ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಇಣುಕುವ ಕನ್ನಡ ಹಣತೆಯೇ  ಕ್ಲಬ್‌ ಹೌಸ್‌ ಕಥೆಗಳು : ಜಿ.ಪಿ.ರಾಮಣ್ಣ


ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಇಣುಕುವಾಗ ಕನ್ನಡ ಹಣತೆ ಎನ್ನುವ ಕ್ಲಬ್ ಹೌಸ್' ಎಂಬ ಕೋಣೆ ಪ್ರವೇಶಿಸಿದೆ. ಆ ಕೋಣೆಯಲ್ಲಿ ಕಥಾವಾಚನ ನಡೆಯುತ್ತಿತ್ತು. ನಾರಾಯಣ ಭಾಗ್ಯತ್ ಅಲ್ಲಿ ಕತೆಯೊಂದರ ವಾಚನ ಮಾಡುತ್ತಿದ್ದರು. ವಾಚಕರ ಧ್ವನಿಶಕ್ತಿ, ಪಾಚನ ಶೈಲಿ ನನ್ನ ಮನಸೆಳೆಯಿತು ಎನ್ನುತ್ತಾರೆ ಲೇಖಕ ಜಿ.ಪಿ ರಾಮಣ್ಣ. ಅವರ ಕ್ಲಬ್ ಹೌಸ್ ಕತೆಗಳು ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ...

2020ರ ಪೂರ್ವಾರ್‍ದ ಎಂದು ತೋರುತ್ತದೆ. ಆದು ಕೊರೋನ ತುತ್ತ ತುದಿಯಲ್ಲಿದ್ದ ಕಾಲ. ಮನೆಯಿಂದ ಹೊರಗೆ ಕಾಲಿಟ್ಟರೆ ಏನೋ ಅನ್ನುವ ಭಯ ಅವರಿಸಿದ್ದ ಸಮಯ, ಮನೆಯಲ್ಲಿದ್ದವರು ಮನರಂಜನೆಗೆ ಟೀವಿ, ರೇಡಿಯೋ, ಮೊಬೈಲುಗಳಿಗೆ ಮೊರೆಹೋಗಿದ್ದ ಸಂದರ್ಭ. ವಾಟ್ಸಾಪ್, ಫೇಸ್ ಬುಕ್ ಮುಂತಾದ ಆಪ್‌ಗಳ ಜೊತೆ ಆಗ ಸೇರಿದ್ದೆ: ಈ ಕ್ಲಬ್ ಹೌಸ್' ಎಂಬ ಕೇಳುಮನೆ ಅಥವಾ ಹೇಳುಮನೆ, ಇದರ ಬಗ್ಗೆ ಅಲ್ಲಿ ಇಲ್ಲಿ ಕೇಳಿದ್ದೆ, ಇದರಲ್ಲಿ ಏನಿದೆ ಎಂದು ತಿಳಿಯೋಣವೆಂದುಕೊಂಡು 2021ರಲ್ಲಿ ಕ್ಲಬ್ ಹೌಸ್ ಆಪ್ ಅನ್ನು ನನ್ನ ಮೊಬೈಲ್‌ಗೆ ಇಳಿಸಿಕೊಂಡು ಅದರ ಒಳಹೊಕ್ಕೆ. ನೋಡಿದರೆ, ಅಲ್ಲಿ ಅನೇಕ ಕೋಣೆಗಳು ಒಂದೊಂದು ಕೊಣೆಯಲ್ಲೂ ಒಂದೊಂದು ಕಾರ್ಯಕ್ರಮ, ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕಾರ್ಯಕ್ರಮಗಳು ಕಾಣಸಿಕ್ಕವು, ಈ ಕ್ಲಬ್ ಹೌಸ್‌ನಲ್ಲಿ ನೂರಾರು ಸಭಿಕರು ನೆರೆಯುತ್ತಾರೆ. ಮಾತುಕತೆಯ ಭಾಗವಾಗುತ್ತಾರೆ. ಕ್ಲಬ್ ಹೌಸ್' ಎಂದರೆ ಒಂದು ಸಭಾಂಗಣ ಎಂದು ನಾವು ಕಲ್ಪಿಸಿಕೊಳ್ಳುವುದಾದರೆ ಅಲ್ಲಿ ವೇದಿಕೆ ಇರುತ್ತದೆ. ವೇದಿಕೆಯಲ್ಲಿ ಮಾಡರೇಟರ್ ಇರುತ್ತಾರೆ. ನಂತರ ಮಾತಾಡುವವರ ಸಾಲು ಹಾಗೂ ಕೇಳುಗರ ಸಾಲು ಎಂದು ವಿಭಾಗ ಮಾಡಲಾಗಿರುತ್ತವೆ. ಈಗೀಗ ಪತ್ರಿಕಾ ಮಾಧ್ಯಮಗಳೂ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳು, ಸಂಘಟನೆಗಳು ತಂತಮ್ಮ ಕ್ಲಬ್ ಹೌಸ್ ಹೊಂದಿರುವುದನ್ನು ಮತ್ತು ಅದನ್ನು ನೆಚ್ಚಿ ನಡೆಯುತ್ತಿರುವುದನ್ನು ನೋಡಿದರೆ ಕ್ಲಬ್ ಹೌಸ್‌ ರೀಚ್ ಎಷ್ಟು ಎನ್ನುವುದು ವೇದ್ಯವಾಗುತ್ತದೆ.

ಅದಿರಲಿ, ಹೀಗೆ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಇಣುಕುವಾಗ ಕನ್ನಡ ಹಣತೆ ಎನ್ನುವ ಕ್ಲಬ್ ಹೌಸ್' ಎಂಬ ಕೋಣೆ ಪ್ರವೇಶಿಸಿದೆ. ಆ ಕೋಣೆಲ್ಲಿ ಕಥಾವಾಚನ ನಡೆಯುತ್ತಿತ್ತು. ನಾರಾಯಣ ಭಾಗ್ಯತ್ ಅಲ್ಲಿ ಕತೆಯೊಂದರ ವಾಚನ ಮಾಡುತ್ತಿದ್ದರು. ಅನೇಕ ಕೇಳುಗರು ಅದಾಗಲೇ ಕತೆಗೆ ಕಿವಿಯಾಗಿದ್ದರು. ಒಳಹೊಕ್ಕ ನಾನೂ ಕತೆಗೆ ಕಿವಿಗೊಟ್ಟೆ. ವಾಚಕರ ಧ್ವನಿಶಕ್ತಿ, ಪಾಚನ ಶೈಲಿ ನನ್ನ ಮನಸೆಳೆಯಿತು. ಕಾರ್ಯಕ್ರಮದ ಸ್ವರೂಪ ಇಷ್ಟವಾಗಿ ಅಲ್ಲೇ ನಿಂತೆ, ಕಥಾವಾಚನದ ನಂತರ ನಡೆದ ಸಂವಾದದಲ್ಲಿ ಪಾಲ್ಗೊಂಡ ಅರಳು ಹುರಿದಂತೆ ಆಕರ್ಷಕವಾಗಿ ಮಾತಾಡುವ ಎಸ್.ಎನ್.ದೀಪಕ್, ಭರತ್ ಭೂಷಣ್, ಸಾತ್ವಿಕ್ ಮುಂತಾದ ಸಾಹಿತ್ಯಪ್ರಿಯರು ಈ ಕನ್ನಡ ಹಣತ ಕ್ಲಬ್ ಹೌಸನ್ನು ಹುಟ್ಟುಹಾಕಿದರು ಎಂದು ತಿಳಿಯಿತು. ಮುಂದಿನ ದಿನಗಳಲ್ಲಿ, ಇಲ್ಲಿ ನಿತ್ಯ ನಡೆಯುತ್ತಿದ್ದ ಕಥಾವಾಚನ ಮತ್ತು ಸಂವಾದದಲ್ಲಿ ನಿರಂತರವಾಗಿ ಸಕ್ರಿಯವಾಗಿ ನಾನು ಪಾಲ್ಗೊಳ್ಳುತ್ತಾ ಬಂದೆ. ನಾನೂ ಒಂದಷ್ಟು ಕತೆಗಳನ್ನು ಓದಿದೆ. ಈ ಮೂಲಕ ನಾನು ಓದಿಂದ ಅನೇಕ ಕತೆಗಳನ್ನು ಕೇಳುವಂತಾಯಿತು. ರಾಜ್ಯದಾದ್ಯಂತ ಇರುವ ಅನೇಕ ಸಾಹಿತ್ಯಪ್ರಿಯರು, ವಾಚನಪ್ರಿಯರು ಅಲ್ಲಿ ಪರಿಚಯವಾದರು. ಗೆಳೆಯರಾದರು. ಕನ್ನಡ ಕಾಳಜಿ ನಮ್ಮೆಲ್ಲರನ್ನೂ ಬೆಸೆದಿತ್ತು.

2021ರ ಆಗಸ್ಟ್ ತಿಂಗಳು, ಕನ್ನಡವೆಂದರೆ ಆಂಬರಕ್ಕೇರುವ ಶಿವಮೊಗ್ಗೆಯ ತರುಣ ಮಿತ್ರ ಭರತ್ ಭೂಷಣ್ ಒಮ್ಮೆ ನನ್ನೊಂದಿಗೆ ಮಾತಾನಾಡುತ್ತಿರುವಾಗ, ಕಾರಣಾಂತರಗಳಿಂದ ಕನ್ನಡ ಹಣತೆ ಕ್ಲಬ್ ಹೌಸನ್ನು ಮುಂದುವರೆಸುವುದು ಕಷ್ಟವಾಗುತ್ತಿದೆ ಎನ್ನುವ ವಿಷಯ ಪ್ರಸ್ತಾಪವಾಯಿತು. ಕನ್ನಡ ಸಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಬರುವ ನಿಟ್ಟಿನಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿರುವ ನನ್ನ ಸಾರಥ್ಯದ ಪರಂಪರಾ ಕಲ್ಬರಲ್ ಫೌಂಡೇಶನ್ ಮೂಲಕವೇ ಈ ಕಾರ್ಯಕ್ರಮವನ್ನು ಮುಂದುವರೆಸೋಣ ಸಾರ್ ಎನ್ನುವ ಸಲಹೆಯನ್ನು ನನ್ನ ಮುಂದಿಟ್ಟರು ಭರತ್‌. ತಾಂತ್ರಿಕವಾಗಿ ಕ್ಲಬ್ ಹೌಸನ್ನು ತಾನೇ ನಿರ್ವಹಿಸುವ ಭರವಸೆಯನ್ನೂ ಇತ್ತರು. ನಾನು ಮರುಮಾತಾಡದೆ ಒಪ್ಪಿದೆ. ಹೀಗೆ ಪರಂಪರಾ ಕ್ಲಬ್‌ ಹೌಸ್ ಅಸ್ತಿತ್ವಕ್ಕೆ ಬಂದಿತು. ನಿತ್ಯ ನಡೆಯುತ್ತಿದ್ದ ಕಥಾವಾಚನದ ನಿರಂತರತೆಗೆ ಭಂಗವಾದಂತೆ ಕಾರ್ಯಕ್ರಮ ಮುಂದುವರೆಯಿತು. ಈ ಸಾಹಿತ್ಯ ಪರಿಚಾರಿಕೆಯ ಕೆಲಸಕ್ಕೀಗ ವರ್ಷ ತುಂಬಿಯೇ ಬಿಟ್ಟಿತು. ನಿತ್ಯ ನಡೆಯುವ ಕಾರ್ಯಕ್ರಮದಲ್ಲಿ ವ್ಯಕ್ತಿಗತವಾಗಿ ಪರಸ್ಪರ ಮುಖಾಮುಖಿಯಾಗದ ಪರಂಪರಾ ಬಳಗದ ಸದಸ್ಯರು ಒಂದೆಡೆ ಸೇರಿ ಮುಖಾಮುಖಿಯಾಗುವಲ್ಲಿಗೆ ನಮ್ಮ ಕಥಾಯಾನ ಬಂದು ನಿಂತಿದೆ. ಈ ಹರ್ಷವನ್ನು ಸಂಭ್ರಮಿಸಲು ರಾಮನಗರದ ಮುದ್ದುಶಿ ದಿಬ್ಬದಲ್ಲಿ ನಾವೆಲ್ಲ ಸೇರುತ್ತಿದ್ದೇವೆ.

ಕಳೆದ ಒಂದು ವರ್ಷದಲ್ಲಿ ಕಥಾಪರಂಪರೆಯಲ್ಲಿ ಒಳ್ಳೆಯ ಫಸಲು ಬಂದಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿರುವ, ಹೊರದೇಶದಲ್ಲಿ ನೆಲೆಸಿರುವ ಅನೇಕ ಹೊಸ ಕತೆಗಾರರು, ಲೇಖಕರು, ಕಥಾವಾಚಕರು ನಮಗೆ ಕಾಣಸಿಕ್ಕಿದ್ದಾರೆ. ಇವರೆಲ್ಲರೂ ಪರಂಪರಾ ಕ್ಲಬ್ ಹೌಸ್‌ನ ಸದಸ್ಯರೇ ಆಗಿದ್ದಾರೆ ಎನ್ನುವುದು ನಮ್ಮ ಹೆಮ್ಮೆ ಸ್ನೇಹ-ಸಮ್ಮಿಲನದ ಸಂದರ್ಭದಲ್ಲಿ ನಮ್ಮ ಲೇಖಕರೇ ಬರೆದ, ಕಥಾಪರಂಪರೆಯಲ್ಲಿ ಓದಲಾದ ಕತೆಗಳ ಕಥಾ ಸಂಕಲನವೊಂದನ್ನು ಹೊರತರಬಾರದೇಕೆ ಎನ್ನುವ ಯೋಚನೆ, ಯೋಜನೆಯ ರೂಪ ತಾಳಿತು. ಆಗೀಗ ಸಾಕಾರಗೊಂಡಿದೆ. ಕನ್ನಡ ಕಾಳಜಿಯ ಭರತ್ ಭೂಜಿಕ್, ಹಿಂದ ಮಿತ್ತರೂ, ಕಥೆಗಾರರೂ ಆದ ಕೆ.ಎನ್.ಭಗವಾನ್, ಕವಯಿತ್ರಿ, ಕತೆಗಾರ್ತಿ ಭವಾನಿ ಲೋಕೇಶ್ ಮತ್ತು ಲೇಖಕ ಹಾಗೂ ಪ್ರಕಾಶಕ ಮಿತ್ರ ಎಂ.ಬೈರೇಗೌಡ ಅವರುಗಳು ಯೋಜನೆಯನ್ನು ಸಾಕಾರಗೊಳಿಸುವಲ್ಲಿ ನನಗೆ ತುಂಬು ಹೃದಯದಿಂದ ಸಹಕಾರವನ್ನಿತ್ತಿದ್ದಾರೆ .ಇವರ ನೆರವಿನಿಂದ ಅತ್ಯಲ್ಪ ಸಮಯದಲ್ಲಿ ನಮ್ಮ ಲೇಖಕ ಮಿತ್ರರ ಕತೆಗಳು 'ಕ್ಲಬ್‌ ಹೌಸ್ ಕತೆಗಳು’ ರೂಪದಲ್ಲಿ ಮೂಡಿಬಂದಿವೆ.

- ಜಿ.ಪಿ ರಾಮಣ್ಣ

ಜಿ.ಪಿ ರಾಮಣ್ಣ ಅವರ ಲೇಖಕ ಪರಿಚಯ

MORE FEATURES

ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕು: ಮಮತಾ ಜಿ. ಸಾಗರ್

16-04-2024 ಬೆಂಗಳೂರು

‘ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕೆ ಹೊರತು, ವೈವಿಧ್ಯತೆಯನ್ನ ಅಳಿಸಿ ಏಕತೆಯನ್ನ ಕಟ್ಟಲಾಗಲ್ಲ’ ಎನ್ನುತ್ತ...

ಎಲ್ಲ ಕಾಲಕ್ಕೂ ಸಲ್ಲುವ ಮಕ್ಕಳ ಕವನ ಸಂಕಲನ ‘ಏನು ಚಂದವೋ…’‌

15-04-2024 ಬೆಂಗಳೂರು

"ಮಕ್ಕಳಿಗಾಗಿ ಈಗಾಗಲೇ ಮೂರು ಕವನ ಸಂಕಲನಗಳನ್ನು ಹೊರತಂದಿರುವ ಎಸ್. ಎಸ್. ಸಾತಿಹಾಳ ಅವರು ಈಗ ‘ಏನು ಚಂದವೋ&h...

ಕಥೆಯ ಅಂತ್ಯ, ಅಚ್ಚರಿ, ಹೃದಯಸ್ಪರ್ಶಿ ಅಂಶಗಳಿಂದ ಸಮೃದ್ಧವಾಗಿದೆ

16-04-2024 ಬೆಂಗಳೂರು

"ಸಾಹಿತ್ಯಕ, ಭಾಷೆ ಮತ್ತು ಮನೋರಂಜನೆಯ ಪರಿಭಾಷೆಯಿಂದ ನೋಡುವುದಾದರೆ “ಯಾವುದೀ ಹೊಸ ಒಗಟು?" ಕಾದಂಬರಿ ಒ...