ಒಂದು ಕಾಲಘಟ್ಟದ ಪ್ರತೀಕ ‘ಮೂಕಜ್ಜಿ’


ಶಿವರಾಮ ಕಾರಂತರ ಒಂದು ಪ್ರಮುಖ ಕಾದಂಬರಿ ಮೂಕಜ್ಜಿಯ ಕನಸುಗಳು. ಈ ಕಾದಂಬರಿಯು ಹಲವಾರು ದೃಷ್ಟಿಯಿಂದ ವಿಶಿಷ್ಟವೆನ್ನಿಸುತ್ತದೆ. ಈ ಕಾದಂಬರಿಗೆ ಕಥಾನಾಯಕನಿಲ್ಲ; ನಾಯಕಿಯಿಲ್ಲ. ಮೂಕಜ್ಜಿಯೂ ಇಲ್ಲಿ ಕಥಾನಾಯಕಿಯಲ್ಲ. ಒಂದು ನಿರ್ದಿಷ್ಟವಾದ ಕೇಂದ್ರವಿಲ್ಲದೇ ಶುರುವಾಗುವ ಇಲ್ಲಿನ ಕತೆ ಹೀಗೆಯೇ ಪ್ರಾರಂಭವಾಗಿ, ಬೆಳೆದು, ಕೊನೆಗೊಳ್ಳುತ್ತದೆ ಎನ್ನುವ ಯಾವುದೇ ಚೌಕಟ್ಟಿಲ್ಲ. ತನ್ನದೇ ಆದಂತಹ ಪರಿಭಾಷೆಯಲ್ಲಿ ಹಲವಾರು ಘಟನೆಗಳ ಒಟ್ಟು ಹೂರಣವಾಗಿ ಕತೆಯನ್ನು ಹೆಣೆಯಲಾಗಿದೆ ಎನ್ನುತ್ತಾರೆ ರಂಜಿತಾ ಸಿದ್ಧಕಟ್ಟೆ. ಅವರು ‘ಮೂಕಜ್ಜಿಯ ಕನಸುಗಳು’ ಸಿನಿಮಾದ ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ.

‘ಮೂಕಜ್ಜಿಯ ಕನಸುಗಳು’ ಕೃತಿಯನ್ನು ಸಿನಿಮಾವಾಗಿಯೂ ಪರದೆಯ ಮೇಲೆ ಕಟ್ಟಿಕೊಡಲಾಗಿದೆ. ಪಿ. ಶೇಷಾದ್ರಿ ಅವರ ನಿರ್ದೇಶನದಲ್ಲಿ 2019ರಲ್ಲಿ ಮೂಡಿಬಂದಿರುವ ಅದೇ ಶೀರ್ಷಿಕೆಯ ‘ಮೂಕಜ್ಜಿಯ ಕನಸುಗಳು’ ದೃಶ್ಯಕಾವ್ಯದಲ್ಲಿ, ಮೂಲ ಸೃಷ್ಟಿಯ ಮೂಕಜ್ಜಿ ಹೀಗೆಯೇ ಇದ್ದರು ಎಂಬ ಭಿತ್ತಿಯನ್ನು ಬಿತ್ತಿದ್ದಾರೆ. ಮೂಕಜ್ಜಿಯ ಚಿತ್ರಣದ ಪ್ರತಿರೂಪವಾಗಿ ಬಿ. ಜಯಶ್ರೀ ಅವರು ಚಿತ್ರಣದಲ್ಲಿ ಕಾಣುತ್ತಾರೆ.

"ಬದುಕೆಂದರೆ ಬರೀ ಆಸೆಗಳನ್ನು ಗೆಲ್ಲೋದಾ? ಗೆಲ್ಲೋಕೆ ಅದೇನು ಪಂದ್ಯವಾ? ಎನ್ನುತ್ತಾ ಆಲದ ಮರದಡಿಯಲ್ಲಿ ಕೂತು ನೆರಳನ್ನು ಪಡೆಯುವ ಮೂಕಜ್ಜಿ, ಒಂದು ಕಾಲಘಟ್ಟದ ಪ್ರತೀಕವಾಗಿ ಹೊರಹೊಮ್ಮಿದ್ದಾಳೆ. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೆ ಮೂಕಜ್ಜಿಗೆ ನೆರವಾಗುವ ಆಲದಮರದ ದೃಶ್ಯಕಾವ್ಯ, ಸಿನಿಮಾದ ಉದ್ದಗಲಕ್ಕೂ ಆಲದ ಮರವನ್ನು ತೋರಿಸಿದ ರೀತಿ, ಬದುಕಿನ ಆಳ-ಅಗಲ-ವಿಸ್ತಾರದ ಪ್ರತೀಕವೆನ್ನಿಸಿದೆ. ಕುಂದಾಪುರದ ಭಾಷಾ ಸೊಗಡಿನ ಶೈಲಿಯೂ ಪಾತ್ರಗಳಿಗೆ ಜೀವತುಂಬಿದೆ.

ಮೂಕಜ್ಜಿ ಬಾಲ್ಯದಲ್ಲಿಯೇ ವಿಧವೆಯಾದವಳು. ಇದರಿಂದ ಆಕೆ ಅನುಭವಿಸುವ ನೋವು, ಹಿಂಸೆಯಿಂದ ಮೌನ ತಾಳಿ, ಮುಕಾಂಬಿಕೆಯಾಗಿದ್ದವಳು ಮೂಕಿಯಾಗಿ ಬದಲಾಗುತ್ತಾಳೆ. ಹೀಗೇ ಮೌನವಾಗಿದ್ದ ಮೂಕಿ ಮತ್ತೆ ಮೌನಮುರಿಯುವುದು ಮಕ್ಕಳಿಗಾಗಿ. ಆಕೆಯ ಒಡನಾಟದಲ್ಲಿ ಬೆಳೆಯುವ ಸುಬ್ರಾಯನನ್ನು ಇಲ್ಲಿ ಕುತೂಹಲದ ಪಾತ್ರವನ್ನಾಗಿ ಕಟ್ಟಿಕೊಡಲಾಗಿದೆ.

ಇನ್ನು ಮೂಕಜ್ಜಿ ಬದುಕಿದ ರೀತಿಯನ್ನು ನೋಡಿದಾಗ, ನಿಜಕ್ಕೂ ಮೂಕಜ್ಜಿ ಇದ್ರಾ? ಅಥವಾ ಕಲ್ಪನೆಯೇ. ಇದಿದ್ದರೆ ಹಿಗೇ ಬದುಕಲು ಸಾಧ್ಯವೇ? ಒಂದು ವಸ್ತುವನ್ನು ಸೋಕಿದ ತಕ್ಷಣ ವರ್ತಮಾನದ ವಿಚಾರಗಳನ್ನು ಅರಿಯಬಹುದೇ? ಅತಿಶಯ ಶಕ್ತಿಯನ್ನು ಹೊಂದಿದ್ದಳಾ ಮೂಕ್ಕಜಿ… ಹೀಗೆ ಹಲವಾರು ಪ್ರಶ್ನೆಗಳು ಕಾಡುತ್ತಲೇ ಇದೆ. ಆದರೆ ಇವೆಲ್ಲವನ್ನೂ ಮೀರಿ ಮೂಕಜ್ಜಿ ತನ್ನ ಜೀವನಾನುಭವ, ಅನುಭಾವ ಹಾಗೂ ಆಕೆಯ ಜಗತ್ತಿನಿಂದ ಮತ್ತಷ್ಟು ಹತ್ತಿರವಾಗುತ್ತಾಳೆ.

ಮೂಕಜ್ಜಿಯ ಪಾತ್ರದ ಮಹತ್ವವಿರುವುದು ಅವಳು ಇತಿಹಾಸವನ್ನು ಕಾಣಬಲ್ಲಳು ಎಂದು ಮಾತ್ರವಲ್ಲ ಅದನ್ನು ವರ್ತಮಾನಕ್ಕೆ ಸೇರಿಸ ಬಲ್ಲಳು ಎನ್ನುವುದರಲ್ಲಿ. ಈ ಪಾತ್ರವನ್ನು ನಿಭಾಯಿಸುವಲ್ಲಿ ಬಿ.ಜಯಶ್ರೀ ಅವರು ಪೂರ್ಣ ಪ್ರಮಾಣದಲ್ಲಿಯೇ ಸೈ ಎನಿಸಿದ್ದಾರೆ.

“ಕನಸು ಅಂದ್ರೆ ಕನಸು, ಭ್ರಮೆ ಅಂದ್ರೆ ಭ್ರಮೆ, ಇದೆಲ್ಲವನ್ನೂ ನಾವೇ ಮಾಡಿಕೊಂಡದ್ದು” ಎನ್ನುತ್ತಾ ಭ್ರಮೆ ಹಾಗೂ ವಾಸ್ತವ ಬದುಕಿನ ಸ್ಥಿತಿಗತಿಗಳನ್ನು ಪರಿಚಯಿಸುವಳು. ತನ್ನದೇ ಪ್ರಪಂಚವಾದ ಆಲದಮರದಡಿಯಲ್ಲಿ ಕೂತು, ಇತಿಹಾಸದೊಂದಿಗೆ ವರ್ತಮಾನಕ್ಕೂ ಸೇರುವ ವಿಚಾರಗಳನ್ನು ಮಾತಾಡವ ಮೂಕಜ್ಜಿ ಸುಬ್ರಾಯನ ಕಣ್ಣಿಗೆ ಅದ್ಭುತ ಶಕ್ತಿಯಂತೆ ಕಂಡರೆ, ಸುಬ್ರಾಯನ ಹೆಂಡತಿ ಕಣ್ಣಿಗೆ ಮರುಳು ಅಜ್ಜಿಯಂತೆ ಕಾಣುವಳು. ಆಕೆಯ ಒಂದಷ್ಟು ಮಾತುಗಳಿಗೆ ಜೊತೆಯಾಗುವ ಮಾಣಿ, ಚಂದ್ರ, ರಾಮಣ್ಣ, ಜನ್ನ, ತಮ್ಮ ನೀಳ ನೋಟಕ್ಕೆ, ತೀಕ್ಷ್ಣ ಮಾತುಕತೆಗೆ ದಕ್ಕುವ ರೀತಿಯಲ್ಲಿ ಆಕೆಯನ್ನು ತಿಳಿಯುವರು. ಒಟ್ಟಾರೆಯಾಗಿ ಈ ಸಿನಿಮಾವು ಆಕೆಯ ದಾರ್ಶನಿಕ ಪ್ರಜ್ಞೆಯ ಮನೋಸ್ಥಿತಿಯನ್ನು ತಿಳಿಸುವುದರ ಜೊತೆಗೆ, ನಮ್ಮ ಸುತ್ತಲೇ ಇಂತಹ ಹಲವಾರು ವಿಚಾರಗಳು ನಡೆಯುತ್ತಿದೆ ಎನ್ನುವಂತೆ ಮೈಮರೆಸುತ್ತದೆ.

- ರಂಜಿತಾ ಸಿದ್ಧಕಟ್ಟೆ

MORE FEATURES

ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕು: ಮಮತಾ ಜಿ. ಸಾಗರ್

16-04-2024 ಬೆಂಗಳೂರು

‘ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕೆ ಹೊರತು, ವೈವಿಧ್ಯತೆಯನ್ನ ಅಳಿಸಿ ಏಕತೆಯನ್ನ ಕಟ್ಟಲಾಗಲ್ಲ’ ಎನ್ನುತ್ತ...

ಎಲ್ಲ ಕಾಲಕ್ಕೂ ಸಲ್ಲುವ ಮಕ್ಕಳ ಕವನ ಸಂಕಲನ ‘ಏನು ಚಂದವೋ…’‌

15-04-2024 ಬೆಂಗಳೂರು

"ಮಕ್ಕಳಿಗಾಗಿ ಈಗಾಗಲೇ ಮೂರು ಕವನ ಸಂಕಲನಗಳನ್ನು ಹೊರತಂದಿರುವ ಎಸ್. ಎಸ್. ಸಾತಿಹಾಳ ಅವರು ಈಗ ‘ಏನು ಚಂದವೋ&h...

ಕಥೆಯ ಅಂತ್ಯ, ಅಚ್ಚರಿ, ಹೃದಯಸ್ಪರ್ಶಿ ಅಂಶಗಳಿಂದ ಸಮೃದ್ಧವಾಗಿದೆ

16-04-2024 ಬೆಂಗಳೂರು

"ಸಾಹಿತ್ಯಕ, ಭಾಷೆ ಮತ್ತು ಮನೋರಂಜನೆಯ ಪರಿಭಾಷೆಯಿಂದ ನೋಡುವುದಾದರೆ “ಯಾವುದೀ ಹೊಸ ಒಗಟು?" ಕಾದಂಬರಿ ಒ...