ಪತ್ರಗಳನ್ನು ಬರೆಯುವುದು ನನ್ನ ವೃತ್ತಿಯ ಒಂದು ಕ್ರಮವನ್ನಾಗಿ ರೂಢಿಸಿಕೊಂಡೆ

Date: 23-12-2021

Location: ಬೆಂಗಳೂರು


‘ಕವಿಗಳು, ಕತೆಗಾರರೊಂದಿಗೆ ಸತತ ಸಂಪರ್ಕವನ್ನಿಟ್ಟುಕೊಳ್ಳುವ ಮೂಲಕ ಹೊಸದನ್ನು, ಹೊಸಪ್ರತಿಭೆಗಳನ್ನು ತಲಾಶ್ಮಾಡುವುದು ನನಗೆ ಸಾಧ್ಯವಾಗುತ್ತಿತ್ತು. ಹೀಗಾಗಿ ಪತ್ರಗಳನ್ನು ಬರೆಯುವುದನ್ನು ನನ್ನ ವೃತ್ತಿಯ ಒಂದು ಕ್ರಮವನ್ನಾಗಿ ರೂಢಿಸಿಕೊಂಡೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರು ತಮ್ಮ ಪತ್ರತಂತು ಮಾಲಾ ಅಂಕಣದಲ್ಲಿ ವೃತ್ತಿಯ ಭಾಗವಾಗಿ ಬಂದ ಪತ್ರಗಳ ಕುರಿತು ವಿಶ್ಲೇಷಿಸಿದ್ದಾರೆ.

ಸಾಹಿತ್ಯ ಮತ್ತು ಕಲೆಗಳಲ್ಲಿನ ಒಲವು ಮತ್ತು ಪತ್ರಿಕಾ ವ್ಯವಸಾಯದಲ್ಲಿ ನನ್ನ ಪಾಲಿಗೆ ಬಂದ ಕರ್ತವ್ಯ, ಹೊಣೆಗಾರಿಕೆಗಳು ನಾನು ಸಂಪಾದಿಸಿರುವ ಸ್ನೇಹ-ಪ್ರೀತಿ ಸಂಬಂಧಗಳಲ್ಲಿ ಮಹತ್ವದ ಪಾತ್ರವಹಿಸಿವೆ. ನಮ್ಮ ಓದುಗರಿಗೆ ಉತ್ಕೃಷ್ಟ ಬರಹಗಳನ್ನು ನೀಡಬೇಕು, ನವನವೀನ ವಸ್ತು ವಿಚಾರ ಶೈಲಿಗಳ ಹೊಸ ಲೇಖನಗಳನ್ನು ಕೊಡುವ ಮೂಲಕ ಓದುಗರಲ್ಲಿ ಹೊಸ ಅಭಿರುಚಿ, ಆಧುನಿಕ ಸಂವೇದನೆಗಳನ್ನು ಬೇಳೆಸುವುದು ಪತ್ರಿಕೆಗಳ ಕರ್ತವ್ಯ ಎಂಬುದನ್ನು ನಾನು ಡಿವಿಜಿಯಂಥವರು ಕಟ್ಟಿದ ಪರಂಪರೆಯಿಂದ ಕಲಿತಿದ್ದೆ. ಇದು ನನ್ನ ಮುಖ್ಯ ಕಾಳಜಿಯಾಗಿತ್ತು. ನನ್ನನ್ನು ಕಾಡುತ್ತಿದ್ದ ಸಂಗತಿಯೂ ಆಗಿತ್ತು. ನಾನು ಪತ್ರಿಕಾ ವ್ಯವಸಾಯಕ್ಕೆ ಸೇರಿದ ದಿನಗಳಲ್ಲೇ ಕನ್ನಡ ಸಾಹಿತ್ಯ, ಸಿನಿಮಾ ಮತ್ತು ಇತರ ಕಲೆಗಳಲ್ಲಿ ನವ್ಯದ ಯುಗಾರಂಭವಾದದ್ದು ನನ್ನ ಈ ಆಸಕ್ತಿ, ಕಾಳಜಿಗಳಿಗೆ ಮತ್ತಷ್ಟು ಇಂಬು ಒದಗಿಸಿತ್ತು. ಕವಿಗಳು, ಕತೆಗಾರರೊಂದಿಗೆ ಸತತ ಸಂಪರ್ಕವನ್ನಿಟ್ಟುಕೊಳ್ಳುವ ಮೂಲಕ ಹೊಸದನ್ನು, ಹೊಸಪ್ರತಿಭೆಗಳನ್ನು ತಲಾಶ್ಮಾಡುವುದು ನನಗೆ ಸಾಧ್ಯವಾಗುತ್ತಿತ್ತು. ಹೀಗಾಗಿ ಪತ್ರಗಳನ್ನು ಬರೆಯುವುದನ್ನು ನನ್ನ ವೃತ್ತಿಯ ಒಂದು ಕ್ರಮವನ್ನಾಗಿ ರೂಢಿಸಿಕೊಂಡೆ.    

ಇದರಿಂದಾಗಿ, ಇಂಥ ಪತ್ರಗಳು ಒಳ್ಳೆಯ ಪ್ರೇರಕ ಶಕ್ತಿಗಳಾಗಿ ಕೆಲಸ ಮಾಡಬಲ್ಲವು ಎಂಬುದು ನನಗೆ ಮನವರಿಕೆಯಾಯಿತು. ನಮ್ಮಲ್ಲಿ ಕೆಲವು ಪ್ರತಿಭಾವಂತ ಲೇಖಕರಿಗೆ ಇಂಥ ಟಾನಿಕ್ ಅಗತ್ಯವೆಂಬುದೂ ಗೊತ್ತಾಯಿತು. ಅಂಥವರಲ್ಲಿ ಒಬ್ಬರು ನಮ್ಮ ರಾಘವೇಂದ್ರ ಪಾಟೀಲರು. ಅವರ ಬರವಣಿಗೆ ಲಹರಿ ಹೇಗೆಂದರೆ, ಬಿಟ್ಟುಬಿಟ್ಟು ಬರೆಯುವ ಅಥವಾ ಒಂದಷ್ಟು ಬರೆದು ಹಾಗೆಯೇ ಬರುವುದು ಮತ್ತೆ ಲಹರಿ ಬಂದಾಗ ಅಥವಾ 'ಕಾವು'ಕೂಡಿಬಂದಾಗ ಬರೆಯುವುದು. ಆದ್ದರಿಂದ ಪದೇಪದೇ ಪತ್ರ ಬರೆದು ಕತೆಗಾಗಿ ನೆನಪಿಸುವುದು ನನ್ನ ಕರ್ತವ್ಯವಾಗಿತ್ತು. ಕತೆಗಳನ್ನಷ್ಟೇ ಅಲ್ಲ, ಪತ್ರಗಳನ್ನೂ ಅವರು ಒಂದೇ ಲಿಖಿತದಲ್ಲಿ ಮುಗಿಸುತ್ತಿರಲಿಲ್ಲ, ಅರ್ಧ ಬರೆದು, ನಿಲ್ಲಿಸಿ ಮತ್ತೆಷ್ಟೋ ದಿನಗಳ ನಂತರ ಮುಂದುವರಿಸಿ, ಕೊನೆಗೊಮ್ಮೆ ಮುಗಿಸಿ ಪೋಸ್ಟ್ ಮಾಡುವುದೂ ಅವರ ರೀತಿ. ಒಮ್ಮೆಯಂತೂ ಅರ್ಧ ಬರೆದ ಪತ್ರವನ್ನೇ ನನಗೆ ಪೋಸ್ಟ್ ಮಾಡಿ ನನ್ನನ್ನು ಕಕ್ಕಾವಿಕ್ಕಿಗೊಳಿಸಿದ್ದುಂಟು. 

ರಾಘವೇಂದ್ರ ಪಾಟೀಲ
ಆನಂದಕಂದ ಗ್ರಂಥಮಾಲೆ  
ಮಲ್ಲಾಡಿಹಳ್ಳಿ,                                                 

19-1-2000     

ಪ್ರಿಯ ಶ್ರೀರಂಗನಾಥರಾವ್ ಅವರಿಗೆ,
ವಂದನೆಗಳು.     

ನಿಮ್ಮ ಅಭಿನಂದನೆಗಳನ್ನು ಹೇಳವ ಪತ್ರ ಸಿಕ್ಕಿತು. ನಿಮ್ಮ ಪತ್ರ ನನಗೆ ಅಪಾರವಾದ ಸಂತೋಷವನ್ನು ತಂದಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹಗಳಿಗಾಗಿ ನಾನು ಕೃತಜ್ಞನಾಗಿದ್ದೇನೆ. ನನ್ನ ‘ದೇಸಗತಿ' ಸಂಕಲನ ಮತ್ತು ‘ಮಾಯಿಯ  ಮುಖಗಳು' ಸಂಕಲನದ ಎಲ್ಲ ಕಥೆಗಳನ್ನು ನಿಮ್ಮ ಪ್ರೀತಿಪೂರ್ವಕವಾದ ಒತ್ತಾಯದ ಹಿನ್ನೆಲೆಯಲ್ಲೇ ಬರದಿದ್ದೇನೆ. ಆದ್ದರಿಂದ ಆ ಕಥೆಗಳಿಗೆ ರೆಕಗ್ನಿಷನ್ ದೊರೆತ  ಎಲ್ಲ ಸಂದರ್ಭಗಳಲ್ಲಿಯೂ ನಾನು ನಿಮ್ಮನ್ನು ನೆನಸಿಕೊಳ್ಳುತ್ತೇನೆ. ಚದುರಂಗ ಪ್ರಶಸ್ತಿ ದೊರೆತಾಗಲೂ ಅಷ್ಟೆ.     

ಮತ್ತೇನು ಬರೆಯಲಿ-
ಹೊಸ ಕಥೆಯೊಂದನ್ನು  ಬರೆಯಲು ಸಜ್ಜುಗೊಳ್ಳುತ್ತಿದ್ದೇನೆ. ಅದನ್ನು ಪ್ರಜಾವಾಣಿಯ ದೀಪಾವಳಿ ಸಂಚಿಕೆಗೆ ಮುಗಿಸಿ ಕೊಡುತ್ತೇನೆ.
ಬರೆಯಿರಿ,   

ವಂದನೆಗಳೊಂದಿಗೆ,
ಪ್ರೀತಿಯಿಂದ ನಿಮ್ಮ,
ರಾಘವೇಂದ್ರ ಪಾಟೀಲ

ಹೊಸ ಕತೆಯೊಂದನ್ನು ಬರೆಯುತ್ತಿದ್ದೇನೆ ಎಂದು ತಿಳಿಸುವ ಮೂಲಕ ರಾಘವೇಂದ್ರ ಪಾಟೀಲರು, ನನ್ನ ನೆನಪಿನೋಲೆ ಬರೆಯುವ ನನ್ನ ಕರ್ತವ್ಯವನ್ನು ಸೂಚಿಸಿದಂತಿತ್ತು. ಆದರೆ ವೃತ್ತಿ ನಿಯಮ ನನ್ನನು ಆ ಕಾರ್ಯಭಾರದಿಂದ ಮುಕ್ತನನ್ನಾಗಿಸಿತ್ತು. ಸೇವಾ ನಿಯಮಗಳ ಪ್ರಕಾರ ಪತ್ರಕರ್ತರ ನಿವೃತ್ತಿ ವಯಸ್ಸು 58 ಆಗಿದ್ದು ಜನವರಿ 12, 2000 ದಿನಾಂಕ ನಾನು ನಿವೃತ್ತಿ ವಯಸ್ಸು ತಲುಪಿದ್ದೆ. ಜನವರಿ ಕೊನೆಯ ದಿನ ನಾನು ‘ಪ್ರಜಾವಾಣಿ'ಯಿಂದ ನಿವೃತ್ತನಾದೆ. ಲೇಖಕ ಮಿತ್ರರೂ ನನ್ನ ನೆನಪಿನೋಲೆಯ ಒತ್ತಾಯಗಳಿಂದ ಮುಕ್ತರಾಗಿದ್ದರು. ನಿವೃತ್ತಿಗೆ ಮುನ್ನ ನನ್ನ ಅಲ್ಲಿಯವರೆಗಿನ 39 ವರ್ಷಗಳ ಪತ್ರಿಕಾ ವ್ಯವಸಾಯದಲ್ಲಿ ಸಹಕರಿಸಿದ ಲೇಖಕರ ಬಳಗಕ್ಕೆ ಒಂದು ಪೋಸ್ಟ ಕಾರ್ಡ್ ಬರೆದು ಆಭಾರಮನ್ನಣೆ ಸಲ್ಲಿಸುವುದು ನನ್ನ ಕೊನೆಯ ಕರ್ತವ್ಯವಾಗಿತ್ತು..ಅದಕ್ಕೆ ಬಂದ ಪ್ರತಿಕ್ರಿಯೆ ನನ್ನನ್ನು ಮೂಕನನ್ನಾಗಿಸಿತ್ತು 

4-2-2000
ಶ್ರೀಯುತ ರಂಗನಾಥ ರಾಯರಿಗೆ,

ಸುಮಾರು ಒಂದೂವರೆ ವರ್ಷಗಳ ನಂತರ ನಿಮ್ಮ ಕಛೇರಿಗೆ ಬಂದೆ. ಬಿಡುವಿಲ್ಲದ, ಮಿತಭಾಷಿಯಾದ ನಿಮ್ಮೊಡನೆ ಎರಡು ಕುಶಲದ ಮಾತಾಡಲೆಂದು. ನಿಮ್ಮ ಕುರ್ಚಿ ಖಾಲಿಯಿದ್ದಾಗ, ಆಶ್ಚರ್ಯವಾಯಿತು. ನೀವು ಹಿಂದಿನವಾರ. ಅಲ್ಲ, ಈ ಮೊದಲ ಸೋಮವಾರವಷ್ಟೇ ನಿವೃತ್ತರಾದಿರಿ ಎಂದು ಕೇಳಿ ಬಂತು. ಕರ್ತವ್ಯಕ್ಕೆ ಎಲ್ಲ ಪ್ರಾಧಾನ್ಯತೆಯನ್ನೂ ಕೊಟ್ಟು ದಿನಕ್ಕೆ 10-12 ಗಂಟೆಗಳ ಕಾಲದಂತೆ ಎಷ್ಟೋ ವರ್ಷಗಳು ಪತ್ರಿಕಾ ವ್ಯವಸಾಯದಲ್ಲಿ ದುಡಿದಿರಿ, ನಿಸ್ವಾರ್ಥತೆಯಿಂದ, ಕೇವಲ ಪತ್ರಿಕೆಯ ಗುಣಮಟ್ಟಕ್ಕಾಗಿ, ಹಲವು ಬಗೆಯ ರುಚಿಯನ್ನು, ಸುದ್ದಿ-ಕಥೆ-ಲೇಖನಗಳ ಹತ್ತು ಪ್ರಕಾರಗಳಿಂದ ಜನಪ್ರಿಯವನ್ನು ಮಾಡಲು. ಆ ಸಮಾಧಾನವೋಂದೇ ನಿಮಗೆ ಹೆಚ್ಚಿನ ಸಂತೋಷವನ್ನು ಕೊಟ್ಟಿರುತ್ತದೆ. ಬೇರೆಯವರ ಪ್ರತಿಕ್ರಿಯೆ ಬೇಡವೆಂದಲ್ಲ-ಆದರೆ ಆತ್ಮಸಾಕ್ಷಿಯ ತೃಪ್ತಿಗಿಂತ ಹೆಚ್ಚಿನದಿಲ್ಲ.

ನಿವೃತ್ತಿಯಾದ ಮೇಲೂ ನಿಮ್ಮ, ಬುದ್ದಿಮತ್ತೆಯನ್ನು, ಅನುಭವವನ್ನು ಸದುಪಯೋಗಪಡಿಸಿಕೊಳ್ಳುತ್ತೀರಿ ಎಂಬುದೆರಲ್ಲಿ ಸಂಶಯವಿಲ್ಲ. ಏಕೆಂದರೆ ಯಾವಾಗಳೂ ಕಾರ್ಯನಿರತರಾದವರಿಗೆ ಇದ್ದಕ್ಕಿದ್ದಂತೆ ಸುಮ್ಮನೆ ಕೂರುವುದು ಸಾಧ್ಯವಿಲ್ಲ. ಭಗವಂತನು ನಿಮ್ಮ ನಿವೃತ್ತ ಜೀವನವನ್ನು ಹೆಚ್ಚು ಫಲಕಾರಿಯಾಗಿ, ಸಂತಸ-ಶಾಂತಿಯುತವಾಗಿ ಮಾಡಲಿ ಎಂಬ ಪ್ರಾರ್ಥನೆಯ ಶುಭಾಶಯಗಳೊಂದಿಗೆ, 

ವಿಶ್ವಾಸಪೂರ್ವಕ,
ನಿಮ್ಮ,
ಕೆ.ರಾಮಮೋಹನ್
10/1,ಎರಡನೆ ಅಡ್ಡ ರಸ್ತೆ,
ಚಿಕ್ಕಣ್ಣ ತೋಟ
ಬೆಂಗಳೂರು-5600018.

*********
ಚಂದ್ರಶೇಖರ ಪಾಟೀಲ     
6 ಫೆ 2000

ಪ್ರಿಯ ಗೆ-ರಂಗನಾಥ ರಾವ್,

ಪತ್ರ ತಲುಪಿತು. ಬದುಕಿನಲ್ಲಿ ಖಚಿತವಾದದ್ದು ಬಹುಶ: ನಿವೃತ್ತಿಯ ದಿನಾಂಕವೊಂದೇ ಅಂತ  ಕಾಣುತ್ತದೆ. ಅದೊಂದು ಅನಿವಾರ್ಯ ಅಗಲಿಕೆ. ಶೂನ್ಯತೆ, ಖಾಲಿತನ. ಅದಕ್ಕೆ ‘ಬಿಡುವು', ‘ವಿಶ್ರಾಂತ' ಅಂತಲೂ ಅನ್ನುತ್ತಾರೆ. ಹಳೆಯ ಕ್ರಿಯಾಶೀಲತೆ ಮತ್ತೆ ನಿಮಗೆ ಮರಳಲಿ. ಸಂಕ್ರಮಣಕ್ಕೆ ಲೇಖನ ಕಳಿಸುತ್ತಿರಿ. ನಾನೂ ಈಗ ಬೆಂಗಳೂರಿನಲ್ಲಿ ನೆಲಸಿರುವೆ ಎನ್.ಆರ್.ಡಿ-ನಾನ್ ರೆಸಿಡೆಂಟ್ ಧಾರವಾಡಿಗ.

ನಿಮ್ಮ,
ಚಂಪಾ
****
ಬಿ.ಆರ್.ಲಕ್ಷ್ಮಣ ರಾವ್ 
ಚಿಂತಾಮಣಿ                                                    

8/2/2000

ಪ್ರಿಯ ಶ್ರೀ ಜಿ.ಎನ್.ಆರ್. ಅವರಿಗೆ,
ಸ್ನೇಹ ವಂದನೆಗಳು. ನಿಮ್ಮ ಪತ್ರ ತಲುಪಿತು. ನೀವು ‘ಪ್ರಜಾವಾಣಿ'ಯಿಂದ ನಿವೃತ್ತರಾದದ್ದು ತಿಳಿದು  ನಿಜಕ್ಕೂ ಒಂದು ರೀತಿಯ ವಿಷಾದ ಕವಿಯಿತು. ಪ್ರಜಾವಾಣಿಯೊಂದಿಗೆ ನನಗಿದ್ದ ಆತ್ಮೀಯತೆಯ ಕೊಂಡಿ ಕಳಚಿದಂತಾಯಿತು. ನೀವು `ಪ್ರಜಾವಾಣಿ'ಯಲ್ಲಿದ್ದಷ್ಟು ಕಾಲವೂ ನನಗೆ ನೀಡಿದ ಪ್ರೋತ್ಸಾಹವನ್ನು ನಾನೆಂದಿಗೂ ಮರೆಯಲಾರೆ.ನನ್ನ ಬಹುಪಾಲು ಉತ್ತಮ ರಚನೆಗಳು ನಿಮ್ಮ ಆಹ್ವಾನ,ಒತ್ತಾಯಗಳ ಕಾರಣವಾಗಿಯೇ ರೂಪಗೊಂಡವು. ಆದ್ದರಿಂದಲೇ ನನ್ನ `ಎಡೆ' ಮತ್ತು `ನನ್ನ ಗೀತೆ' ಸಂಕಲನಗಳನ್ನು ನೀವು ಬಿಡುಗಡೆ ಮಾಡಬೇಕೇಂದು ನಾನು ಅಪೇಕ್ಷಿಸಿದ್ದು. ನನ್ನ ಬಗ್ಗೆ ನಿಮ್ಮ ಪ್ರೀತಿ ಇದೇ ರೀತಿ ಸದಾ ಉಳಿದಿರಲೆಂದು ಆಶಿಸುತ್ತೇನೆ.ಇನ್ನು ಮುಂದಾದರೂ ನೀವು ಬಿಡುವಾಗಿ ಸಿಕ್ಕ ಬಹುದು ಎಂದು ಭಾವಿಸುತ್ತೇನೆ.ಚಿಂತಾಮಣಿಯಲ್ಲಿ ಆದಷ್ಟು ಬೇಗ ಭೇಟಿಯಾಗಿ ಬಿಡುವಾಗಿ ಒಂದಷ್ಟು ಕಾಲ ಒಟ್ಟಿಗೆ ಕಳೆಯೋಣ.
ನಿಮ್ಮ,
ಬಿ.ಆರ್.ಲಕ್ಷ್ಮಣ ರಾವ್

******
ಪ್ರೊ.ಎಂ.ರಾಮಚಂದ್ರ   
ಕಾರ್ಕಳ                                                      

10-2-2000

ಪ್ರಿಯ ಶ್ರೀ ರಂಗನಾಥ ರಾಯರಿಗೆ,     

ದಿನಾಂಕ 03-02-2000ರ ನಿಮ್ಮ ಪತ್ರ. ನೀವು ನಿರ್ದಿಷ್ಟ ಉದ್ಯೋಗದಿಂದ ನಿವೃತ್ತರಾಗಿರುವುದು ತಿಳಿಯಿತು. ನಿಮ್ಮ ನಿವೃತ್ತ ಜೀವನ ಸುಖವಾಗಿರಲಿ, ಸುಖಸಂತೋಷಗಳಿಂದ ಕೂಡಿರಲಿ ಎಂದು ಹಾರೈಸುತ್ತೇನೆ. ಕ್ರಿಯಾಶೀಲ ವ್ಯಕ್ತಿಗೆ ನಿವೃತ್ತಿ ಎಂಬುದಿಲ್ಲ. ಅದು ಕಾರ್ಯ ಕ್ಷೇತ್ರ ಪರಿವರ್ತನೆ ಅಷ್ಟೆ. ನೀವು ಪತ್ರಿಕಾ ರಂಗದಲ್ಲೂ ಸಾಹಿತ್ಯ ವಲಯದಲ್ಲೂ ಕಾರ್ಯಪ್ರವೃತ್ತರಾಗಿಯೇ ಇರಬಹುದು, ಇರಬೇಕು ಎಂಬುದು ನನ್ನ ಆಸೆ. 

ವಾಸ್ತವವಾಗಿ ನಾನು ‘ಸುಧಾ' ಪತ್ರಿಕೆಗೆ ಹೆಚ್ಚೇನೂ ಬರೆದವನಲ್ಲ. ನನ್ನ ಕಾಲೇಜನ್ನೇ ಕುರಿತು ಎರಡು ಲೇಖನ, ಆಗ-ಈಗ ‘ಸಮುದ್ರ ಮಥನ'ಕ್ಕೆ ಪತ್ರ ಅಷ್ಟೆ. ಆದರೂ ನೀವು ವಿಶ್ವಾಸ ತೋರಿದ್ದೀರಿ. ನಿಮ್ಮ ಕುರಿತು ಕೇಳಿ ತಿಳಿದಿದ್ದೆ. ಶ್ರೀ ಜಿ.ವಿ.ಯವರ ಮನೆಯಲ್ಲಿ ಕಣ್ಣಾರೆ ಕಂಡೆ, ಪರಿಚಯ ಲಾಭ ಆಯಿತು.

ಇತಿ ನಿಮ್ಮ,
ಎಂ.ರಾಮಚಂದ್ರ.
*  *  *  *  
ಪ್ರಭುಶಂಕರ   
ಮೈಸೂರು                                                             

16-7-2000

ಪ್ರಿಯ ಶ್ರೀ ರಂಗನಾಥ ರಾಯರಲ್ಲಿ ವಿಜ್ಞಾಪನೆಗಳು,
ನೀವು ನಿವೃತ್ತರಾದ ಸಮಯದಲ್ಲಿ ಬರೆದ ಪತ್ರ ತಲುಪಿತು.ವಂದನೆಗಳು.ತಕ್ಷಣ ಉತ್ತರ ಬರೆಯದೇ ಹೋದುದಕ್ಕಾಗಿ ಕ್ಷಮೆ ಬೇಡುತ್ತೇನೆ.

ನೀವು ಸಂಪಾದಕರಾಗಿ ನನ್ನನ್ನೂ ನನ್ನಂತೆ ಇತರೆ ಬರಹಗಾರರನ್ನೂ ತುಂಬ ಚೆನ್ನಾಗಿ ನೋಡಿಕೊಂಡಿದ್ದೀರಿ. ಅದಕ್ಕಾಗಿ ನಾನು ನಿಮಗೆ ಕೃತಕ್ಞತೆಗಳನ್ನು ಅರ್ಪಿಸುತ್ತೇನೆ. ನೀವು ಸ್ವಯಂ ಲೇಖಕರು.ಈಗ ಏನು ಬರೆಯುತ್ತಯಿದ್ದೀರಿ?
ನಿಮಗೂ ನಿಮ್ಮ, ಕುಟುಂಬ ವರ್ಗದ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು.

ಪ್ರೀತಿಯಿಂದ
ನಿಮ್ಮ
ಪ್ರಭುಶಂಕರ

ಈ ಅಂಕಣದ ಹಿಂದಿನ ಬರಹಗಳು:
ಅಂತ:ಸತ್ವಕ್ಕೆ ಪ್ರಾಣವಾಯು ತುಂಬುತ್ತಿದ್ದ ಪತ್ರಗಳು
‘ಸಾಹಿತ್ಯ ಕೃತಿಯೊಂದರ ವಿಮರ್ಶೆಯ ಮಾನದಂಡ ಅದರಲ್ಲೇ ಅಂತರ್ಗತವಾಗಿರುತ್ತದೆ’
ಹಿರಿಯರ ವಿಮರ್ಶಾತ್ಮಕ ಪತ್ರಗಳಿಂದ ಓದುಗರ ಅಪೇಕ್ಷೆ ತಿಳಿಯುವಲ್ಲಿ ಸಹಾಯವಾಗಿದೆ
‘ಜನಾಭಿಪ್ರಾಯ ರೂಪಿಸುವ ಸಂಪಾದಕೀಯ ಇಲ್ಲದ ಪತ್ರಿಕೆ ಆತ್ಮವಿಹೀನ’: ಜಿ.ಎನ್. ರಂಗನಾಥರಾವ್

‘ಮರಳಿ ಯತ್ನವ ಮಾಡು' ಎನ್ನುತ್ತಾ ಉತ್ಸಾಹ ತುಂಬುವ ಆಪ್ತರ ಪತ್ರಗಳು
ಹೊಸ ರಚನೆಗೆ ಪ್ರೇರಕವಾಗುವ ಪತ್ರಗಳು
ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

 

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...