ನುಡಿಚಿತ್ರ ಅಂಕಣ ಬರಹದ ಬಗ್ಗೆ ಕವಿ ಟಿ.ಯಲ್ಲಪ್ಪ ಅವರ ಮಾತುಗಳು...


ಸತ್ಯನಾರಾಯಣರ ಈ 'ನುಡಿಚಿತ್ರ' ದಲ್ಲಿ ಅವರ ತಾಯಿ ಹಾಗೂ ಅಜ್ಜಿಯರನ್ನು ಕುರಿತ ಎರಡು ಲೇಖನಗಳನ್ನೂ ಒಳಗೊಂಡಂತೆ, ಕನ್ನಡದ ಹಿರಿಯ ತಲೆಮಾರಿನ ಎ.ಆರ್.ಕೃಷ್ಣಶಾಸ್ತ್ರಿಗಳಿಂದ ಹಿಡಿದು, ಗೌರಿಲಂಕೇಶ್, ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ರಾಜೇಶ್ವರಿ ತೇಜಸ್ವಿಯವರವರೆಗೆ ಮೂವತ್ತಮೂರು ನುಡಿಚಿತ್ರಗಳಿವೆ .ಇವು ಕನ್ನಡದ ಬೇರೆ ಬೇರೆ ಪತ್ರಿಕೆಗಳ ಸಾಪ್ತಾಹಿಕಗಳಲ್ಲಿ ಅಂಕಣ ರೂಪದಲ್ಲಿ ಪ್ರಕಟವಾದ ಕಾರಣದಿಂದಲೂ ಇವು ಅಂಕಣ ಬರಹವೆಂಬ ಸಬ್ ಟೈಟಲ್ ನೊಂದಿಗೆ ಪ್ರಕಟಕಂಡಿವೆ ಎನ್ನುತ್ತಾರೆ ಕವಿ ಪ್ರೊ. ಟಿ. ಯಲ್ಲಪ್ಪನವರು. ಅವರು ಎಚ್‌.ಎಸ್ ಸತ್ಯನಾರಾಯಣ ಅವರ ಅಂಕಣ ಬರಹಗಳ ಪುಸ್ತಕ 'ನುಡಿಚಿತ್ರ' ದ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ..

ಮಿತ್ರರಾದ ವಿಮರ್ಶಕ ,ವಾಗ್ಮಿ, ಡಾ.ಎಚ್‌.ಎಸ್ ಸತ್ಯನಾರಾಯಣ ಅವರ ಅಂಕಣ ಬರಹಗಳ ಪುಸ್ತಕ 'ನುಡಿಚಿತ್ರ' ಎಂಬ ಹೆಸರಿನಲ್ಲಿ ಕುಣಿಗಲ್ ನ ಕಾಚಕ್ಕಿ ಪ್ರಕಾಶನದ ವತಿಯಿಂದ ಅಚ್ಚುಕಟ್ಟಾಗಿ ಪ್ರಕಟಗೊಂಡಿದೆ.

ನಾಡಿನಾದ್ಯಂತ ತಮ್ಮ ಸಾಹಿತ್ಯ ಪರಿಚಾರಿಕೆಯ ಸುತ್ತಾಟ, ಸಾಹಿತ್ಯ ಕುರಿತ ತಮ್ಮ ವ್ಯಾಪಕ ಓದು ಮತ್ತು ನವಿರು ಹಾಸ್ಯಲೇಪಿತ ಉಪನ್ಯಾಸಗಳ ಮೂಲಕ ಜನಪ್ರಿಯರಾಗಿರುವ ಸತ್ಯನಾರಾಯಣ ಅವರು ಈಗಾಗಲೆ ತಮ್ಮ' ಕುವೆಂಪು :ಅಲಕ್ಷಿತರೆದೆಯ ದೀಪ' ಎಂಬ ಕೃತಿಯ ಮೂಲಕ, ಫೇಸ್ ಬುಕ್ ನಲ್ಲಿ ತಾವು ಕನ್ನಡದ ಸಾಹಿತಿಗಳ ಜೊತೆಗಿನ ತಮ್ಮ ಒಡನಾಟದ ಅನುಭವಗಳನ್ನು ಕುರಿತು ಅಂಕಣ ರೂಪದಲ್ಲಿ ಬರೆಯುತಿದ್ದ 'ಅಪೂರ್ವ ಒಡನಾಟ ' ಕೃತಿಯ ಮೂಲಕ, ತೇಜಸ್ವಿ ಕುರಿತ ಉಪನ್ಯಾಸಗಳ ಮೂಲಕ, ಅಪಾರ ಜನಪ್ರಿಯತೆಯನ್ನು ಪಡೆದಿದ್ದ ಸತ್ಯನಾರಾಯಣರ ವಿಮರ್ಶಾಪ್ರಜ್ಞೆಗೆ ದ್ಯೋತಕದಂತಿರುವ 'ಕಣ್ಣೋಟ' ಕೃತಿ ಅಲಂಪು ಪ್ರಕಾಶನದ ಮೂಲಕ ಪ್ರಕಟ ಕಂಡಿವೆ.

ಸತ್ಯನಾರಾಯಣರ ಈ 'ನುಡಿಚಿತ್ರ' ದಲ್ಲಿ ಅವರ ತಾಯಿ ಹಾಗೂ ಅಜ್ಜಿಯರನ್ನು ಕುರಿತ ಎರಡು ಲೇಖನಗಳನ್ನೂ ಒಳಗೊಂಡಂತೆ, ಕನ್ನಡದ ಹಿರಿಯ ತಲೆಮಾರಿನ ಎ.ಆರ್.ಕೃಷ್ಣಶಾಸ್ತ್ರಿಗಳಿಂದ ಹಿಡಿದು, ಗೌರಿಲಂಕೇಶ್, ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ರಾಜೇಶ್ವರಿ ತೇಜಸ್ವಿಯವರವರೆಗೆ ಮೂವತ್ತಮೂರು ನುಡಿಚಿತ್ರಗಳಿವೆ .ಇವು ಕನ್ನಡದ ಬೇರೆ ಬೇರೆ ಪತ್ರಿಕೆಗಳ ಸಾಪ್ತಾಹಿಕಗಳಲ್ಲಿ ಅಂಕಣ ರೂಪದಲ್ಲಿ ಪ್ರಕಟವಾದ ಕಾರಣದಿಂದಲೂ ಇವು ಅಂಕಣ ಬರಹವೆಂಬ ಸಬ್ ಟೈಟಲ್ ನೊಂದಿಗೆ ಪ್ರಕಟಕಂಡಿವೆ .ಈ ಕೃತಿಯನ್ನು ತಮ್ಮ ಗುರು ಹಾಗೂ ತಮ್ಮ ಅಂಕಣ ಬರಹಗಳಿಗಾಗಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಹಾ.ಮಾ.ನಾಯಕರಿಗೆ ಅರ್ಪಿಸಿರುವುದು ಅರ್ಥಪೂರ್ಣವಾಗಿದೆ.

ಈ ಕೃತಿಯ ಮೊದಲ ಭಾಗದ ಅಂಕಣಗಳಲ್ಲಿ ಕನ್ನಡದ ಹಿರಿಯ ತಲೆಮಾರಿನ ಎ.ಆರ್.ಕೃಷ್ಣಶಾಸ್ತ್ರಿ, ಗಳಗನಾಥ, ದಿನಕರ ದೇಸಾಯಿ, ಸು.ರಂ.ಎಕ್ಕುಂಡಿ ಅವರ ಕಾವ್ಯದ ಮಾಧ್ವಪ್ರಜ್ಞೆ, ಹಾಗೂ ಮಾರ್ಕ್ಸ ಪ್ರಜ್ಜೆಗಳ ಸಮತೋಲನ, ಎಚ್.ವಿ.ಸಾವಿತ್ರಮ್ಮನವರ ಹೋರಾಟದ ಬದುಕು, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಅಸ್ತಿತ್ವದ ಪ್ರಶ್ನೆಗಳ ಹುಡುಕಾಟ ಮತ್ತು ಸ್ತ್ರೀ ಅಸ್ಮಿತೆಯ ಪ್ರತಿಪಾದನೆಯ ಸ್ವರೂಪ ಹಾ.ಮಾ.ನಾಯಕರ ಅಂಕಣ ಬರಹಗಳ ಸೊಗಸು , ವ್ಯಾಪ್ತಿ ಮತ್ತು ಆ ಪ್ರಕಾರಕ್ಕೆ ಅವರು ತಂದುಕೊಟ್ಟ ಘನತೆಗಳ ಸ್ವರೂಪ, ಪಿ.ಲಂಕೇಶರು ಕವಿ, ಕಥೆಗಾರ, ಪತ್ರಕರ್ತ, ಚಲನಚಿತ್ರ ನಿರ್ದೇಶಕರಾಗಿ, ತಮ್ಮ ಬಹುಮುಖೀ ವ್ಯಕ್ತಿತ್ವದ ಹಲವು ಆಯಾಮಗಳನ್ನು ನಿರ್ವಹಿಸಿದ ಬಗೆಯನ್ನು, ಚಿತ್ತಾಲರು ಕಥೆ , ಹಾಗೂ ಕಾದಂಬರಿಗಳ ಮೂಲಕ ಸಾಧಿಸಿದ ಸಾಧನೆ ಹಾಗೂ ಕಥೆಗಳ ಸೊಗಸನ್ನು, ಚಂಪಾ ತಮ್ಮ ಕವಿತೆ, ಭಾಷಣಗಳ ಮೂಲಕ ಬಳಸಿದ ವ್ಯಂಗ್ಯ ,ವಿಡಂಬನೆಗಳ ತೀವ್ರತೆ, ಆ ಮೂಲಕ ತಾವೇ ಮೈಮೇಲೆ ಎಳೆದುಕೊಳ್ಳುತಿದ್ದ ವಿವಾದಗಳು, ಎಂ.ಕೆ ಇಂದಿರಾ, ತ್ರಿವೇಣಿಯರು ತಮ್ಮ ಕಥೆ ಕಾದಂಬರಿಗಳ ಮೂಲಕ ತಮ್ಮ ನಂತರದ ತಲೆಮಾರಿನ ಮಹಿಳೆಯರಲ್ಲಿ ಮೂಡಿಸಿದ ಎಚ್ಚರ ಅರಿವುಗಳ ಮೌಲ್ಯಮಾಪನ, ಚಿದಾನಂದ ಮೂರ್ತಿ, ಅವರ ಸಂಶೋದನೆ ಹಾಗೂ ಸಾಂಸ್ಕೃತಿಕ ಚಿಂತನೆಗಳು ಕರ್ನಾಟಕ ಇತಿಹಾಸ ಹಾಗು ಸಾಂಸ್ಕೃತಿಕ ಪುನಾರಚನೆಯ ಸಂದರ್ಭಲ್ಲಿ ಅವರ ಪಾತ್ರ ನಿಶ್ಕರ್ಶೆಯನ್ನು, ಶಂಕರ ಮೊಕಾಶಿ ಪುಣೇಕರ, ಜಯದೇವಿ ತಾಯಿ ಲಿಗಾಡೆ ಅವರುಗಳ ಬದುಕು - ಬರಗಳನ್ನು ಕುರಿತ ನುಡಿಚಿತ್ರಗಳು ಈ ಭಾಗದಲ್ಲಿವೆ.

ಎರಡನೆಯ ಭಾಗದಲ್ಲಿ ವಿಮರ್ಶಕರಾದ ಎಚ್.ಎಸ್.ರಾಘವೇಂದ್ರರಾವ್ ಅವರು ಕೃತಿಯೊಂದರ ಮುಖೇನ ,ಬರಹಗಾರನ ಸಮಗ್ರತೆನ್ನು ಹಾಗೂ ಸಾಹಿತ್ಯ ಸಂದರ್ಭದ ಸಮಗ್ರತೆಯನ್ನೂ ಕಟ್ಟಿಕೊಡುವ ರೀತಿ, ದೇವನೂರರು ಒಡಲಾಳ ಗದ್ಯದ ಮುಖಾಂತರ ಹೊರಹಾಕಿದ ಬೆಚ್ಚಿಬೀಳಿಸಿದ ದಲಿತ ಬದುಕಿನ ಹಸಿವು ಅವಮಾನಗಳ ಒಡಲಾಳ ಮತ್ತು ಪ್ರಾದೇಶಿಕ ಉಪಭಾಷೆಯ ಸೊಗಸು, ಕನ್ನಡ ಗದ್ಯಕ್ಕೆ ನೀಡಿದ ಅಪರೂಪದ ತಿರುವು , ಕವಿ .ಬಿ.ಆರ್ .ಲಕ್ಷಣರಾವ್ ಅವರ ಕಾವ್ಯ ನವಿರು ವಹಾಸ್ಯ, ತುಂಟತನ, ಹಾಗೂ ವಿಡಂಬನೆ ,ಹೊಸ ಭಾಷೆಗಳ ಮೂಲಕ ನವ್ಯದಲ್ಲಿ ಅತಿನವ್ಯವಾದ ಪರಿಯನ್ನು, ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕಾವ್ಯ ದಲಿತ ಕಾವ್ಯದ ಸಂದರ್ಭದಲ್ಲಿ ಭಿನ್ನವಾದ ಬಗೆ ಮತ್ತು ಅದರ ವಿಶಿಷ್ಟ ಗುಣಗಳಿಂದ ಭಿನ್ನವಾದ ಬಗೆಯನ್ನು, ತಮ್ಮ ಹಸಿರು ಸಖ್ಯದ ಬರಹಗಳಿಂದ ಪ್ರಸಿದ್ಧರಾದ ಚಂದ್ರಶೇಖರ ನಂಗಲಿ, ಇದ್ದೂ ಇಲ್ಲದಂತೆ ಕಂಡರೂ ತಮ್ಮ ಅಸ್ತಿತ್ವವಬನ್ನು ಕಾವ್ಯದ ಮೂಲಕ ಪ್ರತಿಪಾದಿಸುತ್ತಲೇ ಇರುವ ಕವಯಿತ್ರಿ ಶಶಿಕಲಾ ವೀರಯ್ಯಸ್ವಾಮಿ, ಕವಿಹೃದಯ ಸಂಪನ್ನೆ ಗದ್ಯಗಂಧೀ ಪದ್ಯ ಅನುವಾದಗಳ ಮೂಲಕ ಹೆಸರಾದ ಕವಯಿತ್ರಿ ಎಂ.ಆರ್ .ಕಮಲ, ಅಪರಿಮಿತ ಕಾವ್ಯಪ್ರೀತಿಯ ಕವಿ .ಪತ್ರಕರ್ತ, ಗೀತರಚನಕಾರ ,ವಾಗ್ಮಿ ಜಯಂತಕಾಯ್ಕಿಣಿ, ಮೂಡುಬಿದರೆಯ ಕಾಂತಾವರದ ತಮ್ಮ ಕನ್ನಡ ಸಂಘದ ಚಟುವಟಿಕೆ,ಸಾಹಿತ್ಯ ಪರಿಚಾರಿಕೆಗಳ ಮೂಲಕ, ತಮ್ಮ ಕವಿತೆ ,ಕಾದಂಬರಿಗಳ ಮೂಲಕ ,ತಮ್ಮ ವೈದ್ಯ ವೃತ್ತಿಯ ಮೂಲಕ ಚಿರಪರಿತರಾದ ನಾ.ಮೊಗಸಾಲೆ, ಕವಿತೆ ವಿಮರ್ಶೆ,ಕಾದಂಬರಿ, ಅನುವಾದ , ಸಂಶೋಧನಾ ಬರಹಗಳ ಮೂಲಕ ಖ್ಯಾತರಾದ ಕರಾವಳಿಯ ಬಿ.ಜನಾರ್ಧನ ಭಟ್ , ತಮ್ಮ ಹೋರಾಟದ ಬದುಕು ಹಾಗೂ ಬರಹಗಳ ಮೂಲಕ ,ಬಂಡಾಯ ಚಳುವಳಿಯ ಹೋರಾಟದ ಮೂಲಕ ಅಲ್ಪ ಸಂಖ್ಯಾತ ಮುಸ್ಲೀಮ್ ಹೆಣ್ಣುಮಕ್ಕಳ ಬದುಕಿನ ಧ್ವನಿಯಾದ ಕವಯತ್ರಿ ಕೆ. ಷರೀಫ , ತಮ್ಮ ಕವಿತೆ ,ಬರಹ ಹಾಗೂ ಪ್ರಗತಿಪರವಾದ ನಿರಂತರ ಹೋರಾಟಗಳ ಮೂಲಕ ಖ್ಯಾತರಾದ ಕೆ. ನೀಲಾ , ಸಂಚಯ ಎಂಬ ಸಾಹಿತ್ಯ ಪತ್ರಿಕೆಯ ಮೂಲಕ ಮೂರು ದಶಕಗಳ ಕಾಲ ಹೊಸ ತಲೆಮಾರಿನ ಸಾಹಿತ್ಯದ ಅಭಿವ್ಯಕ್ತಿ ಹಾಗೂ ಅಭಿರುಚಿ ನಿರ್ಮಾಣಕ್ಕೆ ವೇದಿಕೆಯಾಗಿದ್ದ ಕವಿ , ಪತ್ರಕರ್ತ ಡಿ.ವಿ.ಪ್ರಹ್ಲಾದ್, ನಿರಂತರ ಭಾವತೀವ್ರತೆ ಹಾಗೂ ದಮನಿತರ ನೋವಿನ ಕಾವ್ಯತ್ಮಕ ಅಭಿವ್ಯಕ್ತಿಯ ಕವಿ .ಟಿ. ಯಲ್ಲಪ್ಪ , ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ , ಇತ್ತೀಚೆಗಷ್ಟೇ ನಮ್ಮನ್ನಗಲಿದ ತೇಜಸ್ವಿಯವರ ಮಡದಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರ ಬದುಕು ಬರಹಗಳನ್ನು ಒಳಗೊಂಡು ನುಡಿಚಿತ್ರಣಗಳು ಸತ್ಯನಾರಾಯಣರಿಗೆ ತಾವು ಬರೆಯಲಿರುವ ವ್ಯಕ್ತಿಗಳ ಬಗೆಗಿರುವ ನಿಖರವಾದ ಮಾಹಿತಿ,ಕೆಲವೊಮ್ಮೆ ಈ ಕೆಲವರೊಂದಿಗೆ ಅವರಿಗರುವ ನಿಕಟವಾದ ಒಡನಾಟ, ಅಪರೂಪದ ಹಾಸ್ಯ ಪ್ರಜ್ಞೆ, ತುಂಟತನ, ಕೀಟಲೆ , ವಿಮರ್ಶನ ಪ್ರಜ್ಞೆ, ಸಮಯಪ್ರಜ್ಜೆ, ಅಗಾಧವಾದ ನೆನಪಿನ ಶಕ್ತಿ ಇಂತಹ ಗುಣಗಳಿಂದ ಒಂದು ಅಂಕಣವನ್ನು ಓದಲೆಂದು ಕುತೂಹಲದಿಂದ ಪುಸ್ತಕವನ್ನು ಕೈಗೆತ್ತಿಕೊಂಡರೆ.ನಮಗರಿವಿಲ್ಲದಂತೆ ಇನ್ನೊಂದು ,ಮತ್ತೊಂದು ,ಮಗದೊಂದು ಅಂತ , ಓದಿಸಿಕೊಂಡು, ಇಲ್ಲಿನ ಎಲ್ಲ ಲೇಖನಗಳನ್ಮೂ ಓದುವವರೆಗೂ ಪುಸ್ತಕವನ್ನು ಬದಿಗಿಡುವುದು ಬೇಡೆಂಬ ಮೋಹ ಪುಸ್ತಕದ ಬಗ್ಗೆ ನಮಗೆ ಮೂಡಿಬಿಟ್ಟಿರುತ್ತದೆ.ಹೀಗೆ ಓದುಗರನ್ನು ಸೆಳೆದು ಬಿಡುವ ಕಾಂತಾಸಂಹಿತ ಗುಣ ಈ ಪುಸ್ತಕದ ನುಡಿಚಿತ್ರಗಳಿಗಿರುವುದೇ ಇದರ ಜನಪ್ರಿಯತೆಗೆ ಕಾರಣ ಎಂದರೆ ಉತ್ಪ್ರೇಕ್ಷೆ ಆಗಲಾರದು

ಈ ಪುಸ್ತಕದ ಕೊನೆಯ ಎರಡು ನುಡಿಚಿತ್ರಗಳು ಒಂದು ಅವರ ತಾಯಿ ಇಂದ್ರಮ್ಮನವರ ಬಗ್ಗೆ ಬರೆದದ್ದು. ಮತ್ತೊಂದು ಅವರ ಅಜ್ಜಿ ಕಮಲಜ್ಜಿಯ ಬಗ್ಗೆ ಬರೆದದ್ದು. ಆಸ್ಪತ್ರೆಯೊಂದರಲ್ಲಿ ಆಯಾ ಆಗಿ ದುಡಿದ ತನ್ನ ತಾಯಿ ಲೇಖಕರು ಮತ್ತು ಅವರ ಮೂರು ಜನ ಅಕ್ಕಂದಿರನ್ನು ಬಡತನ ಮತ್ತು ಸ್ವಾಭಿಮಾನಗಳ ನಡುವೆ ಸಾಕಿ , ನಾಲ್ವರು ಮಕ್ಕಳನ್ನೂ ಸರ್ಕಾರಿ ನೌಕರಿಗೆ ಸೇರಿಸಿ , ಮಕ್ಕಳ ಸುಖವನ್ನು ಕಣ್ತುಂಬಿಕೊಂಡೇ ,ಇವರನ್ನು ಅಗಲಿದ ಕತೆ , ಓದುಗರ ಕಣ್ಣನ್ನು ತೇವಗೊಳಿಸಿಬಿಡುತ್ತದೆ.

ಎಳವೆಯಲ್ಲೇ ಗಂಡನಿಂದ ದೂರಾದ ತಮ್ಮಜ್ಜಿ ಕಮಲಜ್ಜಿಯ ಸ್ವಾಭಿಮಾನ ಹಾಗೂ ಆಕೆಯ ಮುಗ್ಧತೆಯೊಡನೆ ಲೇಖಕರು ನಡೆಸಿದ ತುಂಟಾಟ ಕೀಟಲೆಯ ಪ್ರಸಂಗಗಳನ್ನು ಓದಿ ಹೊಟ್ಟೆ ಹುಣ್ಣಾಗುವಂತೆ ನಕ್ಕು ನಕ್ಕೂ ..ಮನಸು ಹಗುರಾಗಿಬಿಡುತ್ತದೆ.

---

ಈ ಕೃತಿಯ ವಿಶೇಷತೆಯನ್ನು ಕುರಿತ ಕನ್ನಡದ ಪ್ರಸಿದ್ಧ ಬರಹಗಾರರ ಪ್ರಶಂಸೆಗಳಲ್ಲಿ ಕೆಲವನ್ನು ಇಲ್ಲಿ ದಾಖಲಿಸಿದೆ ಹೋದಲ್ಲಿ ಏನನ್ನೂ ಹೇಳಿದಂತಾಗದು.

" ಅಪಾರವಾದ ಓದು, ಅದ್ಭುತ ನೆನಪಿನ ಶಕ್ತಿ, ಮತ್ತು ಅಸಾಧ್ಯವಾದ ತುಂಟತನ, ಈ ಮೂರೂ ಇಲ್ಲಿನ ಬರಹಗಳನ್ನು ಪ್ರೇರೇಪಿಸಿವೆ ”. - ಡಾ.ಎಚ್.ಎಸ್ ರಾಘವೇಂದರಾವ್

ಈ ಕೃತಿ ಕನ್ನಡ ಸಾಹಿತ್ಯಕ್ಕೊಂದು ಅಪರೂಪದ ದಾಖಲೇಯೇ ಸರಿ - ಡಾ.ನರಹಳ್ಳಿ ಬಾಲಸುಬ್ರಮಣ್ಯ

ಮತ್ತೆ ಮತ್ತೆ ಇಲ್ಲಿರುವ ಹಿರಿಯರ ವಿಚಾರಗಳನ್ನು ಓದಿ ಸವಿಯುವುದೇ ಒಂದು ಸುಖ. ನಾನು ಇದನ್ನು ಚಪ್ಪರಿಸಿ ಸವಿದೆ - ವೇದೇಹಿ

ಹೊಸ ಸಾಹಿತ್ಯ ಪ್ರವೇಶಕರು ಈ ಕೃತಿಯ ಮೂಲಕ ಹುರುಪು ಪಡೆಯಬಲ್ಲರು.ನಾನು ನನ್ನ ವಿದ್ಯಾರ್ಥಿಗಳಿಗೆ ಓದಲು ಹಚ್ಚಿದೆ - ಡಾ.ಎಂ.ಎಸ್ .ಆಶಾದೇವಿ.

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...