ನೃಪತುಂಗನ ನಾಡಿನಲ್ಲಿ ಮೂರು ದಶಕಗಳ ನಂತರ ಸಾಹಿತ್ಯ ಸಡಗರ

Date: 24-01-2020

Location: ಬೆಂಗಳೂರು


ಕಲಬುರಗಿಯು ನಾಲ್ಕನೇ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಒದಗಿಸುತ್ತಿದೆ.. 2020ರ ಫೆಬ್ರುವರಿ 5ರಿಂದ ಮೂರು ದಿನಗಳ ಕಾಲ `ಭಾವಗೀತೆಗಳ ಕವಿ’ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. `ತೊಗರಿ ಕಣಜ’ ಎಂಬ ಖ್ಯಾತಿಗೆ ಪಾತ್ರವಾಗಿರುವ ಕಲಬುರಗಿಯಲ್ಲಿ 1928ರ ಜೂನ್‌ 1ರಂದು ಆರಂಭವಾದ ಮೂರು ದಿನಗಳ 14ನೇ ಸಮ್ಮೇಳನದ ಅಧ್ಯಕ್ಷತೆಯನ್ನು ’ಕನ್ನಡದ ಕಣ್ವ’ ಖ್ಯಾತಿಯ ಬಿ.ಎಂ. ಶ್ರೀಕಂಠಯ್ಯ ಅವರು ವಹಿಸಿದ್ದರು. ಅದಾದ ನಂತರ ಸಮ್ಮೇಳನ ಆಯೋಜನೆಯ ಅವಕಾಶ ದೊರೆತದ್ದು 1949ರಲ್ಲಿ.  ಮಾರ್ಚ್‌ 5,6 ಮತ್ತು 7ರಂದು ನಡೆದ 32ನೇ ಸಮ್ಮೇಳನದ ಅಧ್ಯಕ್ಷತೆಯನ್ನು ’ಸರ್ವಜ್ಞನನ್ನು ಪರಿಚಯಿಸಿದ’ ರೆವರೆಂಡ್‌ ಉತ್ತಂಗಿ ಚೆನ್ನಪ್ಪ ಅವರು ವಹಿಸಿದ್ದರು. 1987ರ ಅಕ್ಟೋಬರ್‌ 29, 30, 31 ಮತ್ತು ನವೆಂಬರ್‌ 1ರಂದು ನಡೆದ 57ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ’ಆಧುನಿಕ ವಚನಕಾರ’ ಸಿದ್ಧಯ್ಯ ಪುರಾಣಿಕ ಅವರಿಗೆ ಸಂದಿತ್ತು. ಶರಣಬಸವೇಶ್ವರ ಕಾಲೇಜು (ಎಸ್‌ಬಿ ಆವರಣ) ಮುಂದಿನ ಮೈದಾನದಲ್ಲಿ ನಡೆದಿದ್ದ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಬಾಪುಗೌಡ ದರ್ಶನಾಪುರ ಅವರು ಅಚ್ಚುಕಟ್ಟಾಗಿ ಸಮ್ಮೇಳನ ನಡೆಯುವುದಕ್ಕೆ ಕಾರಣರಾಗಿದ್ದರು. ನಾಲ್ಕನೆಯ ಬಾರಿಗೆ ಆತಿಥ್ಯ ವಹಿಸುತ್ತಿರುವ ಕಲಬುರಗಿಯು ಐತಿಹಾಸಿಕ ಮಹತ್ವದ ತಾಣ.

ಕನ್ನಡದ ಮೊದಲ ಉಪಲಬ್ಧ ಗ್ರಂಥ ’ಕವಿರಾಜ ಮಾರ್ಗ’ ರಚಿಸಿದ ಕವಿ ಶ್ರೀವಿಜಯನಿಗೆ ತನ್ನ ಆಸ್ಥಾನದಲ್ಲಿ ನೆಲೆ ಕಲ್ಪಿಸಿದ್ದು ರಾಷ್ಟ್ರಕೂಟರ ದೊರೆ ನೃಪತುಂಗ. ಈಗ ಕಲಬುರಿಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಪಟ್ಟಣವೇ ರಾಷ್ಟ್ರಕೂಟರ ರಾಜಧಾನಿಯಾಗಿದ್ದ ’ಮಾನ್ಯಖೇಟ’. ಚರಿತ್ರೆಯ ಪುಟಗಳಲ್ಲಿ ಕಲಬುರಗಿಯು ಢಾಳಾಗಿ ಎದ್ದು ಕಾಣುವ ಛಾಪು ಮೂಡಿಸಿದೆ. ಪ್ರಾಗೈತಿಹಾಸಿಕ ಕಾಲದ ನೆಲೆಗಳನ್ನು ಪುರಾತತ್ವಶಾಸ್ತ್ರಜ್ಞರು ಗುರುತಿಸಿದ್ದಾರೆ. ಕೃಷ್ಣಾ ಕಣಿವೆಯಲ್ಲಿ ಬರುವ ಈ ಜಿಲ್ಲೆಯಲ್ಲಿ ಭೀಮಾನದಿ ಪ್ರಮುಖವಾದದ್ದು. ಕೃಷ್ಣೆ-ಭೀಮೆಯರಲ್ಲದೇ, ಅದರ ಉಪನದಿಗಳಾದ ಬೆಣ್ಣೆತೊರೆ, ಕಾಗಿಣಾ ನದಿಗಳು ಒಂದು ಕಾಲಕ್ಕೆ ಜೀವದಾಯಿನಿಯಾಗಿದ್ದವು. ಕೃಷ್ಣಾ ಕೊಳ್ಳದಲ್ಲಿ ಬರುವ ಹುಣಸಗಿ ಸುತ್ತಲಿನ (ಈಗ ಇದು ಯಾದಗಿರಿ ಜಿಲ್ಲೆಯಲ್ಲಿದೆ) ಪ್ರದೇಶದ ಇತಿಹಾಸಪೂರ್ವ ಯುಗದ ವಾಸದ ನೆಲೆ ಇದ್ದದ್ದನ್ನು ಹೆಸರಾಂತ ಪುರಾತತ್ವಜ್ಞರಾದ ಮೆಡೋಸ್‌ ಟೇಲರ್‌ ಹಾಗೂ ಕೆ. ಪದ್ದಯ್ಯ ಅವರು ಗುರುತಿಸಿದ್ದಾರೆ. ಮೌರ್ಯರು ಹಾಗೂ ಶಾತವಾಹನರ ಕಾಲದಲ್ಲಿ ಪ್ರಮುಖ ಪ್ರದೇಶವಾಗಿದ್ದ ಕಲಬುರಗಿ ಪ್ರದೇಶವು ಬೌದ್ಧಧರ್ಮಕ್ಕೆ ವಿಶೇಷ ನೆಲೆ ಒದಗಿಸಿದ ನೆಲವಾಗಿತ್ತು. ಈಗ ಸನ್ನತಿ-ಕನಗನಹಳ್ಳಿ ಪ್ರದೇಶಗಳು ತಮ್ಮ ಅಪಾರ ಶ್ರೀಮಂತಿಕೆಯ ಪರಂಪರೆಗೆ ಸಾಕ್ಷಿಯಾಗಿವೆ. ಬುದ್ಧನ ಅನುಯಾಯಿಯಾದ ಸಾಮ್ರಾಟ್‌ ಅಶೋಕ್‌ನ ಶಿಲ್ಪ ಇರುವ ಏಕೈಕ ಸ್ಥಳ ಕನಗನಹಳ್ಳಿ. ಆಶೋಕನ ಶಿಲ್ಪದ ಜೊತೆಗೆ ’ರಾಯ ಅಸೋಕ’ ಎಂದು ಬ್ರಾಹ್ಮಿ ಲಿಪಿಯಲ್ಲಿ ಬರೆದಿರುವುದು ವಿಶೇಷ. ಸನ್ನತಿಯಲ್ಲಿಯೇ ಅಶೋಕನ ವಿಶೇಷ ಶಾಸನ ದೊರೆತಿದೆ. ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಬಹಮನಿ ಸಾಮ್ರಾಜ್ಯಗಳಿಗೆ ನೆಲ-ನೆಲೆ ಒದಗಿಸಿದ್ದ ಕಲಬುರಗಿಯ ಪರಂಪರೆಯು ಅನನ್ಯ. ಬಿಸಿಲು-ಬೆವರಿನ ಮಧ್ಯೆ ಮರೆಯಾದ ಈ ನೆಲದ ಸೊಬಗು-ಸೊಗಡು-ಸವಿ ಅರಿಯಲು ಸಮ್ಮೇಳನದ ನೆಪ ನಮ್ಮ ಮುಂದಿದೆ. ಸಮ್ಮೇಳನದವರೆಗೆ ಕಲಬುರಗಿಯ ಸಾಹಿತ್ಯ ಸಂಸ್ಕೃತಿ- ಇತಿಹಾಸ-ಪರಂಪರೆಯನ್ನು ಬುಕ್‌ ಬ್ರಹ್ಮ ಕಟ್ಟಿಕೊಡಲಿದೆ.

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...