ಪುಂಖಾನುಪುಂಖ ವಿಮರ್ಶೆಯಿಂದ ಯಾರು-ಯಾರಿಗೆ ಏನೇನು ಲಾಭ?


ಪುಸ್ತಕ ವಿಮರ್ಶೆಯನ್ನು ಹೇಗೆ ಬರೆಯಬೇಕು ಎಂಬ ಎರಡು ಬಿಡಿ ಲೇಖನಗಳನ್ನು (ಟಿ.ಎಸ್.ಎಲಿಯೆಟ್ ಹಾಗೂ ದ.ರಾ.ಬೇಂದ್ರೆ) ಓದಿದ ಪರಿಣಾಮ ಇವತ್ತಿನ ಪುಸ್ತಕ ವಿಮರ್ಶೆಯ ಸ್ವರೂಪ-ಪುಸ್ತಕ ಪ್ರಕಟಣೆಯ ಹಿಂದಿರುವ ವ್ಯಾಪಾರಿ ಮನೋಭಾವ-ಒಣಪ್ರತಿಷ್ಠೆ-ಪ್ರಶಸ್ತಿ ಗಿಟ್ಟಿಸುವ ಯೋಚನೆ-ಹೊಗಳುಭಟ್ಟರೊಂದಿಗೆ ಗುಂಪು ರಚನೆ ಹೀಗೆ ಕಾಣುವ -ಕಂಡ ಅಚ್ಚರಿಗಳಿಗೆ, ವಿಷಾದದ ಸಂಗತಿಗಳಿಗೆ, ದುರಂತಮಯ ಸಂದರ್ಭಗಳಿಗೆ ಲೇಖಕ ನರೇಂದ್ರ ಪೈ ಅವರು ಸ್ಪಂದಿಸಿದ -ಪ್ರತಿಕ್ರಿಯಿಸಿದ ಬರಹ.

ಈಚೆಗೆ ಟಿ. ಎಸ್. ಎಲಿಯೆಟ್ ಬರೆದ ದ ಪರ್ಫೆಕ್ಟ್ ಕ್ರಿಟಿಕ್ ಎಂಬ ಲೇಖನ ಓದಿದೆ. ಬಳಿಕ ಬೇಂದ್ರೆಯವರು ವಿಮರ್ಶೆ ಹೇಗೆ ಬರೆಯಬೇಕು ಎಂಬ ಬಗ್ಗೆ ಬರೆದ ಒಂದು ಹಾಸ್ಯ ಲೇಖನ ಓದಿದೆ. ಇಲ್ಲಿರುವುದು ಅದರ ಫಲ...

ಒಂದು ಪುಸ್ತಕಕ್ಕೆ ಬರುವ ಪುಂಖಾನುಪುಂಖ ವಿಮರ್ಶೆಯಿಂದ ಯಾರು-ಯಾರಿಗೆ ಏನೇನು ಲಾಭವಿದೆ ಎಂದು ಯೋಚಿಸಿದರೆ, ನನಗಂತೂ ಎಲ್ಲಕ್ಕಿಂತ ಮೊದಲಿಗೆ, ಆ ಪುಸ್ತಕಕ್ಕೆ ಒಂದಿಷ್ಟು ಓದುಗರು ದೊರೆಯಬಹುದು ಮತ್ತು ಅವರು ಕೊಂಡುಕೊಂಡು ಓದುವವರಾದಲ್ಲಿ ಪ್ರಕಾಶಕರಿಗೆ ಒಂದಿಷ್ಟು ಅನುಕೂಲವಾದೀತು ಅನಿಸುತ್ತದೆ.

ಪ್ರಕಾಶಕರು ಸಾಮಾನ್ಯವಾಗಿ ಪುಸ್ತಕ ಪ್ರಕಟಣೆಗೆ ಹಣ ಹಾಕಿರುತ್ತಾರೆ. ಸಾಮಾನ್ಯವಾಗಿ ಏಕೆಂದರೆ ಕೆಲವೊಮ್ಮೆ ಲೇಖಕನೇ ಪೂರ್ತಿ ಹಣ ಕೊಡಬೇಕಾಗುತ್ತದೆ ಮಾತ್ರವಲ್ಲ, ಒಂದು ಐವತ್ತು ಗೌರವ ಪ್ರತಿಗಳಾಚೆ ಹೆಚ್ಚುವರಿ ಪ್ರತಿ ಬೇಕಿದ್ದರೆ ರಿಯಾಯಿತಿ ದರದಲ್ಲಿಯೇ ಆದರೂ, ಹಣಕೊಟ್ಟು ಕೊಂಡುಕೊಳ್ಳಬೇಕಾಗುತ್ತದೆ. ಪ್ರಕಾಶಕರು ಹಣ ಹಾಕಿ ಪ್ರಕಟಿಸಿದ್ದರೆ, ಪುಸ್ತಕ ಮಾರಾಟವಾದಾಗ ಅವರಿಗೆ ಸ್ವಲ್ಪ ಮಟ್ಟಿಗೆ ಅನುಕೂಲ. ಉಳಿದಂತೆ ಅವರು ಸಗಟು ಖರೀದಿ, ಲೈಬ್ರರಿ ಖರೀದಿ ಎಂದು ತಮ್ಮ ಗೋಡೌನಿನ ತುಂಬ ಇಂಥ ಪುಸ್ತಕಗಳು ಧೂಳು ತಿನ್ನುತ್ತ ಬಿದ್ದಿರುವುದನ್ನು ತಪ್ಪಿಸಲು ಒದ್ಡಾಡಬೇಕಾಗುತ್ತದೆ. ಹಾಗಾಗಿ ಸ್ವಲ್ಪ ಪ್ರಚಾರ, ನಾಲ್ಕು ಜನ ಅದರ ಬಗ್ಗೆ ಮಾತನಾಡುವುದು ಸಾಧ್ಯವಾದರೆ ಪ್ರಕಾಶಕರಿಗೆ ಪಾಪ ಒಳ್ಳೆಯದು.

ಪ್ರಕಾಶಕರ ಪ್ರಶ್ನೆ ಬಿಟ್ಟು ನೋಡಿದರೆ, ತುಂಬ ಮಂದಿ ಒಂದು ಪುಸ್ತಕವನ್ನು ಓದುವುದರಿಂದ ಲೇಖಕನಿಗೆ ಏನು ಲಾಭವಿದೆ? ಒಂದಿಷ್ಟು ಮಂದಿ ಪುಸ್ತಕ ಓದಿ, ಆ ಬಗ್ಗೆ ಕೆಲವರಾದರೂ ಅಲ್ಲಿ ಇಲ್ಲಿ ಬರೆದರೆ ಲೇಖಕನಿಗಾಗುವ ಲಾಭವೇನು?

1. ಅವನು ತನ್ನ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಇನ್ನೂ ಚೆನ್ನಾಗಿ ಬರೆಯಲು ನೆರವಾಗಬಹುದು. ಅಥವಾ ಯಾರೆಲ್ಲ ತನ್ನ ಕೃತಿಯಲ್ಲಿ ತಪ್ಪು ಹುಡುಕಿದರು ಎಂದು ನೆನಪಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲು ಕೂಡ ಅನುಕೂಲವಾಗಬಹುದು. ಅಕಸ್ಮಾತ್ ಕೃತಿಕಾರ ಕೂಡ ಒಬ್ಬ ಖತರ್‌ನಾಕ್ ವಿಮರ್ಶಕನಾಗಿದ್ದಲ್ಲಿ, ಇಂಥ (ಸೇಡಿನ) ಅವ್ಯಕ್ತ ಭಯವೊಂದು ಇರುವುದರಿಂದಲೇ ಕೆಲವರು ತಪ್ಪುಗಳ ಬಗ್ಗೆ ಚಕಾರವೆತ್ತದೇ ಎಚ್ಚರಿಕೆಯಿಂದ ನಾಲ್ಕು ಮಾತು ಬರೆದಿರಲೂ ಬಹುದು! ಇನ್ನು ಕೆಲವರು ಅಂಥವರ ಕೃತಿಯನ್ನು ಅನಗತ್ಯ ಮುದ್ದು ಮಾಡಲೂ ಇದು ಕಾರಣವಾಗಿರಬಹುದು!!

2. ಸಾಮಾನ್ಯವಾಗಿ ಈ ಪ್ರಶಸ್ತಿ, ಪುರಸ್ಕಾರ, ಬಹುಮಾನ ಇತ್ಯಾದಿಗಳ ತೀರ್ಪುಗಾರರಿಗೆ ಸ್ಪರ್ಧೆಗೆ ಬಂದಿರುವ ಎಲ್ಲಾ ಕೃತಿಗಳನ್ನು ಓದುವಷ್ಟು ಸಹನೆ, ಸಮಯ, ಆಸಕ್ತಿ, ಅಗತ್ಯ ಇರುವುದಿಲ್ಲ. ಅಂಥವರು ಅಲ್ಲಿ ಇಲ್ಲಿ ಬಂದಿರುವ ವಿಮರ್ಶೆಗಳ ಸಂಖ್ಯೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆ ವಿಮರ್ಶೆಯಲ್ಲಿ ಏನಿದೆ ಎನ್ನುವುದು ಮುಖ್ಯವಲ್ಲ, ಏಕೆಂದರೆ ಅದನ್ನು ಓದುವ ಸಹನೆ, ಸಮಯ, ಆಸಕ್ತಿ, ಅಗತ್ಯವೂ ಅವರಿಗೆ ಇರುವುದಿಲ್ಲ. ಹಾಗಾಗಿ ಪುಂಖಾನುಪುಂಖ ಪುಸ್ತಕ ವಿಮರ್ಶೆಯ ಹೊಳೆ ಹರಿದರೆ, ಕೆಲವಾದರೂ ಪ್ರಶಸ್ತಿ, ಪುರಸ್ಕಾರಗಳಿಗೆ ಆಯ್ಕೆ ಮಾಡುವಲ್ಲಿ ತೀರ್ಪುಗಾರರಿಗೆ ಅವು ಬಹಳ ಉಪಯುಕ್ತವಾಗಿ ಲಭಿಸಿ, ಲೇಖಕ/ಲೇಖಕಿಗೆ ಪ್ರಶಸ್ತಿ, ಬಹುಮಾನ ಸಿಗಬಹುದು. ಹಾಗಾಗಿ, ಈಚೆಗೆ ತಮ್ಮ ಹೊಸ ಕೃತಿಗೆ ಬಂದ ವಿಮರ್ಶೆಗಳದ್ದೇ ಒಂದು ಸಂಪುಟ ತಯಾರಿಸಿ ಪ್ರಕಟಿಸುವ ಪದ್ಧತಿ ಸುರುವಾಗಿದೆ. ಕೆಲವೊಮ್ಮೆ ಬರೀ ತೊಂಬತ್ತು ಪುಟದ ಪುಸ್ತಕಕ್ಕೆ ಇನ್ನೂರು ಪುಟಗಳಷ್ಟು ವಿಮರ್ಶೆ ಬಂದು ಮೂಲ ಕೃತಿಗಿಂತ ಈ ಕೃತಿಯ ಗಾತ್ರವೇ ಓವರ್‌ಟೇಕ್ ಮಾಡಬಹುದು! ಇದು ಪ್ರಶಸ್ತಿ ಸಮಿತಿಯ ತೀರ್ಪುಗಾರರಿಗೆ ಒಂದು ಸುಲಭ ಕೈಪಿಡಿಯಂತೆ ಒದಗಲಿ ಎನ್ನುವ ಸದುದ್ದೇಶ.

3. ಮುಂದಿನ ಕೃತಿಯ ಪ್ರಕಟನೆ, ಮಾರಾಟ, ಹೆಚ್ಚುವರಿ ಪ್ರಶಸ್ತಿ, ಪುರಸ್ಕಾರ ಮತ್ತು ಅಂಥವೇ ಇನ್ನೂ ಕೆಲವು ಸ್ಥಾನಮಾನ ಪಡೆದುಕೊಳ್ಳುವಲ್ಲಿ ಸಹಾಯಕವಾಗಬಹುದು. ಏನಿಲ್ಲವೆಂದರೂ ಮುಂದಿನ ಪುಸ್ತಕಕ್ಕೆ ಬೇಕಾದ ಬ್ಲರ್ಬು ಸುಲಭವಾಗಿ ಸಿಗುವಂತಾಗುತ್ತದೆ. ಅಲ್ಲದೆ, ಪ್ರಸ್ತುತ ಲೇಖಕರು ಈ ಹಿಂದೆಯೂ ಏನನ್ನಾದರೂ ಬರೆದಿದ್ದರೆ ಮತ್ತು ಅದರ ಬಗ್ಗೆ ಯಾರಿಗೂ ಸುದ್ದಿಯಿಲ್ಲದಿದ್ದರೆ, ಈಗ ಅದು ಕೂಡ ನಾಲ್ಕು ಮಂದಿಗೆ ಗೊತ್ತಾಗುವ ಸುವರ್ಣಾವಕಾಶವೊಂದು ತೆರೆದುಕೊಂಡು, ಆ ಹಳೆಯ ಕೃತಿಗಳ ಭಾಗ್ಯದ ಬಾಗಿಲೂ ತೆರೆದುಕೊಳ್ಳುವ ಸಾಧ್ಯತೆ ಇರುತ್ತದೆ.

4. ಹೆಚ್ಚು ಮಂದಿ ಸಾಹಿತಿಗಳ, ವಿಮರ್ಶಕರ, ಓದುಗರ ಸ್ನೇಹ, ಸಂಪರ್ಕ ಲಭಿಸುವುದರಿಂದ ಒಳ್ಳೆಯದಾಗುತ್ತದೆ ಎಂಬ ಭಾವನೆ ಇದ್ದರೆ, ಅದು ಆಗಬಹುದು. ಅಂಥವರು ಹೊಸ ಪುಸ್ತಕ ಪ್ರಕಟಿಸಿದಾಗ ಪುಕ್ಕಟೆಯಾಗಿ ಕಳಿಸಿಕೊಡುವ ಸಾಧ್ಯತೆ ಕೂಡ ಹೆಚ್ಚು. ಹೀಗೆ ಸಹ ಬರಹಗಾರರ ಸಂಪರ್ಕ ಒದಗುವುದರಿಂದ ಒಟ್ಟಾರೆ ಸಾಹಿತ್ಯ ಕ್ಷೇತ್ರದ ಒಳಸುಳಿಗಳೆಲ್ಲ ತಿಳಿದು ಬರುವುದು ಸಾಧ್ಯವಾಗುತ್ತದೆ. ಅದರಿಂದ ಮುಂದಿನ ದಿನಗಳಲ್ಲಿ ಸಾಹಿತಿಯಾಗಿ ನೆಲೆಯಾಗಲು, ಚೆನ್ನಾಗಿ ಬರೆಯುವುದನ್ನು ಬಿಟ್ಟು, ಬೇರೆ ಹೇಗೆಲ್ಲ ಮುಂದುವರಿಯಬೇಕೆಂಬ ಬಗ್ಗೆ ಜ್ಞಾನ ವೃದ್ಧಿಯಾಗುವುದು.

5. ಗೌರವ, ಜನಪ್ರಿಯತೆ, ಕೀರ್ತಿ (ಮುಂತಾದ ಕೆಲವು ಪದಪುಂಜಗಳು) ಲಭಿಸಿತು ಎಂದು ಅಂದುಕೊಳ್ಳುವುದರಲ್ಲೇ ಖುಷಿ ಪಡುವವರಿಗೆ ಅವೆಲ್ಲ ಸಿಗಬಹುದು. ಲೇಖಕನಾದವನು ದೊಡ್ಡ ಹುದ್ದೆಯಲ್ಲಿದ್ದರೆ, ವಿದೇಶದಲ್ಲಿದ್ದು ಪುಸ್ತಕ ಬರೆದಿದ್ದರೆ, ಸರ್ಕಾರಿ ಅಧಿಕಾರಿಯಾಗಿದ್ದರೆ ಇದೆಲ್ಲ ಮುಖ್ಯ ಅನಿಸದೇ ಇರಬಹುದು. ಆದರೆ ಅವನು ನಿರುದ್ಯೋಗಿಯೋ, ತೀರ ನಗಣ್ಯ ವ್ಯಕ್ತಿಯೋ ಆಗಿದ್ದರೆ, ಗೌರವ, ಜನಪ್ರಿಯತೆ, ಕೀರ್ತಿ (ಮುಂತಾದ ಕೆಲವು ಪದಪುಂಜಗಳು) ಯಿಂದಾಗಿ, ಬೇರೆ ಬೇರೆ ಕಾರ್ಯಕ್ರಮಗಳಿಗೆ ಆಹ್ವಾನಿತರಾಗಿ ಹೋದಾಗ ಅಲ್ಲಿ ಪರಿಚಯ ಮಾಡುವ ಡ್ಯೂಟಿ ಬಿದ್ದವರಿಗೂ ಒಂದು ಸುಲಭದ ಪ್ರೊಪೈಲ್ ಸಿಕ್ಕಿದಂತಾಗುತ್ತದೆ. ಇಂಥಿಂಥವರು "ಖ್ಯಾತ ಇದು" (ಇದು = ಸಾಹಿತಿ/ಕವಿ/ಕತೆಗಾರ/ವಿಮರ್ಶಕ ಇತ್ಯಾದಿ) ಎಂದು ಹೇಳುವುದು ಸುಲಭವಾಗುತ್ತದೆ.

6. ಒಂದು ಕೃತಿಯನ್ನು ಬೇರೆ ಬೇರೆಯವರು ಹೇಗೆಲ್ಲ ಓದುತ್ತಾರೆ ಎನ್ನುವ ಕುತೂಹಲಕರ ಅಂಶ ಗೊತ್ತಾಗುತ್ತದೆ. ಅಂದರೆ, ಪ್ರತಿಯೊಬ್ಬರೂ ಒಂದು ಕೃತಿಯಲ್ಲಿ ಏನನ್ನು ಹುಡುಕುತ್ತಾರೆ, ಬೇರೆ ಬೇರೆಯವರ ಓದಿನ ಹವ್ಯಾಸದ ಹಿಂದೆ ಇರುವ ನಿಜವಾದ ಕಾರಣವೇನು ಎನ್ನುವ ಅಂಶ ನಿಜಕ್ಕೂ ಕುತೂಹಲಕರ.

ವಿಮರ್ಶೆ ಬರೆಯುವುದಕ್ಕಾಗಿಯೇ ಓದುವವರದ್ದು ಒಂದು ತರ. ತಮ್ಮ ಬದುಕಿನ ಯಾವುದೋ ಅಂಶವನ್ನೇ ತಲೆಯಲ್ಲಿಟ್ಟುಕೊಂಡ ಮಂದಿ ತಮ್ಮ ಓದಿನಿಂದ ಹುಡುಕುವುದು ನಿಜಕ್ಕೂ ಏನೆಂದು ತಿಳಿಯಲು ಅವರು ತಾವು ಓದಿದ ಕೃತಿಯ ಬಗ್ಗೆ ಆಡುವ ಮಾತುಗಳು ಬೆಳಕು ಚೆಲ್ಲುತ್ತವೆ.

ಹಾಗೆಯೇ ಒಂದು ಪುಸ್ತಕದ ಬಗ್ಗೆ ಬರೆಯುವಾಗ ಹಲವರು ತಾವು ಹೇಳಬೇಕೆಂದು ಬಯಸಿಯೂ ಹೇಳಲು ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಕೆಲವು ವಿಚಾರಗಳನ್ನು ಮಂಡಿಸಲು ಪ್ರಯತ್ನಿಸುವುದೂ ಇರುತ್ತದೆ. ಅವು ನೇರವಾಗಿ ಕೃತಿಗೆ ಸಂಬಂಧಿಸಿರುವುದಿಲ್ಲ. ಯಾರನ್ನೋ ಕುರಿತಿಟ್ಟು, ನೇರವಾಗಿ-ನಿರ್ದಿಷ್ಟವಾಗಿ ಮಾಡಲಾಗದ ಟೀಕೆ,ಟಿಪ್ಪಣಿಯನ್ನು ಇಲ್ಲಿ ಸಾರ್ವತ್ರಿಕಗೊಳಿಸಿ ಹೇಳಿ ಬಿಡುವುದು, ಪ್ರಸ್ತುತ ಕೃತಿಕಾರನ ಬಗ್ಗೆ ಇರುವ ಯಾವುದೋ ಹಳೆಯ ದ್ವೇಷವನ್ನು ನೆನಪಿಟ್ಟುಕೊಂಡು ಮುಯ್ಯಿಗೆ ಮುಯ್ಯಿ ತೀರಿಸುವುದು, ಆತನ ವೈಯಕ್ತಿಕ ಬದುಕಿನ ಕುರಿತು ತಮಗಿರುವ ಅರಿವಿನಿಂದ, ಅದನ್ನು ಬಂಡವಾಳ ಮಾಡಿಕೊಂಡು ಈಗ ಆತನ ಕೃತಿಯಲ್ಲಿ ಇಂಥ ಒಂದು ಅಂಶವನ್ನು ತಾವು (ಮಾತ್ರ) ಗುರುತಿಸಿದ್ದೇವೆ ಎಂದು ತೋರಿಸಿಕೊಳ್ಳಲು ಕೆಲವನ್ನು ಅಗತ್ಯವಿಲ್ಲದಿದ್ದರೂ ಎತ್ತಿ ಆಡುವುದು, ಎಲ್ಲರಿಗೂ ಹೊಗಳಿದಂತೆ ಕಾಣುವ ಮಾತಿನಲ್ಲಿಯೇ ಬರೆದವನಿಗಷ್ಟೇ ಗೊತ್ತಾಗುವಂತೆ ನಂಜು ಸೇರಿಸುವುದು ಎಲ್ಲ ನಡೆಯುತ್ತಿರುತ್ತದೆ. ಸ್ವಲ್ಪ ಸೂಕ್ಷ್ಮವಾಗಿ ಓದಿದರೆ ಅನೇಕ ವಿಮರ್ಶೆಗಳಲ್ಲಿ ಇಂಥ ಅಂಶಗಳು ಬರೆದ ಲೇಖಕನಿಗೇಕೆ, ನಮಗೂ ಕಾಣತೊಡಗುತ್ತವೆ.

ಓದುಗರಿಗೆ ಏನು ಲಾಭ ಇತ್ಯಾದಿ ಬೇಡ, ಅಂಥ ಲಾಭ ಇರುವುದೇ ಅನುಮಾನಾಸ್ಪದವಾದುದರಿಂದ ಅದನ್ನು ಬಿಟ್ಟು ಬಿಡಿ. ಅವರು ಆಗಲೇ ಪುಸ್ತಕ ಕೊಂಡಿದ್ದರೆ ಅಥವಾ ಅವರಿಗೆ ಪುಗಸಟ್ಟೆ ಲಭಿಸಿದ್ದರೆ, ಓದುವ ಸಾಧ್ಯತೆ ಹೆಚ್ಚು. ಕೊಳ್ಳುವವರೇ ಅಗಿದ್ದರೆ ವಿಪರೀತ ಓದುಗರ ಪ್ರತಿಸ್ಪಂದನಕ್ಕೆ ಕಾಯುವುದಿಲ್ಲ. ಅಥವಾ ಅಸಹ್ಯ ಹುಟ್ಟಿಸುವ ಹೈಪ್‌ನಿಂದ ಬೇಡ ಈ ಪುಸ್ತಕ ಅಂದುಕೊಳ್ಳಲೂ ಬಹುದು. ಅನೇಕರು ಸ್ವಲ್ಪ ಅತಿ ಪ್ರಚಾರ ಪಡೆದುಕೊಳ್ಳುವ ಕೃತಿಗಳ ಬಗ್ಗೆ ಅಲರ್ಜಿ ಬೆಳೆಸಿಕೊಂಡಿರುತ್ತಾರೆ.

ಆದರೆ, ಪ್ಯೂರ್ ಓದುಗರಲ್ಲದ (ಓದಿದ್ದರ ಬಗ್ಗೆ ಬರೆದು ಪುರಾವೆ ಕೊಡುವ ಕೆಲಸಕ್ಕೆ ಹೋಗದ, ಬರೀ ಮನಸ್ಸಂತೋಷಕ್ಕಾಗಿ ಓದುವವರು ಪ್ಯೂರ್ ಓದುಗರು ಎನ್ನುವ ಅರ್ಥದಲ್ಲಿ), ಸ್ವತಃ ಸಾಹಿತಿಯಲ್ಲದಿದ್ದರೂ (ಆಗಿದ್ದರೂ ಖಂಡಿತವಾಗಿ ವಿಮರ್ಶಕರಲ್ಲದ), ಆದರೆ ಸಾಹಿತ್ಯ ಕ್ಷೇತ್ರದ ಆಗುಹೋಗುಗಳನ್ನು ನಿಕಟವಾಗಿ ಬಲ್ಲವರಿಗೆ ಒಂದು ಲಾಭವಿದೆ. ಅವರು ಒಂದು ಕೃತಿಯ ಬಗ್ಗೆ ತುಂಬ ಮಂದಿ ಗದ್ದಲ ಎಬ್ಬಿಸತೊಡಗಿದ್ದೇ ಒಂದು ಕೋಷ್ಟಕ ತಯಾರಿಸುತ್ತಾರೆ. ಅದರಲ್ಲಿ ಪರಸ್ಪರ ಬೆನ್ನು ತಟ್ಟಿಕೊಂಡ ಲೇಖಕರು ಯಾರು ಎನ್ನುವುದನ್ನು ಗುರುತಿಸುತ್ತಾರೆ. ಇದು ತುಂಬ ಮಜಾ ಕೊಡುವಂತಿರುತ್ತದೆ. ಹಾಗೆ ನೀನನಗಿದ್ದರೆ ನಾನಿನಗೆ ತತ್ವವನ್ನು ತತ್ವಶಃ ಆಚರಿಸಿಕೊಂಡು ಬಂದಿರುವ ಸಾಹಿತಿಗಳೂ ನಮ್ಮಲ್ಲಿ ಸಾಕಷ್ಟಿದ್ದಾರೆ. ಹಾಗೆ ಒಂದು ತೃಪ್ತಿಕರ ಮಟ್ಟದ ಕೋಷ್ಟಕ ತಯಾರಾದ ಮೇಲೆ ಅದರ ಆಧಾರದ ಮೇಲೆ ಅವರು ಲಂಚ ಕೊಟ್ಟವರನ್ನೂ ಪಡೆದವರನ್ನೂ ತೂಗುತ್ತಾರೆ. ಯಥಾವಕಾಶ ಈ ಒಂದು "ಸಾಕ್ಷ್ಯಾಧಾರ ಸಮೇತ ದಾಳಿ" ಗೆ ತಯಾರಾಗುತ್ತಾರೆ.

ಈ ಕಾರಣಕ್ಕಾಗಿಯೇ ಕೆಲವರು ಬರೆಯಬೇಕೆನಿಸಿದರೂ ಬರೆಯದೇ ತಡೆದುಕೊಂಡಿರುತ್ತಾರೆ ಎನ್ನುವುದೂ ನಿಜವೇ. ಅಥವಾ ತಮ್ಮ ಕೃತಿಯ ಬಗ್ಗೆ ಬರೆದವರ ಕುರಿತು ಲೇಖಕನಿಗೆ ಏನಾದರೂ ಹೇಳುವುದಿದ್ದರೆ, ಅವನೂ ಅದನ್ನು ಸ್ವಲ್ಪಕಾಲದ ಮಟ್ಟಿಗೆ ಮುಂದೂಡಿ ಈ ಕೋಷ್ಟಕದಲ್ಲಿ ಕಾಣಿಸಿಕೊಳ್ಳದೇ ಇರಲು ಕೈಲಾದ ಪ್ರಯತ್ನವನ್ನು ಮಾಡುತ್ತಾನೆ. ಇದಕ್ಕೆ ಪೊಲಿಟಿಕಲಿ ಕರೆಕ್ಟ್ ಆಗಿರುವುದು ಎನ್ನುತ್ತಾರೆ.

ನಿಜ ಏನೆಂದರೆ, ಇವತ್ತು ಯಾರು ಏನು ಓದುತ್ತಾರೆ, ಏನನ್ನುಓದುವುದಿಲ್ಲ ಎನ್ನುವ ಸಂಗತಿಯನ್ನು ನಿರ್ಧರಿಸುವ ಅಂಶಗಳು ಯಾವುವು ಎಂದು ಹೇಳುವುದು ತುಂಬ ಕಷ್ಟ. ಇಷ್ಟಪಟ್ಟು ಓದಿದರೇ, ಉಪಾಯವಿಲ್ಲದೇ ಓದಿದರೇ ಎನ್ನುವುದು ಅವರವರಿಗಷ್ಟೇ ಗೊತ್ತಿರುವ ಸತ್ಯ. ಆಮೇಲೆ ಯಾಕೆ ಬರೆಯುತ್ತಾರೆ, ಯಾಕೆ ಬರೆಯುವುದಿಲ್ಲ ಎನ್ನುವ ಸಂಗತಿಯಂತೂ ಮತ್ತಷ್ಟು ಸಂಕೀರ್ಣ ಪ್ರಶ್ನೆ.

ಇಷ್ಟರ ಮೇಲೆ, ನಾನು ಬರೆದ ಕೃತಿ ಪರಿಚಯ, ಮುನ್ನುಡಿ, ಬೆನ್ನುಡಿ, ವಿಮರ್ಶೆ, ಬ್ಲಾಗ್ ಬರಹ ಮುಂತಾದ, ಪುಸ್ತಕಗಳಿಗೆ ಸಂಬಂಧಿಸಿದ ಎಲ್ಲ ಬರವಣಿಗೆಯೂ ಸೇರಿ ಎಲ್ಲರೂ ಬರೆದ/ಬರೆವ ಇಂಥವೇ ಬರಹಗಳ ಬಗ್ಗೆಯೂ ಹೇಳಬಹುದಾದ ಒಂದು ಮಾತೆಂದರೆ, ನಮಗೆ ನಾವೇ ಹೇಳಿಕೊಂಡಂತಿರುವ ಕೆಲವೇ ಕೆಲವು ಮಾತುಗಳನ್ನು ಬಿಟ್ಟರೆ, ಉಳಿದಂತೆ ಆಡುವ ಯಾವತ್ತೂ ಮಾತುಗಳು ತೋರಿಕೆಯವು. ಯಾವ ಬೇಡಿಕೆ/ಒತ್ತಡ ಏನೂ ಇಲ್ಲದೇ ಇದ್ದರೆ ಬಹುಶಃ ಬರೆಯಲ್ಪಡುತ್ತಲೇ ಇರಲಿಲ್ಲ. ಒಂದು ಪುಸ್ತಕ ಓದಿದ ಮೇಲೆ ಅದರ ಬಗ್ಗೆ ಬರೆಯಬೇಕು ಅನಿಸುವುದೇ, ಅದನ್ನು ಪೂರ್ತಿಯಾಗಿ ದಕ್ಕಿಸಿಕೊಳ್ಳುವ, ಓದುವಾಗಲೇ ದಕ್ಕದೇ ಹೋದುದನ್ನು ಕಂಡುಕೊಳ್ಳುವ ಉದ್ದೇಶದಿಂದ. ಅದರಲ್ಲಿ ವಿಶೇಷವಿದೆ, ಬೇರೆಯವರಿಗೂ ತಿಳಿಯಬೇಕಾದ್ದು ಇದೆ ಅನಿಸಿದರೆ ಅದನ್ನು ಸಾರ್ವಜನಿಕಗೊಳಿಸಬಹುದು. ಬೇಡ ಎಂದು ಸುಮ್ಮನಿರಲೂ ಬಹುದು. ಎರಡೂ ಸಂದರ್ಭದಲ್ಲಿ ಒಂದು ಕೃತಿಗೆ ಅದರಿಂದ ಲಾಭವೂ ಇಲ್ಲ ನಷ್ಟವೂ ಇಲ್ಲ.

ಕಾ ಕಾ ಎಂದು ಕರ್ಕಶವಾಗಿ ಕೂಗುವ ಕಾಗೆಗೆ, ಹಾದಿಗೆ ಅಡ್ಡ ಬರುವ ಬೆಕ್ಕಿಗೆ ತಾನು ಮಾಡುತ್ತಿರುವುದು ಶಕುನವಾದೀತೆಂದು ಗೊತ್ತಿರುವುದಿಲ್ಲ. ಅದನ್ನೆಲ್ಲ ಶಕುನ ಮಾಡಿದ ಶಕುನಿಗಳು ನಾವು.

MORE FEATURES

‘ಕಾವ್ಯ ಕವಿಯ ಆಶಯಗಳನ್ನೂ ಮೀರಿದ್ದು...

16-01-2021 ಬೆಂಗಳೂರು

ಕವಿ ಡಾ.ಆರನಕಟ್ಟೆ ರಂಗನಾಥ ಅವರ ಕವನ ಸಂಕಲನ ‘ಕಾರುಣ್ಯದ ಮೋಹಕ ನವಿಲುಗಳೆ ' ಕೃತಿ ಬಿಡುಗಡೆಗೆ ಸಿದ್ಧವಾಗಿದೆ....

ಕಾಲ ಸಂವೇದನೆಗಳ ಸಶಕ್ತ ಕವಿತೆಗಳು ‘...

11-01-2021 .

ಪ್ರತಿ ಸಂಗತಿಯನ್ನು ಸೂಕ್ಷ್ಮವಾಗಿ ಗ್ರಹಿಸಿ, ವಸ್ತುಸ್ಥಿತಿಯನ್ನು ಅರಿತು ಧನಾತ್ಮಕವಾಗಿ ಕಾಣುವ ಗುಣದ ಕಾವ್ಯಗಳನ್ನು ಹೆಣೆ...

ಕವಿತೆಗೆ ಹೊಸನುಡಿ: ಲೂಯಿಸ್ ಗ್ಲಿಕ್...

09-01-2021 ಬೆಂಗಳೂರು

ಕಾವ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಅಮೆರಿಕಾದ ಕವಯತ್ರಿ ಲೂಯಿಸ್ ಗ್ಲಿಕ್ ಅವರ ಕವಿತೆಗಳನ್ನು ಕವಯತ್ರಿ ಜ.ನಾ. ತೇಜಶ್ರ...

Comments