ಪರಿಷ್ಕೃತ ಪಠ್ಯ ಕೈಬಿಡುವವರೆಗೂ ಸರ್ಕಾರದ ವಿರುದ್ಧ ಹೋರಾಟ : ಸಾಹಿತಿ-ಗಣ್ಯರ ಒಟ್ಟಾಭಿಪ್ರಾಯ

Date: 25-05-2022

Location: ಬೆಂಗಳೂರು


ಪಠ್ಯಪುಸ್ತಕ ರಚನೆ, ಪರಿಷ್ಕರಣೆ ಹಾಗೂ ಮರುಪರಿಷ್ಕರಣೆ ನೆಪದಲ್ಲಿ ಮೂಲಭೂತವಾದಿತನವನ್ನು ತುಂಬುತ್ತಿರುವ ರಾಜ್ಯ ಸರ್ಕಾರವು ಸಂಕುಚಿತ ದೃಷ್ಟಿ ಹೊಂದಿದ್ದು, ಪಠ್ಯಪರಿಶೀಲನಾ ಸಮಿತಿಯನ್ನು ರದ್ದು ಪಡಿಸುವತನಕ ರಾಜ್ಯದಾದ್ಯಂತ ಹೋರಾಟ ನಡೆಸುವ ಅಗತ್ಯವಿದೆ ಎಂಬ ಪ್ರತಿಪಾದನೆಗೆ ರಾಜ್ಯದ ಸಾಹಿತಿ-ಗಣ್ಯರು-ಕಲಾವಿದರು-ಚಿಂತಕರು-ಶಿಕ್ಷಣ ತಜ್ಞರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಪಠ್ಯರಚನೆ, ಪರಿಷ್ಕರಣೆ, ಮರು ಪರಿಷ್ಕರಣೆಗೆ ಸಂಬಂದಿಸಿದಂತೆ ಬುಧವಾರ ಬೆಳಿಗ್ಗೆ ನಗರದ ಗಾಂಧಿಭವನದಲ್ಲಿ ನಡೆದ ಶಿಕ್ಷಣ ತಜ್ಞರ ಸಭೆಯಲ್ಲಿ ರಾಜ್ಯ ಸರ್ಕಾರದ ಮೂಲಭೂತವಾದಿತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪಠ್ಯಪರಿಶೀಲನಾ ಸಮಿತಿಯನ್ನು ರದ್ದುಪಡಿಸಬೇಕು ಹಾಗೂ ಸರ್ಕಾರ ಮಾಡಿರುವ ಈ ತಪ್ಪಿಗೆ ಶಿಕ್ಷಣ ಸಚಿವ ನಾಗೇಶ್ ಅವರ ರಾಜೀನಾಮೆ ಪಡೆಯಬೇಕು. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ರಾಜ್ಯ ಸರ್ಕಾರ ಎಚ್ಚರಗೊಳ್ಳುವವರೆಗೂ ರಾಜ್ಯದಾದ್ಯಂತ ಹೋರಾಟ ನಡೆಸುವ ಅಗತ್ಯ ಹಾಗೂ ಅನಿವಾರ್ಯತೆ ಇದೆ ಎಂಬ ಬಹುತೇಕರ ಅಭಿಪ್ರಾಯಗಳಿಗೆ ಸಭೆ ಒಮ್ಮತ ವ್ಯಕ್ತಪಡಿಸಿತು.

ಆರ್.ಎಸ್.ಎಸ್. ಸಾಮಗ್ರಿ: ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಆರ್.ಎಸ್.ಎಸ್. ಮೂಲಭೂತವಾದಿತವನ್ನು ತುಂಬುತ್ತಿದೆ.ಅಸಮಾನತೆಯನ್ನು ಸಮರ್ಥಿಸಿಕೊಳ್ಳುವ ಹಿಂದೂಗಳ ಅಜೆಂಡಾ ಈ ಕುತಂತ್ರದ ಹಿಂದಿದೆ. ಸ್ವತಃ ರಾಜ್ಯ ಸರ್ಕಾರವೇ, ಅನರ್ಹರನ್ನು ಮುಂದಿಟ್ಟುಕೊಂಡು ಜಾತ್ಯತೀತತೆಯ ಸಾಂಸ್ಕೃತಿಕ ನೆಲೆಗಳನ್ನು ದಮನ ಮಾಡುವ ಸಂಚು ಹೊಂದಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಸಮಿತಿ ಅಧ್ಯಕ್ಷ ಅನರ್ಹ: ಮಕ್ಕಳ ಪಠ್ಯ ರಚನೆ, ಪರಿಷ್ಕರಣೆಯ ಹಿಂದೆ ಸದುದ್ದೇಶವಿದ್ದರೆ ರೋಹಿತ್ ಚಕ್ರವರ್ತಿಯಂತಹ ಅನರ್ಹರನ್ನು ಪಠ್ಯ ಪರಿಶೀಲನಾ ಸಮಿತಿಯ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡುತ್ತಿರಲಿಲ್ಲ. ರೋಹಿತ್ ಚಕ್ರವರ್ತಿಗೆ ಸಮಿತಿ ಅಧ್ಯಕ್ಷರಾಗುವ ಯಾವ ಯೋಗ್ಯತೆಯೂ, ಅರ್ಹತೆಯೂ ಇಲ್ಲ. ಸೂಫಿ, ಸಂತರು, ಶರಣರು ಆಳಿದ ನಾಡಿನಲ್ಲಿ ಮಕ್ಕಳ ಪಠ್ಯರಚನಾ, ಪರಿಷ್ಕರಣೆ ಸಮಿತಿಗೆ ಒಂದು ಘನತೆ-ಗೌರವ ಇದೆ. ಅದನ್ನು ಈವರೆಗಿನ ಎಲ್ಲ ಸರ್ಕಾರಗಳು ಪಾಲಿಸಿಕೊಂಡು ಬಂದಿವೆ. ಆದೆರೆ, ಅನರ್ಹರನ್ನು ನೇಮಿಸುವ ಮೂಲಕ ಸರ್ಕಾರ ತನ್ನ ಕೋಮುವಾದಿ ಮುಖವನ್ನು ಅನಾವರಣಗೊಳಿಸಿದೆ. ಕೂಡಲೇ, ಶಿಕ್ಷಣ ಸಚಿವರ ರಾಜೀನಾಮೆ ಪಡೆಯಬೇಕು ಹಾಗೂ ಪಠ್ಯರಚನೆ, ಪರಿಷ್ಕರಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ತೋಟದ ಶಾಂತಿ ಕದಡುವಿಕೆ: ಕರ್ನಾಟಕವು ಸರ್ವಧರ್ಮಗಳ ಶಾಂತಿಯ ತೋಟವಾಗಿದೆ. ಆದರೆ, ಆರ್‍.ಎಸ್.ಎಸ್. ಸಂಕುಚಿತ ನಿಲುವುಗಳ ರಾಜ್ಯ ಸರ್ಕಾರವು ಪಠ್ಯಪರಿಶೀಲನಾ ಸಮಿತಿ ನೆಪದಲ್ಲಿ ಈ ಶಾಂತಿಯ ತೋಟವನ್ನು ಹಾಳು ಮಾಡಲು ನಿಂತಿದೆ. ಪರಿಷ್ಕೃತ ಪಠ್ಯಗಳು ಆರ್.ಎಸ್.ಎಸ್. ಮುಖವಾಣಿಯಾಗಲು ಬಿಡುವುದಿಲ್ಲ. ಸಂವಿಧಾನದ ನೆಲೆಯೊಳಗೆ ಪಠ್ಯಪುಸ್ತಕಗಳಿರಬೇಕು ಎಂಬ ಸಾಮಾನ್ಯ ಜ್ಞಾನವೂ ಈ ಸರ್ಕಾರಕ್ಕೆ ಇಲ್ಲ. ಸರ್ವ ಧರ್ಮ ಪ್ರೀತಿಸುವ ಪಠ್ಯ ಬಿಟ್ಟು ಕೊಳಕು ಹಿಂದೂ ಧರ್ಮವನ್ನು ಮಕ್ಕಳ ತಲೆಯಲ್ಲಿ ತುಂಬಲು ಹೊರಟಿದ್ದು ಸೂಫಿ-ಸಂತರ-ಶರಣರ ನಾಡು ಕರ್ನಾಟಕ ಸಹಿಸುವುದಿಲ್ಲ ಎಂದು ಒಟ್ಟಾಭಿಪ್ರಾಯದ ಮೂಲಕ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು.

ಸಮಾನತೆಯಲ್ಲಿ ನಂಬಿಕೆ ಇರದ ಸರ್ಕಾರ: : ಹಿರಿಯ ಸಾಹಿತಿ ಡಾ. ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ ‘ರಾಜ್ಯ ಸರ್ಕಾರಕ್ಕೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಮಾನ-ಮರ್ಯಾದೆ ಮೀರಿ ನಿರ್ಲಜ್ಜವಾಗಿ ವರ್ತಿಸುತ್ತಿದೆ. ಈ ಸರ್ಕಾರಕ್ಕೆ ಸಮಾನತೆಯಲ್ಲಿ ನಂಬಿಕೆ ಇಲ್ಲ. ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿದ ಶಿಕ್ಷಣ ಸಚಿವ ನಾಗೇಶ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರೆ, ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ‘ಅಧ್ಯಾಪಕರ ವಿವೇಕದಲ್ಲಿ ನಂಬಿಕೆ ಇಟ್ಟವರು ಮಕ್ಕಳ ತಲೆಯಲ್ಲಿ ಧರ್ಮದ ವಿಷ ತುಂಬಲು ಹೋಗುವುದಿಲ್ಲ ಎಂದು ಸಮಿತಿ ಅಧ್ಯಕ್ಷರ ನಿಲುವುಗಳನ್ನು ಖಂಡಿಸಿದರು.

ಸಾಹಿತಿ ಡಾ. ರಾಜೇಂದ್ರ ಚೆನ್ನಿ ಮಾತನಾಡಿ ‘ ಪಾಲಕರಲ್ಲಿ, ವಿದ್ಯಾರ್ಥಿಗಳಲ್ಲಿ ರಾಜ್ಯ ಸರ್ಕಾರದ ಮೂಲಭೂತವಾದಿತನ ಕುರಿತು ಜಾಗೃತಿ ಮೂಡಿಸಲು ಮತ್ತು ಸಮಿತಿ ರದ್ದುಪಡಿಸುವವರೆಗೂ ಹೋರಾಟ ನಡಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರೆ, ಶಿಕ್ಷಣ ತಜ್ಞ ಡಾ. ಪಿ.ವಿ. ನಿರಂಜನಾರಾಧ್ಯ ಮಾತನಾಡಿ ‘ಪಠ್ಯಪುಸ್ತಕ ರಚನೆ, ಪರಿಷ್ಕರಣೆ ಮಾಡಲು ಮಾನದಂಡಗಳಿವೆ. ರಾಜ್ಯ ಸರ್ಕಾರ ಹಾಗೂ ಸಮಿತಿ ಅಧ್ಯಕ್ಷರಿಗೆ ಕನಿಷ್ಟ ತಿಳಿವಳಿಕೆಯೂ ಇಲ್ಲ. ಸಮಿತಿ ಮನಬಂದಂತೆ ಪಠ್ಯ ರಚನೆ, ಪರಿಷ್ಕರಣೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ ‘ಪಠ್ಯಪರಿಶೀಲನಾ ಸಮಿತಿಯ ಹಿಂದೆ ವೈದಿಕಶಾಹಿ ಕೆಲಸ ಮಾಡಿದೆ. ಸಮಿತಿಗೆ ತನ್ನ ಹಕ್ಕು -ಕರ್ತವ್ಯಗಳ ಕುರಿತು ಪ್ರಾಥಮಿಕ ತಿಳಿವಳಿಕೆ ಇಲ್ಲ ಎಂದು ಕಿಡಿ ಕಾರಿದರು. ಸಾಹಿತಿ ಡಾ. ಕೆ. ಮರಳುಸಿದ್ದಪ್ಪ ಅಧ್ಯಕ್ಷತೆ ವಹಿಸಿ ‘ಶಿಕ್ಷಣದ ಮೂಲಕ ಮೂಲಭೂತವಾದಿತನವನ್ನು ಹರಡಲು ಸರ್ಕಾರ ಹುನ್ನಾರ ನಡೆಸಿದೆ. ಜಾತ್ಯತೀತ ಮನಸ್ಸಿನ ಎಲ್ಲರೂ ಹೋರಾಟಕ್ಕೆ ಸಿದ್ಧರಾಗುವ ಅಗತ್ಯವಿದೆ ಎಂದರು.

ಸಾಹಿತಿ ಗಣ್ಯರಾದ ಟಿ.ಆರ್. ಚಂದ್ರಶೇಖರ, ಬಿ.ಟಿ. ಲಲಿತಾನಾಯಕ, ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್, ಮಾವಳ್ಳಿ ಸಂಖರ ಸೇರಿದಂತೆ ಜಾತ್ಯತೀತ ಮಸ್ಸಿನ ಕನ್ನಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಿ. ಶ್ರೀಪಾದ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಕೆ.ಎಸ್. ವಿಮಲಾ ನಿರೂಪಿಸಿದರು.

 

MORE NEWS

ಪ್ರಕಾಶ ಖಾಡೆ ‘ಬಾಳುಕುನ ಪುರಾಣ’ ಕೃತಿಗೆ ಕಸಾಪ ಅರಕೇರಿ ದತ್ತಿ ಪ್ರಶಸ್ತಿ

29-03-2024 ಬೆಂಗಳೂರು

ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...