ಫಣಿಯಮ್ಮ ಎಂಬ ಹೊಸ ಪುರಾಣ

Date: 06-09-2021

Location: ಬೆಂಗಳೂರು


‘ಫಣಿಯಮ್ಮ ಚರಿತ್ರೆ ಭಾಗವೂ ಹೌದು. ಅವಳ ಕಥನ ಸ್ವತಂತ್ರ ಪುರಾಣವೂ ಹೌದು. ವಾಸ್ತವ ಹಾಗೂ ಕಲ್ಪನೆಯ ಸೃಜನಶೀಲ ಮರುನಿರೂಪಣೆಯಲ್ಲಿ ಅದು ನಮ್ಮೊಳಗೆ ಬೆಳೆಯುತ್ತದೆ’ ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ‘ತೆರೆದಷ್ಟೂ ಅರಿವು’ ಅಂಕಣದಲ್ಲಿ ಎಂ.ಕೆ. ಇಂದಿರಾ ಅವರ ಫಣಿಯಮ್ಮ ಕಾದಂಬರಿಯನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

ಎಂ.ಕೆ.ಇಂದಿರಾ ತುಂಬ ಮಹತ್ವಾಕಾಂಕ್ಷೆಯ ಲೇಖಕಿಯಲ್ಲ. ಅಸ್ತಿತ್ವದ ಕುರಿತ ತೀವ್ರ ಪ್ರಶ್ನೆಗಳಾಗಲೀ, ಅವೇಗವಾಗಲೀ ಅವರ ಬರವಣಿಗೆಯಲ್ಲಿ ಕಂಡುಬರುವುದಿಲ್ಲ. ಅವರ ಬರವಣಿಗೆ ಹೊಸಹೊಳೆಗಳನ್ನು ಸೇರಿಸಿಕೊಂಡು ತನ್ನ ಪಾತ್ರವನ್ನು ವಿಸ್ತರಿಸಿಕೊಳ್ಳುತ್ತಾ ನಿರುಮ್ಮಳವಾಗಿ ಹರಿಯುವ ತುಂಗೆಯ ಚಲನೆಯಂಥದ್ದು. ಸಮಸ್ತ ಜೀವಲೋಕದ ಚೈತನ್ಯವನ್ನು ವಿಕಾಸಗೊಳಿಸುತ್ತಾ ನಿಧಾನವಾಗಿ ಪಸರಿಸುವ ಬೆಳಗಿನಂಥದ್ದು. ಒಂದು ಜೀವದ ಭಾವವಿಕಾಸವನ್ನು, ಅದರೊಟ್ಟಿಗೆ ಒಂದು ಸಮುದಾಯದ ಆಂತರಿಕ ವಿಕಾಸವನ್ನು ಅದರ ಸಹಜನಡಿಗೆಯ ಮೂಲಕವೇ ಗಮನಿಸುತ್ತ ಹೋಗುವುದು ಅವರ ಕ್ರಮ. ಕ್ರಾಂತಿಯೆಂಬುದು ಅವರ ಪಾಲಿಗೆ ದಿಢೀರ್ ಆಗಿ ಸಂಭವಿಸುವ ಕ್ರಿಯೆಯಲ್ಲ. ಅದು ಒಂದು ಜೀವವು ಮಾಗುತ್ತಾ ನಡೆದಂತೆ ಆಗುವ ಆಂತರಿಕ ವಿಕಾಸ. ಅಲ್ಲೊಂದು ನಿಧಾನ ಗತಿಯಿದೆ. ಇಂಥ ವಿಕಾಸವು ಒಂದು ಪರಿಸರದ ಪ್ರಜ್ಞೆಯಲ್ಲೂ ಸಂಭವಿಸುತ್ತದೆ. ಹೆಸರಿಟ್ಟಾಗ ನಿಧಾನವಾಗಿ ಕುದಿ ಆರಂಭವಾಗಿ ಸುತ್ತೆಲ್ಲಾ ಹರಡುತ್ತ ಹದವಾಗಿ ಅನ್ನ ಬೇಯುವಂತೆ ಪರಿವರ್ತನೆಯು ಸ್ಪಷ್ಟವಾಗಿ ಗೋಚರಿಸಲು ಅದರದೇ ಕಾಲಬೇಕು. ‘ಕಾಲಪಕ್ವವಾಗುವುದು’ ಎಂದರೆ ಇದೇ ಅಲ್ಲವೇ? ಇಂಥ ವಿಕಾಸದ ಲಯವನ್ನ ಗ್ರಹಿಸಿ, ಅರಿತು ಕಟ್ಟಿದ ಕಥನವಿದು..

ಎಂ.ಕೆ ಇಂದಿರಾರವರ ಕಾದಂಬರಿಗಳು ಕುಟುಂಬ ಪ್ರೇಮದ ಸೌಂದರ್ಯವನ್ನು ಆಪ್ತವಾಗಿ ಚಿತ್ರಿಸುತ್ತವೆ. ತುಂಗಭದ್ರಾ, ಸದಾನಂದದಂತಹ ಕಾದಂಬರಿಗಳು ಇದಕ್ಕೆ ಉದಾಹರಣೆ. ಅವರ ಫಣಿಯಮ್ಮ ಕಾದಂಬರಿ ಕೂಡ ಕುಟುಂಬಗಳ ಕಥೆಯೇ. ಆದರೆ ಸಾಂಸ್ಥಿಕ ಧರ್ಮದ ಕಟ್ಟುಪಾಡುಗಳು ಹಾಗೂ ಅದನ್ನು ಪಾಲಿಸಬೇಕೆಂಬ ಸಾಮಾಜಿಕ ಒತ್ತಡಗಳು ಕುಟುಂಬ ವ್ಯವಸ್ಥೆಯನ್ನು ಕೆಲವೊಮ್ಮೆ ಅಲ್ಲೋಲ ಕಲ್ಲೋಲಗೊಳಿಸುತ್ತವೆ. ಅರಿವಿಲ್ಲದಂತೆ ಅಲ್ಲಿ ಕ್ರೌರ್ಯದ ಎಳೆಯೊಂದು ನುಸುಳಿ ಬದುಕನ್ನು ಕೆಂಗೆಡಿಸುತ್ತದೆ. ಸದಾನಂದ ಹಾಗೂ ಫಣಿಯಮ್ಮ ಕಾದಂಬರಿ ಎರಡರಲ್ಲೂ ಚಿತ್ರಿಸಿರುವ ವಿಧವೆಯರ ಬದುಕು ಇದನ್ನು ಸೂಚ್ಯವಾಗಿ ಹೇಳುತ್ತವೆ. ನಮ್ಮ ಸಮಾಜದಲ್ಲಿ ಲೆಕ್ಕ ವಿಲ್ಲದಷ್ಟು ಬಾಲ ವಿಧವೆಯಿದ್ದಾರೆ. ಅವರೆಲ್ಲರ ಬದುಕು ಅಪೂರ್ಣ. ಆದರೆ ಏನು ಮಾಡಲು ಸಾಧ್ಯ? ಎಂದು ಆ ಕುಟುಂಬಗಳ ಹಿರಿಜೀವಗಳು ಮರುಗುತ್ತವೆ. ಇದನ್ನು ತಮ್ಮ ವಿಧಿಯೆಂದು ಸ್ವೀಕರಿಸಿ ಬದುಕುವ ಮುಗ್ಧತೆ ಅದರದು. ಪ್ರಶ್ನಿಸುವ ಪ್ರತಿಭಟಿಸುವ ಸಾಧ್ಯತೆಗಳಿಗೇ ತೆರೆದುಕೊಂಡಿರದ ಸ್ಥಗಿತ ಸಮಾಜವದು. ಗಂಡು ಹೆಣ್ಣಿನ ಸಂಬಂಧಗಳ ಅರ್ಥ ತಿಳಿಯುವ ಮೊದಲೇ ಗಂಡ ತೀರಿಕೊಂಡ ಎಳೆಯ ಹುಡುಗಿಯರನ್ನ ತಲೆ ಬೋಳಿಸಿ, ಕೆಂಪು ಸೀರೆಯುಡಿಸಿ, ಒಪ್ಪತ್ತೂಟ ಹಾಗೂ ಮಡಿಕೆಲಸಗಳಲ್ಲಿ ತೊಡಗಿಸುವುದು ಅಂದಿನ ಬ್ರಾಹ್ಮಣ ಸಮುದಾಯಗಳಲ್ಲಿ ಸಾಮಾನ್ಯವಾಗಿತ್ತು. ನಿಯಂತ್ರಿತ ಬದುಕಿನಲ್ಲಿ ಸಹಜ ವಿಕಸನದ ಸಾಧ್ಯತೆಯನ್ನೇ ಕಳೆದುಕೊಂಡ ಹೆಣ್ಣು ಜೀವಿಗಳ ಸಂಕಟದ ಬದುಕು ಕುಟುಂಬದ ಭದ್ರಕೋಟೆಯಲ್ಲೇ ಮೌನವಾಗಿ ಕಳೆದು ಹೋಗುತ್ತಿತ್ತು. ಎಂ.ಕೆ ಇಂದಿರಾ ತಮ್ಮ ಸದಾನಂದ ಕಾದಂಬರಿಯಲ್ಲಿ ಚಿತ್ರಿಸಿದ ಕಮಲಾ ಹಾಗೂ ಫಣಿಯಮ್ಮ ಕಾದಂಬರಿಯ ಬಾಲ ವಿಧವೆ ಫಣಿಯಮ್ಮ ಇಬ್ಬರೂ ಪರಿಸ್ಥಿತಿಯ ಕೈಗೊಂಬೆಗಳು ಆದರೆ ಇವರಿಬ್ಬರ ಕಾಲ- ಸಂದರ್ಭಗಳು ಬೇರೆ, ಮನೋಭಾವಗಳೂ ಬೇರೆಯೇ. ಸದಾನಂದ ಕಾದಂಬರಿಯ ನಂತರ ಫಣಿಯಮ್ಮ ಕಾದಂಬರಿಯನ್ನು ಬರೆದಿದ್ದರೂ ಫಣಿಯಮ್ಮನ ಕತೆ ನಡೆದ ಕಾಲ ಹಿಂದಿನದು.

ಸ್ತ್ರೀಯರು ಕಟ್ಟಿದ ಕಥನಗಳಲ್ಲಿ ಸ್ತ್ರೀತ್ವದ ಮಾದರಿಯನ್ನು ಗ್ರಹಿಸುವ ನೋಟವೊಂದು ಸ್ತ್ರೀವಾದಿ ವಿಮರ್ಶೆಯ ಮೂಲಕ ಬೆಳೆದುಬಂದಿದೆ. ವ್ಯವಸ್ಥೆಯನ್ನು ಪ್ರಶ್ನಿಸುವ, ಪ್ರತಿಭಟಿಸುವ, ತನ್ನ ಅಸ್ತಿತ್ವಕ್ಕಾಗಿ ತೀವ್ರವಾಗಿ ತಪಿಸುವ ಮಾದರಿಯೊಂದಾದರೆ, ಇರುವ ವ್ಯವಸ್ಥೆಯನೇ ತನ್ನ ವ್ಯಕ್ತಿತ್ವದ ಪ್ರಭೆಯಿಂದಾಗಿ ಬದಲಿಸಿಕೊಳ್ಳುವ ಮಾದರಿ ಇನ್ನೊಂದು. ಎಂ.ಕೆ ಇಂದಿರಾರವರ ಫಣಿಯಮ್ಮ ಭಿನ್ನ ಸ್ತ್ರೀ ಮಾದರಿಯೊಂದನ್ನು ಸ್ಥಾಪಿಸುವ ಮೂಲಕ ಅನನ್ಯವೆನಿಸುತ್ತದೆ. ಹೆಣ್ಣೊಬ್ಬಳ ಅಸ್ಮಿತೆಯನ್ನು ಹೊಸಕಿ ಹಾಕುವ ಜೀವ ವಿರೋಧಿ ನೀತಿ ಸಂಹಿತೆಯನ್ನು ತನ್ನ ಅಪಾರ ನೈತಿಕ ಶಕ್ತಿಯಿಂದಲೇ ಪುಡಿಮಾಡುತ್ತಾಳೆ ಫಣಿಯಮ್ಮ. ಪಿತೃಪ್ರಧಾನ ವ್ಯವಸ್ಥೆಯ ಯಾವ ಹೊರಗಿನ ಚೌಕಟ್ಟುಗಳೂ ಫಣಿಯಮ್ಮನ ಆಂತರಿಕ ಚೈತನ್ಯವನ್ನು ಕಸಿಯಲಾಗುವುದಿಲ್ಲ. ತಾಪವನ್ನು ತಪವಾಗಿಸುವವಳ ಅಪಾರ ಸೈರಣೆ ಅವಳನ್ನು ಕೊನೆಯಲ್ಲಿ ಗೆಲ್ಲಿಸುತ್ತದೆ. ಈ ಗೆಲುವು ಯುದ್ಧ ಹೂಡದೇ ಬದುಕನ್ನು ಛಿದ್ರಗೊಳಿಸದೇ ಜೀವಪ್ರೇಮದಿಂದ ಸಾಧಿಸುವ ಗೆಲುವು.

ವ್ಯಕ್ತಿಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಮೂಲಕ ಸಮಾನತೆ ಹಾಗೂ ಸಮಾನ ಅವಕಾಶಗಳಿಗಾಗಿ ಹೋರಾಡುವ ‘ರಾಜಕೀಯ ಪ್ರಜ್ಞೆ’ ಎಪ್ಪತ್ತರ ದಶಕದಾಚೆಗೆ ಕನ್ನಡ ಮಹಿಳಾ ಸಾಹಿತ್ಯವನ್ನು ಪ್ರಭಾವಿಸಿದೆ. ಅದಕ್ಕೂ ಮೊದಲು ತಿರುಮಲಾಂಬ, ಆರ್. ಕಲ್ಯಾಣಮ್ಮ, ಶಾಮಲಾ ಬೆಳಗಾಂವ್ಕರ್, ಕೊಡಗಿನ ಗೌರಮ್ಮ ಮೊದಲಾದವರು ಉದಾರ ಮಾನವತಾವಾದದ ಪ್ರೇರಣೆಯಿಂದ ಸ್ತ್ರೀಶಿಕ್ಷಣ, ವಿಧವಾ ವಿವಾಹ ಮುಂತಾದ ಪ್ರಶ್ನೆಗಳನ್ನು ಮುಂದುವರೆಸಿಕೊಂಡು ಸುಧಾರಣಾವಾದಿ ಆಶಯಗಳನ್ನು ಕಟ್ಟಿದರು. ಇವುಗಳ ಮಧ್ಯೆ ಭಿನ್ನವಾಗಿ ನಿಲ್ಲುವ ಫಣಿಯಮ್ಮ ಸ್ತ್ರೀತ್ವದ ಆಂತರಿಕ ಚೈತನ್ಯವನ್ನು ಸ್ಥಾಪಿಸುವಂತಹ ಕಾದಂಬರಿ. ಇಲ್ಲಿ ಲೇಖಕಿಗೆ ‘ಪೊಲಿಟಿಕಲ್ ಕರೆಕ್ಟ್ ನೆಸ್’ಗಿಂತ ತನ್ನ ಅಂತಃಸತ್ವದ ಮೂಲಕವೇ ಪರಿಸರದ ಮಿತಿಗಳನ್ನು ಮೀರುವ ಹೆಣ್ತನದ ಚೈತನ್ಯದ ದರ್ಶನ ಮುಖ್ಯವಾಗುತ್ತದೆ. ನಿಧಾನ ಶೃತಿಯಲ್ಲಿ ಹಂತ ಹಂತವಾಗಿ ವಿಕಸಿತವಾಗುವ ಜೀವವು ಕೊನೆಯಲ್ಲಿ ತನ್ನ ಕಾಣ್ಕೆಯೊಂದನ್ನು ಅಚ್ಚೊತ್ತುವಂತೆ ಮಾಡುತ್ತದೆ. ಪುಟ್ಟದೇಹದ ಫಣಿಯಮ್ಮನ ಮನೋವಿಕಾಸದ ವಿಸ್ತಾರ ಅಂತಹದು. ಅಣುವಿನೊಳಗಿನ ವಿರಾಟ್ ಚೇತನದಂತೆ ಫಣಿಯಮ್ಮನ ವ್ಯಕ್ತಿತ್ವವು ತನ್ನ ಅಸೀಮ ಸಾಧ್ಯತೆಗಳಿಂದಾಗಿ ಬೆರಗು ಮೂಡಿಸುತ್ತದೆ. ಹೆಣ್ಣಿನ ಪ್ರಕೃತಿಕ ವ್ಯಕ್ತಿತ್ವವು ಕೊನೆಯಲ್ಲಿ ಪಕ್ವವಾಗಿ ತೊಟ್ಟು ಕಳಚಿ ರಾಗದ್ವೇಷಗಳ ಸೀಮೆಯಾಚೆ ನಡೆದುಬಿಡುತ್ತದೆ. ಪ್ರೇಮ, ಕಾಮ, ಸಂಸಾರ, ಅಧಿಕಾರ ಎಲ್ಲವೂ ಸ್ವಾರ್ಥ ಲೇಪಿತವಾಗಿ ಮಲೀನವಾದದ್ದನ್ನು ಆಕೆ ತನ್ನ ಬದುಕಿನುದ್ದಕ್ಕೂ ಹಲವು ಸಂದರ್ಭಗಳಲ್ಲಿ ಕಾಣುತ್ತಾ ಹೋಗುತ್ತಾಳೆ. ತನ್ನ ವೈಧವ್ಯದ ಸ್ಥಿತಿಯನ್ನು ಲೌಕಿಕ ಬದುಕಿನ ಇಂಥ ಮಿತಿಗಳನ್ನು ಮೀರಲು ಆಕೆ ಮೆಟ್ಟಿಲಾಗಿಸಿಕೊಳ್ಳುತ್ತಾಳೆ. ಗಾಂಧೀಜಿ ಕಾಮವನ್ನು ಗೆಲ್ಲಲು ನಡೆಸಿದ ಪ್ರಯೋಗಗಳು, ಋಷಿಗಳು ತಪಸ್ಸಿನಿಂದ ಸಾಧಿಸಿಕೊಂಡ ನಿರ್ಮಮಕಾರ ಇಲ್ಲಿ ನೆನಪಾದರೂ, ಫಣಿ ಯಮ್ಮನಿಗೆ ಈ ಗೆಲುವು ಎಂದೂ ಇದು ಆಂತರಿಕ ಸಂಘರ್ಷದ ಸಂಗತಿಯಾಗಲೇ ಇಲ್ಲ. ಆಕೆಯ ಪರಿಶುದ್ಧ ಪ್ರೇಮವೇ ಬದುಕನ್ನು ಅವಿಭಜಿತವಾಗಿ ಕಾಣುವ ಅಖಂಡ ದೃಷ್ಟಿಯನ್ನು ನೀಡಿತು. ಎಂಥ ಸ್ಥಿತಿಯಲ್ಲೂ ಮನೋವಿಕಾರಗಳಿಗೆ ಒಳಗಾಗದ ಸಮತ್ವವನ್ನು ನೀಡಿತು. ಫಣಿಯಮ್ಮ ತನ್ನ ಲಿಂಗೀಯ ವ್ಯಕ್ತಿತ್ವವನ್ನು ದಾಟಿನಡೆದ ಚೇತನವಾಗಿದ್ದಳು.

ಬಾಲ್ಯದಲ್ಲಿಯೇ ಗಂಡನನ್ನು ಕಳೆದುಕೊಂಡು ಕತ್ತಲಕೋಣೆ ಸೇರುವ ಫಣಿಯಮ್ಮ ಮೈನೆರೆದ ಕೂಡಲೇ ಕೇಶಮುಂಡನಕ್ಕೊಳಗಾಗುತ್ತಾಳೆ. ತನ್ನ ದೇಹ ಹಾಗೂ ಮನಸ್ಸಿನ ಮೇಲೆ ನಡೆಯುವ ಈ ಕ್ರೌರ್ಯದ ಅರ್ಥ ತಿಳಿಯುವ ಮೊದಲೇ ಆಕೆ ಮಡಿ ಹೆಂಗಸರ ಸಾಲಿಗೆ ಸೇರಿಹೋಗುತ್ತಾಳೆ. “ಬೆಳಗಿನ ಜಾವದಿಂದ ಮಕ್ಕಳಿಗೆ ಎರೆಯುವುದು, ಹೊರ ಕೆಲಸ ಮುಗಿದ ಮೇಲೆ ದೇವರಪೂಜೆ, ತುಳಸಿಪೂಜೆ, ಅಚಮನ, ಜಪ, ಪಾರಾಯಣ...ಎರಡು ಉದ್ದರಣೆ ತೀರ್ಥ ತೆಗೆದುಕೊಂಡಳೆಂದರೆ ಮುಗಿಯಿತು. ಇಡೀ ದಿನ ಸಂಜೆಯವರೆಗೂ ಮಡಿ ಕೆಲಸವೇ ಇರುತ್ತಿತ್ತು. ಹೆಚ್ಚು ಹೆರಿ, ಕೆರಿ, ಸೋಸು, ಬೀಸು.. ಆ ತಾರುಣ್ಯದ ಪುಟ್ಟ ಶರೀರದಲ್ಲಿ ಯಾವ ದೈವಶಕ್ತಿ ಇರುತ್ತಿತ್ತೋ... ಒಂದಿಷ್ಟು ಆಯಾಸಮಾಡಿಕೊಳ್ಳದೆ, ಆತುರಪಡದೆ, ಚೆಲ್ಲದೆ, ಒಕ್ಕದೆ, ಶುಭ್ರವಾಗಿ ಎಲ್ಲ ಕೆಲಸ ಮಾಡಿ ಮುಗಿಸುವಳು” ಕೆಲಸವೆಂಬುದು ಅವಳಿಗೊಂದು ಲೀಲೆ! ಯಾವ ಸ್ವಾರ್ಥವಿಲ್ಲದೇ, ಮೋಹವಿಲ್ಲದೇ ಸಂಸಾರವನ್ನು ಪೊರೆಯುವ ತಾತ್ಪರತೆ ಅವಳ ಸಹಜ ಸ್ವಭಾವ. ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಹುರಿಗಾಳು ಅವಲಕ್ಕಿ, ಅರಳು ಹಿಟ್ಟುಗಳ ಮಧ್ಯೆ ಅವಳದು ಧ್ಯಾನದಂತಹ ಬದುಕು. ಅರೆಗಳಿಗೆ ಬಿಡುವು ಒದಗಿದರೆ ಜಪಮಣಿ ಜರುಗಿಸುವ ಬೆರಳುಗಳು. ಇದು ಕಾದಂಬರಿ ಕಟ್ಟಿಕೊಡುವ ಫಣಿಯಮ್ಮನ ಚಿತ್ರ. ತಾನಿದ್ದ ಪುಟ್ಟ ಜಗತ್ತನ್ನೇ ತನ್ನ ಅಂತರ್ಯದ ಬೆಳಕಿನಿಂದ ಬೆಳಗುವ ಫಣಿಯಮ್ಮ ತಪಸ್ವಿನಿಯ ಹಾಗೆ ಬದುಕಿದಳೆಂಬುದು ಕಾದಂಬರಿಯ ಧ್ವನಿ. ಭಾರತೀಯ ಪರಂಪರೆಯಲ್ಲಿ ಸ್ತ್ರೀತ್ವಕ್ಕಿರುವ ಭಿನ್ನ ಆಯಾಮವೊಂದನ್ನು ಫಣಿಯಮ್ಮ ಪ್ರತಿನಿಧಿಸುತ್ತಾಳೆ. ಬದುಕಿನಲ್ಲಿ ಬೆಂದು ಪಾಕಗೊಳ್ಳುವ ಪಕ್ವ ವ್ಯಕ್ತಿತ್ವ ಸಾಧಿಸುವ ಎತ್ತರಗಳ ಕಥನವಿದು. ಫಣಿಯಮ್ಮ ತನಗೊದಗಿದ ಬದುಕನ್ನು ಪ್ರತಿಭಟಿಸದೇ ತನ್ನ ಎಲ್ಲೆಗಳನ್ನು ಮೀರುತ್ತಾಳೆ. ಅದನ್ನು ದಾಟಿ ಮುನ್ನಡೆಯುತ್ತಾಳೆ ಇದು ಭಾರತೀಯ ಸ್ತ್ರೀ ಪರಂಪರೆ ಕಾಣಿಸಿದ ಅಧ್ಯಾತ್ಮಿಕ ಆಯಾಮ.

ಫಣಿಯಮ್ಮನಿಗೊದಗಿದ ವೈಧವ್ಯ ಅವಳ ಆಯ್ಕೆಯಲ್ಲ ಅದು ಅವಳ ಮೇಲೆ ಹೇರಲ್ಪಟ್ಟದ್ದು. ಆದರೆ ಫಣಿಯಮ್ಮನ ಚೈತನ್ಯದ ವಿಕಾಸದಲ್ಲಿ ವೈಧವ್ಯವು ಒಂದು ಮಿತಿಯಾಗುವುದಿಲ್ಲ. ಆಕೆಗೆ ಸಂಸಾರದ ಬಂಧನವಿಲ್ಲದಿರುವುದರಿಂದಲೇ ಸರ್ವರಿಗೂ ಬೇಕಾದ ವ್ಯಕ್ತಿಯಾಗಲು ಸಾಧ್ಯವಾಯಿತು. ಆಕೆಗೆ ಜೈವಿಕ ತಾಯ್ತನವು ಅಸಾಧ್ಯವಾದದ್ದರಿಂದಲೇ ಅವಳ ವ್ಯಕ್ತಿತ್ವವೇ ತಾಯ್ತನದ ಮನಸ್ಥಿತಿಯಿಂದ ಅರಳಿತು. ಫಣಿಯಮ್ಮನ ವ್ಯಕ್ತಿತ್ವವೇ ವಾತ್ಸಲ್ಯದ ವಿಸ್ತರಣೆಯಂತೆ ಇಡೀ ಕಾದಂಬರಿಯುದ್ದಕ್ಕೂ ಕಂಡುಬರುತ್ತದೆ. ಈ ವಿಸ್ತರಣೆಯ ಮಡಿ-ಹುಡಿ, ಜಾತಿಭಾವನೆಗಳನ್ನೆಲ್ಲ ದಾಟಲೂ ಮೀಟುಗೋಲಾಗುತ್ತದೆ. ಅಸ್ಪೃಶ್ಯಳಾದ ಹಸಲರ ಭೈರನ ಮಗಳು ಸಿಂಕಿ ಹೆರಿಗೆ ಬೇನೆಯಲ್ಲಿ ಜೀವನ್ಮರಣಗಳ ಮಧ್ಯೆ ಒದ್ದಾಡುತ್ತಿರುವಾಗ ತನ್ನ ಮಡಿಯನ್ನು ಮೀರಿ ಅವಳ ನೆರವಿಗೆ ಧಾವಿಸುತ್ತಾಳೆ. ಸಾಂಪ್ರದಾಯಿಕ ಆವರಣದಲ್ಲಿ ಬೆಳೆದ ಫಣಿಯಮ್ಮನಿಗೆ ಇಲ್ಲಿ ಸಂಪ್ರದಾಯಕ್ಕಿಂತಲೂ ಜೀವ ನೀಡುತ್ತಿರುವ ಹೆಣ್ಣೊಬ್ಬಳನ್ನು ಕಾಪಾಡಬೇಕೆಂಬ ಜೀವಕಾರುಣ್ಯ ಮುಖ್ಯವಾಗುತ್ತದೆ. ಸಮಾಜದ ಶ್ರೇಣೀಕರಣ ವ್ಯವಸ್ಥೆಯಾಗಲೀ, ಕುಟುಂಬಸ್ಥರಿಂದ ತನಗೊದಗಬಹುದಾದ ವಿರೋಧವಾಗಲೀ ಆ ಕ್ಷಣಕ್ಕೆ ಆಕೆಯನ್ನು ಕಾಡುವುದೇ ಇಲ್ಲ. ಜಪಮಣಿಯನ್ನು ತಿರುಗಿಸುವ ಕೈಗಳು ಸಲೀಸಾಗಿ ಸಿಂಕಿಯ ಗರ್ಭಕೋಶವನ್ನು ಪ್ರವೇಶಿಸುತ್ತದೆ. ಅಲ್ಲಿಗೆ ಬ್ರಾಹ್ಮಣ್ಯದ ಆವರಣವು ಕಳಚಿ ಅವಳ ಹೆಣ್ತನ ಬಯಲಾಗುತ್ತದೆ.

ಕಾದಂಬರಿಯ ಕೊನೆಯಲ್ಲಿ ಬರುವ ದಾಕ್ಷಾಯಣಿಯ ಪ್ರಸಂಗದಲ್ಲೂ ಇಂಥದೇ ವ್ಯಕ್ತಿತ್ವದ ಹೊರಚಾಚುವಿಕೆಯನ್ನು ಗಮನಸಬಹುದು. ಹದಿನಾರರ ಹರೆಯಕ್ಕೇ ವಿಧವೆಯಾಗುವ ದಾಕ್ಷಾಯಣಿ ಕೇಶಮುಂಡನಕ್ಕೊಳಗಾಗಲು, ಮಡಿ ಹಿಡಿದು ಒಪ್ಪತ್ತೂಟ ಮಾಡಲು ನಿರಾಕರಿಸುತ್ತಾಳೆ. ಇಂಥ ಸಂದರ್ಭದಲಿ ಫಣಿಯಮ್ಮ ದಾಕ್ಷಾಯಣಿಯನ್ನು ಬೆಂಬಲಿಸುವ ಮೂಲಕ ಸಂಪ್ರದಾಯಸ್ಥರನ್ನು
ದಂಗು ಬಡಿಸುತ್ತಾಳೆ. ಸಂಪ್ರದಾಯದ ಕುರುಡು ಆಚರಣೆಗಿಂತ ಮಾನವೀಯತೆ ಮುಖ್ಯ. ಯಾವ ಆಚರಣೆಯೂ ಒತ್ತಾಯದ ಹೇರಿಕೆಯಾಗಬಾರದೆಂದು ಫಣಿಯಮ್ಮನಿಗೆ ಸಹಜವಾಗಿ ಅನಿಸುತ್ತದೆ. “ತಲೆಕೂದ್ಲಿದ್ರೆ ನಷ್ಟೆಂತದು ಅದ್ರಾಗೆ? ಮೈಲಿಗೆಯೆಲ್ಲ ಅದರಾಗೆ ಕೂತಿದೆಯ? ಈಗಿನ್ನೂ ಕಣ್ಬಿಡೂ ಮಗೀಗೆ ಇದೆಂಥ ಶಿಕ್ಷೆ? ಎಂದು ಪ್ರಶ್ನಿಸುತ್ತಾಳೆ. ತನ್ನ ಬದುಕಿನ ಪಾಡುಗಳನ್ನು ಹಾಗೇ ಅನುಭವಿಸಿ ಹಾಡಾಗಿ ಮಾರ್ಪಡಿಸಿದ ಫಣಿಯಮ್ಮ ತನ್ನ ಮುಂದಿನ ತಲೆಮಾರು ಈ ಸಂಕಟದ ಸುಳಿಯಲ್ಲಿ ಸುತ್ತುವುದು ಬೇಡವೆಂದು ಹಂಬಲಿಸುತ್ತಾಳೆ. ತನ್ನ ಬದುಕನ್ನೇ ನೋಂಪಿಯಂತೆ ಆಚರಿಸಿದ ಫಣಿಯಮ್ಮ ಆಧುನಿಕ ಬದುಕಿನ ಜೀವಪರ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಾಳೆ. ತಲೆ ಬೋಳಿಸಿ ಮಡಿಕೆಲಸಕ್ಕೆಂದು ದಾಕ್ಷಾಯಣಿಯನ್ನು ಮೀಸಲಾಗಿಸುವ ಹುನ್ನಾರವು ಕೊನೆಗೂ ಹುಸಿಹೋಗುತ್ತದೆ. ಫಣಿಯಮ್ಮ ದಾಕ್ಷಾಯಣಿಯನ್ನು ಬೆಂಬಲಿಸುವುದು ಸಾಂಪ್ರದಾಯಿಕ ಸಮಾಜವನ್ನು ಕಸಿವಿಸಿಗೊಳಿಸಿದರೂ ತನ್ನ ನಿರ್ಧಾರದಲ್ಲಿ ಅವಳು ಅಚಲಳಾಗಿರುತ್ತಾಳೆ. ಧರ್ಮದ ಚೌಕಟ್ಟಿನಲ್ಲೇ ಇದ್ದು ಅದನ್ನು ಪರಿವರ್ತಿಸುವ ಗಟ್ಟಿತನವಿದು. ಇದು ಹೊರಗಿನಿಂದ ಹೇರಿಕೊಂಡ ಬದಲಾವಣೆಯಲ್ಲ ಅವಳ ವ್ಯಕ್ತಿತ್ವದ ಸಹಜ ಹಿಗ್ಗುವಿಕೆಯ ಫಲವಿದು. ಇಂಥ ಹಿಗ್ಗುವಿಕೆಯೇ ಸಾಂಪ್ರದಾಯಿಕ ಆವರಣಗಳನ್ನು ಛಿದ್ರಗೊಳಿಸುತ್ತದೆ. ಫಣಿಯಮ್ಮನ ವ್ಯಕ್ತಿತ್ವ ಬಯಲಾಗುತ್ತ ನಡೆಯುವಲ್ಲಿ ಅಧ್ಯಾತ್ಮಿಕ ಆಯಾಮವು ಕಾಣಿಸುತ್ತದೆ. ಅವಳ ಸುತ್ತಲಿನ ವ್ಯಕ್ತಿಗಳೂ ಸಹ ಅವಳ ಈ ಪ್ರಜ್ಞೆಯನ್ನು ಕೊನೆಗೆ ಗುರುತಿಸುವುದು ಅವಳ ವ್ಯಕ್ತಿತ್ವದ ಗೆಲುವು.

ದೈಹಿಕ ವಾಂಛೆಗಳ ಅರಿವೇ ಇಲ್ಲದಂತೆ ಬೆಳೆದ ಫಣಿಯಮ್ಮ ಪುಟ್ಟಾಜೋಯಿಸ ಹಾಗೂ ಸುಬ್ಬಿಯರ ಕಳ್ಳ ಪ್ರಣಯವನ್ನು ನೋಡಿ ಹೇಸುತ್ತಾಳೆ. ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಸಹ ಸೃಷ್ಟಿಕ್ರಿಯೆಯ ಹಿಂದಿನ ಸಂಕಟ ಹಾಗೂ ಹೊಲಸು ಅವಳನ್ನು ಸಂಸಾರದಿಂದ ವಿಮುಖಗೊಳಿಸುತ್ತದೆ. ಗಂಡು-ಹೆಣ್ಣಿನ ಸಂಬಂಧದ ಹಿಂದೆ ಕೆಲಸ ಮಾಡುವ ಪಾವಿತ್ರ್ಯ- ಪಾತಿವ್ರತ್ಯದ ಕಲ್ಪನೆಗಳನ್ನು ಅವಳ ಮನಸ್ಸು ತಣ್ಣನೆ ಪ್ರತಿರೋಧಿಸುತ್ತದೆ. ಗಂಡಸರು ಸಾವಿರ ಹೆಂಗಸರನ್ನು ಕೂಡಿದರೂ ಸ್ನಾನಮಾಡಿ ಜನಿವಾರ ಬದಲಾಯಿಸಿದರೆ ಶುದ್ಧ. ಹೆಣ್ಣು ಅಪ್ಪಿ ತಪ್ಪಿ ಪರಪುರುಷನನ್ನು ನೋಡಿದರೆ ಕುಲಟೆ! ಪುರಾಣದ ರೇಣುಕೆ, ಅಹಲ್ಯೆಯರ ಕಥನಗಳೂ ಇದನ್ನೇ ಹೇಳುತ್ತವೆ. ಈ ಪುರುಷಪ್ರಧಾನ ಮನಸ್ಥಿತಿ ಕಟ್ಟಿದ ಪುರಾಣಗಳ ಪೊಳ್ಳುತನ, ಇಂದಿನ ಸಂಸಾರಗಳಲ್ಲೂ ನುಸುಳಿ ಬದುಕನ್ನು ವಿಕೃತಗೊಳಿಸುವ ಪರಿಗೆ ಫಣಿಯಮ್ಮ ಒಳಗೊಳಗೇ ಕನಲುತ್ತಾಳೆ. ಕದ್ದು ಮುಚ್ಚಿ ಜನಿವಾರ ಬದಲಾಯಿಸುವ ಬಂಧುವೊಬ್ಬನನ್ನು ಕಂಡಾಗ ಫಣಿಯಮ್ಮನಲ್ಲಿ ಈ ಜಿಜ್ಞಾಸೆ ಆರಂಭವಾಗುತ್ತದೆ. ಇಂಥ ನೈತಿಕ ಯಜಮಾನಿಕೆಯೇ ವೈಧವ್ಯದ ಸ್ಥಿತಿಯನ್ನು ಶಾಸ್ತ್ರಬದ್ಧಗೊಳಿಸಿದೆ. ಈ ಅರಿವು ಫಣಿಯಮ್ಮನನ್ನು ಕೆರಳಿಸುವುದಿಲ್ಲ. ಇದನ್ನೆಲ್ಲ ದಾಟಿನಡೆಯುವ ಬಿಡುಗಡೆಯತ್ತ ಅವಳು ಚಲಿಸುವಂತೆ ಮಾಡುತ್ತದೆ. ಸಂಸಾರದ ಎಲ್ಲ ಜಂಜಡಗಳನ್ನು ದಾಟಿ ಕಾಶಿಗೆ ಹೋಗಿ ಬದುಕಲೇ? ಎಂತಲೂ ಫಣಿಯಮ್ಮ ಯೋಚಿಸುತ್ತಾಳೆ. ಆದರೆ, ರೈಲು ಚಾರ್ಜಿಗೆ ಯಾರಲ್ಲಿ ಕೈಯೊಡ್ಡಲಿ? ತನ್ನದಾಗಿ ಜಗತ್ತಿನಲ್ಲಿ ಒಂದು ಕಾಸು ಸಹ ಇಲ್ಲ! ಎಂಬ ವಾಸ್ತವ ಅವಳನ್ನು ಕಾಡುತ್ತದೆ. ದಣಿವರಿಯದೆ ದುಡಿದ ಜೀವ ಆರ್ಥಿಕವಾಗಿ ‘ಶೂನ್ಯ’ ವಾಗಿಯೇ ಉಳಿಯುತ್ತಾಳೆ. ಸೇವೆ, ಔದಾರ್ಯ, ವಾತ್ಸಲ್ಯಗಳಲ್ಲಿ ಸಾಫಲ್ಯ ಕಾಣುವ ಫಣಿಯಮ್ಮನಲ್ಲಿ ತಾನು ದಮನಕ್ಕೊಳಗಾದೆ ಎಂಬ ಭಾವವಿಲ್ಲ! ಸುಖದುಃಖದ ಸೀಮಾ ರೇಖೆಯಿಂದ ಹೊರಗಾಗುವ ಫಣಿಯಮ್ಮ ಬದುಕಿನೊಳಗಿದ್ದು ಬದುಕಿಗಂಟದೇ ಉಳಿಯುತ್ತಾಳೆ. ಸಮತಲದಲ್ಲಿ ಹರಿಯುವ ನದಿಯಂತೆ ಸದ್ದಿಲ್ಲದೆ ಚಲಿಸುವ ಅವಳ ಪ್ರಜ್ಞೆ ಸ್ಥಿತಪ್ರಜ್ಞತೆಯ ಎತ್ತರವನ್ನು ತಲುಪುತ್ತದೆ. ಯಾರ ದಮನಕ್ಕೂ ನಿಲುಕದ ಫಣಿಯಮ್ಮನ ಆಂತರಿಕ ಚೈತನ್ಯ ತನ್ನಷ್ಟಕ್ಕೇ ಸ್ವಯಂಪೂರ್ಣ. ತನ್ನ ನೂರಹನ್ನೆರಡು ವರ್ಷದ ತುಂಬು ಬಾಳಿನ ಕೊನೆಯಲ್ಲಿ ಪುಟ್ಟ ಬಿಳಿ ಹಂಸದಂತೆ ಚಟ್ಟದ ಮೇಲೆ ಮಲಗಿದ ಫಣಿಯಮ್ಮ “ಕುಂಭ ಬೆಂದಿತ್ತು - ಹಂಸೆ ಹಾರಿತ್ತು ಗುಹೇಶ್ವರಾ” ಎಂಬ ಅಲ್ಲಮ ಪ್ರಭುವಿನ ಉಕ್ತಿಯನ್ನು ನೆನಪಿಸುತ್ತಾಳೆ.

ಕಾದಂಬರಿಯ ಕೊನೆಯ ಭಾಗದಲ್ಲಿ ಫಣಿಯಮ್ಮ ಕಾಲ್ಪನಿಕ ಪಾತ್ರವಲ್ಲ ಬದಲಿಗೆ ವಾಸ್ತವದ ಮರು ನಿರೂಪಣೆ ಎಂಬ ಮಾತು ಬರುತ್ತದೆ. ಅವಳು ಬದುಕಿದ ಪರಿಸರ, ಮಲೆನಾಡಿನ ಆ ಊರುಗಳು, ದಾರಿಗಳು, ಹರಿವ ಹೊಳೆ ಎಲ್ಲವೂ ಸ್ಫುಟವಾಗಿ ಬಿಚ್ಚಿಕೊಳ್ಳುತ್ತವೆ. ಫಣಿಯಮ್ಮನಂತಹ ಸ್ತ್ರೀಯನ್ನು ರಾಮಾಯಣ, ಮಹಾಭಾರತ, ಭಾಗವತ ಎಲ್ಲೂ ಕಾಣಲೂ ಸಾಧ್ಯವಿಲ್ಲ ಎಂದು ಫಣಿಯಮ್ಮನ ಬಂಧುವೊಬ್ಬರು ಉದ್ಭರಿಸುತ್ತಾರೆ. ಫಣಿಯಮ್ಮ ಚರಿತ್ರೆ ಭಾಗವೂ ಹೌದು. ಅವಳ ಕಥನ ಸ್ವತಂತ್ರ ಪುರಾಣವೂ ಹೌದು. ವಾಸ್ತವ ಹಾಗೂ ಕಲ್ಪನೆಯ ಸೃಜನಶೀಲ ಮರುನಿರೂಪಣೆಯಲ್ಲಿ ಅದು ನಮ್ಮೊಳಗೆ ಬೆಳೆಯುತ್ತದೆ.

ಈ ಅಂಕಣದ ಹಿಂದಿನ ಬರೆಹಗಳು

‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ

ಹೊತ್ತು ಗೊತ್ತಿಲ್ಲದ ಕಥೆಗಳು

ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ

ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು

ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...

ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ

ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ

ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ

ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ರಾಜಾರಾಂ ತಲ್ಲೂರು ಎಂಬ ನಾಗರಿಕ ಸಮಾ...

22-09-2021 ಬೆಂಗಳೂರು

‘ರಾಜಾರಾಂರವರ ಬರೆಹಗಳನ್ನು ನಿರಂತರವಾಗಿ ಫಾಲೋ ಮಾಡುತ್ತ ಬಂದಿರುವ ನನಗೆ ಅವರು ನಮ್ಮ ಕಾಲದ ನಾಗರಿಕ ಸಮಾಜದ ಓರ್ವ ಸ...

ಸದಭಿರುಚಿ ಎಂಬುದು ಆಧುನಿಕ ಬದುಕಿನ ...

21-09-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯು...

ಲೋಕೋಪಕಾರಿಯ ಪಾತ್ರದಲ್ಲಿ ಲೋಹದ ಹಕ್...

16-09-2021 ಬೆಂಗಳೂರು

ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗೀಂದ್ರ ಮರವಂತೆ ಅವರು ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ &lsqu...