ಪಾಟೀಲ ಪುಟ್ಟಪ್ಪ-ಭೀಮಸೇನ ಜೋಶಿ-ಹೀಗೊಂದು ಕನ್ನಡ ಪ್ರಸಂಗ

Date: 17-03-2020

Location: ಬೆಂಗಳೂರು


ಕನ್ನಡ ವಿರೋಧಿ ಚಟುವಟಿಕೆ ನಡೆಸುತ್ತಿರುವವರು ಆಯೋಜಿಸಿದ್ದ ಸಮಾರಂಭಕ್ಕೆ ಬರಬಾರದು ಎಂದು ಗಾಯಕ ಪಂಡಿತ್‌ ಭೀಮಸೇನ ಜೋಷಿ ವಿರುದ್ಧ ರಣಕಹಳೆ ಮೊಳಗಿಸಿದ್ದ ಪಾಟೀಲ್ ಪುಟ್ಟಪ್ಪ ಅವರು ನಂತರ ಮೌನ ತಾಳಿದ್ದ ಘಟನೆ ಧಾರವಾಡದಲ್ಲಿ ನಡೆದಿತ್ತು- ೯೦ರ ದಶಕದ ಆರಂಭದ ದಿನಗಳಲ್ಲಿ...

ಕಾನ್ವೆಂಟ್‌ ಕಾರ್ಯಕ್ರಮಕ್ಕೆ ಜೋಶಿ: ಧಾರವಾಡದ ಇಂಗ್ಲಿಷ್‌ ಮಾಧ್ಯಮ ಶಾಲೆಯೊಂದು ಕನ್ನಡ ವಿರೋಧಿ ನಡತೆ ಹಾಗೂ ಹೇಳಿಕೆಗಳೊಂದಿಗೆ ಪ್ರಸಿದ್ಧಿ ಪಡೆದಿತ್ತು. ಕಲಾಭವನದಲ್ಲಿ ಭೀಮಸೇನ ಜೋಶಿ ಅವರ ಸಂಗೀತ ಸಮಾರಂಭ ಆಯೋಜಿಸಿತ್ತು. ಪಾಟೀಲ ಪುಟ್ಟಪ್ಪ ಅವರು ಆ ಸಮಾರಂಭದ ಬಗ್ಗೆ ಅಪಸ್ವರ ಎತ್ತಿ ಪತ್ರಿಕಾಗೋಷ್ಠಿ ನಡೆಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಲೆಯ ಆಡಳಿತ ಮಂಡಳಿಯು ‘ಪಾಟೀಲ ಪುಟ್ಟಪ್ಪ ಇಷ್ಟೆಲ್ಲಾ ಮಾತಾಡ್ತಾರೆ..ಇವರು ತಮ್ಮ ಪರಿಚಯಸ್ಥರು ಎಂದು ಶಿಫಾರಸು ಪತ್ರ ಬರೆದು ಸೀಟು ಕೇಳುತ್ತಾರೆ. ನಮಗೆ ಗೊತ್ತಿಲ್ಲವೇ ಇಂತಹ ಢೋಂಗಿ ಹೋರಾಟಗಾರರು’ ಎಂದು ವ್ಯಂಗ್ಯವಾಡಿತ್ತು.

ಕನ್ನಡ ವಿರೋಧಿಗಳ ಈ ಸಮಾರಂಭಕ್ಕೆ ಭೀಮಸೇನ ಜೋಷಿ ಅವರು ಸಮ್ಮತಿಸದೇ ಕನ್ನಡಾಭಿಮಾನ ಮೆರೆಯಬೇಕು. ಪ್ರವೇಶ ಶುಲ್ಕ ವಿಧಿಸಿ ಸಮಾರಂಭ ನಡೆಸುತ್ತಿದ್ದು, ಕನ್ನಡಿಗರ ಹಣವನ್ನು ದೋಚುತ್ತಿದ್ದಾರೆ ಎಂದೂ ಪಾಪು ಸೇರಿದಂತೆ ಇತರೆ ಕನ್ನಡ ಪರ ಸಂಘಟನೆಗಳು ಜೋಶಿ ಗಮನ ಸೆಳೆಯಲು ಪತ್ರ ಚಳವಳಿ ನಡೆದಿತ್ತು. ಹಾಗೆಯೇ ಪತ್ರಿಕಾಗೋಷ್ಠಿಗಳು ಕೂಡ. ಕನ್ನಡಿಗರ ಈ ಮನವಿಗೆ ಜೋಶಿ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬದಲಿಗೆ ಸಂಗೀತ ಕಾರ್ಯಕ್ರಮ ಪೊಲೀಸ್ ಕಾವಲಿನಲ್ಲಿ ಯಶಸ್ವಿಯಾಗಿ ನಡೆಯಿತು. 

ಕನ್ನಡ ಅಂದ್ರ ಹೀಂಗss  ಮಕ್ಳ..: ಕಲಾಭವನದ ಮುಂದೆ ಪ್ರತಿಭಟನೆ ನಡೆದಿತ್ತು. ಪಾಪು ಸುತ್ತ ಮುತ್ತ ಇದ್ದವರೇ ‘ನಿಮಗೆ ಸ್ವಲ್ಪ ವಿಶ್ರಾಂತಿ ಬೇಕು. ಈ ಗದ್ದಲದಲ್ಲಿ ಬೇಡ. ಅತ್ತ ಕಡೆ ಕೂಡುವಿರಂತೆ…’ ಎಂದು ಸಮಾಧಾನಪಡಿಸುವ ಕೈಗಳೇ ಅವರನ್ನು ಬಲವಂತವಾಗಿ ಎಬ್ಬಿಸಿ ‘ಈ ಕಡೆ ಬರ್‍ರಿ... ಈ ಕಡೆ ಬರ್‍ರಿ…’ ಎಂದು ಕರೆದೊಯ್ಯಿತು. ಇತ್ತ ಕೆಲವೇ ನಿಮಿಷಗಳಲ್ಲಿ ನಮ್ಮ ಮೇಲೆ ಲಾಠಿ ಪ್ರಹಾರ! 

ತೀವ್ರ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು. ಏಟು ಬಿದ್ದು ನರಳುತ್ತಿದ್ದವರನ್ನು ಎಳೆದೆಳೆದು ಪೊಲೀಸರು ತಮ್ಮ ವಾಹನದಲ್ಲಿ ತುಂಬುತ್ತಾ ಊರ ಹೊರಗೆ ಇಳಿಸಿ ‘ನಡಕ್ಕೊಂತ ಬರ್‍ರಿ ಮಕ್ಳ…ಕನ್ನಡ ಅಂದ್ರ ಹೀಂಗsss ನೋಡ್ರಿ ಮಕ್ಳ..” ಎಂದು ಮರಳಿದ್ದರು. ಸಾಕಪ್ಪ ಕನ್ನಡದ ಸಹವಾಸ ಎನ್ನದೇ ಸಂಘದೆಡೆಗೆ ತೆರಳಿದ ಎಲ್ಲ ಕಾರ್ಯಕರ್ತರ ಪೈಕಿ ನಾನೂ ಒಬ್ಬ. ಚಂಪಾ ಸೇರಿದಂತೆ ಕನ್ನಡ ಪರ ಸಂಘಟನೆಯ ಕೆಲ ಮುಖಂಡರಿದ್ದರು. ಪಾಪು ಮಾತ್ರ ಕಾಣಲಿಲ್ಲ. 

ಕನ್ನಡ ವಿರೋಧಿಗಳ ಗೆಲುವು ಯಾರಿಂದ? : ವಿಶ್ವಭಾಷೆಯಾದ ಸಂಗೀತದ ಕಡೆ ಜನರ ಒಲವಿದೆ. ಸಂಗೀತಕ್ಕೂ-ಭಾಷೆಗೂ ತಳಕು ಹಾಕಬಾರದು. ಸಂಗೀತ ಸಮಾರಂಭ ವಿರೋಧಿಸಿದರೆ ಕನ್ನಡಾಭಿಮಾನವೇ ಎಂದು ಮಾಧ್ಯಮಗಳು ಮರು ದಿನ ಪ್ರಶ್ನಿಸಿದ್ದವು. ಕನ್ನಡ ವಿರೋಧಿ ಶಾಲಾ ಆಡಳಿತ ಮಂಡಳಿಯ ನಡೆ-ನುಡಿ ಕಂಡ ಕನ್ನಡಿಗರ ಸ್ಥಿತಿ ‘ಬಡವನ ಸಿಟ್ಟು ದವಡೆಗೆ ಮೂಲ’ ಎಂಬಂತಾಗಿತ್ತು. ಮಾಧ್ಯಮಗಳ ಈ ನಡೆಗೆ ಪಾಪು ಅವರಿಂದ ಆಕ್ರೋಶದ ಗುಡುಗು ಕೇಳಿ ಬರುತ್ತದೆ ಎಂಬ ನಿರೀಕ್ಷೆಯೂ ಹುಸಿಯಾಗಿತ್ತು. ಕನ್ನಡಿಗರಾದ ಭೀಮಸೇನ ಜೋಶಿ ಅವರು ನಡೆದ ಈ ದುರ್ಘಟನೆ ಕುರಿತು ಕನ್ನಡದ ಅಭಿಮಾನದಿಂದಲಾದರೂ ಒಂದು ಹೇಳಿಕೆ ನೀಡಬೇಕಿತ್ತು ಎಂಬ ನಿರೀಕ್ಷೆಗಳಿದ್ದವು. ಅದೂ ಆಗಲಿಲ್ಲ. ವಾರವಾದರೂ ‘ಪಾಪು’ವಿನಿಂದ ಒಂದು ಹೇಳಿಕೆ ಬರಲಿಲ್ಲ. ಎಲ್ಲವನ್ನೂ‘ ಖನ್ನಡದ ಉಟ್ಟು ಓರಾಟಗಾರರೇ’ ನಿಯಂತ್ರಿಸುತ್ತಿದ್ದರೆ? 

ಈಗೇನೂ ಬೇಡ…!: ರಾಮ ಜಾಧವ ಎಂಬ ಕೇಂದ್ರ ಸುಂಕದ ನಿವೃತ್ತ ಅಧಿಕಾರಿ, ಧಾರವಾಡದ ನಾರಾಯಣಪುರದಲ್ಲಿ ವಾಸವಿದ್ದರು. ಮೂಲತಃ ಮರಾಠಿಗರು. ಆದರೂ, ’ಕನ್ನಡದ ಕೂಲಿ’ ಎಂದೇ ಅವರನ್ನು ಕರೆಯಲಾಗುತ್ತಿತ್ತು. ಮಾತ್ರವಲ್ಲ; ಬೆಳಗಾವಿ ಜಿಲ್ಲೆಯ ವಿವಿಧೆಡೆ ಕನ್ನಡದ ಶಾಲೆಗಳಿಗೆ ನೆರವು ನೀಡುತ್ತಾ ಬಂದವರು. ಇವರು ಪುಟ್ಟಪ್ಪನವರ ಆಪ್ತರು. ವಯಸ್ಸಿನಲ್ಲಿ ಹಿರಿಯರು. ವಾರವಾದರೂ ಬಹಿರಂಗವಾಗಿ ಕಾಣಿಸಿಕೊಳ್ಳದ ಪುಟ್ಟಪ್ಪನವರ ನಿಲುವಿನ ಬಗ್ಗೆ ರಾಮ ಜಾಧವ ಅವರ ಮನೆಗೆ ಹೋಗಿ ಗಮನ ಸೆಳೆದಿದ್ದೆವು. ರಾಮ ಜಾಧವ ಅವರು ಪುಟ್ಟಪ್ಪನವರಿಗೆ ಫೋನ್‌ ಮಾಡಿ ‘ನೌಕರಿಯಲ್ಲಿದ್ದೇ ಸರ್ಕಾರದ ವಿರೋಧ ಕಟ್ಕೊಂಡು ನಾನೂ ಕನ್ನಡಕ್ಕಾಗಿ ಹೋರಾಡೀನಿ.  ಏನೂ ಸಬೂಬ್ ಹೇಳ್ಬ್ಯಾಡ. ಹೊರಗ್ ಬಂದ್ ಒಂದು ಮಾತಾಡು. ಈ ಹುಡುಗರಿಗೆ ಧೈರ್ಯ ಕೊಡು’ ಎಂದಿದ್ದರು. ಆ ಕಡೆಯಿಂದ ಪುಟ್ಟಪ್ಪನವರು ಮಾತ್ರ ‘ಈಗೇನೂ ಬೇಡ. ಸ್ವಲ್ಪ ಸುಮ್ಮನಿರಿ…’ ಎಂದು ಪ್ರತಿಕ್ರಿಯಿಸಿದ್ದರು.

ಏನಂತಹ ಅನಿವಾರ್ಯತೆ ಕಟ್ಟಿಹಾಕಿತ್ತು..: ಬಂಡಾಯ ಸಾಹಿತ್ಯ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ವಿದ್ಯಾರ್ಥಿ ಚಳವಳಿ-ಹೋರಾಟಗಳಲ್ಲಿ ಭಾಗವಹಿಸಿದ್ದ ನನಗೆ ಲಾಠಿ ರುಚಿ ಗೊತ್ತಿದೆ. ಚಳವಳಿ ನಾಯಕತ್ವವೊಂದರ  ಹೊಣೆಗಾರಿಕೆಯೂ ಗೊತ್ತಿದೆ. ಕನ್ನಡದ ಅಭಿಮಾನದ ಭೀಮಸೇನ ಜೋಶಿ ಅವರು ಸಮಾರಂಭಕ್ಕೆ ಬಂದು ವಿವಾದಕ್ಕೆ ಸಿಲುಕಲು ಇಷ್ಟಪಡರು ಎಂದು ತಿಳಿದಿದ್ದ ಪಾಪು, ಭೀಮಸೇನ ಜೋಶಿ ಬರಲು ಒಪ್ಪುತ್ತಿದ್ದಂತೆ ತಮ್ಮ ಹೋರಾಟದ ವಿಧಾನ ಹೇಗೆ ಎಂಬ ಚಿಂತೆ ಕಾಡಿರಬಹುದು. ಕನ್ನಡದ ನೆಪದಲ್ಲಿ ಕರ್ನಾಟಕದಲ್ಲೇ ಜೋಶಿ ಅವರಿಗೆ ಅಪಮಾನ ಮಾಡುವುದು ಸಲ್ಲದು ಎಂಬ ಸಲಹೆಯನ್ನು ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಸರ್ಕಾರಗಳಿಂದ ಪುಟ್ಟಪ್ಪನವರ ಮೇಲೆ ಒತ್ತಡ ಬಂದಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಚಳವಳಿ ಕಾವು ಪಡೆದಿತ್ತು. ಪುಟ್ಟಪ್ಪನವರು ಪ್ರತಿಭಟನೆಗೆ ಬಂದಿದ್ದರು. ಅವರ ಪಟಾಲಂ ಮಾತ್ರ ಅವರನ್ನು ದೂರ ಕರೆದೊಯ್ದಿತ್ತು..ಪ್ರತಿಭಟನಾ ನಿರತರ ಮೇಲೆ ಲಾಠಿ ಪ್ರಹಾರವಾದರೂ ಪುಟ್ಟಪ್ಪನವರು ಮಾತ್ರ ಸಮೀಪ ಬರಲೇ ಇಲ್ಲ.

- ವೆಂಕಟೇಶ ಮಾನು

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...