ಪತ್ರಕರ್ತರಾಗಿ ಸಾಹಿತ್ಯ ಜಗತ್ತಿಗೆ ಕಾಲಿಟ್ಟವರಿಗೆ ತಾವು ಜಾಸ್ತಿ ಬರೆಯುತ್ತೇವೆ ಎಂಬ ಭಯವಿರುತ್ತದೆ : ಜೋಗಿ


ಪತ್ರಕರ್ತರಾಗಿ ನಂತರ ಸಾಹಿತ್ಯ ಜಗತ್ತಿಗೆ ಕಾಲಿಟ್ಟವರಿಗೆ ತಾವು ಜಾಸ್ತಿ ಬರೆಯುತ್ತೇವೆ ಎಂಬ ಭಯವಿರುತ್ತದೆ. ಯಾಕೆಂದರೆ ಓದುಗರಿಗೆ ಎಷ್ಟು ಬೇಕು ಅನ್ನುವುದನ್ನು ಪತ್ರಿಕೋದ್ಯಮ ಕಲಿಸಿರುತ್ತದೆ. ಹೀಗಾಗಿ ವಿನಯ್ ವಿವರಿಸಬಹುದಾದ ಎಷ್ಟೋ ಸಂಗತಿಗಳನ್ನು ವಿವರಿಸಲು ಹೋಗಿಲ್ಲ. ಅದು ಈ ಕೃತಿಯ ಪಾಲಿಗೆ ಪೂರಕವೂ ಹೌದು. ಆದರೆ ಒಂದು ಬೃಹತ್ ಕಾದಂಬರಿಯಾಗುವ ಸಾಧ್ಯತೆಯನ್ನು ಅವರು ಸ್ವಯಂಪ್ರೇರಣೆಯಿಂದ ತಳ್ಳಿಹಾಕಿದ್ದಾರೆ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಜೋಗಿ. ಲೇಖಕ ವಿನಯ್ ಮಾಧವ್ ಅವರ ಸಿಕೆಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ ಕೃತಿಯಲ್ಲಿ ಅವರು ಬರೆದಿರುವ ಮುನ್ನುಡಿಯ ಮಾತುಗಳು ನಿಮ್ಮ ಓದಿಗಾಗಿ..

ಕುವೆಂಪು ಅವರ ಕಾನೂರು ಹೆಗ್ಗಡಿತಿ, ರಾವ್ ಬಹಾದ್ದೂರ್ ಬರೆದ ಗ್ರಾಮಾಯಣ, ಶಿವರಾಮ ಕಾರಂತರ ಮರಳಿ ಮಣ್ಣಿಗೆ- ಮುಂತಾದ ಕಾದಂಬರಿಗಳನ್ನು ಓದುತ್ತಿದ್ದಾಗ ಅವು ಕಾಲ್ಪನಿಕವೋ ಕಾದಂಬರಿಕಾರರು ಕಂಡ ಬದುಕಿನ ಚಿತ್ರಣವೋ ಅನ್ನಿಸಿದ್ದುಂಟು. ಅವು ಕಾಲ್ಪನಿಕ ಕೃತಿಗಳು ಅಂತ ಗೊತ್ತಾದ ನಂತರವೂ ಆ ಕಾದಂಬರಿಗಳಲ್ಲಿ ಬರುವ ಪಾತ್ರಗಳು ಮಲೆನಾಡಿಗೋ ಕರಾವಳಿ ತೀರಕ್ಕೋ ಬಯಲುಸೀಮೆಗೋ ಹೋದಾಗ ಎದುರಾಗಿದ್ದೂ ಇದೆ. ಹಾಗೆ ನೋಡಿದರೆ ಕಾದಂಬರಿಗೂ ಜೀವನಚರಿತ್ರೆಗೂ ಅಂಥ ವ್ಯತ್ಯಾಸವೇನೂ ಇಲ್ಲ. ಎಷ್ಟೋ ಕಾದಂಬರಿಗಳು ಲೇಖಕ ಕಂಡ ಬದುಕಿನ ಚಿತ್ರಣವೇ ಆಗಿರುತ್ತವೆ, ಹನೂರು ಕೃಷ್ಣಮೂರ್ತಿಯವರ ಅಜ್ಞಾತನ ಆತ್ಮಚರಿತ್ರೆ, ಗೋಪಾಲಕೃಷ್ಣ ಪೈ ಅವರ ಸ್ವಪ್ನ ಸಾರಸ್ವತ, ಗಜಾನನ ಶರ್ಮರ ಪುನರ್ವಸು, ನಾಗವೇಣಿ ಅವರ ಗಾಂಧಿ ಬಂದ- ಮೊದಲಾದ ಕೃತಿಗಳನ್ನು ಓದಿದಾಗ ಅವು ವಾಸ್ತವ ಮತ್ತು ಕಲ್ಪನೆಯ ಹೊಸಿಲಲ್ಲಿ ಇದ್ದಂತೆ ಅನಿಸುತ್ತವೆ. ಅಷ್ಟಕ್ಕೂ ಲೇಖಕ ಹಿಡಿಯುವುದು ತನ್ನ ಕಾಲವನ್ನೇ ಅಲ್ಲವೇ? ಅಂಥದ್ದರಲ್ಲಿ ವಿನಯ್ ಮಾಧವ್ ಒಂದು ದಿನ 'ನನ್ನ ಕುಟುಂಬದ ಚರಿತ್ರೆಯನ್ನು ಕಾದಂಬರಿಯನ್ನಾಗಿ ಬರೆದಿದ್ದೇನೆ. ಓದಿ ನೋಡಿ' ಎಂದು ಹೇಳಿ ಹಸ್ತಪ್ರತಿಯನ್ನು ಕಳುಹಿಸಿಕೊಟ್ಟರು. ಪತ್ರಕರ್ತರಾಗಿರುವ, ಹಲವಾರು ವರ್ಷ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿರುವ, ರಾಜಕಾರಣದ ಮೊಗಸಾಲೆಗಳಲ್ಲೂ ಅಡ್ಡಾಡಿರುವ ಮತ್ತು ಅಭಯಾರಣ್ಯಗಳಲ್ಲೂ ಆಸಕ್ತಿ ಹೊಂದಿರುವ ವಿನಯ್ ಮಾಧವ್ ಬರೆದ ಎರಡು ಪ್ರಕಟಿತ ಮತ್ತು ಒಂದು ಅಪ್ರಕಟಿತ ಕೃತಿಗಳನ್ನು ಓದಿದ ನನಗೆ ಅವರ ಬರಹಗಳ ರುಚಿ ಗೊತ್ತಿತ್ತು. ಕಲ್ಪನೆ ಮತ್ತು ವಾಸ್ತವವನ್ನು ಹದವಾಗಿ ಬೆರೆಸುವ ವಿನಯ್, ಸಂಕೋಚ ಮತ್ತು ಘನತೆ ಎರಡನ್ನೂ ಬರಹಗಳಲ್ಲಿ ಕಾಯ್ದುಕೊಳ್ಳುವುದು ಕೂಡ ನಾನು ಗಮನಿಸಿದ್ದೆ.

ಇದೀಗ ಅವರು ಬರೆದಿರುವ ಸಿಕೆಜಿ ಸ್ಪೋರ್ಟ್ಸ್ ಕ್ಲಬ್, ಮಾಕೋನಹಳ್ಳಿ ಅನೇಕ ಕಾರಣಗಳಿಂದ ವಿಶಿಷ್ಟವಾಗಿದೆ. ಬಹಳ ವರ್ಷಗಳ ಹಿಂದೆ ನಾನು ಇರ್ವಿನ್ ಆಲನ್ ಸೀಲಿ ಬರೆದಿರುವ ಟ್ರಾಟರ್ ನಾಮ ಎಂಬ ಗಡದ್ದಾದ ಪುಸ್ತಕ ಓದಿದ್ದೆ. ಸುಮಾರು 600 ಪುಟಗಳ ಅದು ಆಂಗ್ಲೋ ಇಂಡಿಯನ್ ಜನಾಂಗಕ್ಕೆ ಸೇರಿದ ಟ್ರಾಟರ್ ಎಂಬಾತನ ಕತೆ. ಜಸ್ಟಿನ್ ಅಲೋಸಿಯಸ್ ಟ್ರಾಟರ್‌ನಿಂದ ಶುರುವಾಗಿ ಇದೀಗ ಕತೆ ಬರೆಯುತ್ತಿರುವ ಯೂಜೀನ್ ಟ್ರಾಟರ್ ತನಕ ಹಬ್ಬಿಕೊಂಡಿರುವ ಅದೊಂದು ಕಾಲ್ಪನಿಕ ಕತೆಯಾಗಿದ್ದರೂ, ಟ್ರಾಟರ್ ಕುಲದವರು ಎಲ್ಲೋ ಬದುಕಿದ್ದಾರೆ ಎಂಬಂತೆ ಅದು ನನ್ನೊಳಗೆ ಉಳಿದುಬಿಟ್ಟಿದೆ. ಆ ಕತೆಯ ಕೇಂದ್ರವಾದ ಸ್ಯಾನ್ ಸ್ಯೂಚಿ ಎಂಬ ಲಕ್ನೋದ ಕಾಲ್ಪನಿಕ ನಗರವನ್ನು ಹುಡುಕಿಕೊಂಡು ಹೋಗಬೇಕು ಅನ್ನುವಷ್ಟರ ಮಟ್ಟಿಗೆ ಅದರ ವಿವರಗಳು ಮನಸ್ಸಿನಲ್ಲಿ ನೆಲೆಸಿವೆ.

ವಿನಯ್ ಮಾಧವ್ ಕಾದಂಬರಿಯನ್ನು ಓದಿದ ನಂತರ ಇದೆಲ್ಲ ಮನಸ್ಸಿನಲ್ಲಿ ಸುಳಿದುಹೋಯಿತು. ಈ ಕಾದಂಬರಿಯ ವೈಶಿಷ್ಟ್ಯವೇನು ಅನ್ನುವುದನ್ನು ನಾನು ಹೀಗೆ ಪಟ್ಟಿ ಮಾಡಿದ್ದೇನೆ.

1. ಇದು 1610ರಲ್ಲಿ ಆರಂಭವಾಗುತ್ತದೆ. ನಮ್ಮ ಕಾಲದ ತನಕವೂ ಹಬ್ಬಿದೆ. ಕೆಲವೇ ವರ್ಷಗಳ ಹಿಂದೆ ಕಟ್ಟಿದ ಒಂದು ಕ್ಲಬ್ಬು ಮತ್ತೆ ಚದುರಿಹೋದ ಎಲ್ಲರನ್ನೂ ಒಂದೆಡೆ ಸೇರಿಸಿರುವುದು ಕೂಡ ಈ ಕತೆಯಲ್ಲಿ ದಾಖಲಾಗಿದೆ.

2. ಚರಿತ್ರೆಯ ವಿವರಗಳನ್ನು ಇಟ್ಟುಕೊಂಡು ಅವನ್ನೆಲ್ಲ ವಿನಯ್ ಕಾದಂಬರಿಯ ಪ್ರಕಾರಕ್ಕೆ ಒಗ್ಗಿಸಿದ್ದಾರೆ. ಇದನ್ನು ಚಾರಿತ್ರಿಕ ಕಾದಂಬರಿ ಅಂತಲೂ ಕರೆಯಬಹುದಿತ್ತು. ನಾಲ್ಕು ಶತಮಾನಗಳ ಕತೆ ಚರಿತ್ರೆಯಲ್ಲದೇ ಮತ್ತೇನು?
3. ಒಂದೊಂದು ಕಾಲಘಟ್ಟದಲ್ಲೂ ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಕಾಲದ ಪ್ರಹಾರಕ್ಕೆ ಸಿಕ್ಕು ಈ ಕುಟುಂಬಗಳು ಪಟ್ಟ ಪಾಡಿನ ವರ್ಣನೆ ಕಾದಂಬರಿಯ ಉದ್ದಕ್ಕೂ ಹಬ್ಬಿದೆ. ಅದೇ ಕಾರಣಕ್ಕೆ ಇದು ಕೇವಲ ಅವರು ಹೇಳುತ್ತಿರುವ ಕುಟುಂಬಗಳ ಕತೆಯಷ್ಟೇ ಆಗಿ ಉಳಿಯದೇ, ಆ ಪ್ರದೇಶದ ಎಲ್ಲರ ಕತೆಯೂ ಆಗುತ್ತದೆ.

4. ಪತ್ರಕರ್ತನಿಗೆ ಇರುವಂಥ ಸತ್ಯಶೋಧನೆಯ ಗುಣ ಮತ್ತು ಕತೆಗಾರನಿಗೆ ಇರುವಂಥ ಸತ್ಯದ ಆಚೆಗಿನ ಸತ್ಯವನ್ನು ಕಾಣುವ ಹಂಬಲ ಈ ಕಾದಂಬರಿಯಲ್ಲಿ ಕಾಣುತ್ತದೆ. ಎಲ್ಲೂ ಕೂಡ ವಿನಯ್ ಇದು ಹೀಗೇ ನಡೆದಿದೆ ಎಂದು ಹೇಳಲು ಹೋಗುವುದಿಲ್ಲ. ಆರಂಭದಲ್ಲೇ ಬರುವ ಅಲಮೇಲಮ್ಮನ ಶಾಪದಿಂದ ಹಿಡಿದು, ಆ ಶಾಪಕ್ಕೆ ತುತ್ತಾದವರು ಬದುಕನ್ನು ಕಟ್ಟಿಕೊಂಡ ಕ್ರಮವನ್ನು ಅವರು ಅಸಾಧಾರಣ ಸಂಯಮದಿಂದ ವಿವರಿಸುತ್ತಾ ಹೋಗಿದ್ದಾರೆ.

5. ಈ ಕಾದಂಬರಿಯ ಒಳಗೆ ಕಾಣಿಸಿಕೊಳ್ಳುವ ಬೈರಾಗಿಗಳ ಜಗತ್ತು ನಮಗೆ ತೀರಾ ಹೊಸದು. ಅವರು ಬದುಕುವ ರೀತಿ, ಅವರ ಆಗಮನ, ನಿರ್ಗಮನ, ಈ ಜಗತ್ತಿಗೆ ಸೇರಿದವರೇ ಅಲ್ಲ ಎಂಬಂತೆ ಇರುವ ಅವರು ಕುಟುಂಬಗಳ ನಡುವಿನ ಬಿರುಕನ್ನು ಸರಿ ಮಾಡುವುದು, ಸೌಹಾರ್ದಕ್ಕಾಗಿ ಹಂಬಲಿಸುವುದು ಕೂಡ ಅಲೌಕಿಕವಾಗಿ ಕಾಣಿಸುತ್ತದೆ. ಕಾದಂಬರಿಯನ್ನು ಈ ಭಾಗ ಮತ್ತೊಂದು ಎತ್ತರಕ್ಕೆ ಏರಿಸಿದೆ.

6. ಒಕ್ಕಲೊಂದರ ಆತ್ಮಕತೆ ಅಂತ ಇದನ್ನು ಕರೆದಿರುವುದು ಅತ್ಯಂತ ಸಮಂಜಸವಾಗಿದೆ. ಇದು ರಾಜಮಹಾರಾಜರ ಚರಿತ್ರೆಯಲ್ಲ. ಸೈನಿಕರ ಕತೆಯಲ್ಲ, ವ್ಯಾಪಾರಿಗಳ ಬದುಕಲ್ಲ. ರೈತಾಪಿ ಜನಗಳ ಬದುಕು. ಆದರೆ ಈ ಬದುಕಿನಲ್ಲಿ ರಾಜಕೀಯ, ವ್ಯಾಪಾರ, ಅಧ್ಯಾತ್ಮ, ಹೋರಾಟ, ಶೌರ್ಯ, ಬೇಟೆ ಎಲ್ಲವೂ ಸೇರಿಕೊಂಡಿದೆ. ಈ ಸಮುದಾಯ ಹೇಗೆ ಸಮೃದ್ಧವಾಗುತ್ತಾ ಹೋಯಿತು ಅನ್ನುವುದನ್ನೂ ವಿನಯ್ ಹಂತಹಂತವಾಗಿ ಹೇಳುತ್ತಾ ಹೋಗಿದ್ದಾರೆ.
7. ಮೈಸೂರು ಒಡೆಯರುಗಳ ಅವಕೃಪೆಗೆ ಒಳಗಾದ ಮಂದೇ ಪಟೇಲರ ಸಮುದಾಯದ ಕತೆ ಇದು. ಅನೇಕ ರಾಜರು, ಮಾಂಡಲಿಕರು, ಸಂಸ್ಥಾನಗಳ ಒಡೆಯರು, ರಾಜಮನೆತನಗಳನ್ನು ಕಂಡ ಸಮುದಾಯ ಇದು. ಹೀಗಾಗಿ ಈ ಸಮುದಾಯದ ಸ್ಮೃತಿಯೂ ಶ್ರೀಮಂತವಾಗಿದೆ. ಆ ದಟ್ಟವಾದ ಅನುಭವಗಳನ್ನು ಇಲ್ಲಿ ಕ್ವಚಿತ್ತಾಗಿ ಹೇಳಿದ್ದಾರೆ.
8. ನಿತ್ಯವೂ ಅನಿಶ್ಚಯದಲ್ಲೇ ಬದುಕುತ್ತಿದ್ದ ಕುಟುಂಬಗಳು, ಅವರ ಬೇಟೆ, ಹೆಂಡ, ನಿರಾಸಕ್ತಿ, ಹುಡುಕಾಟ, ಚಲನಶೀಲತೆ ಮತ್ತು ಕೌಟುಂಬಿಕ ಕತೆ ಈ ಕಾದಂಬರಿಯನ್ನು ಮುನ್ನಡೆಸುತ್ತಾ ಹೋಗುತ್ತದೆ. ಇದು ಎಷ್ಟು ಕುತೂಹಲಕಾರಿ ಆಗಿದೆಯೆಂದರೆ, ಇದನ್ನೊಂದು ಪತ್ತೇದಾರಿ ಕಥನದಂತೆ ನಾನು ಓದುತ್ತಾ ಹೋದೆ. ಇದೊಂದು ನಾಗರಿಕತೆಯ ಕಥನವೂ ಆಗಿ ನನಗೆ ಕಾಣಿಸಿದೆ.
9. ಬೈರಾಗಿಗಳು ಬಂದಿಳಿಯುವ ಸನ್ಯಾಸಿ ಗುಡ್ಡ, ಭೈರೇಗೌಡರ ಮುಂದಾಲೋಚನೆ, ವೀರಪುತ್ರ ಸೋಮನಗೌಡನ ಸಾಹಸ, ಒಚ್ಚಾಗಿದ್ದ ಪಂಗಡದಲ್ಲಿ ಕಾಣಿಸಿಕೊಂಡ ಬಿರುಕು, ತಾವು ನಂಬಿದ ಕುಟುಂಬವನ್ನು ಸದಾ ಕಾಯುತ್ತಿದ್ದ ಅರಿಕಾರ ಭಿಲ್ಲವರು, ಅವರ ಸ್ವಾಮಿ ನಿಷ್ಠೆ, ಉಗ್ಗೇನಹಳ್ಳಿಯ ಅವಸಾನ, ಉಲ್ಲಾಸದ ಚಿಲುಮೆ ಚುರ್ಚೆ ಕಾಳೇಗೌಡರು, ಕಾಫಿತೋಟದ, ಸೂಟುಬೂಟಿನ ಷೋಕಿಯ ಸುಬ್ಬೇಗೌಡರು- ಹೀಗೆ ನೂರೆಂಟು ಪ್ರಸಂಗಗಳು ಇದರಲ್ಲಿವೆ.
10. ಈ ಕಥನವನ್ನು ವಿನಯ್ ಬಹಳ ಲವಲವಿಕೆಯಿಂದ ಹೇಳುತ್ತಾ ಹೋಗುತ್ತಾರೆ. ಕೆಲವುಕಡೆ ತಿಳಿ ಹಾಸ್ಯ, ಕೆಲವೊಮ್ಮೆ ವಿಷಾದ ನಮ್ಮಲ್ಲಿ ಸುಳಿಯುತ್ತದೆ. ತೇಜಸ್ವಿಯ ಶೈಲಿಯೂ ಅಲ್ಲಲ್ಲಿ ಈ ಕಥನವನ್ನು ಸೊಗಸಾಗಿಸಿದೆ.

ನಾನು ಇದನ್ನು ಓದಿ ತುಂಬ ಸಂತೋಷಪಟ್ಟಿದ್ದೇನೆ. ಪತ್ರಕರ್ತರಾಗಿ ನಂತರ ಸಾಹಿತ್ಯ ಜಗತ್ತಿಗೆ ಕಾಲಿಟ್ಟವರಿಗೆ ತಾವು ಜಾಸ್ತಿ ಬರೆಯುತ್ತೇವೆ ಎಂಬ ಭಯವಿರುತ್ತದೆ. ಯಾಕೆಂದರೆ ಓದುಗರಿಗೆ ಎಷ್ಟು ಬೇಕು ಅನ್ನುವುದನ್ನು ಪತ್ರಿಕೋದ್ಯಮ ಕಲಿಸಿರುತ್ತದೆ. ಹೀಗಾಗಿ ವಿನಯ್ ವಿವರಿಸಬಹುದಾದ ಎಷ್ಟೋ ಸಂಗತಿಗಳನ್ನು ವಿವರಿಸಲು ಹೋಗಿಲ್ಲ. ಅದು ಈ ಕೃತಿಯ ಪಾಲಿಗೆ ಪೂರಕವೂ ಹೌದು. ಆದರೆ ಒಂದು ಬೃಹತ್ ಕಾದಂಬರಿಯಾಗುವ ಸಾಧ್ಯತೆಯನ್ನು ಅವರು ಸ್ವಯಂಪ್ರೇರಣೆಯಿಂದ ತಳ್ಳಿಹಾಕಿದ್ದಾರೆ.

ಬಹುಶಃ ಮುಂಬರುವ ದಿನಗಳಲ್ಲಾದರೂ ಈ ಕಥನವನ್ನು ಅವರು ಇನ್ನಷ್ಟು ವಿಷದವಾಗಿ ಬರೆಯಬಹುದೆಂದು ನನಗೆ ಅನ್ನಿಸುತ್ತದೆ. ನಾನು ಮೇಲೆ ಉಲ್ಲೇಖಿಸಿದ ಕಾದಂಬರಿಗಳ ಹಾಗೆ ಇದು ಕೂಡ ಒಂದು ಬಹು ಮಹತ್ವದ ಚಾರಿತ್ರಿಕ ಕಾದಂಬರಿಯಾಗುವ ಎಲ್ಲಾ ಗುಣಗಳನ್ನೂ ಹೊಂದಿದೆ.ಇದರ ಓದು ನನ್ನನ್ನು ನಾನ್ನೂರು ವರುಷಗಳ ಕಾಲ ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಅಲೆದಾಡಿಸಿದೆ. ಆ ಅನುಭವ ನಿಮಗೂ ಸಿಗುತ್ತದೆ ಎಂಬ ನಂಬಿಕೆಯೂ ನನಗಿದೆ.

ಇಂಥದ್ದೊಂದು ಕೃತಿಯನ್ನು ಕೊಟ್ಟದ್ದಕ್ಕಾಗಿ ವಿನಯ್ ಮಾಧವ್ ಅವರಿಗೆ ಅಭಿನಂದನೆ.

- ಜೋಗಿ
ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ಲೇಖಕ ಪರಿಚಯ..

MORE FEATURES

‘ಬೆಳ್ಳಿ ಮೂಡಿತು’ ಕೊಡಗಿನ ಜನಜೀವನವನ್ನು ಚಿತ್ರಿಸುವ ಒಂದು ಪ್ರಾದೇಶಿಕ ಕಾದಂಬರಿ

22-09-2023 ಬೆಂಗಳೂರು

"ಬೆಳ್ಳಿ ಮೂಡಿತು" ಇದು ಕೊಡಗಿನ ಜನಜೀವನವನ್ನು ಚಿತ್ರಿಸುವ ಒಂದು ಪ್ರಾದೇಶಿಕ ಕಾದಂಬರಿ. ನಾಗರಿಕತೆಯ ಜಂಜಡಕ್ಕ...

ಪೃಥ್ವಿಯಲ್ಲೊದಗಿದ ಘಟವು..ಕರ್ನಾಟಕದ ನೆನ್ನೆಗಳು

22-09-2023 ಬೆಂಗಳೂರು

ಬಂಡಾರ ಪ್ರಕಾಶನದ ಸಹಯೋಗದಲ್ಲಿ ‘ಬುಕ್ ಬ್ರಹ್ಮ’ ಪ್ರಕಟಿಸುತ್ತಿರುವ ‘ಒಳತಿಳಿ’ ವಾರದ ಓದು ವಿ...

 ‘ಚಿತ್ರೋದ್ಯಮ’ ಬಣ್ಣಗಳ ಲೋಕ ಹಾಗೂ ಕನಸುಗಳ ಪ್ರಪಂಚ

21-09-2023 ಬೆಂಗಳೂರು

"ಕಿರುತೆರೆ ಅಥವಾ ಚಿತ್ರೋದ್ಯಮದ ಏಳ್ಗೆಗೆ ತಮ್ಮ ಬೆವರ ಹನಿ ಹರಿಸಿದ ಇಂತಹ ಮಹಾನುಭಾವರನ್ನು ನೆನೆಯುವುದೇ ಒಂದು ಪುಣ್...