ಪದಗಳು-ಯಾವಯಾವ ಬಗೆಯವು?

Date: 29-10-2022

Location: ಬೆಂಗಳೂರು


“ಪದಗಳಲ್ಲಿ ಹಲವಾರು ಬಗೆಗಳು. ಮನುಶ್ಯರಿಗೆ ಹೇಗೆ ವಿಬಿನ್ನ ವರ‍್ತನೆಗಳು ಇರುತ್ತವೆಯೊ ಹಾಗೆ ಪದಗಳಿಗೂ ವಿಬಿನ್ನ ವರ‍್ತನೆಗಳು ಇರುತ್ತವೆ. ಈ ಬಿನ್ನ ಗುಣಸ್ವಬಾವ ಮತ್ತು ವರ‍್ತನೆಗಳನ್ನು ಮುಕ್ಯವಾಗಿ ಆದಾರವಾಗಿಟ್ಟುಕೊಂಡು ಪದಗಳನ್ನು ಗುಂಪಿಸಲಾಗುತ್ತದೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಪದಗಳ ಸ್ಥೂಲ ಗುಂಪನ್ನು ಪರಿಚಯಿಸಿದ್ದಾರೆ.

ಸಾಮಾನ್ಯವಾಗಿ ಎಲ್ಲರೂ ಮಾತಾಡುವಾಗ ಪದಗಳನ್ನು ಬಳಸುತ್ತೇವೆ. ನಾವು ಬಳಸುವ ಎಲ್ಲ ಪದಗಳು ಒಂದೆ ರೀತಿಯವೊ ಇಲ್ಲ ಬಿನ್ನ ರೀತಿಯವೊ ಎಂಬುದು ಹೆಚ್ಚಾಗಿ ಗೊತ್ತಿರುವುದಿಲ್ಲ. ಆದರೆ ಪದಗಳನ್ನು ಬಾಶೆ ಬಲ್ಲ ಪ್ರತಿಯೊಬ್ಬರೂ ಸೂಕ್ತವಾಗಿ ಬಳಸುತ್ತಿರುತ್ತೇವೆ. ನಾಮಪದ, ಕ್ರಿಯಾಪದ, ವಿಶೇಶಣ ಎಂಬ ಕೆಲವು ಗುಂಪುಗಳ ಪರಿಚಯ ಕೆಲವರಿಗೆ ಇರುತ್ತದೆಯಾದರೂ ಅವುಗಳ ಗುಣಸ್ವರೂಪದ ತಿಳುವಳಿಕೆ ಸಹಜವಾಗಿ ಕಡಿಮೆ.

ಪದಗಳಲ್ಲಿ ಹಲವಾರು ಬಗೆಗಳು. ಮನುಶ್ಯರಿಗೆ ಹೇಗೆ ವಿಬಿನ್ನ ವರ‍್ತನೆಗಳು ಇರುತ್ತವೆಯೊ ಹಾಗೆ ಪದಗಳಿಗೂ ವಿಬಿನ್ನ ವರ‍್ತನೆಗಳು ಇರುತ್ತವೆ. ಈ ಬಿನ್ನ ಗುಣಸ್ವಬಾವ ಮತ್ತು ವರ‍್ತನೆಗಳನ್ನು ಮುಕ್ಯವಾಗಿ ಆದಾರವಾಗಿಟ್ಟುಕೊಂಡು ಪದಗಳನ್ನು ಗುಂಪಿಸಲಾಗುತ್ತದೆ. ಈ ಬರಹದಲ್ಲಿ ಕನ್ನಡದ ಪದಗಳ ಸ್ತೂಲವಾದ ಗುಂಪಿಕೆಯನ್ನು ಪರಿಚಯಿಸಲಾಗುವುದು.

ಮುಕ್ಯವಾಗಿ ಬಾಶೆಯಲ್ಲಿ ನಾಮಪದ ಮತ್ತು ಕ್ರಿಯಾಪದ ಇವು ಹೆಚ್ಚು ಪರಿಚಿತ. ಇದರೊಟ್ಟಿಗೆ ವಿಶೇಶಣಗಳ ಪರಿಚಯವೂ ಇರುತ್ತದೆ. ಇವುಗಳಲ್ಲದೆ ಇನ್ನೂ ಕೆಲವು ಪದಪ್ರಕಾರಗಳನ್ನು ಗಮನಿಸಬಹುದು.

ನಾಮಪದಗಳು ಸಾಮಾನ್ಯವಾಗಿ ಹೆಸರನ್ನು ಸೂಚಿಸುತ್ತವೆ ಎಂದು ಹೇಳಲಾಗಿದೆ. ಜಗತ್ತಿನ ಹೆಚ್ಚಿನ ಬಾಶೆಗಳಲ್ಲಿಯೂ ನಾಮಪದಗಳು ದೊಡ್ಡ ಸಂಕೆಯಲ್ಲಿ ಇರುತ್ತವೆ. ಸಾಮಾಜಿಕ ಬೆಳವಣಿಗೆಯ ಬಾಗವಾಗಿ ನಿರಂತರವಾಗಿ ಹೊಸಹೊಸ ನಾಮಪದಗಳು ಹುಟ್ಟುತ್ತಲೆ ಇರುತ್ತವೆ. ನಾಮಪದಗಳ ನಂತರ ದೊಡ್ಡ ಸಂಕೆಯ ಪದಗಳೆಂದರೆ ಕ್ರಿಯಾಪದಗಳು. ಇವು ಕ್ರಿಯೆಯನ್ನು ಸೂಚಿಸುತ್ತವೆ ಎಂಬುದನ್ನು ಸಾಮಾನ್ಯವಾಗಿ ಹೇಳಲಾಗಿದೆ. ನಾಮಪದಗಳಿಗೆ ಹೋಲಿಸಿದರೆ ಕ್ರಿಯಾಪದಗಳ ಸಂಕೆ ತುಂಬಾ ಕಡಿಮೆ. ನಾವು ದಿನವೂ ಬಳಸುವ ಬಾಶೆಯಲ್ಲಿ ಯಾವ ಯಾವ ಪದಗಳನ್ನು ಎಶ್ಟು ಎಶ್ಟು ಬಳಸುತ್ತೇವೆ ಎಂಬುದನ್ನು ಅವಲೋಕಿಸಿದಾಗ ಇದು ಸ್ಪಶ್ಟವಾಗಿ ಕಾಣಿಸುತ್ತದೆ. ಯಾವುದೆ ಒಂದು ವಾಕ್ಯವನ್ನು ತೆಗೆದುಕೊಂಡಾಗ ಒಂದೆರಡು ಹೆಚ್ಚೆಂದರೆ ಮೂರು-ನಾಲ್ಕು ಕ್ರಿಯಾಪದಗಳು ಇರಬಹುದು. ಆದರೆ ನಾಮಪದಗಳು ಹೆಚ್ಚಿನ ಸಂಕೆಯಲ್ಲಿ ಇರುತ್ತವೆ. ಕ್ರಿಯಾಪದಗಳು ಕೂಡ ವಿಬಿನ್ನ ಪ್ರಕ್ರಿಯೆಯಲ್ಲಿ ಬೆಳೆಯುತ್ತಿರುತ್ತವೆ. ನಾಮಪದಗಳಂತೆ ಕ್ರಿಯಾಪದಗಳನ್ನು ಹೊಸತಾಗಿ ಹುಟ್ಟಿಸಲು ಹಲವಾರು ಪ್ರಕ್ರಮಗಳಿವೆಯಾದರೂ ನಾಮಪದಗಳನ್ನು ಹುಟ್ಟಿಸುವ ಪ್ರಕ್ರಮಗಳಿಗಿಂತ ಕ್ರಿಯಾಪದಗಳನ್ನು ಹುಟ್ಟಿಸುವ ಪ್ರಕ್ರಮಗಳು ಕಡಿಮೆ ಎಂದೆನ್ನಬಹುದು.

ಕ್ರಿಯಾಪದಗಳ ನಂತರ ಇನ್ನೂ ಹಲವು ಬಗೆಯ ಪದಪ್ರಕಾರಗಳು ಇವೆ. ಆದರೆ, ಇವುಗಳು ಹೆಚ್ಚಾಗಿ ಸಣ್ಣ ಸಂಕೆಯವು. ಇವುಗಳಲ್ಲಿ ಮುಕ್ಯವಾಗಿ ವಿಶೇಶಣಗಳನ್ನು ಹೇಳಬಹುದು. ವಿಶೇಶಣಗಳು ಇನ್ನೊಂದು ಗಟಕವನ್ನು ಹೊಗಳುವ ಕೆಲಸವನ್ನು ಮಾಡುತ್ತವೆ ಎಂದು ಸಾಮಾನ್ಯವಾಗಿ ಹೇಳಲಾಗಿದೆ. ಇವುಗಳಲ್ಲಿ ನಾಮಪದಗಳನ್ನು ಹೊಗಳುವ ನಾಮವಿಶೇಶಣ ಮತ್ತು ಕ್ರಿಯಾಪದಗಳನ್ನು ಹೊಗಳುವ ಕ್ರಿಯಾವಿಶೇಶಣ ಎಂದು ಎರಡು ಗಟಕಗಳನ್ನು ಮಾಡಬಹುದು. ವಿಶೇಶಣಗಳು ಕ್ರಿಯಾಪದಗಳಿಗಿಂತ ಕಡಿಮೆ ಸಂಕೆಯಲ್ಲಿ ಇರುತ್ತವೆ. ನಾಮವಿಶೇಶಣ ಮತ್ತು ಕ್ರಿಯಾವಿಶೇಶಣ ಎಂಬ ಎರಡು ಗುಂಪುಗಳಲ್ಲಿ ನಾಮವಿಶೇಶಣಗಳು ಹೆಚ್ಚು ಮತ್ತು ಮೂಲದಲ್ಲಿ ವಿಶೇಶಣವಾಗಿರುವ ಕೆಲವು ಪದಗಳೂ ಕಾಣಿಸುತ್ತವೆ. ಕ್ರಿಯಾವಿಶೇಶಣಗಳು ಸಂಕೆಯಲ್ಲಿ ಕಡಿಮೆ ಮತ್ತು ಅವುಗಳನ್ನು ವಿಬಿನ್ನ ಪ್ರಕ್ರಿಯೆಗಳಲ್ಲಿ ಬೆಳೆಸಲಾಗುವುದು. ಆದ್ದರಿಂದ ಕನ್ನಡದಲ್ಲಿ ಕ್ರಿಯಾವಿಶೇಶಣಗಳನ್ನು ಪ್ರತ್ಯೇಕ ಪದವರ‍್ಗವಾಗಿ ಪರಿಗಣಿಸಬಾರದೆಂಬ ನಿಲುವು ಇದೆ. ಸಾಮಾನ್ಯವಾಗಿ ವಿಶೇಶಣಗಳನ್ನು ಹೊಸತಾಗಿ ಬೆಳೆಸುವುದು ನಾಮಪದ ಮತ್ತು ಕ್ರಿಯಾಪದಗಳನ್ನು ಹುಟ್ಟಿಸಿದಶ್ಟು ಸರಳ, ಸುಲಬವಲ್ಲವಾದರೂ ಬೆಳೆಸಲು ಸಾದ್ಯವಿದೆ.

ವಿಶೇಶಣಗಳ ನಂತರ ಇನ್ನೂ ಕೆಲವು ಸಣ್ಣಸಣ್ಣ ಪದವರ‍್ಗಗಳು ಕಂಡುಬರುತ್ತವೆ. ಎಣಿಕೆಪದಗಳು ಇಲ್ಲವೆ ಸಂಕ್ಯಾಪದಗಳು, ಪದೋತ್ತರರೂಪಗಳು, ಸರ‍್ವನಾಮಗಳು, ಪ್ರಶ್ನೆಪದಗಳು, ತೋರುಗ ಪದಗಳು ಮೊದಲಾದವು. ಒಂದು ಮುಕ್ಯವಾದ ವಿಚಾರವೆಂದರೆ ಈ ಮೇಲೆ ಮಾತಾಡಿದ ನಾಮಪದ, ಕ್ರಿಯಾಪದ, ವಿಶೇಶಣ ಮೊದಲಾದವನ್ನು ಹೊಸತಾಗಿ ಹುಟ್ಟಿಸಲು, ಬೆಳೆಸಲು ನಿರ‍್ದಿಶ್ಟ ಪ್ರಕ್ರಮಗಳು ಇವೆ. ಅಂದರೆ ಅವು ಕಾಲಾಂತರದಲ್ಲಿ ಬೆಳೆಯುತ್ತ ಹೋಗುತ್ತವೆ. ಆದರೆ ಈಗ ಮಾತಾಡುತ್ತಿರುವ ಸರ‍್ವನಾಮಗಳು, ಪ್ರಶ್ನೆಪದಗಳು, ತೋರುಗಪದಗಳು ಮೊದಲಾದವು ಹೀಗೆ ಹೊಸತಾಗಿ ಬೆಳೆಸಲು ಸಾದ್ಯವಿಲ್ಲದ ಪದವರ‍್ಗಗಳಾಗಿವೆ. ಆದ್ದರಿಂದ ಹೊಸತಾಗಿ ಹುಟ್ಟಿಸಲು ಸಾದ್ಯವಿರುವ ಪದಪ್ರಕಾರಗಳನ್ನು ತೆರೆದ ಪದವರ‍್ಗಕೋಶ ಎಂದೂ ಹೊಸತಾಗಿ ಹುಟ್ಟಿಸಲು ಸಾದ್ಯವಿಲ್ಲದ ಪದಪ್ರಕಾರಗಳನ್ನು ಮುಚ್ಚಿದ ಪದವರ‍್ಗಕೋಶ ಎಂದೂ ಕರೆಯಬಹುದು.

ಎಣಿಕೆಪದಗಳು ಸಾಮಾನ್ಯವಾಗಿ ನಿರ‍್ದಿಶ್ಟ ಸಂಕೆಯಲ್ಲಿ ಇರುತ್ತವೆ. ವಿಶೇಶವೆಂದರೆ ಇವುಗಳನ್ನು ಹೊಸತಾಗಿ ಹುಟ್ಟಿಸುವುದು ಸಾದ್ಯವಿಲ್ಲ. ಸಾಮಾನ್ಯ ಈ ಪದಗಳನ್ನು ಹೊಸದಾಗಿ ಹುಟ್ಟಿಸುವ ಅವಸರವೂ ಬರುವುದಿಲ್ಲ ಎಂಬುದು ಮತ್ತೊಂದು ವಿಚಾರ. ಎಣಿಕೆ ಪದಗಳಲ್ಲಿ ಒಂದು, ಎರಡು ಎಂಬ ಎಣಿಸುವ ಪದಗಳು ಮತ್ತು ಅವುಗಳ ಒಂದನೆ, ಎರಡನೆ ಎಂಬ ವಿಶೇಶಣಪದಗಳೂ ಇರುತ್ತವೆ.

ಪದೋತ್ತರ ರೂಪಗಳು ಕೆಲವೊಮ್ಮೆ ಸ್ವತಂತ್ರ ಆಕ್ರುತಿಮಾದಂತೆಯೂ ಕೆಲವೊಮ್ಮೆ ಬದ್ದ ಆಕ್ರುತಿಮಾದಂತೆಯೂ ಬಳಕೆಯಾಗಬಲ್ಲವು. ಮೇಲೆ, ಕೆಳಗೆ ಎಂಬ ರೂಪಗಳನ್ನು ಗಮನಿಸಿದಾಗ ಅವು ಮನೆ ಮೇಲೆ ಇದೆ, ಮನೆ ಕೆಳಗೆ ಇದೆ ಎಂಬಲ್ಲಿ ಮನೆ ಎಂಬುದಕ್ಕೆ ಪೂರಕವಾಗಿ ಬಂದಿವೆ ಮತ್ತು ಮೇಲೆ ಪುಸ್ತಕ ಇದೆ, ಕೆಳಗೆ ಪುಸ್ತಕ ಇದೆ ಎನ್ನುವಲ್ಲಿ ಸ್ವತಂತ್ರವಾಗಿಯೂ ಬಳಕೆಯಾಗಿವೆ. ಇವು ಶಬ್ದಕೋಶದ ಪದದಂತೆಯೂ ವ್ಯಾಕರಣದ ಗಟಕದಂತೆಯೂ ಬಳಕೆಯಾಗುತ್ತವೆ. ಇವುಗಳು ಸಂಕೆಯಲ್ಲಿ ಕಡಿಮೆ ಇರುತ್ತವೆ ಮತ್ತು ಇವುಗಳನ್ನು ಸುಲಬವಾಗಿ ಹುಟ್ಟಿಸುವುದು ಸಾದ್ಯವಿಲ್ಲ.

ಪ್ರಶ್ನೆಪದಗಳು ಕೂಡ ಕಡಿಮೆ ಸಂಕೆಯಲ್ಲಿ ಇರುವ ಒಂದು ಪದವರ‍್ಗ. ಯಾರು, ಯಾವುದು, ಯಾಕೆ ಇಂತ ಪದಗಳನ್ನು ಇದರಲ್ಲಿ ನೋಡಬಹುದು. ಇವು ಸಾಮಾನ್ಯ ಹೊಸತಾಗಿ ಹುಟ್ಟಿಸಲು ಸಾದ್ಯವಿಲ್ಲದಂತವು.

ಸರ‍್ವನಾಮಗಳು ಇನ್ನೊಂದು ಇಂತ ಮಹತ್ವದ ಪದವರ‍್ಗ. ಇದರಲ್ಲಿ ಅತ್ಯಂತ ಕಡಿಮೆ ಸಂಕೆಯ ಪದಗಳು ಇರುತ್ತವೆ. ಅವನು, ಅವಳು, ಅದು ಇಂತ ಪದಗಳನ್ನು ಇಲ್ಲಿ ನೋಡಬಹುದು. ಇವುಗಳನ್ನು ಸಾಮಾನ್ಯವಾಗಿ ಹೊಸತಾಗಿ ಹುಟ್ಟಿಸುವ ಪ್ರಮೇಯವೂ ಇರಲಾರದು ಮತ್ತು ಹೊಸತಾಗಿ ಹುಟ್ಟಿಸುವುದು ಸಾದ್ಯವೂ ಇಲ್ಲ. ಅತ್ಯಂತ ಅಪರೂಪವಾಗಿ ಇದು ಆಗಬಹುದು.

ತೋರುಗ ಪದಗಳು ಇನ್ನೂ ಕಡಿಮೆ ಸಂಕೆಯಲ್ಲಿರುವಂತವು. ಆ, ಈ, ಅದು, ಇದು ಇಂತ ತೀರಾ ಕಡಿಮೆ ಪದಗಳನ್ನು ಈ ಗುಂಪಿನಲ್ಲಿ ಕಾಣಬಹುದು.

ಈ ಮುಚ್ಚಿದ ಪದವರ‍್ಗಕೋಶದ ಪದಗಳನ್ನು ಒಂದು ಬಾಶೆಯಲ್ಲಿ ಹೆಚ್ಚು ಬೆಳೆಸಲು, ಹೊಸ ಪದ ಹುಟ್ಟಿಸಲು ಸಾದ್ಯವಿಲ್ಲ. ಹಲವು ನೂರು ವರುಶಗಳಿಗೊಮ್ಮೆ ಈ ಗುಂಪುಗಳಲ್ಲಿ ಹೊಸ ಪದಗಳು ಹುಟ್ಟಬಹುದು. ಆದರೆ, ತೆರೆದ ಪದವರ‍್ಗಕೋಶದಲ್ಲಿ ನಿರಂತರವಾಗಿ ಹೊಸಹೊಸ ಪದಗಳು ಹುಟ್ಟುತ್ತಲೆ ಇರುತ್ತವೆ ಮತ್ತು ಹೊಸ ಪದಗಳನ್ನು ಹುಟ್ಟಿಸುವುದಕ್ಕೆ ನಿಯತವಾದ ಪ್ರಕ್ರಮಗಳೂ ಇವೆ. ಹೊಸ ಪದಗಳು ಹುಟ್ಟುವಂತೆಯೆ ಬಳಕೆಯಿಂದ ಕಳೆದುಹೋಗುವುದು ಕೂಡ ತೆರೆದ ಪದವರ‍್ಗಕೋಶದಲ್ಲಿ ಸಾಮಾನ್ಯ. ಇದು ಮುಚ್ಚಿದ ಪದವರ‍್ಗಕೋಶದಲ್ಲಿ ಸಹಜವಾಗಿ ಕಾಣಿಸುವುದಿಲ್ಲ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...