ಪಲಾಯನ ಸ್ವಭಾವದ ಮನುಷ್ಯ ಮನಸ್ಸಿನ ಅನಾವರಣ `ಮರಳಿ ಮನೆಗೆ' ಕಾದಂಬರಿ


ಲೇಖಕ ಕೆ.ಕೆ. ಗಂಗಾಧರನ್‌ ಅವರ ಅನುವಾದಿತ ಕಾದಂಬರಿ ಮರಳಿ ಮನೆಗೆ ಕೃತಿಯ ಆಯ್ದ ಭಾಗ ನಿಮ್ಮ ಓದಿಗಾಗಿ...

ಕೃತಿ: ಮರಳಿ ಮನೆಗೆ
ಲೇಖಕ: ಕೆ.ಕೆ. ಗಂಗಾಧರನ್
ಪುಟ: 136
ಬೆಲೆ: 150
ಮುದ್ರಣ: 2022
ಪ್ರಕಾಶನ: ಅಂಕಿತಾ ಪುಸ್ತಕ

ಪಲಾಯನ ಸ್ವಭಾವದ ಮನುಷ್ಯ ಮನಸ್ಸಿನ ಅನಾವರಣ ಮರಳಿ ಮನೆಗೆ ಕಾದಂಬರಿ. ಎಲ್ಲಿಯೂ ತಲುಪದ, ಗುರಿಯಿಲ್ಲದೆ ಅಲೆದಾಡಿ ಕೊನೆಗೆ ಹುಟ್ಟಿದ ಮನೆಗೆ ಮರಳುವ ನಾಯಕ. ಗ್ರಾಮಜೀವನದ ರಾಜಕೀಯದ ಆಗು ಹೋಗು ಗಳನ್ನು ಕಟ್ಟಿಕೊಡುವ ಅಪರೂಪದ ಕಾದಂಬರಿ *ಮರಳಿ ಮನೆಗೆ' ಮಲಯಾಳಂನ ಖ್ಯಾತ ಕತೆಗಾರ, ಬಾಲಸಾಹಿತ್ಯದಲ್ಲಿ ಸಂಶೋಧನೆ ಮಾಡಿದ, ಸರಕಾರದ ಸಾಂಸ್ಕೃತಿಕ ಪ್ರಕಟಣೆಗಳ ಸಂಪಾದಕರಾಗಿ, ಕೇರಳ ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿಯಾಗಿ, ಕಾರ್ಯ ನಿರ್ವಹಿಸಿರುವ, ಲೇಖಕ ಡಾ. ಪ್ರಭಾಕರನ್ ಪಳಸ್ಸಿಯವರ ಈ ಕಾದಂಬರಿ ಭಿನ್ನ ಅನುಭವ ನೀಡುವ ಕೃತಿಯಾಗಿದೆ ಇದನ್ನು ಖ್ಯಾತ ಅನುವಾದಕ ಕೆ.ಕೆ. ಗಂಗಾಧರನ್‌ ಅವರು ಮರಳಿ ಮನೆಗೆ ಎಂಬ ಕಾದಂಬರಿ ಮೂಲಕ ಸಮರ್ಪಕವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

***

ಕೃತಿಯ ಆಯ್ದ ಭಾಗ - ಅಧ್ಯಾಯ 12

ನಾವು ನಿರಾಶ್ರಿತರೆಂದು ಗೊತ್ತಿದ್ದರೂ ಟ್ಯಾಕ್ಸಿಯವರಿಗೆ ನಮ್ಮ ಮೇಲೆ ಯಾವುದೇ ಅನುಕಂಪವಿರಲಿಲ್ಲ. ದೂರದಿಂದ ಬರುವ ಪ್ರಯಾಣಿಕರ ಮೇಲೆ ಅವರಿಗೆ ಅತೀವ 'ಅಕ್ಕರೆ', ನಾನು ಟ್ಯಾಕ್ಸಿಯವರನ್ನು ಲೆಕ್ಕಿಸದೆ ರೈಲ್ವೆ ಸ್ಟೇಷನ್ನಿನ ಪರಿಸರದಿಂದ ಹೊರಬಿದ್ದೆ. ಪುಟ್ಟದೊಂದು ಪೆಟ್ಟಿಗೆ ಮಾತ್ರ ನನ್ನ ಕೈಯಲ್ಲಿತ್ತು. ನನ್ನಂತೆಯೇ ನಿರಾವಲಂಬಿಗಳಾದ ಹತ್ತು ಹದಿನೆಂಟು ಮಂದಿ ನನಗೂ ಮೊದಲೇ ಸ್ಟೇಷನ್ನಿನಿಂದ ಹೊರಬಂದಿದ್ದರು. ಕೇರಳದ ರಾಜಧಾನಿ ನಗರ ನನ್ನ ಮುಂದೆ ನಿಡಿದಾಗಿ ಮಲಗಿತ್ತು.

ಆಟೋರಿಕ್ಷಾದವನ ಕಣ್ಣಲ್ಲೂ ಚೂರು ರಕ್ತವಿರಲಿಲ್ಲ. ಒಂದು ಸಾಮಾನ್ಯ ಹೋಟೇಲಿಗೆ ಕರೆದೊಯ್ಯಲು ಮೀಟರ್ ಛಾರ್ಜ್‌ನ ಮೇಲೆ ದುಪ್ಪಟ್ಟು ಕೇಳಿದ. ನಾನು ಕೊಡಬೇಕಾಯಿತು. ಕೇರಳದಲ್ಲಿರುವ ಹಲವಾರು ನಗರಗಳನ್ನು ಬಿಟ್ಟು ತಿರುವನಂತಪುರಕ್ಕೆ ಬರಲು ಕಾರಣವಿಲ್ಲದಿಲ್ಲ. ನನ್ನಂತಹ ಹಲವಾರು ನಿರಾಶ್ರಿತರನ್ನು ರಕ್ಷಿಸಲು ಇಲ್ಲೊಂದು ಸೆಲ್ಲಿದೆಯಂತೆ. ಅಲ್ಲಿ ಹೆಸರು ರಿಜಿಸ್ಟರ್ ಮಾಡಿದರೆ....

ಹಾಗೆ ನೋಡುವುದಾದರೆ ನನಗೆ ಹೋಗಲು ಊರೇ ಇರಲಿಲ್ಲ. ಶ್ರೀದೇವಿ, ಸುಮಿತ್ರರವರಿಂದೆಲ್ಲಾ ದೂರಕ್ಕೆ ಓಡಿದವನು ನಾನು, ಅಮ್ಮನ ಮಡಿಲಿನಿಂದ, ಅಪ್ಪನ ತೋಳ ತೆಕ್ಕೆಯಿಂದ ಕೆಳಗಿಳಿದು ಪರಾರಿಯಾದವನು. ರುಕ್ಕಿಣಿಯ ಮನಕರಗುವ 'ಅಣ್ಣಾ' ಎಂಬ ಕರೆಯನ್ನು ಧಿಕ್ಕರಿಸಿ ಊರು ಬಿಟ್ಟು ಓಡಿಬಂದವನು.

ತಪ್ಪಿಸಿಕೊಳ್ಳುವುದು ನನ್ನ ಜೀವನದಲ್ಲಿ ಜುಗುಪ್ಸೆ ಪಡುವಷ್ಟು ಸಲ ಪುನರಾವರ್ತನೆ ಗೊಂಡಿದೆ. ಯಾವುದೇ ಗಟ್ಟಿ ನಿಲುವು ಇಲ್ಲದ ಬದುಕು. ಕುವೈತ್‌ ನಿಂದ ಮರಳ ಬಂದರೆ ತ್ರಿಶೂರಿನಲ್ಲಿಯೋ, ತಿರುವನಂತರದಲ್ಲಿಯೋ ಒಂದು ಮನೆ ಮಾಡಿಕೊಂಡು ಶಾಶ್ವತವಾಗಿ ನೆಲೆಯೂರಬೇಕೆಂದು ಬಯಸಿದ್ದೆ. ಹಸಿರನ್ನು ಉಳಿಸಿಕೊಂಡಿರುವ ತಿರುವನಂತಪುರ, ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ಬದುಕಿನ ಎಲ್ಲಾ ಹಾದಿಗಳು ವಡಕ್ಕುನಾಥನ ಪಾದಾರವಿಂದಗಳಲ್ಲಿ ಕೊನೆಯಾಗುವ ತ್ರಿಶಿವಪೇರೂರು (ತ್ರಿಶೂರ್ ) ನನ್ನ ಇಷ್ಟದ ನಗರವಾಗಿತ್ತು. ಹಿಂದೆ ಅಂಕಲ್‌ನ ಜೊತೆಗೆ ಈ ಎರಡು ನಗರಗಳನ್ನು ಸಂದರ್ಶಿಸಿದ್ದೆ.

“ನಿನಗೆ ಎರಡು ಸಿಟಿಯಲ್ಲೂ ಸಾಕಷ್ಟು ಗೆಳೆಯರಿದ್ದಾರೆ" ಅಂಕಲ್ ಹೇಳುತ್ತಿದ್ದರು

. "ನೀನು ಎಲ್ಲಿ ಬೇಕೋ ಅಲ್ಲಿ ನಿನಗೊಂದು ಮನೆ ತೆಕ್ಕೊಡ್ತೀನಿ" ಅಂಕಲ್ ಭರವಸೆ ನೀಡಿದ್ದರು.

ತಿರುವನಂತಪುರದಲ್ಲಿ ಒಂದು ಮನೆಯಿದ್ದರೆ ಯಾವುದಾದರೂ ಕೆಲಸಕ್ಕೆ ಹೋದರೆ ಉಳಿಯಲು ಒಂದು ಮನೆಯಾಗುತ್ತದಲ್ಲವೆಂದು ಕೊಂಡಿರಬಹುದು ಅಂಕಲ್.

ತಿರುವನಂತಪುರದಲ್ಲಿದ್ದರೆ ಒಂದು ಧಾರಾವಾಹಿಯ ನಿರ್ಮಾಪಕನಾಗಬಹುದು. ತ್ರಿಶೂರಿನಲ್ಲಾದರೆ ಒಂದು ಸಿನಿಮಾ ಮಂದಿರದ ಮಾಲೀಕನಾಗಬಹುದು. ಅದಕ್ಕೋಸ್ಕರವೇ ನಾನು ಇಷ್ಟು ಕಾಲ ಗಲ್ಫ್‌ ನಲ್ಲಿದ್ದು ಸಂಪಾದಿಸಿದ್ದು, ಪದೇಪದೇ ಊರಿಗೆ ಹೋಗದೆ, ಓವರ್‌ಟೈಂ ದುಡಿದು ಹಣ ಕೂಡಿಟ್ಟೆ. ವಿಮಾನದ ಪ್ರಯಾಣದ ವೆಚ್ಚ, ಊರವರಿಗೆ ಉಡುಗೊರೆಯ ವೆಚ್ಚ, ಗಲ್‌ನಲ್ಲಿರುವನೆಂಬ ಗತ್ತು ಗಾಂಭೀರ್ಯ ಪ್ರದರ್ಶಿಸಲು ಖರ್ಚು ಮಾಡುವ ಹಣವೂ ಉಳಿದಿತ್ತು. ಆದರೆ ಸಂಗ್ರಹಿಸಿಟ್ಟಿದ್ದ ಹಣವೆಲ್ಲಾ ಯುದ್ಧದಿಂದ ನೀರು ಪಾಲಾಯಿತು.

ಸೆಕ್ರೆಟರಿಯೇಟ್‌ನ ಉಪಭವನದಲ್ಲಿ ಒಂದು ಸೆಲ್ ಕಾರ್ಯನಿರ್ವಹಿಸುತ್ತಿತ್ತು. ಒಬ್ಬರು ಡೆಪ್ಯೂಟಿ ಸೆಕ್ರೆಟರಿ, ಒಬ್ಬ ಅಂಡರ್ ಸೆಕ್ರೆಟರಿ, ಒಬ್ಬ ಸೆಕ್ಷನ್ ಆಫೀಸರ್ ನಾಲ್ಕು ಗುಮಾಸ್ತರಿರುವ ಪುಟ್ಟ ವಿಭಾಗ! ಜೊತೆಗೆ ಒಬ್ಬ ಡಿ.ವೈ.ಎಸ್.ಪಿ. ಹಾಗೂ ಸಾರ್ವಜನಿಕ ಸಂಪರ್ಕಕ್ಕೆ ಒಬ್ಬ ಹೆಣ್ಮಗಳು ಎಲ್ಲರೂ ಬೇರೆ ಇಲಾಖೆಯಿಂದ ಡೆಪ್ಯುಟೇಷನ್‌ನ ಮೇಲೆ ಬಂದಿದ್ದಾರಂತೆ.

ಗೇಟುದಾಟಿ ಸೆಲ್ಲಿಗೆ ಹೋದಾಗ ಅಲ್ಲೆಲ್ಲಾ ಜುಗುಪ್ಪೆ ಹುಟ್ಟಿಸುವ 'ಸುಗಂಧ' ಪಸರಿಸಿತ್ತು. ಕೆಂಪು ದೀಪದ ಬೀದಿಯ ಕೆಟ್ಟ ವಾಸನೆಯಂತಿತ್ತದು . ಗಲ್ಫ್‌ನಿಂದ ಬಂದಿಳಿಯುವಾಗ ಮುಂಬೈನಲ್ಲಿ ದೊರೆಯುವ 'ಫಾರಿನ್' ಸೀರೆಗಳನ್ನು ಅಲ್ಲಿರುವ ಮಹಿಳೆಯರು ಧರಿಸಿದ್ದರು. ಏನೂ ತೆಗೆದುಕೊಂಡು ಬಾರದವರು ಮನೆಯಲ್ಲಿದ್ದ ಹಳೆಯ ಸಂಗಪದಿಂದ ಹುಡುಕಿ ತಂದು ಉಡುಗೊರೆಯಾಗಿ ಕೊಟ್ಟಿರಬೇಕೆಂದುಕೊಂಡೆ.

ಮನೆಯಿಂದ ತರೋಣವೆಂದರೆ ಮನೆಯೇ ಇಲ್ಲದವರು ಏನು ಮಾಡುವುದು? ನನ್ನ ಪರದಾಟವನ್ನು ಕಂಡು ಒಬ್ಬಾಕೆ ಹೇಳಿದಳು.

'ಅದೆಲ್ಲಾ ಪರವಾಗಿಲ್ಲ, ನೀವು ಒಂದು ಮನವಿ ಬರ್‍ಕೊಡಿ ಏನೇನು ಕಳ್ಕೊಂಡ್ರಿ ಎಲ್ಲವನ್ನು ಆದರಲ್ಲಿ ಪಟ್ಟಿ ಮಾಡಿ, ಪುರಾಣಗಳೇನೂ ಬರೀಬೇಡಿ”

ನಾನು ಸುಂದರವಾದ ಹಸ್ತಾಕ್ಷರದಲ್ಲಿ ಒಂದು ಮನವಿಯನ್ನು ಬರೆದುಕೊಟ್ಟೆ, ಅಪಾರ್ಟ್‌ಮೆಂಟಿನ ಕೆಳಗೆ ಬಿಟ್ಟು ಬಂದ ಇಟಾಲಿಯನ್ ಕಾರು, ಒಳಗಿದ್ದ ಟಿ.ವಿ., ವಾಷಿಂಗ್ ಮೆಷಿನ್‌ ಸೇರಿದಂತೆ ನಾನು ಕಳೆದುಕೊಂಡಿದ್ದೆಲ್ಲವನ್ನು ಹೃದಯ ಕರಗುವ ಭಾಷೆಯಲ್ಲಿ ಬರೆದು ಸಹಿ ಮಾಡಿಕೊಟ್ಟೆ, ಸುಂದರವಾದ ಹಸ್ತಾಕ್ಷರವಾದರೂ ಅದರಲ್ಲಿದ್ದ ಒಂದೂ ವಾಕ್ಯವನ್ನು ಓದದೆ ಕ್ಲರ್ಕ್ ಅದನ್ನು ನಂಬರ್ ಹಾಕುವ ಟ್ರೇಗೆ ವರ್ಗಾಯಿಸಿದ.

ಒಂದು ವಾರ ಪೂರ್ತಿ ನಾನು ಉಪಭವನ ಹತ್ತಿ ಇಳಿದರೂ ಫೈಲಿಗೆ ಜೀವ ಬರಲಿಲ್ಲ. ಜೀವದ ಮೊದಲ ಸ್ಪಂದನವಾದ ನಂಬರ್ ಕೂಡ ನಮೂದಿಸಿ ಸಿಗಲಿಲ್ಲ. ಹೀಗಿರಲು ಹತ್ತಿ ಇಳಿಯುವುದರ ನಡುವೆ, ಆಶಾ ಎಂಬ ಹೆಣ್ಮಗಳೊಂದಿಗೆ ದಿನವೂ ಹರಟೆ ಹೊಡೆಯುತ್ತಿದ್ದ ಡಿ.ವೈ.ಎಸ್.ಪಿ.ಯನ್ನು ಪರಿಚಯಿಸಿಕೊಂಡೆ. ಆತ ನನ್ನನ್ನು ಎಲ್ಲೋ ನೋಡಿದ್ದಾಗಿ ಅನುಮಾನ ವ್ಯಕ್ತಪಡಿಸಿದ. ಆದರೆ ಅವನನ್ನು ಕಂಡ ನೆನಪು ನನಗಾಗಲೇ ಇಲ್ಲ. ಕೆಲವರು ಹಾಗೆಯೇ...ಯಾರನ್ನೇ ನೋಡಲಿ ಎಲ್ಲೋ ಕಂಡದ್ದಾಗಿ ಅಂದಾಜು ಗುಂಡು ಹೊಡೆಯುತ್ತಾರೆ.

ಆದರೆ ಇದು ಹಾಗಾಗಲಿಲ್ಲ. ಅವನು ಅಂಕಲ್‌ನ ಆಶ್ರಯದಲ್ಲಿದ್ದನೆಂಬ ಸುಳಿವು ಮಾತಿನ ನಡುವೆ ದೊರೆಯಿತು. ವರ್ಗಾವಣೆಯೊಂದರ ಸಲುವಾಗಿ ಅವನು ಅಂಕಲ್‌ನನ್ನು ಭೇಟಿಯಾಗಲು ಬಂದಿದ್ದಾಗ ನಾನೇ ಬಾಗಿಲು ತೆರೆದಿದ್ದೆ. ಅಂಕಲ್‌ ಅವನಿಗೆ ವರ್ಗಮಾಡಿಸಿ ಕೊಟ್ಟಿದ್ದರು ಕೂಡ. ಅದರ ನಂತರದ ವರ್ಷ ಸಾಕಷ್ಟು ವಿದ್ಯುನ್ಮಾನ ಉಡುಗೊರೆಗಳೊಂದಿಗೆ ಅವನು ಅಂಕಲ್‌ನ ಭೇಟಿಗೆ ಬಂದಿದ್ದ. ಆದರೆ ಅಂದು ನಾನಿರಲಿಲ್ಲ. ಶ್ರೀದೇವಿಗೆ ಉಡುಗೊರೆಯಾಗಿ ಕೊಟ್ಟ ಸುಗಂಧದ್ರವ್ಯಗಳ ಮೂಲಕ ಅವನ ಸೌಭಾಗ್ಯಗಳನ್ನು ಕೇಳಿಸಿಕೊಂಡಿದ್ದೆ. ಬೀಟೆ ಮತ್ತು ಸಾಗುವಾನಿಗಳಿಂದ ಅಲಂಕರಿಸಿದ ಸುಂದರವಾದ ತನ್ನ ಮನೆಗೆ ಅಂಕಲ್ ಮತ್ತು ಸುಮಕ್ಕನನ್ನು ಕರೆದುಕೊಂಡು ಹೋಗಿ ಸತ್ಕಾರ ಮಾಡಿದ್ದನಂತೆ. ಅದೃಷ್ಟವೆಂದೇ ಹೇಳಬೇಕು. ಆತನಿಗೆ ನನ್ನನ್ನು ಗುರುತಿಸಲು ಸಾಧ್ಯವಾಗಲೇ ಇಲ್ಲ.

ಬಿಯರ್ ಪಾರ್ಲರಿನಲ್ಲಿ ಅವನ ವೀರಸಾಹಸ ಗಾಥೆಯನ್ನು ಹೇಳುತ್ತಿದ್ದಂತೆ ಅಂಕಲ್‌ನ ಹೆಸರು ನುಸುಳಿ ಬಂತು. ನಾನು ಅದನ್ನೇ ಗಟ್ಟಿಯಾಗಿ ಹಿಡಿದು ನಿಂತೆ.

ನಾಲ್ಕು ಬಾಟಲಿ ಬಿಯರುಗಳ ಪೈಕಿ ಮೂರು ಬಿಯರು ಅವನ ಗುಡಾಣದಂತಹ ಹೊಟ್ಟೆ ಹೊಕ್ಕಾಗ ಅವನು ಕತೆ ಹೇಳತೊಡಗಿದ. ನನಗೆ ಗೊತ್ತಿದ್ದ ಕತೆ ಮುಗಿದಾಗ ಮುಂದಿನದನ್ನು ಕೇಳಲು ನಾನು ಉತ್ಸುಕನಾದೆ. ನಾನೊಬ್ಬ ಕತೆಗಾರನೆಂದು ಅವನನ್ನು ನಂಬಿಸಿದ್ದುದರಿಂದ ಎಲ್ಲಾ ವಿವರಗಳು ಹೊರಬಂದವು. ಇದರ ನಡುವೆ ಮೂರು ಸಲ ನಾವು ಒಂದೇ ಬಾರಿನಲ್ಲಿ ಭೇಟಿಯಾಗಿದ್ದೆವು.

ಊಹಿಸಿದಂತೆಲ್ಲ ಕೆಲಸ ಕಾರ್ಯಗಳು ಮುಂದುವರಿದಿದ್ದು, ಚಂದ್ರವಾರಿಯ‌ರ್‌ ಎಷ್ಟೇ ಪ್ರಯತ್ನಿಸಿದರೂ ಸುಮಕ್ಕನಿಗೆ ಸೀಟು ಸಿಗಲಿಲ್ಲ. ಅಂಕಲ್‌ನ ಮೂಲಕ ಓಡಾಡಿದರೂ ಸಾಧ್ಯವಾಗಲಿಲ್ಲ. ಹೈಕ್‌ಮಾಂಡ್ ಮಧ್ಯ ಪ್ರವೇಶಿಸಿ ಆ. ಸೀಟನ್ನು ಯುವ ಜನ ಪ್ರತಿನಿಧಿಗೆ ಮೀಸಲಿರಿಸಿದರಂತೆ. ನನ್ನ ಹೆಸರು ಏಕ ಕಂಠದಿಂದ ಅನುಮೋದಿಸಲ್ಪಟ್ಟಿತಂತೆ. ಆದರೆ ನಾನು ಎಲ್ಲಿದ್ದೆ? ನನ್ನನ್ನು ಪತ್ತೆ ಹಚ್ಚಲು ಸಾಧ್ಯವೇ? ಕೊನೆಗೆ ವಿದ್ಯಾರ್ಥಿ ನಾಯಕನೊಬ್ಬನನ್ನು ದಕ್ಷಿಣದಿಂದ ಆಮದು ಮಾಡಿಕೊಳ್ಳಬೇಕಾಯಿತಂತೆ, ಚಂದ್ರ ವಾರಿಯರ್ ಕೂಡ ಸ್ಥಾನವಂಚಿತರ ಸಾಲಿಗೆ ಸೇರಲ್ಪಟ್ಟರಂತೆ, ಅವನು ನಿರಂತರವಾಗಿ ಗೆಲ್ಲುತ್ತಿದ್ದ ಕ್ಷೇತ್ರದಲ್ಲಿ ಹೊಸದಾಗಿ ಬಂದ ಒಬ್ಬ ಮಹಿಳಾನಾಯಕಿ ಬಾವುಟ ಹಾರಿಸಿದರಂತೆ, ವಾರಿಯರ್‌ರ ಪ್ರತಾಪ ಅಸ್ತಮಿಸಿದ ಕೂಡಲೇ ಸುಮಕ್ಕೆ ರಾಜಧಾನಿಗೆ ಹೋಗದಾದರು. ಫ್ರೆಡ್ಡಿಯ ನೀಲಿಕಾರು, ಅಸಹ್ಯವಾದ ಸುಗಂಧಗಳೆಲ್ಲವೂ ಹಳ್ಳಿಯ ಹಾದಿಯಿಂದ ದೂರವಾಯಿತು.

ಸುಮಕ್ಕ ಅಳುತ್ತಾ 'ಆದಾ ಉಂಡೆನು ಕಡಾ ತೆಗಿ' ಎಂಬಂತೆ ಅಂಕಲ್‌ನ ಹೃದಯದಲ್ಲಿ ಪುನಃ ಆಶ್ರಯ ಪಡೆದರು. ಇನ್ನು ಮುಂದೆ ತಾನು ರಾಜಕೀಯಕ್ಕೆ ಬರುವುದಿಲ್ಲವೆಂದು ನಿರ್ಧರಿಸಿ ಶೇಕಡಾ ನೂರರಷ್ಟು ಗೃಹಿಣಿಯಾಗಿ ಬದಲಾಯಿಸಿದರು.ಶ್ರೀದೇವಿ? ನನಗೆ ಅದೇ ಆತಂಕವಾಗಿತ್ತು. ಬದಲಾವಣೆಯಾಗಿದ್ದು ಶ್ರೀದೇವಿಯಲ್ಲಂತೆ. ಒಂದು ವರ್ಷ ಅವಳು ಮನೆಯಿಂದ ಹೊರಬರಲೇ ಇಲ್ಲ. ಔಟ್‌ ಹೌಸಿನಲ್ಲಿಯೇ ಉಳಿದುಕೊಂಡಳು. ದೂರದ ದೊಡ್ಡಮ್ಮ ಒಬ್ಬರು ಅವಳ ಕಷ್ಟಗಳನ್ನು ಕೇಳಿ ತಿಳಿದು ಅವಳ ಜೊತೆ ಇರಲು ಬಂದಳಂತೆ, ಒಂದು ವರ್ಷ ಕಳೆದರೂ ಗಂಡ ಹಿಂತಿರುಗಲಿಲ್ಲ ಎಂದು ಅವಳು ನಿಧಾನವಾಗಿ ಪರದೆ ಸರಿಸಿ ಹೊರಬಂದಳು.

ಮೊದಲು ಆದಿವಾಸಿ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯಕ್ರಮದ ಭಾಗವಾದಳು. ಅನಂತರ ಆದಿವಾಸಿ ಹೆಣ್ಮಕ್ಕಳಿಗೆ ಪಾತಿವ್ರತ್ಯದ ಕುರಿತು ತಿಳಿಯ ಹೇಳಿದಳು. ಅವರೆಲ್ಲಾ ಶ್ರೀದೇವಿಯನ್ನು `ಅಮ್ಮಾ' ಎಂದೇ ಕರೆದರು. ಕಪ್ಪು ಅಂಚಿನ ಬಿಳಿಯ ಖಾದಿ ಸೀರೆ ಬ್ರೌಸ್ ತೊಟ್ಟ ಸುಂದರಿ ಶ್ರೀದೇವಿಗೆ ಅಭಿಮಾನಿಗಳು ಹೆಚ್ಚಾದರು. ಬೆಳಿಗ್ಗೆ ಮನೆಯಿಂದ ಹೊರಡುವ ಮೊದಲೇ ಬಹಳಷ್ಟು ಮಂದಿ ಅವಳನ್ನು ಭೇಟಿಯಾಗಲು ಬರುತ್ತಿದ್ದರು. ಹಳೆಯದೊಂದು ಫಿಯೆಟ್ ಕಾರಿನಲ್ಲಿ ತಾನೇ ಡ್ರೈವ್ ಮಾಡಿ ಎಲ್ಲರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಮದ್ಯಪಾನದ ವಿರುದ್ಧ ಪಾದಯಾತ್ರೆ ಮಾಡಿ ಹಳ್ಳಿಯ ಆಚೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದಳು.

ಹಲವಾರು ಆಲೋಚನೆಗಳು ಬಂದವು. ಅಂಕಲ್ ಅವಳನ್ನು ಸಾಕಷ್ಟು ಬಲವಂತ ಪಡಿಸಿದ್ದರು ಕೂಡ. ಜೀವನದಲ್ಲಿ ಮದುವೆ ಒಮ್ಮೆ ಮಾತ್ರವೆಂಬುದು ಅವಳ ದೃಢವಾದ ನಿರ್ಧಾರ, ತನ್ನ ಗಂಡನನ್ನು ಯಾರೋ ಅಪಾಯಕ್ಕೆ ತಳ್ಳಿದ್ದಾರೆಂದು ಅವಳು ಮೊದಲು ತಿಳಿದುಕೊಂಡಿದ್ದಳು. ಆದರೆ ಸ್ವಲ್ಪ ಕಾಲದ ನಂತರ ಅವಳ ನಂಬಿಕೆ ಹುಸಿಯೆನಿಸಿತು. ಅಪ್ಪ ಅಮ್ಮ ಎಷ್ಟೇ ಬಲವಂತಪಡಿಸಿದರೂ ಅವಳು ತನ್ನ ನೆತ್ತಿಯ ಮೇಲಿನ ಸಿಂಧೂರವನ್ನು ಅಳಿಸಲಿಲ್ಲ.

ಬಾರ್‌ನಿಂದ ಕೋಣೆಗೆ ಬಂದು ನಾನು ಶ್ರೀದೇವಿಯನ್ನು ನೆನೆದು ಬಿಕ್ಕಿಬಿಕ್ಕಿ ಅತ್ತೆ. ಮಧ್ಯರಾತ್ರಿಯಲೆಲ್ಲಾ 'ದೇವಿ' ಎಂದು ನಾನು ಬಾಗಿಲು ತಟ್ಟಿ ಕರೆಯುತ್ತೇನೆಂದು ಅವಳು ನಿದ್ರೆಗೆಟ್ಟು ಕಾದಿದ್ದಳು. ಎಷ್ಟೇ ವರ್ಷಗಳಾದರೂ ಒಂದು ದಿನ ತಾನು ತಿರುಗಿ ಹೋಗುತ್ತೇನೆಂದು ಅವಳು ನಂಬಿದ್ದಾಳೆ.

ಅ೦ದು ನಿದ್ರಿಸದ ಒಂದು ರಾತ್ರಿ, ಹತ್ತಿರವಾದಾಗ ತುಂಬಾ ಹತ್ತಿರವಾಗುವುದು, ಆಗಲುವಾಗ ತಂಬಾ ದೂರವಾಗುವುದು ನನ್ನ ಶೈಲಿ, ನನ್ನ ಸ್ವಂತ ಕುಟುಂಬವನ್ನು ಮಾವನ ಕುಟುಂಬವನ್ನು ಎಷ್ಟೊಂದು ಪ್ರೀತಿಸುತ್ತಿದ್ದೆ. ಇಷ್ಟಾದರೂ ನಾನು ಅವರನ್ನು ಬಿಟ್ಟು ಹೋಗಲು ಹಿಂಜರಿಯಲಿಲ್ಲ. ಶ್ರೀದೇವಿಯನ್ನು ನಾನು ನನ್ನ ಹೃದಯದೊಳಗಿಟ್ಟು ಪೂಜಿಸಿದ್ದೆ, ದೂರವಾದ ನಂತರ ಅನ್ವೇಷಿಸಬೇಕೆಂದೆನಿಸಿದ್ದು ಈಗ.

ಡಿ.ವೈ.ಎಸ್.ಪಿ. ಇತ್ತೀಚೆಗೆ ಭೇಟಿಯಾಗಿದ್ದು ಎಂಟು ತಿಂಗಳ ಮೊದಲು. ಒಬ್ಬ ಗಲ್ಫ್ ಪ್ರಯಾಣಿಗ ಉಡುಗೊರೆಯಾಗಿ ಕೊಟ್ಟ ಶಿವಾಗ್ ರೀಗಲ್‌ನೊಂದಿಗೆ ನೇರವಾಗಿ ಅಂಕಲನ್ನು ಭೇಟಿಯಾಗಲು ಹೋದಾಗ, ಅಂಕಲ್‌ ಕುಡಿದರು... ಕಂಠಪೂರ್ತಿ ಕುಡಿದು ಅಮಲೇರಿಸಿಕೊಂಡರು. ಅನಂತರ ಅವರು ಮಾತನಾಡಿದ್ದು ತಮ್ಮ ಮಗಳ ಕರುಣಾಜನಕ ಕತೆಗಳನ್ನು, ಶ್ರೀದೇವಿಗೆ ಸೂಕ್ತವಾದ ಗಂಡನ್ನು ಹುಡುಕಲು ಡಿ.ವೈ.ಎಸ್.ಪಿ ಗೆ ವಹಿಸಿದ್ದರು.

“ನಿನ್ನ ಫಿಗರಿಗೆ ಸೂಟ್ ಆಗುತ್ತದೆ” ಡಿ.ವೈ.ಎಸ್.ಪಿ. ಕಳ್ಳನಗು ಬೀರುತ್ತಾ ಹೇಳಿದ, 'ಗತಿ ಇಲ್ಲದ ಗಿನವನು ಎಂಬುದಷ್ಟೆ ನಿನ್ನ ಸಮಸ್ಯೆ' ಇನ್ನು ನಾನು ಹೇಗೆ ಶ್ರೀದೇವಿಯ ಮುಖ ನೋಡುವುದು?

ಅವಳು ನನ್ನನ್ನು ಜೀವಂತವಾಗಿ ಕಂಡಾಗ ಹೇಗಿರುತ್ತದೆ ಅವಳ ಪ್ರತಿಕ್ರಿಯೆ? ನನ್ನ ಚಿತ್ರವನ್ನು ಮತ್ತು ಭೂತಕಾಲವನ್ನಷ್ಟೇ ಅವಳು ಜ್ಞಾಪಿಸಿಕೊಳ್ಳುತ್ತಿರುವುದು?

ಒಂದು ವಾರ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದೆ ನಾನು ಚಡಪಡಿಸಿದೆ. ನಗರದ ಬಹುತೇಕ ಎಲ್ಲಾ ದೇವಸ್ಥಾನಗಳ ಮೆಟ್ಟಿಲುಗಳನ್ನು ಹತ್ತಿ ಇಳಿದೆ. ಕನ್ಯಾಕುಮಾರಿಗೆ ಹೋಗಿ ಮೂರು ಸಮುದ್ರ ಸೇರುವ ಬಿಂದುವಿನಲ್ಲಿ ಮೂರು ಸಲ ಮುಳುಗು ಹಾಕಿದೆ. ಕಣ್ಣಿನಿಂದ ಹರಿದ ನೀರನ್ನು ಕಡಲುಗಳಿಗೆ ಅರ್ಪಿಸಿದೆ. ಪುಟ್ಟಪುಟ್ಟ ಅಲೆಗಳು ಬಂದು ಮರಳಿನಿಂದ ನನ್ನ ಕೊಳೆಯನ್ನು ತುಂಬಾ ಹೊತ್ತು ಉಜ್ಜಿ ಸ್ವಚ್ಛಗೊಳಿಸಿದವು. ನೊರೆನೊರೆಯಾಗಿ ಬಂದ ಅಲೆಗಳು ನನ್ನ ಕೊಳೆಯನ್ನು ಸಮುದ್ರದಾಳಕ್ಕೆ ಒಯ್ದವು ಸೂರ್ಯನನ್ನು ನೋಡುತ್ತಾ ನಿಂತು ನನ್ನ ಪಾಪಗಳನ್ನೆಲ್ಲಾ ಅದಕ್ಕೆ ಅರ್ಪಿಸಿದೆ. ತ್ರಿವೇಣಿಯಲ್ಲಿ ಮುಳುಗುವ ಸೂರ್ಯಕುಂಭದೊಂದಿಗೆ ನನ್ನ ಪಾಪವು ಕಡಳಿನಾಳಕ್ಕೆ ಇಳಿದವು.

- ಕೆ.ಕೆ. ಗಂಗಾಧರನ್

ಕೆ.ಕೆ. ಗಂಗಾಧರನ್ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..
ಮರಳಿ ಮನೆಗೆ ಕೃತಿ ಪರಿಚಯ...





MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...