ಓದುಗರನ್ನು ಸಾಹಿತ್ಯದತ್ತ ಆಕರ್ಷಿಸಲು ಈ ವಾಚಿಕೆ ಹೆಚ್ಚು ಉಪಯುಕ್ತವಾಗಿವೆ


"ಶ್ರೇಷ್ಠ ಸಾಹಿತಿಯೊಬ್ಬರ ಅಮೂಲಾಗ್ರಹ ಕೃತಿಗಳ ಸಾರಸತ್ವವನ್ನು ಹೀರಿ ರಾಸಾಯನ ರೂಪದಲ್ಲಿ ಉಣಬಡಿಸುವುದು ಈ ವಾಚಿಕೆಗಳ ಉದ್ದೇಶವಾಗಿದೆ," ಎನ್ನುತ್ತಾರೆ ಸಿದ್ದಲಿಂಗ ಬಿ. ಕೊನೇಕ. ಅವರು ರಾಜಕುಮಾರ ಮಾಳಗೆ ಅವರ ‘ಜಿ.ಬಿ.ವಿಸಾಜಿ’ ( ವಾಚಿಕೆ 8 ) ಕೃತಿಗೆ ಬರೆದ ಪ್ರಕಾಶಕರ ಮಾತು.

ಕನ್ನಡ ಸಾಹಿತ್ಯ ಪ್ರಕಾರವು ಅತ್ಯಂತ ಪ್ರಾಚೀನವಾದದ್ದು. ಅನೇಕ ಭಾಷೆಗಳ ಸಾಹಿತ್ಯ ಕೊಡುಕೊಳ್ಳುವಿಕೆ ಕನ್ನಡದೊಂದಿಗೆ ನಿರಂತರವಾಗಿ ನಡೆದಿದೆ. ಅದು ಅನುವಾದ ಮೂಲಕವಾಗಿರಬಹುದು ಅಥವಾ ಬೇರೆ ಬೇರೆ ಪ್ರಕಾರಗಳ ಮೂಲಕವಾಗಿ ಬಂದಿರಬಹುದು. ಹಳಗನ್ನಡ, ವಚನ, ಕೀರ್ತನೆ, ತತ್ವಪದ, ಸ್ವರ ವಚನ, ಸೂಫಿ ಕಾವ್ಯ, ಬಂದಂತೆ ಆಧುನಿಕ ಸಾಹಿತ್ಯದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಪ್ರಕಾರಗಳು ಹೇಗೆ ರಚನೆಯಾಗಿವೆಯೋ ಹಾಗೆ ಕನ್ನಡದಲ್ಲಿ ಗಜಲ್, ಸಾನೇಟ್, ಹಾಯಿಕು, ತಾಂಕಾ, ರುಬಾಯಿ, ದೋಹೆ,ಶಾಯಿರಿ, ಹೀಗೆ ಹಲವಾರು ಪ್ರಕಾರಗಳು ನಮ್ಮದಲ್ಲದ ಸಾಹಿತ್ಯ ಕಾವ್ಯದ ಹೊಸ ಪ್ರಯೋಗಗಳು ಕನ್ನಡದಲ್ಲಿ ಅನುವಾದಗೊಂಡು, ಕನ್ನಡದಲ್ಲಿ ಪ್ರಯೋಗವಾಗುತ್ತಿವೆ. ಅದರಂತೆ ಇತ್ತೀಚಿನ ದಶಕದಲ್ಲಿ 'ವಾಚಿಕೆ' ಎನ್ನುವ ಹೆಸರಿನಲ್ಲಿ ಸಾಹಿತ್ಯ ಕೃತಿಗಳು ಪ್ರಕಟವಾಗುತ್ತಿವೆ.

ಇದುವರೆಗೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 'ವಾಚಿಕೆ' ಸಾಹಿತ್ಯ ಪ್ರಕಾರವಾಗಿ ಸ್ವರೂಪವಾಗಿ ಪ್ರಕಟಗೊಂಡಿರುವುದಿಲ್ಲ. 'ವಾಚಿಕೆ' ಎನ್ನುವ ಪ್ರಕಾರದ ಸಾಹಿತ್ಯವನ್ನು ಹುಟ್ಟುಹಾಕುವ ಪ್ರಯತ್ನ ನಮ್ಮದಾಗಿದೆ. ಈಗ ತಾನೇ ಉದಯವಾಗುತ್ತಿರುವ ಒಂದು ಪ್ರಕಾರವೆಂದು ಹೇಳಬಹುದು. ಇಂಗ್ಲೀಷಿನ 'ರೀಡರ್' ಎಂಬ ಪದಕ್ಕೆ ಸಂವಾದಿಯಾಗಿ 'ವಾಚಿಕೆ' ಎಂಬ ಪದ ಬಳಕೆಯಾಗುತ್ತಿರುವುದು ಕಾಣುತ್ತೇವೆ. ಈ ವಾಚಿಕೆಗಳು ಇನ್ನೊಂದು ಅರ್ಥದಲ್ಲಿ ಅರಗಿಸಿಕೊಂಡು, ಕರಗಿಸಿಕೊಂಡು, ಸರಳ ಸುಂದರವಾಗಿ ಉಣಬಡಿಸುವ ಸಾಹಿತ್ಯದ ಪ್ರಕ್ರಿಯೆಯಾಗಿದೆ. ಶ್ರೇಷ್ಠ ಸಾಹಿತಿಯೊಬ್ಬರ ಅಮೂಲಾಗ್ರಹ ಕೃತಿಗಳ ಸಾರಸತ್ವವನ್ನು ಹೀರಿ ರಾಸಾಯನ ರೂಪದಲ್ಲಿ ಉಣಬಡಿಸುವುದು ಈ ವಾಚಿಕೆಗಳ ಉದ್ದೇಶವಾಗಿದೆ.

ಕನ್ನಡ ಸಾಹಿತ್ಯದಲ್ಲಿ ಈ 'ವಾಚಿಕೆ' ಪ್ರಕಾರ ತೀರ ಅಪರೂಪವಾಗಿರುವುದರಿಂದ ಇದರ ಬಗ್ಗೆ ಸರಿಯಾದ ಸ್ಪಷ್ಟವಾದ ಪರಿಕಲ್ಪನೆ ಇಲ್ಲದೆ ಇರುವುದರಿಂದ 'ವಾಚಿಕೆ' ಓದುಗರಿಗೆ ಹೊಸತು ಎನಿಸುತ್ತದೆ. ಸಾಹಿತಿಯೊಬ್ಬರನ್ನು ಸಂಕ್ಷಿಪ್ತವಾಗಿ ಪರಿಚಯಿಸಿ ಕೊಡುವ ಕಾರ್ಯ ಇದಾಗಿದೆ. ಕಥೆ, ಕಾವ್ಯ, ನಾಟಕ, ಪ್ರಬಂಧ, ಹಾಸ್ಯ, ವಿಡಂಬನೆ ಮುಂತಾದ ಸೃಜನಶೀಲ ಅವರ ಸಮಗ್ರ ಸಾಹಿತ್ಯ ಚಟುವಟಿಕೆಗಳನ್ನು ಗಮನ ದಲ್ಲಿರಿಸಿಕೊಂಡು ಸಂಕ್ಷಿಪ್ತಗೊಳಿಸಿ ಕೊಡುವಿಕೆಯೇ ವಾಚಿಕೆಯಾಗಿದೆ. ಸಾಮಾನ್ಯವಾಗಿ ನಾವು ಸ್ಯಾಂಪಲೀಕರಣ ಸಾಹಿತ್ಯವೆಂದು ಹೇಳಬಹುದು. ಅಂದರೆ ಓದುಗನಿಗೆ ಶ್ರೇಷ್ಠ ಸಾಹಿತಿಯೊಬ್ಬನ ಸಮಗ್ರ ಸಾಹಿತ್ಯ ಪರಿಚಯಿಸುವಿಕೆ, ಸ್ಯಾಂಪಲೀಕರಣ ಅಥವಾ ವಾಚಿಕೆಯೆಂದು ಕರೆಯೋಣ. ಈ ವಾಚಿಕೆಗಳನ್ನು ಈ ಹಿಂದೆ 'ಪ್ರಶಸ್ತಿ'ಗಳೆಂದು ಕರೆಯಲಾಗಿದೆ. ಅದೇ ಹೆಸರಲ್ಲಿ ಮುದ್ರಣಗೊಂಡಿದ್ದು ನಮ್ಮ ಗಮನಕ್ಕೆ ಬರುತ್ತವೆ. ಒಟ್ಟಾರೆ ಹೇಳುವುದಾದರೆ ವಾಚಿಕೆಗಳು ಸಾಹಿತ್ಯದ ಸತ್ವಯುತವಾದ ಸಂಗ್ರಹದ ಭಾಗಗಳಾಗಿವೆ. ಓದುಗರನ್ನು ಸಾಹಿತ್ಯದತ್ತ ಆಕರ್ಷಿಸಲು ಈ ವಾಚಿಕೆಗಳು ಹೆಚ್ಚು ಉಪಯುಕ್ತವಾಗಿವೆ. ಒಂದು ಕಾಲದಲ್ಲಿ ವಾಚಿಕೆಯೆಂದರೆ ಮೌಖಿಕ ಪರಂಪರೆಯಿಂದ ಸುರಕ್ಷಿತವಾಗಿ ಉಳಿಸಿ ಬೆಳೆಸಿಕೊಂಡು ಬಂದ ಲಿಖಿತ ಸಾಹಿತ್ಯವೆಂಬ ಅರ್ಥ ಬರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮಹರ್ಷಿ ವಾಲ್ಮೀಕಿಯಿಂದ ರಚಿತವಾದ ರಾಮಾಯಣ ಲಿಖಿತ ರೂಪ ಬರುವ ಮುನ್ನ ವಾಚಿಕೆ ರೂಪದಲ್ಲಿ ಇತ್ತು ಎಂದು ಹೇಳಬಹುದು. ಈ ವಾಚಿಕೆ ಮೂಲ ಅರ್ಥ ವಚನ. ಅಂದರೆ ಹೇಳುವ ಮಾತು ಎಂಬ ಅರ್ಥ ಕೊಡುತ್ತದೆ. ಇದರಲ್ಲಿ ಲೋಕಜ್ಞಾನದ ಅಧಿಕಾಂಶಗಳನ್ನೊಳಗೊಂಡ ವಿಷಯವನ್ನು ವಾಚಿಕೆ ಎಂದು ಕರೆಯುತ್ತಾರೆ.

ಇಲ್ಲಿ ಒಂದು ಸ್ಪಷ್ಟಿಕರಣವೆಂದರೆ ಲಿಖಿತ ಮತ್ತು ಮುದ್ರಣ ಮಾಧ್ಯಮಕ್ಕಿಂತ ಮೊದಲು ಇರುವುದನ್ನು ನಾವು ವಾಚಿಕೆಯೆಂದು ಕರೆಯಬಹುದಾಗಿದೆ. "ಜನಾಂಗದಿಂದ ಜನಾಂಗಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ, ಬಾಯಿಂದ ಬಾಯಿಗೆ, ಹರಿದು ಬಂದ ಮೌಖಿಕ ಸಾಹಿತ್ಯ ಪರಂಪರೆಯೇ" ವಾಚಿಕೆಯಾಗಿದೆ. ಇನ್ನೊಂದು ಅರ್ಥ ವಿದ್ವಾಂಸನೊಬ್ಬನು ಓದಿ ಜೀರ್ಣಿಸಿಕೊಂಡು ಇನ್ನೊಬ್ಬನಿಗೆ ಸರಳ ಸುಂದರವಾಗಿ ಓದಲು ಅನುಕೂಲ ಮಾಡಿಕೊಡುವ ವ್ಯವಸ್ಥೆಯನ್ನು ವಾಚಿಕೆಯೆಂದು ಹೇಳಬಹುದು. ಲೇಖಕನೊಬ್ಬನ ಅಥವಾ ಸಾಹಿತಿಯೊಬ್ಬನ ಮೂಲ ಸಾಹಿತ್ಯದ ಸಾರವನ್ನು ಹೀರಿ ಅವರ ಸಾಹಿತ್ಯ ಸಾಧನವನ್ನು ಉಣಬಡಿಸುವ ಪ್ರಕ್ರಿಯೆ ವಾಚಿಕೆಯಾಗಿದೆ. ಮೂಲ ಸತ್ವವನ್ನು ಸಂಕ್ಷಿಪ್ತಗೊಳಿಸುವ ಕ್ರಿಯೆ ಎಂದು ಒಪ್ಪಿಕೊಳ್ಳಬಹುದು. ಇದನ್ನು ಕ್ರೂಢೀಕರಿಸಿ, ಸರಳೀಕರಣ ಮಾಡಿ, ಒಂದೇ ಮಾತಿನಲ್ಲಿ ಹೇಳುವುದಾದರೆ 'ಆಯ್ದ' ಭಾಗ ಎಂದು ಅರ್ಥೈಸಬಹುದು.

ಕೊನೆಯಲ್ಲಿ ಹೇಳುವುದಾದರೆ ಓದು ಬರಹ ನಿಲ್ಲಿಸಿದ ಹಿರಿಯ ಸಾಹಿತಿಗಳ ಕವಿಗಳ ವಾಚಿಕೆ ಪ್ರಕಟಿಸಬೇಕೆಂಬ ನಿಯಮ ಇದ್ದರೂ, ನಾವು ಕಿರಿಯ ಉತ್ಸಾಹಿ ಸಾಹಿತಿಗಳನ್ನು ಒಳಗೊಂಡಂತೆ ವಾಚಿಕೆ ಪ್ರಕಟಿಸುವುದರ ಹಿಂದೆ ಇರುವ ಉದ್ದೇಶ, ಹಿರಿಯ ತಲೆಮಾರು ಮತ್ತು ಕಿರಿಯ ತಲೆಮಾರಿನವರ ಎರಡೂ ತಲೆಮಾರುಗಳ ಸಮಾಗಮದ ಸ್ವರೂಪ ವಾಚಿಕೆಯನ್ನು ಪ್ರಕಟಿಸಲು ನಮ್ಮ ಸಮಿತಿಯು ನಿರ್ಣಯ ಕೈಕೊಂಡು ಆ ದಿಸೆಯಲ್ಲಿ ಈ ಹೊಸ ಪ್ರಯೋಗ ಮಾಡಿ ಕಾರ್ಯ ಪ್ರವೃತ್ತರಾಗಿದ್ದೇವೆ.

ಈ ದಿಸೆಯಲ್ಲಿ ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳ ವಾಚಿಕೆ ಮಾಲಿಕೆಯನ್ನು ಹೊರ ತರುತ್ತಿರುವುದು ಕರ್ನಾಟಕ ಸುವರ್ಣ ಸಂಭ್ರಮಾಚರಣೆಯ ಶುಭ ಗಳಿಗೆಯಲ್ಲಿ ಪ್ರಕಟಗೊಳ್ಳುತ್ತಿರುವುದು ಶುಭ ಸೂಚಕವಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಯನ್ನು ಅಖಂಡ ಕರ್ನಾಟಕಕ್ಕೆ ವಿಸ್ತರಿಸುವ ಉದ್ದೇಶವಿರಿಸಿಕೊಂಡಿದ್ದೇವೆ. ಈ ಭಾಗದ ಸಾಹಿತ್ಯದ ಒಳನೋಟಗಳನ್ನು ಸಾಹಿತಿಗಳ ವೈವಿಧ್ಯಮಯ ಪ್ರಕಾರಗಳನ್ನು ನಮ್ಮದೇ ಆದ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಮೂಲಕ ಇಡೀ ನಾಡಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ. ಇಂತಹ ವಾಚಿಕೆಯನ್ನು ಕನ್ನಡ ಸಾಹಿತ್ಯ ಲೋಕ ಮತ್ತು ಸಾಹಿತಿಗಳು, ಕವಿಗಳು, ವಿಮರ್ಶಕರು ಹಾಗೂ ಓದುಗರು ಸ್ವಾಗತಿಸುತ್ತಾರೆಂಬ ನಂಬಿಕೆಯಿಂದ ಈ ವಾಚಿಕೆಯನ್ನು ನಮ್ಮ ಪ್ರಕಾಶನದ 47 ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿಮ್ಮ ಮುಂದೆ ಇಡಲಾಗಿದೆ.

- ಸಿದ್ಧಲಿಂಗ ಬಿ. ಕೊನೇಕ ಪ್ರಕಾಶಕರು

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...