ನೋವು ಹಿಂದುರಿಗಿಸಲಾರದ ಸಾಲದಂತೆ…

Date: 18-03-2022

Location: ಬೆಂಗಳೂರು


'ಅನುಭವಿಸದ ಹೊರತು ನೋವು ಎಂದರೇನೆಂದು ಹೇಗೆ ಗೊತ್ತಿರಲು ಸಾಧ್ಯ? ನೋವು ಎನ್ನುವುದೊಂದು ಹಿಂದಿರುಗಿಸಲಾಗದ ಸಾಲದಂತೆ. ಅದೆಷ್ಟೇ ಜೀವ ತೇಯ್ದರೂ ತೀರಿಸಲಾಗದ ಮಣಭಾರದ ಸಾಲದಂತೆ-ನೋವುಗಳು. ಎಲ್ಲಿಂದೆಲ್ಲಿಗೆ ನಮ್ಮನ್ನು ಕೊಂಡೊಯ್ಯುತ್ತವೆ ಎನ್ನುವ ಅರಿವು ಕೂಡಾ ಬಾರದ, ಅಳತೆ ತೂಕಕ್ಕೂ ಸಿಗದ ಭಾವತೀವ್ರತೆಯೇ ನೋವು' ಎನ್ನುತ್ತಾರೆ ಲೇಖಕ ಸಂತೋಷ್ ಅನಂತಪುರ. ಅವರು ತಮ್ಮ ಅನಂತಯಾನ ಅಂಕಣದಲ್ಲಿ ನೋವಿನ ಮೂಲ ಹಾಗೂ ಅದರ ತೀವ್ರತೆಯ ಕುರಿತು ಬರೆದಿದ್ದಾರೆ.

ಬಹುಪಾಲು ಸಮಯ ನಮ್ಮದೇ ಚಿಂತನೆ ಮತ್ತದರ ಪ್ರಕ್ರಿಯೆಗಳ ನಡುವಿನ ಜಂಜಾಟದಲ್ಲಿರುತ್ತೇವೆ. ಮತ್ತವುಗಳು ಒತ್ತಡ, ಭಯ, ಆತಂಕಗಳನ್ನೂ ನಿರ್ಮಿಸಿ ಬಿಡುತ್ತವೆ. ಘಟಿಸದೆ ಇರುವಂತಹ ಘಟನೆಗಳ ಬಗೆಗಿನ ಹೆಚ್ಚುವರಿ ಚಿಂತೆಯು, ಪರಿಸ್ಥಿಯನ್ನು ಹದಗೆಟ್ಟು ಹೋಗುವಂತೆಯೂ ಮಾಡಿ ಬಿಡುತ್ತದೆ.

ಅಂತಹದ್ದೊಂದು ಘಟನೆಗಳು ನಡೆದಿರುವುದೇ ಇಲ್ಲ. ಅಂತಹದ್ದರಲ್ಲಿ ಒಂದೊಮ್ಮೆ ಹಾಗೇನಾದರೂ ಘಟಿಸಿತು ಎಂದಾದರೆ…ಎಂಬ ಆಲೋಚನೆಯು ಮೂಡಿ, ಶಾಂತ ಕೊಳವನ್ನು ಕದಡಿ ಬಿಡುವುದುಂಟು. 'ರೆ'ಗಳು ಹುಟ್ಟಿಸುವ ರಗಳೆಗಳ ಫಲವದು. ತತ್ಪರಿಣಾಮ ಅನಾವಶ್ಯಕವಾಗಿ ಎದೆಬಡಿತವನ್ನು ಹೆಚ್ಚಿಸಿಕೊಳ್ಳುತ್ತೇವೆ. ಸಾಲದ್ದಕ್ಕೆ ಮಿದುಳಿಗೆ ಅನಗತ್ಯ ಕೆಲಸವನ್ನೂ ಒದಗಿಸುತ್ತೇವೆ. ಊಹೆಗೂ ಮೀರಿ ವರ್ತಿಸಿ, ಕಲ್ಪಿಸಿಕೊಳ್ಳುವ ರೀತಿಯು ವಿಕಾರಗಳನ್ನು ಸೃಷ್ಟಿಸುವುದೇ ಹೆಚ್ಚು.

ಕಲ್ಪನೆಗೂ ನಿಲುಕದ ವಿಚಾರಗಳ ಕುರಿತಂತೆ ಯೋಚಿಸುತ್ತಾ, ಇನ್ನೂ ಮೊಳೆತೇ ಇರದ ವಿಷಯಗಳ ಬಗ್ಗೆ ತಲ್ಲಣಿಸುತ್ತಾ ಸಾಗುವ ಹಾದಿಯಲ್ಲಿ-‘ಅದೊಂದು ವೇಳೆ ಕೈ ತಪ್ಪಿ ಹೋದರೇನು ಗತಿ?’- ಅತಂತಕದ ಪ್ರಶ್ನೆಯು ಸಮರಕ್ಕೂ ಮೊದಲೇ ಸೋಲನ್ನು ಒಪ್ಪಿಕ್ಕೊಳ್ಳುವಂತೆ ಮಾಡಿ ಬಿಡುತ್ತದೆ.

ಮನಸ್ಸಿನಲ್ಲಿ ಮೂಡುವ ಏರಿಳಿತದ ಭಾವನೆಗಳನ್ನು ಹತೋಟಿಯಲ್ಲಿಡಲು ವಿಫಲವಾದುದರ ಫಲಿತಾಂಶವದು. ಯಾರು ನಮ್ಮ ಮುಂದಿದ್ದಾರೆ..ಯಾರನ್ನು ನಾವು ಹಿಂದಿಕ್ಕಿದ್ದೇವೆ ಎನ್ನುವುದು ಮುಖ್ಯವಾಗದೆ; ಯಾರು ನಮ್ಮ ಜೊತೆಯಲ್ಲಿದ್ದಾರೆ ಎನ್ನವುದು ಪ್ರಮುಖವಾಗಬೇಕು. ಹಾಗಾದಾಗ ಇಂತಹ ವೈಪರೀತ್ಯಗಳು ಘಟಿಸುವುದಿಲ್ಲ. ಆದರೆ ಏನು ಮಾಡೋಣ? ಹಾಗಾಗುವುದಿಲ್ಲವಲ್ಲ. ಆಗುವಂತದಿದ್ದರೂ ಈ ಕೆಟ್ಟ ಮನಸ್ಸು ಬಿಡುವುದುಂಟೇ? ಖುಷಿಯ ಕ್ಷಣಗಳಲ್ಲಿ ಅತಿ ಉತ್ಸಾಹಭರಿತರಾಗಿ, ದುಃಖದ ಸಮಯದಲ್ಲಿ ಶೋಚನೀಯ ಸ್ಥಿತಿಯೊಳಗಡೆ ಉರುಳಾಡಿ ಹೊರಳಾಡುವವರು ನಾವೇ. ಆ ಕೂಪದೊಳಕ್ಕೆ ನಮ್ಮನ್ನು ತಳ್ಳಲ್ಪಡುವವರು ಮತ್ತೆ ನಾವೇ ಆಗಿರುತ್ತೇವೆ.

ಈ ಎರಡೂ ತುದಿಗಳನ್ನು ಸರಿದೂಗಿಸಿವುದು ಹೇಗೆಂದು ಮನಸ್ಸು ಅರಿತುಕೊಂಡಲ್ಲಿ, ಸಮತೋಲನದಿಂದ ವಸ್ತುಸ್ಥಿಯನ್ನು ನಿಭಾಯಿಸಬಹುದಷ್ಟೆ. ಅಂತಹದ್ದೊಂದು ಸನ್ನಿವೇಶದೊಳಗಡೆ ಆಯಾ ಬದುಕನ್ನು ಇದ್ದ ಹಾಗೆಯೇ ಸ್ವೀಕರಿಸಿ ಅನುಭವಿಸಲು ಕಲಿಯಬೇಕು. ಅದಕ್ಕೊಂದು ಉತ್ತಮ ಮನಸ್ಸೂ ಇರಬೇಕು.

ನಿರಂತರವಾಗಿ ಒಂದೇ ತರವಾದ ಬದುಕು ಯಾರದ್ದೂ ಇರುವುದಿಲ್ಲ. ಬಾಳು ನಿಂತ ನೀರಲ್ಲ. ಅದಕ್ಕೆ ಹರಿದು ಮಾತ್ರವೇ ಗೊತ್ತು. ಹರಿಯುವುದೇ ಅದರ ಮೂಲ ಗುಣಸ್ವಭಾವ. ಪ್ರಕೃತಿಯಿಂದ ಜೀವಿತವನ್ನು ವಿಮುಖವಾಗಿಸಿದೇವೆಂದಾದರೆ ವಿಕೋಪಗಳು ಸಂಭವಿಸುವುದೇ ಹೆಚ್ಚು. ಹಾಗಿರಲು ಹರಿವ ಬಾಳಿನ ಓಘವನ್ನು ಅರಿತು ಅದರೊಳಗೆ ಬೆರೆಯುವ ಕಲೆಯನ್ನು ಸಿದ್ಧಿಸಿಕೊಳ್ಳಬೇಕು.

ಒಪ್ಪಿಕೊಂಡು ಸ್ವೀಕರಿಸಲ್ಪಡುವುದು ತ್ರಾಸದಾಯಕ ಕಾರ್ಯ. ಆದರೆ ಅಂತಹ ದರ್ದನ್ನು ಅನುಭವಿಸುವ ಗೋಜಿಗೆ ಹೋಗದೆ,ಅನಾಯಾಸವಾಗಿ ನಿರಾಕರಿಸಿ ಬಿಡುತ್ತೇವೆ. ಜೊತೆಗೆ ಒಪ್ಪಿಕೊಳ್ಳುವುದೂ ಇಲ್ಲವಷ್ಟೇ. ಮೇಲಾಗಿ ಸಾಧ್ಯವೇ ಇಲ್ಲವೆಂದು ಮುಖಕ್ಕೆ ಹೊಡೆದಂತೆ ಹೇಳಿಯೂ ಬಿಡುತ್ತೇವೆ. ಅಷ್ಟಕ್ಕೇ ಏನೋ ಸಾಧಿಸಿ ಬಿಟ್ಟೆವೆಂಬ ಖುಷಿ, ಶಾಂತಿ ಒಳಗೊಳಗೆ. ಮರ್ಕಟ, ವಿತಂಡ ಮನಸ್ಸಿನ ಯೋಚನೆಗಳಿಗೆ ಏನನ್ನೋಣ? ನಿರಾಕರಿಸಲು ಹೆಚ್ಚಿನ ಶ್ರಮ ಹಾಗೂ ವಿಶೇಷ ಕಲಿಕೆಯ ಅಗತ್ಯವಿರುವುದಿಲ್ಲ. ಆದರೆ ಸ್ವೀಕರಿಸಲು ವಿಶಾಲ ಹೃದಯ-ಮನಸ್ಸು ಇರಬೇಕಷ್ಟೇ. ಸ್ವೀಕರಿಸುವಾಗಿನ ಹಾದಿಯಲ್ಲಿ ಅಡಗಿರುವ ಸುಖವು ಒಂದೊಮ್ಮೆ ಹೊಮ್ಮಿ ಬಂದರೆ, ನಿರಾಕರಣೆಯ ದಾರಿಯಲ್ಲಿ ಹೊಂಚುಹಾಕಿ ಕಾದು ಕುಳಿತ ದುಃಖವು ಚಿಮ್ಮನೆ ಚಿಮ್ಮಿ ಬರುತ್ತದೆ.

ಬದುಕಿನ ಸುಖ-ದುಃಖ, ಫಲಾಪೇಕ್ಷೆಗಳು ನಮ್ಮ ಚಿಂತನೆಯ ಮುಷ್ಟಿಯಲ್ಲಿವೆ. ಅಲ್ಲಿರುವುದು ಇಲ್ಲಿಲ್ಲ. ಇಲ್ಲಿರುವುದು ಅಲ್ಲಿರುವುದಿಲ್ಲ ಎನ್ನುವ ಸಾರ್ವತ್ರಿಕ ಸತ್ಯವು ಸುಲಭದಲ್ಲಿ ಸ್ವೀಕರಿಸಲ್ಪಡುವುದಿಲ್ಲ. ಹಾಗಿರಲು ಬೋಗಾರೆ ದುಃಖದ ಅಳಲಿಗೆ ಕೊನೆ ಎಂಬುದೇ ಇರುವುದಿಲ್ಲ. ಕೋಮಲ ಬದುಕಿನ ಕತ್ತನ್ನು ಕೈಯಾರೆ ಹಿಚುಕುವ ಕೆಲಸ ನಮ್ಮಿಂದಲೇ ನಡೆಯುವುದು ಎನ್ನುವ ಸಾಮಾನ್ಯ ಜ್ಞಾನವೂ ನಮಗಿರುವುದಿಲ್ಲ. ತನಗೆ ದೊರಕದ್ದು, ಇತರರಿಗೆ ದೊರಕಿದಾಗ ಹುಟ್ಟುವ ತಳಮಳವು ಬಂಧವನ್ನು ಕಮರಿಸಿ ಬಿಡುವುದುಂಟು. ಅಂತಹ ಸ್ಥಿತಿಯಿಂದ ಹೊರಬರಬೇಕೆಂದಿದ್ದರೆ ವಿಶಾಲ ಮನಸ್ಸಿರಬೇಕು.

ಜೀವ, ಜೀವನದ ಹರಿಯುವಿಕೆಯು ಎಲ್ಲಿ? ಹೇಗೆ? ಹರಿಯಬೇಕು ಎಂಬುದನ್ನು ಮನಸ್ಸು ಆಗಾಗ ಹೃದಯಕ್ಕೆ ಹೇಳಿ ತೋರಿಸಬೇಕು. ಆಗಲೇ ಸಹಜ ಹರಿವಿನ ಹಾದಿಯು ತೆರೆಯಲು ಸಾಧ್ಯ. ತನಗೆ ತೋಚಿದಂತೆ ಹರಿವ ಬದುಕಿಗೆ ಒಡ್ಡು ಕಟ್ಟುವುದು ಸುಲಭದ ಕಾರ್ಯವಲ್ಲ. ಅಂಕು ಡೊಂಕಿನ ಹಾದಿಯೊಳಗೆ, ಚಕ್ರವ್ಯೂಹದ ಕೋಟೆಯೊಳಗೆ ಹರಿಯಲಿರುವ ಮಾರ್ಗವನ್ನು ತಾನೇ ಕಂಡುಕೊಳ್ಳುವ ಬಾಳಿನ ಗತಿ ಇಂದಿನ ನಮ್ಮ ಸ್ಥಿತಿ. ಇಂದು ನಾವು ಏನಾಗಿದ್ದೆವೋ, ಅದುವೇ ನಾಳೆಯೂ ಆಗಿರುವಂತಿಲ್ಲದ ಕಾಲಸ್ಥಿತಿಯಲ್ಲಿದ್ದೇವೆ. ಕ್ಷಣಕ್ಷಣಕ್ಕೂ ಬದಲಾಗುವ ಪರಿಸ್ಥಿತಿ…ಕಳಚಿಕೊಳ್ಳುತ್ತಲೇ ಸಾಗುವ ಮನುಷ್ಯ ಸಂಬಂಧಗಳ ನಡುವಿನಲ್ಲಿ ಇರುವಂತೆಯೇ ಇರುವುದಾದರೂ ಹೇಗೆಂದು ಬೇಕಲ್ಲ?

ಅಷ್ಟಕ್ಕೂ ಇರುವಂತೆಯೇ ಇರುವುದೆಂದರೆ ಏನು? ಎಂದು ಮನಸ್ಸು ಪ್ರಶ್ನೆಯನ್ನು ಕೇಳಿದ್ದೇ- ಹೃದಯವು ಥಟ್ಟನೆ ವಿಚಲಿತಗೊಂಡು ಬಿಡುತ್ತದೆ. ಇರುವಂತೆಯೇ ಇರುವುದೊಂದು ಮನನದ ಭಾವಸ್ಥಿತಿ. ಅದರೊಳಗೆ ಇಳಿಯುವುದಷ್ಟೇ ಕಸುಬಾಗಬೇಕು. ಆರೋಹಣ, ಅವರೋಹಣವು ಸತತವಾಗಿ ನಡೆಯುತ್ತಲಿರುವ ಪ್ರಕ್ರಿಯೆ. ನಿಜಕ್ಕೂ ನಾವು ಇರುವಂತೆಯೇ ಇರಲು ಸಾಧ್ಯವಿದೆಯೇ? ಕಣಕಣಗಳು ಬದಲಾಗುತ್ತಾ, ರೂಪಾಂತರ ಹೊಂದುತ್ತಾ ಹೋಗುವಂತೆ;ಆಯಾ ಮನಸ್ಸುಗಳು ಕೂಡಾ ಬದಲಾಗುತ್ತಾ ನಡೆಯುತ್ತಿರುತ್ತವೆ. ಇದ್ದಂತೆಯೇ ಇರುವಂತಹ ಧ್ಯಾನಸ್ಥ ಸ್ಥಿತಿಗೆ ನಮ್ಮನ್ನು ನಾವು ಒಪ್ಪಿಸಿಕೊಳ್ಳುವುದು ಅಷ್ಟು ಸುಲಭದ ಕಾರ್ಯವಲ್ಲ. ಅದಕ್ಕೆ ಸಾಕಷ್ಟು ಆಂತರಿಕ ಕ್ಷಮತೆ ಬೇಕಿದೆ.

ಚಲನೆಶೀಲ ಬದುಕಿನಲ್ಲಿ ಜರುಗದೆ ಇರದಂತಹ ಯಾವುದೇ ವಿಚಾರಗಳಿಲ್ಲ. ಜರಗುವಂತವುಗಳೇ ಆಗಿರುವ ಭಾವತೀವ್ರಗಳೆಲ್ಲವೂ ಬದುಕಿನ ಅವಿಭಾಜ್ಯ ಅಂಗಗಳು. ಹಾಗಿರಲು ಬದುಕು ಕಲ್ಪಿಸುವ ಸಂತಸದ ಘಳಿಗೆಯನ್ನು ಧನ್ಯತಾಭಾವದಿಂದ ಸ್ವೀಕರಿಸಿ ಅನುಭವಿಸಬೇಕು. ಹಾಗೆಯೇ ದುಃಖದ ಕ್ಷಣಗಳನ್ನು ಧೈರ್ಯದಿಂದ ಶಕ್ತಿಯುತವಾಗಿ ಎದುರಿಸಬೇಕು. ಬಾಳು ಇರುವುದು ಬಾಳಲಿಕ್ಕೆ. ಬಾಳಿ ನಲಿಯಲಿಕ್ಕೆ. ನಲಿದು ತೊನೆಯುವುದಕ್ಕೆ. ಕೌತುಕವಿಲ್ಲದ, ಬೆರಗುಗಳನ್ನೇ ಕಾಣ ಬಯಸದ ಬಾಳಿನ ಗೋಳು ಹೇಳ ತೀರದ್ದು.

ಯಾವುದಕ್ಕೂ, ಯಾವುದನ್ನೂ ಅತಿ ಹೆಚ್ಚು ಹೊತ್ತು ಮನಸ್ಸಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಬಾರದು. ಚಿಂತೆ, ಯೋಚನೆ, ಉದ್ವಿಗ್ನತೆ, ಆತಂಕ, ಭಯ ಮತ್ತಿತರ ಋಣಾತ್ಮಕ ಅಂಶಗಳಿಗೆ ಇರುವಷ್ಟೇ ಹೊತ್ತು ಮನಸ್ಸಲ್ಲಿರಲು ಬಿಡಬೇಕು. ಅವುಗಳು ಪ್ರವಾಸಿಗರ ರೂಪದಲ್ಲಿ ಬಂದು ಹೋದರೆನೇ ಚಂದ. ಆಗಲೇ ಹರಿವ ಲಹರಿಯ ಬಾಳ ಮತ್ತಿನಲ್ಲಿ ಈಜಲು, ಮತ್ತದರದ್ದೇ ಆದ ಚಲನೆಯೊಳಕ್ಕೆ ನಮಗೂ ಚಲಿಸಲು ಸಾಧ್ಯವಾಗುವುದು.

ಅನುಭವಿಸದ ಹೊರತು ನೋವು ಎಂದರೇನೆಂದು ಹೇಗೆ ಗೊತ್ತಿರಲು ಸಾಧ್ಯ? ನೋವು ಎನ್ನುವುದೊಂದು ಹಿಂದಿರುಗಿಸಲಾಗದ ಸಾಲದಂತೆ. ಅದೆಷ್ಟೇ ಜೀವ ತೇಯ್ದರೂ ತೀರಿಸಲಾಗದ ಮಣಭಾರದ ಸಾಲದಂತೆ-ನೋವುಗಳು. ಎಲ್ಲಿಂದೆಲ್ಲಿಗೆ ನಮ್ಮನ್ನು ಕೊಂಡೊಯ್ಯುತ್ತವೆ ಎನ್ನುವ ಅರಿವು ಕೂಡಾ ಬಾರದ, ಅಳತೆ ತೂಕಕ್ಕೂ ಸಿಗದ ಭಾವತೀವ್ರತೆಯೇ ನೋವು. ಮುಟ್ಟಿದ್ದೆಲ್ಲವೂ ನಶಿಸಿ ಹೋಗುತ್ತಿರುವ ಹೊತ್ತಲ್ಲಿ, ಒಳಗಿನ ರಾಕ್ಷಸ ನೋವು ಅಟ್ಟಹಾಸ ಗೈಯುತ್ತಲೇ ಇರುತ್ತದೆ. ನೋವು ಎಂದರೆನೇ ಹಾಗೇ. ಸಾವಿನೊಂದಿಗೆ ವರ್ಷಾನುಗಟ್ಟಳೆ ಸರಸವಾಡುತ್ತಾ, ಬಾಳು ಬೆಳೆಯುತ್ತಿರುವ ಹೊತ್ತಲ್ಲಿ ನೋವು ಪಕ್ಕದಲ್ಲೇ ನಿಂತು ನಗುತ್ತಲಿರುತ್ತದೆ. ಆದರೂ ಅದರ ಅರಿವು ನಮಗಿರುವುದಿಲ್ಲವಷ್ಟೆ.

ಮನಸ್ಸಿನ ಸ್ವೀಕಾರ, ಬೇಕು ಬೇಡಗಳ ನಡುವಿನ ಜಂಜಾಟ, ಮತ್ತದರ ಇಂದ್ರಜಾಲ ಗೊತ್ತಾದಾಗಲೇ ಬಿಡುಗಡೆಯ ಭಾಗ್ಯವು ಒದಗುವುದು. ತೀವ್ರ ತೆರನಾದ ದುಃಖ-ನೋವುಗಳನ್ನು ಸ್ವೀಕರಿಸಿ, ಇದು ಹೀಗೆಯೇ ಎಂಬ ನಿಲುವಿಗೆ ಬರುವುದಿದೆ ನೋಡಿ-ಅದು ಪ್ರಾರಾಬ್ಧಕ್ಕೆ ಮೊರೆ ಹೋಗುವ ಮಾರ್ಗವಾಗಿರುತ್ತದೆ. ಪ್ರಶ್ನೋತ್ತರಗಳ ನಡುವೆ ಸಿಲುಕಿ ಪಡುವ ತೊಳಲಾಟಗಳಿಗೆ ಕೊನೆ ಎಂಬುದೇ ಇರುವುದಿಲ್ಲ. ನಮ್ಮದಲ್ಲದ ಸುಖವನ್ನು ಅರಸಿ ಹೊರಡುವ ಹಾದಿಯಲ್ಲಿ ಕಾಣಸಿಗುವ ನಮ್ಮದಲ್ಲದ ಸುಖಗಳಲ್ಲಿ ನಮ್ಮದು ಯಾವುದೆಂದು ಪತ್ತೆ ಹಚ್ಚುವುದೊಂದು ದೊಡ್ಡ ಸಾಹಸವೇ.

ಸತ್ಯವಲ್ಲ ಎಂದು ತಿಳಿಯಲಿಕ್ಕೆ ಹೆಚ್ಚು ಹೊತ್ತು ಬೇಕಿಲ್ಲ. ಆದರೆ ಸುಳ್ಳು ಯಾವುದೆಂದು ಅರಿಯಲು ಬಹಳಷ್ಟು ಸಮಯ ತಗಲುತ್ತದೆ. ಕೆಲವೊಮ್ಮೆ ಹೊತ್ತುಕೊಂಡು ಹೋಗಲು ಬರುವವರೆಗೂ ಸತ್ಯಾಸತ್ಯತೆಗಳು ತಿಳಿಯುವುದೇ ಇಲ್ಲ! ನೋವು ಮತ್ತು ನಾವು ಜೊತೆಯಲ್ಲೇ ಹೆಜ್ಜೆ ಹಾಕುತ್ತಿರುವಾಗಲೂ ನಮ್ಮದಲ್ಲದ ಸುಖದತ್ತ ಕೊರಳೆತ್ತೆತ್ತಿ ನೋಡುತ್ತಲೇ ಇರುತ್ತೇವೆ. ನಮಗೆ ದಕ್ಕುವಂತದ್ದಲ್ಲ ಅದು ಎನ್ನುವ ತಿಳಿವು ಆ ಕ್ಷಣದಲ್ಲಿ ಕಠಿಣವಾವಾಗಿರುತ್ತದೆ. ಹಾಗೊಂದು ವೇಳೆ ಅಂತಹ ದಾರಿಯಲ್ಲಿ ಪಾದಗಳನ್ನು ಊರಿದ್ದೇ; ಫಳಾರನೆ ಬೆಳಕ ಕಿಡಿಯೊಂದು ಮಿನುಗಿ ಬಿಡುತ್ತದೆ. ಅಷ್ಟಕ್ಕೇ ಅರ್ಥವೊಂದು ಹೊಳೆದು ಬಾಳು ಬೆಳಕಾಗುತ್ತದೆ.

ಈ ಅಂಕಣದ ಹಿಂದಿನ ಬರೆಹಗಳು:
ಸಾವಿರ ಭಾವಗಳ ಹೊತ್ತ ಹುಡುಗಿಯ ಕತೆಗಳು
ಪ್ರೇಮಲೋಕ’ದ ಪ್ರೇಮ ಗೀತೆಗಳು…
ಆದಿ-ಅಂತ್ಯಗಳ ನಡುವಿನ ಹರಿವು
ಗರುಡಗಮನ ಬಂದ..ಮಂಗಳೂರ ಹೊತ್ತು ತಂದ
ಸುಖದ ಸುತ್ತು…
ನಿರೀಕ್ಷೆಗಳಿಲ್ಲವಾದರೆ ನಿರಾಳ
ದಾರುಣ ಅಂತ್ಯ ಹೇಳುವ 'ನಗ್ನಸತ್ಯ'
ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...