ಓದುಗರ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರೆಹಗಳು ‘ಬೇರೆಯೇ ಮಾತು’


ವಡ್ಡರ್ಸೆ ರಘುರಾಮ ಶೆಟ್ಟರ ಬರೆಹಗಳ ‘ಬೇರೆಯೇ ಮಾತು’ ಕೃತಿಯ ನೆಪದಲ್ಲಿ ಅದನ್ನು ಸಂಪಾದಿಸಿದ ದಿನೇಶ್ ಅಮೀನ್ ಮಟ್ಟು ಮತ್ತು ಮುಂಗಾರು ಬಗ್ಗೆ ಕೆಲ ವಿಚಾರಗಳನ್ನು ಪ್ರಗತಿಪರ ಚಿಂತಕ, ಹವ್ಯಾಸಿ ಬರಹಗಾರ ಶ್ರೀನಿವಾಸ್‌ ಕಾರ್ಕಳ ಅವರು ಬರೆದ ಲೇಖನ ನಿಮ್ಮ ಓದಿಗಾಗಿ..

ಕೃತಿ: ಓದುಗರ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರೆಹಗಳು ‘ಬೇರೆಯೇ ಮಾತು’
ಸಂಪಾದನೆ: ದಿನೇಶ್ ಅಮೀನ್ ಮಟ್ಟು
ಪ್ರಕಾಶನ: ಅಹರ್ನಿಶಿ ಪ್ರಕಾಶನ, 94491 74662 


1984 ರ ಆ ದಿನಗಳನ್ನು ಯೋಚಿಸಿದರೆ ಈಗಲೂ ರೋಮಾಂಚನವಾಗುತ್ತದೆ. ಮಂಗಳೂರಿನಲ್ಲಿ ಆಗಷ್ಟೇ ಕೆಲಸಕ್ಕೆ ಸೇರಿದ ಕಾರಣ ವಾರಕ್ಕೊಮ್ಮೆ ಮಂಗಳೂರು ಮತ್ತು ಕಾರ್ಕಳದ ನಡುವೆ ನನ್ನ ಸಂಚಾರ ನಡೆಯುತ್ತಿತ್ತು. ಅಂತಹ ಒಂದು ಸಂಜೆ ಕಾರ್ಕಳದಿಂದ ಮಂಗಳೂರಿನತ್ತ ಬಸ್ ನಲ್ಲಿ ಬರುವಾಗ ‘ಚಿಂತನೆಯ ಮಳೆ ಹರಿಸಿ ಜನಶಕ್ತಿ ಬೆಳೆವ ಮುಂಗಾರು’ ಎಂಬ ಭಿತ್ತಿ ಪತ್ರಗಳು ಮಂಗಳೂರು ಹೊರವಲಯದ ಕೆಲ ಗೋಡೆಗಳಲ್ಲಿ ಧುತ್ತೆಂದು ಕಾಣಿಸಿಕೊಂಡದ್ದು ಗಮನಿಸಿದ್ದೆ. ಮಂಗಳೂರಿನಿಂದ ಮುಂಗಾರು ಎಂಬ ಹೊಸ ಪತ್ರಿಕೆ ಹೊರಡಲಿದೆ ಎಂಬ ಸುದ್ದಿ ನಿಧಾನವಾಗಿ ಹರಡತೊಡಗಿತ್ತು ಮಾತ್ರವಲ್ಲ, ಈ ಭಾಗದಲ್ಲಿ ಅದು ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿತ್ತು.

ಸಂಚಲನ ಉಂಟಾಗಲು ಮುಖ್ಯ ಕಾರಣ, ಕರಾವಳಿಯಲ್ಲಿ ಏಕಸ್ವಾಮ್ಯ ಸಾಧಿಸಿದ್ದ, ಇತರ ಪತ್ರಿಕೆಗಳನ್ನು ಇಲ್ಲಿ ಬೆಳೆಯಲು ಸಾಧ್ಯವಾಗದಂತೆ ನೋಡಿಕೊಳ್ಳುತ್ತಿದ್ದ, ತಾನು ಮಾಡಿದ್ದೇ ಜರ್ನಲಿಸಂ ಎನ್ನುತ್ತಾ ಜಾಹೀರಾತುವಿನ ಮೂಲಕದ ಹಣಕ್ಕಾಗಿಯೇ ನಡೆಸುತ್ತ, ನಡು ನಡುವೆ ತನ್ನದೇ ಆದ ಅಜೆಂಡಾಕ್ಕೆ ಹೊಂದುವ ಅಷ್ಟಿಷ್ಟು ಸುದ್ದಿ ಒದಗಿಸುತ್ತಿದ್ದ ಇಲ್ಲಿನ ಒಂದು ಪತ್ರಿಕೆ. ಅದಾಗಲೇ ಒಂದೂವರೆ ದಶಕಗಳಿಂದ ಇಲ್ಲಿ ಕಾರ್ಯಾಚರಿಸುತ್ತಿದ್ದ ಅದಕ್ಕೆ ದೊಡ್ಡ ಪ್ರಮಾಣದ ಆರ್ಥಿಕ ಬಲ ಇತ್ತು, ಅದೇ ಕಾರಣದಿಂದ ಅದು ಅತ್ಯಾಧುನಿಕ ಮುದ್ರಣ ತಂತ್ರಜ್ಞಾನವನ್ನೂ ಹೊಂದಿತ್ತು. ಹಾಗಾಗಿ ಅದಕ್ಕೆ ಓದುಗರ ಮೇಲೆ ಪ್ರಭಾವ ಬೀರಿ ಅವರನ್ನು ಹಿಡಿದಿಡುವುದು ಸಾಧ್ಯವಾಗಿತ್ತು. ಆದರೆ ಅದು ಪಸರಿಸುತ್ತಿರುವ ವಿಚಾರಗಳ ಬಗ್ಗೆ ಇಲ್ಲಿನ ಪ್ರಜ್ಞಾವಂತರಲ್ಲಿ ತೀವ್ರ ಅಸಹನೆಯಿತ್ತು. ಆ ಅಸಹನೆಗೆ ದೊಡ್ಡ ಕಾರಣ, ಅದು ಕೋಮುವಾದ ಮತ್ತು ಮೂಢನಂಬಿಕೆಗೆ ಆದ್ಯತೆ ನೀಡುತ್ತ ಓದುಗರನ್ನು ವೈಚಾರಿಕವಾಗಿ ವೈಜ್ಞಾನಿಕವಾಗಿ ಬೆಳೆಯದಂತೆ ನೋಡಿಕೊಂಡು, ಅವರ ವಿಚಾರ ಶಕ್ತಿಯನ್ನು ಒಂದು ರೀತಿಯ ಸ್ಥಗಿತ ಸ್ಥಿತಿಯಲ್ಲಿರಿಸಿದ್ದು. ಹಾಗಾಗಿಯೇ 'ಜನಶಕ್ತಿ ಬೆಳೆ ತೆಗೆವ' ದೊಡ್ಡ ಆದರ್ಶ ಇರಿಸಿಕೊಂಡ ಮುಂಗಾರು ಎಂಬ ಹೊಸ ಪತ್ರಿಕೆ ಇಲ್ಲಿಂದ ಹೊರಡಲಿರುವುದನ್ನು ಕೇಳಿ ಇಲ್ಲಿನ ಪ್ರಗತಿಪರರು ಸಂತೋಷ ಪಟ್ಟಿದ್ದರು, ಸಂಭ್ರಮಿಸಿದ್ದರು. 

ಮುಂಗಾರು ಪತ್ರಿಕೆಗೆ ಉದ್ಯೋಗಿಗಳನ್ನು ಆಯ್ದುಕೊಳ್ಳಲು ವಡ್ಡರ್ಸೆಯವರು ಕಂಕನಾಡಿ ಪಂಪ್ ವೆಲ್ ರಸ್ತೆಯ ಬದಿಯ (ಕೋಸ್ಟಾ ಹೋಟೆಲ್ ಎದುರು) ಒಂದು ಹಳೆಯ ಕಟ್ಟಡದಲ್ಲಿ ಕಚೇರಿ ಆರಂಭಿಸಿದ್ದರು (ಆನಂತರ ಬಹುಕಾಲ ಮುಂಗಾರು ನಗರ ಹೃದಯ ಭಾಗದ ಕ್ಲಾಕ್ ಟವರ್ ಬಳಿಯ ಕಟ್ಟಡದಲ್ಲಿ ಕೆಲಸ ಮಾಡಿತು, ಕೊನೆಯುಸಿರು ಎಳೆಯುವಾಗ, ಬಂಟ್ಸ್ ಹಾಸ್ಟೆಲ್ ಮಲ್ಲಿಕಟ್ಟೆಯ ನಡುವಣ ಕೆ ಸಿ ನಾಯಕ್ ಹಾಲ್ ಎದುರಿನ ಕಟ್ಟಡವೊಂದರಲ್ಲಿ ಅದರ ಕಚೇರಿಯಿತ್ತು). ಅಲ್ಲಿಗೆ ಗೆಳೆಯ, ಪತ್ರಕರ್ತ ಚಿದಂಬರ ಬೈಕಂಪಾಡಿ ಉದ್ಯೋಗಾಕಾಂಕ್ಷಿಯಾಗಿ ಅರ್ಜಿ ಸಲ್ಲಿಸಲು ಹೋದಾಗ ನಾನೂ ಆತನ ಜೊತೆಗೆ ಸುಮ್ಮನೆ ಹೋಗಿದ್ದೆ. ಈ ಚಿದಂಬರ ಬೈಕಂಪಾಡಿ ಅದಾಗ ‘ದಿವ್ಯವಾಣಿ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ (ದಿವ್ಯವಾಣಿಯ ಮೊದಲ ಸಂಪಾದಕ ರಾಘವೇಂದ್ರ ನಾಗೋರಿಯವರನ್ನು ತೂಪಿನ ದಾದ ಪಾಡ್ ಬೀಸತ್ತಿ ಎನ್ನುತ್ತ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ ಬಳಿಕ ರವಿಕುಮಾರ್ ಎಂಬವರು ಅದರ ಸಂಪಾದಕತ್ವ ವಹಿಸಿಕೊಂಡಿದ್ದರು). ಈ ಚಿದಂಬರ ಬೈಕಂಪಾಡಿಯೇ ನನಗೆ ಮುಂಗಾರು ಪತ್ರಿಕೆಯ ಕಚೇರಿಯೊಂದಿಗೆ ಇದ್ದ ಮೊದಲ ಮತ್ತು ಕೊನೆಯ ಲಿಂಕ್.

ನನಗೆ ಅಲ್ಲಿ ಮುಖ್ಯವಾಗಿ ಗೊತ್ತಿದ್ದುದು ಚಿದಂಬರ ಬೈಕಂಪಾಡಿ ಮತ್ತು ಛಾಯಾಗ್ರಾಹಕ ದಿವಂಗತ ಕೇಶವ ವಿಟ್ಲ. ಮುಂಗಾರು ಕಚೇರಿಗೆ ನಾನು ಹೋಗುತ್ತಿದ್ದಾಗ ಅಪರೂಪಕ್ಕೊಮ್ಮೆ ನೋಡ ಸಿಗುತ್ತಿದ್ದುದು ದಿನೇಶ್ ಅಮೀನ್. ಈಗಿನ ಬೋಳುಮಂಡೆ ದಿನೇಶ್ ಅಲ್ಲ. ಆಗ ಆಕರ್ಷಕ ಮೀಸೆಯ, ತಲೆತುಂಬ ಕೂದಲಿನ, ಅತ್ಯಂತ ಚುರುಕಿನ ವ್ಯಕ್ತಿತ್ವದ, ಗುಂಡುಗುಂಡಗಿನ ದೇಹದ ಸುಂದರ ಯುವಕ. ದಿನೇಶ್ ತನ್ನ ವಿಶಿಷ್ಟ ಬರೆವಣಿಗೆಗಳ ಮೂಲಕ ಅದಾಗಲೇ ಎಲ್ಲರ ಗಮನ ಸೆಳೆದಿದ್ದರು.

ಒಂದಷ್ಟು ಕಾಲ ಮುಂಗಾರುವಿನಲ್ಲಿ ಕೆಲಸ ಮಾಡಿದ ದಿನೇಶ್ ಆಮೇಲೆ ನನ್ನ ಮಟ್ಟಿಗೆ ಮಾಯವಾದರು. ಎಲ್ಲಿ ಹೋದರೋ ಗೊತ್ತಾಗಲಿಲ್ಲ. ಪ್ರಜಾವಾಣಿ ಸೇರಿದ್ದು ಕೇಳಿದ್ದೆ ಅಷ್ಟೇ. ಹೆಚ್ಚಿನ ವಿವರ ಇರಲಿಲ್ಲ. ಆಮೇಲೆ ಅವರು ಪತ್ತೆಯಾದುದು ದೆಹಲಿಯಲ್ಲಿ ಪ್ರಜಾವಾಣಿ ವರದಿಗಾರನಾಗಿ; ಅವರ ಚಟುವಟಿಕೆಗಳು ಮತ್ತು ಬರೆಹಗಳ ಮೂಲಕ (ದಿನೇಶ್ ಬಗ್ಗೆ ಮತ್ತೆ ನನಗೆ ಸುದ್ದಿ ಸಿಗಲಾರಂಭಿಸಿದ್ದು ಪುರುಷೋತ್ತಮ ಬಿಳಿಮಲೆಯವರ ಮೂಲಕ).

ಮುಂದೆ ಅವರು ದಿಲ್ಲಿ ತೊರೆದು ಬೆಂಗಳೂರಿಗೆ ಮರಳಿದ ಸುದ್ದಿಯೂ ಸಿಕ್ಕಿತು. ಕೆಲ ಸಮಯದ ಬಳಿಕ ಒಂದು ಆಸಕ್ತಿಕರ ಘಟನೆ ನಡೆಯಿತು. ನಾನು ದಿನೇಶರ ಬರೆಹಗಳ ದೊಡ್ಡ ಅಭಿಮಾನಿಯಾಗಿದ್ದೆ. ಆ ಅಭಿಮಾನಕ್ಕೆ ಕಾರಣವೆಂದರೆ ಅವರ ಬರವಣಿಗೆಯ ವಿಶಿಷ್ಟ ಶೈಲಿ, ಆಲೋಚನೆಗಳಲ್ಲಿನ ಖಚಿತತೆ ಮತ್ತು ವಿಷಯ ಮಂಡನೆಯಲ್ಲಿನ ಅವರ ದಿಟ್ಟತನ.
ಒಂದು ದಿನ ಪ್ರಜಾವಾಣಿಯಲ್ಲಿ ಪ್ರಕಟವಾದ ದಿನೇಶರ ಒಂದು ಅಂಕಣ ಲೇಖನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಜಾವಾಣಿಗೆ ಈಮೇಲ್ ಮಾಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕೆಲವೇ ಗಂಟೆಗಳಲ್ಲಿ ನನಗೆ ಬಂದುದು ದಿನೇಶರದೇ ಫೋನ್ ಕರೆ!. ದಶಕ ದಶಕಗಳ ಬಳಿಕ ಮತ್ತೆ ಮಾತನಾಡಿದೆವು (ಅವರ ಅಂಕಣ ಬರೆಹಗಳ ಸಂಗ್ರಹ ಅದಾಗಲೇ ಪ್ರಕಟವಾಗಿತ್ತು. ಆ ಕೃತಿ ನನಗೆ ಬೇಕಿತ್ತು ಅಂದೆ. ಆದರೆ ಅವರಲ್ಲೂ ಅದರ ಪ್ರತಿ ಇರಲಿಲ್ಲ. ಹಾಗಾಗಿ ನನಗೆ ಅದು ಸಿಗಲಿಲ್ಲ). ಅವರು ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡ ಬಳಿಕ ನಮ್ಮ ಸ್ನೇಹ ಗಾಢವಾಯಿತು. ಆಮೇಲೆ ಅವರು ನಮ್ಮ ಮನೆಗೆ ನೀಡಿದ ಭೇಟಿ, ನಡೆಸಿದ ವಿಚಾರವಿನಿಮಯಗಳು, ಅವರು ನನಗೆ ಮಾಡಿದ ಉಪಕಾರಗಳು ಇವುಗಳ ಬಗ್ಗೆ ಬರೆದರೆ ಅದೇ ಒಂದು ಪುಸ್ತಕವಾದೀತು. ಅದಿಲ್ಲಿ ಅಪ್ರಸ್ತುತ.

ಮುಂಗಾರು ಕರಾವಳಿಯನ್ನು ಪ್ರವೇಶಿಸಿದ್ದು ಇಲ್ಲಿ ಮಾತ್ರವಲ್ಲ ಇಡೀ ನಾಡಿನಲ್ಲಿ ಒಂದು ಸಂಚಲನಕ್ಕೆ ಕಾರಣವಾಗಿದ್ದಂತೂ ಸತ್ಯ. ಅದರ ಒಳಗಿನ ಆಡಳಿತಾತ್ಮಕ ವಿಷಯಗಳು ಓದುಗರಾದ ನಮಗೆ ಅರಿಯದು (ಆ ಕೋಲಾಹಲಗಳ ಬಗ್ಗೆ ದಿನೇಶ್ ಈಗಾಗಲೇ ಅನೇಕ ಕಡೆ ಬರೆದಿದ್ದಾರೆ, ಪ್ರಸ್ತುತ ಕೃತಿಯಲ್ಲಿಯೂ ಅದರ ಹೆಚ್ಚಿನ ವಿವರ ಇದೆ). ಅಲ್ಲದೆ ಪತ್ರಿಕೆ ಬದುಕಿದ್ದು ಕೇವಲ ಒಂದು ದಶಕ ಕಾಲ. ಆದರೆ ಆ ಆಲ್ಪಾವಧಿಯಲ್ಲಿ ಅದು ತನ್ನ ಸುದ್ದಿ ಮತ್ತು ಲೇಖನಗಳ ಮೂಲಕ ನೈಜ ಜನಪರವಾದ ಜರ್ನಲಿಸಂ ಹೇಗಿರಬೇಕು ಎಂಬುದಕ್ಕೆ ಒಂದು ಮಾದರಿಯಂತೆ ಬದುಕಿತು. ಅನೇಕ ಪ್ರತಿಭಾವಂತ ಪತ್ರಕರ್ತರನ್ನು ಬೆಳೆಸಿತು. ಓದುಗರಲ್ಲಿ ವಿಚಾರಕ್ರಾಂತಿಗೆ ನಾಂದಿ ಹಾಡಿತು. ದಿಟ್ಟತನಕ್ಕಂತೂ ಮುಂಗಾರುವಿಗೆ ಮುಂಗಾರುವೇ ಸಾಟಿ.

ಆಗಿನ ರಾಜ್ಯಪಾಲ ವೆಂಕಟಸುಬ್ಬಯ್ಯ ಅವರು ತನ್ನ ಗೆಳೆಯ ಸುಬ್ಬಿರಾಮ ರೆಡ್ಡಿಗೆ ಮಂಗಳೂರು ವಿವಿಯ ಮೂಲಕ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದಾಗ ಅದನ್ನು ಈ ಭಾಗದ ಪ್ರಜ್ಞಾವಂತರು ತೀವ್ರವಾಗಿ ವಿರೋಧಿಸಿದರು. ಆದರೆ ಈ ವಿರೋಧವನ್ನು ವಿವಿ ಗಣನೆಗೆ ತೆಗೆದುಕೊಳ್ಳದೆ ಮುಂದುವರಿದಾಗ, ಸುಬ್ಬಿರಾಮ ರೆಡ್ಡಿಯವರಿಗೆ ಗೌ.ಡಾ. ನೀಡಿದ ದಿನವೇ ಮಂಗಳೂರಿನ ಟೌನ್ ಹಾಲ್ ಬಳಿ ವಿಚಾರವಾದಿ ನರೇಂದ್ರ ನಾಯಕ್ ಮತ್ತವರ ಸಂಗಡಿಗರು ದಾರಿ ಹೋಕರಿಗೆಲ್ಲ “ಯಾರಿಗೆ ಬೇಕು ಡಾಕ್ಟರೇಟ್ ಬನ್ನಿ ಬನ್ನಿ..” ಎನ್ನುತ್ತಾ ಗೌ.ಡಾ. ಹಂಚಿದರು. ಮಾತ್ರವಲ್ಲ, ಒಂದು ಕತ್ತೆಗೂ ಗೌ.ಡಾ. ಪ್ರಧಾನ ಮಾಡಿದರು. ಇದನ್ನು ಮಾರನೇ ದಿನ ಮುಂಗಾರು ಪತ್ರಿಕೆ ಮುಖಪುಟದಲ್ಲಿಯೇ ವರದಿ ಮಾಡಿತು. ಎಡಗಡೆಯಲ್ಲಿ ಸುಬ್ಬಿರಾಮ ರೆಡ್ಡಿಗೆ ಗೌಡಾ ಪ್ರದಾನ ಮಾಡಿದ ಚಿತ್ರ, ಬಲಗಡೆಯಲ್ಲಿ ಕತ್ತೆಗೆ ಗೌ.ಡಾ. ಪ್ರದಾನ ಮಾಡಿದ ಚಿತ್ರ. ಹೀಗೆ ಧೈರ್ಯವಾಗಿ ವರದಿ ಪ್ರಕಟಿಸುವ ಧೈರ್ಯ ಅಂದು ಎಷ್ಟು ಪತ್ರಿಕೆಗೆ ಇತ್ತು? ಇಂದು ಎಷ್ಟು ಪತ್ರಿಕೆಗೆ ಇದೆ? 

ಹೊಸ ಪೀಳಿಗೆಯ ಪತ್ರಕರ್ತರನ್ನು ಮಾತ್ರ ಬೆಳೆಸಿದ್ದಲ್ಲ ಮುಂಗಾರು. ಅಸಂಖ್ಯ ಲೇಖಕರನ್ನೂ ಪ್ರೋತ್ಸಾಹಿಸಿ ಬೆಳೆಸಿತು. ನಾವೆಲ್ಲ ಮುಂಗಾರು ಓದುತ್ತ ಮುಂಗಾರುವಿನಲ್ಲಿ ಬರೆಯುತ್ತ ಬೆಳೆದೆವು (ನಾನೂ ಕವನದ ಹೆಸರಿನಲ್ಲಿ ಬರೆದುದನ್ನೆಲ್ಲ ಪ್ರಕಟಿಸಿ ಬರೆಯಲು ಹುರಿದುಂಬಿಸಿತ್ತು, ಒಂದು ಕವನವಂತೂ ನನಗೆ ಅನೇಕ ಅಭಿಮಾನಿಗಳು ಸಿಗುವಂತೆ ಮಾಡಿತ್ತು). ಮುಂಗಾರು ಅಷ್ಟೊಂದು ಜನಪ್ರಿಯವಾಗಲು ಮುಖ್ಯ ಕಾರಣ ಅದರ ನೇತೃತ್ವ ವಹಿಸಿದ್ದ ವಡ್ಡರ್ಸೆಯವರು. ಮುಂಗಾರುವಿನ ಅವರ ಬರೆಹಗಳನ್ನು ನಾವು ಕಾದುಕುಳಿತು ಓದುತ್ತಿದ್ದೆವು. ಅವುಗಳಲ್ಲಿ ಅಂತಹ ಏನು ಮಾಂತ್ರಿಕ ಶಕ್ತಿ ಇತ್ತು ಎಂಬುದನ್ನು ಅವರ ಬರೆಹಗಳನ್ನೇ ಓದಿ ತಿಳಿಯಬೇಕು.

ವಡ್ಡರ್ಸೆಯವರ ಅಂತಹ ಕೆಲವು ಮುಖ್ಯ ಬರೆಹಗಳನ್ನು ದಿನೇಶ್ ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ (ಇನ್ನೂ ಅನೇಕ ಬರೆಹಗಳು ಅವರ ಬಳಿ ಇವೆಯಂತೆ. ಅವೂ ಬೇಗನೇ ಪುಸ್ತಕ ರೂಪದಲ್ಲಿ ಬರುವಂತಾಗಲಿ). ಕೃತಿಗೆ ಮುನ್ನುಡಿಯ ರೂಪದಲ್ಲಿ ಅವರು ಸಲ್ಲಿಸಿರುವ ‘ನುಡಿನಮನ’ವು ಮುಂಗಾರು ಪತ್ರಿಕೆ ಮತ್ತು ವಡ್ಡರ್ಸೆಯವರ ಬದುಕಿನ ಏಳುಬೀಳುಗಳ ಒಂದು ಸ್ಥೂಲ ನೋಟವನ್ನು ನೀಡುವದರ ಜತೆಗೇ ಏಕಕಾಲಕ್ಕೆ ಸಂತೋಷ, ವಿಷಾದ ಹೀಗೆ ನಾನಾ ಭಾವನೆಗಳಿಗೆ ಕಾರಣವಾಗುವಂತೆಯೂ ಮೂಡಿಬಂದಿದೆ. ನುಡಿ ನಮನ ಓದಿದ ಬಳಿಕ ಉಳಿದುಕೊಳ್ಳುವುದು ಕೇವಲ ವಿಷಾದ, ವಿಷಾದ ಮತ್ತು ವಿಷಾದ. ವಡ್ಡರ್ಸೆಯವರ ಬದುದೊಡ್ಡ ಕನಸಾದ, 'ಚಿಂತನೆಯ ಮಳೆ ಹರಿಸಿ ಜನಶಕ್ತಿ ಬೆಳೆ ತೆಗೆಯ ಹೊರಟ' ನಿಜ ಅರ್ಥದ ಜನಪರ ಪತ್ರಿಕೆಯೊಂದನ್ನು ಉಳಿಸಿಕೊಳ್ಳಲು ಸಾಧ್ಯವಾಗದ ವಿಷಾದ.

ಓದುಗರಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಗುರಿ ಇರಿಸಿಕೊಂಡು, ಜನಪರ ಸಾಹಿತ್ಯಕ್ಕೆ ವಿಶೇಷ ಆದ್ಯತೆ ನೀಡಿ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಅಕ್ಷತಾ ಹುಂಚದಕಟ್ಟೆಯವರ ಅಹರ್ನಿಶಿ ವಡ್ಡರ್ಸೆಯವರ ‘ಬೇರೆಯೇ ಮಾತು’ ಅನ್ನು ಪ್ರಕಟಿಸಿದೆ.
-----------

ದಿನೇಶ್ ಅಮಿನ್ ಮಟ್ಟು ಅವರ ಲೇಖಕ ಪರಿಚಯ...
ಶ್ರೀನಿವಾಸ್ ಕಾರ್ಕಳ ಅವರ ಲೇಖಕ ಪರಿಚಯ..

MORE FEATURES

ಗಾಂಧಾರಿಯ ಭಾವ ಸಂಘರ್ಷ ’ಮಿಂಚದ ಮಿಂ...

25-05-2022 ಬೆಂಗಳೂರು

ಪಾಂಡವ ಪಂಚಕರಿಂದ ಕೌರವಾದಿಗಳ ಹನನದ ಪಶ್ಚಾತ್ ಕಂಪನವೇ "ಗಾಂಧಾರಿ ಶಾಪ" ಎಂಬ ಪ್ರಸಂಗ. ಕೃಷ್ಣಾವಾತಾರದ ಪರಿಸ...

ಹೆಣ್ಣಿನ ಚರಿತ್ರೆ ಮತ್ತು ಆಳುವ ಅಹಂ...

25-05-2022 ಬೆಂಗಳೂರು

ನಾಗರೇಖಾ ಅವರ 'ಸ್ತ್ರೀ - ಸಮಾನತೆಯ ಸಂಧಿಕಾಲದಲ್ಲಿ' ಯುಗ ಯುಗಗಳ ಮೌನದೊಳಗಿನ ಶಕ್ತಿಯು ಹೊರಪ್ರವಹಿಸಿದುದರ ಅಸಾಧ...

ಸರಜೂ ಕಾಟ್ಕರ್ ಅವರ  “ದಂಗೆ” - ಆಳ...

25-05-2022 ಬೆಂಗಳೂರು

ಯಾವ ಈಸಂ ಅಥವಾ ಯುಫೆಮಿಸಂಗಳ ಹಂಗಿಲ್ಲದೆ ತೃತೀಯ ವ್ಯಕ್ತಿ ನಿರೂಪಣೆಯಲ್ಲಿ ಸಾಗುವ  ಕಾದಂಬರಿ  ಚರಿತ್ರೆಯ ಪುಟಗ...