ಒಂದು ಸಂಜೆಗಣ್ಣಿನ ಹಿನ್ನೋಟ...!

Date: 09-12-2020

Location: .


ಬಾಲ್ಯದಿಂದಲೇ ಸಂಗೀತವನ್ನೇ ಉಸಿರಾಡಿದ ಮೈಸೂರು ವಾಸುದೇವಾಚಾರ್ಯರು ಕಾಲದ ಚಲನೆಯಲ್ಲಿ ಬದಲಾದ ಸಂಗೀತ, ಸಂಗೀತಾಭ್ಯಾಸಿಗಳ ಮನಸ್ಥಿತಿ, ಕೇಳುಗ ಪ್ರೇಕ್ಷಕರ ಆಸಕ್ತಿ ಇಂತಹ ಹತ್ತು ಹಲವು ಸೂಕ್ಷ್ಮತೆಗಳನ್ನು ತಮ್ಮ ಆತ್ಮಕಥೆ ಎಂದೇ ಖ್ಯಾತಿವೆತ್ತ ಶಾಸ್ತ್ರೀಯ ಗ್ರಂಥ ‘ನೆನಪುಗಳುಕೃತಿಯನ್ನು ಅವಸರದ ಇಂದಿನ ಸಾಹಿತ್ಯ ಲೋಕ ಮರೆತಿದೆ. ಸರಳತೆಯೇ ಮೈವೆತ್ತಿದಂತಿದ್ದ ಭಾಷೆ, ಅದರ ನಿರಾಡಂಬರ ಸೌಂದರ್ಯ, ಆಕರ್ಷಕ ನಿರೂಪಣಾ ಶೈಲಿ, ಅವರ ವಿದ್ವತ್ತಿನ ಹಾಗೂ ನಯ-ವಿನಯದ ಪ್ರತೀಕವಾಗಿದೆ ಈ ‘ನೆನಪುಗಳು’. ಬದುಕು, ಬದ್ಧತೆ ಹೀಗೆ ಎಲ್ಲದರಲ್ಲೂ ಶಿಸ್ತು ಕಾಯ್ದುಕೊಂಡಿದ್ದ ಅವರ ವ್ಯಕ್ತಿತ್ವವನ್ನು ಲೇಖಕರಾದ ಶೈಲಜ ಹಾಗೂ ವೇಣುಗೋಪಾಲ್ ಅವರು ತಮ್ಮ ‘ಸ್ವರಲಿಪಿ’ ಅಂಕಣದಲ್ಲಿ ಸೊಗಸಾಗಿ ಚಿತ್ರಿಸಿದ ಬರಹ ಇಲ್ಲಿದೆ;

ಮೈಸೂರು ವಾಸುದೇವಾಚಾರ್ಯರು (1865-1961) ಕರ್ನಾಟಕ ಸಂಗೀತ ಕಂಡ ಒಬ್ಬ ಮಹಾನ್ ಕಲಾವಿದ ಹಾಗೂ ವಾಗ್ಗೇಯಕಾರ. ಅಷ್ಟೇ ಹೇಳಿ ನಿಲ್ಲಿಸಿ ಬಿಟ್ಟರೆ ವಾಸುದೇವಾಚಾರ್ಯರಿಗೆ ಅನ್ಯಾಯ ಮಾಡಿದಂತಾಗುತ್ತದೆ. ವಾಸುದೇವಾಚಾರ್ಯರು ಒಬ್ಬ ಅಪರೂಪದ ಬಹುಮುಖ ಪ್ರತಿಭೆ. ಸಂಗೀತದಲ್ಲಿ ಅವರ ಪ್ರತಿಭೆ ಎಲ್ಲರಿಗೂ ತಿಳಿದಿರುವಂತಹುದೇ. ಸಂಗೀತ ತಿಳಿಯದವರೂ ಅವರ ಕಮಾಚ್ ರಾಗದ ಬ್ರೋಚೇವಾರೆವರುರಾ ಕೃತಿಯನ್ನು ಒಮ್ಮೆಯಾದರೂ ಕೇಳಿರಬಹುದು ಅಥವಾ ಗುನುಗಿರಬಹುದು. ಸಾಮಾನ್ಯವಾಗಿ ಹೆಚ್ಚಿನ ಮಹಾನ್ ಸಂಗೀತಗಾರರು ಲಿಯೋ ಟಾಲ್‌ಸ್ಟಾಯ್ ಹೇಳುವಂತೆ `ಸಂಗೀತ ಬಿಟ್ಟು ಉಳಿದಂತೆ ಮಹಾನ್ ಮೂರ್ಖರು ಅಥವಾ ಮುಗ್ಧರು'. ಅವರಿಗೆ ತಮ್ಮ ಕಲೆ ಬಿಟ್ಟು ಉಳಿದಂತೆ ಯಾವುದರ ಜ್ಞಾನವೂ ಇರುವುದಿಲ್ಲ ಜೊತೆಗೆ ಆಸಕ್ತಿಯೂ ಇರುವುದಿಲ್ಲ. ಆದರೆ ವಾಸುದೇವಾಚಾರ್ಯರು ಆ ಮಾತಿಗೊಂದು ಬಹುದೊಡ್ಡ ಅಪವಾದ. ಸಾಹಿತ್ಯ ಸಂಸ್ಕೃತ, ನೃತ್ಯ, ನಾಟಕ, ತನ್ನ ಸುತ್ತಮುತ್ತಲಿನ ದಿನನಿತ್ಯದ ಆಗುಹೋಗುಗಳು ಇವೆಲ್ಲಕ್ಕೂ ಅತ್ಯಂತ ಸೂಕ್ಷ್ಮವಾಗಿ ಸಂವೇದನಾಶೀಲರಾಗಿ ಪ್ರತಿಕ್ರಿಯಿಸಿದವರು. ತಾನು ಬದುಕಿದ್ದ ಕಾಲಘಟ್ಟ, ಅವುಗಳಲ್ಲಿ ಆಗುತ್ತಿದ್ದ ಕ್ಷಿಪ್ರ ಬದಲಾವಣೆಗಳನ್ನು ಸಂವೇದನಾಶೀಲವಾಗಿ, ಸ್ಥಿತಪ್ರಜ್ಞತೆಯಿಂದ, ದೂಷಣೆಯ ಮನೋಭಾವವಿಲ್ಲದೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದವರು. ಅವರನ್ನು ಒಬ್ಬ ಶ್ರೀಸಾಮಾನ್ಯ ಇತಿಹಾಸಕಾರ ಎನ್ನಬಹುದು. ಏಕೆಂದರೆ ತನ್ನ ಕಾಲದ ಹೆಚ್ಚಿನ ಆಗುಹೋಗುಗಳನ್ನು ಇದು ಮುಖ್ಯ, ಅದು ಅಮುಖ್ಯ ಎಂದು ಜರಡಿಯಾಡದೆ ದಾಖಲಿಸಿದ್ದಾರೆ: ತಮ್ಮ ನಾ ಕಂಡ ಕಲಾವಿದರು ಮತ್ತು ನೆನಪುಗಳು ಕೃತಿಗಳಲ್ಲಿ. ಅವರ ನವುರಾದ, ಸದಭಿರುಚಿಯ ಹಾಸ್ಯ ಪ್ರಜ್ಞೆಯಿಂದ ಕೂಡಿ, ಸೂಕ್ಷ್ಮ ಒಳನೋಟಗಳುಳ್ಳ ಅವರ ಬರಹಗಳು ಶುದ್ಧಕನ್ನಡ ಗದ್ಯಕ್ಕೆ ಒಂದು ಸೊಗಸಾದ ಉದಾಹರಣೆ. ಸುಮಾರು 96 ವರ್ಷಗಳು ಆರೋಗ್ಯವಾಗಿ, ಸ್ಪಷ್ಟವಾದ ನೆನಪುಗಳೊಂದಿಗೆ ಜೀವಿಸಿದ್ದ ವಾಸುದೇವಾಚಾರ್ಯರು, ತಮ್ಮ ಬರಹಗಳಲ್ಲಿ ಮೈಸೂರು ಸಂಸ್ಥಾನದ ಒಂದು ಶತಮಾನದ ಸ್ಥಿತ್ಯಂತರಗಳೆಲ್ಲವನ್ನೂ ಮಾತುಮಾತಿನ ನಡುವೆಯೇ ದಾಖಲಿಸಿದ್ದಾರೆ.

`ನೆನಪುಗಳು' ಕೃತಿಗೆ ಅವರು ಬರೆಯುವ ಮುನ್ನುಡಿ ಅವರ ಮನಃಸ್ಥಿತಿ ಮತ್ತು ಧೋರಣೆಯನ್ನು ಸೊಗಸಾಗಿ ತೆರೆದಿಡುತ್ತದೆ. ಐವತ್ತರ ಗಡಿ ದಾಟಿದ ಇಬ್ಬರು ಒಂದೆಡೆ ಸೇರಿದಾಗ ಸಾಮಾನ್ಯವಾಗಿ ಒಂದೆರೆಡು ಸಲವಾದರು ನಮ್ಮ ಅಂದಿನ ದಿನಗಳ ಕಾಲ ಎಷ್ಟು ಚೆನ್ನಾಗಿತ್ತು! ಒಂದು ಚಿಂತೆಯೇ, ಚಿತಾವಣಿಯೇ? ಒಂದು ಅಬ್ಬರವಿಲ್ಲ, ಒಂದು ಉಬ್ಬರವಿಲ್ಲ. ಎಲ್ಲವೂ ನೆಮ್ಮದಿಯಾಗಿತ್ತು. ಗಡಿಬಿಡಿ ಪರದಾಟ ಎನ್ನುವುದೇ ಇರಲಿಲ್ಲ. ಈಗಲೋ ಅದೇನು ಕಾಲ ಬಂತೋ ಕಾಣೆ! ಎಲ್ಲಾ ಉರಿದೇಳುತ್ತದೆ, ಒಂದರಲ್ಲೂ ವ್ಯವಧಾನವಿಲ್ಲ. ಆ ಕಾಲ ಎಲ್ಲಿ? ಈ ಕಾಲ ಎಲ್ಲಿ? ಎಂದು ಉದ್ಗಾರ ತೆಗೆಯದೆ ಮಾತು ಮುಗಿಯುವುದಿಲ್ಲ. ನಾನೂ ಹಿಂದಿನ ತಲೆಮಾರಿಗೆ ಸೇರಿದವನೇ. ಆದರೂ ಕಾಲಾಯ ತಸ್ಮೈನಮಃ ಎಂದು ತೆಪ್ಪಗಿರುವ ಮನೋವೃತ್ತಿ ನನ್ನದಲ್ಲವಾದ್ದರಿಂದ ಕಾಲ ಚೆನ್ನಾಗಿತ್ತು ಅಥವಾ ಚೆನ್ನಾಗಿಲ್ಲ ಎಂದು ಹೇಳುವುದು ಸಾಧುವೇ? ಸಮಂಜಸವೇ? ಎಂದು ನನ್ನನ್ನು ನಾನೇ ಕೇಳಿಕೊಂಡಿದ್ದೇನೆ. ಕಾಲ ಚೆನ್ನಾಗಿರುವುದಕ್ಕೆ, ಚೆನ್ನಾಗಿಲ್ಲದಿರುವುದಕ್ಕೆ ಹೊಣೆಗಾರರು ಯಾರು? ನಾವೇ ಅಲ್ಲವೇ? ಕಾಲ ಉರುಳುತ್ತಲೇ ಇದೆ, ಅದು ನಿಯತಿ ನಿಯಮ. ಅದಕ್ಕೊಂದು ರೂಪು ಕೊಡುವವರು ನಾವು ಆ ಕಾಲದಲ್ಲಿ ಒಂದಾಗಿ ಜೀವಿಸುವವರು. ಜನರ ನೀತಿ ನಡವಳಿಕೆ, ಆಚಾರ ವ್ಯವಹಾರ, ಇವುಗಳನ್ನು ಅನುಸರಿಸಿ ಕಾಲಚಕ್ರಕ್ಕೆ ಒಂದು ಆಕೃತಿ ಬರುತ್ತದೆ ಎಂದು ನನ್ನ ನಂಬಿಕೆ. ಹಿಂದಿನವರಿಗೆ ಹಿಂದಿನದು ಒಗ್ಗಿತ್ತು. ಆದ್ದರಿಂದ ಇಂದಿನ ಮಾರ್ಪಾಡು ಅವರಿಗೆ ಹಿತವೆನಿಸಲಿಕ್ಕಿಲ್ಲ. ಅಂತೆಯೇ ಹಿಂದಿನದನ್ನು ನೆನೆದು ಇಂದಿನದನ್ನು ಅಲ್ಲಗೆಳೆಯುತ್ತಾರೆ ಅವರು. ಅದರಂತೆ ಇಂದಿನವರು ಹಿಂದಿನ ಆ ದಿನಗಳಲ್ಲಿದ್ದಂತೆ ಭಾವಿಸಿಕೊಂಡರೆ, ಅವರ ಪ್ರತಿಕ್ರಿಯೆಗಳು ಬೇರೆಯಾಗಿರಬಹುದಲ್ಲವೆ? ಅಂದಿನ ಕಾಲ ಚೆನ್ನಾಗಿದ್ದಿದ್ದರೆ, ಹಾಗೆ ಮಾಡಿದ ಜನರ ಜೀವನ ಧಾಟಿ ಹೇಗಿತ್ತು? ಇಂದು, ಅಂದಿನ ಕಾಲ ಇಲ್ಲ, ನಿಜ. ಆದ ಮಾರ್ಪಾಡುಗಳೇನು? ಜನಜೀವನದಲ್ಲಿ ಕಂಡು ಬರುವ ವ್ಯತ್ಯಾಸಗಳು ಯಾವುವು?

ಇಂದು ನಾಗರಿಕ ಜೀವನ ಮೊದಲಾಗಿದೆ. ಜನರಲ್ಲಿ ತಿಳಿವಳಿಕೆ ಹೆಚ್ಚಿದೆ. ಹತ್ತು ಸುತ್ತಿನಿಂದ ಜೀವನವನ್ನು ಅಳೆಯುವ ಚಪಲ ಹೆಚ್ಚಿದೆ. ಇಂದು ನಾಲ್ಕು ಐದು ವರ್ಷದ ಮಗುವಿಗೆ ಇರುವ ವ್ಯವಹಾರ ಚಾತುರ್‍ಯ ಬಹುಶಃ ಅಂದಿನ ವಯೋವೃದ್ಧರಿಗೂ ಇತ್ತೋ ಇಲ್ಲವೋ ಹೇಳಲಾರೆ. ಇಂದಿನವರ ಜ್ಞಾನ ವಿಸ್ತಾರವಾದದ್ದು, ವಿವಿಧ ಮುಖವುಳ್ಳದ್ದು ಅಂದಿನವರದು ಹೀಗಿರಲಿಲ್ಲವೇನೋ! ಅವರ ಜ್ಞಾನ ಆಳವಾದದ್ದು, ನಿಖರವಾದದ್ದು, ಪ್ರಾಯೋಗಿಕವಾಗಿ ಏಕಮುಖವುಳ್ಳದ್ದು. ಇಂದಿನ ಗಡಿಬಿಡಿ ಆತುರ ಯಾವುದರಲ್ಲೂ ಅಂದು ಇರಲಿಲ್ಲ. ಆಗ ಎಲ್ಲದರಲ್ಲಿಯೂ ಒಂದು ಬಗೆಯ ನಿಧಾನ,

ಸಾವಧಾನ. ಜನಜೀವನವೂ ಅಷ್ಟೆ. ಇಂದು ಹೊಟ್ಟೆ ಬಟ್ಟೆಗೆ ಜನರು ಪಡುವ ಪಾಡು ಅಂದು ಇರಲಿಲ್ಲ. ಊಟ ಉಪಚಾರಕ್ಕೆ ಇಂದಿನ ಆತಂಕ ಅವರನ್ನು ಕಾಡುತ್ತಿರಲಿಲ್ಲ. ಆದ್ದರಿಂದ ಸಹಜವಾಗಿಯೇ ಜನರ ಗಮನ ಸಂಗೀತ, ಸಾಹಿತ್ಯ, ನಾಟಕ, ಹಾಸ್ಯ ವಿನೋದ ಆಟ-ನೋಟಗಳಲ್ಲಿ ಸಂಪೂರ್ಣವಾಗಿ ಬೆರೆಯಲು ಅವಕಾಶ ಬಹಳವಾಗಿತ್ತು. ಅಂದರೆ ಇಂದಿನ ಪ್ರಗತಿಪರ ಜೀವನ ಯಾತ್ರೆಯಲ್ಲಿ ಈ ವಿಧದ ಕಲಾಸಕ್ತಿಗೆ ಅವಕಾಶವಿಲ್ಲ ಎಂದಲ್ಲ ನನ್ನ ಅರ್ಥ. ಆಗಿನಷ್ಟು ನಿಶ್ಚಿಂತತೆ ಈಗಿಲ್ಲ. ಇಲ್ಲಿಯೂ ಅವರಿಗೆ ಆತುರ ಗಡಿಬಿಡಿ ತಪ್ಪಿಲ್ಲ ಎಂಬುದನ್ನು ತಿಳಿಸಲಿಕ್ಕೆ ಮಾತ್ರ. ಇಂದಿನ ನಾಗಾಲೋಟದ ಯಂತ್ರಯುಗದ ಜೀವನ ಯಾತ್ರೆಯಲ್ಲಿ ಅಂದಿನ ಆ ರಸನಿಮಿಷಗಳು ಬೆರೆಯಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ನನ್ನಲ್ಲಿ ಹಲವಾರು ಸಲ ಮೂಡಿದೆ. ಪ್ರಶ್ನೆ ದೊಡ್ಡದು. ಅದಕ್ಕೆ ಉತ್ತರ ಕೊಡುವ ಸಾಹಸಕ್ಕೆ ನಾನು ಕೈ ಹಾಕಿಲ್ಲ. ಇಂದಿನ ಪ್ರಗತಿಪರ ಜೀವನ ಪರಂಪರೆಗೆ ಅಂದಿನ ಆ ರಸದೃಷ್ಟಿ ಬೆರೆತರೆ, ನಮ್ಮ ಬಾಳು ಇನ್ನೂ ಪುಷ್ಟಿಯುತವಾಗಬಹುದೆಂದೂ ನಂಬಿದ್ದೇನೆ.

ನಾನು ಅರಮನೆಗೆ ಪ್ರವೇಶ ಮಾಡಿದ ಸನ್ನಿವೇಶ, ಅಲ್ಲಿ ಕಂಡುಂಡ ರಸದೌತಣಗಳು, ನೋಡಿ ತಣಿದ ವೈಭವದ ವಿಶೇಷಗಳು, ಜನಜೀವನದ ಕೆಲವು ಚಿತ್ರಗಳು, ನಾನು ಕಂಡ ಕನ್ನಡ ರಂಗಭೂಮಿ, ಕೆಲವು ರಸಿಕ ಬಾಂಧವರು ಇವು ಈ ಪುಟ್ಟ ಪುಸ್ತಕದ ವಿಶೇಷ ಎನ್ನುತ್ತಾರೆ. ಇವೆಲ್ಲವೂ ಅವರ ಸಂಗೀತದ ಹುಡುಕಾಟದ ಭಾಗವಾಗಿಯೇ ಅವರ ಬದುಕಿನಲ್ಲಿ ಅದರ ನೆನಪುಗಳಲ್ಲಿ ದಾಖಲಾಗುತ್ತದೆ.

ಮೂರರ ಹರೆಯಕ್ಕೇ ತಂದೆಯನ್ನು ಕಳೆದುಕೊಂಡು ಕಡುಬಡತನದಲ್ಲಿ ಬೆಳೆಯುವ ವಾಸುದೇವಾಚಾರ್ಯರು ಬಡತನದಿಂದೊದಗುವ ಅಪಮಾನಗಳಿಂದ ಸ್ವಾಭಿಮಾನವನ್ನೂ, ಬದುಕುವ ಕೆಚ್ಚನ್ನೂ ಛಲವನ್ನೂ ಕಲಿತರು. ಆರಂಭದಿಂದಲೂ ವಾಸುದೇವಾಚಾರ್ಯರ ಮನಸ್ಸೆಲ್ಲವೂ ಒಲಿದದ್ದು ಸಂಗೀತಕ್ಕೆ. ಅವರಿಗೆ ಉಳಿದೆಲ್ಲದರ ಹುಡುಕಾಟ, ಒಡನಾಟ, ಗಮನಿಸುವಿಕೆಗೆ ಸಂಗೀತವೇ ಮಾಧ್ಯಮವಾಗಿತ್ತು. ಸಂಸ್ಕೃತ ವಿದ್ಯಾಭ್ಯಾಸ ಕಾಲದಲ್ಲಿ ನನ್ನ ಜೀವನ ಒಟ್ಟಿನಲ್ಲಿ ಅಚ್ಚಿಗೆ ಹೊಂದಿಕೊಂಡಂತೆ ನಡೆಯುತ್ತಿದ್ದಾದರೂ ನನ್ನ ಮನಸ್ಸೆಲ್ಲವೂ ಸಂಗೀತದ ಕಡೆಗೆ ವಾಲಿತ್ತು. ಸಂಸ್ಕೃತ ವಿದ್ಯಾಭ್ಯಾಸ ಬಿಟ್ಟು ಬೇರೆ ಯಾವುದರ ಕಡೆಗೆ ಒಲವು ತೋರಿದರೂ ಅದನ್ನು ತೀವ್ರವಾಗಿ ಪ್ರತಿಭಟಿಸುತ್ತಿದ್ದರು ನನ್ನ ತಾತ. ಅದರಲ್ಲೂ ಸಂಗೀತವೆಂದರೆ ಅವರಿಗೆ ಸೇರದು. ಸಂಗೀತಗಾರರಿಗೆ ನೀತಿಯಿಲ್ಲ, ನಿಯಮವಿಲ್ಲ, ಆಚಾರವಿಲ್ಲ, ಅಧ್ಯಯನವಿಲ್ಲ. ಆದ್ದರಿಂದ ಸದ್ಭ್ರಾಹ್ಮಣ ವಂಶದಲ್ಲಿ ಹುಟ್ಟಿದವರಿಗೆ ಸಂಗೀತಾಭ್ಯಾಸ ಖಂಡಿತಾ ಸಲ್ಲದು ಎಂಬುದು ಅವರ ನಿಶ್ಚಿತಾಭಿಪ್ರಾಯವಾಗಿತ್ತು. ನಾನು ಕಲಿಯಬೇಕಾಗಿದ್ದ ಸಂಸ್ಕೃತ ಶ್ಲೋಕಗಳನ್ನು ರಾಗರಾಗವಾಗಿ ಹೇಳುತ್ತ, ಪಾಠ ಮಾಡುವುದರಲ್ಲಿ ಸಂಗೀತದ ಕಡೆಗಿದ್ದ ನನ್ನ ಒಲವು ಮೊದಲು ಒಡಮೂಡಿತು. ಸಂಗೀತದಲ್ಲಿದ್ದ ನನ್ನ ಒಲವನ್ನು ಮೊದಲು ಗುರುತಿಸಿದವರೆಂದರೆ ನನ್ನ ಸೋದರಮಾವ ಪದ್ಮನಾಭಾಚಾರ್ಯರು. ಅವರೇ ನನಗೆ ಮೊದಲನೆಯ ಸಂಗೀತಗುರುಗಳನ್ನು ಗೊತ್ತು ಮಾಡಿಕೊಟ್ಟವರು. ನನ್ನನ್ನು ಸುಬ್ಬರಾಯರ ಮನೆಗೆ ಕರೆದುಕೊಂಡು ಹೋಗಿ ಸೇರಿಸಿದರು. . . . ನಾಲ್ಕುದಿನಗಳು ಕಳೆದ ಮೇಲೆ ಗುರುಗಳಿಗೆ ನನಗೆ ಸಂಗೀತವನ್ನು ಶಾಸ್ತ್ರೋಕ್ತವಾಗಿಯೇ ಕಲಿಯಬೇಕೆಂಬ ಆಸೆ. ದಯವಿಟ್ಟು ಕ್ರಮವಾಗಿ ಪಾಠ ಮಾಡಿಸಬೇಕು ಎಂದು ಕೇಳಿಕೊಂಡೆ. ಕೆಲವೇ ದಿನಗಳಲ್ಲಿ ವಿಷಯ ತಿಳಿದ ತಾತ ಸುಬ್ಬರಾಯರ ಮನೆಗೆ ಸಂಗೀತಕ್ಕಾಗಿ, ಕಚೇರಿಗಳನ್ನು ಕೇಳುವುದಕ್ಕಾಗಲಿ ಹೋಗಬಾರದು ಎಂದು ನನಗೆ ಕಟ್ಟಪ್ಪಣೆ ಮಾಡಿದರು. ಆದರೆ ನಾನು ಅಜ್ಜನ ಕಣ್ಣು ತಪ್ಪಿಸಿ ಪಾಠಕ್ಕೆ ಹೋಗುತ್ತಲೇ ಇದ್ದೆ. ಎಷ್ಟು ದಿನ ಈ ಕಳ್ಳ ವ್ಯವಹಾರ ನಡೆಸಲು ಸಾಧ್ಯ. ಒಂದು ದಿನ ಬಯಲಾಯಿತು. ಚೆನ್ನಾಗಿ ಹೊಡೆದು ಕಾವಲನ್ನು ಬಲಪಡಿಸಿದರು. ಸಂಸ್ಕೃತ ಶ್ಲೋಕಗಳನ್ನೂ ಕೂಡ ರಾಗವಾಗಿ ಓದಕೂಡದೆಂಬ ನಿಯಮವೇರ್ಪಟ್ಟಿತ್ತು. . . . ನನ್ನ ಆಸೆಯ ಕುಡಿ ಮತ್ತೆ ಚಿಗುರುವ ಸುಸಂದರ್ಭವೊಂದನ್ನು ದೈವ ತಂದೊಡ್ಡಿತು. ಪ್ರತಿಯೊಬ್ಬ ವಿದ್ಯಾರ್ಥಿಯೂ ಎರಡೆರಡು ಶಾಸ್ತ್ರಗಳನ್ನು ಕಲಿಯಬೇಕೆಂದೂ, ಅದಕ್ಕೆ ಸಣ್ಣ ಮಗುವೊಂದರ ಕೈಲಿ ಚೀಟಿ ಎತ್ತಿಸುವುದೆಂದೂ ವ್ಯವಸ್ಥೆಯಾಯಿತು. ನನ್ನ ಹೆಸರಿನಲ್ಲಿ ಚೀಟಿ ಎತ್ತಿದಾಗ ಸಂಗೀತ ಮತ್ತು ಸಾಹಿತ್ಯ ಎಂದು ಬಂದಿತು. ಯಾರ ಆಕ್ಷೇಪಣೆಯೂ ಇಲ್ಲದೆ ಯಾರ ಹೆದರಿಕೆಯೂ ಇಲ್ಲದೆ, ಯಾವ ಮುಚ್ಚು ಮರೆಯಿಲ್ಲದೆ ನನ್ನ ಬಾಲ ಬಯಕೆಯನ್ನು ಪೂರೈಸಿಕೊಳ್ಳುವ ಸದವಕಾಶ ತಾನಾಗಿಯೇ ಪ್ರಾಪ್ತವಾಯಿತು. ಪಾಠಶಾಲೆಯಲ್ಲಿ ಸಂಗೀತಾಧ್ಯಾಪಕರಾದ ವೀಣೆ ಪದ್ಮನಭಯ್ಯನವರು ಸಂಗೀತದಲ್ಲಿ ನನಗೆ ಎರಡನೆಯ ಗುರುಗಳಾದರು. ಒಮ್ಮೆ ಪಾಠ ಶಾಲೆಯಲ್ಲಿ ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ಅವರ ಕಚೇರಿಯನ್ನು ಕೇಳುವ ಸುಯೋಗ ಪ್ರಾಪ್ತವಾಯಿತು. ಗಾಂಭೀರ್ಯದ ಖಣಿಯಂತಿದ್ದ ಗಾಯನವಂತೂ ನನ್ನ ಮನಸ್ಸನ್ನು ಸಂಪೂರ್ಣವಾಗಿ ಸೂರೆಗೊಂಡಿತು. ಎಂತಹ ಅದ್ಭುತ!

ಹಾಡುಗಾರಿಕೆ, ಕಲಿತರೆ ಇಂತಹ ಸಂಗೀತವನ್ನು ಕಲಿಯಬೇಕು ಎಂಬ ಆಸೆ ಬೇರೂರಿತು ನನ್ನಲ್ಲಿ. ಇಂತಹ ಹೊತ್ತಿನಲ್ಲಿ ಕಾಡಿದ್ದು ಹಲವು ಪ್ರಶ್ನೆಗಳು. ಆದರೆ ಅವರ ಸಂಕಲ್ಪ ಸಡಿಲವಾಗಲಿಲ್ಲ. ಪ್ರತಿ ಮಂಗಳವಾರ, ಶುಕ್ರವಾರ ಮಹಾರಾಜರು ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದ ಮಹಾರಾಜರ ದಾರಿ ಕಾದು, ಕೊನೆಗೊಂದು ದಿನ ಅವರ ಗಮನ ಸೆಳೆದು, ತಮ್ಮ ಆಸೆಯನ್ನು ಅರಿಕೆ ಮಾಡಿಕೊಳ್ಳುತ್ತಾರೆ. ಮಹಾರಾಜರು ನೋಡೋಣ ಅರಮನೆಗೆ ಬಂದು ಹೋಗಿ, ಮಕ್ಕಳಿಗೆ ಸ್ವಲ್ಪ ಸಂಸ್ಕೃತ ಪಾಠ ಹೇಳಿ ಎನ್ನುತ್ತಾರೆ. ಅರಿಕೆ ಮಾಡಿಕೊಂಡು, ತುದಿಗಾಲ ದಿಗಿಲಲ್ಲಿ ಕಾಯುತ್ತಿದ್ದ ಇವರ ಆಸೆಯನ್ನು ರಾಜರು ಒಂದು ವರ್ಷ ಇವರನ್ನು ಕಾಯಿಸಿ ನಂತರ ಪೂರೈಸುತ್ತಾರೆ. ಅಲ್ಲಿಂದ ಮರಳಿ ಬಂದ ಮೇಲೆ ಸಂಗೀತದಿಂದಾಗಿಯೇ ಅವರಿಗೆ ಅರಮನೆಯ ಒಡನಾಟ ದೊರೆತು ಎಲ್ಲವನ್ನೂ ಗಮನಿಸಲು ಸಾಧ್ಯವಾಗುತ್ತದೆ.

ಆಚಾರ್ಯರು ಮೈಸೂರು ಅರಸರ ಕಲಾಪ್ರೀತಿಯನ್ನು ಚಿತ್ರಿಸುತ್ತಾರೆ. ಹಾಗೆಯೇ ಹಲವರು ಅದನ್ನು ದುರುಪಯೋಗಪಡಿಸಿಕೊಂಡದ್ದನ್ನೂ ಹೇಳುತ್ತಾರೆ. ಅಂದಿನ ಮೈಸೂರಿನ ಆಳರಸರ ರಸಾಭಿಜ್ಞತೆಯೇ ಮೈಸೂರು ಕಲೆಗಳ ನೆಲವೀಡಾಗಲು ಕಾರಣವಾಗಿತ್ತು. ಅಳಿಯ ಲಿಂಗರಾಜೇ ಅರಸರು ಯಕ್ಷಗಾನಗಳನ್ನು ರಚಿಸುತ್ತಿದ್ದರು. ಅದನ್ನು ಸೊಗಸಾಗಿ ಆಡಿಸುತ್ತಿದ್ದರೂ ಕೂಡ. ಅಂತೆಯೇ ಚಾಮರಾಜ ಒಡೆಯರು ಪಿಟೀಲು ನುಡಿಸುವಾಗ ವೀಣೆ ಸುಬ್ಬಣ್ಣನವರು ಜೊತೆಗೆ ಹಾಡುತ್ತಿದ್ದರು. ಇಂತಹ ಕಲಾಪ್ರೀತಿಯ ಅರಸರ ಐಲುತನವನ್ನೂ ನೆನಪುಗಳು ದಾಖಲಿಸುತ್ತದೆ. ಅರಮನೆಯ ಹಿಂದಿನ ಬೀದಿಯಲ್ಲಿ ಬೈರಾಗಿ ಹೆಂಗಸೊಬ್ಬಳು ಏಕನಾದವನ್ನು ನುಡಿಸಿಕೊಂಡು ಹಾಡುತ್ತಾ ಹೋಗುತ್ತಿದ್ದಳು. ಹಾಡು ದೊರೆಗಳ ಕಿವಿಗೆ ಬಿತ್ತು. ಎಷ್ಟು ಸೊಗಸಾದ ಮಟ್ಟು ಆಚಾರ್ಯರೇ! ಅದರ ಸ್ವರಪ್ರಸ್ತಾರವನ್ನು ಬರೆಯಬೇಕಲ್ಲ ಎಂದರು. . . . ನಾನು ಅರಮನೆಯಿಂದ ಬರುವಷ್ಟರಲ್ಲಿ ಆ ಹೆಂಗಸು ಬೇರೆ ಯಾವುದೋ ರಸ್ತೆಯನ್ನು ಹಿಡಿದಿದ್ದಳು. ಊಟದ ಸಮಯಕ್ಕೆ ಬೈರಾಗಿಗಳೆಲ್ಲರೂ ರಾಣಿಛತ್ರದ ಬಳಿ ಸೇರುವುದು ವಾಡಿಕೆ ಸರಿ ಅಲ್ಲಿಗೆ ಹೋದೆ. ಪುಣ್ಯಾತ್ಮಳು ಅಲ್ಲಿಯೇ ಇದ್ದಳು ನನ್ನ ಅದೃಷ್ಟಕ್ಕೆ. ಅವಳಿಗೆ ಶ್ರುತಿ ಜ್ಞಾನವಿಲ್ಲ. ತಾಳಜ್ಞಾನವಿಲ್ಲ. ಒಂದೊಂದು ಸಾರಿಗೆ ಒಂದೊಂದು ರೀತಿ ಹಾಡುತ್ತಿದ್ದಳು. ಎರಡು ಮೂರುಗಂಟೆಯ ಕಾಲ ಹೆಣಗಾಡಿ ಅಂತೂ ಇಂತೂ ಸ್ವರಪ್ರಸ್ತಾರ ಬರೆದಿದ್ದಾಯಿತು.

ಸಂಗೀತದ ರಸಾಸ್ವಾದನೆ ಮತ್ತು ರಸಿಕರ ಅಭಿರುಚಿ ಈ 60-70 ವರ್ಷಗಳಲ್ಲಿ ಬದಲಾಗಿರುವುದನ್ನು ವಾಸುದೇವಾಚಾರ್ಯರು ಸೊಗಸಾಗಿ ದಾಖಲಿಸುತ್ತಾರೆ. ಆ ಮೂಲಕ ಸಂಪ್ರದಾಯ, ಪರಂಪರೆ ಎನ್ನುವುದು ಜಡ ವಸ್ತುವಲ್ಲ, ನಿರಂತರ ಬದಲಾಗುತ್ತಿರುವುದು, ಜೀವವುಳ್ಳದ್ದು ಎನ್ನುವುದನ್ನು ಮನದಟ್ಟು ಮಾಡುತ್ತಾರೆ. ಹಾಡುವ ಕ್ರಮ, ಶೈಲಿ, ಕಚೇರಿಯ ಕ್ರಮ ಇವುಗಳಲ್ಲಿ ಹೇಗೋ ಹಾಗೆಯೇ ಕೇಳುಗರ ಅಭಿರುಚಿಯಲ್ಲೂ ಸಹ ಕೆಲವೊಂದು ವ್ಯತ್ಯಾಸಗಳನ್ನು ನನ್ನ ಈ ದೀರ್ಘ ಅನುಭವದಲ್ಲಿ ಕಂಡಿದ್ದೇನೆ. ಆಗಿನ ದಿನಗಳಲ್ಲಿ ಯಾವುದರಲ್ಲೂ ಅವಸರವಿರಲಿಲ್ಲ. ರಾತ್ರಿ 9 ಗಂಟೆಯ ಹೊತ್ತಿಗೆ ಸಂಗೀತ ಕಚೇರಿಗಳು ಪ್ರಾರಂಭವಾಗುತ್ತಿದ್ದವು. ಊಟ ಉಪಚಾರಗಳನ್ನು ಮುಗಿಸಿಕೊಂಡು ಜನ ನೆಮ್ಮದಿಯಿಂದ ಸೇರುತ್ತಿದ್ದರು. ರಾಮೋತ್ಸವ, ಕೃಷ್ಣೋತ್ಸವಗಳಲ್ಲಿ ವೀಣೆ ಶೇಷಣ್ಣನವರ ಮನೆ ಕಲೆಯ ದೇಗುಲದಂತಿರುತ್ತಿತ್ತು. ಆದರೆ ಮನೆ ಸಣ್ಣದು. ಕೇಳುವ ಜನಸಂದಣಿಗೆ ಅವರ ಮನೆಯಲ್ಲಿ ಸ್ಥಳದ ಸಂಕೋಚ ಅತಿಯಾಗಿತ್ತು. ಜನ ಊಟ ಮುಗಿಸಿಕೊಂಡು ಕಂಕುಳ ಸಂದಿಯಲ್ಲಿ ಚಾಪೆ ದಿಂಬುಗಳನ್ನು ಸುತ್ತಿಕೊಂಡು, ರಸ್ತೆಯಲ್ಲಿ ಚಾಪೆಗಳನ್ನು ಹಾಸಿಕೊಂಡು, ದಿಂಬಿಗೆ ತಲೆ ಒರಗಿಸಿ ಹಾಯಾಗಿ ಮಲಗಿ ಕಚೇರಿಗಳನ್ನು ಕೇಳುತ್ತಿದ್ದರು. ಒಮ್ಮೊಮ್ಮೆ ಬೆಳಗಿನ ಜಾವದವರೆಗೂ ಸಂಗೀತ ನಡೆಯುತ್ತಿತ್ತು.

ಇಂದು ನಾವು ಕಾಣುವ ಸಂಗೀತ ಪ್ರಸ್ತುತಿಯ ಕ್ರಮ ಹೆಚ್ಚೆಂದರೆ ಒಂದು ನೂರು ವರ್ಷ ಹಳೆಯದು ಎನ್ನುವುದು ಈ ಕೃತಿಯನ್ನು ಓದುವಾಗ ತಿಳಿಯುತ್ತದೆ. ಹಾಗಾಗಿ, ಇದು ತೀರಾ ಪುರಾತನ, ಅನಾದಿಕಾಲದಿಂದ ಬಂದಿರುವಂಥದ್ದು ಎನ್ನುವ ಮಾತುಗಳು ನಿಜವಲ್ಲ ಎನ್ನುವುದು ತಿಳಿಯುತ್ತದೆ. ಸಂಪ್ರದಾಯ ಪರಂಪರೆಗಳು ಸದಾ ಬದಲಾಗುತ್ತಿರುವ ಅನುಭವ ದಕ್ಕುತ್ತದೆ. ಇಂಥದೇ ವರ್ಣ ಹಾಡಬೇಕು, ಅಂಥದ್ದೇ ಕೃತಿ ಹಾಡಬೇಕು, ಇದೇ ಕ್ರಮದಲ್ಲಿ ಹಾಡಬೇಕು, ಇಷ್ಟು ಹೊತ್ತೇ ಹಾಡಬೇಕು ಎಂಬ ಕಟ್ಟು ನಿಯಮಗಳಿರಲಿಲ್ಲ. ತಮಗೆ ಯಾವುದು ತೋಚುತ್ತಿತ್ತೋ ಅದನ್ನು ವಿದ್ವಾಂಸರು ಹಾಡುತ್ತಿದ್ದರು. ಸಭಿಕರು ಕೇಳಿ ಆನಂದಿಸುತ್ತಿದ್ದರು. ಕಲಾವಿದ ಸ್ವಂತೋಷಕ್ಕಾಗಿ ಹಾಡುತ್ತಿದ್ದುದನ್ನು ರಸಿಕರು ಕೇಳಿ ಆನಂದಿಸುತ್ತಿದ್ದ ಕಾಲ ಅದು. ರಸಿಕರನ್ನು ಮೆಚ್ಚಿಸಲು ಕಲಾವಿದ ಹಾಡುತ್ತಿರಲಿಲ್ಲ. ಇದಕ್ಕೆ ಸಂಬಂಧಿಸಿದ ಖ್ಯಾತ ಘಟನೆಯೊಂದನ್ನು ವಾಸುದೇವಾಚಾರ್ಯರು ಹೇಳುತ್ತಾರೆ. ಖ್ಯಾತ ಗಾಯಕ ಮಹಾ ವೈದ್ಯನಾಥ ಭಾಗವತರ್ ತಿರುವೈಯ್ಯಾರಿನಲ್ಲಿ ಹಾಡುತ್ತಿದ್ದಾಗ ಸಭಿಕನೊಬ್ಬ ಸಣ್ಣ ಚೀಟಿಯಲ್ಲಿ ತನ್ನ ಕೋರಿಕೆಯನ್ನು ಕಳಿಸಿದ. ಆಗ ಅವರ ಅಣ್ಣ ಇನ್ನು ಕಚೇರಿ ಮಾಡುವ ಕಾಲ ಹೋಯಿತು. ಭಾವಾವೇಶಭರಿತನಾಗಿ ತನಗೆ ತೋರಿದುದನ್ನು ಹಾಡುವ ಸ್ವಾತಂತ್ರ್ಯವನ್ನು ಕಳೆದುಕೊಂಡು, ಕೇಳುಗರ ಇಷ್ಟಾನಿಷ್ಟಗಳ ಸಂಕೋಲೆಗೆ ಸಿಕ್ಕಿಬಿದ್ದ ಮೇಲೂ ಕಚೇರಿಗಳನ್ನು ಮಾಡುವುದು ವಿದ್ವಾಂಸನೆನಿಸಿಕೊಂಡವನಿಗೆ ಉಚಿತವಲ್ಲ ಎಂದು ಹೇಳುತ್ತಾರೆ. ಅಣ್ಣ ತಮ್ಮಂದಿರಿಬ್ಬರೂ ಕಚೇರಿ ಅಲ್ಲಿಗೇ ನಿಲ್ಲಿಸಿ ಎದ್ದು ಹೋಗಿಬಿಡುತ್ತಾರೆ.

ಅಂದಿನ ಕೇಳುಗರೆಲ್ಲರೂ ಜ್ಞಾನಸ್ಥರೇನಾಗಿರಲಿಲ್ಲ. ಇಂದಿನಂತೆ ಅಂದೂ ತಮ್ಮ ಸ್ಥಾನ, ಮಾನ, ಶ್ರೀಮಂತಿಗೆ ಇವುಗಳ ಕಾರಣಕ್ಕಾಗಿ, ತೋರಿಕೆಗಾಗಿ, ತಮ್ಮ ಕುಲೀನತೆಯನ್ನು ತೋರ್‍ಪಡಿಸಲು ಸಂಗೀತ ಕಚೇರಿಗೆ ಬರುವುದೂ ಒಂದು ಲಕ್ಷಣ ಎಂದು ಭಾವಿಸಿದವರಿದ್ದರು. ಬೆಂಗಳೂರು ಗಾಯನ ಸಮಾಜದಲ್ಲಿ ಬಿಡಾರಂ ಕೃಷ್ಣಪ್ಪನವರ ಕಚೇರಿ ಏರ್ಪಾಡಾಗಿತ್ತು. ಕೃಷ್ಣಪ್ಪನವರು ತೋಡಿ ರಾಗವನ್ನು ಸವಿಸ್ತಾರವಾಗಿ ಆಲಾಪನೆ ಮಾಡಿ ಯಾವುದೋ ಕೃತಿಯನ್ನು ಹಾಡಿ ನೆರವಲು, ಸ್ವರ ಎಲ್ಲ ಮುಗಿಸಿ ಅದೇ ತಾನೆ ನಿಲ್ಲಿಸಿದ್ದರು. ಅಷ್ಟರಲ್ಲಿ ಸಭಾಂಗಣದಲ್ಲಿ ಮುಂದಿನ ಸಾಲಿನಲ್ಲಿಯೇ ಕುಳಿತಿದ್ದ ಸರಿಗೆ ರುಮಾಲಿನ ರಸಿಕರೊಬ್ಬರು ಮೇಲೆದ್ದರು. `ವಿದ್ವಾಂಸರಲ್ಲಿ ಒಂದು ವಿಜ್ಞಾಪನೆ. ದಯವಿಟ್ಟು ಸ್ವಲ್ಪ ತೋಡಿರಾಗ ಅಪ್ಪಣೆಯಾಗಬೇಕು' ಎಂದು ಹೇಳಿ ಕುಳಿತರು. ಆತ ದೊಡ್ಡ ಅಧಿಕಾರಸ್ಥಾನದಲ್ಲಿದ್ದವರು. ಯಾರೂ ಏನೂ ಅನ್ನುವಂತಿಲ್ಲ. ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಸುಮ್ಮನೆ ಕುಳಿತರು. ಕೃಷ್ಣಪ್ಪನವರು ಅಗತ್ಯವಾಗಿ, ತಾವು ಕೇಳುವುದು ಹೆಚ್ಚೋ ನಾನು ಹಾಡುವುದು ಹೆಚ್ಚೋ ಎಂದು ಹೇಳಿ ಬೇರೆ ರಾಗ ಹಾಡಿ, ಕೀರ್ತನೆಯನ್ನು ಹಾಡಿದರು. ಮತ್ತೆ ಮೇಲೆದ್ದರು ಆ ರಸಿಕಾಗ್ರಣ್ಯರು. ನನ್ನ ಮಾತನ್ನು ದೊಡ್ಡ ಮನಸ್ಸು ಮಾಡಿ ನಡೆಸಿಕೊಟ್ಟಿದ್ದಕ್ಕೆ ಅನೇಕ ವಂದನೆಗಳು. ಹಿಂದೆ ಇಂಥ ತೋಡಿಯನ್ನು ಕೇಳಿರಲಿಲ್ಲ, ಮುಂದೆ ಕೇಳುವುದೂ ಅಸಂಭವ ಎಂದು ಆ ತೋಡಿಯನ್ನು ಕೊಂಡಾಡಿ ಕುಳಿತರು! ಇಂಥಹ ಹಲವು ವಿಭಿನ್ನವಾದ ರಸನಿಮಿಷಗಳನ್ನು ನೆನಪುಗಳು ದಾಖಲಿಸುತ್ತದೆ.

ವೈಮನಸ್ಯವಿದ್ದ ಸಂಗೀತ ಕಲಾವಿದರನ್ನು ಉತ್ಕೃಷ್ಟ ಸಂಗೀತವೇ ಮತ್ತೆ ಒಂದು ಮಾಡಿದ್ದ ಮನೋಜ್ಞ ಘಟನೆಗಳನ್ನು ದಾಖಲಿಸುತ್ತಾರೆ. ಮುನಿಸಿಕೊಂಡು ಮಾತು ಬಿಟ್ಟಿದ್ದ ವೀಣೆ ಶೇಷಣ್ಣ ಮತ್ತು ವಾಸುದೇವಾಚಾರ್ಯರು ಪರಸ್ಪರ ಒಬ್ಬರು ಇನ್ನೊಬ್ಬರ ಸಂಗೀತ ಕೇಳಿ ತಮ್ಮ ಕೋಪವನ್ನೆಲ್ಲಾ ಮರೆತು ತಬ್ಬಿ ಒಂದಾಗುತ್ತಾರೆ ಆಗ ಶೇಷಣ್ಣನವರು ನಿಜವಾದ ಸಂಗೀತದ ಲಕ್ಷಣವೇ ಇದು ಆಚಾರ್ಯರೇ, ಹಗೆತನ, ಕೋಪತಾಪ, ನೋವು, ಸಂಕಟ, ಎಲ್ಲವನ್ನೂ ಒಂದು ಘಳಿಗೆಯಲ್ಲಿ ಮರೆಸುತ್ತದೆ. ಎನ್ನುತ್ತಾರೆ. ಸೃಜನಶೀಲ ಕವಿಗೆ ಹೇಗೋ ಸೃಜನಶೀಲ ವಾಗ್ಗೇಯಕಾರನಿಗೂ ಕೃತಿ ರಚನೆಗೆ ಸ್ಫೂರ್ತಿ ತೀರಾ ಅನಿರೀಕ್ಷಿತವಾದ ಮೂಲಗಳಿಂದ ದೊರಕುತ್ತವೆ. ಬದುಕಿಗೂ ಕೃತಿರಚನೆಗಳಿಗೂ ಅವಿನಾಭಾವ ಸಂಬಂಧವಿದೆ. ಶ್ರೀ ಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭೆಯವರು ಪ್ರದರ್ಶಿಸಿದ ದಾನಶೂರಕರ್ಣ ನಾಟಕವನ್ನು ನೋಡಿ ಬಂದ ವಾಸುದೇವಾಚಾರ್ಯರ ಮನಸ್ಸಿನಲ್ಲಿ ಯಾರಿಗೇ ಆದರೂ ಗುರುಕೃಪೆ ತೀರ ಅವಶ್ಯಕ, ಅದಿಲ್ಲದ ಕರ್ಣನ ಬದುಕು ಘೋರವಾದ ಬಗೆ ಆಚಾರ್ಯರನ್ನು ರಾತ್ರಿಯಿಡೀ ಕಾಡಿದಾಗ ಮೂಡಿದ ಕೃತಿ ಪುಷ್ಪಲತಿಕಾ ರಾಗದ ಗುರುಕೃಪಲೇಕ ಶ್ರೀ ಹರಿಕೃಪ ಗಲ್ಗುನಾ. ಅಂತೆಯೇ ಪತ್ನೀವಿಯೋಗವಾದಾಗ ರಚಿಸಿದ ಕೃತಿ ಭಾವಯೇಹಂ ರಘುವೀರಂ.

ಸಂಗೀತವೇ ಅಲ್ಲದೆ ನೆನಪುಗಳು ಕೃತಿ ಬದುಕಿನ ಉಳಿದ ಹಲವು ಮಗ್ಗಲುಗಳ ಒಂದು ಪಕ್ಷಿನೋಟವನ್ನು ನೀಡುತ್ತದೆ. ರಾಜರ ಸಂಬಂಧಿಕರು ಮತ್ತು ಉಳಿದ ಅರಸಿನವರು ರಾಜರ ಕೃಪಾಛತ್ರದಲ್ಲಿ ದುಡಿಯದೆಯೇ ನಡೆಸುತ್ತಿದ್ದ ಐಷಾರಾಮಿ ಬದುಕಿನ ಝಲಕ್ ಪುಸ್ತಕದಲ್ಲಿ ದೊರಕುತ್ತದೆ. ಅಗ ಗಾಳಿಪಟದ ಮಾಂಜಿಗೆ ಗಾಜಿನ ಪುಡಿಗೆ ಬದಲಾಗಿ ವಜ್ರವನ್ನು ಪುಡಿಮಾಡಿ ಹಾಕಿ ಆಡುತ್ತಿದ್ದರು. ಅರಸುಗಳ ಸಂಗಡ ಪಗಡೆ, ಇಸ್ಪೀಟ್, ಚದುರಂಗ ಮುಂತಾದ ಆಟಗಳನ್ನು ಆಡುವುದಕ್ಕೆಂದೇ ಕೆಲವರನ್ನು ನೇಮಿಸಿಕೊಳ್ಳುತ್ತಿದ್ದರು. ಅಂತೆಯೇ ಅರಮನೆಯೊಳಗೆ ನಡೆಯುವ ಸೂಕ್ಷ್ಮವಾದ ರಾಜಕೀಯವನ್ನು, ಅಸೂಯೆಯ ಮೇಲಾಟವನ್ನು ಅತ್ಯಂತ ನವುರಾಗಿ, ಸೂಕ್ಷ್ಮವಾಗಿ ಚಿತ್ರಿಸುತ್ತಾರೆ. ಅಧಿಕಾರ ಕೈಗೆ ಬಂದಾಗ ಸಂಗೀತಗಾರರೂ ಸೇರಿದಂತೆ ಪ್ರತಿಯೊಬ್ಬರೂ ಅದನ್ನು ಪ್ರದರ್ಶಿಸುತ್ತಾರೆ ಎನ್ನುವ ಸತ್ಯವನ್ನು ಆಚಾರ್ಯರು ಕಾಣಿಸುತ್ತಾರೆ. ತನ್ನನ್ನು ಕಾಣದೆ ರಾಜರ ಮುಂದೆ ಹಾಡಲು ಪ್ರಯತ್ನಿಸುವ ಕಲಾವಿದನನ್ನು ವೀಣೆ ಸುಬ್ಬಣ್ಣನವರು ಒದ್ದಾಡಿಸುವ ಘಟನೆಯ ಮೂಲಕ ಅದನ್ನು ಸೂಚಿಸುತ್ತಾರೆ. ಮೈಸೂರರಸರ ವಿನೋದ ಪ್ರಿಯತೆಯನ್ನು ಚಿತ್ರಿಸುತ್ತಲೇ ಎಲ್ಲಾ ಅರಸರಲ್ಲಿಯೂ ಇರುವ ಅಧಿಕಾರದ ಊಳಿಗಮಾನ್ಯ ಮನಸ್ಸನ್ನೂ ಚಿತ್ರಿಸುತ್ತಾರೆ. ಎಲ್ಲಾ ಕಾಲದಲ್ಲಿಯೂ ಆ ಮನಸ್ಸನ್ನು ಒಪ್ಪಿ ಬದುಕುವರಿದ್ದಂತೆಯೇ ಅದನ್ನು ಒಪ್ಪದೆ ತಮ್ಮ ಸ್ವಾಭಿಮಾನವನ್ನೂ ವ್ಯಕ್ತಿತ್ವದ ಘನತೆಯನ್ನೂ ಉಳಿಸಿಕೊಂಡ ಶಿರಸ್ತೇದಾರ ರಾಮಕೃಷ್ಣಪ್ಪನವರಂತಹ ವ್ಯಕ್ತಿಗಳೂ ಇದ್ದರು.

ಮೈಸೂರು ಸಂಸ್ಥಾನದಲ್ಲಿನ ಜನಜೀವನದ ಒಂದು ಸ್ಥೂಲ ಚಿತ್ರಣ ಕೃತಿಯಲ್ಲಿ ದೊರಕುತ್ತದೆ. ಮೈಸೂರಿನ ಅಂದಿನ ಗಡಿಗಳನ್ನು ಮತ್ತು ಕೋಟೆ, ಪೇಟೆ ಮತ್ತು ಅಗ್ರಹಾರ ಎಂಬ ಮೈಸೂರಿನ ಮೂರು ಪ್ರಮುಖ ಮುಖಗಳನ್ನು ಅವರು ಗುರುತಿಸುತ್ತಾರೆ. ಆದರೆ ಅಂಚಿಗೆ ಸರಿದುಹೋದವರ ಬದುಕಿನ ಚಿತ್ರಣ ನಮಗಿಲ್ಲಿ ದೊರಕುವುದಿಲ್ಲ. ಆಗಿನ ಮನೆಗಳಿಗೆ ದಪ್ಪ ತೊಲೆಗಳನ್ನು ಬಳಸುತ್ತಿದ್ದರು ಏಕೆಂದರೆ ಗರಗಸದ ಬಳಕೆ ಅಷ್ಟಾಗಿ ಇರಲಿಲ್ಲ ಎನ್ನುತ್ತಾರೆ. ಮರದ ಸಾಮಾನುಗಳನ್ನೆಲ್ಲಾ ಹೆಚ್ಚಾಗಿ ಬಾಚಿ ಮತ್ತು ನಾಟಿ ಉಳಿಗಳ ಮೂಲಕ ತಯಾರು ಮಾಡುತ್ತಿದ್ದರು. ಈ ಬಾಚಿಗೆ ಸಂಬಂಧಿಸಿದಂತೆ ಅವರು ಒಂದು ಸ್ವಾರಸ್ಯಕರವಾದ ಸಂಗತಿಯನ್ನು ಹೇಳುತ್ತಾರೆ. ಒಂದು ಸಲ ನಾಗಮಂಗಲದಲ್ಲಿ ಅಕ್ಕಸಾಲಿಗರಿಗೂ ನಾಯಿಂದರಿಗೂ ಮನಸ್ತಾಪ ಉಂಟಾಗಿ ಅಕ್ಕಸಾಲಿಗರಿಗೆ ಕ್ಷೌರ ಮಾಡುವುದಿಲ್ಲವೆಂದು ನಾಯಿಂದರು ಮುಷ್ಕರ ಹೂಡಿದರು. ಕ್ಷೌರಿಕರ ಈ ಬೆದರಿಕೆಗೆ ಅಕ್ಕಸಾಲಿಗರು ಅಂಜಲಿಲ್ಲ. ಮರಗೆಲಸ ಮಾಡುವ ಒಬ್ಬ ಅಕ್ಕಸಾಲಿಗ ತನ್ನ ಬಾಚಿಯಿಂದಲೇ ಎಲ್ಲರಿಗೂ ಕ್ಷೌರ ಮಾಡಿದನಂತೆ! ಅಷ್ಟು ನಯನಾಜೂಕಿನ ಕೆಲಸ ಮಾಡುವ ಬಾಚಿಯವರಿದ್ದರು.

ಕೋಟೆಯ ಜನಕ್ಕೆ ಕಾರಂಜಿಕೆರೆಯಿಂದ ಕುಡಿಯುವ ನೀರು ಸರಬರಾಜಾಗುತ್ತಿತ್ತು. 1908ರವರಗೆ ವಿದ್ಯುತ್‌ದೀಪದ ಏರ್ಪಾಡು ಇರಲಿಲ್ಲ. ಬೀದಿಯಲ್ಲಿ ಸೀಮೆಎಣ್ಣೆಯ ಲಾಂದ್ರ ಕಂಬಗಳಿದ್ದವು. ಅರಮನೆ ಅರಸುಗಳ ಮನೆಗಳಲ್ಲಿ ಕಂದೀಲು ಹಚ್ಚುತ್ತಿದ್ದರು. ಎಂಜಿನ್ ಹೌಸಿನಲ್ಲಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿ ಅರಮನೆಗೆ ಮಾತ್ರ ದೀಪವನ್ನು ಒದಗಿಸುತ್ತಿದ್ದರು.ಸಂಸ್ಕೃತ ಪಾಠಶಾಲೆ ಮತ್ತು ಸದ್ವಿದ್ಯಾ ಪಾಠಶಾಲೆಗಳಲ್ಲಿ ಸಂಸ್ಕೃತ ಪಾಠಗಳು ನಡೆಯುತ್ತಿದ್ದವು. ಉಳಿದ ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡವನ್ನು ಹೇಳಿಕೊಡುತ್ತಿದ್ದರು. ಅರಸುಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಅರಸು ಬೋರ್ಡಿಂಗ್ ಸ್ಕೂಲ್ ನಡೆಸುತ್ತಿದ್ದರು. ಮಹಾರಾಣಿ ಗಲ್ಲ್ಸ್ ಸ್ಕೂಲಿನಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿತು. ಚಾಮರಾಜ ಒಡೆಯರ ಕಾಲಕ್ಕೆ ಮೊದಲು ಸ್ತ್ರೀ ವಿದ್ಯಾಭ್ಯಾಸಕ್ಕೆ ಸಂಸ್ಥಾನದಲ್ಲಿ ಅವಕಾಶವಿರಲಿಲ್ಲ. ಚಾಮರಾಜ ಒಡೆಯರ ಕಾಲದಲ್ಲಿ ಮೊಟ್ಟಮೊದಲನೆಯ ಗರ್‍ಲ್ಸ್ ಸ್ಕೂಲ್ ವರಾಹಸ್ವಾಮಿ ದೇವಸ್ಥಾನದಲ್ಲಿ ಪ್ರಾರಂಭವಾಯಿತು. ಅರಮೆನ ಮತ್ತು ಸರ್ಕಾರದ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನೂ ಉಚಿತ ಊಟ ವಸ್ತ್ರಗಳ ಸೌಕರ್ಯವನ್ನೂ ಕಲ್ಪಿಸಲಾಗಿತ್ತು. ಅರಮನೆಗೆ ಸೇರಿದ ಹಾಗೆ ಮೂರು ಬಿಡದಿಗಳು. ಖಾಸ್ ಬಿಡದಿ ಮಹಾರಾಜರ ಊಟ ತಿಂಡಿ ತೀರ್ಥಗಳು ಸಿದ್ಧವಾಗುತ್ತಿದ್ದವು. ತೊಂಬಾರದ ಬಿಡದಿಯಲ್ಲಿ ಅರಮನೆಯ ಇತರ ನೌಕರರಿಗೂ ಬಡಬಗ್ಗರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದಲ್ಲದೆ ಬ್ರಾಹ್ಮಣರಿಗಾಗಿಯೇ ಒಂದು ಪ್ರತ್ಯೇಕ ಬಿಡದಿಯಿತ್ತು. ತೊಂಬಾರದ ಬಿಡದಿಯಲ್ಲಿ ಪ್ರತಿದಿನ ಒಂದು ಪಲ್ಲ ಅಕ್ಕಿ ಅನ್ನ, ಒಂದು ಪಲ್ಲ ರಾಗಿ ಹಿಟ್ಟನ್ನು ಅಡುಗೆಮಾಡಿ ಸಂಜೆಯ ವೇಳೆ ಕೋಟೆಯ ಹೊರಗಿನ ಮೈದಾನದಲ್ಲಿ ಭಿಕ್ಷುಕರಿಗೆ ಹಂಚುತ್ತಿದ್ದರು. 1905ರಲ್ಲಿ ಪ್ಲೇಗು ಉಪದ್ರವ ಬಂತು. ಆಗ ಊರ ಹೊರಗಡೆ ಆಲನಹಳ್ಳಿಯಲ್ಲಿ ಗುಡಾರಗಳನ್ನು ಹಾಕಿ ಕೆಲವರು ಅಲ್ಲಿದ್ದರು.

ನಾಟಕಗಳಲ್ಲಿ ವಾಸುದೇವಾಚಾರ್ಯರಿಗೆ ಒಳ್ಳೆಯ ಅಭಿರುಚಿಯಿತ್ತು. ಆ ಬಗ್ಗೆ ತುಂಬಾ ವಿಸ್ತೃತವಾದ ವಿವರಗಳು ಈ ಕೃತಿಯಲ್ಲಿ ಲಭ್ಯವಿದೆ. ನನಗೆ ನೆನಪಿರುವಂತೆ ಆಗಿನ ದಿವಸಗಳಲ್ಲಿ ನಾಟಕ ಕಂಪನಿಗಳೇ ವಿರಳ. ಯಕ್ಷಗಾನ ಬಯಲಾಟಗಳೇ ಹೆಚ್ಚು. ಸಾಂಗ್ಲಿ ಕಂಪನಿಯವರು ಬಂದು ಪದ್ಮಾವತಿ ಪರಿಣಯ ನಾಟಕ ಆಡಿದರು. ಸಾಂಗ್ಲಿ ಕಂಪನಿಯ ನಾಟಕಗಳೂ ಸಹ ಹೆಚ್ಚು ಕಡಮೆ ಬಯಲು ನಾಟಕಗಳಂತೆಯೇ ಇದ್ದವು. ಸಾಂಗ್ಲಿ ಕಂಪನಿಯವರು ಆಡಿದ ನಾಟಕಗಳನ್ನು ನೋಡಿದ ಮೇಲೆ ಮೈಸೂರಿನಲ್ಲಿಯೂ ನಾಟಕ ಕಂಪನಿಯನ್ನು ಕಟ್ಟಬೇಕೆಂಬ ಆಸೆ ಹಲವರಲ್ಲಿ ಮೂಡಿತು. ಹಲಕೆಲವು ನಾಟಕ ಕಂಪನಿಗಳು ನಗರದಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿಯೂ ಜನ್ಮ ತಾಳಿದವು. ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ಎಂಬ ಹೆಸರಿನಲ್ಲಿ ಅರಮನೆಯ ಕಂಪನಿಯೊಂದು ರಚಿತವಾಯಿತು. ಇದರ ಹಿಂದೆಯೇ ಎ.ವಿ.ವರದಾಚಾರ್ಯರ ರತ್ನಾವಳಿ ಥಿಯೆಟ್ರಿಕಲ್ ಕಂಪನಿ, ಶ್ರೀಕಂಠೇಶ್ವರ ವಿಲಾಸ ಕಂಪನಿ, ವೆಂಕಟರಾಮು ಕಂಪನಿ, ಗೌರೀ ನರಸಿಂಹಯ್ಯನವರ ಕಂಪನಿ, ರಂಗಾಚಾರಿ ಕಂಪನಿ, ಅಕ್ಕಿ ಅಂಗಡಿ ಗೋವಿಂದಪ್ಪನವರ ಕಂಪನಿ ಮುಂತಾದ ಖಾಸಗಿ ಸಂಸ್ಥೆಗಳು ನಗರದಲ್ಲಿ ರೂಪುಗೊಂಡವು. ಖ್ಯಾತ ನಟರು, ಆಗ ಆಡುತ್ತಿದ್ದ ನಾಟಕಗಳು ಮುಂತಾದ ಹಲವು ವಿವರಗಳನ್ನು ತುಂಬಾ ಕೂಲಂಕಷವಾಗಿ ನೀಡುತ್ತಾರೆ. ಮೈಸೂರಿಗೆ ಹಾರ್ಮೋನಿಯಂ ಕಾಲಿಟ್ಟಿದ್ದು ನಾಟಕದ ಜೊತೆಗೆ. ಅಲ್ಲಿಯ ತನಕ ಆ ವಾದ್ಯವನ್ನೇ ಯಾರೂ ನೋಡಿರಲಿಲ್ಲ. ಅರಮನೆ ಕಂಪನಿ ಮತ್ತು ವರದಾಚಾರ್ಯರ ಕಂಪನಿಗಳಲ್ಲಿ ಹಾರ್ಮೋನಿಯಂ ಬದಲು ಜೋಡಿ ತಂಬೂರಿಗಳನ್ನು ಶ್ರುತಿಗಾಗಿ ಬಳಸುತ್ತಿದ್ದರು. ಅಂದಿನ ಪ್ರಖ್ಯಾತ ನಟರಾದ ವರದಾಚಾರ್ಯರು, ಕೃಷ್ಣಮೂರ್ತಿರಾಯರು ಮುಂತಾದವರ ನಟನೆ ಹಾಗೂ ಗಾಯನವನ್ನು, ವೇಷಭೂಷಣಗಳನ್ನು ಕುರಿತು ತುಂಬಾ ಅರ್ಥಪೂರ್ಣ ಒಳನೋಟಗಳನ್ನು ನೀಡುತ್ತಾರೆ.

ಆ ಕಾಲದಲ್ಲಿ ತಾವು ಕೇಳಿದ್ದ ಹಲವು ಜನಪ್ರಿಯ ಕಥೆಗಳ, ಐತಿಹ್ಯಗಳ ಒಂದು ಮಿಂಚು ನೋಟವನ್ನೂ ಆಚಾರ್ಯರು ನೀಡುತ್ತಾರೆ. ಅದರಲ್ಲಿ ತುಂಬಾ ಆಸಕ್ತಿ ಕೆರಳಿಸುವ ಕಥೆ ಭಕ್ಷಿ ಚಾಮಪ್ಪಾಜಿಯವರ ಮಗಳ ಜೊತೆ ಕಾಬೂಲ್ ‌ದೇಶದ ಕುದುರೆ ಮಾರಾಟಗಾರ ಚದುರಂಗದಾಟವನ್ನಾಡಿದ್ದು. ಅವರಿಬ್ಬರ ನಡುವೆ ಪರದೆ ಮತ್ತು ಪರದೆಯ ನಡುವೆ ಒಂದು ಸಣ್ಣ ಕಿಂಡಿ. ಆಟ ಪ್ರಾರಂಭವಾಗುವ ಮೊದಲೇ ಆ ಹುಡುಗಿ ಯಾವ ಪ್ಯಾದೆಯಿಂದ ಅವರ ಅರಸನನ್ನು ಹಿಡಿಸಬೇಕು ಅಂತ ಕೇಳಿ ಅವರನ್ನು ಎಂದು ತನ್ನ ಅಪ್ಪಾಜಿಗೆ ಹೇಳಿದಳು. ಕೇವಲ ನಾಲ್ಕಾರು ಕಾಯಿಗಳನ್ನು ನಡೆಸುವಷ್ಟರಲ್ಲಿಯೇ ಆತ ತೋರಿಸಿದ್ದ ಪ್ಯಾದೆಯನ್ನು ಮುಂದೆ ಮಾಡಿಕೊಂಡು ಸಿಕ್ಕಿಬಿದ್ದ ನಿಮ್ಮ ರಾಜ ಎಂದರು ಆಕೆ. ನನ್ನ ಜನ್ಮದಲ್ಲಿಯೇ ಇಂತಹ ಸೋಲನ್ನು ಅನುಭವಿಸಿರಲಿಲ್ಲ, ಎಂತಹ ಚಮತ್ಕಾರ ಎಂದು ಹೇಳುತ್ತಾ ಆಕೆಗೆ ಕೈಮುಗಿದು ಮೇಲೆದ್ದ. ಹೀಗೆ ಮಾಹಿತಿ, ಒಳನೋಟಗಳು, ಐತಿಹ್ಯಗಳ ಜೊತೆಗೆ ನೆನಪುಗಳು ರಂಜನೀಯವಾಗಿ ಓದಿಸಿಕೊಂಡು ಹೋಗುತ್ತದೆ. ಇದರ ಜೊತೆಗೇ ಓದಬೇಕಾದ ಅವರ ಮತ್ತೊಂದು ಕೃತಿ ‘ನಾ ಕಂಡ ಕಲಾವಿದರು’

ವಾಸುದೇವಾಚಾರ್ಯರು ತಮ್ಮ ಕೊನೆಯ ದಿನಗಳನ್ನು ಮದ್ರಾಸಿನ ಕಲಾ ಕ್ಷೇತ್ರದಲ್ಲಿ ಕಳೆದರು. ರುಕ್ಮಿಣೀದೇವೆ ಅರುಂಡೇಲ್ ಅವರು ತಮ್ಮ ನೃತ್ಯನಾಟಕ ರಾಮಾಯಣಕ್ಕೆ ರಾಗಸಂಯೋಜಿಸಲು ಅವರನ್ನು ಅಲ್ಲಿಗೆ ಕರೆಸಿಕೊಂಡಿದ್ದರು. ತಮ್ಮ 97ನೆಯ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲು ವಾಸುದೇವಾಚಾರ್ಯರು ತೀರಿಹೋದರು. `ನೆನಪುಗಳು' ಕೃತಿ ಸಿದ್ಧವಾಗಿದ್ದರೂ ಕೂಡ ಅದು ಪ್ರಕಟವಾದದ್ದು ಅವರ ಮರಣದ ನಂತರ. ಕನ್ನಡ ಸಾರಸ್ವತಲೋಕ ಇಂತಹ ಅಪೂರ್ವವಾದ ಕೃತಿಯನ್ನು ಮರೆತೇಬಿಟ್ಟಿದೆ ಎನಿಸುತ್ತಿದೆ.

ಈ ಅಂಕಣದ ಹಿಂದಿನ ಬರಹಗಳು

ಮೃದಂಗದ ಜಾಡು ಹಿಡಿದು ಹೊರಟ 'ವರ್ಗೀಕರಣ' ಮೀರಿದ ಕೃತಿ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...