ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ

Date: 28-02-2023

Location: ಬೆಂಗಳೂರು


''ತಣ್ಣಗಿನ ಗಾಳಿ ನನ್ನ ಮೈ ಕೊರೆಯಲಿಕ್ಕೆ ಆರಂಭಿಸಿತು. ಹಾಸಿಗೆಯಿಂದಲೇ ಕಿಟಕಿಗಳನ್ನು ಮುಚ್ಚಲಿಕ್ಕೆ ನೋಡಿದೆ. ಇನ್ನೇನು ಕಿಟಕಿ ಮುಚ್ಚಬೇಕು, ಆಗಲೇ ಅವನನ್ನು ನೋಡಿದ್ದು. ನೆರಳು ನೆರಳಾಗಿದ್ದ ಬರೀ ಔಟ್ ಲೈನ್. ಚಾರ್ಕೋಲ್ ಚಿತ್ರದ ಹಾಗೆ ಕಂಡ. ನನಗವನು ಯಾರೆಂದು ಗೊತ್ತಾಗಿಬಿಟ್ಟಿತ್ತು,” ಎನ್ನುತ್ತಾರೆ ಅಂಕಣಗಾರ್ತಿ ಪಿ. ಚಂದ್ರಿಕಾ. ಅವರು ತಮ್ಮ ‘ನಡೆಯದ ಬಟ್ಟೆ’ ಅಂಕಣದಲ್ಲಿ ‘ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ’ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ...

ವಿಚಿತ್ರ, ನನ್ನದೇ ಕನಸಿನ ಆಳಕ್ಕೆ ನಾನು ಇಳಿಯಬೇಕಲ್ಲದೆ ಶ್ಯಾಮುವನ್ನು ಯಾಕೆ ಇಳಿಸಿದೆ? ಹರಿದು ಕೈಚೆಲ್ಲಿ ಹೋದ ಮಣಿಯ ಸರಕ್ಕಾಗಿ ಮತ್ತೆ ಪ್ರಯತ್ನ ಪಡುವಂತಿತ್ತು ನನ್ನ ಸ್ಥಿತಿ. ಅದಕ್ಕಾಗೇ ನಾನು ಮತ್ತೆ ಮಣಿಗಳನ್ನು ಆರಿಸುತ್ತಿದ್ದೇನಾ? ಆರಂಭಿಸಬಹುದಾದ ಸಣ್ಣ ಮಾತು, ಸಣ್ಣ ನಗು, ಕೈಗಳ ಸ್ಪರ್ಷ ಎಲ್ಲವೂ ಮಧುರವೇ ಆಗುತ್ತಿರುವ ಹೊತ್ತಿನಲ್ಲಿ ಮಧುರಾಕ್ಷರವೊಂದು ವರ್ಣಿಸಲಸದಳ ಸ್ಥಿತಿಯಲ್ಲಿ ಉಳಿಯುತ್ತದೆ ಎನ್ನುತ್ತಾರೆ. ಶ್ಯಾಮುವಿನ ವಿಷಯದಲ್ಲಿ ಅತ್ಯಂತ ನೋವಿನ ಕ್ಷಣವೂ ವಿವರಣೆಗೆ ಸಿಲುಕದಂತೆ ಉಳಿದುಬಿಟ್ಟಿದೆ. ಹಾಗಾದರೆ ನನಗೆ ಬಿದ್ದ ಕನಸು ಏನದು? ಸದಾ ತಾಕುವ ಕಿರುದೋಣಿಗಳಂತಿರುವ ನನ್ನ ಅವಳ ನಡುವೆ ಇರುವುದು ಪೂರ್ಣ ಭಾವದ ಸ್ನೇಹವೋ ಅಥವಾ ಅದರೊಂದಿಗೆ ಅರಿವಿಗೇ ಬಾರದ ಹೊಟ್ಟೆಕಿಚ್ಚೂ ಇದೆಯೋ... ಶ್ಯಾಮುವಿನ ಬಗ್ಗೆ ಹೀಗೆ ಯೋಚಿಸಲಾದರೂ ಸಾಧ್ಯವೇ? ಯೋಚಿಸಿಲ್ಲ ಅಂದರೆ ಇಂಥಾ ಕನಸು ಹೇಗೆ ಬೀಳುತ್ತೆ? ಜಗತ್ತಿನ ಎಲ್ಲವೂ ದಿವದ ಸ್ಪರ್ಷಕ್ಕಾಗಿ ಕಾಯುವಾಗ ಇದ್ಯಾವುದರ ಮುನ್ಸೂಚನೆಯೇ? ಮುನ್ಸೂಚನೆ ಎನ್ನುವ ಪದ ನನಗೆ ಹೊಳೆದದ್ದೇ ಎದೆಯಲ್ಲಿ ವಿಚಿತ್ರ ತಲ್ಲಣವೊಂದು ಶುರುವಾಗಿಬಿಟ್ಟಿತು. ನನ್ನ ಅನ್ಯಮನಸ್ಕತೆಯನ್ನು ಶ್ಯಾಮು ಗಮನಿಸಿದ್ದಳು. `ಮನಸ್ಸು ವಿಚಿತ್ರ ತೇಜೂ, ನಾನು ಹಕ್ಕಿಯಾಗುವೆ ನನಗೊಂದು ಆಕಾಶ ಬೇಕು ಕೊಡು ಎನ್ನುತ್ತೆ. ಆಕಾಶ ಸಿಕ್ಕ ಮೇಲೆ ಅಹಂಕಾರಕ್ಕೆ ತಿರುಗುತ್ತೆ. ಮತ್ತೆ ನನ್ನಲ್ಲಿ ಅಹಂಕಾರ ಕಂಡರೆ ತಿದ್ದು ಎನ್ನುವ ಪ್ರಾರ್ಥನೆಯೊಂದೇ ದಾರಿ. ಆದರೆ ಒಮ್ಮೆ ಅಹಂ ಬಂದು ಬಿಟ್ಟರೆ ಒಳಗೆ ಪೊಳ್ಳೆದ್ದು ಹೋದ ಹೊಳೆವ ಕಾಳಿನ ಹಾಗೆ- ಬೇಯಿಸುದಲ್ಲದೆ ಒಳಗಿರುವ ಹುಳ ಮೇಲೆ ತೇಲುವುದೇ ಇಲ್ಲ. ಅಂಥಾ ಬೇಳೆಯನ್ನು ತಿನ್ನಲಾದೀತೇ? ಅಭಿಮಾನ ಪ್ರೀತಿ ಎಲ್ಲವೂ ಒಳಗೆ ಇರಲಿ ಸಾಕು. ಮೇಲೆ ನಾವೆನೆಂದುಕೊಳ್ಳುತ್ತೇವೋ ಅದು ಇರಲೇ ಬೇಕು ಅಂತ ಅಲ್ಲ. ಆದರೆ ಆಳದ ಪದರಗಳಲ್ಲಿ ಅಡಗಿಕೊಂಡಿದ್ದನ್ನು ಸ್ವತಃ ನಾವೇ ಕಂಡುಕೊಳ್ಳಲಾರೆವು. ಸಾಮರಸ್ಯ ಎನ್ನುವುದು ಎರಡು ಸಮಾನಾಂತರ ರೇಖೆಗಳೇ. ಸ್ನೇಹವಾದರೂ ಅಷ್ಟೇ ದಾಂಪತ್ಯವಾದರೂ ಅಷ್ಟೆ. ಸೇರಿದರೆ ಪುಣ್ಯ; ಸೇರದಿದ್ದರೆ ಎರಡು ದಂದೆಯ ಮಧ್ಯೆ ಆವೇಶಕ್ಕೆ ಸಿಕ್ಕ ನದಿಯ ಓಟ. ಎಷ್ಟೋ ಸಲ ಹೊರ ಬಂದ ಮಾತುಗಳಿಗೆ ನಾವೇ ಅಚ್ಚರಿ ಪಡುವುದಿದೆಯಲ್ಲ ಇದು ನನ್ನೊಳಗೇ ಇತ್ತಾ ಎಂದು? ಮನಸ್ಸನ್ನು ಒಳ್ಳೆಯದಾಗಿಟ್ಟುಕೊಳ್ಳುವುದು ಕಡುಕಷ್ಟ’ ಎಂದಿದ್ದಳು. ಈಗ ಇನ್ನೂ ಕಷ್ಟ, ನಾನು ಹೇಗೆ ಹೇಳಲಿ ಅವಳಿಗೆ ನಾನಿಂಥದ್ದೊಖಂದು ಕನಸನ್ನು ಕಂಡೆ; ಅದೂ ನಿನ್ನ ಬಗ್ಗೆ ಅಂತ! ಹೇಳಿದ್ದರೂ ಅವಳು ನಕ್ಕು, `ಅಂತೂ ನನಗೊಬ್ಬ ಲವ್ವರ್ ಅನ್ನು ನಿನಗೆ ಕನಸಿನಲ್ಲಾದರೂ ಕಾಣಲು ಸಾಧ್ಯವಾಯಿತಲ್ಲಾ! ಅದೂ ವಯಸ್ಸಿನಲ್ಲಿ ಚಿಕ್ಕವ !!’ ಎಂದು ಹಗುರವಾಗಲೂ ಬಹುದೇನೋ. ಇದೆಲ್ಲಾ ನನ್ನ ಊಹೆಯೇ ಹೊರತು ನೆಲದ ಆಳದಲ್ಲಿರುವ ಬೇರುಗಳು ಉಸಿರಾಡುತ್ತವೆ ಎನ್ನುವುದನ್ನು ಹೇಗೆ ತೋರಿಸುವುದು ಅಲ್ಲವಾ?

ಹಾಗೆ ಬಯಸಿದ್ದರೆ ಶ್ಯಾಮುಗೆ ಒಬ್ಬ ಪ್ರೇಮಿ ಸಿಗುವುದು ಕಷ್ಟವಿರಲಿಲ್ಲ. ಅವಳ ಕಲೆಗೆ, ಕೀರ್ತಿಗೆ, ಅವಳ ಆಲೋಚನೆಯ ಎತ್ತರಕ್ಕೆ ಈಗಲೂ ಅಸಾಧ್ಯ ಅಂತ ಅನ್ನಿಸುತ್ತಿಲ್ಲ. ಅವಳು ಮನಸ್ಸು ಮಾಡಲಿಲ್ಲವಾ? ಅಥವಾ ಸಂದರ್ಭ ಅವಳಿಗೆ ಒದಗಿಬರಲಿಲ್ಲವಾ? ಅಥವಾ ಚಂದ್ರನನ್ನು ಅವಳ ಮನಸ್ಸು ಪೂರ್ಣವಾಗಿ ಆವಾಹಿಸಿಕೊಂಡು ಬಿಟ್ಟಿತ್ತಾ? ನಾನೂ ಅವಳೂ ಪಕ್ಕ ಪಕ್ಕ ನಿಂತರೆ ವಯಸ್ಸಿನಲ್ಲಿ ನಾನೇ ದೊಡ್ಡವಳೇನೋ ಅನ್ನಿಸುತ್ತದೆ. ಹಾಗೆಂದು ಯಾರಾದರೂ ಅಂದರೆ ಅವಳಿಗೆ ಕಸಿವಿಸಿ. ಇಬ್ಬರೂ ಒಂದೇ ವಯಸ್ಸಿನವರು, ಕ್ಲಾಸ್‌ಮೆಟ್ಸ್ ಎಂದು ತಿದ್ದುತ್ತಿದ್ದಳು. `ನಾನು ಇರಲಿ ಬಿಡು ಶ್ಯಾಮು, ನಿನ್ನ ಕಲೆ, ನಿನ್ನ ಯೋಚನೆಗಳನ್ನು ನಾನು ಮೀರಿ ಹೋಗಲಾರೆ. ಹೀಗಾದರೂ ನಾನು ನಿನಗಿಂತ ದೊಡ್ಡವಳು ಎನ್ನಿಸಿಕೊಳ್ಳುವೆ’ ಎನ್ನುತ್ತಿದ್ದೆ.

`ನಮಗ್ಯಾಕೆ ವಯಾಸ್ಸಾಗಾಬೇಕು? ವಯಸ್ಸು ಆಗಬಾರದು ತೇಜೂ ಹಾಗೆ ನೋಡಿಕೊಳ್ಳಬೇಕು. ಮನಸ್ಸಿನ ತಾರುಣ್ಯ ಮುಖ್ಯ’ ಎನ್ನುತ್ತಿದ್ದಳು. ಅವಳ ಮಾತುಗಳಲ್ಲಿ ಯಾವಾಗಲೂ ನನ್ನ ನಾನು ಹುಡುಕತೊಡಗುತ್ತಿದ್ದೆ.

ಅದೆಲ್ಲಾ ಇರಲಿ ನನ್ನ ಬಿಡದೆ ಕಾಡುತ್ತಿರುವ ಸಂಗತಿ ಎಂದರೆ ನನಗೆ ಆ ಕನಸು ಯಾಕೆ ಬಿತ್ತು? ಅದು ನನಗೆ ಬೀಳಬೇಕಾದ ಕನಸೇ? ಅಥವಾ ಸ್ವತಃ ಶ್ಯಾಮು ಕಾಣಬೇಕಾದದ್ದೆ. ಅಥವಾ ಹೀಗೆ ಅವಳ ಬಗ್ಗೆ ಮಾತಾಡುತ್ತಾ ಆಡುತ್ತಾ ನಾನು ಶ್ಯಾಮುವೇ ಆಗಿಬಿಟ್ಟೆನೇ? ಅರೆ! ಇದೇನು ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ? ನಾನ್ಯಾಕೆ ಶ್ಯಾಮು ಆಗಬೇಕು? ಅವಳು ನನ್ನನ್ನು ಅಷ್ಟು ಪ್ರಭಾವಿಸಿದಳೇ?!

ಏಣಿಯೊಂದರ ಮುಂದೆ ನಿಂತು ಯೋಚಿಸುತ್ತಿದ್ದ ಶ್ಯಾಮು, ತನ್ನ ಪುಟ್ಟ ಲಂಗವನ್ನು ಕೆಳಗಿನವರಿಗೆ ತನ್ನ ದೇಹದ ಕಾಣಬಾರದ ಏನನ್ನೂ ತೋರಿಸದಿರುವಂತೆ ಕಾಲಿಗೆ ಸುತ್ತಿಕೊಳ್ಳಲು ನೋಡುತ್ತಿದ್ದಾಳಾ? ಎನ್ನುವಂತಿದ್ದ ಆ ಚಿತ್ರ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಇಲ್ಲ ಅವಳು ಅದನ್ನು ಯೋಚಿಸಿರಲಿಲ್ಲ. ಅವಳು ಮನೆಯ ಮಾಡಿಗೆ ಒರಗಿಸಿದ್ದ ಆ ಏಣಿಯನ್ನು ಹತ್ತಲು ನೋಡಿದ್ದು ಕೂಡಾ ಒಂದು ಆಕಸ್ಮಿಕವೇ. ನಮಗೋ ಹಸಿ ಸಂಡಿಗೆ ಒಣಗಲು ಆರಂಭಿಸಿದಾಗ ಅದನ್ನು ತಿನ್ನುವ ಚಪಲ. ಸೂರ್ಯ ತನ್ನ ತೀಕ್ಷ್ಣ ಕಿರಣಗಳಿಂದ ಅದನ್ನು ಒಣಗಿಸುವಾಗ ಅದರಿಂದ ಘಮಲೊಂದು ತಾನೇ ಬಿಡುಗಡೆಗೊಳ್ಳುತ್ತದೆಯೇನೋ? ಯಾರಿಗೆ ಗೊತ್ತು ಬಾಲ್ಯದ ರುಚಿಗಳು! ಈಗ ನೆನೆಸಿಕೊಂಡರೆ ಅದಕ್ಕಾಗಾ ನಾವು ಅಷ್ಟೆಲ್ಲಾ ಪಡಿಪಾಟಲು ಪಡುತ್ತಿದ್ದುದು! ಎಂದು ಅಚ್ಚರಿಯಗುತ್ತದೆ. ಆದರೂ ಈಗಲೂ ಆ ರುಚಿಯನ್ನು ಹುಡುಕುತ್ತೇವೆ ಸಿಗುವುದಿಲ್ಲ ಎನ್ನುವುದು ವಿಷಾದವೋ, ವಾಸ್ತವವೋ ಗೊತ್ತಾಗುವುದಿಲ್ಲ. ಹೀಗೆ ಅರ್ಧ ಒಣಗಿದ ಸಂಡಿಗೆ ಕಾಯುತ್ತಾ, ತಿನ್ನುತ್ತಾ ಕುಳಿತ ನಮಗೆ ಅಮ್ಮ ಕೊಟ್ಟ ಎಚ್ಚರಿಕೆ ಮರೆತೇ ಹೋಗಿತ್ತು. ಒಣಗುತ್ತಿರುವ ಸಂಡಿಗೆಯ ತಿನ್ನುವ ನಮ್ಮ ಸಂಭ್ರಮದಲ್ಲಿ ನಾಲ್ಕು ಭಾಗವಾಗಿದ್ದ ಅಮ್ಮನ ಕಾಟನ್ ಸೀರೆಯ ಅಂಚುಗಳಲ್ಲಿ ಸರಿದು ಹೋದ ಕಲ್ಲುಗಳು ಗಮನಕ್ಕೇ ಇರಲಿಲ್ಲ. ಅಷ್ಟರಲ್ಲಿ ಕಾಗೆಯೊಂದು, `ನೀವು ಮಾತ್ರವಾ ನಾನೂ ತಿನ್ನುವೆ’ ಎನ್ನುತ್ತಾ ಬಂತು. `ಕೊಡ್ತೀವಿ ಬಾ, ಆಸೆ ದೋಸೆ ಹಪ್ಪಳ’ ಎಂದು ಕಂಕುಳಿಗೆ ಕೈಹಾಕಿ ಮೊಳಕೈಯ್ಯನ್ನು ಮೇಲೆತ್ತಿ ಸುತ್ತಿ ಅಣಕಿಸುತ್ತಾ, ಗದರುತ್ತಾ ಓಡಿಸಿದೆವು. ನಮ್ಮ ಪೌರುಷಕ್ಕೆ ಬೆದರಿ, ಆದರೆ ತಿನ್ನುವ ಆಸೆಯನ್ನೂ ಬಿಡದ ಅದು ತನ್ನ ಕೊಕ್ಕಲ್ಲಿ ಸಂಡಿಗೆಯ ಸೀರೆಯ ತುಂಡನ್ನು ಎಳೆದುಕೊಂಡು ಮೇಲೆಕ್ಕೆ ಹಾರಿಯೇ ಬಿಟ್ಟಿತ್ತು. ಸರ್ವ ಪ್ರಯತ್ನ ಮಾಡಿ ಮಾಡಿಂದ ಅದನ್ನು ಬೆದರಿಸಿ ಓಡಿಸಿದ್ದೇನೋ ಆಯ್ತು. ಆದರೆ ಮಾಡಿನ ಮೇಲೆ ಬಿದ್ದ ಸಂಡಿಗೆಯ ಸೀರೆಯನ್ನು ತೆಗೆದುಕೊಳ್ಳುವುದು ಹೇಗೆ? ಯಾವುದಕ್ಕಾದರೂ ನನಗಿಂತ ಧೈರ್ಯ ಮಾಡಬಲ್ಲವಳು ಶ್ಯಾಮು ಒಬ್ಬಳೇ. ಹೀಗೆ ಅವಳು ನಿಂತದ್ದು ಏಣಿಯ ಮುಂದೆ.

ಅವಳೆಲ್ಲಿ ಏಣಿಯನ್ನು ಚಿತ್ರ ಮಾಡಿಕೊಂಡು ವಿರಮಿಸುತ್ತಾಳೋ ಎನ್ನುವ ಭಯ. ಅಷ್ಟರಲ್ಲಿ ಅಮ್ಮ ಬಂದು, `ಕಾವಲು ಕಾಯೋಕ್ಕಾಗಲ್ಲ ನಿನಗೆ, ಇನ್ನು ಸಂಡಿಗೆ ಕೊಡ್ತೀನಾ’ ಅಂತ ಬೈದರೆ? ಬೈಯ್ಯುವುದಕ್ಕಿಂತ ನಾಲಿಗೆಯ ಮೇಲೆ ಕರಗಿ ಹೋಗುವ ಸಂಡಿಗೆ ಇಲ್ಲವಾಗುವ ಭೀತಿ. `ಶ್ಯಾಮು ಹತ್ತೇ ಬೇಗ’ ಎಂದೆ. ನನ್ನೆಡೆಗೆ ನೋಡುತ್ತಾ ನಕ್ಕ ಅವಳ ಹಲ್ಲುಗಳು ಎಂದಿಗಿಂತ ಹೆಚ್ಚಾಗೇ ಹೊಳೆದವು. `ಇನ್ನೂ ಏನೇ ಯೋಚಿಸ್ತಾ ಇದೀಯಾ?’ ಎಂದೆ. ಅವಳು ತನ್ನ ಮುಖದಲ್ಲಿ ಯಾವುದೋ ಸತ್ಯ ಕಂಡುಕೊಂಡವಳಂತೆ, `ಈ ಮೆಟ್ಟಿಲು ವಿಚಿತ್ರ’ ಎಂದಳು. ನನ್ನೊಳಗೆ ಅಸಹನೆ ಕಟ್ಟೆ ಒಡೆಯುವ ಹಂತ ತಲುಪಿತ್ತು. ಇವಳೆ ಒಂದು ವಿಚಿತ್ರ! ಇವಳಿಗೆ ಎಲ್ಲದರಲ್ಲೂ ಏನೋ ಕಾಣುತ್ತೆ ಅದ್ಭುತ! ಯಪ್ಪಾ ದೇವರೇ, ಇವಳು ಹತ್ತಿ ಆ ಸಂಡಿಗೆಯ ಸೀರೆಯನ್ನು ತೆಗೆಯುವ ಮೊದಲು ಅಮ್ಮ ಯಾವ ಕಾರಣಕ್ಕೂ ಬರದೇ ಇರಲಿ, ಇಪ್ಪತ್ತೊಂದು ನಮಸ್ಕಾರ ಹಾಕಿ ಬಿಡುವೆ ಎಂದು ಬೇಡಿಕೊಂಡಿದ್ದೆ, `ಮೊದಲ ಮೆಟ್ಟಿನ ಮೇಲೆ ಕಾಲಿಡು, ಅದು ಮುಂದಿನದಕ್ಕೆ ಸೆಳೆಯುತ್ತದೆ. ಮೆಟ್ಟಿದ ಮೊದಲ ಮೆಟ್ಟಿಲು ಮರೆತೇ ಹೋಗುತ್ತೆ. ಕೊನೆಯ ಮೆಟ್ಟಿಲು ಹತ್ತಿದಾಗಲೇ ಮೊದಲ ಮೆಟ್ಟಿಲು ನೆನಪಾಗೋದು. ಇನ್ನೇನು ಇಳೀಬೇಕು ಆಗ ಶುರುವಾಗುತ್ತೆ ನೋಡು ಸಣ್ಣ ನಡುಕ.

ಹತ್ತುವಾಗಿನ ದೃಡತೆ ಇಳಿವಾಗ ಇರೊಲ್ಲ ಆಗ ಮೊದಲ ಮೆಟ್ಟಿಲು ಯಾವಾಗಪ್ಪಾ ಸಿಗುತ್ತೆ ಎನ್ನಿಸಿಬಿಡುತ್ತೆ. ನಿನಗೆ ಗೊತ್ತಾ ಆಹೊತ್ತಲ್ಲಿ ಅದು ಗ್ರೆಯಾಗೋ ಚಿತ್ರವಾಗೋ ಅನ್ನಿಸಲ್ಲ ಜೀವ ಅನ್ನಿಸಿಬಿಡುತ್ತೆ’ ಎಂದಿದ್ದಳು. ಕ್ರಾಂತಿಯೊAದು ಕಣ್ಬಿಟ್ಟ ಅಚ್ಚರಿ ಅವಳಲ್ಲಿತ್ತು. ಅಚ್ಚರಿಗೇನು? ಅವಳ ಹುಟ್ಟಿನಿಂದಲೇ ಅದು ಅವಳೊಂದಿಗೆ ಬಳುವಳಿಯಾಗಿ ಬಂದುಬಿಟ್ಟಿತ್ತೋ ಏನೋ. ನಾಯಿ ಬೊಗಳಿದರೂ, ಹಸು ನೀರು ಕುಡಿದರೂ, ಹಕ್ಕಿ ಹಾರಿ ಹೋದರೂ ಎಲ್ಲವೂ ಅಚ್ಚರಿಯೇ. ಕುಡಿದ ನೀರು ಉಚ್ಚೆಯಾಗಿ ಹೊರಬರುತ್ತಲ್ಲ ಹೇಗೆ? ಎನ್ನುತ್ತಿದ್ದಳು. `ಶಿವ ಶಿವಾ ಶುದ್ಧ ಬ್ರಾಹ್ಮಣರ ಮನೆಯ ಹುಡುಗಿ ನೀನು, ಅದೆಲ್ಲಾ ಮಾತಾಡಬಾರದು’ ಎಂದು ಹೇಳಿದ್ದಕ್ಕೆ, `ಅಶುದ್ಧ ಬ್ರಾಹ್ಮಣತಿ ಆಗುವೆ ಬಿಡು’ ಎಂದು ನನ್ನ ಅಣಕಿಸಿದ್ದಳು. ಯಾವುದು ಮಾತಾಡಬಾರದು ಮಾತಾಡಬೇಕು ಎನ್ನುವುದು ಅವಳಿಗೆ ಗೊತ್ತಾಗುತ್ತಲೇ ಇರಲಿಲ್ಲ. ಅಥವಾ ಅವಳದ್ದು ಆಯ್ಕೆಯ ಸಮಸ್ಯೆಯೋ?! ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಪ್ರಶ್ನೆ ಕೇಳಿಬಿಡುತ್ತಿದ್ದಳು. `ಅಯ್ಯೋ ಮಾರಾಯ್ತಿ ಮೊದಲು ಸಂಡಿಗೆ ಸೀರೆ ತೆಗೆದುಕೊಡು ಆಮೇಲೆ ಮಿಕ್ಕಿದ್ದು’ ಎಂದಿದ್ದೆ. ದುರಾದೃಷ್ಟ ನಮ್ಮನ್ನು ಅಲ್ಲಿಯೂ ಬೆನ್ನಟ್ಟಿ ಬಂದಿತ್ತು. ಸಂಡಿಗೆ ಸೀರೆ ಎಳೆದುಕೊಂಡು ಇಳಿವಾಗ ಅಮ್ಮ ಬಂದು ಬಿಟ್ಟಿದ್ದಳು. `ಕಾಗೆ ಮುಟ್ಟಿದ ಸಂಡಿಗೆಯನ್ನು ತಿನ್ನುವುದೇ? ಸರಿಯಾಗಿ ನೋಡಿಕೊಳ್ಳಲಾಗದೆ ಎಲ್ಲವನ್ನೂ ಹಾಳು ಮಾಡಿಬಿಟ್ಟೆ’ ಎಂದು ಬೈದಿದ್ದಳು. ನನಗೂ ಶ್ಯಾಮುಗೂ ಅವತ್ತು ಜಗಳ ಆಗಿಬಿಟ್ಟಿತ್ತು. `ನೀನು ಯೋಚನೆ ಮಾಡದೆ ಮೊದಲೇ ಸೀರೆ ತೆಗೆದುಬಿಟ್ಟಿದ್ದರೆ ಅಮ್ಮನಿಗೆ ಗೊತ್ತೇ ಆಗ್ತಾ ಇರಲಿಲ್ಲ. ಎಲ್ಲಾ ಆಗಿದ್ದು ನಿನ್ನಿಂದ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡಿದ್ದೆ. ಶ್ಯಾಮುವಿಗೂ ಅದು ಕೆಟ್ಟದೆನ್ನಿಸಿರಬೇಕು, `ನಾನೇನೇ ಮಾಡ್ಲಿ? ನನ್ನ ಸಮಸ್ಯೆಯೇ ಇದು. ನೀನು ಏನು ನೋಡು ಅಂದ್ರೆ ನನಗೆ ಅದಲ್ಲಿ ಕಾಣೊಲ್ಲ. ನನ್ನ ಯೋಚನೆಯೂ ಹಾಗೇ. ನನಗೊಬ್ಬಳಿಗೇ ಹೀಗೆ ಅನ್ನಿಸೋದು ಅನ್ನೋ ಹಾಗೆ ನಿಂತು ಬಿಡುತ್ತೇನೆ’ ಎಂದು ತನ್ನ ಬಗ್ಗೆ ತಾನೇ ಬೇಸರಿಸಿಕೊಂಡಿದ್ದಳು. ಆಗ ನನಗೆ ಅವಳ ಬಗ್ಗೆ ಪಾಪ ಅನ್ನಿಸಿತ್ತು.

ಹೌದು ಎಷ್ಟೋ ಸಲ ಅವಳು ಯಾವ ಯಾವುದರ ಮುಂದೋ ನಿಂತಿದ್ದಳು. ಕೆಲವೊಮ್ಮೆ ಅದೇ ಅವಳ ಕಡೆಯ ನಿಲ್ದಾಣವೇನೋ ಎನ್ನುವ ಹಾಗೆ. ತಪ್ಪಿ ಹೋದ ಗೆರೆಯನ್ನು ಹುಡುಕಿ ತರುವವಳಂತೆ ಎದೆಯ ಮೇಲಿನ ಆಸೆಯ ಹೂವ ಜಡೆಯನ್ನು ಪಟ್ಟೆಂದು ಹಿಂದಕ್ಕೆ ಎಸೆದುಕೊಂಡು, ಎಸೆದ ತಕ್ಷಣ ಜಡೆಯಿಂದ ಹರಿದು ನೆಲದ ಮೇಲೆ ಚೆಲ್ಲಿದ ಹೂವಿನ ಕೊಂಡೆಯಿಂದ ಜಾರಿದ ಎಸಳ ಮೇಲೆ ಕಾಲಿಟ್ಟೂ ಹೋಗಿಬಿಟ್ಟಿದ್ದಾಳೆ. ಅವಳ ಅಂಥಾ ಸಂಬಂಧವೊಂದು ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತಾ? ಅಂದು ಬೆಳಕಿನ ಹಾಗೆ ಪ್ರಸರಿಸಿದ ಶ್ಯಾಮುವಿನ ಭಾವಕೋಶಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಚದುರಿ ಬಿದ್ದಂತಿತ್ತು. ಆ ಚೂರಾದ ಬೆಳಕು ಅವಳ ಕಣ್ಣ ಹನಿಯಲ್ಲಿ ಫಲಿಸಿ ವಜ್ರವಾಗಿಸಿದ್ದನ್ನು ನಾನು ಬಲ್ಲೆ. ಅವಳ ಆ ಉತ್ಕಟೇಚ್ಚೆಯನ್ನು ಹಾಗೆ ಪಕ್ಕಕ್ಕೆ ಸರಿಸಿ ಸಮಾಧಾನದಿಂದ ನಡೆದು ಹೋದದ್ದನ್ನು ಕೂಡಾ.

ಆಕಸ್ಮಿಕವಾಗಿ ಕೆಲವರು ಒಳಗೆ ಬರುತ್ತಾರೆ. ಬಂದವರು ಜೀವಕ್ಕೆ ಅನಿವಾರ್ಯವಾಗುತ್ತಾರೆ ನಮಗೇ ಗೊತ್ತಿಲ್ಲದಂತೆ ಬದುಕಿನ ಭಾಗವಾಗಿ ಎಲ್ಲವನ್ನೂ ಬದಲಿಸುತ್ತಾರೆ. ಜೀವವೊಂದು ಛಿದ್ರವಾಗುವ ಮುನ್ನ ಹೇಳಿದ ಮಾತೇ ಇದು. ಹೌದು ಮೊಣಕಾಲೂರಿದ ಅವನ ಮಂಡಿಯಲ್ಲಿ ರಕ್ತ ಒಸರುತ್ತಿತ್ತು. ನಡೆದು ಹೋದ ಶ್ಯಾಮುವಿನ ಹೆಜ್ಜೆ ಗುರುತಿಗೆ ಅವನು ಮುತ್ತಿಟ್ಟಿದ್ದ. ಅರೆ ಹೀಗೆ ಪ್ರೀತಿಸುವುದು ಸಾಧ್ಯವಾ? ಅವನ ತೀವ್ರತೆಗೆ ನಾನು ಸೋತಿದ್ದೆ. ಪ್ರೇಮಕ್ಕೆ ತಲೆ ಬಾಗುವುದೊಂದೇ ಗೊತ್ತಿದೆ ಎಂದರೆ ಅದು ಗಿರಿಯೇ ಇರಬೇಕು. `ಶ್ಯಾಮು ಇಂಥಾ ಹುಡುಗ ಸಿಗಲಾರ’ ಎಂದೆ. ಕಸಿವಿಸಿಗೊಂಡು, `ನೀನೇ ಪ್ರೀತಿಸು’ ಎಂದಳು. ಸಿಕ್ಕಾದ ರೇಖೆಗಳು ಬಿಡಿಸಲಾರದ ಕಗ್ಗಂಟಾದಾಗ ಒಳಗೆ ಜೀವ ಹಿಸುಗಿದಂತಾಗಿ ತಿರುಗಿ ನೋಡಿದ್ದೆ. ಅವನು ಅವಳಿಗಾಗಿ ಕಾಯುತ್ತಲೆ ಇದ್ದ. ಈಗಲೂ ನನಗೆ ಅನ್ನಿಸುತ್ತಿದೆ ಅವನು ಇನ್ನೂ ಕಾಯುತ್ತಲೇ ಇದ್ದಾನೆ ಎಂದು. ಅರೆ ಗಿರಿ ನೆನಪಾದ ತಕ್ಷಣ ಕನಸಲ್ಲಿ ಸತ್ತ ಹುಡುಗನ ಮುಖ ಚಹರೆಗಳೆಲ್ಲಾ ಸ್ಪಷ್ಟವಾಗುತ್ತಿದೆ! ನಿಜ ಅದು ಅವನೇ... ಅವನೇ ...

ಶ್ಯಾಮುವನ್ನು ಉತ್ಕಟವಾಗಿ ಪ್ರೀತಿಸಿದವ. ತುಟಿಗೆ ತುಟಿಯೊತ್ತಿ ಆ ಉಸಿರಲ್ಲೇ ಜೀವಿಸಬೇಕೆಂದು ಭಾವಿಸಿದವ. ಎಂದಾದರೊಮ್ಮೆ ಅದನ್ನು ಕೇಳಿದರೆ ಶ್ಯಾಮು ನಗುತ್ತಿದ್ದಳು, `ಇನ್ನೂ ನೀನವನನ್ನು ಇನ್ನೂ ನೆನಪಿಟ್ಟುಕೊಂಡಿದ್ದೀಯಾ? ಆದರೆ ನನಗೆ ಸ್ಪಷ್ಟವಾಗಿ ಗೊತ್ತು ಅದು ನನ್ನ ಪಾಲಿನ ತುತ್ತಲ್ಲ. ಎಷ್ಟು ಸಲ ಹೇಳಿಬಿಟ್ಟ ನಾನು ನಿನ್ನ ಪ್ರೀತಿಸುವೆನೆಂದು. ಯಾಕೋ ಈಗಲೂ ನನಗನ್ನಿಸುವುದು ಇಲ್ಲದಿರುವುದನ್ನು ತಾನೆ ಉಸುರುವುದು’ ಎಂದು.

ನನಗೆ ಅವಳ ಈ ಮಾತುಗಳು ಒಗಟೇ. ನಾನಾಗಿದ್ದರೆ ಅಂಥಾ ಹುಚ್ಚನನ್ನು ಎಂದೂ ಬಿಡುತ್ತಿರಲಿಲ್ಲ. ಅವನ ಪ್ರೇಮದಲ್ಲಿ ಮುಳುಗೆದ್ದು, ಎದೆಗವಚಿಕೊಂಡು ಜನ್ಮ ಪೂರ್ತಿ ಇದ್ದುಬಿಡುತ್ತಿದ್ದೆ. ತಾನು `ವಿವರಣೆಗೇ ಸಿಲುಕದ ಬೆಳಕು ನನ್ನ ಸುತ್ತಾ, ಪ್ರತಿಕ್ಷಣವೂ ತೀವ್ರ ಪ್ರತಿ ಹೆಜ್ಜೆಯೂ ನವಿರು, ಪ್ರತಿ ಭಾವವೂ ವಿನಮ್ರ ಆದರೆ ದೃಢ’ ಎಂದುಕೊಳ್ಳುವ ಅವಳಿಗೆ ಯಾಕೆ ಗಿರಿ ತೀವ್ರ ಅನ್ನಿಸಲಿಲ್ಲ?! `ಅವನೊಬ್ಬ ಹುಚ್ಚು ಹುಡುಗ ಅಷ್ಟೇ. ಯಾರಿಂದಾಲೂ ನನ್ನ ಬಗ್ಗೆ ಆರಾಧನೆ ಬೇಡ. ನನ್ನ ಹೆಜ್ಜೆ ಗುರುತಿಗೆ ಮುತ್ತಿಡುವ ಬದಲು ನನ್ನ ತೋಳುಗಳಲ್ಲಿ ಎಳೆದು ನನ್ನ ಅಪ್ಪಣೆಯನ್ನೂ ಕೇಳದೆ ತುಟಿಗಳನ್ನು ಒಂದಾಗಿಸಿದ್ದರೆ, ವಾಂಛೆಯನ್ನು ಹುಟ್ಟಿಸುವ ನನ್ನ ಹೊಕ್ಕಳಿನ ಆಳಕ್ಕೆ ಕೈ ಹಚ್ಚಿ ಹಿಸುಕಿದ್ದರೆ... ಎದೆಗೆ ತುಟಿಯೊತ್ತಿ ಇಡೀ ಜಗತ್ತನ್ನೇ ಹಾಡಾಗಿಸಿ ಬಿಟ್ಟಿದ್ದರೆ... ನಾನು ಅವನಿಗೆ ಒಲಿಯುತ್ತಿದ್ದೆನೇನೋ...’

ತೀವ್ರತೆ ಎಂದರೆ ಇದಾ... ತಗ್ಗಿದ ಅವಳ ತಲೆಗೂದಲುಗಳಲ್ಲಿ ಗಾಳಿ ಅಲೆಯಾಡುತ್ತಿದೆ. ಗಿರಿ ಸತ್ತು ಈಗ್ಗೆ ಇಪ್ಪತ್ತೆಂಟು ವರ್ಷಗಳಾಗಿವೆ. ನಾನೂ ಮರೆತಿದ್ದೆ. ಕನಸು ಬಿದ್ದು ಬಹುಶಃ ನಾನಾಗಿ ನೆನಪಿಸಿದೇ ಹೋದರೆ ಶ್ಯಾಮು ಕೂಡಾ ನೆನಪಿಸಿಕೊಳ್ಳಲಾರಳು. ಆದರೆ ಈಗ ಇದ್ದಕ್ಕಿದ್ದ ಹಾಗೆ ಯಾಕೆ ನೆನಪಾದ? ಅವನು ಅವಳೆಲ್ಲಾ ಸಮಸ್ಯೆಗೂ ಪರಿಹಾರವಾ? ಅರಳುವ ಹೂವಿನ ದಳಗಳನ್ನು ಆಸ್ತೆಯಿಂದ ಮಾಡಿದ ಆ ಅದು ಬಿಸಿಲಿಗೆ ನಿರ್ದಯವಾಗಿ ಒಣಗು ಎಂದು ಹೇಳಿದ್ದು ಯಾಕೆ? ಗಿರಿಯ ಜೊತೆ ಅವಳ ಸಂಬಂಧ ಚಂದ್ರನಿಗಿಂತಲೂ ಚೆನ್ನಾಗಿರುತ್ತಿತ್ತು ಎನ್ನುವುದು ನನ್ನ ಭ್ರಮೆಯೇ? ಶ್ಯಾಮು ಹುಂ ಎಂದಿದ್ದರೆ ಗಿರಿ ಬದುಕುತ್ತಿದ್ದನಾ? ನನ್ನ ಪ್ರಮೇಯಾತ್ಮಕ ಪ್ರಶ್ನೆಗಳನ್ನು ಅವಳು ಕೇಳಿದ್ದರೆ, `ನಾನು ನೆನಪಿಟ್ಟುಕೊಳ್ಳುವ ಸಂಗತಿಗಳು ಇದೆಲ್ಲಾ ಅಲ್ಲ ಕಣೆ’ ಎಂದು ಪಕ್ಕಕ್ಕೆ ತಳ್ಳುತ್ತಿದ್ದಳೇನೋ.

ಆದರೆ `ನೀನು ಸುಮ್ಮನೆ ಹುಂ ಎನ್ನು ಜಗತ್ತಿನ ಎಲ್ಲ ಗೆರೆಗಳೂ ಅಳಿಸಿಹೋಗುತ್ತದೆ’ ಎಂದು ಶ್ಯಾಮು ಬೇಡಿಕೊಂಡಿದ್ದು ಚಂದ್ರನಲ್ಲಿ. ಅದ್ಯಾವ ಗೆರೆಯ ಬಗ್ಗೆ ಅವಳು ಹೇಳಿದ್ದು?! ಜಾತಿಯದ್ದಾ? ಅಹಮ್ಮಿನದ್ದಾ? `ದೈಹಿಕ ಕಾಂಕ್ಷೆ ಇದ್ದರೆ ಇಬ್ಬರು ಮನುಷ್ಯರು ಬೆರೆಯುವುದು ಸುಲಭ, ಮಹತ್ತಿನ ಎರಡು ಬೆರೆಯುವಾಗ ಎಂಥಾ ಗಂಭೀರ! ಜಗತ್ತಿನಲ್ಲಿ ಏನೆಲ್ಲಾ ನಡೆಯುತ್ತೆ ಅಂತ ನೀನು ನೋಡಬೇಕು’ ಎಂದಿದ್ದಳು. ಹುಡುಕಿಕೊಳ್ಳಬೇಕು ಚಂದ್ರನಲ್ಲಿ ಇವಳಿಗಿರುವುದು ಆಕರ್ಷಣೆಯಾ? ಜೊತೆಗೆ ಪಯಣಿಸಿದ್ದರ ನೆನಪಾ? ಜೀವನವನ್ನು ಹಂಚಿಕೊಂಡಿದ್ದರ ಬಗ್ಗೆ ಇರುವ ಕೃತಜ್ಞತೆಯಾ? ಯಾಕೋ ಗಿರಿಯ ಪ್ರಖರತೆಯ ಎದುರು ಚಂದ್ರ ಮಂಕಾಗುತ್ತಾ ಬಂದ. ಇದು ತಿಳಿದರೆ ಶ್ಯಾಮು ನನ್ನ ತರಾಟೆಗೆ ತೆಗೆದುಕೊಳೂತ್ತಿದ್ದಳು. ನನ್ನ ಚಂದ್ರನನ್ನು ಯಾರಿಗೂ ಹೋಲಿಸಬೇಡ ಎಂದು.

ಶ್ಯಾಮು ಹೇಳುತ್ತಿದ್ದಳು `ಎರಡು ಸಮುದ್ರಗಳು ಸೇರುವ ಜಾಗದಲ್ಲಿ ಸಂಜೆ ಒಂದು ವಾಸನೆ ಬಿಡುಗಡೆಯಾಗುತ್ತೆ. ಆ ವಾಸನೆ ಹೆವೆನ್ಲಿ ಅನ್ನುವ ಹಾಗಿರುತ್ತೆ. ನಿನ್ನನ್ನು ಒಮ್ಮೆ ಕರೆದೊಯ್ಯುವೆ. ದೊಡ್ಡ ದೊಡ್ಡ ಕ್ರೂಸ್‌ಗಳು, ಸುತ್ತಾ ನೀರು, ಭಿನ್ನ ಬಣ್ಣಗಳ ಎರಡು ಸಮುದ್ರಗಳು, ಗೆರೆಕೊರೆದಂತೆ ಬೇರೆ ಬೇರೆಯಾಗೇ ಉಳಿದಿರುತ್ತವೆ. ಎರಡು ಸಮುದ್ರಗಳು ಸೇರುತ್ತವೆ ಎನ್ನುವುದು ಭ್ರಮೆಯೇ ಎನ್ನುವಂತೆ ನೀರು ಬೆರೆಯುವುದೇ ಇಲ್ಲ. ಸೂರ್ಯ ಮುಳುಗುವಾಗ ಅವನ ನೆರಳು ಆ ಎರಡೂ ಸಮುದ್ರದ ಮೇಲೆ ಬೀಳುತ್ತೆ. ಆಗ ಹುಟ್ಟುತ್ತೆ ನೋಡು ಜಗತ್ತನ್ನು ಸಮ್ಮೋಹನ ಗೊಳಿಸುವ ಆ ವಾಸನೆ! ನಮ್ಮ ಊಹೆಗೂ ನಿಲುಕದ ಜಗತ್ತಿನ ಅತ್ಯಂತ ಮಧುರಾನುಭೂತಿ. ನಾನು ಚಂದ್ರ ಇಬ್ಬರೂ ಅದನ್ನ ಆನಂದಿಸಿದ್ದೀವಿ. ಸಂತೋಷ ಪಡ್ತಾ `ಎರಡು ಸಮುದ್ರಗಳ ಹಾಗೆ ತೋಳಲ್ಲಿ ತೋಳನ್ನು ಬೆರೆಸಿಯೂ ಬೇರೆಯಾಗೇ ಉಳಿದ ಅಸ್ತಿತ್ವಗಳಂತೆ ನಾವು’ ಎಂದಿದ್ದ ಚಂದ್ರನ ಮಾತಿಗೆ ನಾನು ಹುಂಗುಟ್ಟಾಲಾಗದೆ ಹೋಗಿದ್ದೆ. ನನಗೆ ಚಂದ್ರ ನನ್ನೊಳಗೆ ಬೆರೆತ ಉಸಿರು. ಉಸಿರಾಗುವುದು ಎಂದರೆ ಜೀವವನ್ನು ಹಂಚಿಕೊಂಡ ಹಾಗೆ ಅಲ್ಲವಾ? ಎಂದಿದ್ದೆ. ಚಂದ್ರ ನನ್ನ ಕೆನ್ನೆ ತಟ್ಟಿ ವಿಲಕ್ಷಣ ಎಂದು ನಕ್ಕಿದ್ದ. ಈಗಲೂ ನಾನು ಚಂದ್ರನ ಜೊತೆ ಅಲ್ಲಿಗೆ ಹೋಗಬೇಕು ಅದನ್ನು ಅನುಭವಿಸಲಿಕ್ಕೆ, ಚಂದ್ರನ ಅಪ್ಪುಗೆಯಲ್ಲಿ ಕರಗುತ್ತಾ ಆ ವಾಸನೆಯ ಪರಾಕಾಷ್ಠೆಯ ಮುಟ್ಟಲಿಕ್ಕೆ’ ಎಂದಿದ್ದಳು.

`ಎರಡು ಸಮುದ್ರಗಳು ಎಂದಿಗೂ ಸೇರುವುದಿಲ್ಲವಾ ಹಾಗಾದರೆ!’ ಎಂದೆ. ನೀರು ನೀರನ್ನು ಬೆರೆಯದೆ ಹೇಗಿರುತ್ತದೆ ಎನ್ನುವುದು ನನ್ನ ಪ್ರಶ್ನೆ ಆಗಿತ್ತು. `ಹೌದು ಎರಡು ಸಮುದ್ರ ಸೇರುವುದಿಲ್ಲ. ಎರಡು ಮಹತ್ತುಗಳು ಎಂದಾದರೂ ಸೇರಿದ್ದನ್ನು ನೋಡಿದ್ದೀಯಾ? ಮಹತ್ತಿಗಿರುವ ಅಹಮ್ಮೆ ಅದು. ವಿಚಿತ್ರ ಏನು ಗೊತ್ತಾ? ಚಂದ್ರನನ್ನು ಭೇಟಿಯಾಗುವ ಹೊತ್ತಿಗೆ ಅವನಿಗೆ ತಾನು ಮಹತ್ತು ಎನ್ನುವ ಅರಿವು ಮೂಡಿಬಿಟ್ಟಿತ್ತು. ಜಗತ್ತು ಅವನ ಕೈಗಳಿಗೆ ಮುತ್ತನಿಟ್ಟುಬಿಟ್ಟಿತ್ತು. ಮಹತ್ತಿನ ಅರಿವೇ ಇಲ್ಲದ ನಾನು ಅವನನ್ನು ತಾಕಿದೆ. ಅದಾದ ಮೇಲೆ ನನ್ನೊಳಗೆ ಅನಂತವನ್ನು ತಾಕುವ ಹುಕಿ ಹುಟ್ಟಿಬಿಟ್ಟಿತು. ಇಲ್ಲೇ ತಪ್ಪಾಯಿತು ಅನ್ನಿಸುತ್ತೆ’ ಎಂದಳು ಶ್ಯಾಮು ಖೇದದಿಂದ. `ಇಷ್ಟೆಲ್ಲಾ ಆಗಿಯೂ ನಿನಗವನ ಮೇಲೆ ಮೋಹ’ ಎಂದೆ. `ಇದ್ದರೆ ತಪ್ಪೇನೀಗ’ ಎಂದಳು. ಮೊಂಡುತನಕ್ಕೆ ಬಿದ್ದ ಮಗುವಿನ ಹಾಗೆ ಕಂಡಳು. ವಿನಮ್ರವಾಗಿದ್ದ ಅವಳ ಕಣ್ಣುಗಳು ಕಿರಿಕಿರಿ ಎನ್ನುವಷ್ಟು ಹೊಳೆದವು. ನನ್ನ ಪಟ್ಟು ನಾನೂ ಬಿಡಲಿಲ್ಲ. `ಇಲ್ಲ ಈಗಲೂ ನನಗನ್ನಿಸುವುದು ಗಿರಿ ನಿನಗೆ ಸರಿಯಾದ ಜೋಡಿಯಿದ್ದ. ನಿನ್ನ ತೀವ್ರತೆಗೆ ಸ್ಪಂದಿಸುವವನಾಗಿದ್ದ’. ಎಲ್ಲವನ್ನೂ ತಿರಸ್ಕರಿಸುವ ಹಾಗೆ ಶ್ಯಾಮು ನಕ್ಕಳು. ಈಗ ಗತ್ಯಂತರವೇ ಇಲ್ಲ; ಹೇಳಿದೆ, `ನೆನ್ನೆ ಕನಸಿನಲ್ಲಿ ಗಿರಿ ಬಂದಿದ್ದ’.

ಶ್ಯಾಮು ನಕ್ಕಳು ಎಂದೆನಲ್ಲವೇ? ನಕ್ಕವಳ ಮುಖದಲ್ಲಿ ತಟ್ಟೆಂದು ಕಾರ್ಮೋಡವೊಂದು ಸುಳಿದು ಹೋಯಿತು. ಅವಳು ಮಾತಿಗೆ ತಡಕಾಡುವವಳಂತೆ ಕಂಡಳು. ಶಬ್ದವೊಂದು ಶೂನ್ಯವನ್ನು ಮುಟ್ಟಿ ಲಯವಾದ ಹಾಗೆ ಮೆಲ್ಲನೆ ಉಸುರಿದಳು, `ನೆನ್ನೆ ರಾತ್ರಿ ನನ್ನ ಕನಸಲ್ಲೂ ಗಿರಿ ಬಂದಿದ್ದ’. ಜಗತ್ತಿನ ವಿಸ್ಮಯವೊಂದಕ್ಕೆ ನಾನು ಎದುರಾಗಿದ್ದೆ. `ಗಿರಿ ನಿನ್ನ ಕನಸಿಗೆ ಹೇಗೆ ಬಂದ?!’ ಎಂದೆ. ಎಂದಿದ್ದಲ್ಲ ಚೀರಿದ್ದೆ. `ನೀನೇ ಕಳಿಸಿರಬೇಕು ಹೋಗು ಅವಳ ಕನಸಲ್ಲು ಇಣುಕು ಎಂದು’ ಎಂದಳು. ಅವಳನ್ನೆ ದಿಟ್ಟಿಸಿ ನೋಡಿದೆ, ಅವಳ ಕಣ್ಣುಗಳಲ್ಲಿ ನದಿಯ ತಡದಲ್ಲಿದ್ದೂ ಬೊಗಸೆಗೆ ಬಾರದ ನೀರಿನ ಬಗ್ಗೆ ಹಪಹಪಿ ಇತ್ತೇ? `ಈಗ ಕನಸು ಏನು ಬಿತ್ತು’ ಎಂದು ಅವಳು ಕೇಳಿಬಿಟ್ಟರೆ ಎನ್ನುವ ಭಯವಾಯಿತು. ಅವಳು ಕೇಳಲಿಲ್ಲ. ಬದಲಿಗೆ ಅವಳಿಗೆ ಬಿದ್ದ ಕನಸನ್ನು ಹೇಳಿದ್ದಳು.

`ತೇಜೂ ನಾನು ಮಲಗಿ ನಿದ್ದೆ ಮಾಡುತ್ತಿದ್ದೆ. ಅದು ಮಧ್ಯ ರಾತ್ರಿ ಇರಬೇಕು. ನನ್ನ ಕೋಣೆಯ ಫ್ರಂಚ್ ವಿಂಡೋಗಳನ್ನು ತೆರೆದಿಟ್ಟಿದ್ದೆ. ತಣ್ಣಗಿನ ಗಾಳಿ ನನ್ನ ಮೈ ಕೊರೆಯಲಿಕ್ಕೆ ಆರಂಭಿಸಿತು. ಹಾಸಿಗೆಯಿಂದಲೇ ಕಿಟಕಿಗಳನ್ನು ಮುಚ್ಚಲಿಕ್ಕೆ ನೋಡಿದೆ. ಇನ್ನೇನು ಕಿಟಕಿ ಮುಚ್ಚಬೇಕು, ಆಗಲೇ ಅವನನ್ನು ನೋಡಿದ್ದು. ನೆರಳು ನೆರಳಾಗಿದ್ದ ಬರೀ ಔಟ್ ಲೈನ್. ಚಾರ್ಕೋಲ್ ಚಿತ್ರದ ಹಾಗೆ ಕಂಡ. ನನಗವನು ಯಾರೆಂದು ಗೊತ್ತಾಗಿಬಿಟ್ಟಿತ್ತು. ನಾನವನನ್ನು ನೋಡುವುದು ಬೇಡವೆಂದುಕೊಂಡೆ, ನೋಡುವ ಅಗತ್ಯ ನನಗಂತೂ ಇರಲಿಲ್ಲ. ಆದರೆ ಅವನು ಬಿಡಬೇಕಲ್ಲಾ? ಅವನು ಹತ್ತಿರ,…ತುಂಬಾ ಹತ್ತಿರ ಬಂದಿದ್ದ- ಉಸಿರೊಂದು ಬೆಚ್ಚನೆ ಕೆನ್ನೆಯ ಮೇಲಾಡುವಷ್ಟು. ಈಗ ನೋಡುವುದು ಅನಿವಾರ್ಯವೇ ಆದ್ದರಿಂದ ಅವನನ್ನು ದಿಟ್ಟಿಸಿದೆ. ಅವನು ನನ್ನ ನೋಡಿ ನಕ್ಕ. ನಗೆಯೆಂದರೆ ನಗೆಯಲ್ಲ ಆ ನಗೆಯ ತುಂಬಾ ನೋವು ಹರಡಿಕೊಂಡಿತ್ತು. ನಾನು ನಿಧಾನವಾಗಿ ನನ್ನ ಕೋಣೆಯ ಒಂದು ಕಿಟಕಿಯ ಬಾಗಿಲನ್ನು ಮುಚ್ಚಿದೆ. ಅವನು ಮುಂದಿನ ಷಟರ್‌ನ ಬಳಿ ಬಂದ, ಅವನದ್ದೊಂದು ಬೇಡಿಕೆ ಇಟ್ಟ. `ಶ್ಯಾಮೂ ನನ್ನ ಮಗುವನ್ನು ನನಗೆ ಕೊಟ್ಟುಬಿಡು’. ಮಗುವಾ? ಎಲ್ಲಿಂದ ತರಲಿ? ನನಗೆ ಈಗ ಗಾಬರಿಯಾಯಿತು. ನನ್ನ ಪಾದದ ಗುರುತಿಗೆ ಮುತ್ತನಿಟ್ಟವನಿಗೆ ಮಗುವಾ! ಹೌದು ಅವನ ಮಗುವೊಂದು ನನ್ನೊಳಗೆ ಇತ್ತು. ಇತ್ತು ಎನ್ನುವುದು ಭ್ರಮೆಯಾದರೆ ಭ್ರಮೆ. ಆದರೆ ಅದು ಸತ್ಯವೇ ಆಗಿಬಿಟ್ಟಿದ್ದರೆ ಅನ್ನಿಸಿತು. ಇದ್ಯಾವ ಹೊಸ ಆಟ ಮಗುವನ್ನು ಎಲ್ಲಿಂದ ತರಲಿ ಭಯವಾಯಿತು. ನಾನು ಕಿಟಕಿಯ ಒಂದೊಂದೇ ಬಾಗಿಲನ್ನು ಮುಚ್ಚುತ್ತಾ ಬಂದ ಹಾಗೆ ಅವನ ಬೇಡಿಕೆ ಜೋರಾಗುತ್ತಲೇ ಬಂತು. ನನಗಾಗಿ ನಿನ್ನ ಪಾಲಿನ ಪ್ರೀತಿಯನ್ನು ಉಳಿಸಲಿಲ್ಲ, ನನ್ನ ಮಗುವನ್ನಾದರೂ ಕೊಟ್ಟುಬಿಡು. ಕೊನೆಯ ಕಿಟಕಿಯ ಬಾಗಿಲನ್ನು ಮುಚ್ಚುವಾಗ ಅವನು ಅಳುತ್ತಿದ್ದ. ಕಿಟಕಿಯ ಬಾಗಿಲನ್ನು ಮುಚ್ಚಿ ನಾನೂ ಅತ್ತೆ. ತುಂಬಾ... ತುಂಬಾ... ಆಗ ಇದ್ದಕ್ಕಿದ್ದಂತೆ ನನಗೆ ನೆನಪಾಯಿತು. ನಾನು ನನ್ನ ಗರ್ಭಕ್ಕೆ ಬಾರದ ಆ ಕಂದನನ್ನು ನಡುಮನೆಯಲ್ಲಿ ಹೂತುಬಿಟ್ಟಿದ್ದೇನೆಂದು. ಅಳುತ್ತಾ ನಡು ಮನೆಗೆ ಓಡಿದೆ. ಹೂತಿಟ್ಟ ಜಾಗವನ್ನು ಕೈಗಳಿಂದ ಬಗೆಯಲು ಆರಂಭಿಸಿದೆ. ನನ್ನ ಬೆರಳುಗಳಿಗೆ ಅಂಟಿಕೊಂಡ ಮಣ್ಣಲ್ಲಿ ಹಸಿತನವಿತ್ತು. ರಕ್ತದ ವಾಸನೆಯಿತ್ತು. ಅಳುತ್ತಾ ಕೂತೆ, ನಿಜ ನಾನು ಕೊಂದಿದ್ದೆ ಅವನ ಮಗುವನ್ನು...’

ಶ್ಯಾಮು ಅಳುತ್ತಿದ್ದಳು. ನಡುಗುತ್ತಿದ್ದ ಅವಳ ಬೆರಳುಗಳು ಇನ್ನೂ ಆ ಹಸಿತನವನ್ನು ಅನುಭವಿಸುವಂತಿತ್ತು. `ಎಂಥಾ ಹೀನ ಸಂಸ್ಕಾರ ನನ್ನದು ತೇಜೂ, ಆ ಮಗು ನನಗೇನು ಮಾಡಿತ್ತು? ಅವನ ಮಗುವನ್ನು ನಾನು ಯಾಕೆ ಕೊಂದೆ? ಹಾಗೆ ಊಹೆ ಮಾಡಿಕೊಳ್ಳುವುದೂ ಪಾಪವೇ ಅಲ್ಲವೇ? ಪ್ರೇಮ ಮಗ್ನನಾಗಿ ನನ್ನ ಪಾದಗಳ ಗುರುತಿಗೆ ಮುತ್ತಿಟ್ಟ ಅವನ ತುಟಿಯಲ್ಲಿ ನನಗೆ ಯಾಕೆ ಸಾಚಾತನ ಕಾಣಲಿಲ್ಲ. ಅಥವಾ ನಿಜಕ್ಕೂ ಅವನ ಆ ಪ್ರೇಮದ ತೀವ್ರತೆಗೆ ಹೆದರಿಬಿಟ್ಟೆನೇ. ಶರ್ಟಿನ ಗುಂಡಿಗಳನ್ನು ಬಿಚ್ಚಿ ತನ್ನ ಬರಿದೆದೆಯನ್ನು ಒಡ್ಡಿ ಇಲ್ಲಿ ಪ್ರೇಮದ ಮುದ್ರೆಯೊತ್ತು ಎನ್ನಲಿಲ್ಲ ಎಂದು ಗಿರಿಯನ್ನು ತಿರಸ್ಕರಿಸಿದೆನೇ? ಅರೆ ಲೋಕದ ಕಣ್ಣಿನಲ್ಲಿ ಚಂದ್ರನಿಂದ ಬೇರೆಯಾದ ತಕ್ಷಣ ಮನದ ಆಳದಲ್ಲಿದ್ದ ಗಿರಿ ಇಂಥಾ ಭಾವ ಯಾಕೆ ಎದ್ದು ಬಂದನೇ? ನಾನು ಬಯಸಿದ್ದೆನೆ ಅವನನ್ನು ತೀವ್ರವಾಗಿ?’, ಎರಡೂ ಅಂಗೈಗಳನ್ನು ಭದ್ರವಾಗಿ ತನಗೆ ತಾನೆ ಹಿಡಿದುಕೊಂಡಿದ್ದಳು. ಅವಳ ಕೈಗಳು ಅವಳ ಶಕ್ತಿಯನ್ನೂ ಮೀರಿ ನಡುಕ ಹುಟ್ಟಿಸಿತ್ತು. ನನಗೆ ಗಿರಿ ಮತ್ತು ಶ್ಯಾಮು ಒಬ್ಬರಿಗೊಬ್ಬರು ತಮ್ಮ ಕೈಗಳನ್ನು ಭದ್ರವಾಗಿಟ್ಟುಕೊಂಡಿದ್ದಾರೆ ಎಂದು ಭಾಸವಾಯಿತು.

ದೇಹಕ್ಕಂಟಿಕೊಂಡು ಬಿಗಿಯಾಗುವಾಗ ಬ್ಲೌಸ್ ಕಂಕುಳು ಕೊರೆವ ಹಿಂಸೆ ಇದೆಯಲ್ಲ... ಅದನ್ನು ಅನುಭವಿಸುವವರಿಗಷ್ಟೇ ಗೊತ್ತು. ಶ್ಯಾಮು ಎದ್ದು ಒಳನಡೆದಳು. ಈಗ ಅವಳು ಬರೆವ ಚಿತ್ರಕ್ಕೆ ಏನು ಹೆಸರಿಡಬಹುದು ಎಂದುಕೊಂಡೆ. ಅವಳ ಒಳಗಿನ ನೋವು ಹೊರಬಂದು ಲಯವಾಗುತ್ತದೆ ಎನ್ನುವ ಕಲ್ಪನೆಯೇ ಮನಸನ್ನು ನಿರಾಳವಾಗಿಸಿತ್ತು. ನೀಲಿಯಾಕಾಶ ಗರಿಗೆದರಿದಂತೆ ಮೋಡಗಳ ಹರಡಿಟ್ಟಿತ್ತು; ಹರಳುಗಟ್ಟುವ ನಾಳೆಗಳ ಕನಸಿನ ಗಂಟು ಬಿಚ್ಚಿದಂತೆ ಪ್ರಶ್ನೆ ನನ್ನ ನೋಡಿತ್ತು. ಅವಳ ಭಾವಕ್ಕೆ ಹೆಸರಿಡಲು ಕಾಯುವ ನಾನು ಯಾರು?

-ಪಿ. ಚಂದ್ರಿಕಾ

ಈ ಅಂಕಣದ ಹಿಂದಿನ ಬರೆಹಗಳು:
ನೆತ್ತರಲೂ ರತ್ನವಾಗುವ ಗುಣ
ಪ್ರಪಂಚ ಒಂದು ಸುಂದರ ಕನಸು
ಕಾಲು ಜಾರಿ ಬಿದ್ದವನು ಹಲವರಿಗೆ ದಾರಿ ತೋರುವನು
ಕಂದನಂತೆ ಚಂದಿರನ ಬಾನು ಎತ್ತಿ ಆಡಿಸುತಲಿಹುದು
ತೇಲಿಸು ಇಲ್ಲ ಮುಳುಗಿಸು
ಭಾವಶುದ್ಧಿಯೇ ಆಧ್ಯಾತ್ಮ
ಕಿರಿದನ್ನು ಕಿರಿದರಲ್ಲೇ ನೋಡು
ಅನುಭವದಲ್ಲಿ ಘನೀಭವಿಸುವ ವಿಶ್ವದ ರಹಸ್ಯಮಯ ಸಂಗತಿಗಳು

ಬಿಟ್ಟುಬಿಡುವುದೆಂದರೂ ಕಟ್ಟಿಕೊಳ್ಳುವುದೇ
ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...