ಪರಿಭಾಷೆಗಳು ರೂಪಕವಾಗುವ ಸೊಬಗು

Date: 19-11-2021

Location: ಬೆಂಗಳೂರು


ಈ ಚಿಟ್ಟೆ ಕಾಡಿದ ಹಾಗೆ ಎನ್ನುವ ಆಕರ್ಷಕ ಸಂಕಲನದಲ್ಲಿ ಅಲ್ಲಲ್ಲಿ ಕೆಲವು ಕವನಗಳು ಪ್ರಥಮ ಸಂಕಲನದ ಮಿತಿಗಳನ್ನು ಹೊಂದಿದ್ದರೂ ಅವುಗಳನ್ನು ಮೀರಿ ಗೆಲ್ಲುವಷ್ಟು ಉಳಿದ ಕವನಗಳು ಸದೃಢವಾಗಿವೆ’ ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ‘ಸಿರಿ ಕಡಲು’ ಅಂಕಣದಲ್ಲಿ ತಮ್ಮ ಬದುಕಿನ ಹಲವು ನೆನಪುಗಳನ್ನು ಮೆಲುಕುಹಾಕುವಂತೆ ಮಾಡಿದ ಸುಚಿತ್ರ ಹೆಗಡೆ ಅವರ ‘ಈ ಚಿಟ್ಟೆ ಕಾಡಿದ ಹಾಗೆ’ ಕೃತಿಯ ಕುರಿತು ಬರೆದಿದ್ದಾರೆ. 

ಈ ಚಿಟ್ಟೆ ಕಾಡಿದ ಹಾಗೆ
ಬೆಲೆ-115
ಮಡಿಲು ಪ್ರಕಾಶ

ಅದು ಬಿಇಡಿ ಓದುತ್ತಿದ್ದ ಸಮಯ. ನೀವು ಎದುರಿಗೆ ಕುಳಿತರೆ ನಾನು ಪಾಠವನ್ನೇ ಮಾಡೋದಿಲ್ಲ ಎನ್ನುತ್ತಿದ್ದೆ ನಮ್ಮ ಇಂಗ್ಲೀಷ್ ಮೆಥೆಡ್ ಸರ್ ಹತ್ತಿರ. ನೀನು ಪಾಠ ಮಾಡು ಮಾರಾಯ್ತಿ ಎನ್ನುತ್ತ ಅವರು ಕ್ಲಾಸಿನ ಒಳಗೇ ಬರದೆ ಹೊರಗಿನಿಂದಲೇ ಪಾಠ ಕೇಳಿ ಅಂಕ ಕೊಡುತ್ತಿದ್ದರು ನಮ್ಮ ಎಸ್.ಜಿ ಹೆಗಡೆ ಸರ್, ಅಂದರೆ ನೀವೆಲ್ಲ ಪ್ರೀತಿಯಿಂದ ಶ್ರೀಧರ ಬಳಗಾರ ಎಂದು ಕರೆಯುವ ನನ್ನ ಗುರುಗಳು. ಆದರೆ ವರ್ಷದ ಕೊನೆಯಲ್ಲಿ ಅತ್ಯುತ್ತಮ ವಿದಾರ್ಥಿ ಶಿಕ್ಷಕಿ ನನಗೆ ದೊರೆತಿತ್ತು. ನನ್ನ ಗೆಳತಿಗೆ ಉತ್ತಮ ಇಂಗ್ಲೀಷ್ ಶಿಕ್ಷಕಿ ಪ್ರಶಸ್ತಿ. ಆದರೆ ನನಗೆ ಒಳಗೊಳಗೇ ಬೇಸರ. ನನಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಬರಲಿಲ್ಲ ಎಂದು. ಶ್ರೀಧರ ಬಳಗಾರರ ಬಳಿ ಮುಖ ದುಮ್ಮಿಸಿಕೊಂಡು ಹೇಳಿಯೂ ಬಿಟ್ಟಿದ್ದೆ. ಅವರು ಜೋರಾಗಿ ನಕ್ಕು ಉತ್ತಮ ಇಂಗ್ಲೀಷ್ ವಿದ್ಯಾರ್ಥಿ ಶಿಕ್ಷಕ ಬಹುಮಾನಕ್ಕಿಂತ ಇಡೀ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿ ಶಿಕ್ಷಕಿ ಬಹುಮಾನ ದೊಡ್ಡದಲ್ವಾ? ಎಂದಿದ್ದರು. ಆದರೂ ನನಗೆ ಒಳಗೊಳಗೇ ಬೇಸರ. ಪರೀಕ್ಷೆ ಮುಗಿಸಿ ಫಲಿತಾಂಶ ಬಂದಾಗಲೂ ಮತ್ತದೇ ಕೊಸರು. ಅವಳಿಗೆ ನನಗಿಂತ ಎರಡು ಅಂಕ ಹೆಚ್ಚು ಬಂದಿದೆ. ಆ ಎರಡು ಅಂಕಕ್ಕಾಗಿ ನಾಲ್ಕುನೂರು ರೂಪಾಯಿ ತೆತ್ತು ರಿವಾಲ್ಯೂಯೇಶನ್‌ಗೆ ಹಾಕಿ, ಐದು ಅಂಕ ಹೆಚ್ಚು ಪಡೆದುಕೊಂಡಿದ್ದೆ. ರಾಜ್ಯದ ಅತ್ಯುತ್ತಮ ಬಿಇಡಿ ಕಾಲೇಜುಗಳಲ್ಲಿ ಒಂದು ಎನ್ನುವ ಪ್ರತಿಷ್ಠೆ ಇರುವ ಕುಮಟಾದ ಕಮಲಾಬಾಳಿಗಾಪ್ರಶಿಕ್ಷಣ ಮಹಾವಿದ್ಯಾಲಯದಲ್ಲಿ ಓದುವಾಗ ನಡೆದ ಘಟನೆಗಳನ್ನು ಮತ್ತೆ ನೆನಪಿಸಿಕೊಂಡು ಮುದಗೊಳ್ಳುವಂತೆ ಮಾಡಿದ್ದು ಸುಚಿತ್ರಾ ಹೆಗಡೆಯವರು.

ಸುಚಿತ್ರಾ ಹೆಗೆಡೆಯವರ ಪುಸ್ತಕ ತೆರೆದಾಗ ಒಂದು ಖುಷಿಯ ಅಚ್ಚರಿ ಇತ್ತು. ನಾನು ಓದಿದ ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯದಲ್ಲಿಯೇ ಅವರು ಓದಿದ್ದು. ಆ ಖುಷಿಗಾಗಿ, ಆ ಆತ್ಮೀಯಭಾವಕ್ಕಾಗಿಯೇ ನಾನು ಈ ಪುಸ್ತಕವನ್ನು ಓದಲು ಪ್ರಾರಂಭಿಸಿದ್ದಾದರೂ ಇಲ್ಲಿನ ಕವನಗಳು ನನ್ನನ್ನು ಅದೆಲ್ಲಕ್ಕೂ ಮೀರಿ ಕಟ್ಟಿ ಹಾಕಿಬಿಟ್ಟಿತು.

ನನಗೆ ಗೊತ್ತಾಗಿದೆ
ನಾನೆಂದರೆ ನೀನು
ನೀನೆಂದರೆ ನನ್ನ ಅಂಗವೈಕಲ್ಯವ ಎತ್ತಿ ಸಾರುವ ಊರುಗೋಲು.

ಈ ಸಾಲುಗಳಷ್ಟೇ ಸಾಕು, ಇದನ್ನು ಬರೆದ ಕರ್ತೃತ್ವ ಶಕ್ತಿಯನ್ನು ಹೇಳಲು ಹಾಗೂ ಮನೋದೃಢತೆಯನ್ನು ಅರಿಯಲು. ಹೆಣ್ಣಿನ ಸ್ಥಿತಿಯನ್ನು ಇದಕ್ಕಿಂತ ಸೂಕ್ಷ್ಮವಾಗಿ ಹಾಗೂ ಇದಕ್ಕಿಂತ ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಿಲ್ಲ. ಸಂಸಾರದಲ್ಲಿ ಯಾರು ಏನೇ ಹೇಳಿ, ರಥದ ಚಕ್ರಗಳಿಗೆ ಹೋಲಿಸಲಿ, ಎರಡು ಕಣ್ಣುಗಳು ಎನ್ನಲಿ, ಆದರೆ ನಿಜ ಜೀವನದಲ್ಲಿ  ಹೆಣ್ಣೆಂದರೆ ಆಕೆ ಕೇವಲ ಗಂಡಿನ ನೆರಳು. ನೆರಳಲ್ಲ ಅವನೇ. ಅವನ ರೀತಿ ನೀತಿ, ಅವನ ಆಲೋಚನೆ ಎಲ್ಲವನ್ನೂ ಆಕೆ ತನ್ನದಾಗಿಸಿಕೊಳ್ಳಬೇಕು. ಆತ ಏನು ಹೇಳುತ್ತಾನೋ ಅದನ್ನೇ ಯೋಚಿಸಬೇಕು. ಸಾಮಾಜಿಕವಾಗಿ, ರಾಜಕೀಯವಾಗಿ ಆಕೆಗೆ ಪ್ರತ್ಯೇಕ ನಿಲುವುಗಳಿದ್ದರೂ ಆಕೆ ಅದನ್ನು ಪ್ರದರ್ಶಿಸುವಂತಿಲ್ಲ. ನನ್ನ ಗೆಳತಿಯೊಬ್ಬಳು ಸದಾ ಹೇಳುವ ಮಾತು ನಿಜಕ್ಕೂ ಇಲ್ಲಿ ಪ್ರಸ್ತುತವಾಗಿದೆ. ಭಾರತೀಯ ರಾಜಕೀಯ ಸ್ಥಿತಿ ಹಾಗೂ ರಾಜಕೀಯ ಪಕ್ಷಗಳ ಸಿದ್ಧಾತಗಳ ಬಗ್ಗೆ ಆಕೆ ತನ್ನ ಗಂಡ ಹೊಂದಿರುವ ನಿಲುವಿಗೆ ಒಪ್ಪುವುದಿಲ್ಲ. ಅವಳ ಸಿದ್ದಮತ ನಿಲುವುಗಳೇ ಬೇರೆ. ಆದರೆ ಅವಳ ಗಂಡ ಅವಳ ಮಾತನ್ನು ಒಪ್ಪಿಕೊಳ್ಳುವ ಮಾತು ಬಿಡಿ ಕೇಳಿಸಿಕೊಳ್ಳುವ ವ್ಯವಧಾನವನ್ನೂ ತೋರುವುದಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಮತದಾನಕ್ಕೆ ಹೋಗುವಾಗ ಇಂಥವರಿಗೇ ಮತ ಹಾಕು ಎಂದು ಕಡ್ಡಾಯವಾಗಿ ಹೇಳಿ ಕಳುಹಿಸುತ್ತಾನಂತೆ. ಆಕೆಗೆ ತನ್ನಿಷ್ಟದ ಅಭ್ಯರ್ಥಿಗೆ, ತನ್ನ ಸಿದ್ದಾಂತದ ಪಕ್ಷಕ್ಕೆ ಮತ ನೀಡುವ ಸ್ವಾತಂತ್ರ್ಯವೂ ಇಲ್ಲ ಎಂಬಂತೆ ಆತ ವರ್ತಿಸುತ್ತಾನೆ. ಮತದಾನ ಮುಗಿಸಿ ಬಂದ ನಂತರ ಮತ್ತೊಮ್ಮೆ ಆಕೆ ತಾನು ಹೇಳಿದ ಅಭ್ಯರ್ಥಿಗೇ ಮತ ಹಾಕಿರುವ ಬಗ್ಗೆ ತಿರುಗಾಮುರುಗಾ ಪ್ರಶ್ನೆ ಕೇಳಿ ಖಾತ್ರಿ ಪಡಿಸಿಕೊಳ್ಳುತ್ತಾನೆ. ಒಮ್ಮೆ ತನಗೆ ಇಷ್ಟವಾದ ಅಭ್ಯರ್ಥಿಗೆ ಮತ ಹಾಕಿದ್ದಕ್ಕಾಗಿ ಸುಮಾರು ಹದಿನೈದು ದಿನ ಜಗಳ, ಮಾತು ಬಿಟ್ಟಿದ್ದನ್ನು ನೆನಪಿಸಿಕೊಳ್ಳುವ ಆಕೆ ನಂತರ ಒಮ್ಮೆ ನೀನು ಬೇರೆ ಸಿದ್ದಾಂತ ಹೊಂದಿದ್ದರೆ ನಿನ್ನನ್ನು ಕೊಲೆ ಮಾಡಿದರೂ ತಪ್ಪಿಲ್ಲ ಎನ್ನುವ ಮಾತನ್ನೂ ಆಡಿದ ನಂತರ ಹೇಸಿ, ಅವನು ಹೇಳಿದ್ದೇ ಸರಿ ಎಂದು ಅವನ ಎದುರಿಗಾದರೂ ತಾತ್ಕಾಲಿಕವಾಗಿ ಒಪ್ಪಿಕೊಳ್ಳುತ್ತಿದ್ದೇನೆ ಎಂದವಳ ಮುಖದಲ್ಲಿ ಕಾಣುತ್ತಿದ್ದುದು ಬರಿ ವಿಷಾದ ಮಾತ್ರ. ಆದರೆ ತಾನು ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳುವ ಸಂಗಾತಿಯ ಬಗ್ಗೆ ಗಂಡಿಗೆ ಯಾವ ಕಕ್ಕುಲಾತಿಯೂ ಇರುವುದಿಲ್ಲ. ಅವಕಾಶ ಸಿಕ್ಕರೆ ಸಾಕು ಆಕೆಯನ್ನು ಹೀಯಾಳಿಸಿ, ಬಂದವರೆದುರಿಗೆ ಕೆಂಗಣ್ಣು ಬೀರಿ ಅವಮಾನಿಸಿ, ಆಕೆ ಏನೂ ಅರಿಯದ ಮೂಢೆ ಎಂದು ಬೇರೆಯವರು ಒಪ್ಪಿಕೊಳ್ಳುವುದಿರಲಿ, ಅವಳೇ ಒಪ್ಪಿಕೊಳ್ಳುವಂತೆ ಮಾಡಿ ಬಿಡುತ್ತಾನೆ. ಇಷ್ಟೆಲ್ಲ ವಿವರಗಳನ್ನು ಕೇವಲ ಮೂರು ಚಿಕ್ಕ ಸಾಲುಗಳಲ್ಲಿ, ಸರಳ ಪದಗಳಲ್ಲಿ ಹಿಡಿದಿಟ್ಟ ಪರಿಯಿಂದಲೇ ಸುಚಿತ್ರಾ ಹೆಗಡೆಯವರೊಳಗೆ ಅಡಗಿರುವ ದಿಟ್ಟ ಮಹಿಳೆಯನ್ನೂ ಹಾಗೂ ಅನ್ನಿಸಿದ್ದನ್ನು ಸೂಕ್ಷ್ಮವಾಗಿ ಹೇಳಿಬಿಡುವ ಕವಯತ್ರಿಯೊಬ್ಬಳು ಇರುವುದನ್ನು ಸಾಬೀತು ಮಾಡುತ್ತದೆ. 

ಹಾಗೆಂದು ಕವಿಯತ್ರಿ ಎಲ್ಲೆಡೆಯೂ ಬಂಡಾಯ ಹೊರಡುವುದಿಲ್ಲ

ಬೆಳಗು ಮೂಡುವ ಮುತ್ತ
ಮನೆಯ ದಾರಿಯ ಇಕ್ಕೆಲದಲಿ
ಮರಗಳು ಕಡುಗಪ್ಪು ಮುಸುಗು ಸರಿಸಿ
ಹಸಿರು ಸಮವಸ್ತ್ರ ತೊಟ್ಟು ಎದೆ ಸೆಟೆಸಿ
ಸೂರ್ಯ ಪರೇಡಿಗೆ ಸಜ್ಜಾದ ಸಮಯಕ್ಕೆ
ನಿನ್ನ ನೆನಪು ಸುತ್ತಿ ಸುಳಿಯುತ್ತದೆ.

ಎನ್ನುವ ನವಿರುಭಾವವನ್ನೂ ನಮ್ಮೆದುರಿಗೆ ಹರಡಿ ಮನಸ್ಸನ್ನು ಮುದಗೊಳಿಸುತ್ತಾರೆ. ಪ್ರಿಯತಮೆಗೆ ತನ್ನ ಪ್ರೇಮಿ ನೆನಪಾಗಲು ಯಾವ ಹೊತ್ತು ಎಂದಿದೆ? ಅದು ಸೂರ್‍ಯ ಹುಟ್ಟುವ ಮೊದಲಾದರೂ ಸರಿ, ಸೂರ್‍ಯ ಮುಳುಗಿ ನಾಲ್ಕಾರು ತಾಸು ಕಳೆದರು ಸರಿ. ಮಲಗಿದ್ದರೂ ಸರಿ, ಎಚ್ಚರವಿದ್ದರು ಸರಿ ಸದಾ ನೆನಪಾಗುವ ಪ್ರೇಮಿಯನ್ನು ಹೇಳುವ ಈ ಸಾಲುಗಳು ಮನಸೆಳೆಯುತ್ತವೆ. ಮೈತುಂಬ ಕಚ್ಚಿದ ಚಕ್ರಗಾಯಗಳು ಎಂಬ ಸಾಲು ಹುಟ್ಟಿಸುವ ವಿಚಿತ್ರ ದಿಗ್ಭ್ರಮೆ ಹಾಗು ತಲ್ಲಣಗಳನ್ನು ಶಬ್ಧಗಳಲ್ಲಿ ಕಟ್ಟಿಕೊಡಲಾಗದು. ಹಲ್ಲು ಮೂಡಿಸಿರುವ ಗೋಲಾಕಾರದ ಚಕ್ರದಂತಹ ಗುರುತು ಯಾವುದರ ಸಂಕೇತವಾಗಬಹುದು? ಉತ್ಕಟ ಪ್ರೇಮಾಭಿವ್ಯಕ್ತಿಯದ್ದೇ? ಅಥವಾ ಹತಾಶ ದೌರ್ಜನ್ಯದ ಭಾವವೇ?  ಸಾಲು ಮತ್ತೆ ಮತ್ತೆ ಓದಿಕೊಳ್ಳುವಂತೆ ಮಾಡುತ್ತಲೇ ಚಿಂತನೆಗೆ ಹಚ್ಚುತ್ತದೆ.

ಉತ್ತರಕನ್ನಡ ಜಿಲ್ಲೆ ಹೊರಗಿನವರಿಗೆ ಕಾಡುಗಳ ಊರು ಎಂದೆನಿಸಬಹುದು. ಹಾಗೆ ನೋಡಿದರೆ ಬಹಳಷ್ಟು ಜನ ಇದು ತೀರಾ ಸಂಪ್ರದಾಯ ಹೊಂದಿರುವ ಊರು ಎಂದು ತಿಳಿದಿದ್ದಾರೆ. ಆದರೆ ಹೆಣ್ಣಿನ ಒಳತುಮುಲಗಳನ್ನು ಅರ್ಥಮಾಡಿಕೊಂಡು ಇಲ್ಲಿನವರು ಬರೆಯುವ ಕವಿತೆಗಳಿಗೆ ಒಂದು ವಿಶಿಷ್ಟ ಓಘವಿದೆ.

ಒಳಗಿರುವ ಬೇರೆ ಯಾವುದೋ
ಸಿಂಡರಿಸಿಕೊಂಡ ಸುಕ್ಕು ಬಿದ್ದ
ಕರುಣೆಯಿಲ್ಲದ ಕಣ್ಣಿನಿನ್ನೊಂದು ಮುಖ
ಉತ್ತರ ಕೊಡದೆ ಕೊಡುತ್ತಿದೆ

ಓದುತ್ತಲೇ ಜಿ.ಎಸ್ ಅವಧಾನಿಯವರ ಒಂದು ಕವನ ನೆನಪಾಗುತ್ತದೆ. ಪ್ರಾಣಿಗಳನ್ನು ಸಾಕುವ ಖಯಾಲಿಯಿರುವವನೊಬ್ಬನ ಮನೆಗೆ ಹೋದ ಕವಿಗಳಿಗೆ ಚಹಾ ತರಲು ಹೇಳಿದಾಗ ಸಹಜವಾಗಿಯೇ ಅಡುಗೆ ಮನೆಯಲ್ಲ ನೋಡುತ್ತಾರೆ. ಅಡುಗೆ ಮನೆಯ ಕಿಟಕಿಯ ಸರಳುಗಳ ಹಿಂದೆ ಇಣುಕಿದ ಕುತೂಹಲದ ಕಣ್ಣು ಯಾವ ಪ್ರಾಣಿಯದ್ದಿರಬಹುದು ಎಂದು ಯೋಚಿಸುತ್ತಾರೆ. ಅಡುಗೆ ಮನೆಗಷ್ಟೇ ಸೀಮಿತವಾದ ಹೆಣ್ಣಿನ ಕಣ್ಣುಗಳಲ್ಲಿ ಇಣುಕುವ ಶೂನ್ಯ, ಮೌನ ಹಾಗೂ ಬಲವಂತದ ನಿರ್ಲಿಪ್ತತೆ ಕಾಡುವಷ್ಟು ಜಗದ ಯಾವ ನೋಟವೂ ಕಾಡುವುದಿಲ್ಲ. ಕವಿಯತ್ರಿ ಸುಚಿತ್ರಾ ಹೆಗಡೆಯವರ ಈ ಸಾಲುಗಳಲ್ಲಿಯೂ ಅಂತಹುದ್ದೇ ಒಂದು ವಿಷಣ್ಣತೆ ಇಣುಕುತ್ತದೆ. ಹಾಗೆ ನೋಡಿದರೆ ಉತ್ತರಕನ್ನಡದ ಹೆಣ್ಣುಗಳು ಕೇವಲ ಅಡುಗೆ ಮನೆಗೆ ಮಾತ್ರ ಮೀಸಲಾಗಿದ್ದವರಲ್ಲ. ಕೃಷಿ ಕುಟುಂಬಗಳೇ ಅಧಿಕವಾಗಿರುವ ಇಲ್ಲಿನ ಹೊಲಗದ್ದೆಗಳಲ್ಲಿ ಮಹಿಳೆಯರೇ ಹೆಚ್ಚು. ಆದರೂ ಸಮಾನತೆಯ ದೃಷ್ಟಿಯಿಂದ ನೋಡಿದಾಗ ಎಷ್ಟೇ ದುಡಿದರೂ ಆರ್ಥಿಕವಾಗಿ ಆಕೆ ಸಬಲಳಲ್ಲ ಎಂಬುದೂ ಅಷ್ಟೇ ಸತ್ಯ. ಇಲ್ಲಿನ ಹಾಲಕ್ಕಿ ಮಹಿಳೆಯರು ತಾವು ದುಡಿದು ಮನೆಯನ್ನು ಸಂಬಾಲಿಸಿ ಮಕ್ಕಳನ್ನು ಓದಿಸಿ ಕೊನೆಗೆ ಕಟ್ಟೆಯ ಮೇಲೆ ಕುಳಿತು ಕಾಡು ಹರಟೆಯಲ್ಲಿ ಸಮಯ ಕೊಲ್ಲುವ ಗಂಡನಿಗೆ ಸಂಜೆ ಸರಾಯಿಗೂ ದುಡ್ಡು ಕೊಡಬೇಕಾದ ಸ್ಥಿತಿಯನ್ನು ನೋಡಿದ್ದೇನೆ. ಆ ದೃಷ್ಟಿಯಿಂದ ಹೆಣ್ಣು ಸೀಮಿತ ಅವಕಾಶ ಉಳ್ಳವಳು. ದುಡಿದರೂ ತನ್ನದೆನ್ನುವ ಯಾವ ಆಸ್ತಿಯನ್ನೂ ಹೊಂದದವಳು.

ಎರಡು ದ್ರುವಗಳು ಸೇರಿದಾಗ ಎನ್ನುವ ಕವನ ತನ್ನ ವಿಶಿಷ್ಟ ನಿರೂಪಣೆ ಹಾಗೂ ಕಟ್ಟುವಿಕೆಯಿಂದ ಗಮನ ಸೆಳೆಯುತ್ತದೆ.  ಗಣಿತ, ವಿಜ್ಞಾನ, ಭೂಗೋಳದ ಪರಿಭಾಷೆಗಳು ರೂಪಕವಾಗಿ ಬಳಸಲ್ಪಟ್ಟಿರುವುದರಿಂದ ಕವನಕ್ಕೊಂದು ಪ್ರತ್ಯೇಕತೆ ಸಾಧ್ಯವಾಗಿದೆ. ೧+೧=೨, ಗುರುತ್ವಾಕರ್ಷಣೆ, ರಕ್ತ, ಮಾಂಸ, ಎಲಬು, ಚರ್ಮ, ಅಂಕುಡೊಂಕಿನ ಗೆರೆ, ವ್ಯೂಹ, ಈರುಳ್ಳಿ ಸುಲಿಯುವಾಗಿನ ಕಣ್ಣೀರು, ಎರಡು ದ್ರುವಗಳು, ಸಮಭಾಜಕ ವೃತ್ತ, ಹಾವು ಏಣಿಯಾಟ ಹೀಗೆ ಕಾಣಿಸಿಕೊಳ್ಳುವ ಶಬ್ಧಗಳು ನಮ್ಮನ್ನು ಒಂದು ಸಶಕ್ತ ಚಿತ್ರ ಕಟ್ಟಿಕೊಳ್ಳಲು ಉದ್ದೀಪಿಸುತ್ತವೆ. ಹಾಗೆ ನೋಡಿದರೆ ಆ ಇಡೀ ಕವಿತೆಯನ್ನೇ ಓದಿ ಆಸ್ವಾದಿಸಬೇಕು.

ನಿನಗೇನು ಗೊತ್ತು ಹೃದಯ ಹೋಳಾಗುವ ನೋವು
ಅದು ನಾಜೂಕು ಗ್ಲಾಸಿನಲಿ
ಗುಟುಕರಿಸುವ ಪೇಯವಲ್ಲ

ಗಂಡಿಗೆ ಗ್ಲಾಸಿನಲ್ಲಿ ಗುಟುಕರಿಸುವ ಮದಿರೆ ಮುಖ್ಯ, ನಾಜೂಕಿನ ಸುರೆಯ ಗ್ಲಾಸಂತೂ ಅತಿ ಮುಖ್ಯ. ಆದರೆ ಅದಕ್ಕಿಂತ ಹೆಚ್ಚು ನಾಜೂಕಿನ ಮನಸ್ಸು ಹೊಂದಿದ ಹೆಣ್ಣು ಮುಖ್ಯವಾಗುವುದಿಲ್ಲ. ಹೀಗಾಗಿಯೆ ಹೆಣ್ಣಿನ ಹೃದಯವನ್ನು ಪುಡಿಗಟ್ಟುವುದರಲ್ಲಿಯೇ ತಮ್ಮ ಪೌರುಷವಿದೆ ಎದು ಭಾವಿಸುತ್ತಾರೆ. ಇಂತಹ ಅದೆಷ್ಟೋ ಸಾಲುಗಳು ನಮ್ಮನ್ನು ಈ ಸಂಕಲನವನ್ನು ಮತ್ತಿಷ್ಟು ಆಳವಾಗಿ ನೋಡುವಂತೆ ಏನನ್ನೋ ಹುಡುಕಾಡುವಂತೆ ಪ್ರೇರೇಪಿಸುತ್ತದೆ.

ನಗು ಮುಖದ ಹಿಂದೆಯೂ
ನಗುವೇ ಇರಬೇಕಿಲ್ಲ
ಎನ್ನುವ ಈ ಸಾಲುಗಳು ಹಾಗೂ,

ಹಳೆ(ಣೆ) ಬರಹವ ಅಳಿಸಿ ಬಿಡು
ಪತಿತ ಪಾವನದಾಟದ ಕಥೆಯ ನಾಯಕಿ
ಹುಟ್ಟದಿರಲಿ ಮತ್ತೆ ಮತ್ತೆ

ಎನ್ನವ ಈ ಸಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಈ ಸಂಕಲನದ ಒಟ್ಟೂ ವಿನ್ಯಾಸ ಅರ್ಥವಾಗುತ್ತದೆ. ಹೆಣ್ಣಿನ ಇತಿಮಿತಿಗಳನ್ನು ಹೇಳುತ್ತಲೇ ಅವುಗಳನ್ನು ಮೀರುವ ಕುರಿತಾಗಿ ಎಲ್ಲಿಯೂ ಆಕ್ರೋಶಭರಿತವಾದ ಮಾತುಗಳಿಲ್ಲದೆ ತಣ್ಣಗೆ ಒಳ ಮಾತುಗಳಲ್ಲಿಯೇ ಹೇಳಿಕೊಳ್ಳುತ್ತ ಸಾಗುವುದು ಅಪ್ಯಾಯಮಾನವೆನಿಸುತ್ತದೆ. ಇದಕ್ಕೆ ಪೂರಕವೆಂಬಂತೆ ನಿರ್ಲಿಂಗ ಪಾರಮ್ಯ ಎಂಬ ಕವಿತೆಯು ಪಾತರಗಿತ್ತಿಯನ್ನು ಬಣ್ಣ ಬಣ್ಣಗಳಿಂದ ಕೂಡಿದ ಪಾತರಗಿತ್ತಿಯನ್ನಾಗಿಯೂ, ಗಂಡನ್ನು ಗಂಭೀರತೆಯ ಮುದ್ರೆಯೊತ್ತಿದ ದುಂಬಿಗೆ ಹೋಲಿಸುವುದನ್ನು ಸಂಭಾಷಿಸುತ್ತದೆ. ದುಂಬಿ ಮತ್ತು ಪಾತರಗಿತ್ತಿ ಎರಡೂ ಹೂವಿನ ಮಕರಂದವನ್ನು ಹೀರುವುದೇ ಆದರೂ ಅವುಗಳ ನಡುವೆ ತೋರುವ ಲಿಂಗತಾರತಮ್ಯವನ್ನು ಬಿಡಿಸಿಡುವ ರೀತಿ ಹೊಚ್ಚಹೊಸದು.

ಈ ಚಿಟ್ಟೆ ಕಾಡಿದ ಹಾಗೆ ಎನ್ನುವ ಆಕರ್ಷಕ ಸಂಕಲನದಲ್ಲಿ ಅಲ್ಲಲ್ಲಿ ಕೆಲವು ಕವನಗಳು ಪ್ರಥಮ ಸಂಕಲನದ ಮಿತಿಗಳನ್ನು ಹೊಂದಿದ್ದರೂ ಅವುಗಳನ್ನು ಮೀರಿ ಗೆಲ್ಲುವಷ್ಟು ಉಳಿದ ಕವನಗಳು ಸದೃಢವಾಗಿವೆ.

ಈ ಚಿಟ್ಟೆ ಕಾಡಿದ ಹಾಗೆ ಕೃತಿಯ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಈ ಸರಣಿಯ ಹಿಂದಿನ ಬರೆಹಗಳು:
ಹೆಣ್ಣು ಬದುಕಿನ ಬವಣೆ ಹೇಳುವ ಗಂಡು ದನಿ

ಮಲೆನಾಡಿನ ಸೊಗಡನ್ನು ನೆನಪಿಸುವ 'ಮೂಚಿಮ್ಮ'
‘ಚೆಕ್ ಪೋಸ್ಟ್’ ಟ್ರಕ್ ನೊಂದಿಗೆ ಸಾಗುವ ಬಾಲ್ಯದ ನೆನಪು


 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...