ಪಂಡಿತಾ ರಮಾಬಾಯಿ ಎಂಬ ಅಪ್ರತಿಮ ಕ್ರಿಯಾಶೀಲ ಮಹಿಳೆ- ಭಾಗ-2

Date: 14-07-2021

Location: ಬೆಂಗಳೂರು


ಉಚ್ಛಕುಲದಲ್ಲಿ ಹುಟ್ಟಿದರೂ ಸಾಂಪ್ರದಾಯಿಕ ನಡೆಯನ್ನು ಮುರಿದರು ಎಂಬ ಆರೋಪಕ್ಕೆ ಹಿಂಸೆ-ಅಪಮಾನಗಳನ್ನು ಅನುಭವಿಸಿದ ಪಂಡಿತಾ ರಮಾಬಾಯಿಯ ಬಂಡಾಯ ಮನೋಧರ್ಮ ಬದಲಾಗಲಿಲ್ಲ. ಪುರೋಹಿತಶಾಹಿ, ಗಂಡಾಳ್ವಿಕೆಯನ್ನು ವಿರೋಧಿಸಿದ ಅವರ ಸಾಹಸಗಾಥೆಯನ್ನು ಪ್ರೊ. ರಾಜೇಂದ್ರ ಚೆನ್ನಿ ಅವರು ತಮ್ಮ ‘ಓದಿನ ದಾರಿ’ ಅಂಕಣದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವಿವರಿಸಿದ ಎರಡನೇ ಭಾಗದ ಪಠ್ಯವಿದು.

ಪಂಡಿತಾ ರಮಾಬಾಯಿಯವರ ಮತಾಂತರದ ಕಾರಣದ ಬಗ್ಗೆ ಬಗೆಹರಿಯದ ಚರ್ಚೆ ಇಂದಿಗೂ ನಡೆಯುತ್ತಲಿದೆ. ಬಾಲ್ಯದಿಂದಲೂ ಆಳವಾದ ಧಾರ್ಮಿಕ ಪ್ರವೃತ್ತಿಯ ರಮಾಬಾಯಿ ಆಸ್ತಿಕರಾಗಿದ್ದರು ಮತ್ತು ಜಗನ್ನಿಯಮಕನಾದ ದೇವರ ಬಗ್ಗೆ ಅವನ ಕರುಣೆಯ ಬಗ್ಗೆ ಶ್ರದ್ಧೆವುಳ್ಳವರಾಗಿದ್ದರು. ಜಲಸಮಾಧಿಗೆಂದು ಸಿದ್ಧವಾಗಿದ್ದ ಅವರ ತಂದೆ ಮಗಳಿಗೆ ಹೇಳಿದ ಮಾತು ಈ ಶ್ರದ್ಧೆಯನ್ನು ಎಂದೂ ಬಿಟ್ಟುಕೊಡದಿರು ಎಂದು. ಬ್ರಾಹ್ಮಣ ಸಂಪ್ರದಾಯಗಳನ್ನು ಅವರ ಕುಟುಂಬವು ಬಿಡದಂತೆ ಪಾಲಿಸಿತ್ತು. ಆದರೆ ಬಡತನ ಮತ್ತು
ಕ್ಷಾಮಗಳಿಂದಾಗಿ ತಂದೆ ತಾಯಿ ಮತ್ತು ಅಕ್ಕನನ್ನು ಕಳೆದುಕೊಂಡ ಮೇಲೆ, ಸಂಪ್ರದಾಯದ ಆಚರಣೆಗಳ (rituals) ಬಗ್ಗೆ ಅವರ ನಂಬಿಕೆ ಕಳೆದುಹೋಯಿತು ಎಂದು ಬರೆದುಕೊಂಡಿದ್ದಾರೆ. ತಂದೆ ಸತ್ತಾಗ ಹೆಣಹೊರಲು ಯಾರೂ ಬಾರದ್ದರಿಂದ ಅಣ್ಣ ಶ್ರೀನಿವಾಸ ಒಂದು ಬಟ್ಟೆಯಲ್ಲಿ ಶವವನ್ನು ಸುತ್ತಿ ಎತ್ತಿಕೊಂಡು ಬರಬೇಕಾಯಿತು. ತಾಯಿಯ ಶವವನ್ನು ಹೊರಲು ನಾಲ್ಕನೇಯವರಾದ ರಮಾಬಾಯಿ ತಮ್ಮ ತಲೆಯ ಮೇಲೆ ಹೊರಬೇಕಾಯಿತು. ಕಣ್ಣೆದುರಿಗೆ ಹಸಿವು, ಉಪವಾಸದಿಂದ ತಮ್ಮ ಕುಟುಂಬವು ಸಾವಿಗೀಡಾದದ್ದನ್ನು ನೋಡಿದರು. ತಾಯಿಗಾಗಿ ಜೀವನದಲ್ಲಿ ಮೊದಲ ಬಾರಿ ಒಂದು ರೊಟ್ಟಿಗಾಗಿ ಭಿಕ್ಷೆ ಬೇಡಿದರು. ಹೀಗಾಗಿ ತೀರ್ಥಸ್ಥಳಗಳಲ್ಲಿ ಚಾಚೂತಪ್ಪದೆ ಮಾಡಿದ ಪೂಜೆ, ಪುನಸ್ಕಾರ, ಬ್ರಾಹ್ಮಣರಿಗೆ ದಾನ ಇವೆಲ್ಲವೂ ನಿಷ್ಪ್ರಯೋಜಕವೆಂದು ಅನ್ನಿಸಿತ್ತು. ಅಲ್ಲದೆ, ಬಂಗಾಳದಲ್ಲಿ ಬ್ರಹ್ಮಸಮಾಜ ಮತ್ತು ಕ್ರೈಸ್ತ ಸಮುದಾಯಗಳ ಪರಿಚಯವಾದ ಮೇಲೆ ಆಚರಣೆಗಳ ಬಗ್ಗೆ ಭಿನ್ನವಾಗಿ ಯೋಚಿಸತೊಡಗಿದ್ದರು. ಪುಣೆಗೆ ಬಂದಮೇಲೆ ಸ್ತ್ರೀಶಿಕ್ಷಣ, ವಿಧವೆಯರ ವಿಮೋಚನೆಯ ಬಗ್ಗೆ ತಮ್ಮ ಅಭಿಯಾನದಲ್ಲಿ ಹಿಂದೂ ಪದ್ಧತಿಗಳನ್ನು ಕಟುವಾಗಿ ಟೀಕಿಸಿದರೂ ತಾವು ಎಂದೂ ಮತಾಂತರಗೊಳ್ಳುವುದಿಲ್ಲವೆಂದು ಹೇಳಿದ್ದರು. ಅವರು ಇಂಗ್ಲೆಂಡ್‍ಗೆ ಹೋಗಿದ್ದು ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕಾಗಿ. ಪ್ರಯಾಣಕ್ಕೆ ಮತ್ತು ಇಂಗ್ಲೆಂಡ್‍ನಲ್ಲಿ ವಾಸ್ತವ್ಯಕ್ಕೆ ಸಹಾಯವಾದದ್ದು ಕ್ರೈಸ್ತ ಸಂಘಟನೆಗಳು. ಆದರೆ ಮತಾಂತರದ ನಂತರವೂ ರಮಾಬಾಯಿ ತಮ್ಮ ಪ್ರಖರ ವೈಚಾರಿಕತೆಯನ್ನು ಬಿಟ್ಟುಕೊಡಲಿಲ್ಲ.

Sermon on the Mount ಎನ್ನುವ ಜೀಸಸ್‍ನ ಉಪದೇಶವನ್ನು ಮಾತ್ರ ನಂಬುತ್ತೇನೆ, ಬೈಬಲ್‍ನ ಹಾಗೂ ಇತರ ಪವಾಡಗಳನ್ನು ನಂಬುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದರು. ಹೀಗಾಗಿ, ಕ್ರೈಸ್ತ ಸಂಘಟನೆಗಳ, ಚರ್ಚಿನ ಪುರುಷಪ್ರಾಧಾನ್ಯವನ್ನು ಕ್ರೈಸ್ತ ಧರ್ಮವು ವಸಾಹತುಶಾಹಿಗೆ ಬೆಂಬಲವಾದದ್ದನ್ನು ನೇರವಾಗಿ ಟೀಕಿಸಿದರು. ಈ ಕಾರಣದಿಂದಾಗಿ ಕ್ರೈಸ್ತ ಸಂಘಟನೆಗಳು ಅವರ ಬಗ್ಗೆ ತೀವ್ರ ಸಂದೇಹಗಳನ್ನು ಹೊಂದಿದ್ದವು. ಅವರ ಸ್ವತಂತ್ರ ಸ್ವಭಾವ, ನಡಾವಳಿಕೆಯನ್ನು ವಿರೋಧಿಸಿದವು. ವೈಚಾರಿಕವಾಗಿ ರಮಾಬಾಯಿ ಆ ಯುಗದ ಒಂಟಿಸಲಗವಾಗಿದ್ದರು. ಹಿಂದೂ ಸಮಾಜದ ಪುರುಷ ಪ್ರಾಧಾನ್ಯ, ಕ್ರೈಸ್ತ ಸಂಸ್ಥೆಗಳ ಪುರುಷಪ್ರಾಧಾನ್ಯ ಹಾಗೂ ವಸಾಹತುಶಾಹಿಯ ಅಧಿಕಾರ ಇವೆಲ್ಲವನ್ನು ಸತತವಾಗಿ ವಿರೋಧಿಸಿದರು. ಹಂಟರ್ ಆಯೋಗವು ಭಾರತದಲ್ಲಿ ಶಿಕ್ಷಣದ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾಗ ತಮ್ಮ ಹೇಳಿಕೆಯಲ್ಲಿ ಶೇಕಡಾ 99 ರಷ್ಟು ಭಾರತೀಯ ಪುರುಷರು ಸ್ತ್ರೀ ಶಿಕ್ಷಣದ ವಿರುದ್ಧವಾಗಿದ್ದಾರೆ ಎಂದು ಖಚಿತವಾಗಿ ತಿಳಿಸಿದರು. ಅವರ ಮುಖ್ಯ ಕೃತಿಯಾದ ‘A High Caste Hindu Woman’ ಸಂಪ್ರದಾಯಸ್ಥ ಹಿಂದೂ ಸಮಾಜದಲ್ಲಿ ಮಹಿಳೆಯ ದುಸ್ಥಿತಿಯ ಬಗೆಗಿನ ಅತ್ಯಂತ ಪ್ರಬಲ ವಿಮರ್ಶೆಯಾಗಿದೆ. ಅವರು ಬರೆದ ಸಾವಿರಾರು ಪತ್ರಗಳು, ಮಾಡಿದ ಸಾವಿರಾರು ಭಾಷಣಗಳಲ್ಲಿ ಯಾವ ರಿಯಾಯಿತಿಯೂ ಇಲ್ಲದೆ ಈ ಬಗ್ಗೆ ತಮ್ಮ ಚಿಂತನೆಯನ್ನು ಮಂಡಿಸಿದರು. ಅವರ ಕೃತಿಯನ್ನು ಮೀರಾ ಕೋಸಾಂಬಿ, ಭಾರತದ ಸ್ತ್ರೀವಾದದ ಮೊದಲ ಪ್ರಣಾಳಿಕೆಯೆಂದು ಕರೆದಿದ್ದಾರೆ. ಸಂಪ್ರದಾಯಸ್ಥರು ಮಾತ್ರವಲ್ಲ ಸಮಾಜ ಸುಧಾರಕರಿಗೂ ರಮಾಬಾಯಿ ಬಹುದೊಡ್ಡ ಸವಾಲಾಗಿದ್ದರು. ಹೀಗಾಗಿ, ಮತಾಂತರ ಮತ್ತು ಇತರ ವಿವಾದಗಳು ಹುಟ್ಟಿಕೊಂಡಾಗ ಅನೇಕ ಸುಧಾರಕರು ರಮಾಬಾಯಿಯವರಿಂದ ದೂರವಾದರು. ಮೀರಾ ಕೋಸಾಂಬಿಯವರು ಹೇಳಿರುವಂತೆ ರಮಾಬಾಯಿಯವರು ಎದುರಿಸಿದ ವಿರೋಧವು ಮತಾಂತರಕ್ಕಿಂತ ಹೆಚ್ಚಾಗಿ ಅವರ ತೀವ್ರ ಸ್ತ್ರೀವಾದಿ ಚಿಂತನೆ ಮತ್ತು ವೈಚಾರಿಕತೆಯ ಕಾರಣಗಳಿಂದಾಗಿತ್ತು.

ವೈದ್ಯಕೀಯ ಶಿಕ್ಷಣಕ್ಕೆ ಅವರಿಗಿದ್ದ ಕಿವುಡುತನ ಅಡ್ಡಿಯಾಯಿತು. ಹೀಗಾಗಿ ತಮ್ಮ ವಾಸ್ತವ್ಯದ ಖರ್ಚಿಗಾಗಿ ಅವರು ಶಿಕ್ಷಕಿಯಾಗಿ ಪುರುಷರಿಗೂ ಪಾಠ ಮಾಡಲು ಒಪ್ಪಿಕೊಂಡರು. ಇದಕ್ಕೆ ಪುರುಷಪ್ರಧಾನ ಸಮಾಜದಿಂದ ಬಂದ ವಿರೋಧವು ಕುತೂಹಲಕಾರಿಯಾಗಿದೆ. ಇದು ರಮಾಬಾಯಿಯವರಿಗೂ ಒಂದು ಪಾಠವಾಯಿತು. ಅಂಬೇಡ್ಕರ್ ಅವರಿಗೆ ಕಂಡ ಜಾತಿವ್ಯವಸ್ಥೆಯ ರಾಕ್ಷಸನಂತೆ ರಮಾಬಾಯಿಯವರಿಗೆ ಯಾವ ಹಾದಿಯಲ್ಲಿ ಹೆಜ್ಜೆ ಇಟ್ಟರೂ ಪುರುಷಪ್ರಾಧಾನ್ಯದ ರಾಕ್ಷಸ ಎದುರಾಗುತ್ತಿದ್ದ. ಅವರ ಬೆಂಬಲಕ್ಕಿದ್ದುದು ಅವರ ಪ್ರಸಿದ್ಧಿ ಮತ್ತು ಸೆಲೆಬ್ರಿಟಿ ವರ್ಚಸ್ಸು. ಮೂರು ವರ್ಷದ ನಂತರ ಅವರು ಅಮೇರಿಕೆಗೆ ಹೊರಟುಬಂದ ಮೇಲೆ ಅವರೊಬ್ಬ ಅಂತಾರ್‍ರಾಷ್ಟ್ರೀಯ public intellectual DV ಆಗಿ, ಪ್ರಭಾವಿ ವ್ಯಕ್ತಿಯಾದರು. ಅಮೇರಿಕಾದಲ್ಲಿ ಅವರ ಬೆಂಬಲಿಗರು American Ramabai Circle ಆನಂತರ American Ramabai Association ಸಂಸ್ಥೆಗಳನ್ನು ಆರಂಭಿಸಿದರು. ವಿಶೇಷವೆಂದರೆ, ಆನಂತರ ಅಮೇರಿಕಕ್ಕೆ ಬಂದ ವಿವೇಕಾನಂದರು ಭಾರತೀಯ/ ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಯಾವ ಕಷ್ಟಗಳೂ ಇಲ್ಲವೆಂದು ಪ್ರತಿಪಾದಿಸಿದರು. ವಿಧವೆಯರದು ಸಮಸ್ಯೆಯೇ ಅಲ್ಲವೆಂದು ಪ್ರತಿಪಾದಿಸಿದರು. ಆಗ ಅವರನ್ನು ಪ್ರಶ್ನಿಸಿದವರು ರಮಾಬಾಯಿಯವರ ಅನುಯಾಯಿಗಳು. ವಿವೇಕಾನಂದರ ಉಜ್ವಲ ಜೀವನ ಚರಿತ್ರೆಯಲ್ಲಿ ಭಾರತೀಯ ಸ್ತ್ರೀಯರ ಸಮಸ್ಯೆಗಳನ್ನು ಕುರಿತು ಅಮೇರಿಕದಲ್ಲಿ ಅವರು ಮಾಡಿದ ಅಪ್ರಾಮಾಣಿಕ ಭಾಷಣಗಳು ಒಂದು ದೊಡ್ಡ ಕಪ್ಪು ಚುಕ್ಕೆಯಾಗಿವೆ. ವಿವೇಕಾನಂದರನ್ನು ಹಿಂದುತ್ವ ಚಿಂತನೆಯು appropriate ಮಾಡಿಕೊಳ್ಳುವುದು ಸಾಧ್ಯವಾಗಿದೆ; ಆದರೆ ರಮಾಬಾಯಿಯವರನ್ನಲ್ಲ.

ತಮ್ಮ ಜೀವನದ ಮಹಾತ್ವಾಕಾಂಕ್ಷೆಯಾದ ಸ್ತ್ರೀಪರವಾದ ಸಂಸ್ಥೆಗಳನ್ನು ಕಟ್ಟಲು ಬೇಕಾದ ಧನಸಹಾಯವನ್ನು ತಮ್ಮ ಕೃತಿಯ ಮಾರಾಟ ಹಾಗೂ ಅಮೇರಿಕದ ನಾಗರಿಕರ ಬೆಂಬಲದಿಂದ ಸಂಗ್ರಹಿಸಿ ರಮಾಬಾಯಿ ಭಾರತಕ್ಕೆ ಮರಳಿದರು. ಹತ್ತು ವರ್ಷಗಳವರೆಗೆ ಅವರ ಸಂಸ್ಥೆಗೆ ಆರ್ಥಿಕ ಬೆಂಬಲ ನೀಡುವ ವಾಗ್ದಾನವನ್ನು ಪಡೆದುಕೊಂಡಿದ್ದರು. ಮೊದಲು ಪುಣೆಯಲ್ಲಿ ಆನಂತರ ಕೇಡ್‍ಗಾಂದನಲ್ಲಿ ಅವರು ತಮ್ಮ ಸಂಸ್ಥೆಗಳನ್ನು ನಿರ್ಮಿಸಿದರು. ಸ್ತ್ರೀಯರಿಗೆ ಶಿಕ್ಷಣ, ವಿಧವೆಯರಿಗೆ ರಕ್ಷಣೆ ನೀಡುವ ಬಹುದೊಡ್ಡ ಸಂಸ್ಥೆಗಳಾಗಿ ಇವು ಬೆಳೆದವು. ಎಂದಿನಂತೆ ಸಂಪ್ರದಾಯಸ್ಥರು ಅವುಗಳನ್ನು ವಿರೋಧಿಸಿದರು. ರಮಾಬಾಯಿಯವರ ಸ್ತ್ರೀಪರ ಚಿಂತನೆಯು ಕ್ರಮೇಣವಾಗಿ radical ಸ್ವರೂಪವನ್ನು ಪಡೆದಿತ್ತು. ವಸಾಹತುಶಾಹಿ ವಿರೋಧಿ, ರಾಷ್ಟ್ರವಾದಿ ಸಂಕಥನಗಳ ಆಧಾರವಾಗಿದ್ದು ಹಿಂದೂ ಧರ್ಮ ಹಾಗೂ ಸಮಾಜಗಳ ಶ್ರೇಷ್ಠತೆ. ಆದರೆ ಇವೆರಡೂ ಸ್ತ್ರೀಯರ ಶೋಷಣೆಗೆ, ಬವಣೆಗೆ ಕಾರಣವೆಂದು ಅತ್ಯಂತ ಪ್ರಭಾವಿಯಾಗಿ ವಾದಿಸುತ್ತಿದ್ದ ರಮಾಬಾಯಿ, ಒಂದು ದೊಡ್ಡ ಸವಾಲಾಗಿದ್ದರು. ಅಲ್ಲದೆ, ತಮ್ಮ ಸಂಸ್ಥೆಗಳಲ್ಲಿ ಧಾರ್ಮಿಕ ಮುಕ್ತತೆಯನ್ನು ಪಾಲಿಸುತ್ತಾ ಮತಾಂತರಗಳನ್ನು ಒತ್ತಾಯಿಸದಂತೆ ನೋಡಿಕೊಂಡರು. ಬದುಕಿನ ಕೊನೆಯ ಹಂತವನ್ನು ಬಿಟ್ಟರೆ ರಮಾಬಾಯಿ ಕ್ರೈಸ್ತ ಧರ್ಮದ ಮಿಶನರಿಗಳ ಹಾಗೆ ಧರ್ಮಪ್ರಚಾರದಲ್ಲಿ ತೊಡಗಲಿಲ್ಲ. ಬದಲಾಗಿ ಉದಾರವಾದಿ ಮಾನವತಾವಾದಿ ಚಿಂತನೆಯನ್ನು ನೆಚ್ಚಿಕೊಂಡಿದ್ದರು. ಅವರ ಸಂಸ್ಥೆಗಳಲ್ಲಿ ಮಹಿಳೆಯರು ಪಡೆದುಕೊಂಡ ಮರುಜೀವನದ ಕಥಾನಕಗಳು ಉಜ್ವಲವಾಗಿವೆ.

ಒಂದು ಕಡೆಗೆ ಅವರ ಸಂಸ್ಥೆಗಳು ಅತ್ಯಂತ ಮನುಷ್ಯ ಪರವಾದ ಕೆಲಸಗಳಿಂದ ಬೆಳೆಯುತ್ತಾ ಹೋದರೆ, ಸ್ಥಳೀಯ ಸಮಾಜವು ಅವರನ್ನು ಅಂಚಿಗೆ ತಳ್ಳಿತು. ಆ ಯುಗದ ನಾಗರಿಕ ಸಮುದಾಯದ ಅತ್ಯಂತ ಪ್ರಖರ ಸದಸ್ಯರಾಗಿದ್ದ ರಮಾಬಾಯಿಯವರನ್ನು ಒಬ್ಬ ಕ್ರೈಸ್ತ ಧರ್ಮ ಪ್ರಚಾರಕಿಯೆಂದು ಅಪ್ರಸ್ತುತಗೊಳಿಸಲಾಯಿತು. ಅವರ ಮತ್ತು ಸ್ಥಳೀಯ ಸಮಾಜದ ಸಂಬಂಧಗಳು ಕ್ಷೀಣವಾದವು ಎಂದು ವಿದ್ವಾಂಸರು ಹೇಳುತ್ತಾರೆ. ಇದಕ್ಕೆ ರಮಾಬಾಯಿಯವರಂತೂ ಕಾರಣರಲ್ಲ. ಅಂಬೇಡ್ಕರ್ ಅವರ ಪರಿಭಾಷೆಯಲ್ಲಿ ಭಾರತೀಯ ಸಮಾಜದಲ್ಲಿ ಯಾವಾಗಲೂ ನಡೆಯುವ ಪ್ರತಿಕ್ರಾಂತಿಯ ಹಿಂದಿನ ಶಕ್ತಿಗಳು ಇದಕ್ಕೆ ಕಾರಣವಾಗಿದ್ದವು. ಸುದೈವದಿಂದಾಗಿ 19ನೇ ಶತಮಾನದಲ್ಲಿ ಆರಂಭಗೊಂಡ ಭಾರತೀಯ ಸ್ತ್ರೀವಾದಿ ಚಿಂತನೆಯು ಎಲ್ಲಾ ಅಡೆತಡೆಗಳ ನಡುವೆಯೂ ಬೆಳೆಯುತ್ತಾ ಬಂದಿದೆ.

ರಮಾಬಾಯಿಯವರ ಸಂಸ್ಥೆಗಳು ಭೀಕರವಾದ ಕ್ಷಾಮ ಮತ್ತು ಪ್ಲೇಗ್‍ನ ಸಂದರ್ಭದಲ್ಲಿ ಮಾಡಿದ ಕೆಲಸಗಳು ಚರಿತ್ರಾರ್ಹವಾಗಿವೆ. ಭಾರತದ ಅನೇಕ ರಾಜ್ಯಗಳಿಂದ ಅನಾಥ ಮಹಿಳೆಯರನ್ನು, ಮಕ್ಕಳನ್ನು ಕರೆತಂದು ಅವರಿಗೆ ಆಶ್ರಯ ನೀಡಲಾಯಿತು. ಒಂದು ಹೊತ್ತಿಗೆ ಅಂದಾಜು 2500 ವ್ಯಕ್ತಿಗಳು ಈ ಸಂಸ್ಥೆಗಳಲ್ಲಿ ಆಶ್ರಯ ಪಡೆದರು. ತನ್ನ ತಂದೆತಾಯಿಗಳ ದಾರುಣ ಸಾವನ್ನು ಕಂಡಿದ್ದ ರಮಾಬಾಯಿ, ಸಾವಿರಾರು ಜನರು ಬದುಕುಳಿಯಲು ಸಹಾಯವಾದರು. ಈ ಕೆಲಸಗಳಲ್ಲಿ ಅವರ ಮಗಳು ಮನೋರಮಾ ಸಹಾಯಕ್ಕೆ ಬಂದರು. ಆಕೆ ಕಲಬುರ್ಗಿಯಲ್ಲಿ ಶಾಲೆಯೊಂದನ್ನು ಸ್ಥಾಪಿಸಿದರು. ಆದರೆ ರಮಾಬಾಯಿ ಜೀವನದ ದುರಂತಗಳಲ್ಲಿ ಅವರ ಮಗಳ ಅನಿರೀಕ್ಷಿತ ಸಾವು ಕೂಡ ಒಂದಾಗಿತ್ತು. ಅವರ ಚಳವಳಿಯನ್ನು ಮುಂದುವರೆಸುವ ಸಾಮರ್ಥ್ಯವುಳ್ಳ ಮನೋರಮಾ 1921 ರಲ್ಲಿ ತೀರಿಹೋದರು.

ಭಾರತೀಯ ಸಮಾಜಶಾಸ್ತ್ರಜ್ಞರು, ಇತಿಹಾಸಕಾರರು ರಮಾಬಾಯಿಯವರನ್ನು ನೂರು ವರ್ಷದ ಏಕಾಂಕದಲ್ಲಿ ಇಟ್ಟರು. ಅವರ ನೆನಪನ್ನು ವಿಕೃತಿಗೊಳಿಸಿ ಅಳಿಸಿಹಾಕುವ ಪ್ರಯತ್ನವನ್ನು ತಿಲಕರಂಥವರು ತಾವು ಬದುಕುವವರೆಗೂ ಮಾಡಿದರು. ಸುದೈವದಿಂದ ಪಶ್ಚಿಮದ ಅನೇಕ ಚಿಂತಕರು, ಸಂಶೋಧಕರು ರಮಾಬಾಯಿಯವರ ಬಗ್ಗೆ ಗಟ್ಟಿಯಾದ ಸಂಶೋಧನೆಯನ್ನು ಮಾಡುತ್ತಲೇ ಬಂದಿದ್ದಾರೆ. ಭಾರತದಲ್ಲಿ ಉಮಾ ಚಕ್ರವರ್ತಿ, ಮೀರಾ ಕೋಸಂಬಿ, ಗೌರಿ ವಿಶ್ವನಾಥನ್‍ರಂಥ ಶ್ರೇಷ್ಠ ವಿದ್ವಾಂಸರು ಈ ಸಂಶೋಧನೆಯನ್ನು ಬಹು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಇವರ ಬರಹಗಳು ಜಾಗತಿಕ ಮಟ್ಟದ ಶ್ರೇಷ್ಠತೆಯನ್ನು ಮೀರಿದ ಬರಹಗಳು.

ರಮಾಬಾಯಿಯವರ ಬಗ್ಗೆ ಚರ್ಚಿಸಲು, ಚಿಂತಿಸಲು ಇಂದಿನದು ಸರಿಯಾದ ಕಾಲ. ಪ್ರತಿಕ್ರಾಂತಿಯ ಪ್ರಗತಿವಿರೋಧಿ ಶಕ್ತಿಗಳು ರಾಜಕೀಯ ಶಕ್ತಿಯ ಬೆಂಬಲದೊಂದಿಗೆ ಪುರುಷ ಪ್ರಾಧಾನ್ಯವನ್ನು ಮತ್ತೆ ಅನುಷ್ಠಾನಕ್ಕೆ ತರುತ್ತಿವೆ. ಶಿಕ್ಷಿತ elite ವರ್ಗವು ಭಾರತೀಯತೆ, ಹುಸಿ ರಾಷ್ಟ್ರವಾದ ಇವುಗಳ ನೆರಳಿನಲ್ಲಿ ಭಾರತೀಯ ಇತಿಹಾಸದ ಹಾಗೂ ಸಮಾಜದ ಕರಾಳ ಮುಖಗಳನ್ನು ಮರೆಮಾಚುವ ಕೆಲಸದಲ್ಲಿ ತೊಡಗಿದೆ. ಶಿಕ್ಷಣ ಹಾಗೂ ಸಂಶೋಧನೆಗಳ ಕ್ಷೇತ್ರಗಳಲ್ಲಿ ಅತಿಕ್ರಮ ಪ್ರವೇಶ ಮಾಡಿರುವ ಪ್ರಭುತ್ವವು, ಉಜ್ವಲವಾದ ಪ್ರತಿರೋಧಗಳ ಸಾಂಸ್ಕೃತಿಕ ನೆನಪುಗಳನ್ನು ನಾಶಮಾಡುವ ಪ್ರಯತ್ನದಲ್ಲಿದೆ. ಆದ್ದರಿಂದ ರಮಾಬಾಯಿ ತಮ್ಮ ಬದುಕು, ಬರಹ ಮತ್ತು ಕ್ರಿಯೆಗಳ ಮೂಲಕ ಎತ್ತಿದ ಪ್ರಶ್ನೆಗಳನ್ನು ಇಂದು ಮತ್ತೆ ಎತ್ತುವ ಅವಶ್ಯಕತೆ ಇದೆ. ಇಂದಿಗೂ ಮಹಿಳೆಗಿರುವ ಸಾಧ್ಯತೆಗಳ ಸಂದೇಹಗಳನ್ನೇ ಹೊಂದಿರುವ ಅಸಂಖ್ಯಾತರಿಗೆ ಪಂಡಿತಾ ರಮಾಬಾಯಿ ತೋರಿಸಿಕೊಟ್ಟ ಸಾಧ್ಯತೆಗಳಿಂದ ಕಲಿಯುವುದು ಬಹಳವಿದೆ.

ಹಾಗಿದ್ದರೆ, ರಮಾಬಾಯಿಯವರ ಚಿಂತನೆ ಹಾಗೂ ಕ್ರಿಯೆಗಳಲ್ಲಿ ವಿರೋಧಾಭಾಸಗಳು ಇರಲೇ ಇಲ್ಲವೆ? ಅವರ ಅನೇಕ ಹೆಜ್ಜೆಗಳಲ್ಲಿ ಕೆಲವಾದರೂ ತಪ್ಪು ಹೆಜ್ಜೆಗಳಾಗಿರಲಿಲ್ಲವೆ? ಉತ್ತರ ಸರಳವಾಗಿದೆ. ಅಷ್ಟು ಬಹುಮುಖಿಯಾದ ಬದುಕು ಮತ್ತು ಕ್ರಿಯೆಯಲ್ಲಿ ಖಂಡಿತವಾಗಿ ಅನೇಕ ವಿರೋಧಾಭಾಸಗಳಿವೆ. ತಮ್ಮ ಕಾಲದ ಸಾಮಾಜಿಕ, ವೈಚಾರಿಕ ಸೀಮಿತತೆಯನ್ನು ಅವರು ಮೀರಿನಿಂತರು ಎನ್ನುವುದು ಅತಾರ್ಕಿಕವಾಗುತ್ತದೆ. ಅದು ಚರಿತ್ರೆಗೆ ಮಾಡುವ ದ್ರೋಹವೂ ಆಗುತ್ತದೆ. ಈ ಲೇಖನದಲ್ಲಿ ನನ್ನ ಉದ್ದೇಶವು ರಮಾಬಾಯಿಯವರನ್ನು ಮತ್ತೆ ಪರಿಚಯಿಸುತ್ತ ಕನ್ನಡ ಸಂದರ್ಭದಲ್ಲಿ ಅವರನ್ನು ಮುನ್ನೆಲೆಗೆ ತರುವ ಸಣ್ಣ ಪ್ರಯತ್ನವಾಗಿದೆ.

ಗ್ರಂಥಋಣ

ಈ ಲೇಖನವು ಕೆಳಕಂಡ ಕೃತಿಗಳ ಪ್ರಮುಖ ವಿಚಾರಗಳ ಸಂಗ್ರಹಾತ್ಮಕ ಟಿಪ್ಪಣಿಯಾಗಿದೆ. ನಮ್ಮ ಕಾಲದ ಶ್ರೇಷ್ಠ ವಿದ್ವಾಂಸರು ಮಹಿಳೆಯರೇ ಆಗಿದ್ದಾರೆ ಎನ್ನುವುದನ್ನು ಅಭಿಮಾನದಿಂದ ನೆನೆಯುತ್ತಿದ್ದೇನೆ.

1 Chakravarti, Uma. Rewriting History: The Life and Times of Pandita Ramabai Zubaan, 2013

2 Kosambi, Meera. Pandita Ramabai, Life and Landmark Writings. Routledge, 2016.

3 Vishwanathan Gauri. Outside the Fold: Conversion, Modernity and Belief, Princeton University Press, 1998.

ಈ ಅಂಕಣದ ಹಿಂದಿನ ಬರೆಹಗಳು:
ಪಂಡಿತಾ ರಮಾಬಾಯಿ ಎಂಬ ಅಪ್ರತಿಮ ಕ್ರಿಯಾಶೀಲ ಮಹಿಳೆ
ಬಹುಗುಣರಿಗೆ ಪ್ರೇರಣೆ: ಮಹಿಳೆಯರ ಬದುಕೇ ಆದ ಪರಿಸರವಾದ
ಗಾಂಧಿಯ ಅಹಿಂಸೆಯನ್ನು ಸಮಗ್ರವಾಗಿ ಪಾಲಿಸಿದವರು ಈ ದೇಶದ ದಲಿತರು....!
ನಮ್ಮ ಕಾಲದಲ್ಲಿ ಓದಲೇಬೇಕಾದ ಎರಡು ಕೃತಿಗಳು
ಅನೇಕ ಶಕುಂತಲೆಯರು
ಕ್ಯಾಲಿಬನ್‍ನ ದಶಾವತಾರಗಳು
ಪಾಶ್ಚಾತ್ಯ ಸಾಹಿತ್ಯ ಮತ್ತು ಜೆಂಡರ್‌ ನ್ಯಾಯದ ಪರಿಭಾಷೆ
ಬದುಕು-ಸಾವುಗಳ ಸಹಜ ಲಯ ತಪ್ಪಿಸುವ ಅಸಂಗತ-ಅರ್ಥಶೂನ್ಯ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...