ಪೌರಾಣಿಕ ಸಂಗತಿಗಳಲ್ಲಿ ಪ್ರಕೃತಿಯ ರಹಸ್ಯಗಳು ಅಡಗಿವೆ: ಲಕ್ಷ್ಮೀಶ ತೋಳ್ಪಾಡಿ 

Date: 22-02-2021

Location: ಬೆಂಗಳೂರು


ಪ್ರಕೃತಿಯ ರಹಸ್ಯಗಳು ಮಾನವನ ‘ಅಹಂ’ಗೆ ಸವಾಲು ಒಡ್ಡುತ್ತವೆ. ಇಂತಹ ರಹಸ್ಯಗಳು ಪೌರಾಣಿಕ ಸಂಗತಿಗಳಲ್ಲಿ ಅಡಗಿವೆ ಎಂದು ಬಹುಮುಖಿ ವಿದ್ವಾಂಸ, ಖ್ಯಾತ ವಿಮರ್ಶಕ ಡಾ. ಲಕ್ಷ್ಮೀಶ ತೋಳ್ಪಾಡಿ ಅವರು ಹೇಳಿದರು.

ಬೆಂಗಳೂರಿನ ಭಾರತೀಯ ವಿದ್ಯಾಭವನ ಹಾಗೂ ವಿನಾಯಕ ಗೋಕಾಕ್ ವಾಙ್ಞಯ ಟ್ರಸ್ಟ್ ಸಂಯುಕ್ತವಾಗಿ ಸೋಮವಾರ ಭಾರತೀಯ ವಿದ್ಯಾಭವನದಲ್ಲಿ ನೀಡಲಾದ ‘2020ರ ವಿ.ಕೃ. ಗೋಕಾಕ್ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ಉಪನಿಷತ್ತು ಎಂದರೆ ರಹಸ್ಯವೇ. ಪ್ರಕೃತಿ ಅಥವಾ ನಿಸರ್ಗದ ರಹಸ್ಯಗಳನ್ನು ತಿಳಿಯಲು ಉಪನಿಷತ್ತುಗಳು ಇವೆ. ನೈಜ ಅರ್ಥದಲ್ಲಿ, ರಹಸ್ಯಗಳು ಮನುಷ್ಯನ ‘ಅಹಂ’ಗೆ ಸವಾಲು ಒಡ್ಡುತ್ತವೆ. ಈ ಸವಾಲುಗಳನ್ನು ಭೇದಿಸಬೇಕು. ರಹಸ್ಯದ ಅನುಭವವಾಗುವತನಕ ಅದನ್ನು ಭೇದಿಸಲಾಗದು ಎಂದು ಹೇಳಿದರು.

ಕಡಲಿನಲ್ಲಿ ಮತ್ಸ್ಯಾವತಾರದ ಸೃಷ್ಟಿಯಾಯಿತು ಎಂಬುದು ಪೌರಾಣಿಕ ಸಂಗತಿ. ಜೀವಿಗಳು ಮೊದಲು ಹುಟ್ಟಿದ್ದು ನೀರಿನಲ್ಲಿ ಎಂದು ವಿಜ್ಞಾನ ಹೇಳುತ್ತದೆ. ಈ ಬಗ್ಗೆ, 1967ರಲ್ಲಿ ನಡೆದ ಸಮಾರಂಭವೊಂದರಲ್ಲಿ ವಿ.ಕೃ. ಗೋಕಾಕ್ ಅವರು ತಮ್ಮ ಉಪನ್ಯಾಸಗಳಲ್ಲಿ ಚರ್ಚಿಸಿದ್ದರು. ಈ ಕುರಿತು, ನನ್ನಲ್ಲಿ ಕುತೂಹಲ ಹೆಚ್ಚಿಸಿತ್ತು. ಅಂದಿನಿಂದ, ತಾವು ಅವರ ಚಿಂತನೆಗಳಿಂದ ಪ್ರೇರಿತನಾದ ವ್ಯಕ್ತಿ ಎಂದು ವಿ.ಕೆ. ಗೋಕಾಕ್ ಅವರ ವ್ಯಕ್ತಿತ್ವವನ್ನು ಪ್ರಶಂಸಿಸಿದರು.

ರಹಸ್ಯ ಅನುಭವಿಸುವ ಸಾಮರ್ಥ್ಯ: ನೈಜ ಅರಿವು ಎಂದರೆ ಪ್ರಕೃತಿಯ ರಹಸ್ಯಗಳನ್ನು ಅನುಭವಿಸಬೇಕು. ಅರಿವಿನ ಮೂಲ ಎಂದರೆ ರಹಸ್ಯವನ್ನು ಭೇದಿಸುವುದೇ ಆಗಿದೆ. ಇಂತಹ ಸಂಗತಿಗಳನ್ನು ಪೌರಾಣಿಕ ಕಥೆಗಳಲ್ಲಿ ಕಾಣಬಹುದು. ಮನುಷ್ಯನಿಗೆ ಆಶ್ಚರ್ಯಾನುಭವ ಆಗಬೇಕು. ಪೂರ್ಣ ಅರ್ಥವಾದರೆ ಅಲ್ಲಿ ರಹಸ್ಯ ಎಂಬುದು ಇರುವುದಿಲ್ಲ. ಅರೆಬರೆ ಅರ್ಥವಾದರೆ ಅದು ತಿಳಿವು ಅಲ್ಲ. ಈ ಮಧ್ಯೆ ಇರಬಹುದಾದ ‘ಅರ್ಥನಿಮಿಲಿತ’ ಎಂಬ ಜ್ಞಾನ ಕೋಶವಿದೆ. ಅದನ್ನು ತಿಳಿಯಬೇಕು. ವೇದ-ಉಪನಿಷತ್ತುಗಳು, ಪೌರಾಣಿಕ ಸಂಗತಿಗಳು ಇಂತಹ ರಹಸ್ಯಗಳನ್ನು ಭೇದಿಸುವ ಜ್ಞಾನದ ಸೆಲೆಗಳು ಎಂದು ಹೇಳಿದರು.

ಪುನರುಕ್ತಿ ಮೂಲ ಅರ್ಥದ ಸೂಚಕ: ಪುನರುಕ್ತಿ ಎಂದರೆ ಮತ್ತೆ ಮತ್ತೆ ಹೇಳುವುದು ಎಂದಲ್ಲ. ಅದು ಬೇಸರ ಹುಟ್ಟಿಸುವ ಪದವಲ್ಲ; ಪುನರುಕ್ತಿ ಎಂದರೆ ಮೂಲವನ್ನು ಸೂಚಿಸುವ ಜ್ಞಾನ. ಶಿಕ್ಷಣವು ನೈಜ ಅರ್ಥದಲ್ಲಿ ಪುನರುಕ್ತಿಯೇ ಆಗಿದೆ. ಯಾವುದೇ ಜ್ಞಾನವನ್ನು ಅದರ ಮೂಲದೊಂದಿಗೆ ಕಲಿಯಬೇಕು. ಕಲಿಯುವ ಇಂತಹ ನೈಜ ಮಾರ್ಗವೇ ಶಿಕ್ಷಣವಾಗಿದೆ. ಇಂತಹ ಶಿಕ್ಷಣವು ಸೃಷ್ಟಿಶೀಲವೂ, ಲಯಶೀಲವೂ ಆಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಮಣ್ಯ ಅಧ್ಯಕ್ಷತೆ ವಹಿಸಿ ‘ತೋಳ್ಪಾಡಿ ಅವರ ವ್ಯಕ್ತಿತ್ವದಲ್ಲೇ ಸಾವಧಾನದ-ವ್ಯವಧಾನದ ಲಯವಿದೆ. ಇಂದಿನ ವೇಗದ ಬದುಕಿಗೆ ಸಮರ್ಥವಾಗಿ ಉತ್ತರ ನೀಡುತ್ತದೆ. ಅವರದ್ದು ಧ್ಯಾನಸ್ಥ ಮನಸ್ಸು ಎಂದು ಪ್ರಶಂಸಿಸಿದರು.

ಟ್ರಸ್ಟ್ ಕಾರ್ಯದರ್ಶಿ ಅನಿಲ್ ಗೋಕಾಕ್ ಅವರು ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಅವರಿಗೆ 2020ರ ವಿ.ಕೃ. ಗೋಕಾಕ್ ಪ್ರಶಸ್ತಿ ನೀಡಿ ಗೌರವಿಸಿದರು. ಭಾರತೀಯ ವಿದ್ಯಾಭವನ ನಿರ್ದೇಶಕ ಎಚ್.ಎನ್. ಸುರೇಶ್, ಅಭಿನವ ಪ್ರಕಾಶನದ ನ. ರವಿಕುಮಾರ್‌, ಪರಿಸರ ತಜ್ಙ ನಾಗೇಶ್ ಹೆಗಡೆ, ಮನೋ ವಿಜ್ಞಾನಿ ‌ಎಂ. ‌ಬಸವಣ್ಣ,‌ ಕವಿ ಪಿ.‌ಚಂದ್ರಿಕಾ, ಲೇಖಕಿ ರಜನಿ ‌ನರಹಳ್ಳಿ, ಪತ್ರಕರ್ತ ದೇವು ಪತ್ತಾರ ಸೇರಿದಂತೆ ಸಾಹಿತ್ಯಾಸಕ್ತರಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...