ಒಳಬಂಡಾಯದ ದನಿ ಶೋಭಾರ ಕವಿತೆ : ಎಚ್‌ಎಸ್‌ವಿ

Date: 12-01-2021

Location: ಬೆಂಗಳೂರು


ಬಾಹ್ಯ ಹೋರಾಟಕ್ಕಿಂತ ಒಳ ಬಂಡಾಯದ ದನಿಯಾಗಿ ಕವಯತ್ರಿ ಶೋಭಾ ಹಿರೇಕೈ ಅವರ ಕವಿತೆಗಳಿವೆ ಎಂದು ಹಿರಿಯ ಸಾಹಿತಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

ಬುಕ್ ಬ್ರಹ್ಮ ಹಾಗೂ ಶ್ರೀಮತಿ ಸರಳರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2019ರ ಸಾಲಿನ ಶ್ರೀಮತಿ ಸರಳ ರಂಗನಾಥ ರಾವ್ ಪ್ರಶಸ್ತಿಗೆ ಕವಯತ್ರಿ ಶೋಭಾ ಹಿರೇಕೈ ಅವರ ‘ಅವ್ವ ಮತ್ತು ಅಬ್ಬಲಿಗೆ’ ಕವನ ಸಂಕಲನ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನಿಸಿ, ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು.

‘ಮನುಷ್ಯ ಮನಸ್ಸಿನಿಂದಾದವನು ಹೊರತು ಬರಿಯ ದೇಹದಿಂದಲ್ಲ. ಜಗತ್ತನ್ನು ಮನಸ್ಸಿನಿಂದ ನೋಡಲು ಇರುವ ಪರಿಕರ ದೇಹವಷ್ಟೇ. ಏನನ್ನೋ ಪಡೆಯುವಾಗ ಮತ್ತೇನನ್ನೋ ಕಳೆದುಕೊಳ್ಳುವುದನ್ನು ಸೂಕ್ಷ್ಮವಾಗಿ ಗ್ರಹಿಸುವಿಕೆಯು ಕವಿಯ ಮೊದಲ ಮೆಟ್ಟಿಲಾಗುತ್ತದೆ. ಇಂತಹ ಸೂಕ್ಷ್ಮತೆ ಕವಯತ್ರಿಗೆ ದಕ್ಕಿದೆ. ಅವರ ಕಾವ್ಯಗಳು ಒಳ ಬಂಡಾಯವನ್ನು ಧ್ವನಿಸುತ್ತವೆ ಎಂದು ಹೇಳಿದರು.

ಸಾಹಿತಿ ಜಿ. ಎನ್. ರಂಗನಾಥ ರಾವ್ ಅವರು ‘ನನ್ನ ಪತ್ರಿಕಾ ವ್ಯವಸಾಯ, ಸಾಹಿತ್ಯ ರಚನೆಯ ಹಿಂದಿನ ಚೈತನ್ಯ ಹಾಗೂ ಪ್ರೇರಣೆಯಾಗಿ ನಿಂತವಳು ನನ್ನ ಪತ್ನಿ ಸರಳ. ಮಾತ್ರವಲ್ಲ ನನ್ನೆಲಾ ಬರಹದ, ಬದುಕಿನ ಪ್ರಥಮ ವಿಮರ್ಶಕಿಯಾಗಿದ್ದಳು. ಹೀಗೆ ಗತಿಸಿದವರನ್ನು ಸ್ಮರಣೆಯಿಂದ ಮೂರ್ತಿಸಿಕೊಳ್ಳುವುದು ಸಾಧ್ಯವಾಗುತ್ತದೆ’ ಎಂದು ಸ್ಮರಿಸಿದರು.

ಪ್ರಶಸ್ತಿ ಸ್ವೀಕರಿಸಿದ ಶೋಭಾ ಹಿರೇಕೈ ಮಾತನಾಡಿ, ‘ಸಶಕ್ತ ಬರವಣಿಗೆಯನ್ನು, ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳಲು, ಎಚ್ಚರಿಸಲು ಈ ಪ್ರಶಸ್ತಿ ಪೂರಕವಾಗಲಿದೆ. ಸಂಸಾರಿಕ ಜೀವನದಲ್ಲಿ ವೃತ್ತಿ ಬದುಕನ್ನು ನಿರ್ವಹಿಸಿ, ಪ್ರವೃತ್ತಿಯನ್ನೂ ಪೋಷಿಸಿಕೊಳ್ಳುವುದು ಕಠಿಣ ಹಾದಿಯಾಗಿದ್ದು ಈ ಪ್ರಶಸ್ತಿಯನ್ನು ಆರ್ಶಿವಾದವಾಗಿ ಸ್ವೀಕರಿಸುತ್ತೇನೆ’ ಎಂದರು.

ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ, ರಾಘವೇಂದ್ರ ತೀರ್ಥ, ಮಾವಿನಕೆರೆ ರಂಗನಾಥನ್ ಮುಂತಾದ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...