Date: 26-01-2025
Location: ಬೆಂಗಳೂರು
"ಬಾಶೆಯ ಮೂಲಕ ಕೊಡುವುದರ ಕಡೆಗೆ ಅವರ ಗಮನ ಹರಿಯುವುದು ಕಶ್ಟವಾಗುತ್ತದೆ. ಇದರಿಂದ ಮಕ್ಕಳು ವಿಶಯವನ್ನು ಅನುಬವಿಸಲು ಸಾದ್ಯವಿಲ್ಲವಾಗುತ್ತದೆ. ಇದು ಮಕ್ಕಳ ಮಾನಸಿಕ ಬೆಳವಣಿಗೆಯನ್ನು ಪ್ರಬಾವಿಸುತ್ತದೆ. ಇದು ಮಕ್ಕಳ ಮಾನಸಿಕ ಸೋಲು ಎಂದಾಗುತ್ತದೆ. ಇದು ಕೇವಲ ಮಕ್ಕಳ ಶಿಕ್ಶಣವನ್ನು ಮಾತ್ರವಲ್ಲದೆ ಅವರ ಇಡಿಯ ಬದುಕನ್ನು ಪ್ರಬಾವಿಸುತ್ತದೆ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ವಿಶಯದಲ್ಲಿ ಸೋಲು’ ಕುರಿತು ಬರೆದಿದ್ದಾರೆ..
ಇದುವರೆಗೆ ಈ ಅಂಕಣದ ಈ ಹಿಂದಿನ ಕೆಲವು ಬರಹಗಳಲ್ಲಿ ತಾಯ್ಮಾತಿನ ಶಿಕ್ಶಣದಿಂದ ಇರುವ ಪ್ರಯೋಜನಗಳನ್ನು ಚರ‍್ಚೆ ಮಾಡಿದೆವು. ಅದರಂತೆಯೆ ಈಗ ಪೆರಮಾತಿನ ಶಿಕ್ಶಣದಿಂದ ಆಗುವ ಸಮಸ್ಯೆಗಳನ್ನೂ ತುಸು ಬೇರೆಯದಾಗಿ ಚರ‍್ಚೆಗೆ ತೆಗೆದುಕೊಳ್ಳಬಹುದು. ವಾಸ್ತವದಲ್ಲಿ ತಾಯ್ಮಾತಿನ ಶಿಕ್ಶಣದ ಪ್ರಯೋಜನಗಳನ್ನು ನೋಡುವಾಗ ಕೆಲವು ವಿಚಾರಗಳನ್ನು ತಾಯ್ಮಾತಿನ ಶಿಕ್ಶಣದಲ್ಲಿ ಸಾದ್ಯ, ಸೂಕ್ತ ಎಂದು ಹೇಳುತ್ತಾ ಅವು ಪೆರಮಾತಿನ ಶಿಕ್ಶಣದಲ್ಲಿ ಅಸಾದ್ಯ, ಸಮಸ್ಯೆ ಎಂಬ ರ‍್ತದಲ್ಲಿ ಮಾತನಾಡಿದಂತೆ ಆಗಿರುತ್ತದೆ. ಆದರೆ, ಪೆರಮಾತಿನ ಶಿಕ್ಶಣದಲ್ಲಿ ಈ ಮೇಲೆ ಮಾತನಾಡಿದವುಗಳನ್ನು ಒಳಗೊಂಡು ಇನ್ನೂ ಕೆಲವು ಪ್ರದಾನ ಸಮಸ್ಯೆಗಳನ್ನು ಗುರುತಿಸಲು ಸಾದ್ಯ. ಅವುಗಳನ್ನು ಇಲ್ಲಿ ರ‍್ಚೆಗೆ ತೆಗೆದುಕೊಳ್ಳಬಹುದು.
ಈ ಮೇಲೆ ತಾಯ್ಮಾತಿನ ಶಿಕ್ಶಣದ ಉಪಯೋಗಗಳನ್ನು ಕುರಿತು ಮಾತನಾಡುತ್ತಾ ಅದು ಹೇಗೆ ಮಕ್ಕಳ ಮನೊವಿಕಾಸಕ್ಕೆ ಪೂರಕವಾಗಿರುತ್ತದೆ ಎಂಬುದನ್ನು ಚರ‍್ಚಿಸಿದೆ. ಆದರೆ ಪೆರಮಾತಿನ ಶಿಕ್ಶಣದಲ್ಲಿ ಇದು ಸಾದ್ಯವಾಗದು. ಮಕ್ಕಳು ಶಿಕ್ಶಣವನ್ನು ಪಡೆಯುವಾಗ ಪರಿಚಯವಿಲ್ಲದ ಬಾಶೆಯ ಕಡೆಗೆ ಸಹಜವಾಗಿ ಹೆಚ್ಚು ಗಮನ ಕೊಡುತ್ತವೆ. ಬಾಶೆಯ ಮೂಲಕ ಕೊಡುವುದರ ಕಡೆಗೆ ಅವರ ಗಮನ ಹರಿಯುವುದು ಕಶ್ಟವಾಗುತ್ತದೆ. ಇದರಿಂದ ಮಕ್ಕಳು ವಿಶಯವನ್ನು ಅನುಬವಿಸಲು ಸಾದ್ಯವಿಲ್ಲವಾಗುತ್ತದೆ. ಇದು ಮಕ್ಕಳ ಮಾನಸಿಕ ಬೆಳವಣಿಗೆಯನ್ನು ಪ್ರಬಾವಿಸುತ್ತದೆ. ಇದು ಮಕ್ಕಳ ಮಾನಸಿಕ ಸೋಲು ಎಂದಾಗುತ್ತದೆ. ಇದು ಕೇವಲ ಮಕ್ಕಳ ಶಿಕ್ಶಣವನ್ನು ಮಾತ್ರವಲ್ಲದೆ ಅವರ ಇಡಿಯ ಬದುಕನ್ನು ಪ್ರಬಾವಿಸುತ್ತದೆ.
ವಿಶಯದಲ್ಲಿ ಸೋಲು:
ಪೆರಮಾತಿನ ಶಿಕ್ಶಣಕ್ಕೆ ಸೇರಿದ ಮಕ್ಕಳು ಕಲಿಕೆಗೆ ಪೂರಕವಾಗಿ ಇದ್ದ ಸಹಜವಾಗಿ ಒದಗಿದ ಅವರ ತಾಯ್ಮಾತಿನ ನೆರವನ್ನು ಕಳೆದುಕೊಳ್ಳುವುದರಿಂದ ಶಾಲೆಯಲ್ಲಿ ಎಲ್ಲವೂ ಮಗುವಿಗೆ ಹೊಸದು. ಈ ಹೊಸದನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಅವಶ್ಯವಾದ ನೆಲೆಯೊಂದು ಮಕ್ಕಳಲ್ಲಿ ಇಲ್ಲದಂತೆ ಅಂದರೆ ಮಕ್ಕಳು ಕಾಲಿಕಾಲಿಯಾದಂತೆ ಅನಿಸಬಹುದು. ಇದರಿಂದ ಮಕ್ಕಳು ಶಾಲೆಯಲ್ಲಿ ವಿಶಯದ ಕಡೆ ಹೆಚ್ಚು ಗಮನ ಕೊಡಲು ಆಗದೆ, ತರಗತಿಯಲ್ಲಿ ಬಳಸುವ ಬಾಶೆ, ಪದರೂಪಗಳು ಮೊದಲಾದವುಗಳ ಕಡೆಗೆ ಹೆಚ್ಚಿನ ಗಮನವನ್ನು ಹರಿಸುತ್ತಾರೆ. ಮಕ್ಕಳು ಅದುವರೆಗೆ ಪಡೆದುಕೊಂಡಿರುವ ಸಾಮರ್‍ತ್ಯದ ಸಹಾಯದಿಂದ ಹೊಸ ಕಲಿಕೆಯನ್ನು ಬೆಳೆಸಿಕೊಳ್ಳುವ ಅವಕಾಶ ಅವರಿಗೆ ಇಲ್ಲವಾಗಿಬಿಡುತ್ತದೆ. ಇದು ಕ್ರಮೇಣ ಕಲಿಕೆಯಲ್ಲಿ ಹಿಂದುಳಿಯುವುದಕ್ಕೆ ಕಾರಣವಾಗುತ್ತದೆ.
ಶಾಲೆಯ ವಾತಾವರಣ, ಶಿಕ್ಶಕರು ಮತ್ತು ಪೋಶಕರ ಒತ್ತಾಯ ಮೊದಲಾದ ಕಾರಣಗಳಿಂದಾಗಿ ಮಗು ಶಾಲಾ ಚಟುವಟಿಕೆಗಳನ್ನು ಮಾಡಲೇಬೇಕಾದ ಪರಿಸ್ತಿತಿಯಲ್ಲಿರುತ್ತದೆ. ಆದರೆ ಅದನ್ನು ಅರ‍್ತ ಮಾಡಿಕೊಳ್ಳುವ, ಅದರ ಮೇಲೆ ಪರಿಣತಿಯನ್ನು ಸಾದಿಸುವಲ್ಲಿ ಮಗು ನಿರಂತರ ಸೋಲುತ್ತದೆ. ಈ ಸೋಲಿನಿಂದ ಮಗು ತನ್ನಶ್ಟಕ್ಕೆ ಒಂದು ನಕಾರಾತ್ಮಾಕ ದೋರಣೆಯನ್ನು ಬೆಳೆಸಿಕೊಂಡುಬಿಡುತ್ತದೆ. ಶಿಕ್ಶಕರು ಮಗುವನ್ನು ನಿರಂತರ ತಿದ್ದುವುದು, ತಪ್ಪುಗಳನ್ನು ನಿರಂತರ ತೋರಿಸುವುದು ಇವೆಲ್ಲ ಮಗುವಿಗೆ ತನ್ನ ಅಸಾರ‍್ತö್ಯದ ಕಡೆಗೆ ಗಮನ ಹರಿಸುವಂತೆ ಮಾಡುತ್ತದೆ. ಮೂಲಬೂತವಾಗಿ ಮಗುವಿಗೆ ಆರಂಬದ ವಯಸ್ಸಿನಲ್ಲಿ ಅಸಾದಾರಣ ಕಲಿಕೆ ಸಾಮರ್‍ತ್ಯ ಇರುತ್ತದೆ. ಆದರೆ, ಬಿನ್ನ ವಾತಾವರಣದ ಕಾರಣದಿಂದ ಮಗು ಅದನ್ನು ಹಿಡಿದುಕೊಳ್ಳುವಲ್ಲಿ ಸೋಲುತ್ತದೆ. ಹೀಗೆ ಮಗು ಶಾಲೆಯಲ್ಲಿ ಹಿಂದುಳಿಯುವುದಕ್ಕೆ ಕಾರಣವಾಗುತ್ತದೆ. ಇಲ್ಲಿ ಮುಕ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಗು ತನ್ನ ಬಗೆಗೆ, ತನ್ನ ಕಲಿಕೆ ಸಾಮರ್‍ತ್ಯದ ಬಗೆಗೆ ನಕಾರಾತ್ಮಕ ದೋರಣೆಯನ್ನು ಬೆಳೆಸಿಕೊಂಡಾಗ ಅದು ಮಕ್ಕಳ ಮಾನಸಿಕ ಸ್ತಿತಿಯ ಮೇಲೆ ಪ್ರಬಾವವನ್ನು ಬೀರುತ್ತದೆ. ಅಲ್ಲದೆ ಆ ವಯಸ್ಸಿನಲ್ಲಿ ಸಹಜವಾಗಿ ಬೇರೆ ಯಾವುದೆ ಎರಡನೆ ಅಬಿಪ್ರಾಯಗಳು ಇಲ್ಲದೆ ಮಕ್ಕಳು ಶಿಕ್ಶಕರನ್ನು ಹೆಚ್ಚಾಗಿ ಗವುರವಿಸುತ್ತಿರುತ್ತವೆ. ಇಂತಾ ಶಿಕ್ಶಕರು ನಿರಂತರ ಹೇಳುತ್ತಿರುವುದು ಆದರೆ ಅದನ್ನು ಪಡೆದುಕೊಳ್ಳುವಲ್ಲಿ ತಾವು ನಿರಂತರ ಸೋಲುತ್ತಿರುವುದು ಮಕ್ಕಳಲ್ಲಿಯೆ ತಮ್ಮ ಬಗೆಗೆ ನಕಾರಾತ್ಮಕ ಸ್ತಿತಿಯೊಂದರ ಬೆಳವಣಿಗೆಗೆ ಕಾರಣವಾಗುತ್ತದೆ. ನನಗೆ ಕಲಿಯುವುದು ಅಸಾದ್ಯ ಎನ್ನುವ ಹತಾಶ ಸ್ತಿತಿಗೆ ಮಗು ಬರುತ್ತದೆ. ಇದನ್ನು ಮಗು ತನ್ನ ಸೋಲು ಎಂದು ಸಹಜವಾಗಿಯೆ ಬಾವಿಸಿಕೊಂಡುಬಿಡುತ್ತದೆ. ಈ ವಾತಾವರಣ ಮಕ್ಕಳು ಶಿಕ್ಶಣದ ಬಗೆಗೆ, ಶಾಲೆಯ ಬಗೆಗೆ ನಕಾರಾತ್ಮಕ ದೋರಣೆಯನ್ನು ಬೆಳೆಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ.
ಜಗತ್ತಿನಾದ್ಯಂತ ಶಿಕ್ಶಣದ ವಿಪಲತೆ ಕುರಿತು ಬಂದಿರುವ ಅದ್ಯಯನಗಳು ಅದಕ್ಕೆ ಹಲವಾರು ಕಾರಣಗಳನ್ನು ಕಂಡುಕೊಂಡಿವೆ. ಇಂತ ಬಹುತೇಕ ಸ್ತಿತಿಯಲ್ಲಿ ಮಕ್ಕಳಿಗೆ ತಾಯ್ಮಾತಿನ ಶಿಕ್ಶಣ ಇಲ್ಲ ಎಂಬುದನ್ನು ಹಲವಾರು ಅದ್ಯಯನಗಳು ತೋರಿಸಿವೆ. ಇದು ಪೆರಮಾತಿನ ಶಿಕ್ಶಣದಿಂದ ಆಗಿರುವ ಸಮಸ್ಯೆ ಎಂಬುದನ್ನು ಇಲ್ಲಿ ಅರ‍್ತ ಮಾಡಿಕೊಳ್ಳಬಹುದು.
ಈ ಸಮಸ್ಯೆ ಎಶ್ಟು ಆಳವಾಗಿ ಬೇರೂರಿರುತ್ತದೆ ಎಂಬುದನ್ನು ತುಸು ಗಮನಿಸಬಹುದು. ಮೊದಲಲ್ಲಿ ಮಾತನಾಡಿದಂತೆ ಮಗುವಿನ ತಾಯ್ಮಾತು ಸಹಜವಾಗಿ ಮಗುವಿನ ಮಾನಸಿಕತೆ, ಸಾಮಾಜಿಕತೆಯನ್ನು ರೂಪುಗೊಳಿಸುತ್ತಿರುತ್ತದೆ. ಮಗುವಿನ ಕಲ್ಪನಾ ಮತ್ತು ತರ‍್ಕಿಕ ಶಕ್ತಿಗಳನ್ನು ಬೆಳೆಸಿಕೊಳ್ಳುವುದಕ್ಕೆ ಅದು ಪೂರಕವಾಗಿರುತ್ತದೆ. ಆದರೆ ಪೆರಮಾತಿನಲ್ಲಿ ಮಕ್ಕಳಿಗೆ ಅದು ಕಳೆದುಹೋಗುತ್ತದೆ. ಅದರಿಂದಾಗಿ ಮಕ್ಕಳು ಒಂದೆಡೆ ಸಾಹಿತ್ಯದಲ್ಲಿ ಅದರಂತದೆ ಕಲ್ಪನಾತ್ಮಕ ವಿಶಯಗಳಲ್ಲಿ ಇನ್ನೊಂದೆಡೆ ಗಣಿತ, ವಿಗ್ನಾನದಂತಾ ತರ‍್ಕಿಕತೆಯನ್ನು ಬಯಸುವ ವಿಶಯಗಳಲ್ಲಿ ಮಕ್ಕಳು ಸೋಲುತ್ತಾರೆ. ಶಿಕ್ಶಣ ಎನ್ನುವುದು ಕಾಲ್ಪನಿಕತೆ ಮತ್ತು ತರ‍್ಕಿಕತೆ ಇವೆರಡರ ಹದವಾದ ಮಿಶ್ರಣವೆ ಆಗಿರುತ್ತದೆ. ಈ ಎರಡು ಮಗುವಿನಲ್ಲಿ ಸಹಜವಾದ ಬೆರಗನ್ನು ತರಬೇಕು. ಆದರೆ ಈ ಬೆರಗನ್ನು ಅನುಬವಿಸಲಾರದ ಪೆರಮಾತಿನ ಶಿಕ್ಶಣದ ಮಕ್ಕಳು ಸಹಜವಾಗಿ ವಿಶಯದಲ್ಲಿ ನಿರಾಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಶಿಕ್ಶಣದಲ್ಲಿ ಮಕ್ಕಳು ಬೆರಗನ್ನು ಅನುಬವಿಸದೆ ಇರುವುದು ಬದುಕಿನಲ್ಲಿಯೂ ಈ ಬೆರಗನ್ನು ಅನುಬವಿಸುವಲ್ಲಿ ನಕಾರಾತ್ಮಕವಾಗಿ ಪ್ರಬಾವ ಬೀರುತ್ತದೆ. ಗಣಿತ ಮೊದಲಾದ ನಿರ‍್ದಿಶ್ಟ ವಿಶಯಗಳಲ್ಲಿ ಸೋತ ಇಲ್ಲವೆ ಹಿಂದುಳಿದ ಮಕ್ಕಳ ಮೇಲೆ ಬಂದಿರುವ ಹಲವು ಅದ್ಯಯನಗಳೂ ಹೀಗೆ ಆ ಮಕ್ಕಳಿಗೆ ತಾಯ್ಮಾತಿನ ಶಿಕ್ಶಣ ಇಲ್ಲದಿರುವುದನ್ನು ಬೆರಳು ಮಾಡಿ ತೊರಿಸಿವೆ.
"ಬದುಕಿನ ಹಲವು ಆಯಾಮಗಳ ಮೂಲಕ ಪ್ರೇಮವನ್ನು ನೋಡುತ್ತವೆ. ಇಲ್ಲಿ ದುಃಖ, ವಿಷಾದ, ನೋವು, ಸಂಕಟ, ಸಂಭ್ರಮ ಒಂದಕ್ಕೊಂದು...
"ಶ್ರೀನಿವಾಸನ ಮನೆಯಲ್ಲಿ ತಂದೆಯ ಶ್ರಾದ್ಧ ಕಾರ್ಯ ಕುರಿತು ತಾಯಿ ಮಗನಲ್ಲಿ ತಿಳಿಸಿದರು ಕೂಡ ಅದರ ಬಗ್ಗೆ ಇದ್ದ ಅಸಡ್ಡ...
"ಪೆರಮಾತಿನ ಶಿಕ್ಶಣ ಮಕ್ಕಳನ್ನು ಅವರದಲ್ಲದ ಇನ್ನೊಂದಕ್ಕೆ ಕಸಿ ಮಾಡುವುದರಿಂದ ಇಂತದೆಲ್ಲ ಅನಾಹುತಗಳ ಸಾದ್ಯತೆಗಳನ್ನು...
©2025 Book Brahma Private Limited.