ಪ್ರಸಾದಿಸ್ಥಲ

Date: 17-01-2023

Location: ಬೆಂಗಳೂರು


“ಪ್ರಸಾದಗಳಲ್ಲಿ ಅರ್ಪಿತಪ್ರಸಾದ, ಅವಧಾನ ಪ್ರಸಾದ, ಪರಿಣಾಮ ಪ್ರಸಾದ, ಸಮಯಪ್ರಸಾದ, ಸರ್ವಾಂಗಪ್ರಸಾದ, ಶುದ್ಧಪ್ರಸಾದ, ಸಿದ್ಧಪ್ರಸಾದ, ಪ್ರಸಿದ್ಧಪ್ರಸಾದ, ಪರಿಪೂರ್ಣಪ್ರಸಾದ, ದಿವ್ಯಪ್ರಸಾದ, ಆದಿಪ್ರಸಾದ ಹೀಗೆ ಅನೇಕ ರೀತಿಯ ಪ್ರಸಾದಗಳಿವೆಯೆಂದು ತಿಳಿಸಿರುವ ಹಡಪದಪ್ಪಣ್ಣನವರು, ಆದಿಪ್ರಸಾದಿಯೇ ಗುರು, ಅನಾದಿಪ್ರಸಾದಿಯೇ ಲಿಂಗ, ಅಂತ್ಯಪ್ರಸಾದಿಯೇ ಜಂಗಮವೆಂದು ಹೇಳಿದ್ದಾರೆ” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ಪ್ರಸಾದಿಸ್ಥಲ’ ವಿಚಾರದ ಕುರಿತು ಚರ್ಚಿಸಿದ್ದಾರೆ...

ಷಟ್‍ಸ್ಥಲಗಳಲ್ಲಿ ಮೂರನೆಯದಾದ ಪ್ರಸಾದಿಸ್ಥಲವು ಸಮರ್ಪಣಾಭಾವದ ಸಂಕೇತವಾಗಿದೆ. ಇಲ್ಲಿ ಎರಡು ರೀತಿಯ ಅರ್ಪಣೆಗಳಿವೆ. ಕಾಯಕದಿಂದ ಬಂದುದನ್ನು ತನ್ನ ಇಷ್ಟಲಿಂಗಕ್ಕರ್ಪಿಸಿ ಸೇವಿಸುವುದು ಒಂದು ರೀತಿಯ ಪ್ರಸಾದವಾದರೆ, ತನ್ನನ್ನೇ ತಾನು ಲೋಕಕ್ಕರ್ಪಿಸಿಕೊಂಡು ಸೇವೆ ಮಾಡುವುದು, ಶಿವಶರಣರಿಗೆ ನೀಡುವುದು ಮತ್ತೊಂದು ರೀತಿಯ ಪ್ರಸಾದವೆಂಬ ನಂಬಿಕೆ ಈ ಸ್ಥಲದಲ್ಲಿ ಗಟ್ಟಿಗೊಳ್ಳುತ್ತದೆ.

ಬಸವಾದಿ ಶರಣರಿಗಿಂತ ಪೂರ್ವದಲ್ಲಿ ಸ್ಥಾವರಲಿಂಗಕ್ಕೆ ನೈವೇದ್ಯವಂನರ್ಪಿಸುವುದು, ಗುಡಿ-ಗುಂಡಾರಗಳಲ್ಲಿ ಪೂಜಾರಿ ಪುರೋಹಿತರು ನೀಡಿರುವದನ್ನು ಪ್ರಸಾದವೆಂದು ಭಾವಿಸುವದು ವಾಡಿಕೆಯಲ್ಲಿತ್ತು. ಆದರೆ ಶರಣರ ಕಾಲಕ್ಕೆ ಪ್ರಸಾದದ ಪರಿಕಲ್ಪನೆ ಬೇರೆಯಾಯಿತು. ತಮಿಳುನಾಡಿನ ಅರವತ್ತುಮೂರು ಪುರಾತನದಲ್ಲಿ ಅನೇಕರಭಕ್ತಿ, ಹಿಂಸಾಭಕ್ತಿಯಾಗಿತ್ತು. ಕೋಳೂರ ಕೊಡಗೂಸು ಕಥೆಯಲ್ಲಿ ಗುಡಿಯಲ್ಲಿದ್ದ ಸ್ಥಾವರಲಿಂಗವು ಹಾಲನ್ನು ಸ್ವೀಕರಿಸಲಿಲ್ಲವೆಂದು ಸಿಟ್ಟಾಗಿ ತನ್ನ ತಲೆಯನ್ನೇ ಶಿಲೆಗೆ ಜಜ್ಜಿಕೊಂಡು ಹಿಂಸೆಯಿಂದ ನರಳುವ ಚಿತ್ರಣವನ್ನು ನೋಡುತ್ತೇವೆ. ಪವಾಡಗಳೇ ತುಂಬಿರುವ ಪುರಾತನರ ಕತೆಗಳಲ್ಲಿ, ಇದನ್ನು ನೋಡಿದ ಶಿವನು ಕೋಳೂರ ಕೊಡಗೂಸಿಗೆ ಪ್ರತ್ಯಕ್ಷವಾಗಿ, ಆಕೆ ನೀಡಿದ ನೈವೇದ್ಯವನ್ನು ಸ್ವೀಕರಿಸಿ ಆಕೆಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಆದರೆ ಶರಣರು ಇಂತಹ ಪವಾಡ ಕತೆಗಳನ್ನು ಸೃಷ್ಟಿಸಲಿಲ್ಲ, ಬದಲಾಗಿ ಪ್ರಸಾದಿಸ್ಥಲವನ್ನು ವಾಸ್ತವಿಕ ನೆಲೆಯಲ್ಲಿ ವಿಸ್ತರಿಸಿದರು. ಲಿಂಗದೇವನ ಮುಟ್ಟಿ ಮಜ್ಜನಕ್ಕೆರೆವ ಕೈಯಲ್ಲಿ ವಿಪ್ರನಕಾಲ ತೊಳೆವವರನ್ನು ಕಂಡ ಬಸವಣ್ಣನವರು ಅಂತವರನ್ನು ದುರಾಚಾರಿಗಳೆಂದು ಕರೆದಿದ್ದಾರೆ.

“ಗುರುವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ
ಲಿಂಗವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ
ಜಂಗಮವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ
ಪ್ರಸಾದವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ
ಇಂಡೀ ಚತುರ್ವಿಧ ಸಂಪನ್ನ ಕೂಡಲಸಂಗಯ್ಯನಲ್ಲಿ ಚೆನ್ನಬಸವಣ್ಣನು”

-ಬಸವಣ್ಣ(ಸ.ವ.ಸಂ.1,ವ:1181)

ಗುರು-ಲಿಂಗ-ಜಂಗಮರ ವಚನದಂತೆ ನಡೆವ ಪ್ರಸಾದಿಯೇ ನಿಜವಾದ ಪ್ರಸಾದಿಯೆಂದು ಹೇಳಿರುವ ಬಸವಣ್ಣನವರು, ಚೆನ್ನಬಸವಣ್ಣನು ನಿಜವಾದ ಪ್ರಸಾದಿಯೆಂದು ತಿಳಿಸಿದ್ದಾರೆ. ಪ್ರಸಾದಿ, ಪ್ರಸಾದಿಯೆಂಬ ಪದಗಳು ಪ್ರತಿ ಸಾಲಿನಲ್ಲಿಯೂ ಇಲ್ಲಿ ಪುನರಾವರ್ತನೆಗೊಂಡಿರುವುದನ್ನು ಕಾಣಬಹುದಾಗಿದೆ.

ತನ್ನ ಮುಟ್ಟಿ ನೀಡಿದುದೆ ಪ್ರಸಾದ,ತನ್ನ ಮುಟ್ಟದೆ, ನೀಡಿದುದೆ ಓಗರವೆಂದು ಹೇಳಿರುವ ಅಲ್ಲಮಪ್ರಭುಗಳು, ‘ಒಕ್ಕು ಮಿಕ್ಕು ಹೋಗುವ ಪಂಚಸಕೀಲವ ಬಲ್ಲಡೆ ಗುಹೇಶ್ವರ ಲಿಂಗದಲ್ಲಿ ಆತನೇ ಪ್ರಸಾದಿ(ವ:1028)’ ಎಂದು ತಿಳಿಸಿದ್ದಾರೆ. ‘ಆದಿ ಇಲ್ಲದಿದ್ದರೆ ಲಿಂಗಪ್ರಸಾದಿಯೆಂಬೆನು, ವ್ಯಾಧಿ ಇಲ್ಲದಿದ್ದರೆ ಜಂಗಮಪ್ರಸಾದಿಯೆಂಬೆನು, ಲೌಕಿಕವ ಸೋಂಕದಿದ್ದರೆ ಸಮಯ ಪ್ರಸಾದಿಯೆಂಬೆನೆಂದು ಹೇಳಿರುವ ಅವರು ಈ ತ್ರಿವಿಧ, ಪ್ರಸಾದ ಸಂಬಂಧಿಯಾದರೆ ಆತನೇ ಅಚ್ಚಪ್ರಸಾದಿಯೆಂದು ಹೇಳಿದ್ದಾರೆ.

“ಕಾಲನ ಕೊಂದಾತನಲ್ಲದೆ ಶುದ್ಧ ಪ್ರಸಾದಿಯಲ್ಲ
ಕಾಮನ ತಿಂದಾತನಲ್ಲದೆ ಸಿದ್ಧ ಪ್ರಸಾದಿಯಲ್ಲ
ತಿಪುರವ ಸುಟ್ಟಾತನಲ್ಲದೆ ಪ್ರಸಿದ್ಧ ಪ್ರಸಾದಿಯಲ್ಲ
ಕೆಸರಲ್ಲಿ ಕಿಚ್ಚನಿಕ್ಕಿ ಬಸುರ ಬಡಿದು ಕೊಂಡಾತನಲ್ಲದೆ
ಈ ತ್ರಿವಿಧ ಪ್ರಸಾದವಿಲ್ಲ ಕಾಣಾ ಗುಹೇಶ್ವರಾ”

-ಅಲ್ಲಮಪ್ರಭು(ಸ.ವ.ಸಂ.2,ವ:1120)

ಈ ವಚನದಲ್ಲಿ ಪ್ರಭುದೇವರು ಪ್ರಸಾದದ ಬಗೆಗಳನ್ನು ತಿಳಿಸಿದ್ದಾರೆ. ಕಾಲನ ಕೊಂದಾತನೆಂದರೆ ಕಾಲನನ್ನು ಗೆದ್ದಾತನೆಂದು ಅರ್ಥೈಸಬೇಕು, ಕಾಮನ ತಿಂದಾತನೆಂದರೆ ಕಾಮವನ್ನು ಅರಗಿಸಿಕೊಂಡಾತನೆಂದರ್ಥವಾಗುತ್ತದೆ. ತ್ರಿಪುರವ ಸುಟ್ಟಾತನೆಂದರೆ ಮಲತ್ರಯಗಳನ್ನು ನಾಶಗೊಳಿಸಿದಾತನೆಂದು ತಿಳಿಯಬೇಕು. ಇಂತವರು ಪ್ರಸಾದಿಗಳೆಂದು ತಿಳಿಸಿರುವ ಪ್ರಭುದೇವರು ಉಳಿದವರಿಗೆ ತ್ರಿವಿಧ ಪ್ರಸಾದವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಅಚ್ಚಪ್ರಸಾದಿ ನಿಚ್ಚಪ್ರಸಾದಿಗಳೆಂದುಕೊಂಡು ತಿರುಗುವವರನ್ನು ಹುಚ್ಚರೆಂದು ಚೆನ್ನಬಸವಣ್ಣನವರು ವಿಡಂಬಿಸಿದ್ದಾರೆ. ಲಿಂಗಕ್ಕೆ ಅರ್ಪಿಸಿಕೊಳ್ಳುವಾತನೆ ಅಚ್ಚಪ್ರಸಾದಿಯೆಂದು ತಿಳಿಸಿದ್ದಾರೆ. ಮನಮುಟ್ಟಿ, ತನುಮುಟ್ಟಿ, ಧನಮುಟ್ಟಿ, ಕೊಂಡುದುದು ಪ್ರಸಾದವಲ್ಲವೆಂದು ಸ್ಪಷ್ಟಪಡಿಸಿದ ಅವರು, ಗುರುವಿನಲ್ಲಿ ಶುದ್ಧಪ್ರಸಾದವಿದೆ, ಲಿಂಗದಲ್ಲಿ ಸಿದ್ಧ ಪ್ರಸಾದವಿದೆ, ಜಂಗಮದಲ್ಲಿ ಪ್ರಸಿದ್ಧ ಪ್ರಸಾದವಿದೆಯೆಂದು ಹೇಳಿದ್ದಾರೆ. ನಿಜವಾದ ಪ್ರಸಾದಿ ಬಸವಣ್ಣನಲ್ಲದೆ ಮತ್ತಾರೂ ಇಲ್ಲವೆಂದು ಅನೇಕ ವಚನಕಾರರು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಕೈಯಲ್ಲಿಕ್ಕಿದವ ಶಿವದ್ರೋಹಿ, ಕೈಯಾಂತುಕೊಂಡವ ಗುರುದ್ರೋಹಿಯೆಂದು ವಿಡಂಬನೆ ಮಾಡಿದ್ದಾರೆ.

“ಓಗರ ಪ್ರಸಾದವ ಮಾಡಿ, ಪ್ರಸಾದವ ಓಗರವ ಮಾಡಿ
ಕೊಟ್ಟುಕೊಂಬನಾಗಿ ಆತ ಲಿಂಗಪ್ರಸಾದಿ
ರೂಪರಸ ಗಂಧ ಪರುಶ ಸಹಿತ
ಜಂಗಮಕ್ಕೆ ಅರ್ಪಿತವ ಮಾಡಿಕೊಂಡಾತ ಜಂಗಮಪ್ರಸಾದಿ
ಕಾಮಕ್ರೋಧ ಲೋಭ ಮೋಹ ಮದ ಮತ್ಸರವಿಲ್ಲಾಗಿ
ಆತ ಜಂಗಮಪ್ರಸಾದಿ........”

-ಚೆನ್ನಬಸವಣ್ಣ(ಸ.ವ.ಸಂ.3,ವ:316)

ಈ ವಚನದಲ್ಲಿ ಚೆನ್ನಬಸವಣ್ಣನವರು ನಿಜವಾದ ಪ್ರಸಾದಿಯ ಸ್ಪಷ್ಟಚಿತ್ರಣವನ್ನು ಕೊಟ್ಟಿದ್ದಾರೆ. ಅಷ್ಟಮದಗಳನ್ನು ಕಳೆದುಕೊಂಡು, ಅರಿಷಡ್‍ವರ್ಗಗಳನ್ನು ಗೆದ್ದುಕೊಂಡು, ಸಪ್ತಧಾತುಗಳನ್ನು ನೀಗಿಕೊಂಡು ಸಾಧನೆ ಮಾಡಿದವನೇ ನಿಜವಾದ ಪ್ರಸಾದಿಯೆಂದು ಹೇಳಿದ್ದಾರೆ.

‘ಭಕ್ತಿವಿಡಿದು ಭಕ್ತನಾದ ಪ್ರಸಾದಿ, ಆ ಭಕ್ತಂಗೆ ಮಾಹೇಶ್ವರನಾದ ಪ್ರಸಾದಿ’ ಎಂದು ಹೇಳಿರುವ ಸಿದ್ಧರಾಮ ಶಿವಯೋಗಿಗಳು, ಚೆನ್ನಬಸವಣ್ಣನೇ ಅಚ್ಚಪ್ರಸಾದಿಯೆಂದು ತಿಳಿಸಿದ್ದಾರೆ.

“ಗುರು ಮುಟ್ಟಿಬಂದ ಶುದ್ಧಪ್ರಸಾದಿಯಾದಡೆ
ವಾತಪಿತ್ತ ಶ್ಲೇಷ್ಮವಳಿದಿರಬೇಕು.
ಲಿಂಗ ಮುಟ್ಟಿ ಬಂದ ಸಿದ್ದಪ್ರಸಾದಿಯಾದಕೆ
ಆದಿವ್ಯಾಧಿಗಳಿಲ್ಲದಿರಬೇಕು.
ಜಂಗಮ ಮುಟ್ಟಿ ಬಂದ ಪ್ರಸಿದ್ದ ಪ್ರಸಾದಿಯಾದಡೆ
ಅಜ್ಞಾನ ರೋಗವಿಲ್ಲದಿರಬೇಕು.
ಮೂರರ ಅರುಹು ಗಟ್ಟಿಗೊಳ್ಳುವ ಮಹಾಪ್ರಸಾದಿಯಾದಡೆ
ಮರಣವಿಲ್ಲದಿರಬೇಕು..............”

-ಸಿದ್ಧರಾಮ(ಸ.ವ.ಸಂ.4,ವ:1280)

ಈ ವಚನದಲ್ಲಿ ಸಿದ್ಧರಾಮ ಶಿವಯೋಗಿಗಳು ಪ್ರಸಾದಿಯೆಂದರೇನು? ನಿಜವಾದ ಪ್ರಸಾದಿಯಾಗಬೇಕಾದರೆ ಏನು ಮಾಡಬೇಕೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ವಾತ-ಪಿತ್ತ-ಶ್ಲೇಷವಳಿದು ಆದಿವ್ಯಾದಿಗಳನ್ನು ಕಳೆದುಕೊಂಡು, ಅಜ್ಞಾನವನ್ನು ಬಿಟ್ಟು ಸುಜ್ಞಾನಿಯಾದಾಗ ನಿಜವಾದ ಪ್ರಸಾದಿಯಾಗಲು ಸಾಧ್ಯವೆಂದು ಹೇಳಿದ್ದಾರೆ.

ತಾವು ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿಗಳೆಂದು ಹೇಳಿಕೊಂಡು ತಿರುಗುವವರನ್ನು ಕಂಡ ಅಂಬಿಗರ ಚೌಡಯ್ಯವನರು ತೀವ್ರವಾಗಿ ವಿಡಂಬಿಸಿದ್ದಾರೆ. ಸಮಸ್ತ ಪದಾರ್ಥವನ್ನು ಗುರುಲಿಂಗಜಂಗಮದಿಂದ ಪವಿತ್ರಗೊಳಿಸಿ ಅವರವರ ಪದಾರ್ಥವನ್ನು ಅವರವರಿಗೆ ನಿರ್ವಂಚನೆಯಿಂದ ಸಮರ್ಪಿಸುವದೇ ತ್ರಿವಿಧ ಪ್ರಸಾದವೆಂದು ತಿಳಿಸಿದ್ದಾರೆ.

ಪ್ರಸಾದವೇ ಗುರುಲಿಂಗಜಂಗಮವಾಗಿದೆ, ಪ್ರಸಾದವೇ ನಿತ್ಯಪರಿಪೂರ್ಣವಾಗಿದೆಯೆಂದು ಹೇಳಿರುವ ಉರಿಲಿಂಗಪೆದ್ದಿಗಳು,ಪಂಚೇಂದ್ರಿಯಂಗಳ ಪಂಚವಿಷಯಗಳನ್ನು ಶಿವಲಿಂಗ ಮುಖಕ್ಕರ್ಪಿಸಿ ತೆಗೆದುಕೊಂಡರೆ ಅದೇ ಪ್ರಸಾದವೆಂದು ತಿಳಿಸಿದ್ದಾರೆ.

“...........ಪ್ರಸಾದ ಪರಾಪರವಾದುದು
ಶಾಂತನಾಗಿ, ಸತ್ಯನಾಗಿ, ಪ್ರಸನ್ನವಾಗಿಹುದು ಪ್ರಸಾದಿ……..
ದೀಕ್ಷಾಮೂರ್ತಿ ಪರಮಗುರುಮಹಾಲಿಂಗಕ್ಕೆ
ತನುಮನಧನವನರ್ಪಿಸಿ, ಪ್ರಸನ್ನ ಪ್ರಸಾದನ ಪಡೆದು
ಆ ಪ್ರಸಾದವ ಶುದ್ಧವ ಮಾಡಿ ನಿಲಿಸಿ
ಶಾಂತನಾಗಿ, ನಿತ್ಯನಾಗಿ, ಪ್ರಸನ್ನಮೂರ್ತಿಯಾಗಿಪ್ಪ
ಆ ಪ್ರಸಾದಿಯೇ ಪ್ರಸಾದಗ್ರಾಹಕ.........”

-ಉರಿಲಿಂಗಪೆದ್ದಿ(ಸ.ವ.ಸಂ.6.ವ:1451)

ಹೀಗೆ ಪ್ರಸಾದದ ಪರಿಗಳನ್ನು ಉರಿಲಿಂಗಪೆದ್ದಿಗಳು ಈ ವಚನದಲ್ಲಿ ವಿವರಿಸಿದ್ದಾರೆ. ಪ್ರಸನ್ನತೆಗೂ ಪ್ರಸಾದಕ್ಕೂ ಸಂಬಂಧವಿದೆಯೆಂದು ಹೇಳಿದ್ದಾರೆ. ತನುಮನ ಧನದಲ್ಲಿ ವಂಚನೆಯಿಲ್ಲದೆ ವಿಶ್ವಾಸದಿಂದ ನಂಬಿ ಪ್ರಸಾದವ ಪಡೆಯಬೇಕೆಂದು ತಿಳಿಸಿದ್ದಾರೆ.

“ಗೋವು ಮಾಣ ಕವನನುಂಗಿದಾಗ
ಗೋವ ಕೊಲ್ಲಬಾರದು, ಮಾಣ ಕವ ಬಿಡಬಾರದು
ಗೋವು ಸಾಯದೆ ಮಾಣ ಕ ಕೆಡದೆ ಬೇರೆ ಹಾದಿಯಬಲ್ಲಡೆ
ಆತ ತ್ರಿವಿಧ ಪ್ರಸಾದಿಯೆಂಬೆ
ಆ ಗುಣ ಏಲೇಶ್ವರಲಿಂಗಕ್ಕೂ ಅಸಾಧ್ಯ ನೋಡಾ!”
-ಏಲೇಶ್ವರ ಕೇತಯ್ಯ(ಸ.ವ.ಸಂ.6.ವ:1685)

 

ಈ ವಚನದಲ್ಲಿ ಏಲೇಶ್ವರಕೇತಯ್ಯನವರು ತ್ರಿವಿಧ ಪ್ರಸಾದಿಯೆಂದರೆ ಯಾರೆಂಬುದನ್ನು ತಿಳಿಸಿದ್ದಾರೆ. ಗೋವು ಸಾಯದೆ, ಮಾಣ ಕ ಕೆಡದೆ ಇರುವ ಮಾರ್ಗ ಕಂಡುಕೊಳ್ಳುವುದು ಅಷ್ಟೊಂದು ಸುಲಭವಲ್ಲವೆಂದು ಹೇಳಿದ್ದಾರೆ.

‘ಅಂಗದಲ್ಲಿ ಅರ್ಪಿತವ ಮಾಡಿ ನಾವು ಪ್ರಸಾದಿಗಳು ಎನ್ನುವವರಿಗೆ ತನು ಮನ ಸೂತಕಗಳು ಹಿಂಗವು’(ವ:404) ಎಂದು ಘಟ್ಟಿವಾಳಯ್ಯನವರು ಹೇಳಿದ್ದಾರೆ. ‘ಹೆಡ ತಲೆಯ ಮಾತಬಲ್ಲಡೆ, ನಡುನೆತ್ತಿಯ ಮರ್ಮನವರಿದಡೆ ಆತ ಪ್ರಸಾದಿ’ ಎಂದು ಚಂದಿಮರಸ ಅವರು ಅಭಿಪ್ರಾಯ ಪಟ್ಟಿದ್ದಾರೆ. ‘ಜಂಗಮದ ಪ್ರಸಾದವ ಲಿಂಗಕ್ಕೆ ಕೊಡಬಾರದೆಂಬ ಕರ್ವೀಯರ ಮಾತ ಕೇಳಲಾಗದು.(ವ:158)’ ಎಂದು ಬಹುರೂಪಿ ಚೌಡಯ್ಯನವರು ಹೇಳಿದ್ದಾರೆ. ‘ಅಯ್ಯಾ, ನಿಮ್ಮ ಪ್ರಸಾದದ ಮಹಿಮೆಯನೇನೆಂಬೆನಯ್ಯಾ ವೇದಂಗಳರಿಯವು, ಶಾಸ್ತ್ರಂಗಳು ತಿಳಿಯವು(ವ:470)’ ಎಂದು ಮಡಿವಾಳ ಮಾಚಿದೇವರು ತಿಳಿಸಿದ್ದಾರೆ.

ಪ್ರಸಾದಗಳಲ್ಲಿ ಅರ್ಪಿತಪ್ರಸಾದ, ಅವಧಾನ ಪ್ರಸಾದ, ಪರಿಣಾಮ ಪ್ರಸಾದ, ಸಮಯಪ್ರಸಾದ, ಸರ್ವಾಂಗಪ್ರಸಾದ, ಶುದ್ಧಪ್ರಸಾದ, ಸಿದ್ಧಪ್ರಸಾದ, ಪ್ರಸಿದ್ಧಪ್ರಸಾದ, ಪರಿಪೂರ್ಣಪ್ರಸಾದ, ದಿವ್ಯಪ್ರಸಾದ, ಆದಿಪ್ರಸಾದ ಹೀಗೆ ಅನೇಕ ರೀತಿಯ ಪ್ರಸಾದಗಳಿವೆಯೆಂದು ತಿಳಿಸಿರುವ ಹಡಪದಪ್ಪಣ್ಣನವರು, ಆದಿಪ್ರಸಾದಿಯೇ ಗುರು, ಅನಾದಿಪ್ರಸಾದಿಯೇ ಲಿಂಗ, ಅಂತ್ಯಪ್ರಸಾದಿಯೇ ಜಂಗಮವೆಂದು ಹೇಳಿದ್ದಾರೆ.

“ಕಾಯ ಕರಣಾದಿಗಳ ಏಕವ ಮಾಡಿದ ಪ್ರಸಾದಿ
ಪ್ರಾಣ ನಿ:ಪ್ರಾಣವನೇಕವ ಮಾಡಿದ ಪ್ರಸಾದಿ
ಭಾವ ನಿರ್ಭಾವವನೇಕವ ಮಾಡಿದ ಪ್ರಸಾದಿ
ಮನಬುದ್ಧಿ ಚಿತ್ತಹಂಕಾರವನೇಕವ ಮಾಡಿದ ಪ್ರಸಾದಿ
ಈ ಪ್ರಸಾದವ ಕಂಡು ಎನ್ನಭವಂ ನಾಸ್ತಿಯಾಯಿತ್ತು ಕಾಣಾ
ಬಸವಪ್ರಿಯ ಕೂಡಲಚೆನ್ನಬಸವಣ್ಣ”

-ಹಡಪದಪ್ಪಣ್ಣ(ಸ.ವ.ಸಂ.9,ವ:928)

ಹಡಪದಪ್ಪಣ್ಣನವರು ಈ ವಚನದಲ್ಲಿ ಪ್ರಸಾದಿಯ ಪ್ರಾಮುಖ್ಯತೆಯನ್ನು ಹೇಳಿದ್ದಾರೆ. ಎಲ್ಲವನ್ನೂ ಏಕವ ಮಾಡಿದ ಪ್ರಸಾದಿಯ ಕಣ್ಣಲ್ಲಿ ಎಲ್ಲರೂ ಒಂದೆಯಾಗಿ, ಎಲ್ಲವೂ ಒಂದೆಯಾಗಿ ಕಾಣ ಸುತ್ತವೆ. ಇಂತಹ ಪ್ರಸಾದಿಯನ್ನು ಕಂಡು ಎನ್ನ ಭವನಾಸ್ತಿಯಾಯಿತೆಂದು ಅಪ್ಪಣ್ಣನವರು ತಿಳಿಸಿದ್ದಾರೆ.

‘ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ, ಜಂಗಮದ ಆರೋಗಣೆಯ ಮಾಡಿ ಮಿಕ್ಕುದ ಕೊಂಡಡೆ ‘ಪ್ರಸಾದಿ’ಯೆಂದು ಹಾವಿನಹಾಳ ಕಲ್ಲಯ್ಯ ಹೇಳಿದ್ದಾರೆ.

‘ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ’ಯೆಂದು ಹೇಳಿರುವ ಹೊಡೆಹುಲ್ಲ ಬಂಕಣ್ಣಗಳು, ಮಹಾಪ್ರಸಾದಿಯ ಕಾರುಣ್ಯ ತನಗೆಂದಿಗೆ ಸಾಧ್ಯವಪ್ಪುದು?ಎಂದು ಕೇಳಿಕೊಂಡಿದ್ದಾರೆ.

“ಕಾಯ ಪ್ರಸಾದವಾದಲ್ಲಿ ಗುರುಪ್ರಸಾದವನೊಲ್ಲ
ಭಾವ ಪ್ರಸಾದವಾದಲ್ಲಿ ಲಿಂಗಪ್ರಸಾದವನೊಲ್ಲ
ಜ್ಞಾನ ಪ್ರಸಾದವಾದಲ್ಲಿ ಜಂಗಮಪ್ರಸಾದವನೊಲ್ಲ
ಇಂತೀ ತ್ರಿವಿಧ ಪ್ರಸಾದವ ಬಲ್ಲವ, ಮಹಾಪ್ರಸಾದವ ಕೊಂಬ........”
-ಹೊಡೆಹುಲ್ಲ ಬಂಕಣ್ಣ(ಸ.ವ.ಸಂ.9,ವ:1201)

ಕಾಯ-ಭಾವ-ಜ್ಞಾನ ಪ್ರಸಾದವಾದಲ್ಲಿ ಗುರು-ಲಿಂಗ-ಜಂಗಮ ಪ್ರಸಾದವನೊಲ್ಲನೆಂದು ಹೇಳಿರುವ ಬಂಕಣ್ಣನವರು ಈ ತ್ರಿವಿಧ ಪ್ರಸಾದವ ತಿಳಿದಾತನೇ ಮಹಾಪ್ರಸಾದಿಯೆಂದು ಹೇಳಿದ್ದಾರೆ. ‘ಎನ್ನ ತನು ಮನ ಪ್ರಾಣ ಪದಾರ್ಥವ, ಗುರುಲಿಂಗ ಜಂಗಮಕ್ಕಿತ್ತು, ಶುದ್ಧಸಿದ್ಧ ಪ್ರಸಿದ್ಧ ಪ್ರಸಾದಿಯಾದೆನೆಂದು’ ಹೇಳಿರುವ ಮಹಾದೇವಿಯಕ್ಕನವÀರು ಗುರು-ಲಿಂಗ-ಜಂಗಮದಲ್ಲಿ ಶುದ್ಧ-ಸಿದ್ಧ-ಪ್ರಸಿದ್ಧ ಪ್ರಸಾದವಳವಟ್ಟಿದೆಯೆಂದು ತಿಳಿಸಿದ್ದಾರೆ.

“ಪ್ರಸಾದಿಗಳು ಪ್ರಸಾದಿಗಳೆಂದೆಂದೆಂಬರಯ್ಯ
ತಾವು ಪ್ರಸಾದಿಗಳಾದ ಪರಿಯೆಂತಯ್ಯ?
ಪರಿಪೂರ್ಣದ ನೆಲೆಯ ತಿಳಿದು
ಪರಂಜ್ಯೋತಿಯ ಅನುಭವನರಿಯದನ್ನಕ್ಕ
ತಾವು ಪ್ರಸಾದಿಗಳಾದ ಪರಿಯಂತಯ್ಯ?
ಪರಮಸುಖದ ಅನುಭವವನರಿದು ಇತರೇತರ ಮಾರ್ಗವ ಕಾಣದೆ
ಬಯಲಕೂಡಿದಾತ ನಮ್ಮ ಬಸವನೆ ಪ್ರಸಾದಿಯಲ್ಲದೆ
ಮತ್ತಾರಿಗೂ ಪ್ರಸಾದಿಸ್ಥಲ ಸಾಧ್ಯವಾಗದಯ್ಯ ಸಂಗಯ್ಯ”

-ನೀಲಮ್ಮ(ಸ.ವ.ಸಂ.5,ವ:998)

ಪರಿಪೂರ್ಣದ ನೆಲೆಯ ತಿಳಿಯದೆ, ಪರಂಜ್ಯೋತಿಯ ಅನುಭವವನರಿಯದೆ ಪ್ರಸಾದಿಯಾಗಲು ಸಾಧ್ಯವಿಲ್ಲವೆಂದು ಹೇಳಿದ ನೀಲಮ್ಮನವರು, ಪ್ರಸಾದಿಸ್ಥಲವು ಬಸವಣ್ಣನವರನ್ನು ಬಿಟ್ಟು ಮತ್ತಾರಿಗೂ ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಈ ಅಂಕಣದ ಹಿಂದಿನ ಬರಹಗಳು:
ಮಹೇಶ್ವರಸ್ಥಲ
ಭಕ್ತಸ್ಥಲ
ಷಟ್‍ಸ್ಥಲಗಳು
ಭೃತ್ಯಾಚಾರ
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...