ಒಟ್ಟು 43 ಅನುವಾದಿತ ಕೃತಿಗಳ ಪರಿಚಯಾತ್ಮಕ ವಿಶ್ಲೇಷಣೆ ಇಲ್ಲಿದೆ; ಶೋಭಾರಾಣಿ ಎನ್


"ಅನುವಾದಕರು ಹಲವು ಬಗೆಯ ಅನುವಾದದ ಸಮಸ್ಯೆಗಳನ್ನು ಎದುರಿಸಿ ಕೃತಿಯೊಂದನ್ನ ಓದುಗ ಲೋಕದೊಳಗೆ ತರುವುದು ನಿಜಕ್ಕೂ ಸವಾಲಿನ ಕೆಲಸ. ಇಂತಹ ಸವಾಲುಗಳನ್ನು ಕನ್ನಡದ ಅನುವಾದಕರು ಹೇಗೆ ನಿಭಾಯಿಸಿದ್ದಾರೆ ಮತ್ತು ಆ ಮೂಲಕ ಅನುವಾದಕ್ಕೆ ಹಾಗೂ ಮೂಲ ಕೃತಿಗೆ ಎಷ್ಟು ನ್ಯಾಯ ಸಂದಿದೆ ಎಂಬುದರ ಸೂಕ್ಷ್ಮ ಅವಲೋಕನವನ್ನು ಡಾ. ಎಂ ಎಸ್ ದುರ್ಗಾಪ್ರವೀಣರ “ಅನುವಾದ: ಅನುಸಂಧಾನ” ಕೃತಿ ಮಾಡುತ್ತದೆ," ಎನ್ನುತ್ತಾರೆ ಡಾ. ಶೋಭಾರಾಣಿ ಎನ್. ಅವರು ಎಂ.ಎಸ್. ದುರ್ಗಾಪ್ರವೀಣ ಅವರ “ಅನುವಾದ: ಅನುಸಂಧಾನ” ಕೃತಿ ಕುರಿತು ಬರೆದ ವಿಮರ್ಶೆ.

ಕನ್ನಡ ಸಾಹಿತ್ಯವು ಆಧುನಿಕ ಸಾಹಿತ್ಯದ ಆರಂಭದ ಕಾಲದಿಂದಲೂ ಅನ್ಯ ಭಾಷೆಯ ಕೃತಿಗಳನ್ನು ಅನುವಾದಗಳ ಮೂಲಕ ಕನ್ನಡ ಪರಿಸರದೊಳಗೆ ತರುವ ಪ್ರಯತ್ನ ಮಾಡುತಾ ಬಂದಿದೆ. ಅನುವಾದಕರು ಹಲವು ಬಗೆಯ ಅನುವಾದದ ಸಮಸ್ಯೆಗಳನ್ನು ಎದುರಿಸಿ ಕೃತಿಯೊಂದನ್ನ ಓದುಗ ಲೋಕದೊಳಗೆ ತರುವುದು ನಿಜಕ್ಕೂ ಸವಾಲಿನ ಕೆಲಸ. ಇಂತಹ ಸವಾಲುಗಳನ್ನು ಕನ್ನಡದ ಅನುವಾದಕರು ಹೇಗೆ ನಿಭಾಯಿಸಿದ್ದಾರೆ ಮತ್ತು ಆ ಮೂಲಕ ಅನುವಾದಕ್ಕೆ ಹಾಗೂ ಮೂಲ ಕೃತಿಗೆ ಎಷ್ಟು ನ್ಯಾಯ ಸಂದಿದೆ ಎಂಬುದರ ಸೂಕ್ಷ್ಮ ಅವಲೋಕನವನ್ನು ಡಾ. ಎಂ ಎಸ್ ದುರ್ಗಾಪ್ರವೀಣರ “ಅನುವಾದ: ಅನುಸಂಧಾನ” ಕೃತಿ ಮಾಡುತ್ತದೆ.

“ವಿನ್ನಿ ಪೋಹಾ” ದಿಂದ ಮೊದಲುಗೊಂಡು “ನದಿ ತಿರುಗಿಸಿದ ನಾಣಜ್ಜ” ದ ವರೆಗಿನ ಒಟ್ಟು 43 ಅನುವಾದಿತ ಕೃತಿಗಳ ಪರಿಚಯಾತ್ಮಕ ವಿಶ್ಲೇಷಣೆ ಇಲ್ಲಿದೆ. ಇಲ್ಲಿನ ಪ್ರತಿಯೊಂದು ಲೇಖನವೂ ಮೊದಲಿಗೆ ತಾನು ಯಾವ ಕೃತಿಯನ್ನು ಪರಿಚಯಿಸುತ್ತಿದೆಯೋ ಆ ಕೃತಿಯ ಮೂಲ ಲೇಖಕರ ಮತ್ತು ಅನುವಾದಕರ ವಿವರಗಳ ಜೊತೆಗೆ ಈ ಎರಡು ಕಾಲಘಟ್ಟದ ಸಾಮಾಜಿಕ ಮತ್ತು ಸಾಂಸ್ಕೃತಿಕ ತುರ್ತುಗಳನ್ನು ನಿರೂಪಿಸುತ್ತವೆ. ಮೂಲ ಕೃತಿ ರಚನೆಯ ಕಾಲದ ಮತ್ತು ಅನುವಾದಗೊಂಡ ಕಾಲದ ಒತ್ತಡಗಳನ್ನು ಚಾರಿತ್ರಿಕವಾಗಿ ದಾಖಲುಮಾಡುತ್ತವೆ. ಅನುವಾದಿತ ಕೃತಿಯು ಮೂಲ ಕೃತಿಗೆ ಯಾವ ವಿವರಗಳಲ್ಲಿ ಎಷ್ಟು ನಿಷ್ಠವಾಗಿದೆ ಎಂಬುದನ್ನು ಹೇಳುತ್ತಾ ಒಂದು ಕೃತಿಯಾಗಿ ಹೇಗೆ ಮತ್ತು ಎಲ್ಲಿ ತನ್ನ ಸ್ವಂತಿಕೆಯನ್ನು ಕಾಯ್ದುಕೊಂಡಿದೆ ಎಂಬುದನ್ನೂ ಗುರುತಿಸುತ್ತವೆ.

ಅನ್ಯ ಭಾಷೆಯ ಕೃತಿಯೊಂದನ್ನು ಅನುವಾದಿಸುವಾಗ ಅನುವಾದಕ ಸ್ವತಃ ಲೇಖಕನೇ ಆಗಿ ತನ್ನ ಪರಿಸರದ ಜನಪದೀಯ ಮತ್ತು ಶಿಷ್ಟ ಮಾದರಿಗಳನ್ನು ಬಳಸಿಕೊಂಡಿರುವ ನಿದರ್ಶನಗಳನ್ನು ʼಡಿಕೆಮೆರಾನ್ʼನ ಕನ್ನಡ ಅನುವಾದದಲ್ಲಿ ದುರ್ಗಾಪ್ರವೀಣರು ಗುರುತಿಸುತ್ತಾರೆ. ಕನ್ನಡ ಪರಂಪರೆಯಲ್ಲಿ ಪ್ರಾರಂಭದಿಂದಲೂ ಅನುವಾದ, ರೂಪಾಂತರ ಮತ್ತು ಸಂಗ್ರಹ ಕಾರ್ಯಗಳು ನಡೆಯುತ್ತಲೇ ಬಂದಿವೆ. ಲೇಖಕರು/ ಕವಿಗಳು ಮೂಲದಲ್ಲಿದ್ದೂ ಆಸಕ್ತಿಕರವಲ್ಲದ ಎಷ್ಟು ಕಥೆ/ವರ್ಣನೆ/ವಿಷಯಗಳನ್ನು ಕೈಬಿಡುವ; ಅಗತ್ಯವೆನಿಸಿದಲ್ಲಿ ಸಂಕ್ಷೇಪಿಸುವ ಮತ್ತು ವಿಸ್ತರಿಸುವ; ಮೂಲದಲ್ಲಿ ಅಮುಖ್ಯವೆನಿಸಿದ್ದನ್ನು ಮುಖ್ಯ ಪ್ರವಾಹದೊಳಗೆ ತರುವ; ತಮ್ಮ ಸಮಕಾಲಿನ ಸೈದ್ಧಾಂತಿಕತೆಗಳಿಗೆ ಹೊಂದುವಂತೆ ಆಶಯಗಳನ್ನು ಒಡೆದು ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಇವೇ ಕಾರ್ಯಗಳು ಆಧುನಿಕ ಕಾಲದ ಅನುವಾದ ಕ್ಷೇತ್ರದಲ್ಲಿ ಮತ್ತಷ್ಟು ವಿಶಾಲ ವ್ಯಾಪ್ತಿಯಲ್ಲಿ ನಡೆದಿವೆ. ಈ ಎಲ್ಲಾ ಅಂಶಗಳನ್ನು ಸಂಬಂಧಿಸಿದ ಕೃತಿಗಳಲ್ಲಿ ಸಮರ್ಥವಾಗಿ ಗುರುತಿಸುವ ಕೆಲಸವನ್ನು ಡಾ. ದುರ್ಗಾಪ್ರವೀಣರ ಈ ಕೃತಿ ಮಾಡುತ್ತದೆ.

ಅನುವಾದಿತ ಕೃತಿಯ ನೇರ ಓದಿಗೆ ಓದುಗ ಒಳಗಾಗದಿದ್ದ ಸಂದರ್ಭದಲ್ಲೂ ಆ ಕೃತಿಯ ಭಾವ ಮತ್ತು ಆಶಯಗಳನ್ನು ಮತ್ತು ಅನುವಾದಕನ ಅನುವಾದ ಕೌಶಲ್ಯದ ಶಕ್ತಿ-ಮಿತಿಗಳನ್ನು ಓದುಗನ ಬೌದ್ಧಿಕ ನೆಲೆಗೆ ನಿಲುಕುವಂತೆ ಮಾಡುತ್ತವೆ ಇಲ್ಲಿನ ಲೇಖನಗಳು. ಆ ಮೂಲಕ ಓದುಗನನ್ನು ಕೃತಿಯ ನಿಕಟ ಓದಿಗೆ ಒತ್ತಾಯಿಸುತ್ತವೆ. ಕಥೆ ಕಾದಂಬರಿ ನಾಟಕ ಮೊದಲಾದವು ಬರಹ ಮಾಧ್ಯಮದಿಂದ ರಂಗಭೂಮಿ ಮತ್ತು ಸಿನಿಮಾದಂತಹ ದೃಶ್ಯ ಮಾಧ್ಯಮಕ್ಕೆ ರೂಪಾಂತರಗೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಹೀಗೆ ವರ್ಗಾವಣೆಯಾಗುವಾಗ ಅವು ಪಡೆದುಕೊಳ್ಳುವ ಆಯಾಮಗಳು ಗಮನಾರ್ಹವಾದುವು. ಇಂತಹ ಬದಲಾವಣೆಗಳು ಕೆಲವೊಮ್ಮೆ ಸಾಂಸ್ಕೃತಿಕ ರಾಜಕಾರಣದ ಸಾಧನಗಳೂ ಆಗುತ್ತವೆ ಎಂಬುದು ಬೇರೆ ಮಾತು. ಆದರೆ ಇಂತಹ ಮಾಧ್ಯಮಾಂತರಗಳು ಬರಹ ಮತ್ತು ದೃಶ್ಯ ಮಾಧ್ಯಮ ಈ ಎರಡರ ಸಾಧ್ಯತೆಗಳನ್ನು ವಿಸ್ತರಿಸುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. “ʼಬಾನಯಾನʼ- ಸ್ಪೂರ್ತಿಯ ಸೆಲೆ”, “ʼಜೋಗೀಭಾವಿ ಮತ್ತಿತರ ನಾಟಕಗಳು: ಸ್ಥಳೀಯ ಅನನ್ಯತೆಯ ಅಳವಡಿಕೆ” ಮೊದಲಾದ ಲೇಖನಗಳು ಈ ಬಗೆಯ ಅನುವಾದದ ಸಾಧ್ಯತೆಗಳನ್ನು ಮತ್ತು ಅವುಗಳು ಸಾಗಬೇಕಾದ ದಾರಿಯನ್ನು ಸಹ ಗುರುತಿಸುವಲ್ಲಿ ಶಕ್ತವಾಗಿದೆ.

“ಅನುವಾದ: ಅನುಸಂಧಾನ” ಕೃತಿಯಲ್ಲಿ ಲೇಖಕರು ಪರಿಚಯಿಸಲು ಮತ್ತು ವಿಶ್ಲೇಷಿಸಲು ಆಯ್ದುಕೊಂಡಿರುವ ಕೃತಿಗಳೆಲ್ಲವೂ ಮೌಲಿಕವಾದುವು; ವಿವಿಧ ಸಮಾಜಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ದಾಖಲೆಗಳಾಗಿರುವಂಥವು. ಇವುಗಳ ಓದು ಸಮಾಜೋ-ಸಾಂಸ್ಕೃತಿಕ ಅಧ್ಯಯನಕ್ಕೆ ದಾರಿ ಮಾಡಿ ಕೊಡುವಂತದ್ದು. ಕೃತಿಯು ಓದುಗರ ಆಲೋಚನಾ ಕ್ರಮವನ್ನು ಪಲ್ಲಟಗೊಳಿಸುವ, ನಿರ್ದೇಶಸುವ, ಚರಿತ್ರೆ ಮತ್ತು ಸಮಕಾಲಿನ ಸಂದರ್ಭಗಳ ಬಗೆಗೆ ವಿವೇಚಿಸುವಂತೆ ಮಾಡುವ ಹಾಗೂ ಸಾಮುದಾಯಿಕ ಅಪನಂಬಿಕೆಗಳನ್ನು ಸ್ಪಷ್ಟಗೊಳಿಸಿ ವಿಮರ್ಶಿಸುವಂತೆ ಪ್ರೇರೇಪಿಸುವ ಸಾಮರ್ಥ್ಯವುಳ್ಳ ʼಮರುಭೂಮಿಯ ಹೂʼ, ʼಕದಡಿದ ಕಣಿವೆʼ, ʼಸಂಸ್ಕೃತಕ್ಕಾಗಿ ಹೋರಾಟʼ ಮೊದಲಾದ ಕೃತಿಗಳನ್ನು ಪರಿಚಯಿಸುವ ಮೂಲಕ ಓದುಗರಿಗೆ ಕೃತಿಗಳ ಆಯ್ಕೆಯನ್ನು ಸಲೀಸುಗೊಳಿಸುತ್ತದೆ. ಜೊತೆಗೆ ಯಥಾನುವಾದ ಮತ್ತು ಭಾವಾನುವಾದದ ಗೆರೆಗಳನ್ನು ಕೃತಿ ಸಮರ್ಥವಾಗಿ ಗುರುತಿಸುತ್ತದೆ. ಓದುಗ ಕೃತಿಯೊಂದನ್ನು ಸರಾಗವಾಗಿ ದಕ್ಕಿಸಿಕೊಳ್ಳುವಲ್ಲಿ ಮತ್ತು ಅದರೊಂದಿಗೆ ಅನುಸಂಧಾನ ಏರ್ಪಡಿಸಿಕೊಳ್ಳುವ ಹಾದಿಯಲ್ಲಿ ಭಾವನುವಾದವು ಯಥಾನುವಾದಕ್ಕಿಂತ ಹೇಗೆ ಉತ್ತಮ ಮತ್ತು ಸಹಕಾರಿಯಾಗುತ್ತದೆ ಎಂಬುದನ್ನು ಯಥಾನುವಾದಕ್ಕೆ ಒಳಗಾಗಿರುವ ಕೃತಿಗಳ ತೌಲನಿಕ ಅಧ್ಯಯನದ ಮೂಲಕ ನಮ್ಮ ಗ್ರಹಿಕೆಗೆ ತಂದುಕೊಡುತ್ತಾರೆ ಲೇಖಕರು.

ಅನುವಾದ ಕ್ರಿಯೆಯು ಹೇಗೆ ಅನುವಾದಕನ ಭಾಷಾ ಶೈಲಿ ನಿರೂಪಣಾ ಕೌಶಲ್ಯ ಮತ್ತು ಸಂಸ್ಕೃತಿ ಗ್ರಹಿಕೆ ಹಾಗೂ ಅಳವಡಿಕೆಯ ಸಾಮರ್ಥ್ಯವನ್ನು ಎತ್ತರಿಸುತ್ತಾ ಸಾಗುತ್ತದೆ ಎಂಬುದನ್ನೂ ಹಲವು ನಿದರ್ಶನಗಳ ಮೂಲಕ ಇಲ್ಲಿ ಸ್ಪಷ್ಟಪಡಿಸಲಾಗಿದೆ. ಒಟ್ಟಾರೆ ಅನುವಾದ ಅನುಸಂಧಾನ ಕೃತಿಯು ಕನ್ನಡದ ಓದುಗ ಮತ್ತು ಅನುವಾದಕರಿಗೆ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ. ಇಲ್ಲಿನ ʼಓಪನ್ ಎಂಡ್ʼ ಮಾದರಿಯು ಉಲ್ಲೇಖಿತ ಕೃತಿಗಳ ಪ್ರತ್ಯೇಕ ಓದು ಮತ್ತು ವಿಸ್ತೃತ ವಿಶ್ಲೇಷಣೆಗೆ ದಾರಿ ಮಾಡಿಕೊಡುತ್ತದೆ. ಅನುವಾದ ಕ್ಷೇತ್ರದಲ್ಲಿ ಸಂಶೋಧನೆಗೆ ತೊಡಗುವ ಸಂಶೋಧಕರಿಗಂತೂ ಕ್ಯಾಟ್ಲಾಗ್ ನಂತೆ, ಪರಾಮರ್ಶನ ಕೃತಿಯಂತೆ ಆಕರ ಸಾಮಗ್ರಿಯನ್ನು ಒದಗಿಸುವಲ್ಲಿ ಸಶಕ್ತವಾಗಿದೆ.

- ಡಾ. ಶೋಭಾರಾಣಿ ಎನ್
ಸಹ ಪ್ರಾಧ್ಯಾಪಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...