ಪಾಶ್ಚಾತ್ಯ ಸಾಹಿತ್ಯ ಮತ್ತು ಜೆಂಡರ್‌ ನ್ಯಾಯದ ಪರಿಭಾಷೆ

Date: 01-09-2020

Location: ಬೆಂಗಳೂರು


 

ಸಾಹಿತ್ಯ ಕೃತಿಗಳು ’Rape Culture’ ಅನ್ನು ಪರೋಕ್ಷವಾಗಿ ಸಮರ್ಥಿಸಿದವೆ? ಬಲಾತ್ಕಾರವನ್ನು aestheticise ಮಾಡಿ, ಸಾಂಕೇತಿಕಗೊಳಿಸಿ ಅದನ್ನು ಸಮಾಜದಲ್ಲಿ ಸ್ವೀಕೃತವೆನ್ನುವ ಹಾಗೆ ಮಾಡಿದವೆ? ಎಂದು ಪ್ರಶ್ನಿಸುವ ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಅವರು ಟಿ.ಎಸ್‌. ಎಲಿಯಟ್‌ನ ವೇಸ್ಟ್‌ಲ್ಯಾಂಡ್‌ ಹಾಗೂ ಗ್ರೀಕ್‌ ಪುರಾಣ ಕತೆಗಳು, ಯೇಟ್ಸ್‌ನ ಕವಿತೆ, ಗೋಲ್ಡ್‌ಸ್ಮಿತ್‌ನ ಕಾದಂಬರಿಗಳ ಹಿನ್ನೆಲೆಯಲ್ಲಿ ’ಅತ್ಯಾಚಾರ’ ಮತ್ತು ಲಿಂಗ ರಾಜಕಾರಣವನ್ನು ಕುರಿತು ಚರ್ಚಿಸಿದ್ದಾರೆ.

1922ರಲ್ಲಿ ಟಿ.ಎಸ್.ಎಲಿಯಟ್ ಬರೆದ ‘The Waste Land’ಯೆನ್ನುವ ದೀರ್ಘ ಕಾವ್ಯವು ಪತ್ರಿಕೆಗಳಲ್ಲಿ ಹಾಗೂ ವಿಭಿನ್ನ ಪ್ರಕಾಶನಗಳಿಂದ ಪ್ರಕಟವಾಗಿ ಪ್ರಸಿದ್ಧ ಕಾದಂಬರಿಕಾರ್ತಿ ವರ್ಜೀನಿಯಾ ವೂಲ್ಫ್ ಮತ್ತು ಅವಳ ಗಂಡ ಲಿಯೋನಾರ್ಡ್ ವೂಲ್ಫ್ ಅವರ ಪ್ರಕಾಶನ ಸಂಸ್ಥೆ ದಿ ಹೋಗಾರ್ಥ್ ಪ್ರೆಸ್‌ನಿಂದ ಪ್ರಕಟವಾಗಿ ನಂತರದ ದಿನಗಳಲ್ಲಿ ಅದು ಇಂಗ್ಲಿಷ್ ನವ್ಯ ಕಾವ್ಯದ ಒಂದು ಕ್ಲಾಸಿಕ್ ಎಂದು ಹೆಸರುವಾಸಿಯಾಯಿತು. ನವ್ಯಕಾವ್ಯವೆಂದರೆ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಯಿತು. ಎಲಿಯಟ್‌ನ ಒಟ್ಟು ಕಾವ್ಯ ಅದೆಷ್ಟು ವ್ಯಾಖ್ಯಾನಗಳಿಗೆ ವಸ್ತುವಾಯಿತೆಂದರೆ ಅವನ ಬಗ್ಗೆ ಬಂದ ವಿಮರ್ಶೆಯನ್ನು ಎಲಿಯಟ್ ಇಂಡಸ್ಟ್ರಿ ಎಂದು ಕರೆಯಲಾಯಿತು. 1987ರಿಂದ ನಾನು ಅಡಿಗರು ಮತ್ತು ಎಲಿಯಟ್ ಕುರಿತ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಸಂಶೋಧನೆ ಆರಂಭಿಸಿದಾಗ ಅದು ಒಂದು ಬೃಹತ್ ಉದ್ದಿಮೆಯೆಂದು ಗೊತ್ತಾಯಿತು. ಅಂದ ಹಾಗೆ ನನ್ನ Ph.D ಕೆಲಸ ಆರಂಭವಾದ ಬಗ್ಗೆ ನೀವು ಇದನ್ನು ಕೇಳಲೇಬೇಕು. ನಾನು ಮತ್ತು ನನ್ನ ಮಾರ್ಗದರ್ಶಕರು ನನ್ನ Ph.D proposal ಜೊತೆಗೆ ಅಂದಿನ ವಿಭಾಗ ಮುಖ್ಯಸ್ಥರನ್ನು ನೋಡಲು ಹೋದೆವು. ತುಂಬಾ ಸ್ಪುರದ್ರೂಪಿಯಾಗಿದ್ದು ಗರಿಗರಿ ಸೂಟು ಬೂಟಿನಲ್ಲಿ ಇದ್ದ ಅವರು ನನಗೆ ಹೀಗೆ ಹೇಳಿದರು.“Why do you want to work on Adiga? If you have anything to say about his poetry write it in the footnotes”. ಕನ್ನಡದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾದ ನನ್ನ ಮಾರ್ಗದರ್ಶಿಗಳು ಈ English gentleman ನಿವೃತ್ತರಾಗುವವರೆಗೆ ಕಾಯೋಣವೆಂದೂ, ಅಲ್ಲಿಯವರೆಗೆ ನಾನು ಒಂದೆರಡು ಅಧ್ಯಾಯಗಳನ್ನು ಬರೆಯಬಹುದೆಂದು ಹೇಳಿದರು. ಹೀಗಾಗಿ ಅಡಿಗರು ಅಡಿಟಿಪ್ಪಣಿಯಾಗುವ ದುರಂತವು ತಪ್ಪಿತು!

ಇರಲಿ, ಎಲಿಯಟ್‌ನ ವೇಸ್ಟ್‌ಲ್ಯಾಂಡ್ ಬಗ್ಗೆ ಅನೇಕ ಪ್ರಸಂಗಗಳಿವೆ. ಒಂದು ನೈಜ ಪ್ರಸಂಗವೆಂದರೆ ತುಂಬಾ ದೀರ್ಘವಾಗಿದ್ದ ಮೂಲ ಕಾವ್ಯದ ಪ್ರತಿಯನ್ನು ಎಲಿಯಟ್ ಕವಿ ವಿಮರ್ಶಕ ಎಜ್ರಾಪೌಂಡ್‌ನಿಗೆ ಕೊಟ್ಟ. ಆ ಕಾಲದಲ್ಲಿಯೆ ಹಳೆಯ ಮಾಸಲು ಪ್ಯಾಂಟು, ಒಂದು ಕಿವಿಯಲ್ಲಿ ಓಲೆ ಹಾಕುತ್ತಿದ್ದ ವಿಕ್ಷಿಪ್ತ ಜೀನಿಯಸ್ ಎಜ್ರಾ ಪೌಂಡ್ ವಿಶ್ವವಿದ್ಯಾಲಯದಲ್ಲಿ ನನಗೆ ಮಂಡಿ ನೋಯುತ್ತದೆ ಎಂದು ಟೇಬಲ್ಲಿನ ಮೇಲೆ ಕಾಲಿಟ್ಟು ಕೂಡುತ್ತಿದ್ದರಿಂದ ಅವನನ್ನು ಹೊರಹಾಕಲಾಯಿತು ಎಂದು ಪ್ರತೀತಿಯಿದೆ. ಚೀನಿ ಭಾಷೆಯು ಸೇರಿದಂತೆ ಜಗತ್ತಿನ ಅನೇಕ ಭಾಷೆಗಳನ್ನು ಬಲ್ಲ ಪೌಂಡ್ ತನ್ನ ಗೆಳೆಯನ ಕಾವ್ಯವನ್ನು ಸಿಸೇರಿಯನ್ ಆಪರೇಶನ್ ಮಾಡಿ ತಾನು ಕಾವ್ಯದೇವತೆಯಲ್ಲದಿದ್ದರೂ ಸುಸೂತ್ರ ಹೆರಿಗೆ ಮಾಡಿಸಿದ್ದೇನೆ ಎಂದು ಬರೆದಿದ್ದಾನೆ. “April is ನಿಂದ ಶುರುವಾಗಿ Shantih Shantihವರೆಗೆ ಈಗ ನಾನು ಉಳಿಸಿರುವ ಪದ್ಯವೆ ಇಂಗ್ಲಿಷ್ ಭಾಷೆಯ ಅತಿ ದೀರ್ಘ ಕಾವ್ಯ ಸಾಕು ಎಂದು ಟಿಪ್ಪಣಿ ಬರೆದ. 434 ಸಾಲಿನ ವೇಸ್ಟ್‌ಲ್ಯಾಂಡ್ನ್ನು ಇಂಗ್ಲಿಷ್ ಭಾಷೆಯ ಅತಿ ದೀರ್ಘಕಾವ್ಯ ಎಂದು ಈ ಮಹಾ ವಿಮರ್ಶಕ ಹೇಳಿದ್ದಕ್ಕೆ ಕಾರಣವೆಂದರೆ ಈ ಕಾವ್ಯದಲ್ಲಿ ಯೂರೋಪಿನ ನಾಗರೀಕತೆಯ ಆರಂಭದಿಂದ 1922ರ ವರೆಗಿನ ಪ್ರಧಾನ ಘಟನೆಗಳು, ಅನೇಕ ಭಾಷೆಯ ಅನೇಕ ಕೃತಿಗಳ ಬಗ್ಗೆ ಪ್ರಸ್ತಾಪಗಳು (allusions) ಇವೆ. ಇವುಗಳನ್ನು ವಿವರಿಸಿ ಸ್ವತಃ ಎಲಿಯಟ್ ವಿವರವಾದ ಟಿಪ್ಪಣಿಗಳನ್ನು ಬರೆದ. ವರ್ಷಗಳ ನಂತರ ವಿಷಾದದಿಂದ ಅವನು ಹೇಳಿಕೊಂಡಂತೆ ವಿಮರ್ಶಕರು ಕಾವ್ಯವನ್ನು ಬಿಟ್ಟು ಆ ಟಿಪ್ಪಣಿಗಳಲ್ಲಿ ಪ್ರಸ್ತಾಪವಾದ ಮೂಲಕೃತಿಗಳನ್ನ ಹಿಂಬಾಲಿಸಿ ಕಳೆದುಹೋದರು. ಟಿಪ್ಪಣಿ ಬರೆದದ್ದು ಯಾಕೆ ಎಂದರೆ ಪದ್ಯ ದೀರ್ಘವಾಗಿದ್ದರೂ ಸ್ವತಂತ್ರವಾಗಿ ಪ್ರಕಟಿಸುವಷ್ಟು ದೀರ್ಘವಾಗಿಲ್ಲವೆಂದು ಪ್ರಕಾಶಕರು ಹೇಳಿದ್ದರಿಂದ ಅವುಗಳನ್ನು ಸೇರಿಸಿದೆ ಎಂದು ಹೇಳಿದ! ಮೂಲತಃ ಅಮೇರಿಕದವನಾದ ಎಲಿಯಟ್ ಬ್ರಿಟಿಷ್ ನಾಗರೀಕತ್ವವನ್ನು ಪಡೆದು ಇಂಗ್ಲಿಷ್ ಜಂಟಲ್‌ಮನ್ ಅಂದರೆ ಹೀಗಿರಬೇಕು ಎನ್ನುವ ಹಾಗೆ ಮಾತು, ನಡಿಗೆ ಹಾಗೂ ವೇಷಭೂಷಗಳನ್ನು ಅನುಸರಿಸಿದ್ದ. ಮಹಾಗಂಭೀರ ಅತಿ ನಾಗರೀಕ ವ್ಯಕ್ತಿಯಂತೆ ಕಾಣುತ್ತಿದ್ದ. ಆದರೆ ಅವನ ಕಾವ್ಯ ಮಾತ್ರ ಇದೆಲ್ಲುದಕ್ಕೆ ತದ್ವಿರುದ್ಧವಾಗಿ ಮನುಷ್ಯರನ್ನು ಕೊಂದು ಕೂಗುವ ಲೈಂಗಿಕತೆಯ ಬಗ್ಗೆ, ಆಧುನಿಕ ಮನುಷ್ಯನ ಶಾಶ್ವತ ಅಸ್ತಿತ್ವದ ಸ್ಥಿತಿಯಾದ ಬಗ್ಗೆ, ಯೂರೋಪಿನ ನಾಗರೀಕತೆಯು ಭಗ್ನವಾಗುತ್ತಿರುವುದರ ಬಗ್ಗೆ ಇದೆ. ಮಹಾನಗರಗಳೆಂಬ ಮರಳುಗಾಡಿನ ಬಗ್ಗೆ, ಪ್ರೀತಿಯೇ ಅಸಾಧ್ಯವಾದ ಸಂಬಂಧಗಳ ಬಗ್ಗೆ ಇವೆ. ಹಲವಾರು ದಶಕಗಳವರೆಗೆ ಇಂಗ್ಲಿಷ್ ಕಾವ್ಯದ ಏಕಮಾತ್ರ ತಾರೆಯ (star) ಹಾಗೆ ಪ್ರಸಿದ್ಧನಾಗಿದ್ದ ಎಲಿಯಟ್ ನವ್ಯತೆಯ ಭರಾಟೆ ಇಳಿದು ಹೋದಮೇಲೆ ಅಂಚಿಗೆ ಸರಿದು, ಆನಂತರ ಇಂಡಿಯಾದ ವಿಶ್ವವಿದ್ಯಾಲಯಗಳು ಕಾಲೇಜುಗಳಲ್ಲಿ ಮರುಹುಟ್ಟು ಪಡೆದು 1950-60ರ ದಶಕಗಳಲ್ಲಿ ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ನವ್ಯತೆ ಹುಟ್ಟಿಕೊಳ್ಳಲು ಒಂದು ಕಾರಣವಾಗಿ, ಈಗ ಅವನ ಅಮೆರಿಕಾದಲ್ಲಿಯೇ ಹೊರಹಾಕಲ್ಪಟ್ಟಿದ್ದಾನೆ.

ಈ ಪೂರ್ವ ಪುರಾಣದ ನಂತರ ನಾನು ಮುಖ್ಯ ವಿಷಯಕ್ಕೆ ಬರುತ್ತೇನೆ. ವೇಸ್ಟ್‌ಲ್ಯಾಂಡ್ ಕಾವ್ಯವು ಯೂರೋಪಿನ ನಾಗರೀಕತೆಯ ನೆನಪುಗಳನ್ನು ವಿಫುಲವಾಗಿ ಬಳಸಿಕೊಳ್ಳುವ ಕಾವ್ಯವಾಗಿದೆ. ಈ ನೆನಪುಗಳಲ್ಲಿ ಮುಖ್ಯವಾದವು ಗಂಡಸಿನ ಅತ್ಯಾಚಾರಕ್ಕೆ, ಪ್ರೀತಿಯ ಸೋಂಕು ಇಲ್ಲದ ಕಾಮಕ್ಕೆ ಬಲಿಯಾದ ಸ್ತ್ರೀಯರ ಸಾಂಸ್ಕೃತಿಕ ನೆನಪುಗಳು. ಇವುಗಳನ್ನೇ ಜೋಡಿಸಿ ಓದಿದರೆ ಜಗತ್ತಿನ ಶ್ರೇಷ್ಠ ನಾಗರೀಕತೆಯೆಂದು ಈಗಲೂ ತಾನೇ ನಂಬಿಕೊಳ್ಳುವ ಯೂರೋಪಿನ ನಾಗರೀಕತೆಯು ಇಂದಿನ ವಿಮರ್ಶೆಯ ಭಾಷೆಯಲ್ಲಿ ಹೇಳುವುದಾದರೆ ಒಂದು ‘Rape Culture’ ಆಗಿತ್ತು ಎನ್ನುವ ಭಾವನೆ ಬರುತ್ತದೆ. ವಿಶೇಷವಾಗಿ ಈ ಕಾವ್ಯದ ಎರಡನೇ ಭಾಗದಲ್ಲಿ. ಭಾಗದ ಶೀರ್ಷಿಕೆಯು ‘A Game of Chess’, ಗಂಡು ಹೆಣ್ಣುಗಳ ನಡುವಿನ ಚದುರಂಗದಾಟ. ಇಲ್ಲಿ ಲೈಂಗಿಕತೆ, ಕಾಮ ಇವೆಲ್ಲವುಗಳು ದಾಳಗಳೇ. ಅಂತಿಮ ಗುರಿಯೆಂದರೆ ಅಧಿಕಾರದ ಚಲಾವಣೆ. (Power ಎನ್ನುವ ಅರ್ಥದಲ್ಲಿ). ಮಿಶೆಲ್ ಫೂಕೋ ಹೇಳುವಂತೆ ದಾಂಪತ್ಯ, ಕುಟುಂಬಗಳು ಮಾತ್ರವಲ್ಲ. ಸಂಭೋಗದಂಥ ಆತ್ಮೀಯ ಕ್ರಿಯೆಯಲ್ಲಿಯೂ ಅಧಿಕಾರ ರಾಜಕೀಯವಿದೆ. ಜೆಂಡರ್ ರಾಜಕೀಯವಿದೆ. ಒಬ್ಬ ಮನುಷ್ಯ ವ್ಯಕ್ತಿಯ ಸ್ವಾಯತ್ತತೆ, ಸ್ವತಂತ್ರ ಮನಸ್ಸು, ದೇಹಗಳ ಮೇಲೆ ಅವಳ ಸಂಪೂರ್ಣ ಒಪ್ಪಿಗೆಯಿಲ್ಲದೆಯೆ ಮಾಡುವ ಎಲ್ಲಾ ಕ್ರಿಯೆಗಳು ಅತ್ಯಾಚಾರವೇ. ವಿಶಾಲ ಅರ್ಥದಲ್ಲಿ ಲೈಂಗಿಕ ದೌರ್ಜನ್ಯವೇ. ಇದನ್ನು ಎಲಿಯಟ್‌ನ ಕಾವ್ಯ ಪ್ರಭಾವಿಯಾಗಿ ಹೇಳುತ್ತದೆ. ಶ್ರೀಮಂತ ವರ್ಗದ ಮಹಿಳೆಯೊಬ್ಬಳ ಡ್ರೆಸ್ಸಿಂಗ್ ರೂಮ್‌ನಲ್ಲಿ ಯೂರೋಪಿನ ಗತಕಾಲದ ಪಳೆಯುಳಿಕೆಗಳಂತಿರುವ ಅನೇಕ ವಸ್ತುಗಳಿವೆ. ಅದರಲ್ಲಿ ಒಂದು ವರ್ಣಚಿತ್ರದಲ್ಲಿ ಗ್ರೀಕ್ ಪುರಾಣ ಕತೆಯೊಂದರಲ್ಲಿ ಫಿಲೋಮೆಲ್ ನೈಟಿಂಗೇಲ್ ಹಕ್ಕಿಯಾಗಿ ರೂಪಾಂತರವಾಗುವ ದೃಶ್ಯವಿದೆ. ಮೂಲ ಪುರಾಣ ಕತೆಯಲ್ಲಿ ಪ್ರೋಕ್ನೆ ಎನ್ನುವವಳು ಟೆರಿಯೂಸ್ ಎನ್ನುವ ದೊರೆಯನ್ನು ಮದುವೆಯಾಗುತ್ತಾಳೆ. ಗಂಡನ ಮನೆಯಲ್ಲಿರುವವಳಿಗೆ ತನ್ನ ಪ್ರೀತಿಯ ತಂಗಿಯಾದ ಫಿಲೋಮೆಲ್‌ಳನ್ನು ಕರೆಸಬೇಕೆನಿಸಿ ತನ್ನ ಗಂಡ ಟೆರೆಯೂಸ್‌ನನ್ನು ಅವಳ ಬಳಿ ಕಳಿಸುತ್ತಾಳೆ. ಅವಳನ್ನು ಕರೆದು ತರುವಾಗ ಕಾಡಿನಲ್ಲಿ ಅವಳ ಮೇಲೆ ಅತ್ಯಾಚಾರ ಮಾಡಿ, ಅವಳು ತನ್ನ ಅಪರಾಧವನ್ನು ಹೇಳಬಾರದು ಎಂದು ಟೆರಿಯೂಸ್ ಅವಳ ನಾಲಗೆಯನ್ನು ಕತ್ತರಿಸಿ ಅಲ್ಲಿಯೇ ಬಿಟ್ಟುಬರುತ್ತಾನೆ. ಆದರೆ ಫಿಲೋಮೆಲ್ ತನ್ನ ಕತೆಯನ್ನು ಹೆಣಿಗೆಯಲ್ಲಿ (drapery)ಕೈಯಿಂದ ಹೆಣೆದು ಅದನ್ನು ಪ್ರೋಕ್ನೆಗೆ ತಲುಪಿಸುತ್ತಾಳೆ. ಅತ್ಯಂತ ಭೀಕರವಾದ ರೀತಿಯಲ್ಲಿ ಪ್ರೋಕ್ನೆ ಅವನ ಮೇಲೆ ಹಗೆ ತೀರಿಸಿಕೊಂಡು, ಅವನಿಂದ ಪಾರಾಗಲು ಫಿಲೋಮೆಲ್ ಜೊತೆಗೆ ಓಡಿ ಹೋಗಿ ಕೊನೆಗೆ ಅವರಿಬ್ಬರು ಮಾತ್ರವಲ್ಲ ಅವನು ಕೂಡ ಬೇರೆಬೇರೆ ಜಾತಿಯ ಹಕ್ಕಿಗಳಾಗಿ ರೂಪಾಂತರ ಹೊಂದುತ್ತಾರೆ. ಎಲಿಯಟ್‌ನ ಪದ್ಯದಲ್ಲಿ ಅನಾಗರೀಕ, ಬರ್ಬರ ದೊರೆಯಿಂದ ಒರಟಾದ ಒತ್ತಾಯಕ್ಕೆ ಬಲಿಯಾದ ಫಿಲೋಮೆಲ್‌ಳ ರೂಪಾಂತರದ ಪ್ರಸ್ತಾಪವಿದೆ. ಆದರೆ ಸುಂದರ ಹಾಡಿನ ಹಕ್ಕಿಯಾಗಿ ಅವಳು ಮರಳುಗಾಡನ್ನು ತನ್ನ ಇನಿದನಿಯಿಂದ ತುಂಬುತ್ತಾಳೆ ಎಂದು ವರ್ಣಿಸುವ ಎಲಿಯಟ್ ಅವಳ ದನಿಯನ್ನು ‘inviolable’ ಎಂದು ವಿವರಿಸುತ್ತಾನೆ. ಈ ಪದದ ಸರಳ ಅರ್ಥವು ಮುಗಿಸಲಾಗದ ಅದುಮಲಾಗದ ಎಂದಿದೆಯಾದರೂ ‘Violate’ ಎನ್ನುವ ಪದಕ್ಕೆ ಅತ್ಯಾಚಾರ ಮಾಡುವುದು.

ಮಹಾನ್ ಯೂರೋಪಿನ ನಾಗರೀಕತೆಯ ಮೂಲಸ್ರೋತ, ಜಗತ್ತಿನ ಶ್ರೇಷ್ಠ ಸಾಹಿತ್ಯ ಕಲೆಗಳ ಮೂಲ ಆಕರವೆಂದು ನಾವು ನಂಬಿರುವ ಗ್ರೀಕ್ ಪುರಾಣ ಕತೆಗಳಲ್ಲಿ ಅತ್ಯಾಚಾರದ ಪ್ರಸಂಗಗಳು, ಅದರಲ್ಲೂ ಗ್ರೀಕ್ ದೇವರುಗಳು ಭಾಗಿಯಾಗುವ ಅತ್ಯಾಚಾರದ ಪ್ರಸಂಗಗಳು ಭೀತಿ ಹುಟ್ಟಿಸುವಷ್ಟು ಹೆಚ್ಚಾಗಿವೆ. ದೇವರುಗಳು ದೊರೆಯಾದ (ನಮ್ಮ ದೇವೆಂದ್ರನ ಹಾಗೆ) ಜೂಸ್ (zeus) ಮಾಡುವ ಅತ್ಯಾಚಾರಗಳ ಪೂರ್ಣ ಪಟ್ಟಿಯನ್ನು ನೆನಪಿಡುವುದು ಕಷ್ಟವಾಗುತ್ತದೆ. ಅದರಲ್ಲೂ ಅನೇಕ ಬಾರಿ ಅವನು ಪ್ರಾಣಿಗಳು, ಹಕ್ಕಿಯ ರೂಪದಲ್ಲಿ ಬಂದು ಕೆಲವೊಮ್ಮೆ ಹೆಣ್ಣುದೇವತೆಗಳ ಮೇಲೆ, ಕೆಲವೊಮ್ಮೆ ಮನುಷ್ಯ ಲೋಕದ ಹೆಣ್ಣುಗಳ ಮೇಲೆ ಬಲಾತ್ಕಾರ ಮಾಡುತ್ತಾನೆ. ಈ ಬಲಾತ್ಕಾರದಿಂದ ಹುಟ್ಟುವ ಸಂತತಿಯು ಅಪಾರ ಶಕ್ತಿಯನ್ನು ಹೊಂದಿದ್ದು ನಗರ ರಾಜ್ಯಗಳ ಸ್ಥಾಪನೆ, ಯುದ್ಧದಲ್ಲಿ ವಿಜಯ ಇತ್ಯಾದಿ ಸಾಧನೆಗಳನ್ನು ಮಾಡುತ್ತಾರೆಂದು ಕಲೆಗಳು ಹೇಳುತ್ತವೆ. ಕೆಲವು ವ್ಯಾಖ್ಯಾನಗಳು ಈ ಬಲಾತ್ಕಾರವನ್ನು ದೈವ ಹಾಗೂ ಮನುಷ್ಯ ಲೋಕಗಳ ಒಂದಾಗುವಿಕೆಯ ಸಂಕೇತವೆಂದು ವಿವರಿಸುತ್ತವೆ. ಹೀಗಾಗಿಯೇ W.B.Yeats ಕವಿ ಇಂಥ ಬಲಾತ್ಕಾರದ ಪುರಾಣ ಕತೆಯೊಂದನ್ನು ಆಧರಿಸಿ ಬರೆದ ‘Leda and the Swan’ ಪದ್ಯವು 20ನೇ ಶತಮಾನದ ಶ್ರೇಷ್ಠ ಪದ್ಯಗಳಲ್ಲಿ ಒಂದು ಎಂದು ಪ್ರಸಿದ್ಧವಾಗಿದೆ. (ಇದನ್ನು ಅನಂತಮೂರ್ತಿ, ಲಂಕೇಶ್, ಲಕ್ಷ್ಮಿನಾರಾಯಣಭಟ್‌ರು ಸೇರಿದಂತೆ ಅನೇಕರು ಅನುವಾದಿಸಿದ್ದಾರೆ. ಅಂದ ಹಾಗೆ ಇವರಲ್ಲಿ ಯಾರೂ ಈ ಘಟನೆಯನ್ನು rape ಎಂದು ಚರ್ಚಿಸಿದ್ದು ನನಗೆ ನೆನಪಿಲ್ಲ. ಚರ್ಚಿಸಿದ್ದರೆ ಈಗಲೇ ಬೇಶರತ್ ಕ್ಷಮೆ ಕೇಳುತ್ತೇನೆ.) ತನ್ನ ಪದ್ಯದಲ್ಲಿ ಏಟ್ಸ್ ಬಲಾತ್ಕಾರಕ್ಕೆ ಈಡಾಗುವ ಲೀಡಾಳನ್ನು ‘helpless’, ‘staggering’, ‘terrified’ ಎನ್ನುವ ಪದಗಳ ಮೂಲಕ ವರ್ಣಿಸುತ್ತಾನೆ. ಅಂದರೆ ಆ ಹುಡುಗಿ ದೈತ್ಯ ಹಕ್ಕಿಯ ಬಲಾತ್ಕಾರದ ಎದುರು ಅಸಹಾಯಕಳಾಗಿದ್ದಾಳೆಂದು ಹೇಳುತ್ತಾನೆ. ಆದರೆ ಗ್ರೀಕ್ ದೇವತೆ ಜೂಸ್‌ನ ಹಕ್ಕಿಯ ಅವತಾರವನ್ನು ‘feathered glory’ ಎಂದೇ ವರ್ಣಿಸುತ್ತಾನೆ. ಅಲ್ಲದೆ ಅವನ ಗಮನವಿರುವುದು ಇದೊಂದು ಅತಿ ವಾಸ್ತವಿಕ Supernatural ಘಟನೆ ಎನ್ನುವುದರ ಮೇಲೆ. ಈ ವ್ಯಾಖ್ಯಾನದ ಮಾದರಿ ಗ್ರೀಕ್ ಪುರಾಣ ಕತೆಗಳಲ್ಲಿಯೂ ಇದೆ. ಪ್ರಶ್ನೆಯೊಂದರ ಈ ಕತೆಗಳಲ್ಲಿ ಬಲಾತ್ಕಾರ ಮಾಡುವವರು ಬಲಿಷ್ಠ ದೇವರುಗಳು (ಇವರಲ್ಲಿ ಬಲಿಷ್ಠ ಹೆಣ್ಣು ದೇವತೆಗಳೂ ಇದ್ದಾರೆ; ಅವರು ಪುರುಷರ ಮೇಲೆ ಬಲಾತ್ಕಾರ ಮಾಡುತ್ತಾರೆ). ಅಂದರೆ ಗ್ರೀಕ್ ಸಾಂಸ್ಕೃತಿಕ ನಾಯಕರುಗಳು. ಅವರನ್ನು ಕೇವಲ ಸಂಕೇತಗಳೆಂದು ನೋಡಲಾಗುವುದಿಲ್ಲ. ಏಕೆಂದರೆ ಈ ಪುರಾಣಗಳನ್ನು ಸ್ವೀಕರಿಸಿದ ಗ್ರೀಕ್ ಸಂಸ್ಕ್ರತಿಯು ಜೆಂಡರ್ ಅಸಮಾನತೆಯ ಬುನಾದಿಯ ಮೇಲೆ ನಿಂತಿತ್ತು. ಪ್ಲೇಟೋನ ಆದರ್ಶ ಗಣರಾಜ್ಯದಲ್ಲಿ ಹೆಂಗಸರಿಗೆ ಮತ್ತು ಗುಲಾಮರಿಗೆ ಸಮಾನ ಸ್ಥಾನವಿರಲೇ ಇಲ್ಲ. ಹೋಮರ್‌ನ ಕ್ಷಾತ್ರ ಕಾವ್ಯದಲ್ಲಿ ಧೀರ ಯೋಧರು ತಾವು ಸೋಲಿಸಿದ ನಾಡಿನ ಹೆಣ್ಣುಗಳನ್ನು ಭೋಗಿಸಬಹುದಾಗಿತ್ತು. ಅಲ್ಲದೆ ದಾಸಿಯರನ್ನಾಗಿ ಮಾಡಿಕೊಳ್ಳಬಹುದಾಗಿತ್ತು. ವಯಸ್ಕರಾದ ಗ್ರೀಕ್ ಪುರುಷರು ಗುಲಾಮ ಹದಿಹರೆಯದ ಹುಡುಗರನ್ನು ಇಟ್ಟುಕೊಳ್ಳುತ್ತಿದ್ದರು. ಕೆಲವೊಮ್ಮೆ ಗ್ರೀಕ್ ಹುಡುಗರನ್ನು ಪ್ರೇಮಿಸಿ ಕಾಮಿಸುತ್ತಿದ್ದರು.

ಅಂದರೆ ಅಂದಿನ ಸಾಹಿತ್ಯ ಕೃತಿಗಳು ಕೂಡ ಇಂಥ “Rape Culture” ಅನ್ನು ಪರೋಕ್ಷವಾಗಿ ಸಮರ್ಥಿಸಿದವೆ? ಬಲಾತ್ಕಾರವನ್ನು aestheticise ಮಾಡಿ, ಸಾಂಕೇತಿಕಗೊಳಿಸಿ ಅದನ್ನು ಸಮಾಜದಲ್ಲಿ ಸ್ವೀಕೃತವೆನ್ನುವ ಹಾಗೆ ಮಾಡಿದವೆ? ಇಲ್ಲ. ಎಲ್ಲವೂ ಅಲ್ಲ. ಗ್ರೀಕ್ ದುರಂತ ನಾಟಕಗಳಲ್ಲಿ ಕ್ಲೈಟಮ್‌ನೆಸ್ಟ್ರಾ (ಸೋಫೋಕ್ಲೀಸ್‌ನ ನಾಟಕದಲ್ಲಿ), ಮೀಡಿಯಾ (ಯೂರಿವಿಟೇಸ್‌ನ ನಾಟಕದಲ್ಲಿ) ಈಗಾಗಲೇ ಪ್ರಸ್ತಾಪಿಸಿದ ಪ್ರೊಕ್ನೆ (ಓವಿಡ್‌ನ ಕಾವ್ಯದಲ್ಲಿ) ಅತ್ಯಾಚಾರಿ ಗಂಡಸರ ಮೇಲೆ ಭೀಕರವಾದ ಹಗೆ ಸಾಧಿಸುತ್ತಾರೆ. ಈಡಿಪಿಸ್‌‌ನ ಮಗಳು ಅಂತಿಗೊನೆ ತನ್ನ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾಳೆ.

ಇವುಗಳ ಹಿಂದೆ ಯುಗಧರ್ಮಗಳ ಬದಲಾವಣೆಗಳಿವೆ. ಕ್ರಮೇಣವಾಗಿ ಜೆಂಡರ್ ನ್ಯಾಯದ ಪರಿಭಾಷೆಯಲ್ಲಿ ಬದಲಾವಣೆಗಳಾಗಿ ಅತ್ಯಾಚಾರವನ್ನು heroism ಎಂದು ನೋಡುವ ಬದಲು ಅಪರಾಧವನ್ನಾಗಿ ನೋಡುವ ದೃಷ್ಟಿ ನಿಧಾನವಾಗಿ ಬರತೊಡಗುತ್ತದೆ. ಇನ್ನೊಂದು ಕಡೆಗೆ ಏನೂ ಬದಲಾಗಿಲ್ಲ ಎನ್ನುವ ವಿಷಾದವೂ ಅನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಿಗಾಗಿ ಬರೆಯಲಾಗುವ ಕಾದಂಬರಿಗಳು ವಿಶೇಷವಾಗಿ ಅಮೆರಿಕಾದಲ್ಲಿ ಜನಪ್ರಿಯವಾಗುತ್ತಿವೆ. Young Adolescent Fiction ಎನ್ನುವ ಹೆಸರಿನಲ್ಲಿ. ಇಂಥ ಕಾದಂಬರಿಗಳಲ್ಲಿ ಪದೇ ಪದೇ ಬರುವ ವಸ್ತುವೆಂದರೆ date rape. ಅಂದರೆ ಹೈಸ್ಕೂಲ್ ಅಥವಾ ಕಾಲೇಜಿನ ಮೊದಲ ವರ್ಷದ ಹದಿವಯಸ್ಕ ಹುಡುಗ ಹುಡುಗಿಯರು ಹೊರಗೆ ಹೋಗಿ ಒಟ್ಟಿಗೆ ಸಮಯ ಕಳೆಯುವ datingನಲ್ಲಿ ಆಗುವ ಅತ್ಯಾಚಾರಗಳು. ಇಂಥ ಒಂದು ಕಾದಂಬರಿಯಲ್ಲಿ ಒಬ್ಬ ಹುಡುಗಿ ಸಂಗಾತಿಗಳೊಂದಿಗೆ datingಗೆ ಹೋಗಿರುತ್ತಾಳೆ. ಅಲ್ಲಿ dating ಅನ್ನುವುದು ಲೈಂಗಿಕ ಬಲಾತ್ಕಾರವಾಗತೊಡಗಿದಾಗ ಬೆದರಿ ಅವಳು ಪೊಲೀಸ್‌ರಿಗೆ ಫೋನ್ ಮಾಡುತ್ತಾಳೆ. ಪರಿಣಾಮವೆಂದರೆ ಅಂದಿನಿಂದ ಅವಳು ಅಸ್ಪೃಶ್ಯಳಾಗುತ್ತಾಳೆ. ಅವಳೇ ಅಪರಾಧಿಯೆನ್ನುವಂತಾಗುತ್ತದೆ. ಇನ್ನೊಂದು ಕತೆಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಮರುದಿನ ಶಾಲೆಗೆ ಬಂದಾಗ ತರಗತಿಯಲ್ಲಿ ಒಬ್ಬ ಸಹಪಾಠಿ ಅವಳ ಬಳಿ ಬಂದು “You are a slut” ಎಂದು ಜೋರಾಗಿ ಹೇಳುತ್ತಾನೆ. ಬಹುಚರ್ಚಿತವಾದ ಇನ್ನೊಂದು ಮುಖ್ಯ ಕೃತಿಯ ಹೆಸರು “Speak” ಎಂದು. ಈ ಕೃತಿಯ ಲೇಖಕಿ ಈಗ “Shout” ಎನ್ನುವ ಕೃತಿಯನ್ನು ಬರೆಯುತ್ತಿದ್ದಾರಂತೆ. ಅಂದರೆ ಫಿಲೋಮೆಲಳ ನಾಲಿಗೆ ಕತ್ತರಿಸಿ ಸಾವಿರಾರು ವರ್ಷಗಳಾದವು. ಆದರೆ ಈಗಲೂ ಅದೇ ಹೇಳುವ ಸಮಸ್ಯೆ. ಹೇಳಿದರೆ ತಾನೇ slut ಎನ್ನಿಸಿಕೊಳ್ಳುವ ಭೀತಿ. ಫುಲಿಟ್ಜರ್ ಪ್ರಶಸ್ತಿ ಪಡೆದ Alice ವಾಕರ್‌ಳ ಕಾದಂಬರಿ ‘The Colour Purple’ನಲ್ಲಿ 14-15 ವರ್ಷದ ಸಿಲಿಯಳ ಮೇಲೆ ಅವಳ ಮಲತಂದೆಯೇ ಅತ್ಯಾಚಾರ ಮಾಡಿ ಅವಳು ಗರ್ಭಿಣಿಯಾಗುತ್ತಾಳೆ. ಆದರೆ ಏನನ್ನೂ ಹೇಳಲಾರಳು. ಏಕೆಂದರೆ ಹೇಳಿದರೆ ಆಪತ್ತು ಕಾಯ್ದಿದೆಯೆಂದು ಅವನು ಹೆಸರಿಸಿದ್ದಾನೆ. ಹೀಗಾಗಿ ಸಿಲಿಯ ದೇವರಿಗೆ ಪತ್ರಗಳನ್ನು ಬರೆದಿಡತೊಡಗುತ್ತಾಳೆ. ಈ ಕಾದಂಬರಿಯೇ ಪತ್ರಗಳ ಸರಣಿ ಮಾದರಿಯ ಕಾದಂಬರಿಯಾಗಿದೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ್ತಿ ಟೋನಿ ಮಾರಿಸನ್‌ಳ ‘Beloved’ ಕಾದಂಬರಿಯಲ್ಲಿ ನಾಯಕಿ ಸೆಟ್ (Sethe) ಒಬ್ಬ ಕಪ್ಪು ಗುಲಾಮ ಮಹಿಳೆಯಾಗಿ ಅದೆಂಥ ಅತ್ಯಾಚಾರಗಳನ್ನು ಅನುಭವಿಸಿರುತ್ತಾಳೆ ಎಂದರೆ ಅವಳ ಒಡೆಯನು ತನ್ನನ್ನು ಹಿಂಬಾಲಿಸಿ ಬಂದಿದ್ದು ಗೊತ್ತಾಗಿ, ತನ್ನ ಪಾಡು ಅವರಿಗೆ ಬೇಡವೆಂದು ತನ್ನ ಮಕ್ಕಳನ್ನು ಕೈಯಾರೆ ಕೊಲ್ಲಲು ಹೊರಟು ಒಂದು ಹೆಣ್ಣುಮಗುವನ್ನು ಕೊಲ್ಲುತ್ತಾಳೆ.

ವೇಸ್ಟ್ ಲ್ಯಾಂಡ್ ಪದ್ಯಕ್ಕೆ ಮರಳಿ ಬರೋಣ. ಫಿಲೋಮೆಲ್‌ಳ ಪುರಾಣ ಕತೆಯ ವರ್ಣಚಿತ್ರವಿರುವುದು ಒಬ್ಬ ಶ್ರೀಮಂತ ಮಹಿಳೆಯ ಮನೆಯಲ್ಲಿ. ಅವಳು ತನ್ನ ಗಂಡನೊಂದಿಗೆ ಏನನ್ನೂ ಹೇಳಿಕೊಳ್ಳಲಾರಳು. ‘can you say nothing’ಎಂದು ಕೂಗಬಲ್ಲಳು ಮಾತ್ರ. ಏಕೆಂದರೆ ಎಲ್ಲವೂ ಇದ್ದರೂ ಪ್ರೀತಿಯೂ ಇಲ್ಲ, ಮಾತೂ ಇಲ್ಲದ ಸ್ಥಿತಿಯಿಂದಾಗಿ ಅವಳು hysterical ಆಗಿದ್ದಾಳೆ. ಈ ವರ್ಣನೆಯಲ್ಲಿ ಎಲಿಯಟ್ ಉದ್ದೇಶಪೂರ್ವಕವಾಗಿ ಬಳಸುವ ಶೈಲಿ 18ನೇ ಶತಮಾನದ ಇಂಗ್ಲಿಷ್ ಕವಿ ಅಲೆಕ್ಸಾಂಡರ್ ಪೋಪ್ ನ “Rape of the Locke” ಎನ್ನುವ ವಿಡಂಬನಾತ್ಮಕ ಕಾವ್ಯದ್ದು. ಒಬ್ಬ ಕುಲೀನ ಶ್ರೀಮಂತ, ಸುಸಂಸ್ಕೃತ ಯುವಕನು ಬೆಲಿಂಡಾ ಎನ್ನುವ ಹೆಸರಿನ ಅದೇ ವರ್ಗದ ಯುವತಿಯ ಕೂದಲಿನ (locke) ಅನ್ನು ಕತ್ತರಿಯಿಂದ ಕತ್ತರಿಸಿಬಿಡುತ್ತಾನೆ. (ಇಲ್ಲಿ rape ಅಂದರೆ ಕತ್ತರಿಸು, ಕದ್ದೊಯ್ಯುವುದು ಎಂದು ಅರ್ಥ). ಇದರಿಂದಾಗಿ ಪಿನ್ನು, ಹೇರ್‌ಪಿನ್ನು ಇತ್ಯಾದಿ ಶಸ್ತ್ರಗಳಿಂದ ಘನಘೋರ ಯುದ್ಧವು ನಡೆಯುತ್ತದೆ. ಪೋಪ್ ತನ್ನ ಕಾಲದ ಶ್ರೀಮಂತ ವರ್ಗವನ್ನು ವಿಡಂಬಿಸುತ್ತಿದ್ದಾನೆ. ಜೊತೆಗೆ ಮಹಾಕಾವ್ಯದ ಶೈಲಿಯನ್ನು ಕೂಡ. ಆದರೆ ಪದ್ಯದ ಹಿಂದೆ ಪುರುಷ ಪ್ರಧಾನ ಸಂಸ್ಕ್ರತಿಯ ನೆರಳು ಖಂಡಿತಾ ಇದೆ.

ವೇಸ್ಟ್‌ಲ್ಯಾಂಡ್‌ನ ಇದೇ ಭಾಗದಲ್ಲಿ ಲಂಡನ್‌ನ ಪಬ್‌ವೊಂದರಲ್ಲಿ ನಡೆಯುವ ಸಂಭಾಷಣೆ ಇದೆ. ಲಿಲ್ ಎನ್ನುವವಳ ಬಗ್ಗೆ ಭರ್ಜರಿ ಗಾಸಿಪ್ ನಡೆದಿದೆ. ಅವಳ ಗಂಡನ ಒತ್ತಾಯದಿಂದಾಗಿ ಅನೇಕ ಸಾರಿ ಗರ್ಭಪಾತಕ್ಕಾಗಿ ತೆಗೆದುಕೊಂಡ ಮಾತ್ರೆಯಿಂದಾಗಿ ಅವಳು ಈಗ ತನ್ನ ಯೌವನದ ಕಳೆಯನ್ನು ಕಳೆದುಕೊಂಡಿದ್ದಾಳೆ. ಈಗ ಯುದ್ಧದಿಂದ ಮರಳಿಬರುತ್ತಿರುವ ಯೋಧ ಗಂಡನಿಗೆ “good time” ಬೇಡವೆ? ಅದಕ್ಕೆ ಮುಖ ರಿಪೇರಿ ಮಾಡಿಸಿಕೋ. ಇಲ್ಲದಿದ್ದರೆ ಇನ್ನಾವುದೋ ಹೆಣ್ಣಿನ ಹಿಂದೆ ಹೋಗುತ್ತಾನೆ ಎಂದು ಒಬ್ಬಳು ಲಿಲ್‌ಗೆ ಹೇಳಿದಳಂತೆ. ಯಾವ ವ್ಯಾಖ್ಯಾನವೂ ಇಲ್ಲದೇ ಲಿಲ್‌ಳ ಪಾಡು ನಮ್ಮ ಅನುಭವಕ್ಕೆ ಬರುತ್ತದೆ.

ಇನ್ನೊಂದು ಭಾಗದಲ್ಲಿ ಒಬ್ಬಂಟಿಯಾಗಿ ವಾಸಮಾಡುತ್ತಿರುವ ಟೈಪಿಸ್ಟ್‌ಳ ಮನೆಗೆ ಅವಳ ಕಛೇರಿಯ ಕ್ಲರ್ಕ್ ಒಬ್ಬನು ಬರುತ್ತಾನೆ. ಅವನು ಆಗಲೇ ನಿರ್ಧರಿಸಿಕೊಂಡು ಬಂದಿದ್ದರಿಂದ ಹೆಚ್ಚು ಮಾತಿಲ್ಲದೆ ಅವಳ ಮೇಲೆ ಎರಗತೊಡಗುತ್ತಾನೆ. ಅಷ್ಟಕ್ಕೂ ಅವಳು ಕೂಡ ಪ್ರತಿಭಟಿಸಿಲ್ಲವೆಂದ ಮೇಲೆ ಅವಳ ಒಪ್ಪಿಗೆ ಇದೆಯೆಂದೇ ಆಯಿತಲ್ಲವೆ? ಕೆಲಸ ಪೂರೈಸಿಕೊಂಡು ಮಬ್ಬುಕಣ್ಣಿನ ಪ್ರಾಣಿಯಂತೆ ಹೊರಟು ಹೋಗುತ್ತಾನೆ. ಅವಳು ಸದ್ಯ, ಅಂತೂ ಅದು ಮುಗಿಯಿತಲ್ಲ ಅಂದು ಗ್ರಾಮೋಫೋನ್‌ನಲ್ಲಿ ಇನ್ನೊಂದು ರಿಕಾರ್ಡ್ ನುಡಿಸತೊಡಗುತ್ತಾಳೆ. ಇಲ್ಲಿ ಎಲಿಯಟ್ 18ನೇ ಶತಮಾನದ ಆಲಿವರ್ ಗೋಲ್ಡ್‌ಸ್ಮಿತ್ ಬರೆದ Vicar of Wakefield ಕಾದಂಬರಿಯ ಒಂದು ಘಟನೆ ಹಾಗೂ ಒಂದು ಹಾಡನ್ನು ಪ್ರಸ್ತಾಪಿಸುತ್ತಾನೆ. ಅದರಲ್ಲಿ ತನ್ನ ಪಾವಿತ್ರ್ಯವನ್ನು ಕಳೆದುಕೊಂಡ ಸುಂದರ ಯುವತಿಗೆ ಇನ್ನೇನು ಪರಿಹಾರವಿದೆ? ನೇಣು ಅಥವಾ ನೀರಲ್ಲಿ ಮುಳುಗಿ ಸಾಯುವುದು ಎಂದಿದೆ. ಬಲಾತ್ಕಾರವನ್ನು ಅನುಭವಿಸಿ ಆಮೇಲೆ ಕೌಮಾರ್ಯ ಪಾವಿತ್ರ್ಯವನ್ನು ಕಳೆದುಕೊಂಡ ಕಳಂಕ ಬೇರೆ. ಎಲಿಯಟ್‌ನ ಕಾಲದ ಟೈಪಿಸ್ಟ್ ಪತಿತೆಯಲ್ಲ. ಅವಳ ಒಪ್ಪಿಗೆ ಸಹಮತವನ್ನು ಕೇಳುವುವವರು ಯಾರಿದ್ದಾರೆ?

ಹೀಗೆಯೆ ವೇಸ್ಟ್‌ಲ್ಯಾಂಡ್ ಪದ್ಯವನ್ನು ಓದಬಹುದು. ಎಲಿಯಟ್ ಈ ಪದ್ಯವನ್ನು ಬರೆದು ಕೆಲವು ವರ್ಷಗಳಲ್ಲಿ ಇಂಗೆಂಡ್‌ನ Anglican Church ಸೇರಿದ, ರಾಜಕೀಯವಾಗಿ ಅತ್ಯಂತ ಸಂಪ್ರದಾಯವಾದಿಯಾದ, ವೈಯಕ್ತಿಕವಾಗಿ ದಾಂಪತ್ಯದಲ್ಲಿ ಸುಖವನ್ನು ಕಾಣಲಿಲ್ಲ. ಅವನ ಹೆಂಡತಿ ಮಾನಸಿಕವಾಗಿ ತುಂಬಾ ನೋವುಪಟ್ಟಳು. ಈ ಪದ್ಯದಲ್ಲಿ ಎಲಿಯಟ್ ಯೂರೋಪಿನ ನಾಗರೀಕತೆ ಹೀಗೆ ಅತ್ಯಾಚಾರದ ಬುನಾದಿಯ ಮೇಲೆ ನಿಂತಿದೆಯೆ ಎಂದು ಗಾಢವಾಗಿ ಪ್ರಶ್ನಿಸಿದ. ಇವೆಲ್ಲಾ ಪ್ರಶ್ನೆಗಳು Susan Miller ಅವರು ಬರೆದ “Against our will” ಎನ್ನುವ ಮಹಿಳಾ ದೌರ್ಜನ್ಯದ ಬಗೆಗಿನ ಖಡಕ್ ಕೃತಿಯನ್ನು ಓದುವಾಗ ನನಗೆ ಎದುರಾದವು.

*

ಅಂಕಣದ ಮೊದಲ ಬರೆಹ

ಬದುಕು-ಸಾವುಗಳ ಸಹಜ ಲಯ ತಪ್ಪಿಸುವ ಅಸಂಗತ-ಅರ್ಥಶೂನ್ಯ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...