ನೋಟದಲ್ಲಿ ಹುಡುಕಾಟವಿದ್ದರೆ ಪುಟ್ಟ ವಿಷಯವೂ ದೊಡ್ಡ ಪಾಠ ಶಾಲೆಯಾಗುತ್ತದೆ


"ಮನುಷ್ಯ ಕೆಟ್ಟವನೆನಿಸಿಕೊಳ್ಳುವುದು ಹಿಂದೆ ಮುಂದೆ ಯೋಚಿಸದೆ ಹರಿಬಿಡುವ ತನ್ನ ನಾಲಿಗೆಯಿಂದಲೇ. ಮಾತು ಮಧುರವಾಗಿದ್ದರೆ ನಯವಾಗಿದ್ದರಷ್ಟೇ ಮನಸ್ಸಿಗೆ ಹಿತ. ಅದಲ್ಲದೆ ಚುಚ್ಚುನುಡಿಗಳು, ಅಸೂಯೆ ತುಂಬಿದ ಮಾತುಗಳು ಯಾರಿಗೂ ಇಷ್ಟವಾಗುವುದಿಲ್ಲ" ಎನ್ನುತ್ತಾರೆ ನಯನ ಬಜಕೂಡ್ಲು. ಅವರು ಲೇಖಕಿ ಅಕ್ಷತಾರಾಜ್ ಪೆರ್ಲ ಅವರ ‘ಅವಲಕ್ಕಿ ಪವಲಕ್ಕಿ’ ಲೇಖನಗಳ ಸಂಗ್ರಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಬದುಕಿನ ವ್ಯಾಖ್ಯಾನವನ್ನು ಡಿ. ವಿ. ಜಿ ಯವರಿಗಿಂತ ಮಿಗಿಲಾಗಿ ಬೇರೆ ಯಾರೂ ವಿವರಿಸಲಾರರು. ಬದುಕೆಂದರೆ ಏನು ಅನ್ನುವುದನ್ನು ಅವರ ಕಗ್ಗಗಳು ಬಹಳ ಸರಳವಾಗಿ ವಿವರಿಸುತ್ತವೆ. ಈ ಕಗ್ಗಗಳನ್ನೊಳಗೊಂಡ ಬರಹದೊಂದಿಗೆ ಆರಂಭಗೊಳ್ಳುವ ಮೊದಲ ಲೇಖನ. ಇಲ್ಲಿ ಪ್ರತಿಯೊಬ್ಬನ ದೃಷ್ಟಿಕೋನವೂ ವಿಭಿನ್ನ. ಆ ದೃಷ್ಟಿಕೋನದಂತೆ ಅವರವರ ಬದುಕು. ಪ್ರತಿಯೊಬ್ಬರಿಗೂ ಆಯ್ಕೆಯ ಸ್ವಾತಂತ್ರ್ಯವಿದೆ. ಹೇಗೆ ಬದುಕುತ್ತೇವೆ ಅನ್ನುವುದು ನಮ್ಮ ಆಯ್ಕೆಯ ಮೇಲೆ ಅವಲಂಬಿತ.

ಬಹಳ ಹಿಂದಿನ ಕಾಲದಿಂದಲೂ ಮಹಿಳೆ ತನ್ನ ಮನೆ ಕುಟುಂಬವಷ್ಟೇ ಅಲ್ಲದೆ ಹೊರಗಿನ ಕ್ಷೇತ್ರಗಳಲ್ಲೂ ತನ್ನದೇ ಆದ ರೀತಿಯಲ್ಲಿ ಸಾಧನೆ ಮಾಡುತ್ತಾ ಬಂದಿದ್ದಾಳೆ. ಆದರೆ ಆ ಸಾಧನೆ ಎಷ್ಟೇ ದೊಡ್ಡದಾಗಿದ್ದರೂ ಅದು ಬೆಳಕಿಗೆ ಬರದೆ ತೆರೆಮರೆಗೆ, ಕತ್ತಲೆಗೆ ಸರಿದದ್ದೇ ಹೆಚ್ಚಿಗೆ. ಅವಳೂ ಅಷ್ಟೇ ಇಂದಿಗೂ ಯಾವ ಹೊಗಳಿಕೆ, ಸನ್ಮಾನ, ಗುರುತಿಸುವಿಕೆಯ ಹಂಗಿಲ್ಲದೆ ಮುಂದೆ ಸಾಗುತ್ತಲೇ ಇದ್ದಾಳೆ. ಸಾಮಾನ್ಯವಾಗಿ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸುತ್ತಾ ಸಾಗುತ್ತಿದ್ದಾಳೆ. ಈ ಗುರುತಿಸುವಿಕೆಯ ಆಸೆ ಇಲ್ಲದೆ ಸಾಗುತ್ತಿರುವುದರಿಂದಲೇ ಅವಳು ಎತ್ತರಕ್ಕೆ ಏರುತ್ತಿರುವುದು. ಲಿಂಗ ತಾರತಮ್ಯ ಅನ್ನುವುದು ಹಿಂದಿನಿಂದಲೂ ನಮ್ಮ ಸಮಾಜವನ್ನು ಹೇಗೆ ಆವರಿಸಿಕೊಂಡಿದೆ ಅನ್ನುವುದನ್ನು"ಇವಳಿಗೇಕೆ ಬೇರೆ ಹೆಸರು" ಲೇಖನದಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ ಮತ್ತು ಇದು ಸತ್ಯ ಕೂಡ. ಸಾಧನೆಯ ಪಥದಲ್ಲಿ ಹೆಜ್ಜೆ ಇರಿಸುವ ಹೆಣ್ಣು ಇದಾವುದನ್ನು ಗಣನೆಗೆ ತೆಗೆದುಕೊಳ್ಳಲಾರಳು. ತನ್ನ ಪಾಡಿಗೆ ತಾನು ನಿರಂತರ ಸಾಗುತ್ತಲೇ ಇರುವಳು ಅವಳು.

ಮೊದಲು ಒಂದು ಕಾಲದಲ್ಲಿ ಕೂಡು ಕುಟುಂಬವಿತ್ತು. ಎಲ್ಲರೂ ಒಟ್ಟಾಗಿ ಜೀವಿಸುತ್ತಿದ್ದರು. ಕಾಲಕ್ರಮೇಣ ಈ ಕುಟುಂಬಗಳು ಒಡೆದು ಅಮ್ಮ, ಅಪ್ಪ, ಗಂಡ, ಹೆಂಡತಿ, ಮಕ್ಕಳು ಮಾತ್ರ ಬೇರೆಯಾಗಿ ಬದುಕಲು ಶುರು ಮಾಡಿದರು. ಆಗಲೇ ಅನುಬಂಧ, ನೆಂಟರು ಅನ್ನುವುದು ಸೆಳೆತ ಕಳೆದುಕೊಳ್ಳ ತೊಡಗಿದ್ದವು. ಈಗ ಇನ್ನೂ ಮುಂದುವರೆದು ಗಂಡ, ಹೆಂಡತಿ, ಮಗುವಷ್ಟೇ ಒಂದು ಸಂಸಾರದಲ್ಲಿ ಕಾಣಸಿಗುತ್ತಾರೆ. ಹೀಗಿದ್ದರೂ ಮಕ್ಕಳು ತಮ್ಮ ಹೆತ್ತವರಿಂದಲೂ ಅಂತರ ಕಾಯ್ದುಕೊಳ್ಳ ತೊಡಗಿದ್ದಾರೆ. ಇನ್ನು ಮುಂದೆ ಬಹುಷಃ ಒಬ್ಬಂಟಿಗಳಾಗಿ ಬದುಕುವ ದಿನಗಳು ಬರಬಹುದೇನೋ. ಮಕ್ಕಳು ಒಂದು ಮನೆಯಲ್ಲಿ ಬೇರೆ ಕೋಣೆ ಹೊಕ್ಕು ಅಂತರ ಕಾಯ್ದುಕೊಳ್ಳುವುದನ್ನು ಅಭ್ಯಾಸ ಮಾಡಿಸಿರುವವರು ಹೆತ್ತವರೇ ಆಗಿರುತ್ತಾರೆ. ಇದರ ಪರಿಣಾಮಗಳ ಕುರಿತಾದ ಪರಿಣಾಮಕಾರಿ ಬರಹ.

ಮನುಷ್ಯ ಕೆಟ್ಟವನೆನಿಸಿಕೊಳ್ಳುವುದು ಹಿಂದೆ ಮುಂದೆ ಯೋಚಿಸದೆ ಹರಿಬಿಡುವ ತನ್ನ ನಾಲಿಗೆಯಿಂದಲೇ. ಮಾತು ಮಧುರವಾಗಿದ್ದರೆ ನಯವಾಗಿದ್ದ ರಷ್ಟೇ ಮನಸ್ಸಿಗೆ ಹಿತ. ಅದಲ್ಲದೆ ಚುಚ್ಚುನಡಿಗಳು, ಅಸೂಯೆ ತುಂಬಿದ ಮಾತುಗಳು ಯಾರಿಗೂ ಇಷ್ಟವಾಗುವುದಿಲ್ಲ. ಮನಸ್ಸು ಏನೇ ಅಂದರೂ ಅದನ್ನು ಮಾತಿನ ರೂಪದಲ್ಲಿ ಹೊರ ಹಾಕುವ ನಾಲಿಗೆಗೆ ಲಗಾಮು ಇರಬೇಕು. ಆಗ ನಮ್ಮ ಸುತ್ತಲಿನ ಜಗತ್ತು ಕೂಡ ಸುಂದರವಾಗಿರುತ್ತದೆ.

ಹಿಂದೊಂದು ಕಾಲವಿತ್ತು, ಮನೋರಂಜನೆ ಎಂದರೆ ಮುಖ್ಯವಾಗಿ ಓದು ಮಾತ್ರವಿತ್ತು. ಊರಿಗೊಂದು ಗ್ರಂಥಾಲಯ. ಅಲ್ಲಿಂದ ಹುಡುಕಿ ತಂದು ಓದಿನಲ್ಲಿ ತಲ್ಲಿನಳಾಗದ ಪುಸ್ತಕಗಳಿಲ್ಲ. ಅವು ನೀಡುತ್ತಿದ್ದ ಮನರಂಜನೆ, ಕಟ್ಟಿಕೊಡುತ್ತಿದ್ದ ಸುಂದರವಾದ ಕಾಲ್ಪನಿಕ ಜಗತ್ತು ಇನ್ನೊಂದಿಲ್ಲ. ಈ ಓದಿನ ಹವ್ಯಾಸಕ್ಕೆ ಅಡಿಪಾಯ ಅಜ್ಜ ಅಜ್ಜಿ ಹೇಳುತ್ತಿದ್ದ ಕಥೆಗಳು. ಈ ಕಥೆಗಳನ್ನು ಕೇಳಿಯೇ ಓದಿನಲ್ಲಿ ಆಸಕ್ತಿ ಹುಟ್ಟಿಕೊಂಡದ್ದು. ಇವತ್ತು ಪ್ರಪಂಚ ಬದಲಾಗಿದೆ, ಅಂಗೈಯಗಲ ಪೆಟ್ಟಿಗೆಯೊಳಗೆ ಇಡೀ ಪ್ರಪಂಚದ ದರ್ಶನವಾಗುತ್ತದೆ. ಆದರೆ ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ ಅನ್ನುವುದನ್ನು ಈ ಪೆಟ್ಟಿಗೆ ನುಂಗಿ ಹಾಕುತ್ತದೆ ಅನ್ನುವ ಸತ್ಯ ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ. ಅಜ್ಜ ಅಜ್ಜಿ ಹೇಳಿದ ಕಥೆ ಕೇಳಿ ಬೆಳೆಯಬೇಕಾದ ಮಕ್ಕಳು ಮೊಬೈಲ್ ಗೇಮ್ ಗಳ ದಾಸರಾಗಿ ಹಠವಾದಿಗಳಾಗಿ, ಮೊಂಡರಾಗಿ ಬೆಳೆಯುತ್ತಿದ್ದಾರೆ.

ಹಲವಾರು ಹಿಂದಿನಿಂದ ಬಂದ ಪದ್ಧತಿ, ಶಾಸ್ತ್ರ, ಸಂಪ್ರದಾಯ, ಆಚರಣೆಗಳನ್ನು ನಾವು ಹಾಗೆಯೇ ಅನುಸರಿಸಿಕೊಂಡು ಬರುತ್ತಿರುತ್ತೇವೆ. ಆದರೆ ಯಾಕಾಗಿ ಆಚರಿಸುತ್ತೇವೆ, ಅವುಗಳ ಮಹತ್ವ ಏನು?, ಅದನ್ನು ಯಾಕೆ ಅನುಸರಿಸುತ್ತಾ ಬಂದಿದ್ದಾರ ಅನ್ನುವುದು ಮಾತ್ರ ಹಲವಾರು ಬಾರಿ ಗೊತ್ತಿರುವುದಿಲ್ಲ. ನಮ್ಮ ಹಿಂದಿನವರು ಮಾಡಿದ್ದಾರೆ, ಈಗ ನಾವು ಕೂಡ ಅದನ್ನು ಮುಂದುವರಿಸುತ್ತೇವೆ, ನಮ್ಮ ಮುಂದಿನ ಪೀಳಿಗೆಯೂ ಅನುಸರಿಸುತ್ತದೆ ಅನ್ನುತ್ತೇವೆ. ಯಾವುದೇ ವಿಚಾರವಾದರೂ ಅದರ ಹಿನ್ನೆಲೆ ಏನು ಅನ್ನುವುದನ್ನು ಅರಿತಿರುವುದು ಬಹಳ ಮುಖ್ಯ. ಕುರುಡರಂತೆ ಅನುಕರಿಸುವುದರಿಂದ ಏನೂ ಉಪಯೋಗವಿಲ್ಲ ಅನ್ನುವುದನ್ನು ಮನದಟ್ಟಾಗಿಸುವ ಒಂದು ಬರಹ. ಹಬ್ಬಗಳ ಆಚರಣೆಯ ಹಿಂದಿರುವ ವೈಜ್ಞಾನಿಕ ಕಾರಣ ಹಾಗೂ ಅದರ ಒಳಾರ್ಥ ಏನು ಅನ್ನುವುದನ್ನು ತೆರೆದಿಡುವ ಒಂದು ಲೇಖನ. ಯಾವುದನ್ನೇ ಆದರೂ ನಮ್ಮ ಹಿರಿಯರ ಸುಮ್ಮನೆ ಆಚರಿಸುತ್ತಾ ಬಂದಿಲ್ಲ. ಯಾವುದೇ ಆಚರಣೆಗೂ ಒಂದು ಹಿನ್ನಲೆ ಇದ್ದೇ ಇದೆ. ಹಿಂದೊಂದು ಕಾಲವಿತ್ತು ನೆಂಟರಿಷ್ಟರು ಬಂದು ಜೊತೆಗೂಡಿ ವಾರಗಟ್ಟಲೆ ಇದ್ದು ಹೋಗುತ್ತಿದ್ದ ಕಾಲ. ಇವತ್ತು ವಾರಗಟ್ಟಲೆ ಬಿಟ್ಟು ಒಂದು ದಿನ, ಒಂದು ಗಂಟೆ ನಮ್ಮ ಆಪ್ತರೊಡನೆ ಉಳಿಯುವ, ಅವರೊಡನೆ ಹೊರಟೆ ಹೊಡೆಯುವ ವ್ಯವಧಾನವಿಲ್ಲದಷ್ಟು ವ್ಯಸ್ತ ನಾವೆಲ್ಲರೂ.

ಒಂದು ಸಂಸಾರದಲ್ಲಿ ಆ ಮನೆಯ ಸದಸ್ಯರೆಲ್ಲರೂ ಕಲೆತು ಬೆರೆತಾಗಲ್ಲಷ್ಟೇ ಭಾಂದವ್ಯ ಗಟ್ಟಿಗೊಳ್ಳುವುದು. ಈ ಎಲ್ಲರೂ ಒಟ್ಟು ಸೇರುವ ಸಂದರ್ಭವೆಂದರೆ ಅದು ಊಟದ ಹೊತ್ತು. ಮನೆಯ ಯಜಮಾನ/ಯಜಮಾನಿ ಹೊರಗೆ ದುಡಿಯಲು, ಮಕ್ಕಳ ಶಾಲೆಗೆ ಹೋಗುವವರು, ಹಾಗಾಗಿ ಎಲ್ಲರೂ ಒಟ್ಟು ಸೇರುವುದಾದರೆ ಅದು ರಾತ್ರಿ ಊಟದ ವೇಳೆ ಆಗಿರುತ್ತದೆ. ಇವತ್ತು ಆಧುನಿಕ ಜಗತ್ತು ತಂದ ಕುತ್ತು ಎಂದರೆ ಅದು ಮೊಬೈಲ್ ಅನ್ನುವ ಮಾಯಾ ಪೆಟ್ಟಿ. ಎಲ್ಲರೂ ನಗುನಗುತ್ತಾ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾ, ಹರಟುತ್ತಾ ಉಣ್ಣುವ ಸಮಯವನ್ನು ಈ ಮೊಬೈಲ್ ಕಸಿದುಕೊಂಡಿದೆ ಅನ್ನುವುದು ದುರಂತ. ಇಡೀ ಜಗತ್ತನ್ನೇ ತೋರಿಸುವ ಅದರೊಳಗೆ ಕಳೆದು ಹೋದರೆ ಊಟ ಮಾಡುವಾಗ ಏನು ತಿನ್ನುತ್ತಿದ್ದೇವೆ ಅನ್ನುವುದು ಕೂಡ ತಿಳಿಯದು. ಹೀಗಾಗಿ ಈ ಮೊಬೈಲ್ನ ಗೀಳು ಮನಸು ಮನಸುಗಳ ನಡುವೆ ಅಂತರವನ್ನು ಏರ್ಪಡಿಸುವುದೇ ಹೆಚ್ಚು. ಈ ವಿಚಾರದಲ್ಲಿ ಮಂದಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಸಂಬಂಧಗಳು ಸೊಗಡನ್ನು ಕಳೆದುಕೊಂಡು ಬರಿ ವ್ಯವಹಾರಿಕವಾಗಿ ಉಳಿದುಬಿಡುವ ಅಪಾಯವಿದೆ. ಅರ್ಥವಾಗುವಂತೆ, ಎಚ್ಚರಿಸುವಂತೆ ಬರೆದ ಈ ಲೇಖನ ಮನಸ್ಸಿಗೆ ಬಹಳ ಹತ್ತಿರವಾಯಿತು.

ಮನಸ್ಸನ್ನು ಹಗುರವಾಗಿಸಿಕೊಳ್ಳಬೇಕು ನಿಜ. ಹಾಗಂತ ಆ ಬರದಲ್ಲಿ ಆತ್ಮೀಯರೆನಿಸಿಕೊಂಡವರೊಡನೆ ಎಲ್ಲಾ ವ್ಯಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು ಸರಿಯಲ್ಲ. ಎಷ್ಟೇ ಆತ್ಮೀಯರಾದರು ಕೂಡ ಎಲ್ಲೋ ಒಂದು ಕಡೆ ಭಿನ್ನಾಭಿಪ್ರಾಯ ಮೂಡಿ ಸಂಬಂಧಗಳಲ್ಲಿ ಬಿರುಕು ಮೂಡದೆ ಇರುವುದಿಲ್ಲ. ಹಾಗಾದಾಗ ನಮ್ಮ ಬದುಕು ಅವರ ಕೈಯಲ್ಲಿ ಹೇಗೆ ದಾಳವಾಗುತ್ತದೆ ಅನ್ನುವುದರ ಅರಿವು ಮೂಡಿಸುವಂತಹ ಬರಹ. ಈ ಜಗತ್ತಿನಲ್ಲಿ ಪೂರ್ತಿ ವಿಶ್ವಾಸ, ನಂಬಿಕೆಗೆ ಅರ್ಹರೆನಿಸಿಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಈ ಮಂದಿಯನ್ನು ಗುರುತಿಸಿ ವಿಶ್ವಾಸ ಬಂದ ಮೇಲಷ್ಟೇ ನಮ್ಮ ಬದುಕಿನ ಪುಸ್ತಕವನ್ನು ಅವರ ಮುಂದಿಡಬೇಕು.

"ಅವರಂತೆ ಇರಲು ಬಿಡಬೇಕಿದೆ"- ಇವತ್ತಿನ ವಾಸ್ತವವನ್ನು ಪರಿಚಯಿಸುವ ಲೇಖನ. ನಮ್ಮ ಮಕ್ಕಳು ದೊಡ್ಡ ಸಾಧನೆ ಮಾಡಬೇಕೆಂದು ಕನಸು ಹೊತ್ತು ಅವರನ್ನು ಬೆಳೆಸುವ ಹಾದಿಯಲ್ಲಿ, ಅವರ ಈ ನಾಗಾಲೋಟದ ಬೆಳವಣಿಗೆಯ ಹಂತದಲ್ಲಿ ಅವರನ್ನು ನಾವು ಬಹಳ ಸೂಕ್ಷ್ಮವಾದ ವಿಚಾರ ಹಾಗೂ ಸಾಮಾನ್ಯ ಪರಿಸ್ಥಿತಿಗಳನ್ನು ಎದುರಿಸುವುದು ಹೇಗೆ ಅನ್ನುವುದನ್ನು ಹೇಳಿಕೊಡುವಲ್ಲಿ ಎಡವುತಿದ್ದೇವೆ. ಎಲ್ಲದರಲ್ಲೂ ಶೇಕಡ ನೂರರಷ್ಟು ಫಲಿತಾಂಶ ತರುವ ಮಕ್ಕಳು ದಿನನಿತ್ಯದ ಬದುಕಿನಲ್ಲಿ ನಡೆಯುವ ಸಾಮಾನ್ಯ ಸಂಗತಿಗಳನ್ನು ಎದುರಿಸುವಲ್ಲಿ ಶೂನ್ಯ. ಸಣ್ಣ ಸಣ್ಣ ಸಂಗತಿಗಳು- ಅಂಗಡಿಗೆ ಹೋಗಿ ಸಾಮಾನು ತರುವುದು, ಬ್ಯಾಂಕಿನ ಪುಟ್ಟ ಪುಟ್ಟ ವ್ಯವಹಾರ, ಬಂಧುಗಳೊಂದಿಗೆ ಸ್ನೇಹದಿಂದ ಮಾತನಾಡುವುದು, ಮನೆಗೆ ಬಂದ ಅತಿಥಿಗಳನ್ನು ಮಾತನಾಡಿಸುವುದು, ಸತ್ಕರಿಸುವುದು, ಇವೆಲ್ಲದಕ್ಕೂ ಅವರು ಇನ್ನೊಬ್ಬರನ್ನೇ ಅವಲಂಬಿಸಿರುತ್ತಾರೆ. ಇದು ಇಂದಿನ ವಾಸ್ತವ. ಅದು ಬದಲಾಗಬೇಕಿದೆ. ಮಕ್ಕಳನ್ನು ಮುದ್ದು ಮಾಡುವುದು ಬೆಂಬಲಿಸುವುದು ಒಳ್ಳೆಯದೇ, ಆದರೆ ಅತಿ ಮುದ್ದು ಸ್ವಂತದ ಕೆಲಸಗಳು ಗೊತ್ತಾಗದಷ್ಟು ಬೆಂಬಲ ಇವೆಲ್ಲವೂ ನಮ್ಮ ಮಕ್ಕಳ ಬೆಳವಣಿಗೆಯ ಹಾದಿಗೆ ಮಾರಕ. ಇಲ್ಲೊಂದು ಬದಲಾವಣೆ ಬೇಕಿದೆ.

"ನೋಡುವ ನೋಟದಲ್ಲಿ ಹುಡುಕಾಟವಿದ್ದರೆ ಪುಟ್ಟ ವಿಷಯವೂ ದೊಡ್ಡ ಪಾಠದ ಶಾಲೆಯಾಗುತ್ತದೆ"- ಇದು ತುಂಬಾ ಸೆಳೆದ ಒಂದು ಲೇಖನದ ಸಾಲುಗಳು. ಎಷ್ಟೊಂದು ವಿಶಾಲವಾದ ಅರ್ಥವಿದೆ ಈ ಸಾಲುಗಳಲ್ಲಿ?, ನಾವು ಯಾವಾಗಲೂ ನಮ್ಮದೇ ಆದ ದೃಷ್ಟಿಕೋನವನ್ನು ಹೊಂದಿ ಅದೇ ಸರಿ ಅನ್ನುವುದನ್ನು ಗಟ್ಟಿಯಾಗಿಸುತ್ತ ಸಾಗುವುದೇ ಹೆಚ್ಚು. ಅದು ಕೆಲವೊಮ್ಮೆ ದಾರಿ ತಪ್ಪಿಸುವುದು ಇದೆ. ಹಾಗಾಗಿ ಒಂದೇ ದೃಷ್ಟಿಕೋನ ಹೊಂದುವುದಕ್ಕಿಂತ ಅದನ್ನು ಬದಲಾಯಿಸಿ ಯೋಚನೆ ಮಾಡಿದರೆ ನಮಗೆ ನಮ್ಮ ಜೊತೆ ಇರುವವರು, ಬೇರೆಯವರು, ಅವರ ಪರಿಸ್ಥಿತಿಯೂ ಅರ್ಥವಾಗಬಹುದು. ಆಗ ಈ ಜಗತ್ತು ನಮ್ಮ ಪಾಲಿಗೆ ಸಹ್ಯವಾಗುತ್ತದೆ.

"ಅವಲಕ್ಕಿ ಪವಲಕ್ಕಿ" 55 ಪುಟ್ಟ ಪುಟ್ಟ ಲೇಖನಗಳನ್ನೊಳಗೊಂಡ ಸುಂದರ ವಿಚಾರಗಳಿಂದ ತುಂಬಿದ ಬರಹಗಳ ಗುಚ್ಚ. ಅಕ್ಷತಾ ರಾಜ್ ಪೆರ್ಲ ನಮ್ಮೂರಿನ ಹೆಮ್ಮೆಯ ಸಾಹಿತಿ, ಲೇಖಕಿ, ಬರಹಗಾರ್ತಿ. ಆಕಾಶವಾಣಿಯಲ್ಲೂ ಕೆಲಸ ಮಾಡುವ ಇವರ ತುಳು ಕಾರ್ಯಕ್ರಮಗಳು ತುಂಬಾ ಸೊಗಸಾಗಿ ಮೂಡಿ ಬರುತ್ತದೆ. ಇವರ ಕಾರ್ಯಕ್ರಮ ರೇಡಿಯೋದಲ್ಲಿ ಪ್ರಸಾರವಾಗುತ್ತದೆ ಎಂದು ಗೊತ್ತಾದರೆ ತಪ್ಪದೇ ಕಾದು ಕುಳಿತು ಆಲಿಸುವವಳು ನಾನು. ಈ ಲೇಖನ ಸಂಗ್ರಹದಲ್ಲಿರುವ ಪ್ರತಿಯೊಂದು ಬರಹವು ಅಕ್ಷತಾ ಅವರ ಗಮನಿಸುವಿಕೆ, ವಿಶಾಲ ದೃಷ್ಟಿಕೋನ, ಸುತ್ತಮುತ್ತಲಿನ ವಿಚಾರಗಳನ್ನು ಆಸ್ವಾದಿಸುವಿಕೆ ಎಂಥಹುದು ಅನ್ನುವುದನ್ನು ತೆರೆದಿಡುತ್ತವೆ. ಇವರು ಬರೆಯುವ ಪ್ರತಿಯೊಂದು ಬರಹವು ನೇರಾ ನೇರ, ಯಾವ ಅತಿರಂಜಿಸುವಿಕೆಯು ಇಲ್ಲ. ಈ ಒಂದು ಅಂಶ ಸಾಕು ಓದುಗರನ್ನು ಸೆಳೆಯಲು. ಇಲ್ಲಿರುವ ಲೇಖನಗಳು ಎಷ್ಟು ಶಕ್ತಿಯುತ ಎಂದರೆ ಪ್ರತಿಯೊಂದು ಬರಹವೂ ಆಲೋಚನೆಗಳನ್ನು ಹುಟ್ಟು ಹಾಕುತ್ತವೆ. ಅವೆಲ್ಲವನ್ನು ಇಲ್ಲಿ ಬರೆಯುವುದು ಕಷ್ಟ. ನೋಡು ನೋಡುತ್ತಲೇ ಬೆಳೆಯುತ್ತಿರುವ ಉದಯೋನ್ಮುಖ ಸಾಹಿತಿ ನಮ್ಮ ಅಕ್ಷತಾ ಅವರು. ಈ ಬೆಳವಣಿಗೆ ಕಂಡು ಸಂತಸ ಪಡುವವರಲ್ಲಿ ನಾನೂ ಒಬ್ಬಳು. ಇವರ ಬೊಳ್ಳಿ, ಬೇಲಿ, ಸಾಪೋದ ಕಣ್ಣ್ ಇವೆಲ್ಲವೂ ತುಂಬಾ ಇಷ್ಟ. ಈಗ ಈ ಲೇಖನ ಸಂಗ್ರಹ. ಉತ್ತಮ ಬರಹಗಳಿಗೆ, ಬರಹಗಾರರಿಗೆ ಈ ಸಮಾಜದಲ್ಲಿ ಖಂಡಿತ ಪ್ರೋತ್ಸಾಹ ಇದ್ದೆ ಇದೆ. ಇವರು ನಮ್ಮೂರಿನವರು ಅನ್ನುವ ಹೆಮ್ಮೆ, ಅಭಿಮಾನ. ಅಕ್ಷತಾ ನಿಮ್ಮ ಬರಹಗಳಲ್ಲಿ ವಾಸ್ತವಂಶ, ಗಟ್ಟಿತನ ಇದೆ. ಇನ್ನಷ್ಟು ಸುಂದರ ಕೃತಿಗಳು ನಿಮ್ಮಿಂದ ಬರೆಯಲ್ಪಡಲಿ ಅನ್ನುವ ಹಾರೈಕೆ.

MORE FEATURES

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...