ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ

Date: 09-12-2022

Location: ಬೆಂಗಳೂರು


''ಪ್ರತ್ಯಯಗಳು ಬಿನ್ನವಾದ ಕೆಲಸವನ್ನು ಮಾಡುತ್ತವೆ. ಕೆಲವು ಪ್ರತ್ಯಯಗಳು ನಾಮಪದದ ಮೇಲೆ ಬಂದರೆ ಇನ್ನು ಕೆಲವು ಕ್ರಿಯಾಪದದ ಮೇಲೆ ಬರುತ್ತವೆ. ಇಲ್ಲವೆ, ಕೆಲವು ಪ್ರತ್ಯಯಗಳು ಬೇರೆ ಪದಗಳ ಮೇಲೆ ಬಂದು ನಾಮಪದಗಳನ್ನು ಹುಟ್ಟಿಸಿದರೆ, ಇನ್ನು ಕೆಲವು ಹೀಗೆ ಬಂದು ಕ್ರಿಯಾಪದಗಳನ್ನು ಹುಟ್ಟಿಸುತ್ತವೆ. ಪ್ರತಿಯೊಂದು ಪ್ರತ್ಯಯ ನಿರ‍್ದಿಶ್ಟ ಅರ‍್ತವನ್ನು ಕೊಡುವುದಕ್ಕೆ ಬಳಕೆಯಾಗುತ್ತದೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ’ ವಿಚಾರದ ಕುರಿತು ಬರೆದಿದ್ದಾರೆ.

ಈ ಮೊದಲಿನ ಬರಹದಲ್ಲಿ ಹೊಸ ಪದಗಳನ್ನು ಹುಟ್ಟಿಸುವ ಪ್ರಕ್ರಿಯೆಯಲ್ಲಿ ಬಹು ಹಳೆಯ ಕಾಲದಲ್ಲಿ ಆಗಿರಬಹುದಾದ ಮತ್ತು ಇಂದು ಆ ರಚನೆಯನ್ನು ಗುರುತಿಸಲು ಕಶ್ಟವಾಗಿರುವ ಕೆಲವು ಪ್ರತ್ಯಯ ಸೇರುವಿಕೆ ಬಗೆಗೆ ಮಾತಾಡಿದೆವು. ಹಲವು ಪದಗಳಲ್ಲಿ ಇಂದಿನ ಕನ್ನಡದಲ್ಲಿ ಸಹಜವಾಗಿ ರಚನೆಯನ್ನು ಗುರುತಿಸಲು ಸಾದ್ಯವಾಗುವಂತವು ಇವೆ. ಅಂದರೆ, ಅದರಲ್ಲಿ ಮೊದಲಲ್ಲಿ ಇರುವ ಪದವನ್ನು ಮತ್ತು ಅದರ ಮೇಲೆ ಬಂದು ಸೇರಿರುವ ಪ್ರತ್ಯಯವನ್ನು ಸುಲಬವಾಗಿ ಗುರುತಿಸಬಹುದು. ಇಂತ ಕೆಲವು ನಿರ‍್ದಿಶ್ಟ ಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಗಾಣ ಪದಕ್ಕೆ –ಇಗ ಪ್ರತ್ಯಯ ಸೇರಿ ಗಾಣಿಗ ಎಂಬ ರೂಪ ಬಳಕೆಯಲ್ಲಿದೆ. ಮುಚ್ಚು+-ಅಳ=ಮುಚ್ಚಳ, ತೆಳು+-ಅಗೆ=ತೆಳ್ಳಗೆ ಮೊದಲಾದವನ್ನು ಗಮನಿಸಬಹುದು. ಈ ಪ್ರತ್ಯಯಗಳು ಕನ್ನಡದಾಗ ಇಂದು ಹೆಚ್ಚು ಉತ್ಪಾದಕವಾಗಿದ್ದು ಹೆಚ್ಚು ಹೆಚ್ಚು ಪದಗಳನ್ನು ಹುಟ್ಟಿಸುವುದಕ್ಕೆ ಬಳಕೆಯಾಗುತ್ತವೆ.

ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ವಿಶೇಶಣ ಮೊದಲಾದ ವಿವಿದ ಪದವರ‍್ಗಗಳ ಮೇಲೆ ಪ್ರತ್ಯಯವನ್ನು ಸೇರಿಸುವ ಮೂಲಕ ಹೊಸ ನಾಮಪದಗಳನ್ನು ಸಾದಿಸಬಹುದು. ಅದರಂತೆಯೆ ಕ್ರಿಯಾಪದ ಮತ್ತು ನಾಮಪದದ ಮೇಲೆ ಪ್ರತ್ಯಯಗಳನ್ನು ಸೇರಿಸಿ ಹೊಸ ಕ್ರಿಯಾಪದಗಳನ್ನು ಪಡೆಯಬಹುದು. ಸಹಜವಾಗಿ ನಾಮಪದಗಳ ಸಂಕೆ ಬಾಶೆಯೊಂದರಲ್ಲಿ ಹೆಚ್ಚಿರುವುದರಿಂದ ಅದಕ್ಕೆ ಪೂರಕವಾಗಿ ನಾಮಪದಗಳನ್ನು ಹುಟ್ಟಿಸುವ ಪ್ರಕ್ರಿಯೆಗಳೂ, ಪ್ರತ್ಯಯಗಳೂ, ಮೂಲಗಳೂ ಹೆಚ್ಚಿವೆ. ಕ್ರಿಯಾಪದಗಳನ್ನು ಹುಟ್ಟಿಸುವ ಪ್ರಕ್ರಿಯೆ, ಪ್ರತ್ಯಯಗಳು ಕಡಿಮೆ, ಅಲ್ಲದೆ ವಿಶೇಶಣಗಳಿಂದ ಕ್ರಿಯಾಪದಗಳನ್ನು ಹುಟ್ಟಿಸಲು ಅವಕಾಶವೂ ಇಲ್ಲ. ಇನ್ನು, ವಿಶೇಶಣಗಳನ್ನು ಸಾಮಾನ್ಯವಾಗಿ ಹುಟ್ಟಿಸುವುದಕ್ಕೆ ಎಂದು ನಿಯತ ಪ್ರಕ್ರಿಯೆ ಇಲ್ಲವೆ ಪ್ರತ್ಯಯ ಇಲ್ಲ. ವಾಕ್ಯ ಹಂತದಲ್ಲಿ ಪದವೊಂದನ್ನು ವಿಶೇಶಣವಾಗಿ ಬಳಸುವುದು ಇದೆ. ಆದರೆ, ಹೊಸ ವಿಶೇಶಣ ಪದವನ್ನು ಹುಟ್ಟಿಸುವುದಕ್ಕೆ ಎಂದು ನಿಯತ ಮತ್ತು ಉತ್ಪಾದಕವಾದ ಪ್ರಕ್ರಿಯೆ ಇಲ್ಲ.

ಈ ಪ್ರತ್ಯಯಗಳು ಬಿನ್ನವಾದ ಕೆಲಸವನ್ನು ಮಾಡುತ್ತವೆ. ಕೆಲವು ಪ್ರತ್ಯಯಗಳು ನಾಮಪದದ ಮೇಲೆ ಬಂದರೆ ಇನ್ನು ಕೆಲವು ಕ್ರಿಯಾಪದದ ಮೇಲೆ ಬರುತ್ತವೆ. ಇಲ್ಲವೆ, ಕೆಲವು ಪ್ರತ್ಯಯಗಳು ಬೇರೆ ಪದಗಳ ಮೇಲೆ ಬಂದು ನಾಮಪದಗಳನ್ನು ಹುಟ್ಟಿಸಿದರೆ, ಇನ್ನು ಕೆಲವು ಹೀಗೆ ಬಂದು ಕ್ರಿಯಾಪದಗಳನ್ನು ಹುಟ್ಟಿಸುತ್ತವೆ. ಪ್ರತಿಯೊಂದು ಪ್ರತ್ಯಯ ನಿರ‍್ದಿಶ್ಟ ಅರ‍್ತವನ್ನು ಕೊಡುವುದಕ್ಕೆ ಬಳಕೆಯಾಗುತ್ತದೆ. ಒಂದು ಎತ್ತುಗೆಯನ್ನು ತೆಗೆದುಕೊಂಡು ಮಾತಾಡುವುದಾದರೆ, -ವಂತ ಅನ್ನೋದು ಸಾಮಾನ್ಯವಾಗಿ ‘ಹೊಂದಿರುವ’ ಎಂಬ ಅರ‍್ತವನ್ನು ಕೊಡುತ್ತದೆ. ಅದರೊಟ್ಟಿಗೆ ಇದು ಸಾಮಾನ್ಯವಾಗಿ ‘ಗಂಡಸು’ ಎಂಬ ಅರ‍್ತವನ್ನೂ ಒಳಗೊಂಡಿರುತ್ತದೆ. ಬುದ್ದಿವಂತ, ಮಾನವಂತ ಮೊ. ಇದಕ್ಕೆದುರಾಗಿ -ಗೇಡಿ ಎಂಬ ಪದವು ‘ಹೊಂದಿಲ್ಲದ’ ಎಂಬ ಅರ‍್ತವನ್ನು ಕೊಡುವುದಕ್ಕೆ ಬಳಕೆಯಾಗುತ್ತದೆ. ಬುದ್ದಿಗೇಡಿ, ಮಾನಗೇಡಿ ಮೊ. ಕುತೂಹಲವೆಂದರೆ, ‘ಹೊಂದಿರುವ’ ಅರ‍್ತವನ್ನು ಕೊಡುವ –ವಂತ ಪದ ಸಾಮಾನ್ಯವಾಗಿ ‘ಗಂಡಸು’ ಎಂಬುದನ್ನು ಹೇಳಿದರೆ, ‘ಹೊಂದಿಲ್ಲದ’ ಎಂಬ ಅರ‍್ತವನ್ನು ಕೊಡುವ -ಗೇಡಿ ಇದು ಲಿಂಗವನ್ನು ವ್ಯಕ್ತಪಡಿಸುವುದಿಲ್ಲ. ಹೆಣ್ಣು, ಗಂಡು, ನಪುಂಸಕ ಯಾವುದಕ್ಕೂ ಇದು ಬಳಕೆಯಾಗಬಹುದು. –ತಿ, -ಇತಿ, -ಇತ್ತಿ, -ಗಿತ್ತಿ ಮೊದಲಾದ ಪ್ರತ್ಯಯಗಳು ಸಾಮಾನ್ಯವಾಗಿ ಹೆಂಗಸನ್ನು ಹೇಳುವುದಕ್ಕೆ ಬಳಕೆಯಾಗುತ್ತವೆ. ಹೀಗೆ ಒಂದೊಂದು ಪ್ರತ್ಯಯ ಒಂದೊಂದು ಬಗೆಯ ಬಳಕೆಯ ಸಾದ್ಯತೆಯನ್ನು, ಅರ‍್ತವನ್ನು ಒಳಗೊಂಡಿರುತ್ತವೆ.

ಇಲ್ಲಿ ಪ್ರತ್ಯಯಗಳನ್ನು ಪಟ್ಟಿ ಮಾಡಿ, ಒಂದೊಂದು ಬಳಕೆಯನ್ನು ಕೊಟ್ಟಿದೆ. ಇಂತ ಸಾವಿರಾರು ಪದಗಳನ್ನು ಹೀಗೆ ಪಟ್ಟಿ ಮಾಡಿ ಗಮನಿಸಬಹುದು.

ನಾಮಪದ+ಪ್ರತ್ಯಯ=ನಾಮಪದ: ನಾಮಪದಕ್ಕೆ ಪ್ರತ್ಯಯ ಸೇರಿ ಹೊಸ ಪದ ಹುಟ್ಟಬಹುದು. ನಾಮಪದದ ಮೇಲೆ ಸೇರುವ ಪ್ರತ್ಯಯಗಳ ಸಂಕೆ ಹೆಚ್ಚಿದೆ ಮತ್ತು ಅವು ವಿಬಿನ್ನವೂ ಆಗಿವೆ.

-ಇಕ ದನ+-ಇಕ=ದನಿಕ
-ಇಗ ಗಾಣ+-ಇಗ=ಗಾಣಿಗ
-ಇತಿ ಸಮ+-ತಿ=ಸವತಿ
-ಇಸ್ಟ ಕೋಪ+-ಇಶ್ಟ=ಕೋಪಿಶ್ಟ
-ಕಾರ ಗೆಣೆ+-ಕಾರ= ಗೆಣೆಕಾರ
-ಕೋರ ಜೂಜು+-ಕೋರ=ಜೂಜುಕೋರ
-ಗಾರ ಹೂ+-ಗಾರ=ಹೂಗಾರ
-ಗಿರಿ ಗುಂಡಾ+-ಗಿರಿ=ಗುಂಡಾಗಿರಿ
-ಗಿತ್ತಿ ಹಾದರ+-ಗಿತ್ತಿ=ಹಾದರಗಿತ್ತಿ
-ಗೇಡಿ ಬುದ್ದಿ+-ಗೇಡಿ=ಬುದ್ದಿಗೇಡಿ
-ತನ ತಾಯಿ+-ತನ=ತಾಯ್ತನ
-ತಿ ಗವುಡ+-ತಿ=ಗವುಡತಿ
-ತೆ ಗನ+-ತೆ=ಗನತೆ
-ದಾರ ಜಮೀನು+-ದಾರ=ಜಮೀನುದಾರ
-ವಂತ ಹಣ+-ವಂತ=ಹಣವಂತ
-ವು ನಡ+-ವು=ನಡುವು
ಕ್ರಿಯಾಪದ+ಪ್ರತ್ಯಯ=ನಾಮಪದ: ಕ್ರಿಯಾಪದದ ಮೇಲೆ ಪ್ರತ್ಯಯ ಸೇರಿ ನಾಮಪದಗಳನ್ನು ಸಾದಿಸಬಹುದು. ಕೆಳಗೆ ಕೆಲವು ಉದಾಹರಣೆಗಳನ್ನು ಕೊಟ್ಟಿದೆ.

-ಅ ಆಡು+-ಅ=ಆಟ, ನೋಟ
-ಅಣೆ ಸಾಗು+-ಅಣೆ=ಸಾಗಣೆ
-ಅಳ ಮುಚ್ಚು+-ಅಳ=ಮುಚ್ಚಳ
-ಇಕೆ ಓದು+-ಕೆ=ಓದಿಕೆ
-ಇಗೆ ನಾಚು+-ಇಗೆ=ನಾಚಿಗೆ
-ಕು ಹರಿ+-ಕು=ಹರಕು
-ಕೆ ಸೋರು+-ಕೆ=ಸೋರಿಕೆ
-ಗ ಓಡು+-ಗ=ಓಡುಗ
-ಗೆ ಹೊಲಿ+-ಗೆ=ಹೊಲಿಗೆ
-ತ ಕುದಿ+-ತ=ಕುದಿತ
-ತೆ ಅಳೆ+-ತೆ=ಅಳತೆ
-ಪು ಕಾಯು+-ಪು=ಕಾಯ್ಪು
-ಮೆ ತಾಳು+-ಮೆ=ತಾಳ್ಮೆ
-ವಳಿ ಸಾಗು+-ವಳಿ=ಸಾಗುವಳಿ
-ವು ಅಳಿ+-ವು=ಅಳಿವು
ವಿಶೇಶಣ+ಪ್ರತ್ಯಯ=ನಾಮಪದ: ವಿಶೇಶಣಗಳ ಮೇಲೆ ಪ್ರತ್ಯಯವನ್ನು ಸೇರಿಸಿಯೂ ನಾಮಪದಗಳನ್ನು ಸಾದಿಸಲು ಸಾದ್ಯವಿದೆ. ಕೆಳಗಿನ ಉದಾಹರಣೆ ಗಮನಿಸಿ.

-ಅ ಕರಿ+-ಅ=ಕರಿಯ
-ಅಗೆ ತೆಳು+-ಅಗೆ=ತೆಳ್ಳಗೆ
-ಇ ಚಲಿ+-ಇ=ಚಲುವಿ
-ತನ ಹೊಸ+-ತನ=ಹೊಸತನ
-ತು ಹೊಸ+-ತು=ಹೊಸತು
-ಪು ಬಿಳಿ+-ಪು=ಬಿಳುಪು
-ಮೆ ಹೆರ್+-ಮೆ=ಹೆಮ್ಮೆ
-ಸು ಎಳ+-ಸು=ಎಳಸು
-ಸ್ತನ ದೊಡ್ಡ+-ಸ್ತನ=ದೊಡ್ಡಸ್ತನ
ಕ್ರಿಯಾಪದ+ಪ್ರತ್ಯಯ=ಕ್ರಿಯಾಪದ: ಕ್ರಿಯಾಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ಕ್ರಿಯಾಪದಗಳನ್ನು ಹುಟ್ಟಿಸುವ ಪ್ರಕ್ರಿಯೆಗೆ ಇಲ್ಲಿ ಕೆಳಗೆ ಕೆಲವು ಎತ್ತುಗೆಗಳನ್ನು ಕೊಟ್ಟಿದೆ.

-ಇಸು ಮೀರು+-ಇಸು=ಮೀರಿಸು
ಹರಿ+-ಇಸು=ಹರಿಸು
-ಸು ನಡೆ+-ಸು=ನಡೆಸು
ಕೂಡು+-ಸು=ಕೂಡಿಸು
-ಕು ದೊರೆ+-ಕು=ದೊರಕು
ಕಲಿ+-ಕು=ಕಲಕು
-ಗು ತಿರಿ+-ಗು=ತಿರುಗು
ಮೆರಿ+-ಗು=ಮೆರುಗು
-ಚು ಎರೆ+-ಚು=ಎರಚು
ಕಿರಿ+-ಚು=ಕಿರಿಚು
-ಯು ನೇ+-ಯು=ನೇಯು
ಸಾ+-ಯು=ಸಾಯು

ನಾಮಪದ+ಪ್ರತ್ಯಯ=ಕ್ರಿಯಾಪದ: ನಾಮಪದಕ್ಕೆ ಪ್ರತ್ಯಯವನ್ನು ಸೇರಿಸುವ ಮೂಲಕವೂ ಹೊಸ ಕ್ರಿಯಾಪದಗಳನ್ನು ಸಾದಿಸಬಹುದು. ಕೆಳಗಿನ ಕೆಲವು ಉದಾಹರಣೆಗಳನ್ನು ಗಮನಿಸಿ.

-ಇಸು ಹನುಮ+-ಇಸು=ಹನುಮಿಸು
ಬೆರಳು+-ಇಸು=ಬೆರಳಿಸು

ಈ ಪ್ರತ್ಯಯಗಳ ಬಳಕೆಯಲ್ಲಿ ಹೆಚ್ಚಿನ ವಯಿವಿದ್ಯತೆ ಕಾಣಿಸುತ್ತದೆ. ಇಲ್ಲಿ ಅಂತ ಒಂದೆರಡನ್ನು ಮಾತಾಡಬಹುದು. ಒಂದು ಪದ ತನ್ನ ಮೇಲೆ ಎಶ್ಟು ಪದಗಳನ್ನು ತೆಗೆದುಕೊಳ್ಳಬಹುದು ಎಂದು ಯೋಚಿಸಿದಾಗ, ಒಂದು ಪದ ಒಂದೆ ಪ್ರತ್ಯಯವನ್ನು ಪಡೆದುಕೊಳ್ಳಬೇಕೆಂಬ ನಿಯಮವೇನು ಇಲ್ಲದಿದ್ದರೂ ಎಲ್ಲ ಪ್ರತ್ಯಯಗಳು ಎಲ್ಲ ಪದಗಳ ಮೇಲೆ ಬರುವುದಕ್ಕೆ ಸಾದ್ಯವಿಲ್ಲ. ಪದ, ಪದದ ವ್ಯಾಕರಣತೆ, ಅರ‍್ತ, ಪರಿಸರ ಮೊದಲಾದ ಹಲವು ಅಂಶಗಳು ಆ ಪ್ರತ್ಯಯದ ಬಳಕೆಯ ಸಾದ್ಯತೆಯನ್ನು ನಿರ‍್ದರಿಸುತ್ತಿರುತ್ತವೆ. ಇಂತ ಬಗೆಯ ಪದ, ಇಂತ ಬಗೆಯ ಪ್ರತ್ಯಯವನ್ನು ತೆಗೆದುಕೊಳ್ಳಬಹುದು ಮತ್ತು ಬೇರೆ ಇಂತವನ್ನು ತೆಗೆದುಕೊಳ್ಳಲಾರವು ಎಂದು ನಿಯಮಗಳು ಇವೆ.

ಸಾಮಾನ್ಯವಾಗಿ ಒಂದು ಪದ ಒಂದು ಪ್ರತ್ಯಯವನ್ನು ತೆಗೆದುಕೊಳ್ಳಬಹುದಾದರೂ ಒಂದಕ್ಕಿಂತ ಹೆಚ್ಚು ಪ್ರತ್ಯಯಗಳನ್ನು ಒಂದೆ ಪದ ಒಟ್ಟೊಟ್ಟಿಗೆ ತೆಗೆದುಕೊಳ್ಳುವುದೂ ಇದೆ. ಕೆಳಗಿನ ಪದವನ್ನು ಗಮನಿಸಿ,

ಮುಚ್ಚು+-ಅಳ>ಮುಚ್ಚಳ+-ಇಕೆ=ಮುಚ್ಚಳಿಕೆ

ಈ ಪದವು ಎರಡು ಪ್ರತ್ಯಯಗಳನ್ನು ತೆಗೆದುಕೊಂಡಂತೆ ಕಾಣುತ್ತದೆ. ಆದರೆ, ವಾಸ್ತವವೆಂದರೆ, ಮೇಲಿನ ಪದದಲ್ಲಿ ಮೊದಲಿಗೆ ಮುಚ್ಚು ಎಂಬ ಪದದ ಮೇಲೆ ಬಂದು ಸೇರುವ ಪ್ರತ್ಯಯ –ಅಳ. ಈ ಪ್ರತ್ಯಯ ಸೇರಿ ಮುಚ್ಚು ಎಂಬ ಪದ ಮುಚ್ಚಳ ಎಂದು ಬೆಳೆದಿದೆ. ಆನಂತರ, ಮುಚ್ಚಳ ಎಂಬ ಪದ ನಂತರದ –ಇಕೆ ಪದವನ್ನು ಪಡೆದುಕೊಳ್ಳುತ್ತದೆ. ಆ ಮೂಲಕ ಮುಚ್ಚಳಿಕೆ ಎಂಬ ಇನ್ನೊಂದು ಪದ ಬೆಳೆಯುತ್ತದೆ. ಆದರೆ ಈ ಪ್ರಕ್ರಿಯೆಯನ್ನು ಒಂದು ಪದ ಎರಡು ಪ್ರತ್ಯಯಗಳನ್ನು ತೆಗೆದುಕೊಳ್ಳುತ್ತದೆ ಎಂದು ಪರಿಗಣಿಸುವುದಕ್ಕಿಂತ ಪ್ರತ್ಯಯವೊಂದನ್ನು ತೆಗೆದುಕೊಂಡು ಬೆಳೆದಿರುವ ಮುಚ್ಚಳ ಎನ್ನುವ ಪದ ಮುಂದೆ ಅದು –ಇಕೆ ಎಂಬ ಇನ್ನೊಂದು ಪ್ರತ್ಯಯವನ್ನು ಪಡೆದುಕೊಳ್ಳುತ್ತದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...