"ಬದುಕನ್ನು ಅದರ ಸಮಗ್ರತೆಯಲ್ಲಿ ಗ್ರಹಿಸುವುದು ನಮಗೆ ಕಷ್ಟ. ಇದನ್ನು ರೂಪಕವಾಗಿ ಹೇಳಲು ಪ್ರಯತ್ನಿಸುತ್ತೇನೆ. ನಾನು ನನ್ನ ಪುಟ್ಟ ಕುಟುಂಬದ ಒಳಗೆ ಒಬ್ಬ ಅಪ್ಪನಾಗಿ, ಮಗನಾಗಿ, ಅಣ್ಣನಾಗಿ, ತಮ್ಮನಾಗಿ, ಗಂಡನಾಗಿ ನಿರ್ವಹಿಸುವ ಒಂದು ಜಗತ್ತು ಇರುತ್ತದೆ. ಅದಕ್ಕೆ ಹೆಚ್ಚಿನ ಹೊರಗಿನವರಿಗೆ ಪ್ರವೇಶ ಇರುವುದಿಲ್ಲ. ಹಾಗೆಯೇ ಮನೆಯ ಬಾಗಿಲಿನಿಂದ ಹೊರಬರುತ್ತಲೇ ನನ್ನದಾಗುವ ಇನ್ನೊಂದು ಜಗತ್ತೂ ನನಗಿದೆ," ಎನ್ನುತ್ತಾರೆ ನರೇಂದ್ರ ಪೈ. ಅವರು ಗೀತಾ ವಸಂತ ಅವರ ‘ಪ್ರಾಣಪಕ್ಷಿಯ ರೆಕ್ಕೆ’ ಕೃತಿ ಕುರಿತು ಬರೆದ ವಿಮರ್ಶೆ.
ಗೀತಾ ವಸಂತ ಒಂದರ್ಥದಲ್ಲಿ ಬೇಂದ್ರೆಯವರನ್ನು ಉಸಿರಾಡಿಕೊಂಡಿರುವವರು. ಅಧ್ಯಯನಶೀಲರು, ಪ್ರಾಧ್ಯಾಪಕರು. ಪರಿಮಳದ ಬೀಜ ಪ್ರಕಟವಾದ ಹನ್ನೆರಡು ವರ್ಷಗಳ ನಂತರ ಅವರ ಹೊಸ ಕವನ ಸಂಕಲನ ಹೊರಬರುತ್ತಿದೆ ಎಂದು ಓದಿಯೇ ಆಘಾತವಾಯಿತು. ಬಹುಶಃ ಎರಡೋ ಮೂರೋ ವರ್ಷ ಇದು ಅಚ್ಚಾಗುವುದಕ್ಕೇ ಹಿಡಿದಿರಬೇಕು. ಎರಡು ವರ್ಷಗಳ ಹಿಂದೆ ಕಣ್ಮರೆಯಾದ ತಿರುಮಲೇಶರ ಬೆನ್ನುಡಿ ಗಮನಿಸಿದರೆ ಅದು ಸ್ಪಷ್ಟ.
ದು. ಸರಸ್ವತಿ, ಎಚ್ಚೆಸ್ಸಾರ್, ಓಎಲ್ಲೆನ್, ತಿರುಮಲೇಶ್ ಮತ್ತು ಗುರುಪ್ರಸಾದ್ ಕಂಟಲಗೆರೆ ಈ ಕವನ ಸಂಕಲನದ ಬಗ್ಗೆ ಈಗಾಗಲೇ ಬರೆದಿರುವುದು ಹಿನ್ನುಡಿ, ಮುನ್ನುಡಿ, ಬ್ಲರ್ಬ್ ರೂಪದಲ್ಲಿ ಸಿಗುತ್ತದೆ. ಆದರೆ ಅಸಲಿ ರಸಾನುಭವಕ್ಕೆ ಕವಿತೆಗಳನ್ನೇ ಓದಬೇಕು. ಆದರೆ, ಓದಿದ ಕವಿತೆಗಳ ಬಗ್ಗೆ ಏನಾದರೂ ಹೇಳಲು ಇವರನ್ನೆಲ್ಲ ಓದಿಕೊಂಡರೆ ಕಷ್ಟ. ಅದೇ ಕಷ್ಟ ಈ ಕವಿತೆಗಳ ಬಗ್ಗೆ ಸ್ವತಃ ಏನಾದರೂ ಹೇಳ ಬಯಸುವ ನಿಮಗೂ ನನ್ನ ಮಾತುಗಳನ್ನು ಓದಿಕೊಂಡರೆ ಎದುರಾಗುತ್ತದೆ.
ಇಲ್ಲಿ ಒಂದು ಅಧ್ಯಾತ್ಮವಿದೆ. ಅದು ಎಲ್ಲರಲ್ಲೂ ಇದೆ, ನಿಜ. ಆದರೆ ಪ್ರತಿಯೊಬ್ಬರಲ್ಲೂ ಅದರ ಚೌಕಟ್ಟಿನ ಗೆರೆಗಳು ಭಿನ್ನವಾಗಿರುತ್ತವೆ. ಚೌಕಟ್ಟಿನಾಚೆ ಕಾಣುವ ಹಂಬಲ ಅಧ್ಯಾತ್ಮದ್ದು. ಆದರೆ ಅದಕ್ಕೊಂದು ಚೌಕಟಿರುವುದು ಈ ವ್ಯಕ್ತಮಧ್ಯದ ಬದುಕ ಹೊತ್ತ, ಭಾರವಾದ ಉಸಿರಿನ ದೇಹ ಹೊತ್ತ, ಮನಸ್ಸಿನ ಬಿರುಗಾಳಿಗೆ ತಲೆ ಕೆದರಿಕೊಂಡ ನಮ್ಮೆಲ್ಲರ ಮಿತಿ, ವಿಪರ್ಯಾಸ. ಆದರೂ ಹೆಣ್ಣಿನ ಅಧ್ಯಾತ್ಮ ನನಗೆ ಸದಾ ಕುತೂಹಲಕರ ಅನಿಸಿದೆ. ಈ ಬಗ್ಗೆ ಇನ್ನೆಲ್ಲೊ ಬರೆದಿದ್ದರೂ ಸೂಕ್ಷ್ಮವಾಗಿ ಅದು ಏಕೆ ಎನ್ನುವುದನ್ನು ಹೇಳಬೇಕು. ಅಕ್ಕ, ಮೀರಾ, ಸಕ್ಕೂಬಾಯಿ ತರದವರ ಉದಾಹರಣೆಗಳು ಜಗತ್ತಿನಲ್ಲಿ ಹೇರಳವಾಗಿ ಸಿಗುವುದಿಲ್ಲ. ನಾವು ಹೆಣ್ಣನ್ನು ಮಾಯೆ ಎಂದು ಕರೆಯುತ್ತೇವೆ. ಬದುಕಿಗೆ ನಮ್ಮನ್ನು (ಗಂಡನ್ನೂ, ಹೆಣ್ಣನ್ನೂ) ಕಟ್ಟಿ ಹಾಕುವುದು ಹೆಣ್ಣೇ ಇರಬೇಕೆಂದು ಅನಿಸುತ್ತದೆ. ಹೆಣ್ಣೇ ಇಲ್ಲದಿದ್ದರೆ ಎಲ್ಲ ಗಂಡಸರೂ ಸಂತರಾಗಿರುತ್ತಿದ್ದರೆ, ಗೊತ್ತಿಲ್ಲ. ಹುಚ್ಚರೋ, ರಾಕ್ಷಸರೋ, ದೇವರೋ ಆಗುವ ಸಾಧ್ಯತೆಗಳೆಲ್ಲ ಇದ್ದವೇನೋ. ಗಂಡಿಗೆ ಅಧ್ಯಾತ್ಮ ಇಷ್ಟವಾಗುವುದಕ್ಕೂ ಹೆಣ್ಣಿಗೆ ಅಧ್ಯಾತ್ಮ ಇಷ್ಟವಾಗುವುದಕ್ಕೂ ತುಂಬ ವ್ಯತ್ಯಾಸವಿದೆ ಎಂದಷ್ಟೇ ಹೇಳಿ ಮುಗಿಸುತ್ತೇನೆ, ಇದು ಎಲ್ಲರಿಗೂ ಅರ್ಥವಾಗುವ ವಿಷಯವೇ.
ಇಲ್ಲಿನ ಅಧ್ಯಾತ್ಮದಲ್ಲಿ ವಿಶೇಷವಿದೆ. ಏಕೆಂದರೆ, ಅಧ್ಯಾತ್ಮದಲ್ಲಿ ದೇಹವನ್ನು, ಮನಸ್ಸನ್ನು ಮೀರಿದ್ದರ, ಪರದ ಹುಡುಕಾಟವಿರುತ್ತದೆ. ಆದರೆ ಇಲ್ಲಿ ದೇಹವನ್ನೂ ಮನಸ್ಸನ್ನೂ ಮೀರಿದ ಇಹದ ಹುಡುಕಾಟವಿದೆ. ತಮಾಶೆ ಎಂದರೆ, ಈ ಹುಡುಕಾಟವೂ ನಮ್ಮೆಲ್ಲರಲ್ಲಿದೆ. ಆದರೆ ನಾವು ಅದನ್ನು ಸುಲಭವಾಗಿ ಪರಕ್ಕೆ ವರ್ಗಾಯಿಸಿ ವೈರಾಗ್ಯದ ಮಾತನಾಡಿ ನಮಗೇ ನಾವು ಮೋಸ ಮಾಡಿಕೊಂಡು ನೆಮ್ಮದಿಯಾಗಿರುತ್ತೇವೆ. ಗೀತಾ ವಸಂತ ಈ ನಡುವಿನ ಕೂದಲೆಳೆಯನ್ನು ಸೀಳಿ ಜಗತ್ತನ್ನು ಕಾಣುತ್ತಾರೆ, ಕಾಣಿಸುತ್ತಾರೆ. ಇಲ್ಲಿ ಕಾಮ, ಸಮಾಗಮ ಮತ್ತು ನೇಮ, ಸಮ್ಯಕ್ ಜ್ಞಾನಗಳ ಒಂದು ಸಂತುಲನದ ಉತ್ಕರ್ಷವಿದೆ, ಅದು ಆಗುವುದೇನಿದ್ದರೂ ಇಲ್ಲಿ, ಈ ಕ್ಷಣ ಬದುಕುತ್ತ ಆಗಬೇಕೆಂಬ ಪರಿಜ್ಞಾನವಿದೆ.
ಬದುಕನ್ನು ಅದರ ಸಮಗ್ರತೆಯಲ್ಲಿ ಗ್ರಹಿಸುವುದು ನಮಗೆ ಕಷ್ಟ. ಇದನ್ನು ರೂಪಕವಾಗಿ ಹೇಳಲು ಪ್ರಯತ್ನಿಸುತ್ತೇನೆ. ನಾನು ನನ್ನ ಪುಟ್ಟ ಕುಟುಂಬದ ಒಳಗೆ ಒಬ್ಬ ಅಪ್ಪನಾಗಿ, ಮಗನಾಗಿ, ಅಣ್ಣನಾಗಿ, ತಮ್ಮನಾಗಿ, ಗಂಡನಾಗಿ ನಿರ್ವಹಿಸುವ ಒಂದು ಜಗತ್ತು ಇರುತ್ತದೆ. ಅದಕ್ಕೆ ಹೆಚ್ಚಿನ ಹೊರಗಿನವರಿಗೆ ಪ್ರವೇಶ ಇರುವುದಿಲ್ಲ. ಹಾಗೆಯೇ ಮನೆಯ ಬಾಗಿಲಿನಿಂದ ಹೊರಬರುತ್ತಲೇ ನನ್ನದಾಗುವ ಇನ್ನೊಂದು ಜಗತ್ತೂ ನನಗಿದೆ. ಅಲ್ಲಿ ನೆರೆಹೊರೆಯವರು, ನನ್ನ ಬಸ್ಸಿನ ಸಹವರ್ತಿಗಳು, ಅವರ ಟ್ರಿಪ್ಪಿನ ವೇಳೆಯಲ್ಲಿ ನಾನೆಲ್ಲೇ ಕಂಡರೂ ಬರುವವರಾ ಎಂದು ಕೇಳಿ ಮುಂದುವರಿಯುವ ಪ್ರೀತಿಯುಳ್ಳ ನನ್ನ ಕಂಡೆಕ್ಟರು, ಡ್ರೈವರುಗಳು, ಇವತ್ತು ನೀವು ಒಬ್ಬರೇನಾ ಎಂದು ವಿಚಾರಿಸುವ ಆಟೋದವರು, ದಿನನಿತ್ಯ ಹಾದಿಯಲ್ಲಿ ಎದುರಾಗುವ, ಯಾರೆಂದೇ ತಿಳಿಯದಿದ್ದರೂ ಒಂದು ನಗು ಚೆಲ್ಲಿಯೇ ಮುಂದೆ ಹೋಗುವವರು ಇದ್ದಾರೆ. ಹಾಗೆಯೇ ಇನ್ನೊಂದು ಬಾಗಿಲು ಹೊಕ್ಕಿದ್ದೇ ತೆರೆದುಕೊಳ್ಳುವ ವೃತ್ತಿ ಜೀವನದ ಜಗತ್ತೇ ಬೇರೆ ಇದೆ. ಬಾಸುಗಳ, ಸಹೋದ್ಯೋಗಿಗಳ, ನಮಗೇ (ನಮ್ಮ ರಕ್ಕಸತನಕ್ಕೆ) ಹೆದರುವ ಜೀವಗಳೆಲ್ಲ ಅಲ್ಲಿವೆ. ಕೆಲವರನ್ನು ನೆನೆಯುತ್ತಲೇ ನಮ್ಮ ಮನೋಧರ್ಮ, ನಗು, ಒಳಗಿನ ಕುಶಿಗಳನ್ನೆಲ್ಲ ಬದಲಾಯಿಸಬಲ್ಲ ಶಕ್ತಿ ಉಳ್ಳವರ ಜಗತ್ತಿದು. ಇದರಾಚೆಗೆ ನನಗೆ ನನ್ನ ಸಾಹಿತ್ಯಿಕ ಜಗತ್ತಿದೆ, ಅಲ್ಲಿ ಗೆಳೆಯರಿದ್ದಾರೆ, ನನ್ನನ್ನು ಕಂಡರಾಗದವರಿದ್ದಾರೆ, ಕಂಡೇ ಇಲ್ಲದಿದ್ದರೂ ಪ್ರೀತಿಸುವವರಿದ್ದಾರೆ. ಸೊ, ನನ್ನ ಮೆದುಳಿನಲ್ಲಿ ಇವರೆಲ್ಲ ಒಂದಷ್ಟು ಮಟ್ಟಿಗೆ ಪ್ರತ್ಯಪ್ರತ್ಯೇಕವಾಗಿ ಇರುತ್ತಾರೆ, ಕೆಲವೊಮ್ಮೆ ಎರಡೆರಡು ಜಗತ್ತು ಒಂದರ ಮೇಲೊಂದು ಒರಗಿಕೊಳ್ಳಲು ಹೆಣಗುತ್ತದೆ, ಹೈರಾಣಾಗುತ್ತೇನೆ. ನಿಮಗೆಲ್ಲ ಇದು ಗೊತ್ತು. ಇದರಾಚೆ ನಮ್ಮ ಬದುಕನ್ನು ಬೇಡವೆಂದರೂ ಆವರಿಸುವ ದೇವರುಗಳು, ರಾಜಕಾರಣಿಗಳು, ಪೋಲೀಸರು, ಕೋರ್ಟು, ಆಸ್ಪತ್ರೆ, ಸ್ಮಶಾನ, ಮಾಧ್ಯಮಗಳು, ಸೋಶಿಯಲ್ ಮೀಡಿಯಾ, ಸಂತೆ ಮಾರ್ಕೆಟ್ಟು, ಆನ್‌ಲೈನ್ ಮಳಿಗೆಗಳು, ಸಂಬಳದ ಲೆಕ್ಕಾಚಾರ, ಸಾಲ ಮತ್ತು ಕಳೆದುಕೊಂಡ ದುಡ್ಡು ಎಲ್ಲ ಇವೆ.
ಯಾವುದೇ ಒಂದು ಕ್ಷಣದಲ್ಲಿ ನಾವು ಬೌದ್ಧಿಕವಾಗಿಯೂ ಭಾವನಾತ್ಮಕವಾಗಿಯೂ ಈ ಎಲ್ಲ ಜಗತ್ತನ್ನೂ ಏಕಕಾಲಕ್ಕೆ ಗಣನೆಗೆ ತೆಗೆದುಕೊಂಡು ಬದುಕುತ್ತಿರುವುದಿಲ್ಲ, ಅದು ಕಷ್ಟ ಎನ್ನುವುದು ನಮಗೆ ಗೊತ್ತು. ಒಬ್ಬ ಸಾಹಿತಿ ನಿಜವಾಗಿ ಮಾಡಬೇಕಾದ್ದು ಇದನ್ನು. ಸಾಹಿತ್ಯ ಇರುವುದೇ ಇದಕ್ಕಾಗಿ. ಸಾಹಿತ್ಯ ನಮಗೆ ಈ ಸಮಗ್ರವನ್ನು ಕಾಣಬಲ್ಲ, ವೈರುಧ್ಯವನ್ನು ಸ್ವೀಕರಿಸಬಲ್ಲ ದಿವ್ಯಚಕ್ಷುಗಳನ್ನು ಕೊಟ್ಟು ಪೊರೆಯುತ್ತಿರಬೇಕು, ಆಗಾಗ. ಈ ಮಹಾ ಮ್ಯಾರಥಾನಿನಲ್ಲಿ ಆಗಾಗ ಅಲ್ಲಲ್ಲಿ ನಿಂತು ಸುಧಾರಿಸಿಕೊಂಡು, ಗುಟುಕು ನೀರು ಕುಡಿದು ಓಡುತ್ತಿರುವುದಾದರೂ ಯಾತಕ್ಕೆ, ಎಲ್ಲಿಗೆ ಎಂದು ವಿವೇಚಿಸುವ ಶಕ್ತಿಯನ್ನು ಅದು ನಮಗೆ ಕೊಡಬೇಕು. ಸಾಧ್ಯವಾದರೆ ಅದು ಡ್ರೋನ್ ಕ್ಯಾಮೆರಾ ಆಗಬೇಕು. ಅಲ್ಲವೆ?
ಗೀತಾ ವಸಂತ ಅವರ ಈ ಪ್ರಾಣಪಕ್ಷಿಯ ರೆಕ್ಕೆ ಕವನ ಸಂಕಲನದ ನಿಜವಾದ ಘನತೆ ಇರುವುದೇ ಅವರ ಈ ಧೀಃಶಕ್ತಿಯನ್ನು ಮೆರೆಯುವ ಕವಿತೆಗಳಲ್ಲಿ. ಇದು ಯಾವುದೇ ಸಾಹಿತಿಗೂ ಸುಲಭಸಾಧ್ಯವಲ್ಲದ ಒಂದು ವ್ಯಾಯಾಮ. ಆದರೆ ಕೆಲವೇ ಕೆಲವು ಸವಾಲನ್ನು ಸ್ವೀಕರಿಸಬಲ್ಲ ಇಚ್ಛಾಶಕ್ತಿಯುಳ್ಳ ಬರಹಗಾರರಿಗಷ್ಟೇ ಸಾಧ್ಯವಾಗುವ, ಸಂಕಲ್ಪವನ್ನು ಸಿದ್ಧಿಯಾಗಿಸಿ ಪೊರೆಯಬಲ್ಲವರಿಗೆ ಮಾತ್ರ ಕೈಹಿಡಿಯುವ ಕಲೆಯ ಶಕ್ತಿ. ಗೀತಾ ವಸಂತ ಅವರ ಸಂಕಲನ ಈ ನಿಟ್ಟಿನಲ್ಲಿ ಒಂದು ಮಹತ್ವದ ಸಿದ್ಧಿ.
ಅವರ ಸಂಕಲನದಿಂದ ನನ್ನ ಮಾತುಗಳ ಸಮರ್ಥನೆಗೆ ಒಂದೇ ಒಂದು ಕವಿತೆಯನ್ನು ಇಲ್ಲಿ ಕಾಣಿಸುತ್ತೇನೆ. ನಾನು ಕವಿತೆಯ ಕೆಲವು ಸಾಲುಗಳನ್ನು ಕತ್ತರಿಸಿ ಕಾಣಿಸಲಾರೆ, ಅದು ನನಗೆ ಒಪ್ಪಿಗೆಯಿಲ್ಲ. ಕಾಣಿಸಿದರೆ ಇಡೀ ಕವಿತೆಯನ್ನು ಕಾಣಿಸಬೇಕು, ಓದಿದರೆ, ಗ್ರಹಿಕೆಗೆ ತೆಗೆದುಕೊಂಡರೆ ಇಡೀ ಕವಿತೆಯನ್ನು ಕಾಣಿಸಬೇಕು, ಓದಬೇಕು. ಹಾಗಾಗಿ ಕೇವಲ ಒಂದೇ ಒಂದು ಕವಿತೆಯನ್ನು ಕಾಣಿಸುತ್ತೇನೆ. ಇಲ್ಲವೆಂದರೆ ಇಡೀ ಪುಸ್ತಕದ ಅಷ್ಟೂ ಕವಿತೆಗಳನ್ನು.
ಮಹಾನಗರದಲ್ಲಿ ಮಹಾಮಾಯೆ
ಚುಮುಚುಮು ನಸುಕು
ಹುಟ್ಟುವ ಮೊದಲೆ
ಕಸಬರಿಗೆ ಹಿಡಿದು
ಅವತರಿಸಿದ್ದಾಳೆ ಮಹಾಮಾಯೆ!
ಹಕ್ಕಿಗಳ ಜತೆ ಕೆಲಸಮಾಡಿ
ಬೆನ್ನು ಹಾಕಿದ್ದಾಳೆ ಲೋಕಕ್ಕೆ.
ಸತ್ಯ ಸೌಂದರ್ಯ ಶಿವನ ಹುಡುಕಿ
ಅಲೆಯುತ್ತಿರುವಾಗ ನೀವು
ಗಂಜಿ ಬೇಯುವ ಘಮಕ್ಕೆ
ಮೂಗರಳಿಸಿ ಕೂತಿದ್ದಾಳೆ
ಸೋತ ಹೆಜ್ಜೆಗಳಲ್ಲಿ ಹಸಿದುಬಂದ
ನಿಮಗೂ ತುತ್ತಿಕ್ಕಿದ್ದಾಳೆ.
ಗುಟ್ಕಾ ಪಾಕೀಟು ಖಾಲಿಶೀಶೆಗಳ ಜತೆ
ಕ್ರಾಂತಿ ಕರಪತ್ರ
ಮಾಟ ಮಂತ್ರ ವಶೀಕರಣ
ನಿಗೂಢ ಜಾಹೀರಾತು
ಮಾಲುಗಳಲ್ಲಿ ಬಿಕರಿಯಾದ
ತರಹೇವಾರಿ ಸರಕು
ದೃಢೀಕರಿಸುವ ರಸೀತಿ
ಏನೆಲ್ಲವ ಗುಡಿಸಿ ಒಟ್ಟುತ್ತಾಳೆ
ಒಟ್ಟಿಗೆ ಒಂದೇ ರಾಶಿಯಲಿ.
ರಾತ್ರಿಯೆಲ್ಲ ಝಗಮಗಿಸಿ ಉರಿದ
ಲೋಕದ ಸೂತಕ ಕಳೆಯುತ್ತಾಳೆ.
ಹೆರಿಗೆ ವಾರ್ಡಿನ ಹಸಿರಕ್ತದ ನಾತ
ಹೊಟ್ಟೆ ಹಿಚುಕಿ ಹೊರಬಂದ ಕಸ
ಮಗುವಿನ ಮೈ ಗಂಟಿದ ಲೋಳೆ
ಎಲ್ಲವೂ ಸಹ್ಯ
ಆಗಾಗ ತೊಟ್ಟಿಯಲ್ಲಳುವ
ಕುಂತಿಮಕ್ಕಳ ಮೈದಡವಿದ್ದೂ ಇದೆ
ಸುಖದ ಹಿಂದೆ ಸರಿವ
ಸಂಕಟದ ನೆರಳು
ಸದಾ ಪರಿಚಿತ ಅವಳಿಗೆ.
ಅವಳ ಅಂಗೈಲಿ ಜಗದ ಹೃದಯವಿದೆ!
ಮಕ್ಕಳ ಕುಂಡೆತೊಳೆದ
ಮುದುಕರ ವಾಂತಿ ಬಳಿದ
ಶವಾಗಾರದ ಘಾಟುವಾಸನೆ ಹೀರಿ
ತಣ್ಣಗೆ ಕೊರೆವ ಸತ್ಯವ
ಸ್ಪರ್ಷಿಸಿದ ಅದೇ ಅಂಗೈ!
ಕಸಬರಿಗೆ ಕಡ್ಡಿಗಳ ಮಧ್ಯೆ
ಸೂರ್ಯ ಕಣ್ಣೆರೆದಾಗ
ಜಗತ್ತೆಲ್ಲ ಕೊಳೆಹಿಡಿದ
ಮಗುವಂತೆ ತೋರುತ್ತದೆ ಅವಳಿಗೆ;
ಕಣ್ಣ ಪಿಸುರು ತೆಗೆದು
ಬೆಳಕಲ್ಲಿ ಮೈತೊಳೆದು
ಮಡಿ ಮಾಡುತ್ತಾಳೆ.
ಜೀವಸಾವಿನ ಸಹಜ ಚೆಲುವಿಗೆ
ತತ್ವಶಾಸ್ತ್ರದ ಸೆರಗು ಹೊದೆಸುವ
ನಿಮ್ಮ ಲಜ್ಜೆಯ ಕಂಡು
ಕಿಲಕಿಲನಗುವ ಆಕೆ
ಖುಲ್ಲಂಖುಲ್ಲಾ ಸರಿಸಿ ಸೆರಗು
ಮಗುವಿಗೆ ಮೊಲೆಯುಣಿಸುತ್ತ
ಮೈಮರೆಯುತ್ತಾಳೆ.
“ಕವಿಯು ಈ ಕವನವು ಹೊಸ ವರ್ಷದ ಆರಂಭವನ್ನು ಸನಾತನ ಸಾಂಸ್ಕೃತಿಕ ಹಬ್ಬಗಳ ಹಿನ್ನೆಲೆಯಲ್ಲಿ ಕವಿಯು ವೈಭೋಗದಿಂದ ವಿವರಿ...
“ಸಾಹಿತ್ಯಿಕವಾಗಿ ಶ್ಯಾಮಲಾ ಇಷ್ಟರ ಮಟ್ಟಿನ ಸಫಲತೆ ಪಡೆದಿದ್ದರೆ ಅದರಲ್ಲಿ ಅವರ ಹೋರಾಟದ ಕತೆಯೂ ಇದೆ,” ಎನ್ನ...
“ಇದರಲ್ಲಿ ವಿವಿಧ ಕಾಲಘಟ್ಟದಲ್ಲಿ ಬರೆದ ಅವರ ಬಹುಪಾಲು ಅತ್ಯುತ್ತಮ ಕತೆಗಳು ಇರುವುದರಿಂದ ಪರೋಕ್ಷವಾಗಿ ಇವು ಅವರ ಪ್...
©2025 Book Brahma Private Limited.