ಪಶ್ಚಿಮಘಟ್ಟದ ನಿಗೂಢಗಳೊಳಗೆ ಬೆರಗುಗೊಳ್ಳುತ್ತಾ…

Date: 08-06-2022

Location: ಬೆಂಗಳೂರು


'ಒಮ್ಮೊಮ್ಮೆ ಜಿಟಿಜಿಟಿ ಮತ್ತೊಮ್ಮೆ ಸೋನೆ ಇನ್ನೊಮ್ಮೆ ದುಬುದುಬು ಕಡೆಗೊಮ್ಮೆ ಸುಮ್ಮನೆ ಸಾಕಾಗಿ ಎಳೆಬಿಸಿಲು ಹೀಗೆ ನಾನಾವತಾರಗಳನು ಒಂದೆರಡು ತಾಸಿನಲ್ಲಿಯೆ ಪರಿಚಯಿಸಿಬಿಡುವ ತಾಕತ್ತು ಈ ಪಶ್ಚಿಮ ಘಟ್ಟದ ನಿಗೂಢ ಜಾಗೆಗಳಿಗಿದ್ದಂತೆ ಕಾಣುತ್ತದೆ ಎನ್ನುತ್ತಾರೆ, ಮೌನೇಶ ಕನಸುಗಾರ. ಅವರು ತಮ್ಮ ಅಲೆಮಾರಿಯ ಅನುಭವಗಳು ಅಂಕಣದಲ್ಲಿ ಈ ಬಾರಿ ದೂದ್ ಸಾಗರ್ ಪ್ರವಾಸ ಕುರಿತು ಬರೆದಿದ್ದಾರೆ.

ಬದುಕಿನಲ್ಲಿ ಯಾವುದೆ ಪೂರ್ವ ತಯ್ಯಾರಿಗಳಿಲ್ಲದೆ ಧಿಡೀರ್ ಅಂತ ಯೋಜನೆಗೊಳಗಾದ ಒಂದು ಅದ್ಭುತ ಪ್ರಯಾಣ ನಮ್ಮ ನೆನಪಿನ ಮೂಟೆಯೊಳಗೆ ಸಣ್ಣಗೆ ಜಾಗೆ ಮಾಡಿಕೊಂಡು ಕೂತು ಬಿಡುತ್ತೆ! ಅಂತಹದ್ದೊಂದು ಹಸಿ ಅನುಭವ ಜಿಟಿ ಜಿಟಿ ಮಳೆ ಹುಯ್ಯುವ ಶ್ರಾವಣದಲ್ಲಿ ಕೂಡಿಬಂತು.!

ಎರಡು ದಿನಗಳಿಗಾಗುವಷ್ಟು ಭರ್ತಿ ಊಟವನ್ನು ಬ್ಯಾಗಿನೊಳಗೆ ಪೇರಿಸಿಟ್ಟುಕೊಂಡು ಚೂಪು ಚಳಿಯ ಇರಿತವನ್ನು ತಪ್ಪಿಸಿಕೊಳ್ಳಲು ಅಂಗಿಯ ಮೈಗೆ ಒಂದು ಜರ್ಕಿನ್ ಏರಿಸಿಕೊಂಡು ಗೆಳೆಯನೊಬ್ಬನತಾವ ಎರವಲಾಗಿ ಪಡೆದ ಕ್ಯಾಮೆರಾ ಒಂದನ್ನು ಸೈಡು ಭುಜಕ್ಕೇರಿಸಿಕೊಂಡು ದೊಡ್ಡ ಬ್ಯಾಗನ್ನು ಬೆನ್ನಿಗೆ ಒಟ್ಟಿ, ಧಾರವಾಡದ ರೈಲ್ವೆ ಸ್ಟೇಷನ್ ವರೆಗೂ ಕತ್ತಲು ಸೀಳಿಕೊಂಡು ರಾತ್ರಿ ಹನ್ನೊಂದರ ಆಸುಪಾಸಿಗೆ ಹೆಜ್ಜೆ ಹಾಕಿದೆ. ಟಿಕೇಟ್ ಪಡೆಯುವ ಹೊತ್ತಿಗಾಗಲೆ ಎಲ್ಲಾ ಗೆಳೆಯರೂ ಸೇರಿಕೊಂಡರು.

ಅನಿರೀಕ್ಷಿತ ಪಯಣ ಇಲ್ಲಿಂದ ಶುರುವಾಯಿತು. ತುಂಬಿದ ಭರ್ತಿ ರೈಲಿನಲ್ಲಿ ನಿಲ್ಲಲೂ ಸಹ ಒದ್ದಾಡುವಂತ ಇಕ್ಕಟ್ಟಿನಲ್ಲಿ ನಿಂತುಕೊಂಡೆ ಸರೊ ರಾತ್ರಿ ಒಂದೂವರೆಗೆ ಲೊಂಡಾ ಸ್ಟೇಷನ್ ತಲುಪಿದೆವು‌. ಅಲ್ಲಿ ರೈಲು ಬದಲಾಯಿಸಿಕೊಂಡು ಬೇರೊಂದು ರೈಲು ಹತ್ತಿ ಹೊರಟೆವು. ಬದಲಾಗುವ ಹಳಿಗಳ ಮೇಲೆ ದಿಕ್ಕು ಬದಲಾಯಿಸಿಕೊಂಡು ಹೊರಳಾಡಿ ಉರುಳುವ ರೈಲುಗಾಲಿಯ ಘರ್ಷಣೆಯಿಂದಾಗಿ ಬಂದ ಸಪ್ಪಳ ಇಡೀ ಘಟ್ಟದ ನಡುವೆ ಪ್ರತಿಧ್ವನಿಸಿ ಎದೆಯ ಬಡಿತಕ್ಕೆ ತಾಳ ಹಾಕುತ್ತಿತ್ತು. ಮೈ ತಿರುವಿಕೊಂಡು ತನ್ನ ಬಡಿತವನ್ನು ಇಮ್ಮಡಿಗೊಳಿಸುತ್ತಾ ಜೋರು ಧ್ವನಿಯೊಂದನ್ನು ಮೌನದ ಮೂಟೆಗೆ ಇರಿಯುತ್ತಲೆ ಸುರಂಗಗಳನ್ನು ಹೊಕ್ಕು ಅಗಾಧ ತಮವುಂಡ ಗುಹೆಗಳಿಗೆ ಬೆಳಕಿನ ಚೂರುಗಳನ್ನು ಎಸೆಯುತ್ತ ಇಡಿ ಹಸಿರು ಕಾಡಿನ ನಿಗೂಢ ರಾತ್ರಿಯೊಂದನ್ನು ಭೇದಿಸಿಕೊಂಡು ದೊಡ್ಡ ಸಿಳ್ಳಿನೊಂದಿಗೆ ಬ್ರೆಕ್ ಹಾಕಿದಾಗ ಮುಸುಕು ಹೊದ್ದ ನಸುಕು ಮಂಜುಗಣ್ಣಲ್ಲೆ ಕಣ್ಣುಜ್ಜಿಕೊಂಡು ಇಡೀ ರಾತ್ರಿಯ ಚಳಿಯನ್ನು ಒಟ್ಟಿಗೆ ಸುರುವಿ ಮೈ ಕೊರೆಯುತ್ತಿತ್ತು!

ನಿರ್ಜನ ಕಾಡಿನ ನಡುವೆ ಸಾಲು ಬೆಳಕಿನ ರೈಲು ಗಾಡಿಯೊಂದು ಬೆಚ್ಚಗೆ ಏದುಸಿರು ಬಿಟ್ಟುಕೊಂಡು ನಿಂತಾಗ ಬೆಳಕು ಹರಿಯುವ ಹೊತ್ತು! ದೂರದ ಹಳದಿ ಬೋರ್ಡಿನ ಮೇಲೆ ಬರೆದ ಅಕ್ಷರಗಳು ಅಸ್ಪಷ್ಟವಾಗಿದ್ದರಿಂದ ಇಳಿದ ಮೇಲೂ ಗುಮಾನಿ ಶುರುವಾಯಿತು. ಅಷ್ಟೊಂದು ಭಯಂಕರ ಕಾಡಿನ ನಡುವೆ ಯಾವುದೇ ವಿವರಗಳೂ ಸಹ ಗೊತ್ತಿಲ್ಲದೆ ಇಳಿದುಕೊಂಡು ಪೇಚಿಗೆ ಸಿಲುಕಿದರೆ ಕಷ್ಟ ಅಂತ ಇಳಿದ ರೈಲನ್ನು ಮತ್ತೆ ಹತ್ತಿ ಕೂತೆವು! ಅದೇ ಸ್ಟೇಷನ್ನಿನ ಕೆಲಸಗಾರನೊಬ್ಬ ಕಣ್ಣಿಗೆ ಬಿದ್ದ. ನಿಟ್ಟುಸಿರು ಬಿಟ್ಟು ಕೇಳಿದೆವು. ಯಾವ ಸ್ಟೇಷನ್ ಇದು? ಅವನು ಜೋರು ಧ್ವನಿಯಲ್ಲಿ ಹೇಳಿದನಾದರೂ ನಮ್ಮ ರೈಲು ತನ್ನ ದೊಡ್ಡ ಧ್ವನಿ ಹೊರಡಿಸಿ ಕತ್ತಲನ್ನು ಸೀಳುವ ಸಮರಕ್ಕೆ ಸಜ್ಜಾಗುವ ಭರದಲ್ಲಿ ಅವನು ಹೇಳುತ್ತಿದ್ದ ಧ್ವನಿಯಲ್ಲಿ ಸಾಗರ್ ಅನ್ನುವ ಪದವಷ್ಟೆ ತುಂಬಾ ಆಯಾಸಗೊಂಡು ಬಂದು ಕಿವಿಗೆ ತಾಕಿತು. ನಮ್ಮ ಪಯಣ ಮತ್ತದೆ ನಾವೆ ಕೂತೆದ್ದ ಬೆಚ್ಚನೆ ಸೀಟಿಗೆ ಒರಗಿ ಸಾಗಿತು. ಅಲ್ಪ ಸ್ವಲ್ಪ ಮಂಜಿನ ಮುಸುಕು ಹೋಳಾಗಿ ಹೊರಗಿನ ಹಸಿರೆಲೆಗಳು ಅಲುಗಾಟ ಕಾಣುವಾಗ ಕುಲೇಮ್ ರೈಲು ನಿಲ್ದಾಣ ಬಂತು! ಎಲ್ಲರೂ ಇಳಿದು ಅಲ್ಲೆ ಸ್ವಲ್ಪ ಹೊತ್ತು ಮಲಗಿದೆವು. ಬೆಳಗಿನ ಏಳಕ್ಕೆ ಎದ್ದಾಗ ಹಸಿರ ಜಗತ್ತಿನ ನಡುವೆ ನಮ್ಮವೊಂದಿಷ್ಟು ಜೀವಗಳು ಉಸಿರಾಡುತ್ತಿದ್ದವು. ಉದ್ದಕ್ಕೂ ಹಾಸಿದ ಜೋಡು ಹಳಿಗಳ ಎದೆಯ ಮೇಲೆ ದೂರದಿಂದ ಹೊಗೆ ಉಗುಳಿಕೊಂಡು ಬರುವ ರೈಲು ಎಡಬಲಕ್ಕೂ ದಟ್ಟ ಕಾಡು. ಅದೊಂದು ಅಚ್ಚಳಿಯದೆ ಚಿರಕಾಲ ನೆನಪಲ್ಲಿ ಉಳಿಯುವ ಅದ್ಭುತ ದೃಶ್ಯವೊಂದು ಎದೆಯೊಳಗೆ ನಾಟಿತು! ಈಗ ವಾಪಸ್ಸು ಅಲ್ಲಿಂದ 14 ಕಿಮೀ ದೂರದ ದೂಧ್ ಸಾಗರ ತಲುಪುವುದು ಹೇಗೆ? ಇದು ದೊಡ್ಡ ಪ್ರಶ್ನೆಯಾಯಿತು. ನಮ್ಮ ಪುಣ್ಯಕ್ಕೆ 9 ಗಂಟೆಗೆ ಅಲ್ಲಿಂದ ಒಂದು ಟ್ರೈನಿತ್ತು. ಹತ್ತಿ ಧೂದ್ ತಲುಪಿದಾಗ ಇನ್ನೂ ಹಸಿ ಹಸಿ ಚಳಿ ಮಳಿ ಗಾಳಿ ಜೊತೆಜೊತೆಗೆ ಮುಸುಕು ಹೊದ್ದ ಶ್ರಾವಣ ವಾತಾವರಣ!

ಬೇರೊಬ್ಬರಿ ಒಂದು ಕಿಲೋಮೀಟರ್ ಆಸುಪಾಸಿನ ರೈಲು ಹಳಿಯ ದಾರಿ ತುಳಿಯುತ್ತಾ ಸುರಂಗ ಒಂದರ ಬಾಯಿಯೊಳಗೆ ಹೊಕ್ಕು ದೊಡ್ಡ ಬಾಯಿ ಮಾಡಿ ಕೇಕೆ ಹಾಕಿಕೊಂಡು ಬಂದ ಭಯವನ್ನು ಭಂಡ ಧೈರ್ಯ ತಂದುಕೊಂಡು ನಾಜೂಕು ಹೆಜ್ಜೆಗಳನ್ನು ಕಿತ್ತಿಟ್ಟುಕೊಂಡು ಪ್ರತಿಧ್ವನಿಸುವ ನಮ್ಮದೆ ಉಸಿರಿನ ಸದ್ದನ್ನು ಬೆಚ್ಚಗೆ ಕಾಪಿಟ್ಟುಕೊಳ್ಳುತ್ತಾ ಸುರಂಗದಂಚಿಗೆ ಗೋಚರಗೊಳ್ಳುವ ಬೆಳಕಿನೆಡೆಗೆ ಧಾವಂತದ ನಡಿಗೆಯನ್ನು ಹಾಕುತ್ತಾ ಇದ್ದ ಕಿಪ್ಯಾಡ್ ಮೊಬೈಲಿನ ಟಾರ್ಚನ್ನು ಹೆಜ್ಜೆ ಹೆಜ್ಜೆಗೂ ಬೆಳಕು ಚೆಲ್ಲಿಕೊಂಡು ಆ ಟನಲ್ ನ ಹೊರಗೆ ಬಂದಾಗ ದೂರದಲ್ಲಿ ಮತ್ತೊಂದು ಸುರಂಗ ಕಾಣುತ್ತಿತ್ತು. ಮೈ ತಿರುವಿಕೊಂಡ ರೈಲು ಹಳಿಯ ದಾರಿಬದುವಿನಗುಂಟ ಹೆಜ್ಜೆ ಕಿತ್ತಿಡುವಾಗ ಬಂದ ನೀರಿನ ಭೋರ್ಗರೆತದ ಸದ್ದು ಅನುಸರಿಸಿ ಹೊರಟೆವು!

ಮಾಂಡೋವಿ ತಾನು ಮೈತುಂಬಿಕೊಂಡು ಘಟ್ಟಗಳ ಇಕ್ಕೆಲಗಳಲ್ಲಿ ತೆವಳುತ್ತಾ ದೊಡ್ಡ ಎತ್ತರದ ಮೇಲಿಂದ ಪಾತಳಕ್ಕೆ ಸರ್‍ರನೆ ಜಾರಿಕೊಂಡು ಬೀಳುವಾಗ ಕಲ್ಲಿನ ಕೊಕ್ಕೆಗೆ ಸಿಕ್ಕು ನಾಲ್ಕು ಕವಲುಗಳಾಗಿ ಮೈ ಜಾರಿಸಿಕೊಂಡು ಘಟ್ಟದ ನಟ್ಟ ನಡು ಕಲ್ಲಿಗೆ ದೊಪ್ಪನೆ ಬಿದ್ದಾಗ ಆಕಾಶದಿಂದ ಹಾಲಿನ ಹೊಳೆಯೊಂದು ಭೂತಾಯಿ ಒಡಲಿಗೆ ಹಸಿವ ತಣಿಸಲು ಎಂದೂ ಒಡೆಯದ ಕ್ಷಿರ ಸಾಗರವೆ ಹರಿದು ಬಂದಂತೆ ಭಾಸವಾಗುತ್ತಿತ್ತು! ಇದಕ್ಕೆ ತಕ್ಕಂತೆ ಅದರ ಹೆಸರು ಎಂದಿಗೂ ಧೂದ್ ಸಾಗರ.! ಪಶ್ಚಿಮ ಘಟ್ಟದ ಸೊಂಟಕ್ಕೆ ಬಿದ್ದ ಹಾಲಿನ ಹೊಳೆ ದೊಡ್ಡದಾಗಿ ಶೇಖರಗೊಂಡು ಅದೂ ಸಹ ತುಂಬಿ ತುಳುಕಿ ಚೆಲ್ಲುತ್ತಲೆ ಪೂರಾ ನೆಲಕಚ್ಚಿ ಮೆಲ್ಲಗೆ ತೆವಳುತ್ತದೆ! ಮಾಂಡೋವಿಯ ಭೋರ್ಗರೆತ ಸಡಿಲುಗೊಂಡು ಶಾಂತವಾಗಿ ಏಕಚಿತ್ತದಲ್ಲಿ ಹರಿಯುತ್ತಾಳೆಂದರೆ ಆಕೆ ಕುಸಿದು ಕುಸಿದು ನೆಲದ ಒಡಲ ಮಡಿಲಿಗೆ ಬಿದ್ದ ಕೂಸಿನ ಹಾಗೆ ಹಾಯಾಗಿ ಹರಿದಾಡುತ್ತ ತನ್ನದೆ ಒಂದಷ್ಟು ತೇವವನ್ನು ಅಲ್ಲಲ್ಲಿ ಪೋಷಿಸಿ ತಾಯಾಗಿ ತಾನೆ ತಾ ಮೈಬಿಚ್ಚಿಕೊಂಡು ಮತ್ತೆಲ್ಲೊ ತನ್ನದೆ ಕವಲುಗಳನ್ನು ಒಟ್ಟುಗೂಡಿಸಿಕೊಂಡು ತನ್ನದೆ ಜಡೆಯ ಮತ್ತೊಂದು ಕೂದಲೆಳೆ ಎಂಬಂತೆ ತನ್ನೆಡೆಗೆ ಸೆಳೆದುಕೊಳ್ಳುತ್ತಾ ಸಾಗುಹಾಕುತ್ತಾಳೆ. ಈ ಇಡೀ ಮಾಂಡೋವಿ ಮೇಲಿಂದ ಕೆಳಗಿಳಿವ ತನಕ ಇರುವಂತ ಅರ್ಭಟ - ಸಂಕಟ - ಘರ್ಷಣೆ - ಪೀಕಲಾಟ - ತಿಕ್ಕಾಟ - ಭೋರ್ಗರೆತ - ಅತಿಸೆಳೆತ ಎಲ್ಲವೂ ಪ್ರತಿ ಕ್ಷಣಕ್ಷಣದ ವಾಸ್ತವದಲ್ಲಿ ಪ್ರಕೃತಿಯೊಡನೆ ಬೆರೆಯುವ ಪರಿಗೆ ಮನಸ್ಸು ಪ್ರಫುಲ್ಲಗೊಂಡು ಸುಖಾಸುಮ್ಮನೆ ನೋಡುತ್ತಾ ತಾಸುಗಟ್ಟಲೆ ನಿಂತುಬಿಡಬೇಕೆನಿಸುತ್ತದೆ!

ಶ್ರಾವಣಕೂ ಋತುಸ್ರಾವವೇನೊ ಎಂಬಂತೆ ಒಮ್ಮೊಮ್ಮೆ ಜಿಟಿಜಿಟಿ ಮತ್ತೊಮ್ಮೆ ಸೋನೆ ಇನ್ನೊಮ್ಮೆ ದುಬುದುಬು ಕಡೆಗೊಮ್ಮೆ ಸುಮ್ಮನೆ ಸಾಕಾಗಿ ಎಳೆಬಿಸಿಲು ಹೀಗೆ ನಾನಾವತಾರಗಳನು ಒಂದೆರಡು ತಾಸಿನಲ್ಲಿಯೆ ಪರಿಚಯಿಸಿಬಿಡುವ ತಾಕತ್ತು ಈ ಪಶ್ಚಿಮ ಘಟ್ಟದ ನಿಗೂಢ ಜಾಗೆಗಳಿಗಿದ್ದಂತೆ ಕಾಣುತ್ತದೆ! ಇಡೀ ಮೈ ಬಿಳಿ ಬೆವರನ್ನು ಬಸಿದು ನೆಲಕ್ಕಿಳಿಸು ಮಾಂಡೋವಿಯ ಆಸುಪಾಸಿನಲ್ಲಿ ಅದರ ಜೀವಪೋಷಕ ದ್ರವ್ಯಕ್ಕೆ ಅವಲಂಬಿಸಿದ ಸಾವಿರಾರು ಜೀವಗಳಿವೆ. ಲಕ್ಷ ಲಕ್ಷ ಎಲೆಗಳನ್ನು ಚಿಗುರಿಸುವ ಮುಗಿಲೆತ್ತರದ ಮರಗಳ ಗೊಂಚಲು ಕಲ್ಲಿನ ಇಕ್ಕೆಲಗಳಲ್ಲಿ ಬೆಳೆದು ಬಯಲ ಬೆಟ್ಟವನ್ನೆಲ್ಲ ಹಸಿರಿನಿಂದ ಸಮೃದ್ಧಗೊಳಿಸಿವೆ. ನೂರಾರು ತರಹದ ಚಿಟ್ಟೆಗಳು ಯಾವ್ಯಾವುದೊ ಹೂವನರಸಿ ಹುಡುಕುವುದು ಕಾಣಸಿಗುತ್ತವೆ. ಆಲದ ಬೇರೊ ಸರಿಸೃಪದ ಮೈಯೊ ತಿಳಿಯದಂತೆ ಹಾವುಗಳ ಸರಿದಾಡುವಿಕೆ ಆಗಾಗ ಅಲ್ಲಲ್ಲಿ ನೋಡಬಹುದು. ಹಿತ ನೀಡುವ ತಂಗಾಳಿ ಪಶ್ಚಿಮ ಘಟ್ಟದ ತಪ್ಪಲಿನ ಹಸಿ ಮೈಸವರಿ ಬರುತ್ತಿದ್ದರೆ ಆಹಾ ಅದನನುಭವಿಸುವ ಸುಖವೆ ಅನಂತ ಜನ್ಮದ ಪುಣ್ಯ. ಹಾಲ್ನೊರೆಯಲಿ ಮಿಂದು ಒಂದಷ್ಟು ಫೋಟೊಗೆ ಪೋಜು ಕೊಡುವಷ್ಟರಲ್ಲಿ ಮತ್ತೆ ಎಲ್ಲಿಂದಲೊ ಒಕ್ಕರಿಸಿಕೊಂಡು ಬಂದ ಮೋಡ ಕಪ್ಪರಿಸಿಕೊಂಡು ನೆಲಕೆ ಬೀಳುತ್ತಿತ್ತು.

ಸಣ್ಣಗೆ ನಮ್ಮ ಹೆಜ್ಜೆಗಳು ಎರಡನೆ ಸುರಂಗದ ಒಳಹೊಕ್ಕವು. ಸುರಂಗದ ಮಧ್ಯೆ ಬೆಳಕು ಸುರಿವ ಕಂದರ. ಅಲ್ಲಿಂದ ಪೂರಾ ಮಟ್ಟಸ ನೆಲಕ್ಕಿಳಿಯಲು ಇಕ್ಕಟ್ಟಾದ ದಾರಿ. ಕುತೂಹಲ ತಡೆಯಲ್ಲಿಲ್ಲ. ಇಳಿದು ಬಿಟ್ಟೆವು. ಪೂರಾ ಕೆಸರು ಜಾರುತ್ತಿತ್ತು. ಅಲ್ಲಲ್ಲಿ ಅಳಿಲು, ಬೋರಂಗಿ, ಊಸರವಳ್ಳಿ, ಮುಟ್ಟಿದರೆ ಮುನಿ, ಅಣಬೆ ಏನೆಲ್ಲಾ ಹಸಿಕಾನನದ ಹೊಕ್ಕುಳಾಳದಲ್ಲಿ ಕಂಡೆವೊ ಪರಮ ಆಶ್ಚರ್ಯದ ಕಂಗಳನೆ ಮುಚ್ಚಬೇಕೆನಿಸುತ್ತಿರಲಿಲ್ಲ. ಗಾಳಿ ಹೆಜ್ಜಿ ಹಿಡಿದು ಬರುವ ಸುಗಂಧವನ್ನೆ ಅರಸಿ ಬರುವ ಜೇನ್ನೊಣಗಳ ಬೇಟೆ ಸೂಕ್ಷ್ಮವಾಗಿ ಗಮನಿಸುವಾಗ ಮೈ ಜುಮ್ಮೆನ್ನುತ್ತದೆ! ಎಳೆಬಿಸಿಲಿಗೆ ನೀರ ಮುಸುಕು ಮೈದೋರಿ ಸಪ್ತ ಬಣ್ಣಗಳ ಬಿಲ್ಲು ಪದೆ ಪದೆ ಸೃಷ್ಟಿಗೊಳ್ಳುವುದು ನೋಡುವುದೆ ಚೆಂದ. ಕಲ್ಲಿನ ಸಂದುಗಳಲ್ಲಿ ಅಡಗಿ ಕೂತ ಏಡಿ, ಚೇಳು, ಮೀನುಗಳು ಸಣ್ಣ ವೈಬ್ರೇಷನ್‌ಗೂ ಹೊರಕ್ಕೆ ಮೈ ಚಾಚಿ ತೋರಿ ಹೋಗುತ್ತವೆ. ಪೂರಾ ಇಳಿದು ಅಲ್ಲೊಂದೊಮ್ಮೆ ಮೈ ಬೆವರು ತೊಳೆದು ಹೋಗುವಷ್ಟು ಮಿಂದು, ಮೈದಣಿವು ಆರಿಸಿಕೊಂಡು ವಾಪಸ್ಸು ಘಟ್ಟದ ಮೇಲೇರಲು ಅಣಿಯಾದೆವು.

ಪ್ರಕೃತಿಯನ್ನು ನಾವು ಪ್ರೀತಿಸುವುದಷ್ಟೆ ಅಲ್ಲ. ಉಳಿಸಿಕೊಳ್ಳಲು ಆಗದಿದ್ದರೆ ಕನಿಷ್ಟ ಪಕ್ಷ ಹಾಳುಗೆಡವದೆ ಸುಮ್ಮನೆ ದೂರ ಉಳಿದುಬಿಡಬೇಕು. ಯಾರೊ ಕುಡಿದು ಒಡೆದು ಬಿಸಾಕಿದ ಗಾಜಿನ ಬಾಟಲ್ ನ ಚೂರೊಂದು ಗೆಳೆಯನ ಕಾಲಿಗೆ ಚುಚ್ಚಿ ಗಾಯವಾಯಿತು. ಸುಧಾರಿಸಿಕೊಂಡು ಮೇಲೇರಿ ಬಂದೆವು. ಮತ್ತೆ ಸೋನೆ ಮಳೆ ಶುರುವಾಯಿತು. ಕ್ಯಾಮೆರಾ ಹೊರಗೆ ತೆಗೆಯುವುದೆ ಭಯವಾಗುತ್ತಿತ್ತು. ಮತ್ತೆ ಈಜಾಡಿ ಸುಮಾರು ಹೊತ್ತು ಭೋರ್ಗರೆಯುವ ಹಾಲ್ಗಂಗೆಯನ್ನೆ ನೋಡುತ್ತಾ ಕುಳಿತೆವು. ಯಾಕೊ ಇದೇನು ಸಾಕೆನಿಸುವ ಯಾವ ಲಕ್ಷಣವು ನಮ್ಮಲ್ಲಿ ಯಾರಿಗೂ ಕಾಣಲಿಲ್ಲ. ದೂರದ ದೂದ್ ಸಾಗರ್ ವ್ಯೂವ್ ಪಾಯಿಂಟ್‌ಗೂ ಹೋಗಿ ಬಂದೆವು. ಕೊನೆಗೆ ವಾಪಾಸ್ಸು ರೈಲು ನಿಲ್ದಾಣದ ಹತ್ತಿರದಲ್ಲಿರುವ ಇಗರ್ಜಿಯೊಳಗೆ ಕೂತು ರೈಲಿಗೆ ಕಾದೆವು. ರೈಲು ಬಂತು. ಯಾವುದೆ ಟಿಕೆಟ್ ಸಹ ಇರಲಿಲ್ಲ. ಹತ್ತಿ ಕ್ಯಾಸಲ್ ರಾಕ್‌ರೆಗೂ ಟಿಕೇಟ್ ರಹಿತವಾಗಿ ಪ್ರಯಾಣಿಸಿದೆವು. ಆಹಾ ಅದ್ಭುತ ಅಂಕುಡೊಂಕುಗಳು. ಕಣ್ಣು ಹರವಿದಷ್ಟು ಹಸಿರು. ಕೆಳಗಿಣಿಕಿದಷ್ಟು ಆಳಕ್ಕೆ ಪ್ರಪಾತಗಳು. ಆಗಾಗ ಇಡೀ ವಾಸ್ತವವನ್ನು ಕತ್ತಲ ಮೂಟೆಯೊಳಗೆ ಕಟ್ಟಿ ಹಾಕುವ ಸುರಂಗಗಳು. ನಿಗೂಢ ಕಂದರಗಳು, ಬಣ್ಣದೆಲೆ ಚಿಗುರಿಸುವ ಸಾವಿರಾರು ಮರಗಳು, ಇಡೀ ವನ್ಯ ಸಂಪತ್ತನ್ನು ಒಡಲೊಳಗೆ ಬಸಿದಿಟ್ಟು ಪೋಷಿಸುವ ಪಶ್ಚಿಮ ಘಟ್ಟದ ಹಸಿ ತೇವ ತೊರೆಗಳು ಎಲ್ಲವೂ ಆ ಇಡಿ ಪ್ರಯಾಣದಲ್ಲಿ ಸಾಕ್ಷಿ ಬರೆಯುತ್ತವೆ! ಕ್ಯಾಸಲ್ ರಾಕ್ ಹತ್ತಿರತ್ತಿರಕ್ಕೆ ಬರುತ್ತಿದ್ದಂತೆ ಪಾಳುಬಿದ್ದ ಕೋಟೆಯಂತ ಒಂದಷ್ಟು ಹಳೆಯ ಪಾಚಿಗಟ್ಟಿದ ಒಡಕು ಮಹಲುಗಳು, ರೈಲು ಸಂಚಾರ ಸುಧಾರಣೆಗೆಂದು ವರ್ಷಾನುಗಟ್ಟಲೆ ಹಾಸಿಬಿಟ್ಟ ಹಳಿಗಳ ತುಂಡುಗಳು ನೋಡಲದೆಷ್ಟು ಸುಂದರವಾಗಿದ್ದವೆಂದರೆ ಪ್ರಾಚೀನ ಪಳಿಯುಳಿಕೆಯೊಳಗೂ ಜೀವವಿದೆ ಎನ್ನುವ ಭಾವ ಅನಂತವಾಗಿ ಎದೆಯೊಳಗೆ ಕಾಲೂರಿ ನಿಂತುಬಿಡುತ್ತದೆ! ಕ್ಯಾಸಲ್ ರಾಕ್‌ಲ್ಲಿ ಟಿಕೆಟ್ ಪಡೆದು ರೈಲು ಬೋಗಿ ಬದಲಾಯಿಸಿ ಅಲ್ಲಿಂದ ಲೊಂಡಾ ಮಾರ್ಗವಾಗಿ ಧಾರವಾಡ ತಲುಪುವಷ್ಟರಲ್ಲಿ ಮಧ್ಯೆ ರಾತ್ರಿ ಹನ್ನೆರಡು ಆಗಿತ್ತು. ಅದೆ ಹಸಿ ನೆನಪಲ್ಲಿ ಹಾಸಿಗೆಗೆ ಮೈ ಒರಗಿದೆ. ಬೆಳಿಗ್ಗೆ ಎದ್ದಾಗ ಮತ್ತದೆ ನೆನಪುಗಳು ಕಾಡತೊಡಗಿದವು!

ಮೌನೇಶ ಕನಸುಗಾರ
mouneshkanasugara01@gmail.com

ಧೂದ್ ಸಾಗರ.! ಪ್ರಯಾಣದ ಕೆಲವು ಛಾಯಾಚಿತ್ರಗಳು:

ಈ ಅಂಕಣದ ಹಿಂದಿನ ಬರೆಹಗಳು:
ಕೊಡಚಾದ್ರಿಯ ಕುತೂಹಲಗಳ ಕೆದಕುತ್ತಾ…
ಗ್ರೀನ್ ವ್ಯಾಲಿ ಮತ್ತು ಜಲಪಾತಗಳು
ಕವಲೇದುರ್ಗದ ಕೌತುಕಗಳು
ಕಾನನದ ಒಳಹೊಕ್ಕಷ್ಟು ಮೈ ಪುಳಕಿತಗೊಳ್ಳುತ್ತದೆ
ನಿತ್ಯ ವಿನೂತನ ಅಚ್ಚರಿಗಳ ಮಡಿಲಿನಲ್ಲಿ
ಹಸಿ ಕಾಡುಗಳ ಹಾದಿಯಲ್ಲಿ ಅನಂತ ಸುಖವನ್ನರಸಿ…
ಅಲೆಮಾರಿಯ ಅನುಭವಗಳು

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...