ಒಂದು ಕಥೆಯಲ್ಲಾ, ಹಲವಾರು ಕಥೆಗಳನ್ನು ಹೇಳುವ ‘ಮಸುಕು ಬೆಟ್ಟದ ದಾರಿ’


ಮಸುಕು ಬೆಟ್ಟದ ದಾರಿಯು ಒಂದು ಕಥೆಯಲ್ಲಾ, ಹಲವಾರು ಕಥೆಗಳನ್ನು ಹೇಳುತ್ತವೆ. ಏನನ್ನೂ ಮರೆಯದೆ ಎಲ್ಲವನ್ನೂ ನೆನಪಿಡಬಲ್ಲ ಹೈಪರ್ ಥೈಮೆಷ್ಟಿಕ್ ಸಿಂಡ್ರೋಮ್ ಎಂಬ ಜ್ಞಾಪಕ ಸಮಸ್ಯೆಗೆ ಒಳಗಾದ ನಿರಂಜನ ಕಥೆಯಿದೆ ಎನ್ನುತ್ತಾರೆ ಬರಹಗಾರ ಕಾರ್ತಿಕೇಯ. ಲೇಖಕ ಎಂ ಆರ್ ದತ್ತಾತ್ರಿ ಅವರ ಮಸುಕು ಬೆಟ್ಟದ ದಾರಿ ಸಂಕಲನದ ಬಗ್ಗೆ ಅವರು ಬರೆದ ಲೇಖನ ನಿಮ್ಮ ಓದಿಗಾಗಿ...

ಕೃತಿ: ಮಸುಕು ಬೆಟ್ಟದ ದಾರಿ
ಲೇಖಕ: ಎಂ ಆರ್ ದತ್ತಾತ್ರಿ
ಪುಟ: 340
ಬೆಲೆ: 300
ಮುದ್ರಣ: 2014
ಪ್ರಕಾಶನ: ಮನೋಹರ ಗ್ರಂಥ ಮಾಲಾ

ಇತ್ತೀಚೆಗೆ ದತ್ತಾತ್ರಿರವರ ಒಂದೊಂದು ತಲೆಗೂ ಒಂದೊಂದು ಬೆಲೆ ಹಾಗು ದ್ವೀಪವ ಬಯಸಿ ಕಾದಂಬರಿ ಓದಿದಾಗ ಅವರ ಬರಹದ ಶೈಲಿ ತುಂಬಾ ಇಷ್ಟವಾಯಿತು, ಅವೆರಡು ಅದ್ಭುತ ಕಾದಂಬರಿ ಕೂಡ. ಮಸುಕು ಬೆಟ್ಟದ ದಾರಿ ಕೂಡ ಅದೇ ಸಾಲಿಗೆ ಸೇರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ, ಹಾಗೂ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ತುಂಬಾ ಇಷ್ಟವಾಯಿತು.

ಮಸುಕು ಬೆಟ್ಟದ ದಾರಿಯು ಒಂದು ಕಥೆಯಲ್ಲಾ, ಹಲವಾರು ಕಥೆಗಳನ್ನು ಹೇಳುತ್ತವೆ. ಏನನ್ನೂ ಮರೆಯದೆ ಎಲ್ಲವನ್ನೂ ನೆನಪಿಡಬಲ್ಲ ಹೈಪರ್ ಥೈಮೆಷ್ಟಿಕ್ ಸಿಂಡ್ರೋಮ್ ಎಂಬ ಜ್ಞಾಪಕ ಸಮಸ್ಯೆಗೆ ಒಳಗಾದ ನಿರಂಜನ ಕಥೆಯಿದೆ. ಮಗನ ಸಮಸ್ಯೆಯನ್ನು ಅರಿತು ಆತನಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ರಾಜೀವನ ಕಥೆಯಿದೆ. ರಘುರಾಮನಿಗೆ ಗೆಳೆಯರಲ್ಲಿ ನಿರಂಜನನೆೇ ಅಚ್ಚುಮೆಚ್ಚು, ಅವರಿಬ್ಬರ ಸ್ನೇಹದ ಕಥೆಯಿದೆ, ರಘುರಾಮ, ಪಲ್ಲವಿ, ಮನೋಹರ, ಪಾಟೇಲ್ ಇನ್ನೂ ಹಲವಾರು ಪಾತ್ರಗಳು ಹಾಗು ಅವೆರೆಲ್ಲರ ಜೀವನವನ್ನೂ ಚಿತ್ರಿಸುತ್ತದೆ.

ಚಿಕ್ಕಮಗಳೂರಿನ ಪೋಲಿಸ್ ಇಲಾಖೆಯಲ್ಲಿ ಕಾನಸ್ಟೇಬಲ್ ಆಗಿ ಕೆಲಸ ಮಾಡುವ ರಾಜೀವನಿಗೆ ತನ್ನ ೭ ವರ್ಷದ ಮಗ ನಿರಂಜನನ ಜ್ಞಾಪಕಶಕ್ತಿಯು ಸಾಮಾನ್ಯಕ್ಕಿಂತ ಬೇರೆ ಎನ್ನುವುದು ಒಮ್ಮೆ ಅರಿವಾಗುತ್ತದೆ, ಕಾರಣ ನಿರಂಜನಿಗೆ ತಾನು ದೊಡ್ಡಮ್ಮನ ಮನೆಗೆ ಯಾವಾಗ ಹೋಗಿದ್ದೆ, ಯಾವ ಹೋಟಲ್ನಲ್ಲಿ ಎಂದು ದೋಸೆ ತಿಂದೆ, ಅಜ್ಜನ ತಿಥಿಯ ದಿನ ಎಂದು, ಹೀಗೆ ಹಲವಾರು ಪ್ರಸಂಗಗಳನ್ನು ದಿನಾಂಕ ಸಮೇತ ಹೇಳುತ್ತಿದ್ದುದು ಆಶ್ಚರ್ಯವಾಗುತ್ತಿತ್ತು, ಹೋದವರ್ಷ ಡಿಸೆಂಬರ್ ತಿಂಗಳಿಂದ ಪ್ರಾರಂಭಿಸಿ ಯಾವ ದಿನಾಂಕ ಕೇಳಿದರೂ ಅಂದು ಏನಾಯಿತೆಂದು ವರದಿ ಒಪ್ಪಿಸುವ ಮಗನನ್ನು ಕಂಡು ರಾಜೀವನು ಬೆಕ್ಕಸಬೆರಗಾದನು. ಆದರೆ ಓದಿನಲ್ಲಿ ಮಾತ್ರ ಏನೂ ನೆನಪು ಉಳಿಯುತ್ತಿರಲಿಲ್ಲ, ನಿರಂಜನನ ಶಾಲೆಯ ಟೀಚರ್ ಒಮ್ಮೆ ರಾಜೀವನಿಗೆ ನಿರಂಜನನ ಓದಿನ ಬಗ್ಗೆ ಗಮನ ಕೊಡುವುದಾಗಿ ತಿಳಿಸಿದ್ದರು, ಇಂದು ಹೇಳಿದ್ದು ಕೆಲ ಸಮಯವಾದ ನಂತರ ಮರೆತು ಹೋಗುವನೆಂದು ತಿಳಿಸಿದರು. ಓದಿನಲ್ಲಿ ಹಿಂದುಳಿದ ನಿರಂಜನನ್ನು ಕಂಡು ಆಶ್ಚರ್ಯವಾಯಿತು, ಬೇರೆ ಎಲ್ಲವೂ ದಿನಾಂಕ ಸಮೇತ ಹೇಳುವ ನಿರಂಜನನಿಗೆ ಶಾಲೆಯ ಓದಿನಲ್ಲಿ ಮರುವು ಏಕೆ ಎಂದು ಯೋಚನೆಗೀಡಾದನು. ಕಾರಣ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿರುವುದಕ್ಕಾಗಿ ಹೀಗಾಯಿತೆ, ಅಥವಾ ತಾನು ಪುನಃ ಮದುವೆ ಮಾಡಿಕೊಳ್ಳದೆ ಮನೆಯಲ್ಲಿ ಒಬ್ಬಂಟಿಗನಾಗಿರುವುದರಿಂದ ಹೀಗಾಯಿತೆ , ಕೆಲಸದ ಒತ್ತಡದಿಂದ ಮಗನ ಜೊತೆ ಸಮಯ ಕಳೆಯುತ್ತಿರಲಿಲ್ಲ ಆದ್ದರಿಂದ ಈ ಪರಿಸ್ಥಿತಿ ಉಂಟಾಯಿತೋ ಎಂದು ಆಲೋಚಿಸ ತೊಡಗಿದನು. ಅಕ್ಕ, ತಂಗಿ, ಗೆಳೆಯರು ೨ನೆ ಮದುವೆಯಾಗಲು ಸೂಚಿಸಿದರೂ ನಿರಂಜನ ದೃಷ್ಟಿಯಿಂದ ಆ ಬಂಧುತ್ವ ಬೇಡ

ಎಂದು ವಿದುರನಾಗಿಯೇ ಉಳಿದನು. ಅತ್ತ ಡ್ಯೂಟಿ ಮಾಡಿಕೊಂಡು ಇತ್ತ ಮಗನನ್ನು ನೋಡಿಕೊಂಡು ರಾಜೀವನು ತುಂಬಾ ಕಷ್ಟ ಪಟ್ಟು ಜೀವನ ಸಾಗಿಸುತ್ತಿದ್ದನು. ನಿಜಕ್ಕೂ ಗಂಡು ಹೆಣ್ಣು ಇಬ್ಬರು ಇದ್ದರೇನೆ ಒಂದು ಕುಟುಂಬ ನಿಲ್ಲಲು ಸಾಧ್ಯ, ಓಡಲು ೨ ಕಾಲು ಬೇಕಾದಂತೆ, ಆದರೆ ನಿರಂಜನ ಪಾಲಿಗೆ ತಂದೆಯೇ ಎಲ್ಲವು. ಊರಿನ ಡಾಕ್ಟರ್ ಸಲಹೆಯಂತೆ ರಾಜೀವ ಬೆಂಗಳೂರಿನ ನಿಮಾನ್ಸ್ ಹಾಸ್ಪಿಟಲ್ ಆಗಿನ್ನ ನಿರ್ಮಾಣವಾಗುವ ಸಮಯದಲ್ಲಿ ನಿರಂಜನನ್ನು ತೋರಿಸಿದಾಗಲೆ ತಿಳಿಯಿತು ತನ್ನ ಮಗನಿಗೆ ಹೈಪರ್ ಥೈಮೆಷ್ಟಿಕ್ ಸಿಂಡ್ರೋಮ್ ಎಂಬ ಜ್ಞಾಪಕ ಸಮಸ್ಯೆ ಇದೆಯಂದು.

ರಘುರಾಮ ಹಾಗು ನಿರಂಜನ ಒಂದೇ ಕಡೆ ಓದಿದರು, ರಾಘುರಾಮನು ಓದಿ ಮುಂದೆ ಬಂದನು. ನಿರಂಜನ ತನಗೆ ಒಳ್ಳೆಯ ಸ್ನೇಹಿತನಾಗಿದ್ದನು. ನಿರಂಜನನ ಸಮಸ್ಯೆಯನ್ನು ಅರಿತ ರಘು ಅವನಿಗೆ ತುಂಬಾ ಹತ್ತಿರವಾಗಿದ್ದನು, ಪರಸ್ಪರರು ಸಹಾಯ ಮಾಡಿಕೊಂಡು ಸಮಯ ಸಿಕ್ಕಾಗ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಸಮಯ ಕಳೆಯುತ್ತಿದ್ದರು, ಲಾವಣ್ಯ ಎಂಬುವಳನ್ನು ಪ್ರೀತಿಸಿದ ರಘು ಆಕೆಗೆ ಪ್ರೇಮ ಪತ್ರ ಬರೆಯಲು ಮುಳ್ಳಯ್ಯನಗಿರಿ ಬೆಟ್ಟದಲ್ಲಿ ನಿರಂಜನ ಸಹಾಯ ಪಡೆದು ಅದನ್ನು ಲಾವಣ್ಯಗೆ ತಲುಪಿಸಿ ನಿರಾಶನಾಗಿದ್ದನು, ಲಾವಣ್ಯನ ತಂದೆಗೆ ಉಡುಪಿಗೆ ವರ್ಗವಾಗಿ ಸಂಸಾರ ಸಮೇತ ಊರನ್ನು ಬಿಟ್ಟರು. ಇದರಿಂದ ರಘುಗೆ ನಿರಾಶೆಯಾಯಿತು. ನಂತರ ಓದಿ ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿ ನಿರಂಜನನನ್ನು ಬಿಟ್ಟು ಹೋದನು, ಆದರೆ ಅವರ ಸ್ನೇಹ ಮುಂದುವರೆಯಿತು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಪ್ರೀತಿ. ರಘು ತನ್ನ ತಂದೆ ತಾಯಿಯರನ್ನು ಎದುರು ಹಾಕಿಕೊಂಡು ಪಲ್ಲವಿಯನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸುಖವಾಗಿದ್ದನು. ಇದೇ ಸಮಯದಲ್ಲಿ ಆತನ ಮ್ಯಾನೇಜರ್ ಪಾಟೀಲರ ಸಹವಾಸದಿಂದ ಒಂದು ಸ್ಕೀಮಿನೊಳಗೆ ಸಿಕ್ಕಿಹಾಕಿಕೊಂಡು ಕಂಪನಿಗೆ ನಷ್ಟವಾಗಿ ಇವನ ಮೇಲೆ ದೂರು ಬಂದು ಜೈಲಿಗೆ ಹೋಗುವ ಪ್ರಸಂಗ ಬಂದಾಗ ಮದುವೆಯಾಗಿ ಒಂದು ವರ್ಷವೂ ಆಗಿರಲಿಲ್ಲ ಪಲ್ಲವಿಯನ್ನು, ನಿರಂಜನನ್ನು ಬಿಟ್ಟು ನೇಣು ಹಾಕಿಕೊಂಡು ಅವರನ್ನು ಅನಾಥರನ್ನಾಗಿಸಿದನು.ಆ ಪ್ರಸಂಗ ಓದಿದಾಗ ಮನ ಕುಲುಕುತ್ತದೆ, ಏನೂ ತಪ್ಪು ಮಾಡದೆ ರಘು ಸ್ಕೀಮಿನಲ್ಲಿ ಸಿಲುಖಿ ಪ್ರಾಣ ಬಿಟ್ಟುದುದಲ್ಲದೆ, ಪಲ್ಲವಿಯ ಪರಿಸ್ತಿತಿ ಕುರಿತು ಕನಿಕರವಾಗುತ್ತದೆ, ಆ ಸಮಯದಲ್ಲಿ ಆಕೆ ಗರ್ಭಿಣಿಯಾಗಿರುವುದಲ್ಲದೆ, ಅತ್ತೆ ಮಾವಂದಿರ ನಿಂದನೆಯಿಂದ ತವರು ಮನೆಯಲ್ಲೆ ಇರುವ ಪ್ರಸಂಗ ಬರುತ್ತದೆ.

ನಂತರ ರಾಜೀವ ನಿರಂಜನನಿಗೆ ಅಂಗಡಿ ವ್ಯಾಪಾರ ಮಾಡುವುದಕ್ಕೆ ಸಹಾಯ ಮಾಡುತ್ತಾನೆ. ನಿವೃತ್ತಿಯಾಗಿದ ನಂತರ ರಾಜೀವ ನಿರಂಜನನೊಂದಿಗೆ ಸಮಯ ಕಳೆಯಲು ನಿರ್ಧರಿಸುತ್ತಾನೆ. ನಿರಂಜನ ಮೊದಲು ಸಿನಿಮಾ ಥಿಯೇಟರ್ ನಲ್ಲಿ ಕೆಲಸ ಮಾಡಿ ಅದು ಜ್ಞಾಪಕ ಸಮಸ್ಯೆಯಿರುವ ನಿರಂಜನನನ್ನು ಹೆಚ್ಚು ಕಾಲ ಅಲ್ಲಿರಿಸಲು ಅವಕಾಶವಾಗಲಿಲ್ಲ. ಮಗನ ಮದುವೆಯೂ ಆಗದೆ ಉದ್ಯೋಗವೂ ಇಲ್ಲದೆ ಆತನ ಯೋಚನೆಯಿಂದಲೇ ಮೆತ್ತಗಾಗಿ ಒಂದು ದಿನ ಪ್ಯಾರಾಲಿಸಿಸ್ ಗೆ ತುತ್ತಾಗಿ ಹಾಸಿಗೆ ಹಿಡಿಯುತ್ತಾನೆ. ಅಂತೂ ನಿರಂಜನ ಅತ್ತ ಅಪ್ಪನ ಸೇವೆ ಮಾಡಿಕೊಂಡು ತನ್ನ ಅಂಗಡಿ ವ್ಯಾಪಾರ ನೋಡಿಕೊಂಡು ಜೀವನವನ್ನು ಸಾಗಿಸುತ್ತಾನೆ. ರಾಜೀವ ತನ್ನ ಆಸ್ತಿಯನ್ನೆಲ್ಲಾ ನಿರಂಜನ ಹೆಸರಿಗೆ ಬರೆದು ನಂತರ ಮೆಮೋರಿ ಲಾಸ್ ಆಗಿ ನಿರಂಜನನನ್ನೇ ಮರೆತು ಹೋಗುವ ಪ್ರಸಂಗ ಎದುರಾಗುತ್ತದೆ. ರಾಜೀವ ಕೆಲವೇ ದಿನಗಳಲ್ಲಿ ಸಾಯುತ್ತಾನೆ, ಅದೇ ಸಮಯದಲ್ಲಿ ರಘವಿನ ಸಾವಿನ ಸುದ್ಧಿ ತಿಳಿದು ಒಟ್ಟಿಗೆ ಇಬ್ಬರು ಆಪ್ತರನ್ನು ಕಳೆದುಕೊಂಡು ಏಕಾಂಗಿಯಾಗುತ್ತಾನೆ.

ಪಲ್ಲವಿ ಸುರಭಿಗೆ ಜನ್ಮ ನೀಡುತ್ತಾಳೆ. ಶಾಲೆಗೆ ಸೇರಿಕೊಂಡು ಸಂಸಾರ ಸಾಗಿಸುತ್ತಾಳೆ, ರಘುವನ್ನು ಮರೆಯಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಾಗದು, ಸುರಭಿ ನಿರಂಜನನಿಗೆ ತುಂಬಾ ಹತ್ತಿರವಾಗಿದ್ದಳು, ಪಲ್ಲವಿ ತಾಯಿ ಸರಸ್ವತಿಗೆ ಪಲ್ಲವಿಯನ್ನು ನಿರಂಜನನಿಗೆ ಕೊಟ್ಟು ಮದುವೆ ಮಾಡುವುದಾಗಿ ಹಲವು ಬಾರಿ ಯೋಚಿಸಿದ್ದಳು ಆದರೆ ಮಗಳ ಬಳಿ ಹೇಳುವುದಾದರೂ ಹೇಗೆ, ಇವರ ಕುಟುಂಬಕ್ಕೆ ನಿರಂಜನ ತುಂಬಾ ನೆರವಾಗುತ್ತಾನೆ, ಹೀಗೆ ಒಮ್ಮೆ ಪಲ್ಲವಿ ನಿರಂಜನ ಮುಳ್ಳಯಂಗಿರಿ ಬೆಟ್ಟದಲ್ಲಿ ಮಾತನಾಡುವಾಗ ರಘುವಿನ ಬಗ್ಗೆ ಸುಮಾರು ಹೊತ್ತು ಮತನಾಡಿ ತಮ್ಮ ಮನಸ್ಸಿನಲ್ಲಿರುವ ದುಃಖವನ್ನು ಪರಸ್ಪರ ಹಂಚಿಕಳ್ಳುತ್ತಾರೆ. ಅಂದು ಪಲ್ಲವಿಯ ಸ್ಪರ್ಶವು ನಿರಂಜನನಿಗೆ ರೋಮಾಂಚನಕಾರಿಯಾಗಿ ಅದು ಆತ್ಮೀಯ ಸ್ಪರ್ಶವಾಗಿ ಮನಸ್ಸಿಗೆ ಅನ್ನಿಸುತ್ತದೆ, ಪರಸ್ತ್ರೀ ಭಾವವೇ ಬರಲಿಲ್ಲ ಹಾಗು ಸ್ನೇಹಿತನ ಪತ್ನಿ ಎಂದು ಆ ಕ್ಷಣ ಅನ್ನಿಸುವುದಿಲ್ಲ, ಏಕೆಂದರೆ ಆ ಸಮಯದಲ್ಲಿ ನಿರಂಜನ ರಘುರಾಮನಾಗಿದ್ದ, ಪಲ್ಲವಿ ರಘುರಾಮನ ಕೈ ಹಿಡಿದಿದ್ದಳು. ಕ್ರಮೇಣ ಪಲ್ಲವಿಗೆ ನಿರಂಜನ ಮೇಲೆ ಮನಸ್ಸಾಗುತ್ತದೆ, ನಿರಂಜನನಿಗೂ ಪಲ್ಲವಿಯ ಮೇಲೆ ಮನಸ್ಸಾಗುತ್ತದೆ, ಆದರೆ ಪಲ್ಲವಿಗೆ ರಘುವಿನ ನೆನಪಿನಿಂದ ನಿರಂಜನನಿಗೆ ತನ್ನ ಮನಸ್ಸಿನಲ್ಲಿರುವ ಮಾತನ್ನು ಹೇಳಲಾಗುವುದಿಲ್ಲ, ಕಡೆಗೆ ನಿರಂಜನನೇ ಒಂದು ಹೆಜ್ಜೆ ಮುಂದೆ ಇಟ್ಟು ಪಲ್ಲವಿಯ ಮನಸ್ಸಿನ ಮಸುಕು ಬೆಟ್ಟದ ದಾರಿಗೆ ಈತನು ಹಾದಿಯಾಗುತ್ತಾನೆ.

ಆಯ್ದ ಸಾಲುಗಳು:

*ಕೆಲವು ವಸ್ತುಗಳು ಜೊತೆಯಲ್ಲಿದ್ದು ಮನಸ್ಸನ್ನು ಕಲಕುವಂತಿದ್ದರೆ ಕೆಲವು ದೂರವಾಗಿದ್ದು ಅದೇ ಕೆಲಸವನ್ನು ಮಾಡುತ್ತವೆ. ಒಂದು ದೊಡ್ಡ ವ್ಯತ್ಯಾಸವೆಂದರೆ, ಜೊತೆಯಲ್ಲಿ ಉಳಿದವು ಒಂದೇ ರೂಪದಲ್ಲಿ ಕಾಡಿದರೆ ಕಳೆದುಕೊಂಡವು ಮುಖ ಮರೆಸಿಕೊಂಡ ಡಕಾಯಿತರಂತೆ ವೇಷಾಂತರಗಳಲ್ಲಿ ಬಂದು ಮತ್ತೆ ಮತ್ತೆ ಅಪ್ಪಳಿಸುತ್ಚಿರುತ್ತವೆ. ಎಲ್ಲಿಯವರೆಗೆ ನೆನಪುಗಳು ಎನ್ನುವ ಮಿದುಳಿನ ಜೈವಿಕರಾಸಾಯನಿಕ ಕ್ರಿಯೆಯು ಕಾಲತೀತ ವಿಹಾರಿಯಾಗಿ ನಮ್ಮ ಭೂತ, ವರ್ತಮಾನ, ಭವಿಷ್ಯತ್ತುಗಳ ನಡುವೆ ಉಯ್ಯಾಲೆ ಜೀಕುತ್ತಲೇ ಇರುತ್ತದೋ ಅಲ್ಲಿಯವರೆಗೆ ಹೊಯ್ದಾಟಗಳಿಂದ ಬಿಡುಗಡೆಯಿಲ್ಲ. ಪ್ರತಿ ಮನುಷ್ಯನೂ ತನ್ನ ನೆನಪಿನ ಕೋಶಗಳೊಳಗೇ ಬಂಧಿ ಕಡೆಯವರೆಗೂ*.

- ಕಾರ್ತಿಕೇಯ

MORE FEATURES

ಕಥೆಯ ಅಂತ್ಯ, ಅಚ್ಚರಿ, ಹೃದಯಸ್ಪರ್ಶಿ ಅಂಶಗಳಿಂದ ಸಮೃದ್ಧವಾಗಿದೆ

16-04-2024 ಬೆಂಗಳೂರು

"ಸಾಹಿತ್ಯಕ, ಭಾಷೆ ಮತ್ತು ಮನೋರಂಜನೆಯ ಪರಿಭಾಷೆಯಿಂದ ನೋಡುವುದಾದರೆ “ಯಾವುದೀ ಹೊಸ ಒಗಟು?" ಕಾದಂಬರಿ ಒ...

ಹೆಣ್ಣಿನ ಬಾಳುವೆಯ ವಿವಿಧ ಮಜಲುಗಳನ್ನು ಪರಿಚಯಿಸುವ ಕೃತಿ ‘ಹೆಣ್ಣಿನ ತಾಳ್ಮೆ’

15-04-2024 ಬೆಂಗಳೂರು

‘ಹೆಂಡತಿಯ ಸಹಜ ಪ್ರೀತಿಯನ್ನು ಅರಿಯದ ಗೀತಾಳ ಗಂಡ ಶಶಿಧರ, ಕೇವಲ ತಾಯಿಯ ಮಾತನ್ನೇ ವೇದವಾಕ್ಯವೆಂದು ನಂಬಿ, ತಾನೇ ಮೆ...

 ‘ಹೆಣವಾಗುತ್ತಿರುವ ಗಣರಾಜ್ಯ’ ಪರಕಾಲ ಪ್ರಭಾಕರ್ ಅವರ ವಿಸ್ತೃತ ಜ್ಞಾನಕ್ಕೆ ಕನ್ನಡಿ ಹಿಡಿಯುತ್ತದೆ

15-04-2024 ಬೆಂಗಳೂರು

ಪ್ರಭಾಕರ್ ಅವರ ರಾಜಕೀಯ ವಿಮರ್ಶೆ, ಟೀಕೆ ಟಿಪ್ಪಣಿಗಳಿಗೆ ಸತ್ಯ ತಥ್ಯಗಳ ಸದೃಢವಾದ ನೆಲೆಗಟ್ಟಿರುತ್ತದೆ. ಆದ್ದರಿಂದಲೇ ಅವರ ...