ಪ್ರದಿ ಪೂವನ್ಕೋಳಿ: ಮೈ ಮುಟ್ಟುವವರಿಗೊಂದು ದಿಟ್ಟ ಉತ್ತರ

Date: 14-10-2021

Location: ಬೆಂಗಳೂರು


'ಸಿನಿಮಾ ಎಂದರೆ ಅದು ಸಾಹಿತ್ಯದಿಂದ ದೂರಾದ ಒಂದು ಪ್ರತ್ಯೇಕ ಕಲಾ ಪ್ರಕಾರ ಅನ್ನುವ ಮೂಢನಂಬಿಕೆಗೆ ವಿರುದ್ಧವಾಗಿ ನಿಲ್ಲುವ ಸಿನಿಮಾ ಮಲೆಯಾಳಂ ಭಾಷೆಯ ಪ್ರದಿ ಪೂವನ್ಕೋಳಿ' ಎನ್ನುತ್ತಾರೆ ಲೇಖಕ ವಿಕಾಸ ನೇಗಿಲೋಣಿ. ಅವರು ಬುಕ್ ಬ್ರಹ್ಮಕ್ಕಾಗಿ ಬರೆಯುತ್ತಿರುವ ಹೊಸ ಅಂಕಣ 'ಸಲಾಂ ಸಿನಿಮಾ'ದಲ್ಲಿ ಸೂಪರ್ ಸ್ಟಾರ್ ಮಂಜು ವಾರಿಯರ್ ಅಭಿನಯದ ಪ್ರದಿ ಪೂವನ್ಕೋಳಿ ಸಿನಿಮಾವನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. 

ಚಿತ್ರದ ಹೆಸರು: ಪ್ರದಿ ಪೂವನ್ಕೋಳಿ
ಭಾಷೆ: ಮಲೆಯಾಳಂ
ನಿರ್ದೇಶನ: ರೋಷನ್ ಆಂಡ್ರಿಯೋ  

ಹೋಗ್ಲಿ ಬಿಡು ಅಂತ ಬಿಟ್ಟು ಬಿಡುವುದು ಹೆಣ್ಣನ್ನು ಶೋಷಿಸುವವರ ದಾರಿಯ ಮೊದಲ ಗೆಲುವು. -ಇದು ಬಹಳ ಸಲ ಅನ್ವಯವಾಗುವುದು ಲೈಂಗಿಕ ಶೋಷಣೆಯ ವಿಚಾರದಲ್ಲಿ. ನಾವೆಲ್ಲ ‘ನೋ ಮೀನ್ಸ್ ನೋ’ ಅನ್ನುವ ಹೇಳಿಕೆಯನ್ನು ‘ಪಿಂಕ್’ ಚಿತ್ರದ ಮೂಲಕ ಪಡೆದುಕೊಂಡೆವು, ಅದೊಂಥರ ಸ್ಟೈಲ್ ಸ್ಟೇಟ್ಮೆಂಟ್ ಆಗಿದ್ದೂ ಗೊತ್ತಿದೆ. ಆದರೆ ಹಲವು ಸಲ ಶೋಷಣೆಯ ವಿರುದ್ಧದ ಹೇಳಿಕೆಗಳು ಆಗಾಗ ಅಪ್ಡೆಟ್ ಆಗಿ, ಅದನ್ನು ಹೇಳುವುದು ಸ್ಟೈಲ್ ಆಗುತ್ತವೆಯೇ ಹೊರತೂ ಶೋಷಣೆ ಇನ್ನಷ್ಟು ಆಳವಾಗಿ ಬೇರೂರಿಯೇ ಇರುತ್ತವೆ. ಅಂಥ ಲೈಂಗಿಕ ಕಿರುಕುಳದ ಅತೀ ಪುರಾತನ ಪುರಾವೆಯೊಂದರ ಬಗ್ಗೆ ಬಂದಿರುವ ಬಹಳ ದಿಟ್ಟ, ಸೂಕ್ಷ್ಯ ಹಾಗೂ ಸಂಯಮದ ಚಿತ್ರ: ಪ್ರದಿ ಪೂವನ್ಕೋಳಿ.

ಮಲೆಯಾಳಂ ಭಾಷೆಯ ಈ ಚಿತ್ರ, ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಮಕ್ಕಳ ಮೈ ಮುಟ್ಟುವ ನಮ್ಮ ಪುರಾತನ ಲೈಂಗಿಕ ಕಿರುಕುಳದ ಬಗ್ಗೆ ಮಾತಾಡುತ್ತದೆ. ಒಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ, ಇನ್ನೂ ಮದುವೆ ಆಗದ, ಹೆಚ್ಚುವರಿ ಆದಾಯಕ್ಕಾಗಿ ಹೊಲಿಗೆ ಕೆಲಸ ಮಾಡುವ ಮಾಧುರಿ, ಈ ಚಿತ್ರದ ಪ್ರೊಟಗಾನಿಸ್ಟ್. ಮಧ್ಯಮವರ್ಗದ ಎಲ್ಲ ಹೆಣ್ಮಕ್ಕಳಂತೆ ಸಣ್ಣಪುಟ್ಟ ಕಷ್ಟ, ನಷ್ಟಗಳನ್ನು ಸರಿದೂಗಿಸುತ್ತಾ ಬದುಕು ಮುಂದುವರಿಯುತ್ತಿರುವಾಗ ಒಂದು ದಿನ ಬಸ್ ನಲ್ಲಿ ಒಂದು ಸಣ್ಣ ಘಟನೆ ನಡೆಯುತ್ತದೆ, ಬಸ್ಸಿನಲ್ಲಿ ಗಂಡಸು ಹಿಂಭಾಗವನ್ನು ಹಿಂಡಿ ಓಡಿ ಹೋಗಿದ್ದು ಮಿಕ್ಕವರ ಪಾಲಿಗಷ್ಟೇ ಸಾಮಾನ್ಯ ಸಣ್ಣ ಘಟನೆಯಾಗಿ ಕಾಣುತ್ತದೆ, ಮಾಧುರಿಗಲ್ಲ.

ಅಲ್ಲಿವರೆಗೆ ಕೆಲಸ ಬಿಟ್ಟರೆ ಬೇರೆ ವಿಷಯದ ಕಡೆ ಗಮನ ಹರಿಸದೇ ಇದ್ದ ಮಾಧುರಿ ಈ ಸಲ ಬಸ್ಸಿನಲ್ಲಿ ತನ್ನ ದೇಹವನ್ನು ಹಿಂಡಿ ಹೋದವನ ಬೆನ್ನು ಬೀಳುತ್ತಾಳೆ. ಯಾವ ಮಟ್ಟಿದೆ ಅವಳಿಗೆ ಅದೊಂದು ಗೀಳಾಗುತ್ತದೆಂದರೆ ಅವನು ಯಾರೆಂದು ಹುಡುಕಿ, ಅವನು ದೊಡ್ಡ ರೌಡಿ ಅಂತ ಗೊತ್ತಿದ್ದೂ ಅವನ ಅಡ್ಡಕ್ಕೇ ಹೋಗಿ, ನೇರಾನೇರ ಅವನನ್ನು ಎದುರಿಸುವ ದುಸ್ಸಾಹಸ ಮಾಡುತ್ತಾಳೆ. ಅವನ ಪೌರುಷದ ವೈಭವೀಕರಣ ಹೆಚ್ಚುತ್ತಾ ಹೋದ ಹಾಗೂ ಅವಳಿಗೂ ಅವನ ಮೇಲೆ ದ್ವೇಷ ಹೆಚ್ಚುತ್ತಾ ಹೋಗುತ್ತದೆ.

ಒಂದು ಥ್ರಿಲ್ಲರ್ ಗುಣವನ್ನೇ ಇಟ್ಟು, ಇಡೀ ಚಿತ್ರವನ್ನು ನಿರ್ದೇಶಕ ರೋಷನ್ ಆಂಡ್ರಿಯೋ ನಿರೂಪಿಸುತ್ತಾ ಹೋಗುತ್ತಾರಾದರೂ ಆಳದಲ್ಲಿ ನಮ್ಮ ಸಮಾಜದಲ್ಲಿ ಹೆಣ್ಣಿನ ದೌರ್ಜನ್ಯಕ್ಕಿರುವ ಸೂಕ್ಷ್ಮ ಮುಖವನ್ನು ತೆರೆದಿಡುವ ಪ್ರಯತ್ನ ಮಾಡುತ್ತಾ ಹೋಗುತ್ತಾರೆ. ಸ್ವತಃ ಅಂತಪ್ಪನ್ (ಅವನೇ ಮಾಧುರಿಗೆ ಲೈಂಗಿಕ ಕಿರುಕುಳ ಕೊಟ್ಟ ರೌಡಿ) ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿರುವ ನಿರ್ದೇಶಕ ರೋಷನ್ ಆಂಡ್ರಿಯೋ, ದ್ವೇಷದ ಜಾಡನ್ನು ಹಿಡಿದು ಹೋಗುತ್ತಾ ಹೋಗುತ್ತಾ ಕಿರುಕುಳದ ಮೂಲವನ್ನು ಕೆದಕುವ ಪ್ರಯತ್ನ ಮಾಡುವುದು, ಈ ಚಿತ್ರದ ನಿಜವಾದ ಗೆಲುವು. ಇದೆಲ್ಲ ಸಾರ್ವಜನಿಕವಾಗಿ ಹೆಣ್ಮಕ್ಕಳಿಗೆ ಸಹಜವಾಗಿ ಎದುರಾಗುವ ಸಮಸ್ಯೆ, ಇದನ್ಯಾಕೆ ದೊಡ್ಡದು ಮಾಡುತ್ತಿ ಅಂತ ಒಂದು ಸಲ ಅವಳಮ್ಮ ಹೇಳಿದಾಗ ಮಾಧುರಿ ಕಟುವಾಗಿ, ದಿಟ್ಟ ದನಿಯಲ್ಲಿ ಹೇಳುತ್ತಾಳೆ:

ನನ್ನ ದೇಹವನ್ನು ಯಾರು ಮುಟ್ಟಬೇಕು, ಯಾರು ಮುಟ್ಟಬಾರದು ಅನ್ನುವುದನ್ನು ನಿರ್ಧರಿಸುವ ಹಕ್ಕು ನನ್ನದೇ!

‘ನೋ ಮೀನ್ಸ್ ನೋ’ ಎನ್ನುವಷ್ಟೇ ಪ್ರಬಲವಾದ ಹೇಳಿಕೆಯಾಗಿ ಕಾಣುವ ಈ ಮಾತು, ಇಡೀ ಚಿತ್ರದಲ್ಲಿ ಮಾಧುರಿಯ ಪ್ರತಿಭಟನೆಯ ಮೋಟೋ ಥರ ಕಾಣಿಸುತ್ತಾ ಹೋಗುತ್ತದೆ. ಹಾಗಾಗಿ ಈ ಚಿತ್ರ ಲೈಂಗಿಕ ಶೋಷಣೆಯನ್ನು ಎಲ್ಲೂ ತೆಳು ಮಾಡುವುದಿಲ್ಲ, ಗ್ಲೋರಿಫೈ ಮಾಡುವುದಿಲ್ಲ. ಅದರಲ್ಲೂ ಅಂತಿಮವಾಗಿ ಈ ಕತೆ ತೆಗೆದುಕೊಳ್ಳುವ ತಿರುವು, ಕಟ್ಟಕಡೆಗೆ ಬಸ್ಸಿನಲ್ಲಿ ನಡೆಯುವ ಮೊದಲಿನಂಥದ್ದೇ ಶೋಷಣೆಯ ಘಟನೆ ಮತ್ತು ಅದಕ್ಕೆ ಮಾಧುರಿ ಪ್ರತಿಕ್ರಿಯಿಸುವ ಪರಿ- ಇವು ಇಡೀ ಸಿನಿಮಾವನ್ನು ಮತ್ತೊಂದು ಘಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಬಹಳ ಒರಿಜಿನಲ್ ಆದ, ಯಾವ ಕಾಲಕ್ಕೂ ಇಂಥದ್ದೊಂದು ಪ್ರತಿಕ್ರಿಯೆ ಬೇಕು, ಇಂಥ ಪ್ರತಿಭಟನೆ ಅಗತ್ಯ ಅಂತ ಅನ್ನಿಸುವಂತೆ ಕಾಣಿಸುವ ಸಿನಿಮಾ ಇದು. 

ತಮ್ಮ ಸೆಕೆಂಡ್ ಇನ್ನಿಂಗ್ ನಲ್ಲಿ ಬಹಳಷ್ಟು ಶ್ರೇಷ್ಠ ಚಿತ್ರಗಳ ಭಾಗವಾಗಿ, ತಮ್ಮ ಪಕ್ವ ಅಭಿನಯದಿಂದ ಮಲೆಯಾಳಂ ಚಿತ್ರರಂಗದಾಚೆ ಕೂಡ ಮನೆ ಮಾತಾಗುತ್ತಿರುವ ಮಂಜು ವಾರಿಯರ್, ಮಾಧುರಿಯಾಗಿ ಬಹಳ ಅದ್ಭುತ ಅಭಿನಯ ನೀಡಿದ್ದಾರೆ, ಎದೆ ಒಳಗೆ ಉರಿವ ಬೆಂಕಿಯನ್ನು ಸ್ವಲ್ಪ ಜಾಸ್ತಿಯೇ ತುಳುಕುವಂತೆ ಕಣ್ಣಂಚಿನಲ್ಲಿ ಇಟ್ಟುಕೊಂಡಂತೆ ನಡೆಯುವ, ಓಡುವ, ಮೌನ ಧರಿಸುವ, ಕಿಡಿಯಾಗುವ, ಮಾತಾಗುವ, ಆಗಾಗ ಸಣ್ಣ ನಗುವಿನ ಅಲಗಲ್ಲೂ ಇರಿಯುವ ಮಂಜು ವಾರಿಯರ್, ಮಾಧುರಿಯನ್ನು ನಮ್ಮ ಕಾಲದ ಹೆಣ್ಣು ಮಗಳಂತೆ ಕಟೆದು ನಿಲ್ಲಿಸುತ್ತಾ ಹೋಗುತ್ತಾರೆ. ಚಿತ್ರ ನೋಡಿದ ಸಾಕಷ್ಟು ದಿನಗಳ ನಂತರವೂ ಈ ಕತೆ, ಆ ಘಟನೆ ಹಾಂಟ್ ಮಾಡುವಂತೆ ಮಾಡಲು ಗೋಪಿ ಸುಂದರ್ ಅವರ ಹಿನ್ನೆಲೆ ಸಂಗೀತ ಕೂಡ ಪೂರಕವಾಗಿದೆ.

ಅಂದಹಾಗೆ ಸಿನಿಮಾ ಎಂದರೆ ಅದು ಸಾಹಿತ್ಯದಿಂದ ದೂರಾದ ಒಂದು ಪ್ರತ್ಯೇಕ ಕಲಾ ಪ್ರಕಾರ ಅನ್ನುವ ಮೂಢನಂಬಿಕೆಗೆ ವಿರುದ್ಧವಾಗಿ ಈ ಸಿನಿಮಾ ಇದೆ. ಯಾಕೆಂದರೆ ಇದು ಉನ್ನಿ ಆರ್. ಎನ್ನುವ ಲೇಖಕರ ಸಂಕಟಂ ಹೆಸರಿನ ಸಣ್ಣಕತೆ ಆಧರಿಸಿ ಬಂದ ಚಿತ್ರ, ಚಿತ್ರಕ್ಕೆ ಚಿತ್ರಕತೆ ಬರೆದವರು ಕೂಡ, ಉನ್ನಿ ಅವರೇ.

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...