ಫಕೀರನ ಲಾವಣಿಯೊಳಗಿನ ಪದವು..


ಕಾವ್ಯ ಹುಟ್ಟುವ ಸಂದರ್ಭವನ್ನು ಪ್ರಸವಕ್ಕೆ ಹೋಲಿಸಿ ಬರೆಯುವುದು ಕೇಳುತ್ತಲೇ ಬಂದಿದ್ದೇವೆ. ಪ್ರತಿಯೊಂದು ಪದ ಹುಟ್ಟಿದ ಗಳಿಗೆಯೂ , ಪ್ರಸವ ವೇದನೆಯೋ, ಗರ್ಭಪಾತದ ಸಂಕಟವೋ ಅನುಭವಿಸುತಿರುತ್ತಾರೆ. ಪದ ಹುಟ್ಟಿ, ಸಾಲಾಗಿ ಬೆಳೆದು, ಕವಿತೆಯಾಗಿ ನಿಂತು, ಓದುವವರ ದನಿ ಬಡಿಸುವಷ್ಟರಲ್ಲಿ ಕವಿಗೆ ಸಾಕುಬೇಕಾಗಿರುತ್ತದೆ. ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ಅವರ ‘ಖಾಲಿ ಜೋಳಿಗೆ ಫಕೀರ’ ಕವನ ಸಂಕಲನದಲ್ಲಿ ವಿ.ಆರ್.ಕಾರ್ಪೆಂಟರ್ ಬರೆದ ಮುನ್ನುಡಿ ನಿಮ್ಮ ಓದಿಗಾಗಿ..

ಇತ್ತೀಚೆಗೆ ಬರೆಯುತ್ತಿರುವ ಅನೇಕ ಕವಿಗಳನ್ನು ಓದುವಾಗ ಇವರು ಯಾವುದೋ ಗುರಿಯೊಂದನ್ನು ಇಟ್ಟುಕೊಂಡೇ ಬರೆಯುತ್ತಿದ್ದಾರೆ ಅಂತಲೇ ಅನಿಸುತ್ತದೆ. ಸಮಾಜವು ಅಳುತ್ತಿರುವಾಗಲೂ ಒಂದಷ್ಟು ಕವಿಗಳಿಗೆ ಅವನ ಪ್ರೇಯಸಿಯ ಮುಂಗುರುಳು ಗಾಳಿಗೆ ಅತ್ತಿಂದಿತ್ತ ಓಲಾಡುವುದು ನೆನಪಾಗುತ್ತಿರುತ್ತದೆ. ನಿಜಕ್ಕೂ ಹೀಗೆ ಶುಷ್ಕ ನೆನಪುಗಳನ್ನು ಹೆಕ್ಕಿ, ಹೆಚ್ಚು ಹೆಚ್ಚು ಬರೆಯುವ ಕವಿಗಳನ್ನು ಕಂಡಾಗ ಇವರು ಸೂತಕದ ಮನೆಯಲ್ಲಿ ಕುಳಿತು ಸಂಭೋಗದ ಸುಖ ಕಾಣುವ ವಿಕೃತರಂತೆ ಸಹಜವಾಗಿ ಅನಿಸುತ್ತದೆ. ಅಲ್ಲದೆ, ಪ್ರಸ್ತುತವಾಗಿ ಜರುಗುತ್ತಿರುವ ಜನರ ಸಂಕಟದ ನಡುವೆ ಅನೇಕ ಲೇಖಕರಿಗೆ ತಾವು ಹೊಡೆದುಕೊಂಡ ಪ್ರಶಸ್ತಿ, ಕೋಮುವಾದಿ ಪತ್ರಿಕೆಗಳಲ್ಲಿ ಪ್ರಕಟವಾಗುವ ತಮ್ಮ ಲಜ್ಜೆಗೆಟ್ಟ ಸಾಲುಗಳ ಬಗ್ಗೆ ತೀವ್ರವಾದ ಆಸಕ್ತಿ ವ್ಯವಸ್ಥೆಯ ಲೋಪವನ್ನು ಕಿಂಚಿತ್ತೂ ಪ್ರಶ್ನಿಸದೆ ಕಾಲನ ವಶವಾಗುವ ಇಂಥವರ ನಡುವೆ 'ಖಾಲಿ ಜೋಳಿಗೆ ಫಕೀರ' ವಿಶಿಷ್ಟವಾಗಿ ನಿಂತು, ಲಜ್ಜೆಗೆಟ್ಟವರನ್ನು, ವಿಕೃತರನ್ನು ಅಣಕಿಸುತ್ತದೆ.

ನನ್ನ ಮಾತುಗಳಿಗೆ ಉತ್ತರವಾಗಿ ಈ ಕೆಳಗಿನ ಸಾಲುಗಳನ್ನು ಗಮನಿಸಿ. 

ಕಣ್ಣಾಗೆ ಬೆಳ್ಕೇ ಇಲ್ಲ 
ಬೆತ್ತಿಂಗ್ಳು ನಂಕ್ಯಾಕೆ 
ಮನಿಸ್ನಾಗೆ ಕನಸುಗಳೇ ಇಲ್ಲ
ಬುಡ್ಡೀ ದೀಪ ಮನೆಯಾಗ್ಯಾಕೆ 

ಈ ಸಾಲುಗಳನ್ನು ಬರೆಯುವಾಗ ಕವಿಯ ಮನಸ್ಸು ಅದು ರೋಸಿರಬಹುದು? ಅದೆಷ್ಟು ಯಾತನೆಯನ್ನು ಅನುಭವಿಸಿರಬಹುದು? ಲೋಕದ ಸಂಕಟವನ್ನು ಹೇಳುವಲ್ಲಿ ಎಲ್ಲೂ ಪದ್ಯ-ಪದವನ್ನು ಕಗ್ಗಂಟಾಗಿಸದೆ ನೇರವಾಗಿ ಹೃದಯವಯಕ್ಕೆ ಇಳಿಯುವ ರಕ್ತದಂತೆ ಸಾಲುಗಳು ಇವು. 

ಕಾವ್ಯ ಹುಟ್ಟುವ ಸಂದರ್ಭವನ್ನು ಪ್ರಸವಕ್ಕೆ ಹೋಲಿಸಿ ಬರೆಯುವುದು ಕೇಳುತ್ತಲೇ ಬಂದಿದ್ದೇವೆ. ಪ್ರತಿಯೊಂದು ಪದ ಹುಟ್ಟಿದ ಗಳಿಗೆಯೂ , ಪ್ರಸವ ವೇದನೆಯೋ, ಗರ್ಭಪಾತದ ಸಂಕಟವೋ ಅನುಭವಿಸುತಿರುತ್ತಾರೆ. ಪದ ಹುಟ್ಟಿ, ಸಾಲಾಗಿ ಬೆಳೆದು, ಕವಿತೆಯಾಗಿ ನಿಂತು, ಓದುವವರ ದನಿ ಬಡಿಸುವಷ್ಟರಲ್ಲಿ ಕವಿಗೆ ಸಾಕುಬೇಕಾಗಿರುತ್ತದೆ. ಹಾಗಂತ ಓದುವವರ ದಂಗುಬಡಿಸಲೆಂದೇ ಯಾವ ಕವಿಯೂ ಹೋಗುವುದಿಲ್ಲವಾದರೆ ಅವನ ಮನಸ್ಸಿನ ಒಳಗಿನ ಅದಮ್ಯ ಆಸೆ ಅದೇ ಆಗಿರುತ್ತದೆ. ಅದನ್ನವನು ವಾಚ್ಯವಾಗಿಯಾಗಲೀ, ಕಾವ್ಯದ ಅಭಿವ್ಯಕ್ತಿಯ ಮೂಲಕವಾಗ ಹೇಳಿಬಿಡಲಾರ. ಕಾವ್ಯ ಎನ್ನುವುದೇ ಹಾಗೆ, ಎಲ್ಲವನ್ನೂ ಬಚ್ಚಿಟ್ಟು, ಬಯಲಲ್ಲಿ ಬೆತ್ತಲಾಗಿ ನಿಲ್ಲುವ ಕ್ರಿಯೆಗೆ ಸಮ! 

ಋತು ಚಕ್ರದ ಮಾತು ಒತ್ತಟ್ಟಿಗಿರಲಿ
ಚಕ್ರದೊಳಗೆ ಸಿಲುಕಿ ಅಪ್ಪನಂತಾದದ್ದು 
ಅಮ್ಮನಂತೆ ನೀ ಉಬ್ಬುಬ್ಬಿ ತಬ್ಬಿಬ್ಬುಗೊಂಡದ್ದು 
ಆತುರಗೇಡಿಯೆಂಬ ಬಿರುದನ್ನಿತ್ತು
ಕೊರೆವ ಚಳಿಯಲ್ಲಿ ಬೆವರುತ್ತಾ
ತಿಲವನ್ನೇ ತಿಂದು ನನ್ನೆದೆಗೊರಗಿ ಮಗುವಾದದ್ದು
ಎಷ್ಟೆಷ್ಟೋ ಜೀವಗಳು ಎಲ್ಲೆಲ್ಲೋ
ಅಲೆದಾಡುತ್ತಿರಲು ನಿನ್ನೊಳಗೆ ನನ್ನ
ಪ್ರತಿಬಿಂಬ ಕರಗಿ ನೆತ್ತರಾಗಿ ಹರಿದೋಡಿದಾಗ
ನಿನ್ನ ನೆಮ್ಮದಿಯ ನೆಟ್ಟುಸಿರು ನನ್ನೆದೆಯ
ಮಂಚವನ್ನೇ ಅಲುಗಡಿಸಿತ್ತು..

ಎಂಬ ಚಿನ್ನುಪ್ರಕಾಶ್ ಅವರ ಪದ್ಯದ ಸಾಲುಗಳನ್ನು ಓದುತ್ತಿರುವಾಗ ಮೇಲಿನ ಅನುಭವವಾಗುತ್ತದೆ. 

ಚಿನ್ನುಪ್ರಕಾಶರ ಪದ್ಯಗಳಲ್ಲಿ ಎಲ್ಲೂ ಪದಗಳೊಂದಿಗೆ ಚೆಲ್ಲಾಟವಿಲ್ಲ. ಬದಲಿಗೆ ಬದುಕಿನ ಅಂಚುಗಳನ್ನು ಹಿಗ್ಗಿಸಿ ಅದನ್ನು ಮತ್ತಷ್ಟು ಜೀವಪರವಾಗಿಸುವ, ಲೋಕರೂಢಿಯೊಳಗೆ ಬೆವತುಹೋಗಿರುವ ಸುಳ್ಳಿನ ಭೇರುಗಳನ್ನು ಕಿತ್ತೆಸೆಯುವ ಗುಣಗಳಿವೆ. ಅದಕ್ಕೆ ಉದಾಹರಣೆಯಾಗಿ,

ವೇದನೆಯ ಒಳ ಮರ್‍ಮದ ಘಾಟು
ಥೇಟು ವಿಧಿಯ ಪ್ರತಿಧ್ವನಿ
ಮುದುಡಿ ಬಿರುಗಾಳಿಗೆ ಬೆದುರಿ ಹೋದಂತಹ
ತರಗೆಲೆಗಳು ಒಳಮನಸ್ಸಿನ ಅತೃಪ್ತ
ನುಡಿಗಳ ಆರ್‍ತನಾದ

ಎಂಬ ಸಾಲುಗಳು ಪುಷ್ಟಿ ನೀಡುತ್ತವೆ. ಯಾರನ್ನೋ ಮೆಚ್ಚಿಸಲೋ ಅಥವಾ ದೈವಲೀಲೆಯನ್ನು ಸುಖಾಸುಮ್ಮನೇ ಒಪ್ಪಿಕೊಳ್ಳಲು ತಯಾರಿಲ್ಲದ ಒಬ್ಬ ಸಹೃದಯಿ ಬಂಡಾಯದ ಕವಿ ಚಿನ್ನುಪ್ರಕಾಶರ ಒಳಗೆ ಎಚ್ಚರವಾಗಿದ್ದಾನೆ. ಇಂತಹ ಎಚ್ಚರವೇ ಜಗತ್ತಿಗೆ ಮುಲಾಮಾಗುತ್ತಿರುವುದು. ಇಂತಹ ಮುಲಾಮು ಹಂಚುವ 'ಖಾಲಿ ಜೋಳಿಗೆ ಫಕೀರ'ನನ್ನು ನಮ್ಮೆದುರಿಗೆ ನಿಲ್ಲಿಸಿರುವುದು ಚಿನ್ನು ಪ್ರಕಾಶ್ ಅವರ ಕಾವ್ಯಶಕ್ತಿ ಮತ್ತು ಬರೆಯುವವರಿಗೆ ಅಥವಾ ಇಲ್ಲಿನ ಕವಿತೆಗಳನ್ನು ಓದಿದವರಿಗೆ ಜಗತ್ತನ್ನು ಪ್ರೀತಿಸುವವರಿಗೆ ಇರಲೇಬೇಕಾದ ಕನಿಷ್ಠ ಹೃದಯವಂತಿಕೆಯನ್ನು ಹೊಂದುವ ಸುಲಭದಾರಿಯನ್ನು ಸೂಚಿಸಬಹುದೆಂಬ ನಂಬಿಕೆಯೊಂದಿಗೆ...

ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

‘ಖಾಲಿ ಜೋಳಿಗೆಯ ಫಕೀರ’ ಕವನ ಸಂಕಲನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

ವಿ.ಆರ್ ಕಾರ್ಪೆಂಟರ್ ಅವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

 

 

MORE FEATURES

ಓದುಗರಿದ್ದೆಡೆ ಪುಸ್ತಕ ತಲುಪಿಸುವುದ...

16-10-2021 ಬೆಂಗಳೂರು

ಭಾರತೀಯ ಪುಸ್ತಕ ವಲಯದ ಅತಿ ದೊಡ್ಡ ಭಂಡಾರ ಎಂದೇ ಖ್ಯಾತಿಯ ಸಪ್ನ ಬುಕ್ ಹೌಸ್, ಓದುಗ-ಲೇಖಕ-ಪ್ರಕಾಶಕ ಹೀಗೆ ಪುಸ್ತಕೋದ್ಯಮದ ...

ಮೂಲಭೂತವಾದವನ್ನು ಜಿಕೆಜಿ ಅದರ ಎಲ್ಲ...

16-10-2021 ಬೆಂಗಳೂರು

‘ಜಿಕೆಜಿ ಸಾರ್ವಜನಿಕ ಬುದ್ಧಿಜೀವಿಯಾದವರು ಹೇಗಿರಬೇಕು ಎನ್ನುವುದರ ಬಗ್ಗೆ ಆಳವಾಗಿ ಯೋಚಿಸಿ, ತಮ್ಮದೇ ಆದ ನಿಲುವನ್ನ...

"ಗಾಂಧಿ ನೇಯ್ದಿಟ್ಟ ಬಟ್ಟೆಯ ಬಿಡಿಸಿ...

16-10-2021 ಬೆಂಗಳೂರು

‘ಅಂತರಂಗದ ಆಲಯಕ್ಕೆ ಸುಲಭವಾಗಿ ಬಿಟ್ಟುಕೊಳ್ಳುವ ರಾಯಸಾಬರ ಕವಿತೆಗಳು, ಅಷ್ಟು ಸುಲಭಕ್ಕೆ ಹೊರಹೋಗಲು ಬಿಡದೆ ಕಾಯ್ದು...