ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!

Date: 23-04-2021

Location: ಬೆಂಗಳೂರು


ನೆಲಮೂಲದ ಆಶಯಗಳನ್ನು ತಮ್ಮ ಸಾಹಿತ್ಯದಲ್ಲಿ ದಾಖಲಿಸುವ ಹಿರಿಯ ಕವಿ ಎಸ್. ಜಿ. ಸಿದ್ಧರಾಮಯ್ಯ ಅವರ ಆತ್ಮಕಥನ ‘ಯರೇಬೇವು’ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ಆತ್ಮಕಥನ ಹಾಗೂ ಎಸ್.ಜಿ.ಎಸ್ ಅವರ ಸಾಹಿತ್ಯಯಾನದ ಕುರಿತು ವಿಶ್ಲೇಷಿಸಿದ್ದಾರೆ.

ಮನುಷ್ಯ ತಾನು ಹುಟ್ಟಿ ಬಂದ (ಬಳಿಸಾಲು) ಬಳಗದ ಜೊತೆ ಅವನು ಕಟ್ಟಿಕೊಂಡ ಬಳಗದಲ್ಲಿ ಯಾರೆಲ್ಲ ಇದ್ದಾರೆ ಎಂಬುದು ಅವನು ನಿಜಕ್ಕೂ ಯಾರು, ಏನು ಎಂಬುದನ್ನು ತಿಳಿಸುತ್ತದೆ. ‘ನೀನ್ಯಾರೋ ನಿನ್ನ ಬಳಗವ್ಯಾವುದೋ’ ಎಂಬಂತೆ ಒಬ್ಬರ ಸುಳಿಕಟ್ಟು, ಕುಲಕಟ್ಟುಗಳ ಜೊತೆ ಅವರ ಕೆಳೆಕಟ್ಟು, ಪರೆಕಟ್ಟು (ಸ್ನೇಹಿತರ, ಸಹವಾಸಿಗಳ; ಚರಿತ್ರೆ, ಪುರಾಣ ಪರಂಪರೆಯವರ ಬಳಗ) ನೋಡಿದರೆ ಅವರ ವ್ಯಕ್ತಿತ್ವದ ಪರಿಚಯ ಆಗುತ್ತದೆ. ಈ ಹಿನ್ನೆಲೆಯಲ್ಲಿ, ಸಿಂಗುಸಿಯವರ (ಸಿಂಗಾಪುರದ ಗುರುಭಕ್ತಯ್ಯನವರ ಮಗ ಸಿದ್ಧರಾಮಯ್ಯನವರ ಬಳಗ ಬಳಿಸಾಲು ಸಂಕಲನದಲ್ಲಿ ಇವರ ಬದುಕು, ವ್ಯಕ್ತಿತ್ವ ಮತ್ತು ದೃಷ್ಟಿಧೋರಣೆಗಳೇ ವ್ಯಕ್ತಿಚಿತ್ರಗಳ ಕಾವ್ಯರೂಪ ತಾಳಿ ನಿಂತಿವೆ. ಒಬ್ಬ ವ್ಯಕ್ತಿ ಹೇಗೆ ತನ್ನ ಬಳಿಸಾಲು ದಾಟಿ ಜಾತ್ಯತೀತವಾಗಿ, ಧರ್ಮತೀತವಾಗಿ, ಕಾಲ, ದೇಶಾತೀತವಾಗಿ ಬದುಕಬೇಕು ಎಂಬುದರ ತತ್ವರೂಪ ತಾಳಿದ ಅಭಿವ್ಯಕ್ತಿಗಳಾಗಿ ಇಲ್ಲಿನ ಕವಿತೆಗಳಿವೆ. ಈ ಕವಿತೆಗಳು ಪದ್ಯ ಬರೆಯಬೇಕೆಂಬ ಉದ್ದೇಶದಿಂದ ಬರೆದ ಪದ್ಯಗಳಲ್ಲ. ಇವೆಲ್ಲ ಹಲವು ಸಾಂದರ್ಭಿಕ ಒತ್ತಡಗಳಿಂದ ತಾವಾಗೇ ಬರೆಸಿಕೊಂಡ ಪದ್ಯಗಳು. ಸಮಯಾಸಮಯದ ಭೇದವಿಲ್ಲದೆ ಸಿಂಗುಸಿಯವರ ಆತ್ಮಸಂಗಾತಿ ಆಗಿ ಇದ್ದ ಮತ್ತು ಇರುವ ಪದ್ಯಗಳು ಇವು.

ಈ ಸಂಕಲನದಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ಬಳಿಸಾಲ ಬಳಗ ಅಂದರೆ ಕುಲಕಟ್ಟು ಮತ್ತು ಕೌಟುಂಬಿಕ ಬಳಗ ಇದ್ದರೆ ಎರಡನೆ ಭಾಗದಲ್ಲಿ ಗುರುಗಳು ಮತ್ತು ಗೆಳೆಯರ ಬಳಗ ಇದೆ. ಮೂರನೆ ಭಾಗದಲ್ಲಿ ಚರಿತ್ರೆ ಮತ್ತು ಪುರಾಣಗಳ ಪಾತ್ರಪ್ರತೀಕಗಳ ಕರೆಬಳಗ ಇದೆ. ಕನ್ನಡದಲ್ಲಿ ಸಾಲುದೀಪಗಳು, ಲೇಖಲೋಕ, ಹಳ್ಳಿಯ ಹತ್ತು ಸಮಸ್ತರು, ಜ್ಞಾಪಕ ಚಿತ್ರಶಾಲೆ, ನೆನಪಿನ ಚಿತ್ರಗಳು, ಹಳೆಯ ಪಳೆಯ ಮುಖಗಳು, ಅವರಿವರು, ವೃಂದಾವನ ಹೀಗೆ ಹತ್ತಾರು ವ್ಯಕ್ತಿ ಚಿತ್ರಗಳ ಕಟ್ಟುಗಳು ಗದ್ಯರೂಪದಲ್ಲಿ ಇವೆ. ಗಾಂಧಿ, ಅಂಬೇಡ್ಕರ್, ಏಸು, ಬಸವಣ್ಣ, ಕುವೆಂಪು ಹೀಗೆ ಒಬ್ಬ ವ್ಯಕ್ತಿಯ ಬಗ್ಗೆ ಹಲವಾರು ಜನ ಬರೆದಿರುವ ನೂರಾರು ಕವಿತೆಗಳನ್ನು ಸಂಕಲಿಸಿದ ವ್ಯಕ್ತಿಕೇಂದ್ರಿತ ಕವನಸಂಕಲನಗಳೂ ಇವೆ. ಆದರೆ ಒಬ್ಬನೇ ಕವಿ ಬರೆದಿರುವ ಹತ್ತಾರು ವ್ಯಕ್ತಿಗಳ ಕುರಿತ ಪದ್ಯಗಳು ಒಟ್ಟಿಗೆ ಸಂಕಲಿತವಾಗಿ ಪ್ರಕಟವಾಗುತ್ತಿರುವುದು ಕನ್ನಡದಲ್ಲಿ ಸಿಂಗುಸಿ ಅವರದೆ ಮೊದಲು. ಹಾಗಾಗಿ ಈ ಸಂಕಲನ ಆಧುನಿಕ ಪದ್ಯಚರಿತ್ರೆಯಲ್ಲಿ ಒಂದು ವಿಶಿಷ್ಟವಾದ ಸ್ಥಾನ ಪಡೆದಿದೆ.

ಇಲ್ಲಿನ ಮೊದಲ ಭಾಗದ ಒಂದೊಂದು ಪದ್ಯಗಳೂ ಒಂದೊಂದು ಖಂಡಕಾವ್ಯ ಆಗಬಲ್ಲ ಸಾಧ್ಯತೆ ಇರುವ ಪದ್ಯಗಳು. ಇವುಗಳೆಲ್ಲಕ್ಕೂ ಒಂದೊಂದು ಪ್ರವೇಶಿಕೆ ಬರೆಯುವ ಅಗತ್ಯ ಇದೆ. ಇವುಗಳ ಬಗ್ಗೆ ಸಿಂಗುಸಿ ಜೊತೆ ಮಾತಾಡುತ್ತ ಕುಳಿತರೆ; ಅವರ ಬಳಿ ಒಂದೊಂದರ ಬಗೆಗೂ ನಾಲ್ಕಾರು ಗಂಟೆ ಮಾತಾಡಬಲ್ಲಷ್ಟು ಕತೆಗಳಿವೆ. ಆದರೆ ಕೆಲವೊಂದನ್ನು ಹೊರತುಪಡಿಸಿದರೆ ಮಿಕ್ಕಂತೆ ಇಲ್ಲಿನ ಒಂದೊಂದು ವ್ಯಕ್ತಿಚಿತ್ರಗಳೂ ಹೆಮ್ಮರಗಳೆಲ್ಲ ಬೋನ್ಸಾಯ್ ಗಿಡ ಆಗಿರುವ ಹಾಗೆ ಇವೆ. ಕೆಲವು ಆತ್ಮಚರಿತ್ರೆಯ ನಿರೂಪಣೆಗಳನ್ನು ಹಾಗೆ ಗಾಳಿಗೆ ಬಿಚ್ಚಿ ಎಸೆಯಲು ಆಗುವುದಿಲ್ಲ; ಸೂಚ್ಯವಾಗಿ ಹೇಳಬೇಕಾಗುತ್ತದೆ. ಕೆಲವೇ ಬಿಡಿ ವಿವರಗಳನ್ನು ಅಪೂರ್ಣವೆಂಬಂತೆ ನೀಡಿ ಮೌನ ವಹಿಸಬೇಕಾಗುತ್ತದೆ. ಆತ್ಮಚರಿತ್ರೆಯ ತುಣುಕುಗಳು ಬಿಡಿ ಪದ್ಯವಾದಾಗ ಸಾಮಾನ್ಯವಾಗಿ ಹೀಗೇ ಆಗುತ್ತದೆ. ಇಲ್ಲಿಯೂ ಹಾಗೇ ಆಗಿದೆ.

ಒಡಲ ಪಂಚರ ನಡುವೆ ಮನೆ ಬಿಟ್ಟ ಮಧ್ಯಮನು…
ನೆಂಟರೆಲ್ಲರ ನಡುವೆ ಗಂಟು ಕಾಯುವ ಸರ್ಪ
ಗಣಿಯ ಗರ್ಭದಲೆಲ್ಲ ಗುಟುಕು ಗಂಜಿಗೆ ಜೀತ
ಒಲುಮೆ ನಾರಿದ ಕಡಲು ಬಂಗ ಬಡತನದೊಡಲು
(ಅಪ್ಪ: 04)

ಈ ಸಂಕಲನದ ಮೊದಲ ಪದ್ಯ ‘ಅಪ್ಪ’ ಆರಂಭ ಆಗುವುದೇ ‘ಒಡಲ ಪಂಚರ ನಡುವೆ ಮನೆ ಬಿಟ್ಟ ಮಧ್ಯಮನು’ ಎಂಬ ಸಾಲಿನಿಂದ. ಅಂದರೆ ಮೊದಲ ಸಾಲಿನಲ್ಲೆ ಒಂದು ಕತೆ ಅಡಗಿದೆ. ಇಲ್ಲಿನ ಅಪ್ಪ ಐದು ಜನ ಮಕ್ಕಳಲ್ಲಿ ಮಧ್ಯಮ. ಒಮ್ಮೆ ಈತ ಮನೆ ಬಿಟ್ಟು ಹೋದ. ಎಲ್ಲಿಗೆ ಹೋದ ಎತ್ತ ಹೋದ ಗೊತ್ತಿಲ್ಲ; ಆದರೆ ಯಾಕೆ ಹೋದ ಎನ್ನುವುದು ಗೊತ್ತಿದೆ. ಗೊತ್ತಿದ್ದರೂ ಅದನ್ನೆಲ್ಲ ಹೇಳುವುದಕ್ಕೆ ಕವಿ ಆಯ್ಕೆ ಮಾಡಿಕೊಂಡ ಸಣ್ಣ ಪದ್ಯದ ಚೌಕಟ್ಟೇ ಒಂದು ಮಿತಿಯಾಗಿದೆ. ಇದರಲ್ಲಿ ಇಡಿಯಾಗಿ ಕಥೆ ಹೇಳಲು ಆಗುವುದಿಲ್ಲ; ಒಪ್ಪಿದ ಪದ್ಯಚೌಕಟ್ಟಿಗೆ ಕೆಲವೆ ಬಿಡಿ ವಿವರ ಹಾಕಿ ಬೋನ್ಸಾಯ್ ಮಾಡದೆ ವಿಧಿಯಿಲ್ಲ. ಮುರಿದ ಕಥನದ ಬಿಡಿವಿವರಗಳಿರುವ ಇಲ್ಲಿನ ಹಲವು ಪದ್ಯಗಳು ರೂಪಕ ಮಾದರಿಯ ಅಭಿವ್ಯಕ್ತಿ ಕ್ರಮದಿಂದ ಕೂಡಿವೆ. ಹಾಗಾಗಿ ಇಲ್ಲಿ ಕಥನಗಳು ಬೋನ್ಸಾಯ್ ಆಗಿ ಕಿರುಪದ್ಯಗಳಾಗಿವೆ. ಅದರಿಂದಾಗಿ ಇಂತಹ ಪದ್ಯಗಳಲ್ಲಿ ಉಕ್ತ ಸಂಗತಿ ಕೆಲವೇ ಆದರೆ ಅನುಕ್ತ ಸಂಗತಿಗಳು ಹತ್ತಾರು. ಕೆಲವು ಪದ್ಯಗಳು ಮೂರ್ನಾಲ್ಕು ಪುಟಗಳಷ್ಟು ಖಂಡಕವಿತೆಗಳಾಗಿ ಬೆಳೆಯಲು ಹಾತೊರೆದಿವೆ. ಆದರೂ ಎಷ್ಟು ಬೇಕೊ ಅಷ್ಟೆಲ್ಲ ಚಾಚಿಕೊಳ್ಳಲು ಆಗಿಲ್ಲ. ಅನುಕ್ತ ಸಂಗತಿಗಳನ್ನೂ ಓದುಗರು ತಿಳಿಯಬೇಕೆಂದರೆ ಅವರು ನಿರಾಶರಾಗುವ ಅಗತ್ಯವಿಲ್ಲ.

ಹಸಿವಿದ್ದ ಕಾಲದಲ್ಲಿ ಅನ್ನ ಸಿಗಲಿಲ್ಲ
ಅನ್ನ ತುಂಬಿದ ತಟ್ಟೆ ಎದುರಿಗಿಟ್ಟಾಗ ಹಸಿವಿಲ್ಲ
ಅಪ್ಪ ಕರಗಿ ಹೋದ ಅನ್ನ ಅರಗದಾಯ್ತು
ಬರೆದ ಕವಿತೆಯಲ್ಲಿ ಎಲ್ಲ ಬೆತ್ತಲಾಯ್ತು
(ಅನ್ನ ಅಪ್ಪ ಕವಿತೆ: 37)

ಎಸ್. ಜಿ. ಸಿದ್ಧರಾಮಯ್ಯನವರ ಇಲ್ಲಿನ ಸಾಲುಗಳು ಇವರ ‘ಯರೆಬೇವು’ ಆತ್ಮಕಥೆಯ ಆರಂಭದ ಸಾಲುಗಳು ಕೂಡ. ಅನುಕ್ತ ಸಂಗತಿಗಳನ್ನು ತಿಳಿಯಬಯಸುವ ಓದುಗರು ಈ ಸಂಕಲನದ ಜೊತೆಗೆ ಇವರ ಯರೆಬೇವು ಆತ್ಮಕಥೆಯನ್ನೂ ಓದಬಹುದು. ಯರೇಬೇವು ಮಾತ್ರವಲ್ಲ; ಇವರ ಬಿಜ್ಜಳನ್ಯಾಯ ಸಂಕಲನದಲ್ಲೂ ದೀರ್ಘವಾದ ಖಂಡಕಾವ್ಯಗಳಿವೆ. ಅವುಗಳ ಚೌಕಟ್ಟಿನ ಕಾರಣದಿಂದ ಅವು ಬೋನ್ಸಾಯ್ ಆಗದೆ ವಿವರವಾಗಿ ಬೆಳೆದಿವೆ. ಹಾಗಾಗಿ ಇವರ ತ್ರಿವಳಿ ಬರವಣಿಗೆ ಎಂಬಂತೆ ಈ ಮೂರನ್ನೂ ಒಟ್ಟಿಗೇ ಓದುವುದರಿಂದ ಓದುಗರಿಗೆ ಹೆಚ್ಚಿನ ಅನುಭವ ಲಭ್ಯ ಆಗಬಹುದು. ಆತ್ಮಚರಿತ್ರೆಯ ಭಾಗವಾಗಿ ಮಾತ್ರವೇ ಕವಿತೆಗಳನ್ನು ಓದಬೇಕೆ ಎಂದರೆ ಹಾಗೇನೂ ಇಲ್ಲ. ಆತ್ಮಚರಿತ್ರೆಯನ್ನು ಬರೆಯಬೇಕು ಎಂಬ ಉದ್ದೇಶದಿಂದ ಬರೆಯಲ್ಪಟ್ಟ ಕವಿತೆಗಳು ಇವಲ್ಲವಾದ್ದರಿಂದ, ಇವನ್ನೆಲ್ಲ ಹಾಗೆ ಓದಲೇಬೇಕೆಂಬ ಕಟ್ಟಳೆಯೇನೂ ಇಲ್ಲ. ವಿವರ ಬೇಕಾದವರು ಓದಬಹುದಷ್ಟೆ.

ಹಾಗೆ ನೋಡಿದರೆ, ಸಿಂಗುಸಿಯವರ ಈ ಸಂಕಲನದ ಪದ್ಯಗಳೂ ಸೇರಿದಂತೆ ಬಿಜ್ಜಳನ್ಯಾಯ ಸಂಕಲನದ ಪದ್ಯಗಳನ್ನೂ ಒಟ್ಟಿಗೆ ಇರಿಸಿ ನೋಡಿದರೆ ಇವರು ಈ ಬರವಣಿಗೆಯ ದೃಷ್ಟಿಯಿಂದ ನಮ್ಮ ಶರಣರಾದ ಹರಿಹರ ಮತ್ತು ಶಂಕರದೇವನ ದಾಯಾದಿ ಅನ್ನಿಸುತ್ತಾರೆ. ಹರಿಹರ ಮತ್ತು ಶಂಕರದೇವರು ಈಗಾಗಲೇ ಕನ್ನಡದಲ್ಲಿ ವ್ಯಕ್ತಿಗಳ ಕುರಿತಾದ ಜೀವನಚಿತ್ರಗಳನ್ನು ಸರಳವಾದ ರಗಳೆ ಛಂದಸ್ಸಿನಲ್ಲಿ ಬರೆದಿಟ್ಟಿದ್ದಾರೆ. ಕಾವ್ಯರೂಪಿ ಜೀವನಚರಿತ್ರೆಗಳಾದ ಅವರ ರಚನೆಗಳನ್ನು ವ್ಯಕ್ತಿಚಿತ್ರ ಅನ್ನಲಾಗದು. ಆದರೂ ಸಿಂಗುಸಿ ಅವರ ಈ ತೆರನ ಬರವಣಿಗೆ ಇದೇ ಪರಂಪರೆಗೆ ಸೇರುತ್ತದೆ.

ಆಧುನಿಕ ಪದ್ಯಗಳು ಪದಪ್ರಯೋಗ, ಪಾದಪ್ರಯೋಗ, ಕಂಡಿಕೆಕಟ್ಟು ಮತ್ತು ಪದ್ಯಚೌಕಟ್ಟು ಇವೆಲ್ಲವೂ ಸೇರಿ ಒಟ್ಟು ವಸ್ತುವನ್ನು ಅಭಿವ್ಯಕ್ತಿ ಮಾಡುತ್ತವೆ. ಆಧುನಿಕ ಪದ್ಯದ ಅಭಿವ್ಯಕ್ತಿ ಕ್ರಮವೇ ಇವೆಲ್ಲವನ್ನೂ ಒಳಗೊಂಡದ್ದು. ಇವುಗಳಲ್ಲಿ ಕೆಲವೊಮ್ಮೆ ಎಲ್ಲವೂ ನವೋದಯ ಎನ್ನಬಹುದಾದ, ಕೆಲವೊಮ್ಮೆ ನವ್ಯ ಎನ್ನಬಹುದಾದ ಒಟ್ಟಂದದ ಅಭಿವ್ಯಕ್ತಿ ಕ್ರಮವಾಗಿ ಪದ್ಯಗಳಲ್ಲಿ ಸಂಭವಿಸುತ್ತವೆ. ಪದ್ಯಚೌಕಟ್ಟಿಗೆ ನವೋದಯ, ನವ್ಯ, ದಲಿತಬಂಡಾಯ ಎಂಬ ಭೇದವಿಲ್ಲ. ಪದ್ಯಗಳ ಭಿನ್ನ ಚೌಕಟ್ಟುಗಳು ಎಲ್ಲ ಸಂವೇದನೆಗಳಲ್ಲೂ ಬಳಕೆ ಆಗಿವೆ. ಆದರೆ ಪದ, ಪಾದ, ಕಂಡಿಕೆಗಳಲ್ಲಿ ಒಂದೊಂದಕ್ಕೂ ಈ ಭೇದವಿದೆ. ಆದರೆ ಸಿಂಗುಸಿ ಅವರಲ್ಲಿ ಇವೆಲ್ಲವೂ ಒಂದೊಂದು ಯಾವಾಗ ಹೇಗೆ ಅದಲಿ ಬದಲಿ ಆಗುತ್ತವೆ ಎಂಬುದಕ್ಕೆ ನಿರ್ದಿಷ್ಟ ನಿಯಮ ಇಲ್ಲ. ಕೆಲವೊಮ್ಮೆ ಪದಪ್ರಯೋಗ ನವ್ಯದ ಬಟ್ಟೆ ತೊಟ್ಟರೆ, ಕೆಲವೊಮ್ಮೆ ನವೋದಯದ ಬಟ್ಟೆ ತೊಡುತ್ತದೆ. ಇನ್ನೂ ಕೆಲವೊಮ್ಮೆ ಕುಲಮೂಲದ, ನೆಲಮೂಲದ, ವಚನಮೂಲದ ಬಟ್ಟೆ ತೊಡುತ್ತದೆ. ಅಲ್ಲದೆ, ಕೆಲವೊಮ್ಮೆ ಪದ, ಪಾದ, ಕಂಡಿಕೆಗಳು ಅದಲಿ ಬದಲಿ ಆಗುತ್ತವೆ. ಇದು ಇವರ ಕಾವ್ಯದ ಲಕ್ಶಣವೂ ಬಿಕ್ಕಟ್ಟೂ ಆಗಿದೆ. ಇದು ಪ್ರಸ್ತುತ ಸಂಕಲನಕ್ಕೆ ಸಂಬಂಧಿಸಿದ ಮಾತು ಮಾತ್ರವಲ್ಲ. ಇವರ ಒಟ್ಟು ಕಾವ್ಯದ ಅಭಿವ್ಯಕ್ತಿ ಕ್ರಮಕ್ಕೆ ಸಂಬಂಧಿಸಿದ ಮಾತು. ನವ್ಯದ ಅಭಿವ್ಯಕ್ತಿ ಕ್ರಮದ ಒತ್ತಡವನ್ನು ಕೆ.ಎಸ್.ನ., ಕಣವಿ, ನಿಸಾರ್ ಇವರೆಲ್ಲ ತಮ್ಮದೇ ರೂಪಾಂತರಿತ ಪದ್ಯಗಳನ್ನು ರಚಿಸುವ ಮೂಲಕ ಸವಾಲು- ಜವಾಬು ರೀತಿಯಲ್ಲಿ ಎದುರಿಸಿದರೆ; ಜಿ.ಎಸ್.ಎಸ್. ಸಿಂಗುಸಿ ಇವರು ಇಂತಹ ಒತ್ತಡವನ್ನು ತಮ್ಮ ಅಭಿವ್ಯಕ್ತಿ ಕ್ರಮದ ಒಳಕ್ಕೇ ಒಳಗೊಳ್ಳುವ ಮೂಲಕ ತಮ್ಮ ಕಾವ್ಯವನ್ನು ಸಂಕರ ಮಾಡಿಕೊಂಡಿದ್ದಾರೆ.

ಹೆತ್ತ ಒಡಲಿಗೆ ಮಡಿಲೇ ಬರಿದು
ಬಿರಿದಾ ಎದೆಗೆ ಬಣಬಣ ನೋವು
ಹೊಕ್ಕುಳ ಬಳ್ಳಿಯ ಸೂತಕ ಸಂಕಟ
ಹೇಳಿ ಕಳೆಯದ ಮಾಯದ ಬಾವು
(ಕುಂತಿ 149)

ಇಲ್ಲಿರುವ ಕಂಡಿಕೆಕಟ್ಟು ನವೋದಯದಲ್ಲಿ ಅತಿ ಹೆಚ್ಚು ಬಳಕೆ ಆಗಿರುವ ಚೌಪದಿ ಚೌಕಟ್ಟು. ಆದರೆ ಮಾಯದ ಬಾವು, ಸೂತಕ ಸಂಕಟ ಮೊದಲಾದ ಪದಪ್ರಯೋಗ ಮಾತ್ರ ನವ್ಯದ ಧಾಟಿಯವು. ಹೀಗೆ ಇವರ ಹಲವು ಪದ್ಯಗಳಲ್ಲಿ ಬಾವುಣಿಕೆ ಮತ್ತು ಕುಶಲಕರ್ಮಿತನ ಎರಡೂ ಕಲಸಿಕೊಳ್ಳುತ್ತವೆ. ಕೆಲವೆಡೆ ತದ್ವಿರುದ್ಧ ಪ್ರತೀಕ, ಪ್ರತಿಮೆಗಳು ಒಂದೇ ಪದ್ಯದಲ್ಲಿ ಢಿಕ್ಕಿ ಹೊಡೆಯುತ್ತವೆ. ಕೆಲವು ಪದ್ಯಗಳ ದೇಹ ನವೋದಯವಾದರೆ ಅಂಗಾಗಗಳು ನವ್ಯ. (ಹಾಗೆ ನೋಡಿದರೆ ದೇಹ, ಜೀವ, ದಿರಿಸು ಹೀಗೆ ಪದ್ಯದ ಬಗ್ಗೆ ವಿಂಗಡಿಸಿ ಮಾತಾಡುವುದು ಸೂಕ್ತವಲ್ಲ) ಅಂದರೆ ಇವರಲ್ಲಿ ಪದ, ಪಾದ, ಕಂಡಿಕೆಗಳು ಯಾವ ವೇಷ ಧರಿಸುತ್ತವೆ ಎಂಬುದು ಅನಿಶ್ಚಿತ. ಒಟ್ಟಿನಲ್ಲಿ , ಇವರ ಪದ್ಯಗಳು ಸಂಕರಮೂರ್ತಿಗಳು. ಇದು ಇವರ ಪದ್ಯಗಳ ಮೇಲೆ ಮಾಡುತ್ತಿರುವ ದೋಷಾರೋಪಣೆ ಅಲ್ಲ. ನಮ್ಮ ನವ್ಯ ಅಭಿವ್ಯಕ್ತಿ ಕ್ರಮ ಕನ್ನಡ ಕಾವ್ಯದ ಮೇಲೆ ಉಂಟು ಮಾಡಿದ ಪರಿಣಾಮವಿದು.

ಇವರ ಸಂಕರಮೂರ್ತಿಗಳು ಕೂಡ ಏಕಪ್ರಕಾರದವಲ್ಲ. ಇಲ್ಲಿ ಹಲವು ಮಾದರಿಗಳಿವೆ. ಗೊಯ್ಗಪುರಾಣವು ಮತ್ತು ಏಕಲವ್ಯನ ಕುರಿತ (ಕುಲದೇವಿ) ಪದ್ಯಗಳು ಕಥನ ಕಾವ್ಯದ ಧಾಟಿಯಲ್ಲಿ ಇದ್ದರೆ ಬೆಸಗರಹಳ್ಳಿ ರಾಮಣ್ಣನವರ ಕುರಿತ ಪದ್ಯ (ಹೀಗೊಂದು ನೆನಪು) ನಿರಾಡಂಬರ ನೆನಪಿನ ನಿರೂಪಣೆಯ ಧಾಟಿಯಲ್ಲಿ ಇದೆ. ಕೆಲವು ಪದ್ಯಗಳು ಉದಾಹರಣೆಗೆ ನಿವೇದನೆ (ಅಂಬಿಕೆ), ಆತ್ಮಸ್ವಗತ (ಕುಂತಿ) ಧಾಟಿಯ ಪದ್ಯಗಳಿದ್ದರೆ ಕೆಲವು ರೂಪಕಮಾಲೆಯ (ಅಲ್ಲಮ) ಧಾಟಿಯಲ್ಲಿ ಇವೆ. ವ್ಯಕ್ತಿಗಳ ಕುರಿತ ಕೆಲವು (ಗಾಂಧಿ, ಅಂಬೇಡ್ಕರ್) ಪದ್ಯಗಳು ವರ್ತಮಾನದ ವ್ಯಾಖ್ಯಾನಗಳೆ ಆಗುವ, ನಿರ್ದಿಷ್ಟ ಮೌಲ್ಯಗಳ ಪ್ರತೀಕ ಆಗುವ ಧಾಟಿಯಲ್ಲಿ ಇವೆ. ಹಾಗಾಗಿ ಇಲ್ಲಿನ ಪದ್ಯಗಳು ಸಂಕರಮೂರ್ತಿಗಳು ಹೇಗೋ ಹಾಗೆಯೇ ಬಹುರೂಪಿಗಳು ಕೂಡ.

ಪುರಾಣ, ಪುರಾತನವನ್ನು ಕವಿಗಳು ಮತ್ತೆ ಮತ್ತೆ ತಮ್ಮ ವರ್ತಮಾನದಲ್ಲಿ ಕಥಿಸುವುದೇ ತಮ್ಮ ಕಾಲಕ್ಕೆ ಬೇಕಾದ ಮತ್ತು ತಮ್ಮ ಅನುಕೂಲಕ್ಕೆ ತಕ್ಕಂಥ ಮೌಲ್ಯಪ್ರಜ್ಞೆ, ತತ್ವಜ್ಞಾನಗಳನ್ನು ಕಟ್ಟಿಕೊಳ್ಳಲಿಕ್ಕೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಚರಿತ್ರೆ-ಪುರಾಣದ ಪಾತ್ರಗಳ ಮೂರನೆ ಭಾಗದಲ್ಲಿ ಇರುವ ಪ್ರತಿಯೊಂದು ಸ್ತ್ರೀ ಕಥನಗಳೂ ಹಳೆ ಜಡತ್ವವನ್ನು ಪ್ರಶ್ನಿಸುವ, ಲಿಂಗನ್ಯಾಯವನ್ನು ಪ್ರತಿಪಾದಿಸುವ ಕವಿತೆಗಳಾಗಿವೆ. ಇಲ್ಲಿನ ಹಲವು ಪದ್ಯಗಳಲ್ಲಿ ಕಾಯಮಾಯ, ಕಾಯಸುಖ, ಹಾದರದಪ್ಪಿಗೆ ಇಂತಹ ಹಲವಾರು ಪದಪ್ರಯೋಗಗಳು ಬರುತ್ತವೆ. ಇಂತಹ ಕಡೆ ಲೈಂಗಿಕತೆಯ ಥೀಮಿನ ಹಿನ್ನೆಲೆಯಲ್ಲಿ ಕಾಯಕಥನವನ್ನು ಮುಖ್ಯವಾಗಿ ನಿರೂಪಿಸಲಾಗಿದೆ. ಈ ಕಾಯಕಥನವು ಕಾಯವನ್ನು ನಿರಾಕರಿಸುವುದಿಲ್ಲ; ಬದಲಾಗಿ ಪರಸ್ಪರ ‘ಒಲವು’ ನಮ್ಮ ಪಥ ಆಗಬೇಕು ಎಂದೇ ಹೇಳುತ್ತದೆ.

ಆತ್ಮದೊಳಗೆ ದೇಹ ಮೂಲಧೇನು
ಬಾಳದೀವಿಗೆಗೆ ಪ್ರಾಣ ತೈಲ ತಾನು
ಹದವಾಗಲಿ ಮುದವಾಗಲಿ ಪದವಾಗಲಿ ಒಲವು
(ಸಾಲಂಕೃತ ಯಾರಲಾ: 158)

ದೇಹವನ್ನು ನಿಗ್ರಹಿಸಿ ಮಾಡುವ ತಪಸ್ಸು ಆತ್ಮದ ಏಳಿಗೆಗೆ ದಾರಿಯಲ್ಲ; ‘ಆತ್ಮದ ಏಳಿಗೆಗೆ ದೇಹ ಮೂಲಧೇನು’; ಅಹಲ್ಯೆಯ ಬಾಯಿಂದ ಈ ಮಾತು ಹೇಳಿಸುತ್ತ ಕಾಯಕಥನವನ್ನು ಇಲ್ಲಿ ಒಲವಿನ ಪಥ ಎಂದೇ ಹೇಳಲಾಗಿದೆ. ಪರಾಶರ, ಬಸವ, ಅಲ್ಲಮ, ಕನಕ, ಗಾಂಧಿ, ಅಂಬೇಡ್ಕರ್ ಇವರು ಆರು ಜನರನ್ನು ಬಿಟ್ಟರೆ ಮಿಕ್ಕಂತೆ ಮೂರನೆ ಭಾಗದಲ್ಲಿ ಇರುವ ಎಲ್ಲ ಪದ್ಯಗಳೂ ಮಹಿಳೆಯರ ಕುರಿತ ಪದ್ಯಗಳೇ ಆಗಿವೆ. ಇವು ಒಂದೊಂದೂ ನಮ್ಮ ಪರಂಪರೆಯ ಭಿನ್ನ ಕಾಲಮಾನದ ಭಿನ್ನ ಹೆಣ್ತನದ ಪ್ರತೀಕಗಳಾಗಿವೆ. ಇಲ್ಲಿನ ರಾಹುಲನ ತಾಯಿ ಅಹಲ್ಯೆ, ಅಮೃತಮತಿ, ಕುಂತಿ, ಜನಪದ ಗರತಿ, ಕುಂತಿಯ ಅತ್ತೆ ಅಂಬಿಕೆ ಎಲ್ಲರೂ ಲಿಂಗತ್ವ, ಲೈಂಗಿಕತೆಯನ್ನು ಮರುನಿರ್ವಚನಕ್ಕೆ ಗುರಿಮಾಡುವ ಪ್ರತೀಕಗಳಾಗಿ, ಕಾಯಕಥನದ ಪ್ರತೀಕಗಳಾಗಿ ಬಳಕೆಯಾಗಿದ್ದಾರೆ.

ಬೀಟೆ ಕಾಲಿನ ಕರಿಯ ಮುಸುಡನಂತೆ
ಕೀವುಗಾಯದ ಬೆನ್ನ ಮುರುಕನಂತೆ
ಬದಗನಂತೆ ಬದಗ ನನ್ನೆದೆಯ ರಾಗಸಲಗ
ನೆಲವ ಗುದ್ದಿ ಜಲವ ತರುವ ಧೀರ
ಜನುಮ ಜನುಮಕೂ ಜೀವರಾಗ ಮಿಡಿವ
ನೆಲದ ಬಾಳಿನ ನೀತಿಸೂತ್ರಧಾರ
(ಅಮೃತಮತಿ: 146)

ಕುಂತಿ, ಅಂಬಿಕೆ, ಅಮೃತಮತಿ, ಅಹಲ್ಯೆ ಇಂಥವರ ಕುರಿತ ಪದ್ಯಗಳಲ್ಲಿ ಕುಟುಂಬವೆಂಬ ಸೆರೆಯಲ್ಲಿ ಸಿಲುಕಿದ ಹೆಣ್ಣು ದಾಂಪತ್ಯ ಮತ್ತು ಕುಟುಂಬದ ಗೆರೆಗಳಲ್ಲಿ ಸುಖ ಇಲ್ಲದಿದ್ದರೂ ಅದೇ ಪರಮಸುಖವೆಂದು ಭಾವಿಸಿ ಬದುಕುವ ಅನಿವಾರ್ಯತೆಗೆ ದೂಡಲ್ಪಟ್ಟಿರುವ ಚಿತ್ರಗಳಿವೆ. ಆಕೆ ಅದರಿಂದ ಬಿಡುಗಡೆ ಪಡೆಯಲು ಬಯಸಿದಾಗೆಲ್ಲ ಆಕೆಗೆ ನರಕದ ಹುಳವಾಗುವ ಬೆದರಿಕೆ ಒಡ್ಡಲಾಗಿದೆ ಎನ್ನುವುದು ವಿಷಾದ. ಗಂಡನಿಂದ ‘ಒಲವು’ ಸಿಗದಿದ್ದರೂ ಅವನಿಗೇ ಮೀಸಲಾಗಿ ಹೆಂಡತಿ ಇರಬೇಕು ಎಂಬಂತೆ ನಿಜವನ್ನು ಮರೆಸಿ ತಮಗೆ ಬೇಕಾದ ಮೌಲ್ಯವನ್ನು ಪ್ರತಿಪಾದಿಸಲು ಕಥೆಗಳನ್ನು ಕಟ್ಟಲಾಗಿದೆ: ಮತ್ತು ಹೆಣ್ಣಿನ ಬದುಕಿನಲ್ಲಿ ಕುಟುಂಬ ಮೌಲ್ಯ ದೊಡ್ಡದೆಂದೂ ಆಕೆಯ ಮನಸಿನ ಭಾವನೆ ನಗಣ್ಯವೆಂದೂ ಕಥೆ ಹೆಣೆಯಲಾಗಿದೆ ಎಂಬೆಲ್ಲದರ ಕುರಿತ ಪ್ರತಿರೋಧವೆಂಬಂತೆ ಈ ಪದ್ಯಗಳಿವೆ.

ರಾಜತೇಜದ ಬೀಜಮೂಲವು ತಂಗಿ ಗೊತ್ತಿತ್ತೆ ನನಗೆ ಗೊತ್ತಿತ್ತು
ಒಪ್ಪಿದ ತಪ್ಪಿಗೆ ಹಾದರದಪ್ಪಿಗೆ ಮನಸಿನ ವಂಚನೆ ಮಾತಿನ ಸೂತಕ
ತೊನ್ನಿನ ಹುರುಡಿಗೆ ಎರಡನೆ ಕುರುಡೆ ಗೊತ್ತಿತ್ತೆ ತಂಗಿ ನನಗೆ ಗೊತ್ತಿತ್ತು
(ಕುಂತಿ: 150)

ಹೆಣ್ಣುಗಳು ಒಲವಿಗಾಗಿ ಕುಟುಂಬದ ಚೌಕಟ್ಟಿನ ಆಚೆ ಹಂಬಲಿಸಿದರೆ ಅದನ್ನು ಹಾದರ ಎನ್ನುವ ಬಗ್ಗೆ ಇವರ ಪದ್ಯಗಳಲ್ಲಿ ವಿರೋಧವಿದೆ. ಜನಪದ ಗರತಿ ವರ್ಸಸ್ ಅಮೃತಮತಿ ಪದ್ಯದಲ್ಲಂತೂ ಇದು ಕಣ್ಣಿಗೆ ಢಾಳಾಗಿ ಕಾಣುವಂತೆ ಇದೆ. ಮಿಂಡ ಎಂಬ ಕಲ್ಪನೆಯನ್ನೆ ಇಲ್ಲಿ ಪ್ರೇಮಿ ಎಂಬ ಅರ್ಥದಲ್ಲಿ ಬಳಸಲಾಗಿದೆ. ದೇಹವನ್ನು ಮಾಯೆ ಎಂದು ಕರೆಯುವುದನ್ನೂ ಇಲ್ಲಿ ನಿರಾಕರಿಸಲಾಗಿದೆ. ತಾಯ್ತನವು ಹೆಣ್ಣಿಗೆ ಹೇರಿಕೆಯೋ ಅಥವಾ ಆಕೆಯ ಆಯ್ಕೆಯೋ ಎಂಬ ಸೂಕ್ಷ್ಮ ಪ್ರಶ್ನೆಯನ್ನು ಕೂಡ ಇಲ್ಲಿ ಎತ್ತಲಾಗಿದೆ. ಆದರೆ ಅಂಬಿಕೆ ಅಂಬಾಲಿಕೆಯರು ವೇದವ್ಯಾಸನನ್ನು ಕೂಡಿ ಸಂತಾನ ಪಡೆದದ್ದು ಮಾತ್ರ ಮನಸಿನ ವಂಚನೆ, ಹಾದರ ಎನ್ನಲಾಗಿದೆ! ಹಾದರದ ಅಪ್ಪುಗೆ/ ಹಾದರದ ತಪ್ಪು ಎನ್ನಲಾಗಿದೆ!

ಏಕಲವ್ಯನ ತಾಯಿ ‘ಕುಲದೇವಿ’, ರಾಹುಲನ ‘ತಾಯಿ’ ಯಶೋಧರೆ ಮೊದಲಾದವರು ಇಲ್ಲಿ ತಾಯ್ತನದ ಮರುನಿರ್ವಚನಕ್ಕೆ ಬಳಕೆ ಆಗಿದ್ದಾರೆ. ಈ ಎರಡೂ ಪದ್ಯಗಳಲ್ಲಿ ತಾಯ್ತನವನ್ನು ಅತ್ಯುನ್ನತ ಎಂದೇ ಕಥಿಸಲಾಗಿದೆ. ತಾಯಿ ಯಶೋಧರೆ ಪದ್ಯದಲ್ಲಿ ಬುದ್ಧ ತನ್ನ ಮನೆಗೇ ಭಿಕ್ಷಕ್ಕೆ ಬಂದಾಗ ರಾಹುಲ ಇನ್ನೂ ಅನ್ನ ತಿನ್ನಿಸಿಕೊಳ್ಳುವ ಕೈಕೂಸಾಗಿದ್ದ ಎಂಬ ಕಲ್ಪನೆಯಿದೆ. ಗಂಡ ಮತ್ತು ಮಗು ಎಂಬ ಎರಡು ಸೆಳೆತಗಳ ನಡುವೆ ಹೆಣ್ಣಾದವಳು ಸಂದಿಗ್ಧಕ್ಕೆ ಸಿಲುಕುವ ಚಿತ್ರಣ ಇಲ್ಲಿದೆ. ಕುಲದೇವಿ ಪದ್ಯದಲ್ಲಿ ಗುರುದಕ್ಷಿಣೆ ಕಲ್ಪನೆಯನ್ನು ನಿರಾಕರಿಸುವ ಚಿತ್ರಣವಿದೆ. ಬೆರಳನ್ನು ನಾಡ ಜನ ಬಲಿ ತೆಗೆದುಕೊಂಡ ಕಾರಣಕ್ಕೆ ಕಾಡ ಮಣ್ಣಿಗೆ ಸೂತಕವಾಗಿದೆ. ಅಂತಹ ಸೂತಕಕ್ಕೆ ಗುರಿಯಾಗಿ ಗುರುದಕ್ಷಿಣೆ ಕೊಟ್ಟು ಬಂದ ಏಕಲವ್ಯನನ್ನು ಇಲ್ಲಿ ‘ಅಡ್ಡದಾರಿಗೆ ಬಿದ್ದ ಕರುಳು’ ಎನ್ನಲಾಗಿದೆ.

ಬಿಲ್ಲಂಬು ಬೆರಳ ಬಲಿಗೊಂಡ ಮಣ್ಣ ಸೂತಕದಲ್ಲಿ
ಕೆನ್ನೆಯುಪ್ಪಿಗೆ ಎರವಾಗದ ಸೊಪ್ಪುಸೆದೆ ತಾಯೆ
ಎಲ್ಲಿರುವೆ ನನ್ನವ್ವೆ ಮರುಜೇವಣಿ ಅಡ್ಡಿಕೆಯೇ
ಅಡ್ಡದಾರಿಗೆ ಬಿದ್ದ ಕರುಳ ಕಾಯುವ ಅರಿವೇ
(ಕುಲದೇವಿ: 141)

ಏಕಲವ್ಯನ ಬೆರಳ ಗಾಯಕ್ಕೆ ಮದ್ದು ಹುಡುಕಲು ಏಕಲವ್ಯನ ತಾಯಿ ಮರುಜೇವಣಿಯಾದ ಕಾಡಿನ ಅಡ್ಡಿಕೆ ಸೊಪ್ಪನ್ನು ಹುಡುಕಿ ಹೊರಡುತ್ತಾಳೆ. ನಾಡಿನ ಗುರುಸಂಪರ್ಕಕ್ಕೆ ಬಂದು ಮೋಸ ಹೋದ ಕಂದನನ್ನು ಕಾಯುವ ಸಂಜೀವಿನಿಯಾಗಿ ಇಲ್ಲಿ ತಾಯಿಯನ್ನು ಕಲ್ಪಿಸಿಕೊಳ್ಳಲಾಗಿದೆ. (ಮರುಜೇವಣಿ, ಸಂಜೀವಿನಿ ಎಂಬುದೇ ಒಂದು ಕವಿಸಮಯ/ಕಟ್ಟುಕಥೆ ಎಂಬುದು ಬೇರೆ ಮಾತು) ಇಲ್ಲಿ ರಾಮಕ್ಕ, ರಂಗಕ್ಕ, ಗೌರಕ್ಕ, ಕರಿಯಕ್ಕ, ಲಕ್ಕಜ್ಜಿ ಇತ್ಯಾದಿ ಬಳಿಸಾಲ ಬಳಗದ ಹಲವು ಅಕ್ಕ ಅವ್ವೆಯರ ಕಥನಗಳಿವೆ. ಅವರ ಹಾಗೆಯೇ, ಇಲ್ಲಿ ಏಕಲವ್ಯನ ಅಬ್ಬೆಯೂ ಬರುತ್ತಾಳೆ. ಈ ಅಬ್ಬೆ ಕೂಡ ಸಿಂಗುಸಿ ಅವರಿಗೆ ಬಳಿಸಾಲ ಬಳಗದ ಹೆಣ್ಣೆ. ಬಳಿಸಾಲ ಬಳಗದ ಹೆಣ್ಣುಗಳು ಎಂದರೆ ‘ಒಂಟೆತ್ತಿನಾರಂಭ’ ಮಾಡುವ ಮೂಕ ಜೀವಿಗಳು. ಸಂಸಾರದ ನೊಗವನ್ನು ಏಕಾಂಗಿಯಾಗಿ ಹೊತ್ತ ಹೋರಾಟಗಾತಿಯರು.

‘ಯಾರೇ ಆದರೂ ಅವರು ಚಿಗವ್ವ, ದೊಡವ್ವ, ಅವ್ವವ್ವರೇ ಎಲ್ಲ;
ಹೆಚ್ಚೆಂದರೆ ಅವ್ವನನು ಬಿಟ್ಟಂತೆ ಮಿಕ್ಕವರು ಅಕ್ಕ’.
(ಗೌರಕ್ಕ: 27).

ಈ ಸಂಕಲನದ ತುಂಬ ಇರುವ ಹೆಣ್ಣುಗಳೆಲ್ಲ ಅವ್ವ ಇಲ್ಲವೆ ಅಕ್ಕಂದಿರು. ತಾಯಿಯ ತಮ್ಮನ ಹೆಂಡತಿ ಕರಿಯಮ್ಮ ವಾಸ್ತವ ಸಂಬಂಧದಲ್ಲಿ ಆಕೆ ಅಕ್ಕ; ಅಕ್ಕ ಕರಿಯಕ್ಕ. ಅವ್ವನ ಮಲತಂಗಿ ಗೌರಮ್ಮ ಇವರ ಮನೆಯಲ್ಲಿ ಬೆಳೆಯದಿದ್ದರೂ ಇವರೆಲ್ಲರಿಗೂ ಆಕೆ ಗೌರಕ್ಕ. ಅಕ್ಕಂದಿರ ವಾರಿಗೆಯವಳಾದ ಸಂಬಂಧದಲ್ಲಿ ಚಿಕ್ಕಮ್ಮನಾದ ರಂಗಮ್ಮನೂ ಇವರಿಗೆ ರಂಗಕ್ಕ. ಅವ್ವನ ತಂಗಿಯಾದ ಚಿಕ್ಕಮ್ಮನೂ ಅವ್ವೆ, ಸ್ವಂತ ತಂಗಿಯೂ ಅವ್ವೆ. ತನ್ನ ಹೆಂಡತಿ ಒಬ್ಬಳನ್ನು ಹೊರತುಪಡಿಸಿ ಮಿಕ್ಕೆಲ್ಲ ಬಳಿಸಾಲ ಬಳಗದ ಹೆಂಗಸರನ್ನು ಅಕ್ಕ ಇಲ್ಲವೆ ಅವ್ವ ಎಂದು ಭಾವಿಸುವುದೇ ಇಂದು ಒಂದು ದೊಡ್ಡ ಸ್ತ್ರೀವಾದಿ ಮೌಲ್ಯ. ಅಂತಹ ಬಾವುಣಿಕೆಯ ಸ್ತ್ರೀವಾದಿ ಮೌಲ್ಯ ಇಲ್ಲಿನ ಎಲ್ಲ ಹೆಣ್ಣುಗಳ ಚಿತ್ರಣದಲ್ಲಿದೆ. ಇದು ಬರಿ ಬಳಿಸಾಲ ಬಳಗದ ಹೆಣ್ಣುಗಳಿಗೆ ಮಾತ್ರ ಅನ್ವಯಿಸುವ ಮಾತಲ್ಲ; ಸಂಕಲನದ ಎಲ್ಲ ಹೆಣ್ಣುಗಳಿಗೂ ಅನ್ವಯಿಸುವ ಮಾತು. ಚರಿತ್ರೆ ಪುರಾಣದ ಹೆಣ್ಣುಗಳಿಗೂ ಅನ್ವಯಿಸುವ ಮಾತು.

ಕರಿಸಿದ್ಧ, ಕೃಷ್ಣಕನಸು, ಅಣ್ಣಬಂದ, ಆಸ್ಪತ್ರೆ ಕನಸಲ್ಲಿ ಜೋಗಿ, ಬಗೆದೇರು ಬಳಗವೂ ಕನಸೂ ಹೀಗೆ ಇಲ್ಲಿ ಐದಾರು ಕನಸಿನ ನಿರೂಪಣೆಗಳಿವೆ. ಯಾವ ಕನಸು ಎಂದು ಬೀಳುತ್ತದೆ ಎಂದು ನಮಗೆ ಮೊದಲೆ ಗೊತ್ತಿರುವುದಿಲ್ಲ; ಕನಸುಗಳೇ ಹಾಗೆ; ಅವು ಅಭ್ಯಾಗತಿಗಳು. ಒಂದೊಂದು ಕನಸೂ ಒಂದೊಂದು ಸೋಜಿಗ. ವಾಸ್ತವದಲ್ಲಿ ಆಗದೆ ಇರುವುದೆಲ್ಲ ಕನಸಿನಲ್ಲಿ ಆಗುತ್ತದೆ. ಸುಸಂಗತ ಅನ್ನಿಸದೆ ಇರುವ ಅಸಂಗತ, ಅವಾಸ್ತವಿಕ, ಮಾಂತ್ರಿಕ ವಾಸ್ತವ ಆದ ಎಲ್ಲವೂ ಕನಸಿನಲ್ಲಿ ಜರುಗಬಹುದು. ಅಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲದ ಸಂಗತಿಗಳು ಒಟ್ಟಿಗೇ ಸಂಭವಿಸಬಹುದು. ಹಾಗೆ ಈ ಪದ್ಯಗಳು ಚಿತ್ರಿತವಾಗಿವೆ.

‘ಕಳೆದ ರಾತ್ರಿಗಳಲ್ಲಿ ಹೆಪ್ಪಿಟ್ಟ ನೆನಪುಗಳು
ಮಡಕೆ ಮಂತಿನ ನಂಟು ಕಡೆದು ಮುಗಿಸಲೆಬೇಕು’
(ಬಗೆದೇರು ಬಳಗವೂ ಕನಸೂ: 58)

ಎಂಬಂತೆ ಇಲ್ಲಿನ ಎಲ್ಲ ಕನಸಿನ ನಿರೂಪಣೆಗಳೂ ನೆನಪನ್ನು ಕಡೆದು ಇರಿಸಿದ ನಿರೂಪಣೆಗಳು. ಬಗೆದೇರು ಬಳಗ ಅಂದರೆ ಬಳಗವೆಂಬ ತೇರು; ಬಳಗವೆಂಬ ಜಾತ್ರೆ. ಈ ಬಳಗವೆಂಬ ಸಂಭ್ರಮ ಕೆಲವೊಮ್ಮೆ ಬಾಧೆಯೂ ಆಗಬಹುದು. ಬೇವು ಮತ್ತು ಬೆಲ್ಲ ಎರಡೂ ಬೆರೆತ ಆಕಸ್ಮಿಕಗಳ ಯಾತ್ರೆಯೇ (ಜಾತ್ರೆಯೇ) ಬದುಕು. ಇದು ಕನಸಿಗಿಂತ ಭಿನ್ನವೇನೂ ಅಲ್ಲ. ಬದುಕು ಎಚ್ಚರವೂ ಹೌದು, ಕನಸೂ ಹೌದು. ಈ ಬದುಕೇ ಅಂತಹ ಆಕಸ್ಮಿಕಗಳ ಜಾಲ ಎಂಬುದೇ ಈ ಕವಿತೆಗಳಲ್ಲಿನ ತತ್ವಜ್ಞಾನ.

ಕನಸು ಮತ್ತು ವಾಸ್ತವ ಎರಡೂ ಕಡೆ ಬದುಕಿನಲ್ಲಿ ತರ್ಕ ಮತ್ತು ಜ್ಞಾನವಿಜ್ಞಾನದ ವಿವರಣೆಗೆ ನಿಲುಕದ ಹಲವಾರು ಅನಿರ್ವಚನೀಯ ಅನುಭವಗಳು ಆಗುವುದನ್ನು ಇವರ ಹಲವು ಕವಿತೆಗಳು ನಿರೂಪಿಸುತ್ತವೆ. ಆಕಸ್ಮಿಕತೆ ಮತ್ತು ಅನಿರ್ವಚನೀಯ ಬೆರಗುಗಳು ಬದುಕಿನ ಅವಿಭಾಜ್ಯ ಅಂಗಗಳು; ನಾವು ಅರ್ಥ ಮಾಡಿಕೊಳ್ಳಲು ಆಗದ ಅದೆಷ್ಟೊ ಸಂಗತಿಗಳು ನಮ್ಮ ಬದುಕಿನಲ್ಲಿ ಘಟಿಸುತ್ತವೆ; ಅವು ತರ್ಕಾತೀತ ಮಾತ್ರವಲ್ಲ ಅರ್ಥಕ್ಕೂ ದಕ್ಕದಿರುವ ಬುದ್ಧಿಯ ಆಚೆಗಿನ ಸಂಗತಿಗಳೂ ಹೌದು ಎಂದೇ ಇವರ ಹಲವು ಕವಿತೆಗಳು ನಿರೂಪಿಸುತ್ತವೆ. ಇಲ್ಲಿನ ಎರಡನೆ ಭಾಗದಲ್ಲೂ ‘ವ್ಯಕ್ತಮಧ್ಯದ ಗುರುವು’, ‘ಗುರುವೆ ಗುರುಪಾದವೆ’, ‘ಗುರುಬಂದ’, ‘ದೀಪ ತುಂಬಿದ ಹಾಗೆ’ ಹೀಗೆ ನಾಲ್ಕೈದು ಕನಸಿನ ನಿರೂಪಣೆಗಳಿವೆ. ಇವರ ನೇರ ಗುರುವಾದ ಜಿ.ಎಸ್.ಎಸ್. ಮತ್ತು ಪರೋಕ್ಷ ಗುರುವಾದ ಕಿರಂ ಇಬ್ಬರೂ ಕನಸಿನಲ್ಲಿ ಬಂದ ನಿರೂಪಣೆಗಳಿವು.

ನೀನು ಬರೆದ ಕವಿತೆ ನಿನ್ನದಲ್ಲದ ಚರಿತೆ
ಸಂಭ್ರಮಿಸಿ ನೆಡುವ ತೆಂಗು ಕಂಗು ಬಾಳೆ ಹಲಸು
ಬಯಕೆ ಬೇಗುದಿಯಲ್ಲಿ ಬೆವರ ಸಂಪದ ಮೆರೆವ ಮಹಾಯಾನ
‘ಬರಕೋ ಪದ ಬರಕೋ’
(ಗುರುವೇ ಗುರುಪಾದವೇ: 78)

ಸತ್ತ ಮೇಲೆ ಕನಸಿನಲ್ಲಿ ಬಂದು ಸಿಕ್ಕಿ ಮೇಲಿನಂತೆ ಹೇಳುವ ಕಿರಂ ಆಮೇಲೆ ಕರೆದರೂ ಕೈಗೆ ಸಿಗದೆ ಹೊರಟು ಹೋಗುತ್ತಾರೆ. ಕಾವ್ಯ ಕೃಷಿ ಮಾಡುವುದು ಮತ್ತು ಫಲಬಿಡುವ ಮರಗಳನ್ನು ನೆಡುವುದು ಎರಡನ್ನೂ ಸಮೀಕರಿಸಿ ಮಾತನಾಡುವ ಗುರುವು ಸತ್ತ ಮೇಲೂ ಕನಸಿಗೆ ಬರುವುದು ಮತ್ತು ಬಂದ ಮೇಲೆ ಸಿಕ್ಕಿಯೂ ಮತ್ತೆ ಕೈಗೆ ಸಿಗದೆ ಹೋಗುವುದು ಒಂದು ಕ್ರಿಯಾ ಸಂಕೇತವಾಗಿಯೇ ಕಾಣುತ್ತದೆ. ಇಲ್ಲಿರುವ ಎಲ್ಲ ಪದ್ಯಗಳೂ ಸಿಂಗುಸಿ ಅವರ ಚರಿತೆ/ಆತ್ಮಚರಿತೆ ಹೇಗೋ ಹಾಗೆಯೇ ಒಂದು ಕಾಲದ ಚರಿತೆ ಕೂಡ. ಕನಸಿನಲ್ಲಿ ಬರುವ ಕಿರಂ ಇಲ್ಲಿ ‘ನೀನು ಬರೆದ ಕವಿತೆ ನಿನ್ನದಲ್ಲದ ಚರಿತೆ’ ಎಂದೇ ಹೇಳುತ್ತಾರೆ. ಬರೆಯುವಾಗ ಕವಿತೆ ಕವಿಯದ್ದು; ಬರೆದ ಮೇಲೆ ಅದು ಲೋಕದ್ದು.

ಜಿ.ಎಸ್.ಎಸ್. ಕನಸಿಗೆ ಬಂದ ಒಂದು ಪದ್ಯದಲ್ಲಿ ಇನ್ನೊಂದೆ ಭಿನ್ನವಾದ ಅನಿರ್ವಚನೀಯ ಅನುಭವ ಆದಂತೆ ನಿರೂಪಿಸಲಾಗಿದೆ. ಅಲ್ಲಿ ಗುರುವು ಬಂದಾಗ ಹಚ್ಚಡ ಹಾಸಲು ಹೋದರೆ ಹಚ್ಚಡವೇ ಹರಿದು ಚೂರಾಗುತ್ತದೆ; ನೀರು ಕೊಡಲು ಮಗೆಯಲ್ಲಿ ಮೊಗೆಯಹೋದರೆ ‘ದದ್ದ ಹರವಿಯೇ ಬರಿದಾಗಿ’ರುತ್ತದೆ. ‘ಹಸ್ತಮಸ್ತಕ ಮಾಡಿದ ಗುರುವು ಬಾಳ ಬೆಳಕು ತೋರಿ’ ಮಾತಾಡದೆ ಮೌನವಾಗಿಯೇ ಇಲ್ಲವಾಗುತ್ತಾನೆ! ಶಿಷ್ಯನನ್ನು ಬಯಲಿಗೆ ಕರೆತಂದು ಬಿಟ್ಟು ತಾನೇ ಮಾಯವಾಗುತ್ತಾನೆ. ಎದುರು ಕಂಡ ‘ಸಿಂಹ ನಾಯಾಗುತ್ತದೆ’! (ಗುರುಬಂದ: 102) ಇಲ್ಲಿ ಎರಡೂ ಕನಸುಗಳನ್ನು ಮುಖಾಮುಖಿ ಮಾಡಿದರೆ ಮಾತು, ಮೌನ, ಗುರುತನ ಯಾವುದೂ ಶಾಶ್ವತವಲ್ಲ; ಅರಿವೇ ನಿಜವಾದ ಗುರು ಎಂಬುದು ತಿಳಿಯುತ್ತದೆ. ಗುರುವು ಇಲ್ಲವಾಗಿ ಶಿಷ್ಯನೇ ಗುರುವಾಗುವ ಪ್ರಕ್ರಿಯೆ ಸದ್ದಿಲ್ಲದೆ ಈ ಕವಿತೆಗಳಲ್ಲಿ ಜರುಗುತ್ತದೆ. ಆ ಮೂಲಕ ಬಳಿಸಾಲ ಬಳಗದಲ್ಲಿ ಹೆಗಲು ಬದಲಾಗುವ ರೂಪಕ ಧಾಟಿಯ ತತ್ವಜ್ಞಾನವೇ ಇಲ್ಲು ಗುರುಬಳಗದಲ್ಲೂ ಭಿನ್ನ ರೀತಿಯಲ್ಲಿ ಮಂಡನೆಯಾಗುತ್ತದೆ.

ನೀರು ಸೇದುವ ಹಗ್ಗ ಹಾವೆಂದು ಹೆದರಿದರೆ
ದಾಹ ಪರಿಹಾರಕ್ಕೆ ದಾರಿ ಮತ್ತೇನುಂಟು?
ಅಟ್ಟುಣ್ಣುವಾ ಬೆಂಕಿ ಅಡವೀಗೆ ಬಿದ್ದಾರೆ
ಜೀವ ಜಂಗಮಕ್ಕಿಲ್ಲಿ ಜಾಗ ಮತ್ತೆಲ್ಲುಂಟು?
(ಶಿವತೀರ್ಥ: 84)

ಗೆಳೆಬಳಗ, ಗುರುಬಳಗದಲ್ಲಿ ಚಿ.ಶ್ರೀನಿವಾಸರಾಜು, ಕೆ.ನ.ಶಿವತೀರ್ಥನ್, ಕರಿಬಸಯ್ಯ, ಕಿರಂ, ಕೋಚೆ, ಜಿಎಸ್ಸೆಸ್, ಗಾಂಧಿ ಹೀಗೆ ಹಲವರ ಸಾವುನೋವುಗಳು ಪದ್ಯಗಳಾಗಿ ರೂಪ ತಾಳಿವೆ. ಇವರಲ್ಲಿ ಕೆಲವರು ತಮ್ಮ ಕೆಲಸ ಮುಗಿಸಿ ಹೋಗಿದ್ದರೆ ಇನ್ನು ಕೆಲವರು ಅರ್ಧಕ್ಕೆ ತಮ್ಮ ಕೆಲಸ ನಿಲ್ಲಿಸಿ ನಿರ್ಗಮಿಸಿದ್ದಾರೆ. ಕೆಲವರದು ಆಕಸ್ಮಿಕ ಸಾವಾದರೆ ಕೆಲವರದ್ದು ವಯೋಸಹಜ ನಿರ್ಗಮನ. ಸಾವಿನ ಕುರಿತ ಇಲ್ಲಿನ ಎಲ್ಲ ಪದ್ಯಗಳೂ ಭಾವನಾತ್ಮಕವಾದ ಪದ್ಯಗಳು.

ಕಲಬುರ್ಗಿ ಮತ್ತು ಗೌರಿಯರ ಕಗ್ಗೊಲೆಯ ಕಥನಗಳು ಕೂಡ ಇಲ್ಲಿ ಪದ್ಯಗಳಾಗಿವೆ. ಸ್ಥಾವರಕ್ಕೆ ಧೂಪ ಹಾಕಿದ ಮತ್ತು ಜಂಗಮಕ್ಕೆ ಜನಿವಾರ ತೊಡಿಸಿದ ಮಂದಿಯೇ ಜಂಗಮಕ್ಕೆ ಅಳಿವಿಲ್ಲ ಎಂಬುದನ್ನು ತಿಳಿಯದೆ ಹೋದರಲ್ಲ ಎಂಬ ವಿಷಾದ ಈ ಎರಡೂ ಪದ್ಯಗಳಲ್ಲಿ ಮನೆಮಾಡಿದೆ. ‘ಹಿಟ್ಲರ್ ಹುಟ್ಟಿದ ನೆಲದಲ್ಲೆ ಲ್ಯೂಜ್ ಲಾಂಗ್ ಕೂಡ ಹುಟ್ಟಿದ್ದಾನೆ’. ಹೀಗಿರುವಾಗ ಜಂಗಮಕ್ಕೆ ಅಳಿವಿಲ್ಲ, ‘ನಾರಿಯ ದಾರಿಗೂ ಸಾವಿಲ್ಲ’. (ಗೌರಿ: 89) ಒಬ್ಬ ಗೌರಿಯನ್ನು ಒಬ್ಬ ಕಲಬುರ್ಗಿಯನ್ನು ಕೊಂದರೆ ಏನಂತೆ? ನಾವೆಲ್ಲರೂ ಗೌರಿಯರೇ. ಅಳಿವಿಲ್ಲದ ಜಂಗಮರೇ. ಅವರು ಎಷ್ಟೆಂದು ಕೊಲ್ಲುತ್ತಾರೆ? ಹೀಗೇ ಹೊರಟರೆ ಚರಿತ್ರೆ ಎಲ್ಲಿಗೆ ನಿಲ್ಲುತ್ತದೆ? ಇಂತಹ ಮೌಲಿಕ ಮಾತುಗಳನ್ನು ಇಲ್ಲಿನ ಪದ್ಯಗಳು ಎತ್ತುತ್ತವೆ. ಹಗ್ಗ ಹಾವಾದರೂ, ಅಡವಿಗೆ ಬೆಂಕಿ ಬಿದ್ದರೂ; ಏನೇ ಆದರೂ ಎಲ್ಲರೂ ಹೋರಾಡಲೇಬೇಕು. ಕೇಡಿನ ವಿರುದ್ಧ ನಿರಂತರ ಸೆಣೆಸಿ ಬದುಕುವುದೇ ಬದುಕು. ಅದೇ ಬಳಗಪ್ರಜ್ಞೆ.

ಇಲ್ಲಿರುವ ಬಳಿಸಾಲ ಬಳಗದ ಎಲ್ಲರೂ ಒಚ್ಚೆರೆಯ ನಂಟಿನವರಲ್ಲ. ಅಂದರೆ ಒಂದೇ ಸ್ಯಾರೆ (ಒಂದೇ ಬೊಗಸೆ) ರಕ್ತ ಹಂಚಿಕೊಂಡು ಹುಟ್ಟಿದ ರಕ್ತಸಂಬಂಧಿಗಳಲ್ಲ. ಒಟ್ಟು ಕುಲಕಟ್ಟಿನವರು. ಕುಲಕಟ್ಟಿನ ಎಲ್ಲರೂ ಬಳಿಸಾಲ ಬಳಗವಲ್ಲ; ಆದರೂ ಸಂಕಲನದಲ್ಲಿನ ಎಲ್ಲರಲ್ಲಿಯೂ ‘ಸಕ್ಕಸಲೀಸು ಒಚ್ಚರೆಯ ಬಾವುಣಿಕೆ’ಯೆ ಇದೆ. ಅಂದರೆ ಎಲ್ಲರನ್ನೂ ರಕ್ತಸಂಬಂಧಿಗಳ ಹಾಗೆಯೆ ಪ್ರೀತಿಸುವ ಬಾವುಣಿಕೆ ಇಲ್ಲಿದೆ. ಒಚ್ಚರೆಯ ಬಾವುಣಿಕೆ ಮಾತ್ರವಲ್ಲದೆ ಇಲ್ಲಿ ಮೂರೂ ಭಾಗಗಳಲ್ಲಿ ಮನುಷ್ಯ ಸಂಬಂಧಗಳ ಕಥನವೇ ಇದೆ. ಮನುಷ್ಯ ಸಂಬಂಧಗಳು ನಿಜವಾಗಿಯೂ ಹೇಗಿರಬೇಕು ಎಂಬ ಮೌಲ್ಯಪ್ರಜ್ಞೆ ಇಲ್ಲಿನ ಎಲ್ಲ ಪದ್ಯಗಳ ಅಂತಃಪ್ರಜ್ಞೆ. ಬಳಗಗಳು ಭಿನ್ನವಾದರೂ ಎಲ್ಲ ಕಡೆಯ ಅಂತಃಕರಣ ಒಂದೇ. ಅದು ಒಚ್ಚರೆಯ ನಂಟಿನ ಪ್ರಜ್ಞೆ. ಕಾಲದೇಶಗಳನ್ನು ದಾಟಿದ ಲೋಕವೆ ನನ್ನ ಬಳಗವೆಂಬ ಬಳಗಪ್ರಜ್ಞೆ.

ಅಪ್ಪನ ಕುರಿತಾಗಿ ಇಲ್ಲಿ ಆರು ಪದ್ಯಗಳಿವೆ. ಒಂದು ಕಡೆ ನೆಲೆ ನಿಲ್ಲದ ಜೋಗಿ ಕಲ್ಪನೆಯ ಮೂಲಕ ಇಲ್ಲಿ ಅಪ್ಪನ ಚಿತ್ರಗಳನ್ನು ನೀಡಲಾಗಿದೆ. ಬೇರೆ ಬೇರೆ ಸಾಂದರ್ಭಿಕ ಒತ್ತಡಗಳಿಂದ ಬರೆಯಲ್ಪಟ್ಟಿರುವ ಇವೆಲ್ಲವೂ ಅಪ್ಪನ ಭಿನ್ನ ವ್ಯಕ್ತಿತ್ವಗಳನ್ನು ಕಟ್ಟಿಕೊಡುವ ಪದ್ಯಗಳು. ಅದಕ್ಕೆಂದೆ ಅಪ್ಪ ಎಂಬ ಮೊದಲ ಪದ್ಯದಲ್ಲಿಯೆ ‘ಸತ್ಯಕ್ಕೆ ಮುಖಗಳದೆಶ್ಟು ತಂದೆ?’ ಎಂಬ ಸಾಲು ಮತ್ತೆ ಮತ್ತೆ ಪುನರಾವರ್ತನೆ ಆಗುತ್ತದೆ. ಇದು ಈ ಪದ್ಯದ ಕೇಳ್ವಿ ಮಾತ್ರ ಆಗಿರದೆ ಉಳಿದ ಆರೂ ಪದ್ಯಗಳಲ್ಲಿ ಇದು ಮೌನವಾಗಿ ಅನುರಣಿಸುತ್ತದೆ. ಸತ್ಯ ಒಂದಲ್ಲ, ಹಲವು ಮತ್ತು ಅದು ಅಮೂರ್ತ ಎಂಬ ತತ್ವನಿರೂಪಣೆಯೆ ಈ ಎಲ್ಲ ಪದ್ಯಗಳಲ್ಲೂ ಅಭಿವ್ಯಕ್ತಗೊಂಡಿದೆ. ಅವ್ವ ಅಜ್ಜಿಯರು ಕುಟುಂಬ ನಡೆಸಲು ನಡೆಸಿದ ಹೋರಾಟ ಕವಿಯನ್ನು ಎಷ್ಟು ಕಾಡಿದೆಯೊ ಅಪ್ಪನ ಪಾತ್ರ ಕೂಡ ಅಷ್ಟೆ ಕಾಡಿದೆ. ನಿದ್ರೆ, ಕನಸು, ಎಚ್ಚರ ಮೂರೂ ಸ್ಥಿತಿಗಳಲ್ಲಿ ಅಪ್ಪನ ಬದುಕು ಮತ್ತು ಸಾವು ಎರಡೂ ಕಾಡಿರುವ ಭಿನ್ನ ಚಿತ್ರಗಳು ಇವಾಗಿವೆ.

ಹೆಂಡತಿಯ ಬಗ್ಗೆ ಬಾಳಸಂಗಾತಿ, ಇವಳು, ಜೀವಜೋಕಾಲಿ ಹೀಗೆ ಮೂರು ಪದ್ಯಗಳಿವೆ. ಇದು ಸಂಖ್ಯೆಯ ಪ್ರಶ್ನೆ ಅಲ್ಲ. ಸಂದರ್ಭದ ಒತ್ತಡಗಳು ಉಂಟಾದಂತೆಲ್ಲ ಆಯಾಯಾ ಪದ್ಯಗಳು ಇಲ್ಲಿ ರಚನೆ ಆಗಿವೆ. ಈ ಮೂರೂ ಪದ್ಯಗಳು ನಿಜವಾದ ಅರ್ಥದಲ್ಲಿ ದಾಂಪತ್ಯಪ್ರೀತಿಯ ಪದ್ಯಗಳು. ಜೀವಜೋಕಾಲಿ ಪದ್ಯವಂತೂ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಜೀವವು ಜೋಕಾಲಿ ಆಡುವಾಗ ಪತಿ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಹೆಣಗಿದ ಬಾವುಣಿಕೆಯ ಚಿತ್ರಗಳ ಒಟ್ಟಿಲು. ‘ತೂಪುರದ ಚಕ್ಕೆ ಒಲೆಗಿಕ್ಕಿದಂತೆ’ ದಾಂಪತ್ಯ ಪುರಪುರನೆ ಉರಿದು ಹೋದರೆ ಅದಕ್ಕೆ ಬೆಲೆಯಿಲ್ಲ. ‘ಕುದುರೆ ಕಂಡರೆ ಕಾಲುನೋವು ಎಂದು ಹೇಳುವ ಕಳ್ಳಜನರ ಪಾರುಪತ್ಯ’ದಲ್ಲಿ ಸಿಲುಕಿ ದಾಂಪತ್ಯ ಸವೆದು ಹೋದರೂ ಫಲವಿಲ್ಲ. ದಾಂಪತ್ಯವೆಂದರೆ ‘ತುಂಬಿದ ಕೆರೆ ಏರಿ ಒಡೆಯದ ಹಾಗೆ ತೂಟಾಡುವುದು’. ಎಂಬತ್ತು ದಿನಗಳ ಕಾಲ ಹೆಂಡತಿಯನ್ನು ಆಸ್ಪತ್ರೆಯಲ್ಲಿ ಇರಿಸಿ ನೋಡಿಕೊಳ್ಳುವ ಕಥನ ಇದಾದರೂ ಇದೊಂದು ಮಾಗಿದ ದಾಂಪತ್ಯಕಥನವೇ ಆಗಿದೆ. ಪ್ರೀತಿಯು ಪರೀಕ್ಶೆಗೆ ಗುರಿಯಾಗುವುದೇ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ. ಪ್ರೀತಿಯೆ ಲೋಕನೀತಿ ಆಗುವುದು ಕೂಡ ಹೀಗೆ ಕಷ್ಟ ಬಂದಾಗಲೆ.

ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ತಮ್ಮೆಲ್ಲ ಜ್ಞಾನ, ಸಂಪತ್ತು, ಜವಾಬ್ದಾರಿಗಳನ್ನು ದಾಟಿಸುವುದೇ ಸಂಸಾರ. ಪರಸ್ಪರ ಜವಾಬ್ದಾರಿ, ಕಷ್ಟಗಳನ್ನು ಹಂಚಿಕೊಂಡು ಬಾಳುವುದನ್ನು ಹೆಗಲು ಬದಲಾಯಿಸುವುದು ಎಂದೂ ಹಳ್ಳಿ ಕಡೆ ಹೇಳುತ್ತಾರೆ. ಅಪ್ಪನಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ ಹಾಗೆ ಸಂಸಾರದ ನೊಗ ಹೆಗಲು ಬದಲಿಸುತ್ತ ಸಾಗುವುದೇ ಬಳಿಸಾಲು ಹಬ್ಬುವುದು. ಒಂದು ಕಡೆ ಸುಟ್ಟ ಮೇಲೆ ‘ರೊಟ್ಟಿ ಮಗುಚಲೇಬೇಕು’. ರೊಟ್ಟಿ ಮಗುಚಿದ ಹಾಗೆ ಸಂಸಾರದಲ್ಲಿ ಅಪ್ಪನ ಹೆಗಲಿಂದ ಮಕ್ಕಳಿಗೆ ನೊಗ ಬದಲಾಗಿ ಬರುತ್ತದೆ. ಇಂತಹ ‘ಹೆಗಲು ಬದಲಾಗುವ ಆದರೆ ನೊಗ ಬದಲಾಗದ’ ಸಂಸಾರದ ಪದ್ಯಗಳು ಇವಾಗಿವೆ. ದಾಂಪತ್ಯವೂ ಇದರ ಒಂದಂಗವಷ್ಟೆ. ಸಂಸಾರ ಎಂದರೆ ಜಗತ್ತು ಎಂಬಂತಹ ವಿಶಾಲವಾದ ಅರ್ಥದಲ್ಲಿ ಬಳಿಸಾಲ ಬಳಗ, ಗುರುಬಳಗ, ಗೆಳೆಬಳಗ ಮತ್ತು ಕಾಲದೇಶಗಳನ್ನು ದಾಟಿದ ಕರೆಬಳಗವನ್ನೆಲ್ಲ ಒಳಗೊಂಡ; ಪ್ರೀತಿಯೆ ಲೋಕನೀತಿಯಾದ ಬಳಗಪ್ರಜ್ಞೆಯ ಪದ್ಯಗಳು ಇವು.
ಈ ಅಂಕಣದ ಹಿಂದಿನ ಬರೆಹಗಳು:

ಪೋಸ್ಟ್ ಬಾಕ್ಸ್ ನಂ.9

ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2

ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1

ಹರಿಭಕ್ತಿ ಸಾರ ಎಂಬ ಗಿಳಿಪಾಠ

ಕಲ್ಲು ದೈವ, ಮೊರ ದೈವ?

ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು

ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...