ಪ್ರಭುತ್ವದ ವಾಗಸ್ತ್ರಗಳು: ವಾಗ್ದಾಳಿ ಮತ್ತು ವಾಗಾಡಂಬರ

Date: 14-01-2021

Location: .


‘ರಾಜಕೀಯ ಭಿನ್ನಮತ’ ವ್ಯಕ್ತಪಡಿಸುವವರನ್ನು ಪ್ರಭುತ್ವವು ತನ್ನ ವಾಗ್ದಾಳಿಗಳ ಮೂಲಕ ದಮನ ಮಾಡಲು ಹಾಗೂ ಅವರ ಮೇಲೆ ದೈಹಿಕ ದಾಳಿಗಳಿಗೆ ವೇದಿಕೆ ಸಜ್ಜುಗೊಳಿಸುತ್ತದೆ. ಇದೇ ನೀತಿಯನ್ನು ಪ್ರಸ್ತುತ ರೈತರ ಹೋರಾಟದಲ್ಲೂ ಆಳುವ ವರ್ಗ ಅನುಸರಿಸುತ್ತಿದ್ದು, ವ್ಯವಸ್ಥಿತವಾಗಿ ಹೇಗೆ ಸುಳ್ಳಿನ ಕಟ್ಟನ್ನು ಹೆಣೆದು ಬಿತ್ತುತ್ತದೆ ಎಂಬುದನ್ನು ಲೇಖಕ-ವಿಮರ್ಶಕ ರಂಗನಾಥ ಕಂಟನಕುಂಟೆ ಅವರು ತಮ್ಮ ಇಂದಿನ ‘ಮಾತಿನ ಮರೆ’ ಅಂಕಣದಲ್ಲಿ ವಿಸ್ತೃತವಾಗಿ ವಿಶ್ಲೇಷಿಸಿದ್ದಾರೆ.

ಸುಳ್ಕಟ್ಟುಗಳು

ಅ. ಕೃಶಿ ನೀತಿಗಳನ್ನು ರೈತರ ’ಉದ್ದಾರ’ಕ್ಕಾಗಿಯೇ ರೂಪಿಸಲಾಗಿದೆ ಎಂದು ಆಳುವ ಕೇಂದ್ರ ಸರ್ಕಾರ ಹೇಳುತ್ತಿದೆ. ಕೃಶಿ ಕಾಯ್ದೆಗಳನ್ನು ರೈತರ ಸಬಲೀಕರಣ, ಸೇವೆ ಮತ್ತು ರಕ್ಶಣೆಯ ಹೆಸರಿನಲ್ಲಿಯೇ ರೂಪಿಸಲಾಗಿದೆ. ಇದೇ ರೀತಿಯಲ್ಲಿ ಇತರೆ ಅನೇಕ ಕಾಯ್ದೆ-ನೀತಿಗಳನ್ನು ಜನರ ಒಳಿತಿಗೆ, ಅಭಿವೃದ್ಧಿಗೆ ಜಾರಿಗೆ ತರಲಾಗಿದೆ ಮತ್ತು ಮುಂದೆ ತರಲಾಗುವುದು ಎಂದೇ ಹೇಳಲಾಗುತ್ತದೆ. ಹಿಂದಿನ ಸರ್‍ಕಾರಗಳೂ ಹೀಗೆ ಹೇಳುತ್ತಿದ್ದವು. ಆದರೆ ಈ ’ಉದ್ದಾರ’ದ ಭಾಶೆ ನಿಜಕ್ಕೂ ಪ್ರಾಮಾಣಿಕವಾದುದೇ? ರೈತರ ಹಿತಾಸಕ್ತಿಯನ್ನು ಕಾಪಾಡುತ್ತದೆಯೇ?

ಆ. ಕೃಶಿನೀತಿಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು ಮತ್ತು ಪ್ರಜ್ಞಾವಂತರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಖಲಿಸ್ತಾನಿಗಳು, ಪಾಕಿಸ್ತಾನಿಗಳು, ಅರ್‍ಬನ್ ನಕ್ಸಲರು, ಮಾವೋವಾದಿಗಳು ಇತ್ಯಾದಿಯಾಗಿ ಆಳುವವರು ಮತ್ತು ಅವರ ವಕ್ತಾರರು ಆರೋಪಿಸುತ್ತ ವಾಗ್ದಾಳಿ ನಡೆಸುತ್ತಿದ್ದಾರೆ. ನಿಜಕ್ಕೂ ಪ್ರತಿಭಟನಾನಿರತ ರೈತರು ಮತ್ತು ಬೆಂಬಲಿಗರು ಭಯೋತ್ಪಾದಕರೇ?

ಇ. ಪ್ರಭುತ್ವದ ದುರಾಡಳಿತವನ್ನು ಪ್ರಶ್ನಿಸುವವರು ಮತ್ತು ವಿರೋಧಿಸುವವರನ್ನು ಹಾಗೂ ವಿರೋಧ ಪಕ್ಶಗಳನ್ನು ’ತುಕಡೆ ಗ್ಯಾಂಗ್’ ಎಂದು ಇಂದಿನ ಆಳುವವರು ಕರೆಯುತ್ತಿದ್ದಾರೆ. ಹಾಗೆ ಕರೆಯುವ ವ್ಯಕ್ತಿಗಳು ಸಾಮಾನ್ಯ ಜನರಲ್ಲ. ಒಂದು ಬಲಿಶ್ಟ ಪಕ್ಶದ ಅಧಿನಾಯಕರು. ಮತ್ತು ವಿರೋಧ ಪಕ್ಶಗಳ ನಾಯಕರು ಕೂಡ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳೇ. ಹಾಗಾದರೆ ತುಕಡೆ ಗ್ಯಾಂಗ್ ಎಂದು ಯಾಕೆ ಬ್ರಾಂಡ್ ಮಾಡಲಾಗುತ್ತಿದೆ. ನಿಜಕ್ಕೂ ‘ತುಕಡೆ ಗ್ಯಾಂಗ್’ನ ಅಕ್ರಮ ರಾಜಕಾರಣ ಯಾರದು? ತುಕಡೆ ಗ್ಯಾಂಗ್ ಎನ್ನುವ ನುಡಿಗಟ್ಟಿನ ಅರ್ಥವೇನು?

ಈ. ‘ಬಲಿಶ್ಟ’ ಅಧಿನಾಯಕನ, ಸರ್ಕಾರದ ‘ಮುಖ್ಯಸ್ಥ’ರ ನಡಾವಳಿಗಳನ್ನು ನೀತಿ ನಿರೂಪಣೆಗಳನ್ನು ವಿಮರ್ಶೆ ಮಾಡುವ ವಿರೋಧಿಸುವ ಜನರನ್ನು ’ದೇಶದ್ರೋಹಿಗಳು’ ಎಂದು ಕರೆಯಲಾಗುತ್ತಿದೆ. ನಿರಂತರವಾಗಿ ಅನ್ಯಾಯ ದೌರ್‍ಜನ್ಯ ನಡೆಸುವ ಪ್ರಭುತ್ವವನ್ನು ವಿರೋಧಿಸುವವರ ಮೇಲೆ ‘ದೇಶದ್ರೋಹ’ದ ಆರೋಪ ಹೊರಿಸುವುದರ ಉದ್ದೇಶ ಮತ್ತು ಪರಿಣಾಮವೇನು?

ಇಲ್ಲಿ ಆಳುವವರ ಇಂತಹ ಕೆಲವು ಸುಳ್ಕಟ್ಟು (ಫಾಲ್ಸ್ ನರೇಟಿವ್ಸ್, ಫಾಲ್ಸ್ ರೆಟರಿಕ್ಸ್, ಫಾಲ್ಸ್ ಐಡಿಯಾ ಇತ್ಯಾದಿ)ಗಳನ್ನು ಪರಿಶೀಲಿಸಲು ಪ್ರಯತ್ನಿಸಲಾಗಿದೆ.

ವಾಗಸ್ತ್ರಗಳು

ಈ ಮೇಲಿನ ಸಂಗತಿಗಳಲ್ಲಿ ಎರಡು ಪ್ರಮುಖ ಅಂಶಗಳು ಸ್ಪಶ್ಟವಾಗಿವೆ. ಒಂದು, ಪ್ರಭುತ್ವ ತನ್ನ ಎದುರಾಳಿಗಳನ್ನು ವಾಗ್ದಾಳಿಗಳ ಮೂಲಕ ದಮನ ಮಾಡುವುದು ಮತ್ತು ಅವರ ಮೇಲೆ ದೈಹಿಕ ದಾಳಿಗಳಿಗೆ ವೇದಿಕೆ ಸಜ್ಜುಗೊಳಿಸುವುದು. ದೇಶದ್ರೋಹ, ಭಯೋತ್ಪಾದನೆ ಮತ್ತು ತುಕಡೆ ಗ್ಯಾಂಗ್‌ನ ಆರೋಪದ ಹಿಂದೆ ಇಂತಹ ಉದ್ದೇಶವಿರುವುದು ಎದ್ದು ಕಾಣುತ್ತದೆ. ಎರಡು. ಹೀಗೆ ದಮನ ಮಾಡುವುದನ್ನು ಸಮರ್ಥಿಸಿಕೊಳ್ಳಲು ಅಭಿವೃದ್ಧಿ, ಧರ್ಮ, ದೇಶಭಕ್ತಿ ಮತ್ತು ಏಕರಾಶ್ಟ್ರ-ಏಕಭಾಶೆಯ ‘ಮುಸುಕು ಕಲ್ಪನೆ’ಗಳನ್ನು ಜನರ ಮುಂದಿಟ್ಟು ಅವರನ್ನು ನಂಬಿಸುವುದು. ಜನರು ಅಧಿನಾಯಕರ ವಾಗಾಡಂಬರವನ್ನು ತಲ್ಲೀನವಾಗಿ ಕೇಳಿ ಆನಂದಿಸಿ ಜೈಕಾರ ಹಾಕಿ ನಂಬಿ ಅದನ್ನು ಬೆಂಬಲಿಸುವುದು. ಅಂದರೆ ಇಲ್ಲಿ ವಾಗ್ದಾಳಿಯ ಮೂಲಕ ಭಿನ್ನಮತೀಯರನ್ನು ಹತ್ತಿಕ್ಕುವುದು ಮತ್ತು ವಾಗಾಡಂಬರಗಳ ಮೂಲಕ ಜನರನ್ನು ನಂಬಿಸಿ ಆಲೋಚನಾ ಶಕ್ತಿಯನ್ನು ಕೊಂದು ಅವರನ್ನು ನಾಶ ಮಾಡುವುದು ಉದ್ದೇಶವಾಗಿರುತ್ತದೆ. ಇದರಲ್ಲಿ ಒಂದು ಸಣ್ಣ ಆಳುವ ವರ್‍ಗ ಮಾತ್ರ ಸ್ವರ್‍ಗೀಯ ಸುಖವನ್ನು ಅನುಭವಿಸುತ್ತದೆ. ಆದರೆ ಅದನ್ನು ಮುಕ್ತವಾಗಿ ಹೇಳುವುದಿಲ್ಲ; ಬದಲಿಗೆ ನಗ್ನವಾಗಿ ಆಚರಿಸಲಾಗುತ್ತದೆ. ಇಂತಹ ನಗ್ನ ಆಚರಣೆಗೆ ಬಳಕೆಯಾಗುತ್ತಿರುವ ಪ್ರಬಲ ಆಯುಧವೆಂದರೆ ಭಾಶೆ. ಅಂದರೆ ದೇಶದ ಜನರ ಮನಸ್ಸನ್ನು ಆಳುವವರ ಉದ್ದೇಶಕ್ಕೆ ತಕ್ಕಂತೆ ತಿದ್ದುತ್ತಿರುವುದೇ ವಾಗಾಡಂಬರದ ಭಾಶೆಯ ಮುಖ್ಯ ಉದ್ದೇಶ. ಇಂತಹ ಆಕ್ರಮಣಕಾರಿ ಮತ್ತು ಮುಸುಕು ಭಾಶೆಯನ್ನು ಬಳಸಿ ಪ್ರಭುತ್ವ ತನ್ನ ಬೆತ್ತಲಾಟ ಆಡುತ್ತಿದ್ದರೆ, ಅದರ ಬೆಂಬಲಿಗರು ಭಕ್ತಿಯಿಂದ ಮೆಚ್ಚಿಕೊಳ್ಳುತ್ತಾರೆ ಮತ್ತು ಉನ್ಮಾದದಲಿ ಜೈಕಾರವನ್ನೂ ಹಾಕುತ್ತಾರೆ! ಅಂದರೆ ಇಲ್ಲಿ ಆಳುವವರ ವಂಚನೆಯನ್ನು ಜನರು ಅರಿತುಕೊಳ್ಳುವಲ್ಲಿ ಸೋಲುತ್ತಾರೆ. ಇದೇ ಪ್ರಭುತ್ವದ ರಕ್ಶಕ ಮಂತ್ರಶಕ್ತಿ!

ಆದರೆ ಮೇಲೆ ಉಲ್ಲೇಖಿಸಿದ ಪ್ರಭುತ್ವದ ಆರೋಪಗಳಲ್ಲಿ, ವಾದಗಳಲ್ಲಿ ಹುರುಳಿದೆಯೇ? ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಿಕೊಳ್ಳೋಣ. ಕೃಶಿ ನೀತಿಗಳನ್ನು ಸರ್‍ಕಾರ ಹಟಕ್ಕೆ ಬಿದ್ದು ಸಮರ್ಥಿಸಿಕೊಳ್ಳುತ್ತಿದೆ. ಅದರ ವಾದವೆಂದರೆ ಇದುವರೆಗೂ ರೈತರಿಗೆ ಮಾರುಕಟ್ಟೆಯಲ್ಲಿ ಸ್ವತಂತ್ರವಿಲ್ಲದೆ ಅವರು ನಶ್ಟ ಅನುಭವಿಸುತ್ತಿದ್ದರು. ಈಗ ಅವರು ತಮ್ಮ ಪದಾರ್ಥಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಅದರಿಂದ ರೈತರು ಹೆಚ್ಚು ಲಾಭಗಳಿಸಲು ಸಾಧ್ಯವಿದೆ ಎಂಬ ವಾದವನ್ನು ಮುಂದಿಡುತ್ತಿದೆ. ಸುಧಾರಿತ ಕಾಯ್ದೆಗಳಿಂದ ದಲ್ಲಾಳಿಗಳ ಹಾವಳಿ ತಪ್ಪಿಸಿ ರೈತರ ಲಾಭ ಹೆಚ್ಚಿಸಲಾಗುವುದು ಎನ್ನುತ್ತಿದೆ. ಇಲ್ಲಿ ಲಾಭ, ಸ್ವಾತಂತ್ರ್ಯ, ಬಿಡುಗಡೆ ಇತ್ಯಾದಿ ಬಣ್ಣನೆಯ ಪದಗಳನ್ನು ಬಳಸುವ ಮೂಲಕ ಕಾಯ್ದೆಗಳಲ್ಲಿ ಬಹಳ ಕ್ರಾಂತಿಕಾರಕ ಸುಧಾರಣೆಯ ವಿಚಾರಗಳಿವೆ ಎಂಬ ವಾದ ಮುಂದಿಡಲಾಗುತ್ತಿದೆ. ಅಂದರೆ ಯಾವುದೇ ವಾದವನ್ನು ಮುಂದಿಡಲು ಸದ್ಯಕ್ಕೆ ಸಾಧ್ಯವಿರುವುದು ಭಾಶೆಯೆಂಬ ಸಾಧನಕ್ಕೇ ಮಾತ್ರವೇ ಆಗಿದೆ. ಅಂತಹ ಭಾಶೆಯನ್ನು ನಾಜೂಕಾಗಿ ಬಳಸಿ ಜನರನ್ನು ಮತ್ತು ಎದುರಾಳಿಗಳನ್ನು ಗೆಲ್ಲಲು ಪ್ರಯತ್ನಿಸಲಾಗುತ್ತಿದೆ. ಅಂದರೆ ‘ಏಳ್ಗೆಯ ಸುಳ್ಕಟ್ಟು’ ವಾದದ ಮೂಲಕ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಮಾಧ್ಯಮಗಳನ್ನು, ವಾಗಾಡಂಬರದ ಸುಳ್ಕಟ್ಟು ನಾಯಕರನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಹಾಗೂ ಬದಲಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಆದರೆ ಸರ್‍ಕಾರದ ಈ ವಾದ ನಿಜಕ್ಕೂ ಪ್ರಾಮಾಣಿಕವಾದುದೇ? ಎಂಬ ಪ್ರಶ್ನೆ ಇಲ್ಲಿ ಮುಖ್ಯ. ಯಾಕೆಂದರೆ ಮುಕ್ತ ಆರ್‍ಥಿಕ ನೀತಿಗಳಿಂದ ಮೊದಲುಗೊಂಡು ಇಲ್ಲಿಯವರೆಗೂ ತಂದಿರುವ ಯಾವುದೇ ಜನವಿರೋಧಿ ಕಾನೂನನ್ನೂ ಕೂಡ ಜನರ ಒಳಿತಿನ, ರಕ್ಶಣೆಯ ಮತ್ತು ಏಳ್ಗೆಯ ಹೆಸರಿನಲ್ಲಿಯೇ ತರಲಾಗಿದೆ. ಆದರೆ ಅವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಜನರಿಗೆ ವಿರುದ್ಧವಾಗಿ ಬಳಸುತ್ತ ಆಳುವ ವರ್‍ಗಕ್ಕೆ ಲಾಭ ಆಗುವಂತೆ ಜಾರಿಮಾಡಲಾಗಿದೆ. ಪ್ರಸ್ತುತ ಕೃಶಿ ಮತ್ತು ಮಾರುಕಟ್ಟೆ ’ಸುಧಾರಣೆ’ ಕಾಯ್ದೆಗಳ ಭಾಶೆಯೇ ಅಶ್ಟೇ ನಾಜೂಕಿನಿಂದ ಕೂಡಿದೆ. ರೈತರ ಸಬಲೀಕರಣ, ಸೇವೆ ಮತ್ತು ರಕ್ಶಣೆಯ ಹೆಸರಿನಲ್ಲಿಯೇ ನಿರೂಪಿಸಲಾಗಿದೆ. ಇದುವರೆಗಿನ ಅನುಭವವನ್ನು ಗಮನಿಸಿದರೆ ಯಾವ ಕಾಯ್ದೆಗಳು ರೈತರ ಹಿತಕ್ಕಿಂತ ಉದ್ಯಮಗಳ ಹಿತವನ್ನೇ ಹೆಚ್ಚು ಕಾಪಾಡಿರುವುದು. ಈ ಕೃಶಿ ಕಾಯ್ದೆಗಳೂ ಕೂಡ ಉದ್ಯಮಪತಿಗಳ ಹಿತಾಸಕ್ತಿಗಾಗಿಯೇ ರೂಪುಗೊಂಡಿರುವುದು. ಆದರೆ ಅದನ್ನು ಎಲ್ಲಿಯೂ ಮುಕ್ತವಾಗಿ ಹೇಳುವುದಿಲ್ಲ. ಆದರೆ ಅದನ್ನು ಜಾರಿಗೊಳಿಸಲಾಗುತ್ತದೆ. ಆ ಮೂಲಕ ಪುರಂದರ ದಾಸರು ಹೇಳಿದಂತೆ ’ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂಬುದನ್ನು ಸಾಬೀತು ಮಾಡುತ್ತಾರೆ. ಇದು ಇದುವರೆಗಿನ ಜನರ ಅನುಭವ. ಆದ್ದರಿಂದಲೇ ಸರ್‍ಕಾರದ ಯಾವ ಮಾತನ್ನು ಪ್ರತಿಭಟನಾನಿರತ ರೈತರು, ರೈತನಾಯಕರು, ಪ್ರಜ್ಞಾವಂತಹ ಜನರು ನಂಬುತ್ತಿಲ್ಲ. ಕೃಶಿ ಕಾಯಿದೆಗಳನ್ನು ರದ್ದು ಮಾಡುವವರೆಗೂ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಪಟ್ಟಿಗೆ ಮಣಿದರೆ ಸೋಲೊಪ್ಪಿಕೊಂಡಂತೆ ಎಂದು ಆಳುವ ಸರ್‍ಕಾರವೂ ಕಾಯಿದೆಗಳನ್ನು ಹಿಂತೆಗೆದುಕೊಳ್ಳದೆ ಹಟವಿಡಿದಿದೆ. ಹಾಗಾಗಿಯೇ ಒಂದೂವರೆ ತಿಂಗಳು ಕಳೆದರೂ ನೆತ್ತರು ಹೆಪ್ಪುಗಟ್ಟಿಸುವ ಚಳಿಯಲ್ಲಿ ದೆಹಲಿಯ ಎಲ್ಲ ಗಡಿಗಳಲ್ಲಿ ಅಹೋರಾತ್ರಿ ನಿರಶನಗಳು ನಡೆದಿವೆ. ಇದಕ್ಕೆ ದೇಶ ವಿದೇಶಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ಇಲ್ಲಿನ ಮುಖ್ಯ ತಿರುಳೆಂದರೆ ಆಳುವವರ ಮಾತು ನಂಬಿಕಾರ್ಹವಲ್ಲದ ಕಾರಣ ಹಲವು ಸುತ್ತಿನ ಮಾತುಕತೆಗಳು ಸಂಧಾನಗಳು ಸೋಲುತ್ತವೆ. ಅದರ ಪರಿಣಾಮವಾಗಿ ಪರಿಹಾರ ಸಂಕೀರ್‍ಣವಾಗುತ್ತದೆ. ತಮ್ಮ ಭೂಮಿ, ದುಡಿಮೆ, ಬದುಕು-ಭವಿಶ್ಯದ ಬಗೆಗೆ ಆತಂಕಿತರಾದ ರೈತರು ದೇಶದ ರಾಜಧಾನಿಯ ಹೆದ್ದಾರಿಗಳಲ್ಲಿ ಪ್ರತಿಭಟನೆಗೆ ಕೂರುವಂತಾಗಿದೆ. ಅಂದರೆ ಪ್ರಭುತ್ವದ ಏಳ್ಗೆಯ ವಾದಗಳಲ್ಲಿ, ಅದು ತರುವ ಕಾಯಿದೆಗಳಲ್ಲಿ ಜನರ ಹಿತ ಅಡಗಿಲ್ಲದಿರುವುದು ಮತ್ತು ಜನರು ಅದನ್ನು ನಂಬದಂತೆ ಆಗಿರುವುದು ಇಲ್ಲಿ ಸ್ಪಶ್ಟವಾಗಿ ಗೋಚರಿಸುತ್ತದೆ.

 

ಆಳುವವರ ವ್ಯವಸ್ಥಿತ ದಾಳಿ

ಇನ್ನು ಸದ್ಯದ ದೇಶದ ರಾಜಕೀಯ ಪರಿಸರವನ್ನು ಅವಲೋಕಿಸಿದರೆ ಆಳುವವರು ತಮ್ಮ ಎದುರಾಳಿಗಳ ಮೇಲೆ ವಾಗ್ಯುದ್ಧ ನಡೆಸುವುದನ್ನೇ ನೋಡಬಹುದು. ಮೇಲಿನವುಗಳಲ್ಲಿ ಎರಡು, ಮೂರು ಮತ್ತು ನಾಲ್ಕನೆಯ ಅಂಶಗಳನ್ನು ಗಮನಿಸಿದರೆ ವಾಗ್ಯುದ್ಧರೂಪಿ ಮತ್ತು ಆಕ್ರಮಣಕಾರಿ ಭಾಶೆಯನ್ನು ಬಳಸುತ್ತಿರುವುದು ಗೋಚರಿಸುತ್ತದೆ. ಇಂತಹ ಆಕ್ರಮಣಕಾರಿ ಭಾಶೆಯನ್ನು ‘ರಾಜಕೀಯ ಭಿನ್ನಮತ’ ವ್ಯಕ್ತಪಡಿಸುವವರ ಮೇಲೆ ಬಳಸುವ ಮೂಲಕ ಭಿನ್ನಮತೀಯರನ್ನು ದುರುಳೀಕರಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ಪ್ರಶ್ನಿಸುವವರನ್ನು ದೇಶದ ವಿರುದ್ಧ ‘ಸಂಚು’ ನಡೆಸುವವರು ಎಂದು ಚಿತ್ರಿಸುವ ಮೂಲಕ ಜನರಲ್ಲಿ ದ್ವೇಶದ ಭಾವನೆ ಬಿತ್ತಲಾಗುತ್ತಿದೆ. ಆ ಮೂಲಕ ಭಿನ್ನಮತೀಯರ ಬಗೆಗೆ ಜನರು ಭಯಗೊಳ್ಳುವಂತೆ ಸಂಶಯಿಸುವಂತೆ ಆಕ್ರೋಶಗೊಳ್ಳುವಂತೆ ಮಾಡುತ್ತ ಜನರನ್ನು ಅವರ ವಿರುದ್ಧ ಎತ್ತಿಕಟ್ಟಲಾಗುತ್ತದೆ. ಹಾಗಾಗಿಯೇ ಭಿನ್ನಮತೀಯರನ್ನು ದೇಶದ್ರೋಹಿಗಳು ಭಯೋತ್ಪಾದಕರು ಪಾಕಿಸ್ತಾನಿಗಳು ಅರ್ಬನ್ ನಕ್ಸಲರು ಮಾವೋವಾದಿಗಳು ಎಂದು ನಿರಂತರವಾಗಿ ಬ್ರಾಂಡ್ ಮಾಡಲಾಗುತ್ತಿದೆ. ನಿಜಕ್ಕೂ ಹೊಲಗಳಲ್ಲಿ ದುಡಿವ ದೇಶದ ರೈತರು, ಕಾರ್‍ಮಿಕರು ವಿದ್ಯಾರ್ಥಿಗಳು ಭಯೋತ್ಪಾದಕರೆ? ಅಂದರೆ ಇಂತಹ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರನ್ನು ದಿಕ್ಕೆಡಿಸುವ ಕೆಲಸ ಮಾಡಲಾಗುತ್ತದೆ. ಆದರೆ ಆರೋಪ ಮಾಡುವವರಿಗೆ ತಾವು ಮಾಡುವ ಆರೋಪ ಸುಳ್ಳೆಂದು ತಿಳಿದಿರುತ್ತದೆ. ಆದರೆ ಅದನ್ನು ನಂಬುವ ಜನರು ಮಾತ್ರ ಈ ಆರೋಪಗಳನ್ನು ನಿಜವೆಂದೇ ನಂಬುತ್ತಾರೆ. ಆರೋಪ ಮಾಡುವ ನಾಯಕರನ್ನು ‘ಧರ್ಮರಾಯ’ರೆಂದು ನಂಬುತ್ತಾರೆ. ಇದು ಗೊಬೆಲ್ಸ್ ತತ್ವದ ನಿಜವಾದ ಯಶಸ್ಸು!

ದುಡಿವ ಜನರನ್ನು ಮತ್ತು ರಾಜಕೀಯ ಭಿನ್ನಮತೀಯರನ್ನು ದೇಶದ ವಿರುದ್ಧ ಸಂಚು ನಡೆಸುವವರು ಎಂದು ಆರೋಪಿಸಿ ನಿರಂತರವಾಗಿ ಪ್ರಚಾರ ಮಾಡುತ್ತಿದ್ದರೆ ಜನರಲ್ಲಿ ಒಂದು ಬಗೆಯ ಆತಂಕ ಸೃಶ್ಟಿಯಾಗುತ್ತದೆ. ಇದೇ ಹೊತ್ತಿನಲ್ಲಿ ದೇಶಭಕ್ತಿ ದೇಶಪ್ರೇಮಗಳ ಬಗೆಗೆ ಇನ್ನಿಲ್ಲದಂತೆ ಪ್ರಚಾರ ಮಾಡುವ ಮೂಲಕ ಜನರಲ್ಲಿ ಒಂದು ಬಗೆಯ ಉನ್ಮಾದದ ಭಾವನೆ ಸೃಶ್ಟಿಸಲಾಗುತ್ತದೆ. ನಂತರ ಅಂತಹ ಭಾವನೆಗಳಿಗೆ ಮತ್ತು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಭಿನ್ನಮತೀಯರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಅವರ ವಿರುದ್ದ ಜನರನ್ನು ಎತ್ತಿಕಟ್ಟಲಾಗುತ್ತದೆ. ವಿಶೇಶವಾಗಿ ‘ಬಲಿಶ್ಟ’ ನಾಯಕರ ಹಿಂಬಾಲಕರಲ್ಲಿ ಆಕ್ರೋಶ ಮಡುಗಟ್ಟಿ ಆಕ್ರಮಣಕ್ಕಾಗಿ ಸಮಯ ಕಾಯುತ್ತಿರುತ್ತಾರೆ. ಸಮಯ ದೊರೆತರೆ ಅವರು ಸರ್‍ಕಾರದ ನೀತಿಗಳನ್ನು ವಿರೋಧಿಸುವ ಪ್ರತಿಭಟನಾನಿರತ ಜನರ ಮೇಲೆ ದಾಳಿ ಮಾಡುತ್ತಾರೆ. ಇದು ಕಳೆದ ಫೆಬ್ರವರಿ-ಮಾರ್‍ಚ್‌ನಲ್ಲಿ ದೆಹಲಿಯಲ್ಲಿ ಸಿಎಎ ವಿರುದ್ಧ ಜನರು ಪ್ರತಿಭಟನೆ ಮಾಡುವಾಗ ಅವರ ಮೇಲೆ ನಡೆದ ದಾಳಿಯನ್ನು ನೆನಪಿಸಿಕೊಂಡರೆ ಇದು ಅರ್ಥವಾಗುತ್ತದೆ.

ಹಾಗೆಯೇ ಹಲವು ರೈತ-ಕಾರ್ಮಿಕ ಚಳವಳಿಕಾರರ ಮೇಲೆಯೂ ದಾಳಿ ನಡೆದಿದೆ. ಇಂತಹ ದಾಳಿಗಳನ್ನು ಸಂಘಟಿಸಲೆಂದೇ ಇಂತಹ ಆಕ್ರಮಣಕಾರಿ ಭಾಶೆಯನ್ನು ಬಳಸಿ ಪ್ರಚಾರ ಮಾಡಲಾಗುತ್ತದೆ. ಸದ್ಯ ರೈತರ ಚಳವಳಿಯ ಮೇಲೆ ಅಂತಹ ದೈಹಿಕ ಹಲ್ಲೆಗೆ ಪ್ರಭುತ್ವ ಪಡೆ ಇನ್ನೂ ಇಳಿದಿಲ್ಲ. ತೆರೆಮರೆಯಲ್ಲಿ ಅದನ್ನು ದಮನಿಸುವ ಎಲ್ಲ ಕೆಲಸಗಳನ್ನು ಮಾಡಲಾಯಿತು. ಜಲಫಿರಂಗಿಗಳನ್ನು ಬಳಸಲಾಯಿತು. ಆದರೂ ದೈಹಿಕ ದಾಳಿಗಿಳಿದಿಲ್ಲ. ಬದಲಿಗೆ `ವಾಗ್ದಾಳಿ’ಯನ್ನು ಮುಂದುವರಿಸಿದೆ. ಅಂದರೆ ಇಂತಹ ವಾಗ್ದಾಳಿಗಳು ಮುಂದೆ ನಡೆಯಬಹುದಾದ ಭೀಕರ ದಾಳಿಗಳು, ಆಕ್ರಮಣಗಳಿಗೆ ಪೂರ್‍ವಭಾವಿಯಾಗಿ ನಡೆಸುವ ಬಹಿರಂಗ ಪ್ರಚಾರದಂತೆ ಕಾಣಿಸುತ್ತದೆ. ಇದು ನಿಜಕ್ಕೂ ಆತಂಕಕಾರಿಯಾದ ಬೆಳವಣಿಗೆ. ಅಂದರೆ ದೈಹಿಕ ದಾಳಿಗೆ ಮೊದಲು ಎಲ್ಲ ಕಾಲದಲ್ಲಿಯೂ ಪ್ರಭುತ್ವ ಪಡೆಗಳು ’ವಾಗ್ದಾಳಿ’ಗಳನ್ನು ನಡೆಸುತ್ತವೆ. ಅಮೆರಿಕ ತನ್ನ ಸಾಮ್ಯಾಜ್ಯಶಾಹಿ ದಾಳಿಗಳಿಗೆ ಮೊದಲು ತನ್ನ ಎದುರಾಳಿ ದೇಶಗಳ ಮೇಲೆ ತನ್ನ ಭಟ್ಟಂಗಿ ಮಾಧ್ಯಮಗಳ ಮೂಲಕ ಇಂತಹ ಅಪಪ್ರಚಾರವನ್ನು ನಿರಂತರವಾಗಿ ನಡೆಸುತ್ತಲೇ ಬರುತ್ತಿದೆ. ಇರಾಕ್ ಮೇಲೆ ಇಂತಹ ಆರೋಪ ಮಾಡುತ್ತಲೇ ಅಮೆರಿಕ ಅದನ್ನು ನಾಶ ಮಾಡಿತು. ಅಂದರೆ ಕೊಲ್ಲುವ ಮೊದಲು ಬಲಿಪಶುಗಳ ವಿರುದ್ಧ ಜನಾಭಿಪ್ರಾಯ ಸೃಶ್ಟಿಸಿ ತಮ್ಮ ದಾಳಿಗಳಿಗೆ ಜನಮಾನ್ಯತೆಯನ್ನು ಪಡೆಯುವ ಹುನ್ನಾರ ಇದರಲ್ಲಿರುತ್ತದೆ. ನಾಯಿಯನ್ನು ಕೊಲ್ಲುವ ಮೊದಲು ಅದಕ್ಕೆ ಹುಚ್ಚುತನದ ಪಟ್ಟ ಕಟ್ಟಿದಂತೆ!

ಆಳುವವರ ಇಂತಹ ಆಕ್ರಮಣಕಾರಿ ಭಾಶೆಯನ್ನು ಅರಿತುಕೊಂಡು ಸರಿಯಾಗಿ ಎದುರಿಸದೇ ಹೋದರೆ ಸಮಾಜ ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಇಂತಹ ಆಕ್ರಮಣಕಾರಿ ಮಾತುಗಳ ಹಿಂದೆ ಜನರ ಚರಿತ್ರೆ, ಭಾಶೆ, ಧರ್ಮ, ಆಹಾರ ಮತ್ತು ಸಂಸ್ಕೃತಿಗಳನ್ನು ನಾಶ ಮಾಡುವ ಉದ್ದೇಶವಿರುತ್ತದೆ. ಆ ಮೂಲಕ ಇಡೀ ದೇಶದ ಜನರ ಆಲೋಚನೆಯ ಕ್ರಮವನ್ನೇ ತಿರುಚಲಾಗುತ್ತಿದೆ. ತಮಗೆ ಬೇಕಾದಂತೆ ಜನರ ಮೆದುಳುಗಳನ್ನು ತಿದ್ದಲಾಗುತ್ತದೆ. ಹಾಗೆ ಮಾಡುವ ಮೂಲಕವೇ ಇಡೀ ಆಡಳಿತ ಯಂತ್ರವನ್ನು ಕೈವಶ ಮಾಡಿಕೊಳ್ಳಲಾಗುತ್ತದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗಗಳನ್ನು, ಸಂಸ್ಥೆಗಳನ್ನು ನಾಶ ಮಾಡಲಾಗುತ್ತಿದೆ. ಮೂಲಭೂತವಾಗಿ ಇದು ಆಕ್ರಮಣಕಾರಿ ಭಾಶೆಯ ಮೂಲಕ ಜನರ ಪ್ರಜ್ಞೆಯನ್ನು ವಶಪಡಿಸಿಕೊಂಡು ಅದನ್ನು ಮತಗಳಾಗಿ, ಜನಮಾನ್ಯತೆಯಾಗಿ ಪರಿವರ್‍ತಿಸಿಕೊಂಡು ಅಧಿಕಾರದ ಗದ್ದುಗೆ ಏರಲಾಗುತ್ತದೆ. ಕೃತಕ ಎದುರಾಳಿಗಳನ್ನು ಸೃಶ್ಟಿಸಿಕೊಂಡು ಅವರ ಮೇಲೆ ನಿರಂತರ ಆರೋಪ ಮಾಡುತ್ತಲೇ ಬಹುಸಂಖ್ಯಾತ ಜನರ ಪ್ರಜ್ಞೆಯನ್ನು ತಿರುಚುವುದಾಗಿರುತ್ತದೆ. ಅದಕ್ಕಾಗಿಯೇ ಇಂತಹ ಆಕ್ರಮಣಕಾರಿ ಭಾಶೆಯನ್ನು ಎಗ್ಗಿಲ್ಲದೆ ಬಳಸಲಾಗುತ್ತಿದೆ. ದುರಂತವೆಂದರೆ ಎಲ್ಲ ಬಗೆಯ ಸಂವಹನ ಮಾಧ್ಯಮಗಳು ಆಳುವವರ ಕೈಗೊಂಬೆಗಳಾಗಿ ಜನರ ಮೇಲೆ ಸಮರ ಸಾರುವಲ್ಲಿ ನಿರತವಾಗಿವೆ. ರೈತರ ನ್ಯಾಯಯುತ ಬೇಡಿಕೆಗಳನ್ನು ಚರ್‍ಚೆಗೆ ತೆಗೆದುಕೊಳ್ಳುವುದರ ಬದಲಾಗಿ ಆಳುವವರ ವಾದವನ್ನು ಪ್ರಚಾರ ಮಾಡುವಲ್ಲಿ ಮಾಧ್ಯಮಗಳು ನಿರತವಾದುದನ್ನು ಗಮನಿಸಿದರೆ ಇದು ತಿಳಿಯುತ್ತದೆ.

ಬಹಳ ಮುಖ್ಯವಾಗಿ ಆಕ್ರಮಣಕಾರಿಯಾದ ಭಾಶೆ ಪ್ರಜಾಪ್ರಭುತ್ವದ ಭಾಶೆಯಲ್ಲ. ಅದಕ್ಕೆ ಸಂವಾದದ ಗುಣವಿಲ್ಲ. ಆಲಿಸುವ ಗುಣವೂ ಇಲ್ಲ. ಜನರ ಮೇಲೆ ತಮ್ಮ ವಿಚಾರವನ್ನು ಮತ್ತು ಅಧಿಕಾರವನ್ನು ಹೇರುವ ಗುಣವಿದೆ. ಇದು ದಬ್ಬಾಳಿಕೆಯ ಸರ್ವಾಧಿಕಾರಿ ಧೋರಣೆಯ ಭಾಶೆ. ಮುಕ್ತ ಮಾತುಕತೆಗೆ ಅವಕಾಶವೇ ಇಲ್ಲದೆ ಸದಾ ಆತಂಕದಲ್ಲಿ ಬದುಕುವ ವಾತಾವರಣ ನಿರ್ಮಾಣವಾಗುತ್ತದೆ. ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಕಾಲಕಸವಾಗುತ್ತದೆ. ವಾಗ್ದಾಳಿ-ವಾಗ್ಯುದ್ಧಗಳು ನಡೆಸುವಾಗ ಅಭಿವ್ಯಕ್ತಿ ಸ್ವಾತಂತ್ರಕ್ಕೆ, ಮುಕ್ತ ಮಾತುಕತೆ ಸಂವಾದಗಳಿಗೆ ಅವಕಾಶವೇ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಮಾನವ ಹಕ್ಕುಗಳು, ಪ್ರಜಾಪ್ರಭುತ್ವವಾದಿಗಳು ಮತ್ತು ’ಸತ್ಯ’ ಪ್ರತಿಪಾದಕರೇ ಅಪರಾಧಿಗಳಾಗಿ ಕಾಣಿಸಿಕೊಳ್ಳುತ್ತಾರೆ. ದೇಶದ್ರೋಹಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಜನರು ಇವರನ್ನು ಸಂಶಯಿಸುತ್ತಾರೆ ಮತ್ತು ಅಪಮಾನಿಸುತ್ತಾರೆ. ವ್ಯಂಗ್ಯವಾಡುತ್ತಾರೆ. ಅಸಮಾನತೆಯ ಮೂಲಗಳನ್ನು ಶೋಧಿಸುವ ನಿಜವಾದ ’ಬುದ್ಧಿಜೀವಿ’ಗಳ ಬಗೆಗೆ ಇಂದು ಹುಟ್ಟಿಸಿರುವ ಅಸಹನೆಯನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವ ಅಸಹನೆಯ ಸಂದೇಶಗಳನ್ನು ಗಮನಿಸಿದರಿಗೆ ಇದರ ಪರಿಚಯವಿದೆ. ಇಂತಹ ಜನರಿಗೆ ಸಮಯ ದೊರೆತಾಗ ದೈಹಿಕ ದಾಳಿಯನ್ನೂ ನಡೆಸಿ ನೆತ್ತರು ಹರಿಸುತ್ತಾರೆ. ಈಗಾಗಲೇ ಅಂತಹ ಹಲವು ಗುಂಪು ದಾಳಿಗಳು ನಡೆದು ಹಲವರು ಹತ್ಯೆಯಾಗಿದ್ದಾರೆ. ಅಂತಹ ಇನ್ನಶ್ಟು ದಾಳಿಗಳಿಗೆ ದೇಶ ಸಜ್ಜಾಗುತ್ತಿರುವಂತೆ ಕಾಣಿಸುತ್ತಿದೆ. ಅಂದರೆ ಆಕ್ರಮಣಕಾರಿ ಭಾಶೆಯ ಹಿಂದೆ ಭಿನ್ನಮತವನ್ನು ಹೊಸಕಿ ಹಾಕುವ ಉದ್ದೇಶವಿರುವುದು ಗೋಚರಿಸುತ್ತದೆ.

ಆದರೆ ಇದೆಲ್ಲವನ್ನು ಮರೆಮಾಚಿ ’ಏಳ್ಗೆಯ ಸುಳ್ಳಟ್ಟು’ಗಳನ್ನು ಮಾತ್ರ ಮುಂದಿಡಲಾಗುತ್ತದೆ. ಹಾಗೆಯೇ ಚರಿತ್ರೆಯಲ್ಲಿ ಆದ ’ತಪ್ಪು’ಗಳನ್ನು ತಿದ್ದಿ ’ಸರಿ’ಚರಿತ್ರೆ ನಿರ್‍ಮಿಸುವ ಬಣ್ಣದ ಮಾತುಗಳನ್ನು ಆಡಲಾಗುತ್ತದೆ. ಇಂತಹ ವಾದಗಳು ಮತ್ತು ವಾಗ್ದಾಳಿಗಳ ಹಿಂದೆ ಹರಿತವಾದ ಖಡ್ಗಕ್ಕೆ ತುಪ್ಪವನ್ನು ಲೇಪಿಸಿ ಸೊಣಗಗಳಿಗೆ ನೆಕ್ಕಿಸಿದಂತಿರುತ್ತದೆ. ಸವಿಗೆ ಮೋಹಿತವಾದ ಸೊಣಗಗಳು ಖಡ್ಗವನ್ನು ನೆಕ್ಕಿ ನಾಲಿಗೆ ತುಂಡರಿಸಿಕೊಂಡು ನೆತ್ತರನ್ನು ಸುರಿಸುವವರೆಗೂ ಅವಕ್ಕೆ ಆದ ಗಾಯ ಅನುಭವಕ್ಕೇ ಬರುವುದೇ ಇಲ್ಲ. ಇಂದು ಅಂತಹ ಸ್ಥಿತಿಯಲ್ಲಿಯೇ ದೇಶದ ಬಹುಸಂಖ್ಯಾತ ಜನರಿರುವುದು ದುರಂತ. ಈ ಜನರು ಸುಲಭಕ್ಕೆ ಬೇರೆಯವರ ಎಚ್ಚರದ ಅರಿವಿನ ಮಾತುಗಳಿಗೆ ಕಿವಿಗೊಡುವವರಲ್ಲ. ತಮ್ಮ ನಾಲಿಗೆಗಳು ತುಂಡಾಗಿ ನೆತ್ತರು ಸುರಿಸಿಕೊಂಡು ನರಳುವಾಗ ಎಚ್ಚರಗೊಳ್ಳಬಹುದು. ಇಲ್ಲವೇ ಆಗಲೂ ಆಳುವವರು ಮತ್ತೆ ಬಗೆಬಗೆಯ ’ಭಕ್ತಿರಸ’ಗಳನ್ನು ಕುಡಿಸಿದರೆ ಅಮಲಿನಲ್ಲಿ ತೇಲುತ್ತಾ ಶತಮಾನಗಳ ಕಾಲ ಸಾಯುತ್ತಲೇ ಇರಬಹುದು. ಅಜ್ಞಾನದ ಕುಲುಮೆಯಲ್ಲಿ ಬೇಯುವವರನ್ನು ಪಾರು ಮಾಡುವ ಮಾಂತ್ರಿಕರು ಪವಾಡ ಪುರುಶರು ಇಲ್ಲಿಯವರೆಗೂ ಯಾರೂ ಪೂರ್‍ಣವಾಗಿ ಯಶಸ್ಸು ಸಾಧಿಸಿಲ್ಲ. ಇಲ್ಲಿನ ದುಶ್ಟ ಶಕ್ತಿಗಳನ್ನು ನಿಗ್ರಹಿಸಿಲ್ಲ.

ಹೊಸನುಡಿಯ ಹುಟ್ಟು

ಇಲ್ಲಿನ ವ್ಯಂಗ್ಯವೆಂದರೆ ಪ್ರತಿಭಟನಾನಿರತ ’ಬಂಡುಕೋರ’ ಜನರು ನಡೆಸುವ ನಿರ್ಭೀತ ಮಾತುಕತೆಯಲ್ಲಿ ಮತ್ತೆ ಸತ್ಯದ, ನೈತಿಕತೆಯ, ನೈಜವಾದ ಮತ್ತು ಹೊಸತನದ ಜನರನುಡಿ ಹುಟ್ಟುತ್ತದೆ. ಅಂದರೆ ವಾಗ್ಯುದ್ಧವನ್ನು ಎದುರಿಸುವ ಮೂಲಕವೇ ಅಭಿವ್ಯಕ್ತಿ ಸ್ವಾತಂತ್ರವನ್ನು ಕಾಪಾಡಿಕೊಳ್ಳಲಾಗುವುದು. ವಾಗ್ದಾಳಿಗಳ ಎದುರು ಪಿಸುನುಡಿಯುವ ಮೂಲಕವೇ `ಒಲವಿನ ನುಡಿ’ಯನ್ನು ಸಂಗೋಪಿಸಬೇಕಾಗುತ್ತದೆ. ಇದು ಸಂಭವಿಸುತ್ತದೆ. ಬುದ್ಧನ `ಧಮ್ಮನುಡಿ’, ಬಸವಣ್ಣನ ಸ್ಫಟಿಕದಂತಹ `ಮುತ್ತಿನ ನುಡಿ’, ಗಾಂಧಿಯವರ `ನೈತಿಕ ಮತ್ತು ಸತ್ಯಾಗ್ರಹದ ನುಡಿ, ಅಂಬೇಡ್ಕರ್ ಅವರ ’ಹೋರಾಟ ಮತ್ತು ಸ್ವಾಭಿಮಾನದ ನುಡಿ’, ಕುವೆಂಪು ಅವರ ವೈಚಾರಿಕ ’ಕ್ರಾಂತಿಯ ನುಡಿ’ ಎಲ್ಲವೂ ಇಂತಹ ಪ್ರತಿಭಟನೆಯ ಮೂಲಕವೇ ಹುಟ್ಟಿರುವುದು ಚಲನೆಯ ಗತಿತರ್‍ಕವಾಗಿದೆ. ಅಲ್ಲದೆ ಆಕ್ರಮಣಕಾರಿ ಭಾಶೆಯ ನಡುವೆಯೇ ಬಹುತ್ವದ ಕಳ್ಳುಬಳ್ಳಿಯ ಒಲವಿನ ಪಿಸುನುಡಿಯ ಗಾಳಿಯೂ ಬೀಸುತ್ತಿರುತ್ತದೆ. ಅದೇ ಸಮಾಜವನ್ನು ಸದಾ ಜೀವಂತವಾಗಿರಿಸಿರುತ್ತದೆ. ಆದರೆ ಆಕ್ರಮಣಕಾರಿಯಾದ ಅಬ್ಬರದ ಬಿರುಗಾಳಿಯಂತಹ ವಾಗ್ದಾಳಿಗಳು ಮತ್ತು ವಾಗಾಡಂಬರಗಳು ಅದ್ಯಾವುದರ ಅನುಭವವೂ ಆಗದಂತೆ ಮಾಡುತ್ತದೆ. ಒಮ್ಮೆ ಆಕ್ರಮಣ ಅಬ್ಬರಗಳ ಉಬ್ಬರವಿಳಿದರೆ ಸಮಾಜವು ಉಸಿರಾಡುತ್ತಿರುವುದು ಅನುಭವವಾಗುತ್ತದೆ. ಆಗ ನಿರಂಕುಶಾಧಿಕಾರದ ಜಾಗದಲ್ಲಿ ಪ್ರಜಾಪ್ರಭುತ್ವದ `ನುಡಿ’ ಕೇಳಿಬರುತ್ತದೆ. ಅಂತಹ ಗಳಿಗೆಗಳಿಗೆ ಈ ನೆಲ ಹಾತೊರೆದಿರುವುದು ಅನುಭವಕ್ಕೆ ಬರುತ್ತಿದೆ. ಅಂತಹ `ನಿಜನುಡಿ’ ಕೇಳುವ ದಿನಗಳು ಬಹಳ ಬೇಗ ಬರಲಿ. ಸುಳ್ಕಟ್ಟುಗಳ ದಂತಗೋಪುರ ಬೇಗ ಕುಸಿದು ಬೀಳಲಿ.

ಈ ಅಂಕಣದ ಹಿಂದಿನ ಬರೆಹಗಳು

ಮುಸುಕು ನುಡಿ ಮತ್ತು ಆಹಾರದಲ್ಲಿ ಹಾಲಾಹಲ

ಸುಳ್ಳಿನ ಕೈಗಾರಿಕೆಗಳಲ್ಲಿ ಅರಿವಿನ ಹತ್ಯೆ

ಟ್ರಂಪಣ್ಣನ ಅಮೆರಿಕದಲ್ಲಿ ಸುಳ್ಳುಗಳ ಸುನಾಮಿ!

ಕೇಳ್ವಿಯೆಂಬ ಕೂರಲಗು ಮತ್ತು ಪ್ರಭುತ್ವ

ಹೊಸ ಶಿಕ್ಶಣ ನೀತಿ ಮತ್ತು ತಾಯ್ನುಡಿ ಕಲಿಕೆ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...