ಪ್ರೇಮಲೋಕ’ದ ಪ್ರೇಮ ಗೀತೆಗಳು…

Date: 22-02-2022

Location: ಬೆಂಗಳೂರು


‘ಪ್ರೇಮಲೋಕ’ ಸಿನೆಮಾದ ಹನ್ನೊಂದು ಹಾಡುಗಳು ಒಟ್ಟು ನಲ್ವತ್ತೇಳು ನಿಮಿಷಗಳ ರಸಮಯ ಕ್ಷಣಗಳನ್ನು ನೀಡುತ್ತವೆ. ಹೀಗಾಗಿ ಚಿತ್ರಗೀತೆಯೊಂದರ ಬಗ್ಗೆ ಬರೆಯಲಾಗದೆ 'ಪ್ರೇಮಲೋಕ'ವೆಂಬ ಚಿತ್ರದ ಗೀತೆಗಳ ಬಗ್ಗೆ ಬರೆದೆನಷ್ಟೇ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ಅವರು ತಮ್ಮ ಅನಂತಯಾನ ಅಂಕಣದಲ್ಲಿ ತಮ್ಮ ಯೌವನಾವಸ್ಥೆಯಲ್ಲಿ ಕಾಡಿದ ಪ್ರೇಮಲೋಕದ ಗೀತೆಗಳು ಹಾಗೂ ಸದಾ ಹಸಿರಾಗಿರುವ ಆ ಸಾಹಿತ್ಯದ ಕುರಿತು ಬರೆದಿದ್ದಾರೆ.

ಯೌವನಾವಸ್ಥೆಗೆ ಪ್ರವೇಶ ಮಾಡಿದ ಕ್ಷಣವದು. ಅದು ವಯಸ್ಸಿಗೆ ತಕ್ಕಂತೆ ಕನಸು ಕಾಣುವ ಪೌರ್ಣಮಿಯ ಕಾಲವೂ ಹೌದು! ಕನಸುಗಳಲ್ಲಿ ಹಲವು ವಿಧ. ತ್ಯಾಗದ ಕನಸು, ವೈರಾಗ್ಯದ ಕನಸು, ಸಾಹಸದ ಕನಸು, ಪ್ರೀತಿಯ ಕನಸು, ಪ್ರೇಮದ ಕನಸು, ಪ್ರಣಯದ ಕನಸು ಹೀಗೆ ಹತ್ತು ಹಲವು ರೀತಿಯ ಕನಸುಗಳು ಆಯಾ ವಯೋಗುಣಕ್ಕನುಸಾರವಾಗಿ ನಮ್ಮೊಳಗಿಳಿದು ಬಿಡುತ್ತವೆ. ಅಂದು ನನ್ನೊಳಗೆ ಇಳಿಬಿದ್ದ ಕನಸು ‘ಪ್ರೇಮದ ಕನಸು’.

ವಯಸ್ಸು ಅಂತಹದ್ದೇ ನೋಡಿ…ಹುಚ್ಚು ಕೊಡಿ ಮನಸ್ಸು ಬೇರೆ. ಒಟ್ಟಿನಲ್ಲಿ ಸದಾ ಕನಸು ಕಾಣುವ ಬಯಕೆ. ಕನಸು ಕಾಣುವುದೊಂದು ನಿತ್ಯದ ಕ್ರೀಯೆ. ಕನಸಿನ ಹಂಬಲದಲ್ಲೇ ಕಾಲವನ್ನು ತಳ್ಳುವ ಪಡ್ಡೆಗಳಿಗೆ ಒಬ್ಬ ನಾಯಕನ ಜರೂರು ಅಂದು ಇತ್ತು. ಅಂತಹನೊಬ್ಬ ನಾಯಕ ಒಂದೋ ನಮ್ಮೊಳಗೇ ಮೊಳಕೆಯೊಡೆಯುತ್ತಾನೆ ಅಥವಾ ಸಮಾಜದ ಯಾವುದಾದರೂ ಒಂದು ಸ್ತರದಲ್ಲಿ ಎದ್ದು ಬಂದು ನಮ್ಮನ್ನು ಆವರಿಸಿಕೊಂಡುಬಿಟ್ಟು ಸನ್ನಿವೇಶಕ್ಕನುಗುಣವಾಗಿ ನಾಯಕನಾಗಿ ಬಿಡುತ್ತಾನೆ.

ಚಿತ್ರಗೀತೆಗಳು ಕಲ್ಪನೆಯ ವಿಸ್ತಾರವನ್ನು ಹಿಗ್ಗಿಸುವುದು ಮಾತ್ರವಲ್ಲದೆ ಕಲ್ಪನೆಯ ಒಂದು ಭಾಗವಾಗಿಯೂ ನಮ್ಮನ್ನು ಆವರಿಸಿಕೊಂಡು ಬಿಡುತ್ತವೆ. ರಸಗವಳವನ್ನೂ ಉಣಿಸುತ್ತವೆ. ಮಧುರ ವೇದನೆಯ ಭಾವಗಳನ್ನು ಹರಿಸುವಂತಹ ಹಾಡುಗಳಿದ್ದರಂತೂ ಕೇಳಲೇಬೇಡಿ. ದಿನವಿಡೀ ಅಂತಹ ಹಾಡುಗಳನ್ನು ಗುನುಗುನುಗಿಸುತ್ತಲೇ ಇರುತ್ತೇವೆ. ಕೆಲವು ಹಾಡುಗಳು ಸಾಹಿತ್ಯಕ್ಕಾಗಿ ಇಷ್ಟವಾದರೆ, ಇನ್ನುಳಿದವು ಗೀತೆಯ ರಾಗ ಸಂಯೋಜನೆಯಿಂದ ಇಷ್ಟವಾಗಿ ಬಿಡುತ್ತವೆ. ಸಾಹಿತ್ಯ- ಸಂಗೀತಗಳೆರಡೂ ಚೆನ್ನಾಗಿ ಮೂಡಿಬಂದು ಎದೆಯೊಳಗಿಳಿಯಿತೆಂದರೆ ಅದೊಂದು ಅನಿರ್ವಚನೀಯ ಕ್ಷಣವೇ ಸರಿ.

ಔಟ್ ಆಫ್ ದ ಬಾಕ್ಸ್ ಯೋಚನೆ ಮಾಡಿ ಕನಸುಗಳನ್ನು ಪೋಣಿಸಿ ಉಣಿಸುವ ಸರದಾರನೊಬ್ಬನ ತುರ್ತು ಅಂದು ಎಂದಿಗಿಂತ ಹೆಚ್ಚೇ ಇತ್ತು. ಇಂದಿನಂತೆ ಕನಸನ್ನು ಕಾಣಲು ಹತ್ತಲವು ಸುವಿಧಾಗಳೂ ಅಂದಿರಲಿಲ್ಲ. ಆ ನಿಟ್ಟಿನಲ್ಲಿ ಕನಸುಗಳ ತಾಣವಾಗಿ ಅಂದು ನಮಗಿದ್ದದ್ದು ಕೇವಲ ಸಿನೆಮಾ ಮಾತ್ರ. ಆ ಸಮಯದಲ್ಲಿ”ನಾಯಕ ನಾನೇ….” ಎಂದು ಹಾಡುತ್ತಾ ಬೆಳಗುವ ದಿನಕರ ಮತ್ತು ಉದ್ದಿಪಿಸುವ ರಜನೀಶನಾಗಿ ನಮ್ಮೆದುರಿಗೆ ಬಂದು ನಿಂತವನೊಬ್ಬ ಅಕ್ಷರಶ: ಒಬ್ಬ ಕನಸುಗಾರನಾಗಿದ್ದ. ಅವನೇ ರವಿಚಂದ್ರ..! ಆ ಪಾಟಿಯ ಕನಸುಗಳನ್ನು ಆತ ನೇಯುತ್ತಾನೆಂದು ಯಾರೂ ಊಹಿಸಿಯೇ ಇರಲಿಲ್ಲ.

ಕಚಗುಳಿಯಿಡುವ ಅಕ್ಷರಗಳಿಗೆ ಸಾಥಿಯಾಗಿ, ಅದ್ದಿಸಿಕೊಂಡ ಭಾವನೆಗಳು ಇಂಪಾದ ಗೀತೆಗಳಾಗಿ ಹೃದಯ-ಮನಸ್ಸಿನೊಳಗೆ ಇಳಿದು ಇಂದಿಗೂ ಇವೆಯೆಂದರೆ-‘ನಾದಬ್ರಹ್ಮ ಹಂಸಲೇಖ’ರ ಕಮಾಲ್ ಅಲ್ಲದೆ ಬೇರೇನೂ ಅಲ್ಲ. ಒಂದು ಕೈಯಲ್ಲಿ ಲೇಖನಿ ಇನ್ನೊಂದರಲ್ಲಿ ಹಾರ್ಮೋನಿಯಂ ಅನ್ನು ಜೊತೆ ಜೊತೆಯಾಗಿ ಬರೆದು ನುಡಿಸಿ ನಡೆಸಬಲ್ಲ ಚಿತ್ರಸಾಹಿತಿ ಹಾಗೂ ಸಂಗೀತ ನಿರ್ದೇಶಕರವರು. ಅಬ್ಬಾ..! ಎಂತಹ ಹಾಡುಗಳವು. ಯೌವನದ ತೇರಿಗೇ ಗಾಲಿಯಾದವುಗಳು ಅಂದರೆ ಲೆಕ್ಕಹಾಕಿಕೊಳ್ಳಿ…

ಅವರು ಬರೆದು ಸಂಯೋಜಿಸಿದ ಹಾಡುಗಳನ್ನು ಕೇಳಿದ ತಾರುಣ್ಯ ರಥವು ಲಂಗು ಲಗಾಮಿಲ್ಲದೆ ಓಡಿದ್ದೇ ಓಡಿದ್ದು. ಹದಿ ಹರೆಯಕ್ಕೆ ಒಗ್ಗುವ, ಯೌವನೋತ್ಸಾಹವನ್ನು ಬಿಂಬಿಸಿ ಚೆಲ್ಲುವ ಸಾಹಿತ್ಯಕ್ಕೆ ಅಷ್ಟೇ ಇಂಪಾದ ರಾಗ ಸಂಯೋಜನೆಯಿದ್ದರೆ ಇನ್ನೇನು ಬೇಕು ಹರಿಯುವ ಹರಯಕ್ಕೆ! ತೆರೆದ ಕಣ್ಣುಗಳ ನಡುವೆಯೂ ಮತ್ತೆಮತ್ತೆ ಕನಸುಗಳು ಬೆಳಗುತ್ತಲೇ ಇದ್ದವು.

ಹಾಡುಗಳು ಇಷ್ಟವಾಗುವುದು ಎರಡು ಕಾರಣಕ್ಕೆ. ಒಂದು ಸಾಹಿತ್ಯ. ಇನ್ನೊಂದು ಮಾಧುರ್ಯ. ಕೆಲವೊಮ್ಮೆ ಇವೆರಡರಲ್ಲಿ ಯಾವುದಾದರೊಂದು ಅಥವಾ ಎರಡೂ ಇಷ್ಟವಾಗಿ ಬಿಡುವುದಿದೆ. ಅದೇ ರೀತಿ ಎರಡು ತರಹದ ಕಿವಿಗಳೂ ಇವೆ. ರಾಗವನ್ನು ಮೊದಲು ಆಲಿಸಿ ಹೃದಯದೊಳಕ್ಕಿಳಿಸಿಕೊಳ್ಳುವ ಮತ್ತು ಸಾಹಿತ್ಯವನ್ನು ಆಲಿಸಿ ಮನಸ್ಸಿನೊಳಕ್ಕಿಳಿಸಿಕೊಳ್ಳುವಂತಹ ಕಿವಿಗಳು. ಹೃದಯದ ಮಾತನ್ನು ಕೇಳುವವರು ರಾಗಕ್ಕೆ ಶರಣಾದರೆ, ಮನಸ್ಸಿನ ಮಾತನ್ನು ಕೇಳುವವರು ಸಾಹಿತ್ಯಕ್ಕೆ ಶರಣಾಗುತ್ತಾರೆ. ಇವೆರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಹೃದಯ-ಮನಸ್ಸುಗಳು ಸಾಹಿತ್ಯ ಹಾಗೂ ಸಂಗೀತವೆರಡನ್ನೂ ಕೇಳಿ ಅನುಭವಿಸಿ ಖುಷಿಪಡುವುದಿದೆ. ಹೃದಯ ಮನಸ್ಸುಗಳ ಮೇಲಾಟ ಇಲ್ಲಿಯೂ ಬಿಟ್ಟಿಲ್ಲ. ಅಷ್ಟಕ್ಕೂ ಕರಗದೆ ಯಾವುದೂ ಅನುಭವಕ್ಕೆ ದಕ್ಕುವುದಿಲ್ಲವಲ್ಲ!

ಸಾಹಿತ್ಯ-ಸಂಗೀತವೆರಡೂ ಹಿತವೆನಿಸಿ ದಕ್ಕಿಸಿಕೊಂಡು ಇಷ್ಟಪಡುವ ಹಲವು ಚಿತ್ರಗಳು ಮತ್ತದರ ಗೀತೆಗಳು ಪಟ್ಟಿಯಲ್ಲಿವೆ. ಅದರಲ್ಲೊಂದು 'ಪ್ರೇಮಲೋಕ'. ಈ ಚಿತ್ರದ ಎಲ್ಲಾ ಹಾಡುಗಳೂ ಗಲ್ಲಾ ಪೆಟ್ಟಿಗೆಯನ್ನು ಬಾಚಿ ತಬ್ಬಿಕೊಂಡಿದ್ದಲ್ಲದೆ, ಭಾವನೆಗಳನ್ನು ಕೆದಕಿ ಬಡಿದೆಬ್ಬಿಸಿಯೂ ಇದೆ. ಒಟ್ಟು ಹನ್ನೊಂದು ಹಾಡುಗಳ ಪ್ರೇಮಗುಚ್ಚ ‘ಪ್ರೇಮಲೋಕ’ ಸಿನಿಮಾದಲ್ಲಿದೆ. A bundle of joy ಅಂತೀವಲ್ಲ ಹಾಗೆ ‘ಪ್ರೇಮಲೋಕ’ ಸಿನೆಮಾದ ಗೀತೆಗಳು. ಒಂದೇ ಗುಕ್ಕಿಗೆ ಕೇಳಿಸಿಕೊಂಡು ಹದಿಹರೆಯದ ಭಾವಲೋಕಕ್ಕೆ ಇಳಿಸಿ ಬಿಡುವ ಶಕ್ತಿ ಇಲ್ಲಿನ ಹಾಡುಗಳಿಗಿವೆ.

ಸಾಮಾನ್ಯವಾಗಿ ಸಿನೆಮಾವೊಂದರಲ್ಲಿ ಎಲ್ಲಾ ಭಾವಗಳಿಗೆ ಅನುಗುಣವಾಗುವ ಹಾಡುಗಳಿರುವುದುಂಟು. ಆದರೆ ‘ಪ್ರೇಮಲೋಕ’ ಚಿತ್ರದ ಎಲ್ಲಾ ಹಾಡುಗಳು ಯುವ ಹರೆಯದ ಭಾವನೆಗಳಿಗೆ ಪೂರಕವಾಗಿದ್ದುಕೊಂಡು-ಹರೆಯವನ್ನೇ ಉದ್ದೀಪಿಸಿ ಬೆಳಗುವಂತೆ ಮಾಡಿವೆ. ತಾರುಣ್ಯವೆನ್ನುವ ಭಾವಸ್ಥಿತಿಯು ಎಲ್ಲಾ ಕಾಲಮಾನದಲ್ಲೂ ಬೇಕಾಗಿಬರುವ, ಬಹುತೇಕರು ಅಪೇಕ್ಷಿಸಲ್ಪಡುವ ಮತ್ತು ನಿತ್ಯದ ಬದುಕಿನಲ್ಲಿ ಸದಾ ಕಾಣಬಯಸುವ ಶುಭಕರ ಗಳಿಗೆಯೊಳಗೆ ಚಿಮ್ಮುವ ಚಿಲುಮೆ. 'ಪ್ರೇಮ ಲೋಕ' ಬೆಳ್ಳಿ ತೆರೆಯಲ್ಲಿ ಮೂಡಿ 25 ವರ್ಷಗಳು ಕಳೆದರೂ ಅದರ ಚಾರ್ಮ್ ಇನ್ನೂ ಮಾಸಿಲ್ಲ. ಅಂದರೆ ಆ ಸಿನೆಮಾದ ಹಾಡುಗಳು ಹೃದಯ-ಮನಸ್ಸುಗಳನ್ನು ಕದ್ದ ಬಗೆಯನ್ನೊಮ್ಮೆ ನೆನೆಯಿರಿ.

“ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ”ವನ್ನು ಹೊತ್ತುಕೊಂಡು,“ಗೆಳೆಯರೇ ನನ್ನ ಗೆಳತಿಯರೆ, ಕಳೆಯಿತು ಆ ಬೇಸಿಗೆ ಹೋಗೋಣ ಕಾಲೇಜಿಗೆ” ಎಂದೆಲ್ಲರನ್ನು ಹುರಿದುಂಬಿಸಿ ಕಾಲೇಜಿಗೆ ಎಳೆದೊಯ್ಯಲಾಯಿತು. ಅತ್ತ ಕಾಲೇಜಿಗೆ ಹೋದರೆ,“ಈ ನಿಂಬೆ ಹಣ್ಣಿನಂತ ಹುಡುಗಿ ಬಂದ್ಲು ನೋಡು”ಎಂದು ತೋರಿಸಿದರೆ; ಇತ್ತ, “ದಿನಾ ಬೀದಿಯಲಿ ಬಂದ್ರೆ ನೋಡು ಇಂತ ಬ್ಯೂಟಿ..”ಹಾಡುತ್ತಾ ಮನಸ್ಸಿನ ಕಾಮನೆಯನ್ನು ಹೊರ ಚೆಲ್ಲುತ್ತಲಿರುವಾಗಲೇ - “ನೋಡಮ್ಮಾ ಹುಡುಗಿ ಕೇಳಮ್ಮಾ ಸರಿಯಾಗಿ…ನೀನಿಲ್ಲಿ ಬರೋದು ಓದುವ ಸಲುವಾಗಿ”-ಮೇಷ್ಟ್ರು ಪ್ರೀತಿಯಿಂದ ಗದರಿಸಿ ದುಷ್ಯಂತ ರಾಜನ ಕತೆಯನ್ನು ಪಾಠ ಮಾಡುತ್ತಿರಲು-ಒಕ್ಕೊರಲಿನಿಂದ ಹುಡುಗರೆಲ್ಲರೂ,“ಬಂದ್ಲು ಸಾರ್...ಶಕುಂತಲ”- ತಳಕುತ್ತಾ ಬಳುಕಿಕೊಂಡು ಬರುವ ಏರು ಜವ್ವನೆಯನ್ನುದ್ದೇಶಿಸಿ ಹಾಡಿದಾಗ;ಒಮ್ಮೆಲೇ ಹದಿ ಮನಸ್ಸಿನಲ್ಲಿ ಕನಸಿನ ಗರಿಗಳು ಗೆದರಿ ಬಿಡುತ್ತವೆ. “ನೀನಾ ಶಕುಂತಲಾ?”ಕೇಳಿದರೆ,“ಅಲ್ಲಾ ನಾನ್ ಶಶಿಕಲಾ”ಹೇಳಿದವಳಿಗೆ ಬೇಕಾದಲ್ಲಿ ಕುಳಿತುಕೋ ಎಂದು ಆಜ್ಞಾಪಿಸುವ ಮೇಷ್ಟ್ರ ಮಾತಿಗೆ ಪ್ರತಿಯಾಗಿ, ಅಕ್ಕಪಕ್ಕದ ಬೆಂಚಿನ ಹುಡುಗರೆಲ್ಲರೂ,"ಇಲ್ಲೇ ಸ್ವಲ್ಪ ಅಡ್ಜಸ್ಟ್ ಮಾಡ್ಕೋ..."ಬಳಿಯಲ್ಲೇ ಕೂರೆಂದು ಅಂಗಾಲಾಚುತ್ತಾರೆ.ಕೊನೆಗೆ ಆಕೆ ತನಗೆ ಬೇಕಾದಲ್ಲಿ ಕುಳಿತುಕೊಳ್ಳಲು ಹೋಗುವಾಗ ಎದುರಾಗುವ ಸನ್ನಿವೇಶವೆಲ್ಲವನ್ನೂ ಸರಳ ಆಡು ಮಾತುಗಳಲ್ಲಿ ಪೋಣಿಸಿ, ಸಂಗೀತ ಸಂಯೋಜಿಸಿದ ಬಗೆ ನಿಜಕ್ಕೂ ಅದ್ಭುತ. ಆಡು ಮಾತಿನಲ್ಲೂ ಹಾಡುಗಳು ನಲಿದು ಕುಣಿದು ಉಲಿಯುವುದೆಂದು ತೋರಿಸಿದ್ದಲ್ಲದೆ, ಅದೇ ಮಾತುಗಳಿಗೆ ನವುರಾದ ಸಂಗೀತದ ಲೇಪನವನ್ನೂ ಕೊಟ್ಟು, ಗೀತೆಯ ಮೆರಗನ್ನು ಹೆಚ್ಚಿಸಿದವರು ನಾದಬ್ರಹ್ಮ. ಒಪ್ಪಿ- ಅಪ್ಪಿಕೊಳ್ಳುವಂತಹ ಹಾಡುಗಳ ವೈಯಾರಕ್ಕೆ ಬಾಗಿದವರೇ ಎಲ್ಲರೂ. ಅಂತಹ ಕ್ರಿಯೇಟಿವಿಟಿ ಯಾರಿಗೆ ಇಷ್ಟವಾಗಲ್ಲ ಹೇಳಿ?

…“ಯಾರಿವನು ಈ ಮನ್ಮಥನು…ವೀರರಲ್ಲಿ ವೀರ” ಎಂದಾಕೆ ಹಾಡುತ್ತಿದ್ದರೆ, ಮನ್ಮಥ ಗಂಡೆದೆಗಳೆಲ್ಲವೂ ಅರಿಯದೇ ಉಬ್ಬಿಕೊಂಡು ಬಿಡುತ್ತಿದ್ದುವು. “ಬಾಯ್ ಫ್ರೆಂಡ್ ಬರ್ತಾನಂತ ಬಾಯಿ ಬಿಡಬೇಡ…ಸುಳ್ಳು ಹೇಳಬೇಡ”ಎನ್ನುವ ಕಿಚಾಯಿಸುವಿಕೆ ಒಂದುಕಡೆ. ಇನ್ನೊಂದೆಡೆ,“ಏ ಗಂಗು..ನೀ ಬೈಕು ಕಲಿಸಿಕೊಡು ನಂಗೂ”ಪ್ರಾಸಬದ್ಧವಾಗಿ ಹಾಡಿದಳೆಂದರೆ-“ಇದೇ ಬೈಕು ಕ್ಲಚು, ಇದೇ ಬೈಕು ಗೇರು” ಎಂದು ತೆರೆಯ ಮೇಲೆ ತೋರುವ ತೇರನ್ನು ತನ್ನದೆಂದೇ ಭಾವಿಸಿ ಭಿನ್ನವಿಸುವ ಹುಡುಗರು ನಾವಾಗಿ ಬಿಡುತ್ತಿದ್ದೆವು. ಮುನಿಸಿಕೊಂಡ ಹುಡುಗಿ,“ಮೋಸಗಾರನ ಹೃದಯ ಶೂನ್ಯನ..ಇಂದು ನಿನಗೆ ನಾ ಬೇಡವಾದೆನಾ” ಮರುಗಿ ಹಾಡಿದಳೆಂದರೆ, ಆಗಷ್ಟೇ ಅರಳಿದ ಹೃದಯಕ್ಕೆ ವಿಷಾದ ಭಾವವೊಂದು ಆವರಿಸಿಕೊಂಡು ಬಿಡುತ್ತಿತ್ತು.

ಕನಸಿನ ಲೋಕದಲ್ಲೇ ವಿಹರಿಸುತ್ತಿದ್ದ ಜೋಡಿಗೆ,“ಏಳೇಳಿ ಪ್ರೇಮಿಗಳೇ ಏಳೇಳಿ”-ಸುಪ್ರಭಾತವನ್ನು ಹಾಡಿ ಬೆಳಗಾಗಿಸಿದರು. ಹರೆಯದ ಕಾಮನೆಯನ್ನು ಮುಫತ್ತಾಗಿ ಕಾಣಲಿರುವ ಒಂದೇ ಒಂದು ಗೌಪ್ಯತೆಯ ಜಾಗ ಬಾತ್ ರೂಮ್. ಅಂತಹ ‘ಬಾತ್ ರೂಮಿನ ಏಕ್ ಪ್ರೇಮ್ ಕಹಾನಿ’ಯನ್ನೂ ‘ಹಂಸಲೇಖ’ಕಟ್ಟಿಕೊಟ್ಟರು. ಯೌವನದಲ್ಲಿ ಯಥೇಚ್ಛವಾಗಿ ಕನಸನ್ನು ಕಾಣಲು, ಭಾವನೆಗಳಿಗೆ ಬೆಳಗಲಿರುವ ಹಾದಿಗಳನ್ನೂ ಸುಗಮವಾಗಿಸಿ ಕೊಟ್ಟರೆಂದರೆ-ಯೋಚ್ನೆ ಮಾಡಿ ಅದೆಷ್ಟು ಅನುಭಾವಿಸಿ ಅನುಭವಿಸುತ್ತಾ ನಮಗೆ ಕನಸನ್ನುಣಿಸಿದರೆಂದು!

ಹದಿಹರೆಯಕ್ಕೆ ಏನೇನು ಬೇಕೋ ಅವೆಲ್ಲವನ್ನೂ ಉಣಬಡಿಸಿದ್ದು ಈ ಚಿತ್ರದ ಹಾಡುಗಳ ವೈಶಿಷ್ಟ್ಯ. ಕಂಡ ಎಲ್ಲಾ ಕನಸುಗಳನ್ನು ಹೊಸೆದು ಹೇಗೆ ಒಪ್ಪಿಸಲಿ ಎಂದು ಚಿಂತಿಸುತ್ತಿರುವಾಗ,“ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದ್ರೆ ಕೊಡ್ತೀಯಾ?ನಿನ್ನ ಪ್ರೀತಿ ಮಾಡ್ತೀನಿ ಹೃದಯ-ಮನಸ್ಸು ಕೊಡ್ತೀಯಾ?"ಅಂತ ಒಬ್ಬರನ್ನೊಬ್ಬರು ಪ್ರಶ್ನಿಸುತ್ತಾರೆ.

ಇನ್ನೇನು ಪರಸ್ಪರರು ಕೊಡಲು ಮತ್ತು ಸ್ವೀಕರಿಸಲು ಬರುವ ಗಳಿಗೆಗಾಗಿ ಮೈ-ಮನವು ಕಾತರದಿಂದ ಕಾಯುವಂತೆ ಮಾಡುವಲ್ಲಿ ಹಂಸಲೇಖರ ಸಾಹಿತ್ಯ ಮತ್ತು ಸಂಗೀತವೆರಡೂ ಅಧ್ಭುತ ಯಶಸ್ಸನ್ನು ಕಾಣುತ್ತದೆ. ಕೊನೆಗೆ,"ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ...ಇದು ಎಷ್ಟು ಸಾರಿ ಹಾಡಿದರು ಚೆನ್ನ"- ಹಾಡುತ್ತಾ ಪ್ರೇಮಭಾವದ ಒಲುಮೆಯನ್ನು ಝುಳುಝುಳನೆ ಹರಿಸಿ ಬಿಡುವ ಜೊತೆಗೆ ಅಷ್ಟೇ ಭಾವ ತೀವ್ರತೆಯ ಒಸರನ್ನೂ ಚಿಮ್ಮಿಸಿ ಬಿಡುತ್ತಾರೆ.

‘ಪ್ರೇಮಲೋಕ’ ಸಿನೆಮಾದ ಹನ್ನೊಂದು ಹಾಡುಗಳು ಒಟ್ಟು ನಲ್ವತ್ತೇಳು ನಿಮಿಷಗಳ ರಸಮಯ ಕ್ಷಣಗಳನ್ನು ನೀಡುತ್ತವೆ. ಹೀಗಾಗಿ ಚಿತ್ರಗೀತೆಯೊಂದರ ಬಗ್ಗೆ ಬರೆಯಲಾಗದೆ 'ಪ್ರೇಮಲೋಕ'ವೆಂಬ ಚಿತ್ರದ ಗೀತೆಗಳ ಬಗ್ಗೆ ಬರೆದೆನಷ್ಟೇ. ಅಂದಿಗೂ ಇಂದಿಗೂ ಎಂದೆಂದಿಗೂ ಹರಯಕ್ಕೆ ಬಂದವರಿಗೆ ಮುದ ನೀಡುತ್ತಾ, ಹರೆಯವನ್ನು ಹಾದು ಹೋದವರಿಗೆ ಮತ್ತೆಮತ್ತೆ ರಿಜುವನೇಟ್ ಮಾಡಿಸುವ ಕನ್ನಡದ ಏಕೈಕ ಸಿನೆಮಾವೊಂದಿದ್ದರೆ ಅದು 'ಪ್ರೇಮಲೋಕ'.

ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶವಿದೆಂದುಕೊಂಡು ಎಲ್ಲಾ ಗೀತೆಗಳನ್ನು ಪುನಃ ಕೇಳಿ ಆನಂದಿಸಿ.

ಈ ಅಂಕಣದ ಹಿಂದಿನ ಬರೆಹಗಳು:
ಆದಿ-ಅಂತ್ಯಗಳ ನಡುವಿನ ಹರಿವು
ಗರುಡಗಮನ ಬಂದ..ಮಂಗಳೂರ ಹೊತ್ತು ತಂದ
ಸುಖದ ಸುತ್ತು…
ನಿರೀಕ್ಷೆಗಳಿಲ್ಲವಾದರೆ ನಿರಾಳ
ದಾರುಣ ಅಂತ್ಯ ಹೇಳುವ 'ನಗ್ನಸತ್ಯ'
ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...