾತ್ರ’ ಎರಡೂ ವಿಭಿನ್ನ ಕಾರಣಗಳಿಗಾಗಿ ವಿಶಿಷ್ಟ ಬಗೆಯ ನಾಟಕಗಳು. ಆದರೆ ಶೇಕ್ಸ್ ಪಿಯರ್ ನಾಟಕಗಳ ಜಾಗತಿಕ ವಿಮರ್ಶೆ ಇವೆರಡನ್ನು ಅವನ ಮೂರನೆ ರಿಚರ್ಡ್, ಮ್ಯಾಕ್ಬತ್, ಕಿಂಗ್ ಲಿಯರ್, ಹ್ಯಾಮ್ಲೆಟ್, ಒಥೆಲೊ, ಟೆವಲ್ತ್ ನೈಟ್, ಟೆಂಪೆಸ್ಟ್ ಮೊಲಾದವುಗಳ ಮುಂದೆ ಗಂಭಿರವಾಗಿ ಪರಿಗಣಿಸಿಲ್ಲ. ‘ರೋಮಿಯೋ ಜೂಲಿಯೆಟ್' ನಾಟಕವನ್ನು ಬಹುತೇಕ ಒಂದು ಸಾಧಾರಣ ಪೌಗಂಡ ಪ್ರೇಮ ಕಥೆ ಎಂದೇ ಪರಿಗಣಿಸಿರುವಂತೆ ತೋರುತ್ತದೆ. ಕನ್ನಡದಲ್ಲೂ ಹಾಗೇ ತೋರುತ್ತದೆ,ಯಾವುದೇ ಪ್ರೇಮ ಕಥೆಯನ್ನೂ ಮತ್ತೊಂದು ಭಾಷೆಗೆ ಅಳವಡಿಸಿಕೊಳ್ಳಲು ಕಷ್ಟಪಡಬೇಕಿಲ್ಲ. ಪೂರಕವಾಗಿ ಸ್ಥಳೀಯ ಅನುಭವ ದ್ರವ್ಯಗಳು ಬೆಂಬಲಕ್ಕಿರುತ್ತವೆ.

‘ರೋಮಿಯೋ ಜೂಲಿಯೆಟ್'ನ ಕನ್ನಡ ಅವತರಣಿಕೆಗಳು ಹಲವಾರು ಬಂದಿವೆ- ‘ಕಮಲಾಕ್ಷ ಪದ್ಮಗಂಧಿಯರ ಕಥೆ'(ಲೇ:ವೆಂಕಟೇಶ ಭೀಮರಾವ್), ‘ರಾಮವರ್ಮ ಲೀಲಾವತಿ'(ಲೇ:ಎ.ವಿ.ವರದಾಚಾರ್), ‘ರಾಮವರ್ಮಲೀಲಾವತಿ ಚರಿತ್ರೆ'(ಲೇ: ಆನಂದರಾವ್), ‘ರಾಮವರ್ಮ ಲೀಲಾವತಿ ಚರಿತ್ರೆ'(ಲೇ:ಜಯರಾಯಾಚಾರ್ಯ), ರೋಮಿಯೋ ಅಂಡ್ ಜೂಲಿಯೆಟ್' (ಲೇ:ಬಸವಪ್ಪ ಶಾಸ್ತ್ರಿ), ರೋಮಿಯೋ ಅಂಡ್ ಜೂಲಿಯೆಟ್'ಲೇ:ಎಚ್.ಎಂ.ಶಂಕರನಾರಾಯಣ ರಾವ್) ಓ, ರೋಮಿಯೋ ಅಂಡ್ ಜೂಲಿಯೆಟ್'(ಲೇ:ಶ್ರೀಕಂಠೇಶ ಗೌಡ), ರೋಮಿಯೋ ಅಂಡ್ ಜೂಲಿಯೆಟ್ (ಲೇ:ವೈ.ಎಂ. ಷಣ್ಮುಖಯ್ಯ) ಹೀಗೆ ಹಲವರು ರೋಮಿಯೋ ಜೂಲಿಯೆಟ್ ಕಥೆಯನ್ನ ಕನ್ನಡ ರಂಗಭೂಮಿಗೆ ಅಳವಡಿಸಿಕೊಂಡಿರುವುದುಂಟು. ಮೂಲ ಸತ್ತ್ವದಲ್ಲೇ ಕನ್ನಡ ಅನುವಾದಕ್ಕೆ ಇದುವರೆಗೂ ಯಾರೂ ಏಕೆ ಪ್ರಯತ್ನಿಸಿಲಿಲ್ಲ ಎನ್ನುವುದು ನನಗೆ ಕಾಡುವ ವಿಸ್ಮಯವಾಯಿತು. ಶೇಕ್ಸ್ ಪಿಯರ್ ನಾಟಕಗಳೆಲ್ಲ ಮಾನವ ಬದುಕನ್ನು ಅಭಿನಯಿಸುವ ನಾಟಕಗಳೇ. ವಿಮರ್ಶಕರು ಹೇಳಿರುವಂತೆ ಅವನು ಓದುವ ಪುಸ್ತಕ ಮಾನವೀಯತೆ, ಅವನು ಬರೆಯುವುದೆಲ್ಲ ಮನುಷ್ಯ ಲೋಕದ ನಾಟಕ. ಪುಸ್ತಕವನ್ನು ಶೇಕ್ಸ್ ಪಿಯರ್ 'ರೋಮಿಯೊ ಜೂಲಿಯಟ್' ನಾಟಕದಲ್ಲಿ ಮಾನವ ಕುಲದ ಒಂದು ಅದ್ಭುತ ರೂಪಕವನ್ನಾಗಿಯೇ ಬಳಸಿದ್ದಾನೆ ಎಂದೆ ‘ರೋಮಿಯೋ ಜೂಲಿಯಟ್' ನಾಟಕವನ್ನು ಅದರ ಮೂಲಸತ್ತ್ವದಲ್ಲೇ ಕನ್ನಡಕ್ಕೆ ತರುವ ತುಡಿತ ನನ್ನಲ್ಲಿ ಬಹಳ ಹಿಂದೆಯೇ ಉಂಟಾಗಿತ್ತು.

‘ಆಂಟನಿ ಕ್ಲಿಯೋಪಾಟ್ರ', ಅಲೆಕ್ಸಾಂಡ್ರಿಯಾ, ರೋಮ್, ಮೆಸ್ಸೀನ, ಸಿರಿಯಾ, ಅಥೆನ್ಸ್ ಗಳನ್ನೂ ಕಾರ್ಯರಂಗವನ್ನಾಗುಳ್ಳ ನಾಟಕವಾದರೂ ಇಲ್ಲಿ ಶೇಕ್ಸ್ ಪಿಯರ್ ಒತ್ತುಕೊಟ್ಟಿರುವುದು ಆಂಟನಿ ಮತ್ತು ಕ್ಲಿಯೋಪಾಟ್ರಳ ಮಾನವ ವೈಶಿಷಟ್ಯದ ವ್ಯಕ್ತಿತ್ವಕ್ಕೆ. ರಾಜಕಾರಣವಿದೆಯಾದರೂ ಶೇಕ್ಸ್ ಪಿಯರ್ ಸಕಲ ದಿಕ್ಕುಗಳಿಂದಲೂ ಬರುವ ಬೆಳಕನ್ನು ಕೇಂದ್ರೀಕರಿಸುವುದು ಈ ಎರಡು ಪಾತ್ರಗಳ ವ್ಯಕ್ತಿತ್ವದ ಮೇಲೆಯೇ ಕ್ಲಿಯೋಯೋಪಾಟ್ರಳಂತೂ, ಚಲನಚಿತ್ರವಾದ ಮೇಲಂತೂ, ಆಧುನಿಕ ಸ್ತ್ರೀ ವಿಮೋಚನಾ ಚಳವಳಿಯ ಮೂಲ ಮಾತೃಕೆಯೋ ಆದಿರೂಪಕವಾಗಿಯೋ ಎಂಬಂತೆ ಕಾಣುತ್ತಾಳೆ. ಈ ನಾಟಕ ಕನ್ನಡಡ ಘಟಾನುಘಟಿ ಅನುವಾದಕರ ಕಣ್ತಪ್ಪಿರುವುದು ನನಗೆ ಆಶ್ಚರ್ಯವನ್ನುಂಟುಮಾಡಿತ್ತು. ಕೆ.ಮಲ್ಲರಾಜೇ ಅರಸು ಎಂಬುವರು ಇದನ್ನ ಮೊದಲಿಗೆ ಕನ್ನಡಕ್ಕೆ ಅನುವಾದಿಸರುವ ವರದಿ ಇದೆ. ಅದರೆ ಅದು ಅಪ್ರಕಟಿತ. ಎಂದೇ ಈ ಎರಡು ನಾಟಕಗಳನ್ನೂ ಅವುಗಳ ಮೂಲ ಸತ್ವದಲ್ಲೇ ಕನ್ನಡಕ್ಕೆ ಅನುವಾದಿಸಿದೆ. ಅಂಕಿತ ಈ ಎರಡು ನಾಟಕಗಳನ್ನೂ ಪ್ರಕಟಿಸಿತು. ರೋಮಿಯೊ ಜೂಲಿಯಟ್ ಎ.ಸ್.ಮೂರ್ತಿಯವರ ತಂಡದಿಂದ ಮಾಲತೀಶ ಬಡಿಗೇರಾ ಅವರ ನಿರ್ದೇನದಲ್ಲಿ ಹಲವಾರು ಪಗರ ದರ್ಶನಗಳನ್ನು ಕಂಡು ರಸಿಕರ ಮೆಚ್ಚುಗೆ ಗಳಿಸಿತು. ಆದರೆ ಸಾಹಿತ್ಯವಲಯದಲ್ಲಾಗಲೀ ರಂಗಭೂಮಿ ವಲಯದಲ್ಲಾಗಲಿ ಈ ಎರಡು ಕೃತಿಗಳಿಗೆ ಹೆಚ್ಚಿನ ಕ್ರಿಯಾತ್ಮಕ ಸ್ಪಂದನ ಕಂಡು ಬರಲಿಲ್ಲ ಏಕೋ ಏನೋ? ಆದರೆ ಬಿಡಿಬಿಡಿಯಾಗಿ ಲೇಖಕ ಮಿತ್ರರು ಪ್ರತಿಕ್ರಿಯಿಸಿ ನನ್ನ ಮನಸ್ಸಿಗೆ ಒಂದಿಷ್ಟು ಸಮಾಧಾನ ತಂದುಕೊಟ್ಟ ನಿದರ್ಶನಗಳುಂಟು.

ಮಾವಿನಕೆರೆ ರಂಗನಾಥನ್,
ಪುರೋಗಾಮಿ ಸಾಹಿತ್ಯ ಸಂಘ,

ಬೆಂಗಳೂರು
6-9-2002
ಪ್ರಿಯ ರಂಗನಾಥ ರಾವ್

"ಲೋಕ ಸೌಂದರ್ಯ ಶರಧಿಯೊಳಗಣ ಮುತ್ತುರತ್ನ ಅರಸುವುದೆ ಲೇಸು" ಎಂಬ ಬೆನೋಲಿಯೊ ಮಾತನ್ನು ರೋಮಿಯ ಜೂಲಿಯಟ್ ಕನ್ನಡ ಅವತರಣಿಕೆ ಮುಲಕ ಅಕ್ಷರಶ: ನಿರೂಪಿಸಿದ್ದೀರಿ. ಭಲೇ ಎನ್ನುವುದು ಸಾಂಕೇತಿಕವಾಗಿ ಅಷ್ಟೇ! ಅವೆಲ್ಲ ಮೀರಿ ಕೃತಿ ಕಂಗೊಳಿಸುತ್ತದೆ.

ನಾಟಕದ ಮುನ್ನ ಅಂದಿನ ಹಿನ್ನೆಲೆ, ಚಾರಿತ್ರಿಕ ಸಾಮಾಜಿಕ ತುಲನೆ, ಕೃತ-ಕೃತಿಕಾರನ ಬಗ್ಗೆ, ಕಥಾನಕದ ಬಗ್ಗೆ ಹಂತಹಂತವಾಗಿ ತಿಳಿಹೇಳುವ ಪರಿ ವಿಸ್ತರಣೆ ಓದುಗರ ಭಾವವನ್ನು ಹಿಡಿಯುತ್ತದೆ, ಆಕ್ರಮಿಸುತ್ತದೆ. ಒಳ್ಳೆಯ ನಿರೂಪಣಾ ಶೈಲಿ ಇವನ್ನು ಸಾಧ್ಯಮಾಡಿವೆ. "ಕೃತಿ ಮತ್ತು ಕೃತಿಕಾರ" ಒಂದು ವಿಶಿಷ್ಟ ಲೇಖನ. ಅದು ಎಲ್ಲೂ ಸಲ್ಲುತ್ತದೆ ಎಂಬುದು ವಿಶೇಷ.

ನಾಟಕ ಆರಂಭವಾಗುವ ಮುನ್ನ ಅಂಕಗಳ ಕಿರುಪರಿಚಯ, ನಾಟಕಾನಂತರದ ಟಿಪ್ಪಣಿ, ಎಲ್ಲ ಒಂದು ಶಿಸ್ತಿನಲ್ಲಿ ಸಾಗಿದರೂ ಕಲಾತ್ಮಕತೆಗೆ ಚ್ಯುತಿಬಾರದಿರುವುದು ಸಂತೋಷದ ಸಂಗತಿ. ಸರಳತೆಯಿಂದ ಅರ್ಥವಂತಿಕೆಯಲ್ಲಿ ಕೃತಿಗೆ ಅಪೂರ್ವ ಶೋಭೆ ಸಂದಿದೆ. ಅನುವಾದಕನ ಒಳಗೆ ಸ್ಫುರಿಸಿದ ಭಾವದಿಂದ ನಾಟಕದ ಮೂಲದ್ರವ್ಯದ ಛಾಪು ಹೊತ್ತರೂ ವಿಭಿನ್ನ ರೀತಿಯಲ್ಲಿ ನೆಲೆಗೊಂಡಿದೆ. ಕನ್ನಡೀಕರಣವಾಗಿದೆ! ಓದುಗರನ್ನು ಆವರಿಸುವ ತದಾತ್ಮ್ಯ ಪ್ರಭಾವವಿದೆ. ನಾಟಕದ ಪಾತ್ರಗಳ ಹೆಸರನ್ನು ಮರೆತರೆ ಕನ್ನಡದ ಕೃತಿಯೇನೋ ಎಂಬ ಸಾರ್ಥಕ್ಯ ಕೃತಿ ಪಡೆಯುತ್ತದೆ.

ನಿಮ್ಮ ಶ್ರಮಕ್ಕೆ ಕೊಂಡಿಯಂತೆ ಹೆಣೆದ ಕಲಾವಿದನ ಮುಖ ಚಿತ್ರ, ಪ್ರಕಾಶಕ-ಮುದ್ರಕರ ಶ್ರದ್ಧೆ ಮಹತ್ವಪೂರ್ಣ ಕೃತಿಯಾಗಿಸಿದೆ. ಯುವಪೀಳಿಗೆ ಇದನ್ನು ಆಸಕ್ತಿಯಿಂದ ಒಮ್ಮೆ ಓದಿದರೆ ಸಾಕು ‘ವಿಶ್ವ ರತ್ನ' ಒಂದು ಮಣಿ ಪಡೆದಂತೆಯೇ! ಇದನ್ನು ಪಠ್ಯವಾಗಿಸಲು ವಿಶ್ವವಿದ್ಯಾಲಯ ಮುಂದಾಗಬೇಕು. ಆಗ ಯುವಜನರ ಆಸಕ್ತಿ ಕೆರಳಿಸಲು ಸಾಧ್ಯವಾಗುತ್ತದೆ.

ನೀವು ಶ್ರಮವಹಿಸಿದ್ದೀರಿ, ಕನ್ನಡ ಸಾಹಿತ್ಯಕ್ಕೆ ಉದಾರ ಕೊಡುಗೆ ನೀಡಿದ್ದೀರಿ, ಕೃಪೆಯಿಟ್ಟು ಪುಸ್ತಕ ಕಳುಹಿಸಿ ಉಪಕರಿಸಿದ್ದೀರಿ. ಕನ್ನಡದ ಜನ ನಿಮ್ಮ ಶ್ರಮ ಮನಗಂಡಲ್ಲಿ ಸಂತೋಷವಾಗುತ್ತೆ, ನಮಗೆ!ನಿಮಗೆ ಒಳಿತಾಗಲಿ.

ಶುಭಮಸ್ತು
ಇಂತು ವಿಶ್ವಾಸಿ
ಮಾವಿನಕೆರೆ ರಂಗನಾಥನ್
* * * *
ದೇಶಕುಲಕರ್ಣಿ

ಬೆಂಗಳೂರು

20-12-2002
ಪ್ರಿಯ ಜಿ ಎನ್ ಆರ್,

ನೀವು ಅನುವಾದಿಸಿರುವ ರೋಮಿಯೊ ಜೂಲಿಯಟ್ (ಶೇಕ್ಸ್ ಪಿಯರ್ ಮೂಲ) ನಾಟಕವನ್ನು ಪೂರ್ತಿ ಓದಿದೆ. ಮೂಲವನ್ನು ತುಂಬ ಹಿಂದೆಯೇ ಓದಿಕೊಂಡಿದ್ದೆ. ಒಂದು ಕಾಲದ ರಾಜಕೀಯವನ್ನೂ, ಪುರೋಹಿತ ಹಸ್ತಾಂತರವನ್ನೂ, ಪ್ರೀತಿಯ ಅಪಾರ್ಥಗಳನ್ನೂ ಶತ್ರು ಪಾಳೆಯಗಳನ್ನೂ ಬಿಂಬಿಸುವ ಆ ನಾಟಕ ಜಗತ್ತಿನ ಅಮರ ಪ್ರೇಮಿಗಳ ಜೊತೆ ತನ್ನ ಜೋಡಿಯನ್ನು ಸೇರಿಸಿದೆ. ನೀವು ಗ್ರಂಥಕರ್ತನ ಬಗ್ಗೆ, ನಾಟಕದ ಬಗ್ಗೆ ಬರೆದಿರುವ ಮುನ್ನುಡಿ ಎಷ್ಟುಬೇಕೋ ಅಷ್ಟನ್ನು ಸರಳವಾಗಿ ಸುಂದರವಾಗಿ ಹೇಳುತ್ತದೆ. ನಾಟಕದ ಗದ್ಯ ಮತ್ತು ಪದ್ಯ ಭಾಗಗಳ ಅನುವಾದವನ್ನು ಓದಿದ ಮೇಲೆ ನನ್ನ ಒಟ್ಟು ಗ್ರಹಿಕೆ ಹೀಗಿದೆ: ಗದ್ಯ ಭಾಗವೆಲ್ಲ ಸಹಜವಾಗಿ ಬಂದಿದೆ. ಅಂತಲೇ ಮೂಲದಲ್ಲಿ ಬ್ಲಾಂಕ್ವರ್ಸ್ ಇದ್ದರೇನು. ಆ ಭಾಗವನ್ನೂ ಸರಳ ಗದ್ಯದಲ್ಲಿ ಅನುವಾದಿಸಬಹುದಿತ್ತು ಅಲ್ಲವೆ? ಯೋಚಿಸಬೇಕಾದ ಅಂಶ ಇದು. ಆವಾಗ ಪದ ಮತ್ತು ಛಂದಸ್ಸಿನ ವಿಷಯವಾಗಿ ಯೋಚಿಸಬೇಕಾಗಿರಲಿಲ್ಲ.

ಇರಲಿ. ಈ ನಾಟಕವನ್ನು ಬೇಗನೇ ಪ್ರಯೋಗಿಸಿರುವುದಾಗಿ ಒಂದು ಪತ್ರಿಕೆಯಲ್ಲಿ ಓದಿದೆ. ನೀವು ಹೋಗಿದ್ದಿರಾ? ಎಡಿಟಿಂಗ್ ಹೇಗಿತ್ತು? ಆ ಎಲ್ಲದರ ಫಲಿತಾಂಶವಾಗಿ ರಂಗನಾಟಕವಾಗಿ ಅದನ್ನು ರಿವೈಸ್ ಮಾಡಲಾದೀತೆ?

ವಿಶ್ವಾಸದಿಂದ
ದೇಶಕುಲಕರ್ಣಿ
**********
ವ್ಯಾಸರಾಯ ಬಲ್ಲಾಳ
ನಂ.1064, ‘ಉತ್ತರಾಯಣ’
ಕುಮಾರಸ್ವಾಮಿ ಬಡಾವಣೆ,
ಬೆಂಗಳೂರು-560078.

ಪ್ರಿಯ ಶ್ರೀ ರಂಗನಾಥ ರಾವ್ ಅವರಿಗೆ ಸವಿನಯ ವಂದನೆ.

ನೀವು ಬರೆದ ಪತ್ರದಲ್ಲಿ ಕಳೆದ ಜನವರಿ ಕೊನೆಗೆ ನೀವು ‘ಪ್ರಜಾಶವಾಣಿ' ಬಳಗದಿಂದ ನಿವೃತ್ತರಾಗಿದ್ದೀರ ಎಂದು ತಿಳಿದು ನನಗೆ ಆಶ್ಚರ್ಯವಾಗಿದೆ. ಕಾರಣ ನಾನು ಜನವರಿ ತಿಂಗಳ ಕೊನೆಗೆ ಮುಂಬಯಿಯಲ್ಲಿದ್ದೆ. ನಿಮ್ಮ ಪತ್ರದಿಂದಲೇ ನೀವು ನಿವೃತ್ತರಾಗಿರುವ ವಿಚಾರ ತಿಳಿದದ್ದು. ನಿಮ್ಮನ್ನು ನಾನು ಕೆಲವು ವರ್ಷಗಳ ಹಿಂದೆ ಮೊದಲು ಗುರುತಿಸಿದ್ದೇ ಒಳ್ಳೆಯ ವಿಮರ್ಶಕರೆಂದು. ಈಗ ದೀರ್ಘಕಾಲದ ಪತ್ರಿಕಾ ವ್ಯವಸಾಯದ ಅನುಭವವೂ ನಿಮಗಿದೆ. ವೃತ್ತಿಯಿಂದ ನಿವೃತ್ತಿ ದೊರೆತರೂ ನಿಮ್ಮ ಆಸಕ್ತಿಯ ಸಾಹಿತ್ಯಕ ಪ್ರವೃತ್ತಿಗೆ ನಿವೃತ್ತಿ ಎಲ್ಲಿ! ದೀರ್ಘಕಾಲ ಕನ್ನಡ ಸಾಹಿತ್ಯಲೋಕ ನಿಮ್ಮನ್ನು ನೆನಪಿಸಿಕೊಂಡು ಗೌರವಿಸುವಂತಾಗಲಿ, ನಿಮಗೂ ನಿಮ್ಮವರೆಲ್ಲರಿಗೂ ಆರೋಗ್ಯ, ಮಾನಸಿಕ ನೆಮ್ಮದಿ ಇರುವಂತಾಗಲಿ ಎಂದು ನಮ್ಮ ಶುಭ ಹಾರೈಕೆಗಳು. ಮೊದಲು ಟಿಎಸ್ಸಾರ್ ಮತ್ತೆ ನೀವು ಹಲವಾರು ಕತೆಗಳನ್ನು, ಕೆಲವು ಲೇಖನಗಳನ್ನು ‘ಪ್ರಜಾವಾಣಿ' ಗುಂಪಿನ ಪತ್ರಿಕೆಗಳಿಗೆ ಬರೆಸಿದಿರಿ. ನಿಮ್ಮ ಒತ್ತಾಯದಿಂದ ಬರೆದ ಕತೆಗಳನ್ನು ನಾನು ಹೇಗೆ ಮರೆತೇನು.

ಶುಭಾಶಯಗಳೊಡನೆ,
ನಿಮ್ಮ ವಿಶ್ವಾಸಿ
ವ್ಯಾಸರಾಯ ಬಲ್ಲಾಳ

**********************
ಎಚ್ಚೆಸ್ಕೆ

ಮೈಸೂರು

6-2-2000

ಸನ್ಮಾನ್ಯರಾದ ಶ್ರೀ ರಂಗನಾಥ ರಾವ್ ಅವರೆ,
ನಿಮ್ಮ ಕಾರ್ಡು ಬಂತು. ನೋಡಿದಾಗ ಒಂದು ರೀತಿಯ ದಿಗ್ಭ್ರಮೆ ಉಂಟಾಯಿತು. ತುಂಬ ಅನಿರೀಕ್ಷಿತವಾದ ಸುದ್ದಿ. ನಿಮ್ಮ ಪ್ರತಿಭೆ, ಅನುಭವ, ದಕ್ಷತೆ, ನಿಷ್ಠೆಗಳನ್ನು ಎಂಥ ಸಂಸ್ಥೆಯೂ ಅಮೂಲ್ಯವೆಂದು ಪರಿಗಣಿಸಬೇಕು. ಈ ಹಲವು ವರ್ಷಗಳಲ್ಲಿ ‘ಪ್ರಜಾವಾಣಿ'- ‘ಸುಧಾ'- ‘ಮಯೂರ' ಅಸಾಧಾರಣವಾದ ಬೆಳವಣಿಗೆ ಸಾಧಿಸಿವೆ. ವೈವಿಧ್ಯ, ಗುಣಮಟ್ಟ, ಆಕರ್ಷಣೆ-ಎಲ್ಲ ರೀತಿಯಿಂದಲೂ ಮುನ್ನಡೆದಿವೆ. ಈ ಬಗೆ ಇಂಗ್ಲಿಷ್ ಮತ್ತು ಇತರ ಭಾಷಾ ಪತ್ರಿಕೆಗಳಿಗೆ ಹೆಗಲೆಣೆಯಾಗುವಂತೆನಿಸಿವೆ. ಸಂಸ್ಥೆಯ ಬೆಂಬಲವೂ ಪ್ರೋತ್ಸಾಹವೂ ದೊರಕಿದ್ದು ಸಂತೋಷದ ಸಂಗತಿ. ಯಾವುದೇ ವಿವಾದಕ್ಕೆಡಕೊಡದೆ ಮೌನವಾಗಿ ಕಾರ್ಯಪ್ರವೃತ್ತರಾಗುವ ನಿಮ್ಮ ರೀತಿಯನ್ನು ಮೆಚ್ಚಿಕೊಂಡಿದ್ದೇನೆ. ಸೇವಾ ನಿಯಮಗಳಂತೆ ಒಂದು ದಿನ ನಿವೃತ್ತಿ ಅನಿವಾರ್ಯವಾದರೂ ಇಷ್ಟು ಬೇಗ ಆ ಕಾಲ ಬಂದೀತೆಂದು ನಾನು ಅಂದುಕೊಂಡಿರಲಿಲ್ಲ.

ನೀವು ಉದ್ದಕ್ಕೂ ನನ್ನ ಬಗ್ಗೆ ತುಂಬ ಪ್ರೀತಿಯಿಂದ ನಡೆದುಕೊಂಡಿದ್ದೀರಿ. ಒಂದೇ ಕಡೆ ಕುಳಿತು ನನ್ನಷ್ಟಕೆ ನರೆಯುವುದು ನನ್ನ ಸ್ವಭಾವ. ಆದರೆ ಔಟ್ ಆಫ್ ಸೈಟ್, ಔಟ್ ಆಫ್ ಮೈಂಡ್ ಅಪಾಯ ಹೆಚ್ಚು. ನೀವು ನನ್ನನ್ನು ಮರೆಯದೆ ಅನೇಕ ವೇಳೆ ಒಳ್ಳೆಯ ಮಾತಾಡಿದ್ದೀರಿ. ನನ್ನಂಥವನಿಗೆ ಇದು ತುಂಬ ಅಗತ್ಯ. ಇಲ್ಲದಿದ್ದರೆ ಹುಚ್ಚು ಹೊಳೆಯಲ್ಲಿ ನನ್ನಂಥವರು ಕೊಚ್ಚಿ ಹೋಗುತ್ತಾರೆ. ಹಾಗಾಗದಂತೆ ನಿಮ್ಮಂಥ ಮಿತ್ರರು ನನಗೆ ರಕ್ಷಣೆ ನೀಡಿದ್ದಾರೆ. ಈ ಉಪಕಾರವನ್ನು ನಾನು ಕೃತಜ್ಞತೆಯಿಂದ ಎಂದೂ ನೆನೆಯುತ್ತೇನೆ.

ನಿಮಂಥವರಿಗೆ ನಿವೃತ್ತಿ ಎಂಬುದೇ ಇಲ್ಲ. ಬೇರೊಂದು ಕ್ಷೇತ್ರದಲ್ಲಿ ನೀವು ತೊಡಗುತ್ತೀರಿ. ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ.

ನಿಮ್ಮ,
ಎಚ್ಚೆಸ್ಕೆ
****
ಪದ್ಮರಾಜ ದಂಡಾವತಿ
ಬೆಳಗಾವಿ

7-2-2000

ಮಾನ್ಯ ಶ್ರೀ ರಂಗನಾಥ ರಾವ್ ಅವರಿಗೆ,

ವಂದನೆಗಳು.
ತಾವು ಕ್ಷೇಮ ಎಂದು ಭಾವಿಸುವೆ. ಕೊಂಚ ಹಿಂಜರಿಕೆಯಿಂದಲೇ ಈ ಪತ್ರ ಬರೆಯುತ್ತಿರುವೆ ಎಂಬುದನ್ನು ಪ್ರಾರಂಭದಲ್ಲಿಯೇ ಹೇಳಿಬಿಡುವೆ. ತಾವು ನಿವೃತ್ತರಾದಿರಿ ಎಂದು ಕೇಳಿ ತಿಳಿದೆ. ನಿವೃತ್ತಿ ಎಂಬುದು ಒಂದು ರೀತಿಯಲ್ಲಿ ಖಿನ್ನತೆಯನ್ನು, ಮತ್ತೊಂದು ರೀತಿಯಲ್ಲಿ ನಿರಾಶೆಯನ್ನು ತರುವ ಸಂಗತಿ. ಖಿನ್ನತೆ ಏಕೆಂದರೆ ಸುಮಾರು 30 ವರ್ಷಗಳ ಕಾಲ ಒಂದು ಸಂಸ್ಥೆಯ ಜೊತೆ ಇಟ್ಟುಕೊಂಡ ಸಂಬಂಧವನ್ನು ಥಟ್ಟನೆ ಕಡಿದುಕೊಳ್ಳುವುದು ಕಷ್ಟದ ವಿಚಾರವೇ. ಆದರೆ ಯಾವುದೇ ಒಂದು ವೃತ್ತಿಯ, ಅದರಲ್ಲೂ ಪತ್ರಿಕಾ ವ್ಯವಸಾಯದ ಧಾವಂತ, ಒತ್ತಡ ಮತ್ತು ಸ್ಪರ್ಧೆಯಿಂದ ನಿವೃತ್ತಿ ನಿರಾಶೆಯನ್ನೂ ತರುತ್ತದೆ. ನಮಗೆ ಅತ್ಯಂತ ಪ್ರಿಯವಾದ ಪುಸ್ತಕಗಳನ್ನು ಓದಲು, ಸಂಗೀತ ಕೇಳಲು, ನಾಟಕ ನೋಡಲು ಭರಪೂರ ವೇಳೆ ಸಿಗುತ್ತದೆ. ಮೂರು ದಶಕಗಳ ಕಾಲ ಕಳೆದುಕೊಂಡ ಹೆಂಡತಿ, ಮಕ್ಕಳನ್ನು ಮತ್ತೆ ನಾವು ಕೂಡಿಕೊಳ್ಳಬಹುದು.!ಜೀವನವೇ ಹಾಗೆ:ಇಲ್ಲಿಯೂ ಸದಾ ವಜಾಬಾಕಿಯ ಲೆಕ್ಕ ನಡೆದೇ ಇರುತ್ತದೆ.

ನಾನು ಪ್ರಜಾವಾಣಿ ಸೇರಿದ್ದು 1982ರ ನವೆಂಬರ್ ನಲ್ಲಿ. ಸೇರಿದ ಒಂದೆರಡೇ ದಿನಗಳಲ್ಲಿ ಇರಬೇಕು. ‘ಸುಧಾ'ದ ಬಾಗಿಲಲ್ಲಿ ಶ್ರೀ ಸದಾಶಿವ ತಮ್ಮನ್ನು ಪರಿಚಯಿಸಿದರು. ನಾನು ಸಂಭ್ರಮಗೊಂಡು ನಿಮ್ಮ ಕೈಕುಲುಕುತ್ತ,"ಸಂಕ್ರಾಂತಿಯ ದ್ವಂದ್ವಗಳು"ಅಂಥ ಲೇಖನಗಳನ್ನು ಮತ್ತೆ ಯಾವಾಗ ಕೊಡುತ್ತೀರಿ ಎಂದು ಕೇಳಿದ್ದೆ.

ಅಂದಿನಿಂದ ಕಳೆದ ಸುಮಾರು 19 ವರ್ಷಗಳ ಅವಧಿಯಲ್ಲಿ ತಾವು ನನ್ನನ್ನು ಕಿರಿಯ ತಮ್ಮನ ಹಾಗೆ ಅತ್ಯಂತ ಪ್ರೀತಿಯಿಂದ ನೋಡಿಕೊಂಡಿರಿ. ಅವಕಾಶಗಳನ್ನು ನೀಡಿ ಬರೆಯಲು ಹಚ್ಚಿದಿರಿ. ಬಡ್ತಿ ನೀಡಿದಿರಿ. ಮೆಚ್ಚುಗೆ ಪತ್ರ ಕೊಡಿಸಿದಿರಿ. ವೇತನ ಬಡ್ತಿಯನ್ನೂ ನೀಡಿದಿರಿ. ಈ ಔದಾರ್ಯ ನಾನು ಹೊರಲಾಗದ್ದು. ನಾನು ಸದಾ ತಮಗೆ ಋಣಿ.

ತಾವು ಸಂಪಾದಕರಾಗಿದ್ದ ಅವಧಿಯಲ್ಲಿ ಪ್ರಜಾವಾಣಿ ಹೊಸ ಶೀಖಿರಗಳನ್ನು ಮುಟ್ಟಿತು/ಹೊಸ ಅಂಕಣ, ಪುರವಣಿಗಳನ್ನು ಪ್ರಾರಂಭಿಸಿತು. ‘ಪ್ರಜಾವಾಣಿ ಬಿಟ್ಟರೆ ಕರ್ನಾಟಕದಲ್ಲಿ ಇನ್ನಿಲ್ಲ' ಎಂಬ ಅನಿಸಿಕೆಯನ್ನು ಜನಮನದಲ್ಲಿ ಮೂಡಿಸಲು ತಾವು ಒಂದೂ ದಿನ ರಜೆ ಪಡೆಯದೆ ದುಡಿದಿರಿ. ಇದು ನಮ್ಮಂಥ ಕಿರಿಯರಿಗೆ ಮಾದರಿ. ಯಾವುದೇ ಸಂಸ್ಥೆಯಲ್ಲಿ ಯಾರೇ ಆಗಲಿ ಕಾಯಂ ಆಗಿರಲು ಸಾಧ್ಯವಿಲ್ಲ. ಆದರೆ ಇದ್ದ ಅವಧಿಯಲ್ಲಿ ಅವರು ಮೂಡಿಸಿದ ಛಾಪು ಏನು ಎಂಬುದು ಮಾತ್ರ ಬಹುಕಾಲ ಉಳಿಯುತ್ತದೆ. ಈ ಲೆಕ್ಕದಲ್ಲಿ ತಾವು ಗೆದ್ದಿದ್ದೀರಿ!

ನಿವೃತ್ತಿಯ ಮುಂದಿನ ದಿನಗಳಲ್ಲಿ ತಾವು ಆರೋಗ್ಯದ ಬಗ್ಗೆ ಲಕ್ಷ್ಯವಹಿಸಬೇಕಾಗಿ ಕೇಳಿಕೊಳ್ಳುವೆ. ಮನೆಯಲ್ಲಿ ಅಕ್ಕ ಅವರಿಗೆ ನನ್ನ ನಮಸ್ಕಾರಗಳನ್ನು ಹೇಳಿರಿ. ಸೋದರಿಯರಿಗೆ ನಲಿವುಗಳು. ಒಂದು ಸಾರಿ ತಾವು ಬೆಳಗಾವಿಗೆ ಬಂದು ನಮ್ಮ ಅತಿಥಿಗಳಾಗಿ ಉಳಿಯಬೇಕು ಎಂದು ನನ್ನ ‘ಬಿನ್ನಹ'.

ತಮ್ಮ ವಿಶ್ವಾಸಿ,
ಪದ್ಮರಾಜ ದಂಡಾವತಿ

***********
ಕೆ.ಸತ್ಯನಾರಾಯಣ
ಚೆನ್ನೈ

11-2-2000

ಆತ್ಮೀಯರಾದ ಪ್ರಿಯ ಶ್ರೀ ಜಿ.ಎನ್.ಆರ್ ಅವರಲ್ಲಿ ಪ್ರೀತಿಪೂರ್ವಕ ವಂದನೆಗಳು..

ನಿಮ್ಮ 7-2-ರ ಪತ್ರ ತಲುಪಿತು. ನಿವೃತ್ತಿ ಜೀವನದಲ್ಲಿ ನಿಮಗೆ ಶುಭ ಮತ್ತು ಆರೋಗ್ಯ ಕೋರುವೆ. ಕೆಲಸದ ಗಡಿಬಿಡಿಯಲ್ಲಿ ಹಾಗೇ ಉಳಿದಿರುವ ನಿಮ್ಮ ಅನೇಕ ಆಸಹ್ತಿಗಳು ಅರಳಿ ಫಲಪ್ರದವಾಗಲಿ ಎಂದು ಆಶಿಸುವೆ. ಆದರೆ ನಿಮ್ಮಂತಹ ಅನುಭವಿಗಳನ್ನು ಮತ್ತೆ ಯಾವುದಾದರೂ ಪತ್ರಿಕೆಯವರು ಖಂಡಿತವಾಗಿಯೂ ಕರೆದೇ ಕರೆಯುತ್ತಾರೆ ಎಂದು ನನ್ನ ನಂಬಿಕೆ.

ನಿಮ್ಮ ಪ್ರೀತಿ, ಗುಣ ಪಕ್ಷಪಾತ, ಪ್ರೋತ್ಸಾಹದಿಂದ ಬರಹಗಾಗರನಾಗಿ ನನಗೆ ತುಂಬ ಲಾಭವಾಗಿದೆ. ಕತೆಗಾರನಾಗಿ ನಾನು ಬೆಳೆದಿದ್ದಕ್ಕೆ, ನಾಲ್ಕು ಜನರ ಕಣ್ಣಿಗೆ-ಬಾಯಿಗೆ ಬಿದ್ದಿದ್ದರೆ, ಅದರಲ್ಲಿ ನಿಮ್ಮ ಪ್ರೀತಿ, ಒತ್ತಾಸೆಯ ಪಾಲು ಬಹುದೊಡ್ಡದು. ಕತೆಗಳನ್ನು ಪ್ರಕಟಿಸದ್ದೇ ಅಲ್ಲದೆ ಸೂಕ್ತ ಸ್ಥಳದಲ್ಲಿ, ಜನಗಳಲ್ಲಿ.. ನೀವು ನನ್ನ ಬಗ್ಗೆ ಪ್ರಸ್ತಾಪಿಸಿರುವುದು ಸ್ನೇಹಿತರ ಮೂಲಕ ನನಗೆ ನಂತರ ತಿಳಿಯುತ್ತಿತ್ತು. ಇದೆಲ್ಲದಕ್ಕೂ ಕೃತಜ್ಞತೆಗಳು ಎಂದು ಹೇಳಿದರೆ ಸಾಕೆ? ನಿಮ್ಮ ನಿರೀಕ್ಷೆಯಂತೆ ಬೆಳೆಯಲು, ಬರೆಯಲು ಪ್ರಯತ್ತಿಸುವೆ.

ಈಗ ವಿರಾಮವಿರುವುದರಿಂದ ಮದ್ರಾಸಿಗೆ ಬರಬೇಕೆಂದೂ ನಮ್ಮ ಮನೆಯಲ್ಲಿ ಉಳಿಯಬೇಕೇಂದೂ ಪ್ರಾರ್ಥಿಸುವೆ. ಬೆಂಗಳೂರಿಗೆ ಬಂದಾಗ ನಿಮ್ಮನ್ನು ಸಂಪರ್ಕಿಸುತ್ತೇನೆ. ಮತ್ತೆ ನಿಮ್ಮ ಬಿಡುವಿನಲ್ಲಿ ಬರೆಯಿರಿ.

ನಿಮ್ಮ ವಿಶ್ವಾಸದ,
ಕೆ.ಸತ್ಯನಾರಾಯಣ
* * * *
ಜಿ.ಎಸ್.ಆಮೂರ
‘ಜಾನಕಿ', ಸರ್ವೋದಯ ನಗರ, ಧಾರವಾದ
ಮಾರ್ಚ್ 2, 2000
ಪ್ರಿಯ ರಂಗನಾಥ ರಾವ್ ಅವರಿಗೆ,

ಪ್ರಜಾವಾಣಿ ಎಂದರೆ ನನಗೆ ಮೊದಲು ವೈ.ಎನ್.ಕೆ ನಂತರ ನೀವು. ಈಗ ನೀವು ನಿವೃತ್ತಿ ಹೊಂದಿರುವುದರಿಂದ ಈ ಸಂಬಂಧ ಮೊದಲಿನಂತೆ ಉಳಿಯಲಾರದು. ಸಾರ್ಥಕ ಸೇವೆ ನಿಮಗೆ ತೃಪ್ತಿ ತಂದಿದೆ ಎಂದು ನಂಬುತ್ತೇನೆ. ನಿಮ್ಮ ಸೇವೆ ಈಗ ಬೇರೆ ಕ್ಷೇತ್ರಗಳಲ್ಲಿ-ಮುಖ್ಯವಾಗಿ ಬರವಣಿಗೆಯಲ್ಲಿ-ಲಭ್ಯವಾಗಲಿ ಎಂದು ಹಾರೈಸುತ್ತೇನೆ.

ವಿಶ್ವಾಸಪೂರ್ವಕ
ಜಿ.ಎಸ್.ಆಮೂರ
* * * * * *
ಬಿ.ಆರ್.ಲಕ್ಷ್ಮಣ ರಾವ್

ಚಿಂತಾಮಣಿ

2-6-2002

ಪ್ರಿಯ ಶ್ರೀ ಜಿ.ಎನ್.ಆರ್ ಅವರಿಗೆ, ಸ್ನೇಹ ವಂದನೆಗಳು.
ನಿಮಗೂ ನಿಮ್ಮ ಕುಟುಂಬದ ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು (ಕೊಂಚ ಮುಂಗಡವಾಗಿ). ನೀವು ಪ್ರೀತಿಯಿಂದ ಕಳಿಸಿಕೊಟ್ಟಿರುವ ‘ರೋಮಿಯೋ ಜೂಲಿಯಟ್'ಗಾಗಿ ಧನ್ಯವಾದಗಳು. ಪುಸ್ತಕ ತುಂಬ ಸುಂದರವಾಗಿ, ಅಚ್ಚುಕಟ್ಟಾಗಿ ಪ್ರಕಟವಾಗಿದೆ.ತುಂಬ ಹಿಂದೆಯೇ ನಾನು ಈ ನಾಟಕವನ್ನು ಮೂಲದಲ್ಲಿ ಸವಿದಿದ್ದೆ. ಇದರ ಸಿನಿಮಾ ಅವತರಿಣಿಕೆಯನ್ನು ಸಹಾ ನೋಡಿದ್ದೆ. ಮೂಲ ನಾಟಕವನ್ನೇ ಅತ್ಯಂತ ಸುಂದರವಾಗಿ, ಸಮರ್ಪಕವಾಗಿ ಸಿನಿಮಾಗೆ ಅಳವಡಿಸಲಾಗಿತ್ತು. ನೀವೂ ಬಹುಶ: ಅದನ್ನು ನೋಡಿರುತ್ತೀರಿ.

ನಿಮ್ಮ ಅನುವಾದ ತುಂಬ ಚೆನ್ನಾಗಿದೆ, ಸಮರ್ಪಕವಾಗಿದೆ, ಸಹಜ ನಡೆ, ನುಡಿಕಟ್ಟುಗಳು ಪರಿಣಾಮಕಾರಿಯಾಗಿ ಮೂಡಿಬಂದಿವೆ. ಮೂಲದೊಂದಿಗೆ ತಾಳೆ ನೋಡಿ ನಾನೀ ಅಂಶಗಳನ್ನು ಹೇಳುತ್ತಿಲ್ಲ. ಅನುವಾದ ಮತ್ತು ಅದರ ಪರಿಣಾಮವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ. ಅನುವಾದ ಎಂಥ ದುಸ್ಸಾಹಸ ಅನ್ನುವುದು ಸ್ವತ: ನಿಮಗೇ ಗೊತ್ತಿದೆ. ಈ ನಾಟಕದ ಆಧುನಿಕ ಅನುವಾದವೊಂದು ಇಂದು ನಿಜಕ್ಕೂ ಅಗತ್ಯವಾಗಿತ್ತು. ಅದನ್ನು ನೀವು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ್ದೀರಿ.

ಹಾರ್ದಿಕ ಅಭಿನಂದನೆಗಳು.

ಕೃತಿ ಹಾಗೂ ಕೃತಿಕಾರನ ಬಗ್ಗೆ ನೀವು ಬರೆದಿರುವ ದೀರ್ಘ ಪ್ರಸ್ತಾವನೆ ತುಂಬ ಇನ್ಫರ್ಮೆಟಿವ್ ಆಗಿದೆ, ಸಾಹಿತ್ಯಾಭ್ಯಾಸಿಗಳಿಗೆ ಉಪಯುಕ್ತವೂ ಆಗಿದೆ, ಜೊತೆಗೆ ನಿಮ್ಮದೇ ಆದ ಕೆಲವು ಒಳನೋಟಗಳೂ ಇರುವುದರಿಂದ ಮೌಲಿಕವೂ ಆಗಿದೆ.

ನಿಮ್ಮ ವಿಶ್ರಾಂತ ಜೀವನವನ್ನು ತುಂಬ ಸಾರ್ಥಕವಾಗಿ ಬದುಕುತ್ತಿದ್ದೀರಿ. ತುಂಬ ಸಂತೋಷ. ಇಂಥ ಇನ್ನೂ ಹಲವು ಮೌಲಿಕ ಕೃತಿಗಳು ನಿಮ್ಮಿಂದ ಮೂಡಿ ಬರಲಿ ಎಂದು ಹಾರೈಸುತ್ತೇನೆ. ಮುಂದಿನ ಯೋಜನೆ ಯಾವುದು? ‘ಮಹಾಪ್ರಸ್ಥಾನ' ಮತ್ತು ‘ಓ ಹೆನ್ರಿ ಕಥೆ'ಗಳನ್ನು ‘ಅಂಕಿತ'ಕ್ಕೆ ಹೋದಾಗ ಮರೆಯದೆ ಕೊಳ್ಳುತ್ತೇನೆ. ಚಿಂತಾಮಣಿಗೆ ಯಾವಾಗ ಬರುತ್ತೀರಿ?ಆದಷ್ಟು ಬೇಗ ಬನ್ನಿ.

ನಿಮ್ಮ ಪ್ರೀತಿಯ
ಬಿ.ಆರ್.ಲಕ್ಷ್ಮಣ ರಾವ್

*****
ದೇಶಕುಲಕರ್ಣಿ,
ಬೆಂಗಳೂರು
19-9-2003

ಪ್ರಿಯ ಮಿತ್ರರಾದ ಜಿ ಎನ್ ಅರ್,

ನೀವು ಸ್ನೆಹದಿಂದ ಕೊಟ್ಟ ನಿಮ್ಮ ಪುಸ್ತಕ ‘ಆಂಟನಿ-ಕ್ಲಿಯೋಪಾಟ್ರ' ವನ್ನು ಇದೇ ತಾನೇ ಓದಿ ಮುಗಿಸಿದೆ. ಮೂರನೆ ಅಂಕಿನ 13ನೇ ದೃಶ್ಯದ ಮಧ್ಯದಲ್ಲಿದ್ದಾಗ ಇದ್ದಕ್ಕಿದ್ದ ಹಾಗೆ ನಾಲ್ಕನೆ ಅಂಕಿನ ಐದನೆಯ ದೃಶ್ಯ ಇಳಿ ಬಿತ್ತು. ಥಟಕ್ಕನೆ ಏನೂ ಹೊಳೆಯಲಿಲ್ಲ. ಇಂಗ್ಲಿಷ್ ಮೂಲಕ್ಕೆ ಹೋಲಿಸಿ ನೋಡಿದೆ. ಆಗಲೂ ಬಗೆಹರಿಯಲಿಲ್ಲ. ಆ ಮೇಲೆ ಕುತೂಹಲಕ್ಕಾಗಿ ನೋಡಿದರೆ 144ನೆ ಪುಟದಿಂದ 161ನೆ ಪುಟಕ್ಕೆ ನಾಟಕ ಎಗರಿದೆ. ನನ್ನ ಪುಸ್ತಕಕ್ಕೆ ಮಾತ್ರ ಆ ರೀತಿ ಇದೆಯೋ ಬೇರೆ ಪುಸ್ತಕಗಳ ಗತಿಯೂ ಇದೇನೋ ‘ಅಂಕಿತ'ದವರೇ ಹೇಳಬೇಕು.

ಈ ನಾಟಕದ ಅನುವಾದ ರೋಮಿಯೋ ಜೂಲಿಯಟ್ ನಾಟಕದ ಅನುವಾದಕ್ಕಿಂತ ಬಹುಮಟ್ಟಿಗೆ ಸುಧಾರಿಸಿದೆ. ಆದುದರಿಂದಲೇ ಒಟ್ಟು ಒಂದು ಸ್ವರೂಪ ಕಾಪಾಡಲು ಅದು ಸಮರ್ಥವಾಗಿದೆ. ಬಹುತೇಕ ಬ್ಲಾಂಕ್ವರ್ಸಿನ ನಡಿಗೆ ಒಂದು ರೀತಿಯಲ್ಲಿದ್ದರೂ ದೃಶ್ಯಾಂತ್ಯದಲ್ಲಿ ಅಂತಹ ನಡಿಗೆ ಚಂದವಾಗಿ ಬಂದಿದೆ ಶೇಕ್ಸ್ ಪಿಯರ್ ದೃಶ್ಯಾಂತ್ಯಗಳನ್ನು ತೀರ ಹೆಚ್ಚಾದ ಗಮನವಿರಿಸಿ ಮಾಡುತ್ತಾನೆ. ಯಾವಾಗಲೂ ಕೊನೆಯ ಪಂಕ್ತಿಗಳು ಪ್ರಾಸಬದ್ಧವಾಗಿರುತ್ತವೆ. ಪ್ರಸ್ತಾವನೆಯೂ ನಾಟಕಕ್ಕೆ ಒಪ್ಪವಿಟ್ಟಂತೆ ಎಷ್ಟು ಬೇಕೋ ಅಷ್ಟು ಮಾತ್ರ ದೀರ್ಘವಾಗಿದೆ. ಆ ನಿರೂಪಣೆಯೂ ಲಕ್ಷಣವಾಗಿದೆ.

ಈ ನಾಟಕವು ಗಂಭೀರವಾದ ಪ್ರಾಚೀನ ನಾಟಕ. ಇಲ್ಲಿ ಬಳಸಿರುವ ಕೆಲವು ಶಬ್ದಗಳು ಆಧುನಿಕವಾದವು. ಆದುದರಿಂದ ಬಹುಶ: ಆ ಗಾಂಭೀರ್ಯಕ್ಕೆ ಹೊಂದಲಾರದೇನೋ! ಬುಲಾವು, ಪೆನ್ನು, ಅಂಬೋಣ, ಖಾವಂದರು, ಖಿಲ್ಲೆ, ಜಿಹುಜೂರ್, ಹರಾಮಿ, ಜರೂರು, ಮೊಖ್ತ, ಗುಲಾಮಿ, ದಾಖಲು, ತಪಶೀಲು, ಜವಾಬು-ಎರಡನ್ನು ಬಿಟ್ಟರೆ ಮಿಕ್ಕವು ಉರ್ದು ಭಾಷೆಯವು ಎಂಬುದು ಕುತೂಹಲದ ಅಂಶ.

ರಚನೆಯಲ್ಲಿ ಕೆಲವೆಡೆ ತೊಡಕು ಇದ್ದ ಹಾಗೆ ಇದೆ:

ಕಾಲದ ಪ್ರಬಲ ಒತ್ತಡ.....ಆಜ್ಞಾಪಿಸುತ್ತದೆ.(ಪು 37)
ಹತ್ತಿಕ್ಕಲಾರದಂಥವು ಅವಳ ದಾಂಧಲೆಗಳು (ಪು 61)
ಈ ವರೆಗಿನ ಮಾತುಗಳು...ಮಾತನಾಡಲಾರದೆ (ಪು 65)
ನನ್ನ ಹೃದಯ ಹಿಡುವಳಿದಾರಳಾಗಿ...(ಪು 87)
ಇವು ಕೆಲವು ನಿದರ್ಶನಗಳು. ಉಳಿದವನ್ನು ನನ್ನ ಪ್ರತಿಯಲ್ಲಿ ಗುರುತುಮಾಡಿಕೊಂಡಿದ್ದೇನೆ.
ಹಾಗೆಯೇ ರಚನೆಯ ಸುಂದರವಾಗಿರುವ ಸಾಲನ್ನೂ ಗುರುತಿಸಿದ್ದೇನೆ:
ದೇವಾನುದೇವತೆಗಳು......ಕರೆಯಲಿ(ಪು 41)
-ನಾಟಕದ ಕೊನೆಯ ದೃಶ್ಯ.

ಚಾರಿತ್ರಕ ನಾಟಕ, ಅದೂ ಬೇರೆ ಸಂಸ್ಕೃತಿಯ ಬೇರೆ ಕಾಲದ ನಾಟಕದ ಅನುವಾದ ಕಷ್ಟ. ಯಾವಾಗಲೂ ಭಾಷೆ ಕೈಕೊಡುತ್ತದೆ. ಆದುದರಿಂದಲೇ ಶೂರಸೇನ ಚರಿತೆ, ಬಿರುಗಾಳಿ, ರಕ್ತಾಕ್ಷಿ ಮುಂತಾದ ರಚನೆಗಳು ರೂಪಾಂತರವಾಯಿತೇ ಹೊರತು ಅನುವಾದವಾಗಲಿಲ್ಲ. ರೂಪಾಂತರದಲ್ಲಿ ಸಾರ ಹಾಗೆಯೇ ಉಳಿದು ಭಾಷೆ ಬೇರೆಯಾಗುತ್ತದೆ. ಅವು ಆ ಕಾರಣದಿಂದ ಅವು ಯಶಸ್ವಿಯೂ ಅಭಿನಯ ಯೋಗ್ಯವೂ ಕೂಡ ಆಗುತ್ತದೆ.

ಇರಲಿ. ಇಷ್ಟೆಲ್ಲ ನಿರ್ಬಂಧಗಳ ನಡುವೆಯೂ ನಾಟಕದ ಅನುವಾದವನ್ನು ನೀವು ಶ್ರದ್ಧೆಯಿಂದ ಆಸೆಯಿಂದ ನಿರ್ವಹಿಸಿರುವುದು ಪ್ರಶಂಸನೀಯವಾಗಿದೆ. ನಿಮ್ಮ ಮುಂದಿನ ಪುಸ್ತಕವು ಇದಕ್ಕಿಂತಲೂ ಸಮರ್ಪಕವಾಗಿ ಬರುತ್ತದೆ ಎಂಬ ನಂಬಿಕೆ ನಿಮ್ಮ ಸ್ನೇಹಿತನಾದ ನನಗಿದೆ. ಅಭಿನಂದನೆಗಳು

ವಿಶ್ವಾಸದಿಂದ
ದೇಶಕುಲಕರ್ಣಿ

ದೇಶಕುಲಕರ್ಣಿ ನನ್ನ ದೀರ್ಘಕಾಲದ ಮಿತ್ರರು. ನಾವಿಬ್ಬರೂ ಬರಹಗಾರರು. ಸಾಹಿತ್ಯದಲ್ಲಿ ಆಸಕ್ತಿ ಉಳ್ಳವರು ಎನ್ನವುದು ತಿಳಿಯುವುದಕ್ಕೂ ಹಿಂದಿನ ಗೆಳೆತನ ನಮ್ಮದು. ನಂತರ ನಮ್ಮ ನಡುವೆ ಸಾಹಿತ್ಯ, ಕಲೆಗಳ ಬಗೆ ಚರ್ಚೆ ಶುರುವಾಯಿತು. ಕನ್ನಡ ಹಾಗೂ ಪಾಶ್ಚಾತ್ಯ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದರು. ಬಹಳ ಕಟ್ಟುನಿಟ್ಟಿನ ಮನುಷ್ಯ, ಖಂಡಿತವಾದಿ. ಸಾಹಿತ್ಯ, ಕಲೆ, ಪ್ರಸಕ್ತ ವಿದ್ಯಮಾನಗಳ ವಿಚಾರ ಬಂದಾಗ ಸ್ನೇಹದ ಮುಲಾಜುಗಳನ್ನು ದೂರವಿಟ್ಟು ವಸ್ತುನಿಷ್ಠವಾಗಿ ನಿರ್ಭಯದಿಂದ ಮಾತನಾಡುತ್ತಿದ್ದರು, ಬರೆಯುತ್ತಿದ್ದರು. ಅವರ ವಸ್ತುನಿಷ್ಠ ವಿಮರ್ಶೆಯಿಂದ ನನ್ನ ಬೆಳವಣಿಗೆಗೆ ಅನುಕೂಲವಾಗಿದೆ. ಅವರು ಒಳ್ಳೆಯ ಕವಿಯೂ ಆಗಿದ್ದರು. ಆದರೆ ಅವರಿಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ. ಅವರು ನಿವೃತ್ತಿಯ ನಂತರ ಕೆಲವೇ ವರ್ಷಗಳಲ್ಲಿ ನಮ್ಮನ್ನು ಅಗಲಿದರು. ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿಗಳಂಥ ಸಾಂಸ್ಕೃತಿಕ ಸಂಸ್ಥೆಗಳು ಒಂದು ಹನಿ ಅಶ್ರುತರ್ಪಣವನ್ನೂ ನೀಡಿ ಸ್ಮರಿಸಲಿಲ್ಲ.

ಈ ಅಂಕಣದ ಹಿಂದಿನ ಬರಹಗಳು:
ಎಂದಿಗೂ ಒಳಗೊಳ್ಳದ ಅಕಾಡೆಮಿಕ್ ವಲಯಗಳು
ಪತ್ರಗಳನ್ನು ಬರೆಯುವುದು ನನ್ನ ವೃತ್ತಿಯ ಒಂದು ಕ್ರಮವನ್ನಾಗಿ ರೂಢಿಸಿಕೊಂಡೆ
ಅಂತ:ಸತ್ವಕ್ಕೆ ಪ್ರಾಣವಾಯು ತುಂಬುತ್ತಿದ್ದ ಪತ್ರಗಳು
‘ಸಾಹಿತ್ಯ ಕೃತಿಯೊಂದರ ವಿಮರ್ಶೆಯ ಮಾನದಂಡ ಅದರಲ್ಲೇ ಅಂತರ್ಗತವಾಗಿರುತ್ತದೆ’
ಹಿರಿಯರ ವಿಮರ್ಶಾತ್ಮಕ ಪತ್ರಗಳಿಂದ ಓದುಗರ ಅಪೇಕ್ಷೆ ತಿಳಿಯುವಲ್ಲಿ ಸಹಾಯವಾಗಿದೆ
‘ಜನಾಭಿಪ್ರಾಯ ರೂಪಿಸುವ ಸಂಪಾದಕೀಯ ಇಲ್ಲದ ಪತ್ರಿಕೆ ಆತ್ಮವಿಹೀನ’: ಜಿ.ಎನ್. ರಂಗನಾಥರಾವ್

‘ಮರಳಿ ಯತ್ನವ ಮಾಡು' ಎನ್ನುತ್ತಾ ಉತ್ಸಾಹ ತುಂಬುವ ಆಪ್ತರ ಪತ್ರಗಳು
ಹೊಸ ರಚನೆಗೆ ಪ್ರೇರಕವಾಗುವ ಪತ್ರಗಳು
ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...