ಪ್ರೊ. ದುಷ್ಯಂತ ನಾಡಗೌಡರ ಕಥಾ ಸಂಕಲನ - ನಿರ್ಮಲೆ

Date: 01-06-2023

Location: ಬೆಂಗಳೂರು


''ನಿರ್ಮಲೆ’ ಕತೆಯಲ್ಲಿ ಒಂದೆಡೆ; “ಸಂಬಂಧಗಳನ್ನು ಹೇಳುವ ಎಷ್ಟೊಂದು ನಾಮಪದಗಳಿದ್ದರೂ ಪ್ರತಿಯೊಂದು ಗಂಡು-ಹೆಣ್ಣಿನ ಸಂಬಂಧ ಪೂರ್ತಿಯಾಗಿ, ಸಮರ್ಥವಾಗಿ ಹೇಳುವ ನಾಮಪದಗಳು ಇನ್ನೂ ಎಷ್ಟು ಬೇಕೇನೋ!” ಎಂಬ ಮಾತು ಕತೆಗಾರರ ವ್ಯಾಖ್ಯಾನವೇ ಆಗಿದೆ. ಮತ್ತು ಇದು ನಾಡಗೌಡರ ಎಲ್ಲಾ ಕತೆಗಳಿಗೂ ಅನ್ವಯಿಸುವ ಮಾತೂ ಆಗುತ್ತದೆ,” ಎನ್ನುತ್ತಾರೆ ಲೇಖಕ ಶ್ರಿಧರ ಹೆಗಡೆ ಭದ್ರನ್. ಅವರು ತಮ್ಮ ಸಮಕಾಲೀನ ಪುಸ್ತಕ ಲೋಕ ಅಂಕಣದಲ್ಲಿ ‘ದುಷ್ಯಂತ ನಾಡಗೌಡರ ಕಥಾ ಸಂಕಲನ - ನಿರ್ಮಲೆ’ ಕುರಿತು ಬರೆದಿದ್ದಾರೆ.

ಪ್ರೊ. ದುಷ್ಯಂತ ನಾಡಗೌಡ – ಧಾರವಾಡ ಸುತ್ತಲಿನ ಸಾಹಿತ್ಯ ಪರಿಸರದಲ್ಲಿ ಸುಪರಿಚಿತ ಹೆಸರು. ತಮ್ಮ ಸಾಹಿತ್ಯ ಪರಿಚಾರಿಕೆ, ಸಮಕಾಲೀನ ಸಾಹಿತ್ಯದ ವ್ಯಾಪಕ ಓದು ಹಾಗೂ ಮಾತು, ಚರ್ಚೆಗಳ ಮೂಲಕ ಅವರು ಪರಿಚಿತರು. ಇದೀಗ ತಮ್ಮ ಚೊಚ್ಚಿಲ ಕಥಾ ಸಂಕಲನದೊಮದಿಗೆ ನಮ್ಮೆದುರು ಬಂದಿದ್ದಾರೆ. ಈ ಮೊದಲು ವಿಮರ್ಶೆ, ಸಮೀಕ್ಷಾತ್ಮಕ ಬರಹಗಳ ಸಂಕಲವನ್ನು ಹಾಗೂ ಹಿರಿಯ ಸಂಶೋಧಕ ನಾ. ಶ್ರೀ. ರಾಜಪುರೋಹಿತರ ಅಧ್ಯಯನಗಳ ಮಹತ್ವವನ್ನು ಎತ್ತಿ ಹೇಳುವ ಪುಸ್ತಿಕೆಯನ್ನು ಪ್ರಕಟಿಸಿದ್ದ ಅವರ ಬರವಣಿಗೆಯ ಸಂಯಮ ವಿಶೇಷವಾದುದು.

ಮೂಲತಃ ಧಾರವಾಡದವರೇ ಆದರೂ 1953ರಲ್ಲಿ ಧಾರವಾಡ ಬಿಟ್ಟು ವಲಸೆ ಹೋಗಿ ತಮ್ಮ 54ನೆಯ ವಯಸ್ಸಿನಲ್ಲಿ ಮತ್ತೆ ಧಾರವಾಡಕ್ಕೆ ಬಂದು ಸೇರಿದ ಪ್ರೊ. ದುಷ್ಯಂತ ನಾಡಗೌಡರು; ಕೆ.ಎಲ್.ಇ. ಸಂಸ್ಥೆಯ ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ಅಲ್ಲಲ್ಲಿ ಪ್ರಕಟವಾಗಿದ್ದ ಹಾಗೂ ಹೊಸದಾಗಿ ಬರೆದಿರುವ ಒಟ್ಟೂ 9 ಕತೆಗಳನ್ನು ‘ನಿರ್ಮಲೆ’ ಹೆಸರಿನಲ್ಲಿ ಅವರು ಈಗ ಪ್ರಕಟಿಸಿದ್ದಾರೆ. ಇವುಗಳಲ್ಲಿ ‘ಕೇಡಿಗ’ ಎಂಬ ಒಂದು ಕತೆ ಮಾತ್ರ ಚೆಕಾಫ್ ಕತೆಯ ರೂಪಾಂತರವಾದರೆ ಉಳಿದವು ಸ್ವತಂತ್ರ ಕತೆಗಳು.

ಸಂಕಲನದ ಮೊದಲ ಕತೆ ‘ಪಾರಿವಾಳದ ರಕ್ತ’ 23 ವರ್ಷಗಳ ಹಿಂದೆ ‘ಭಾವನಾ’ ಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿ ಗಮನ ಸೆಳೆದಿತ್ತು. ಇದಕ್ಕೆ ಕತೆಯ ಅನುಭವದ ತಾಜಾತನ, ಲವಲವಿಕೆಯ ನಿರೂಪಣೆ, ಪ್ರಬುದ್ಧ ನಿರ್ವಹಣೆ ಹಾಗೂ ಯಾವುದೇ ನಿರ್ಣಯವನ್ನು ಕೊಡುವ ಉತ್ಸಾಹಕ್ಕೆ ಹೋಗದೇ ಮನುಷ್ಯ ಸ್ವಭಾವ ಮತ್ತು ಸಂಬಂಧಗಳ ಹಲವು ಆಯಾಮಗಳನ್ನು ಮುಕ್ತವಾಗಿ, ಸೂಕ್ಷ್ಮವಾಗಿ ಪರಿಶೀಲಿಸುವ ವ್ಯವಧಾನ ಕಾರಣವಾಗಿತ್ತು. ಬಾಲ್ಯದಿಂದ ‘ಅಪ್ಪಾ’ನ ವಿಶಿಷ್ಟ ವ್ಯಕ್ತಿತ್ವದಡಿ ನಲುಗುವ ನಿರೂಪಕ ಮ್ಯಾಟ್ರಿಕ್ ಓದುವ ಕಾಲಕ್ಕೆ ಮನೆ ಬಿಟ್ಟು ಓಡಿ ಹೋಗಿ ಏನೆಲ್ಲಾ ದುಡಿಮೆ ಮಾಡಿ, ಕೊನೆಗೆ ಸಾಂಗಲಿ ಹತ್ತಿರದ ಖಾನಾಪುರದಲ್ಲಿ ಸಾಕಷ್ಟು ರೊಕ್ಕ ಹಾಗೂ ಮರ್ಯಾದೆ ಗಳಿಸಿದ ಡಾಕ್ಟರ್ ಆಗಿದ್ದಾನೆ. ಹೀಗೆ ನಿರೂಪಕನ ಪಲಾಯನಕ್ಕೆ ಕಾರಣವಾದ ‘ಅಪ್ಪಾ’ ಫ್ಯೂಡಲ್ ವ್ಯವಸ್ಥೆಯ ಪ್ರತಿನಿಧಿ. ನಾಲ್ಕು ತಲೆಮಾರುಗಳ ಹಿಂದೆ ಸಾಂಗಲಿ ಸಂಸ್ಥಾನಿಕರಾಗಿದ್ದ ಕುಟುಂಬದವನು. “ಎತ್ತರದ ನಿಲುವಿನ, ಒಳ್ಳೆಯ ಮೈಕಟ್ಟಿನ, ಸಾದುಗಪ್ಪು ಬಣ್ಣದ, ಗುಂಗುರು ಕೂದಲಿನ ಮೋಹಕ ವ್ಯಕ್ತಿತ್ವ, ಮುಖದ ಮೇಲಿನ ಅನವಶ್ಯಕ ಗಾಂಭೀರ್ಯದಿಂದಾಗಿ - ನನ್ನದು ಕೊಡ ತಗೊಳ್ಳುವ ವ್ಯವಹಾರವಲ್ಲ, ಏನಿದ್ದರೂ ನನ್ನಿಂದ ನೀವು ಪಡೆಯತಕ್ಕದ್ದು ಎಂದು ತಪ್ಪದೇ ಹೇಳುವ ಮುಖಮುದ್ರೆ” ಈ ವಿವರಗಳು ಅಪ್ಪಾನ ದರ್ಪವನ್ನು ಎತ್ತಿ ಹೇಳುತ್ತವೆ.

ರಾಮೋಜಿ ಮತ್ತು ಶೇಖರ ಇವರ ಗಾಳಕ್ಕೆ ಸಿಕ್ಕು ನಾಟಕ ಕಂಪನಿ ಕಟ್ಟುವ ಕಾರ್ಯಕ್ಕೆ ಅಪ್ಪಾ ಕೈಜೋಡಿಸಿದ್ದಾರೆ. ನಿಧಾನವಾಗಿ ನಾಟಕದಲ್ಲಿ ಪಾತ್ರವಹಿಸಲು ಬಂದಿದ್ದ ಅಸಹಾಯಕ ಮೋಹಿತೆಯರ ಗೌರಿಯ ಆಕರ್ಷಣೆಗೆ ಒಳಗಾಗಿದ್ದಾರೆ. ಕೆಲಸದಾಳು ಮೂಕ ಚೆನ್ನನ ಮೇಲೆ ತೋರಿಸುವ ಪ್ರೀತಿಯ ಅಲ್ಪ ಭಾಗವನ್ನೂ ಸ್ವಂತ ಮಗನಾದ ನಿರೂಪಕನ ಮೇಲೆ ತೋರಿಸಲಾರರು, ನಿರೂಪಕನ ಅಕ್ಕ ಪ್ರೇಮಾ ಹಾಗೂ ಚೆನ್ನನ ನಡುವೆ ಪ್ರೇಮ ಅಂಕುರಿಸಿದೆ ಎಂಬುದು ತಿಳಿದು ಬಂದಾಗ ಚೆನ್ನನನ್ನು ‘ಇಲ್ಲ’ ಮಾಡುತ್ತಾರೆ. ಅವನು ಏನಾದ ಎಂಬುದೇ ತಿಳಿಯುವುದಿಲ್ಲ. ಇವೆಲ್ಲವೂ ‘ಅಪ್ಪಾ’ನ ಫ್ಯೂಡಲ್ ಮನೋಧರ್ಮದ ಮಾದರಿಗಳಾದರೆ ಇವಕ್ಕೆಲ್ಲ ಕಳಶವಿಟ್ಟಂತೆ ಕತೆಯ ಆರಂಭದಲ್ಲೇ ಒಂದು ಘಟನೆ ಕಾಣಿಸಿಕೊಳ್ಳುತ್ತದೆ; ತೂಗು ಮಂಚದ ಮೇಲೆ ಕೂತು ಅಪ್ಪಾ ಸುತ್ತ ಕುಳಿತವರೊಂದಿಗೆ ವಾರ್ತಾ ಸಲ್ಲಾಪ ನಡೆಸುತ್ತಿದ್ದಾಗ, ‘ಕೊರವರ ಮಂಜ ಹುಸಿಯ ಅಂಚಿಗೆ ಕುಳಿತು ಸನಯಿ ಬಾರಿಸಹತ್ತಿದ್ದ. ಬಸಿಲಿನಲ್ಲಿ ಹೊರಗಿನಿಂದ ಬಂದು, ತೊಟ್ಟಿದ್ದ ರೇಶಿಮೆ ಅಂಗಿಯನ್ನು ತೆಗೆದು ಕೈಮೇಲೆ ಚೆಲ್ಲಿಕೊಂಡು ಕುಳಿತಿದ್ದ ಅಪ್ಪಾ, ಸನಯಿ ಕೇಳಿ ಖುಷಿಯಿಂದ “ಲೇ ಮಗನ ತೊಗೋ; ಇದನ್ನ ಹಾಕ್ಕೊಂಡು ಹಬ್ಬ ಮಾಡು” ಎಂದು ಕೈಯಲ್ಲಿ ಜೋತು ಬಿದ್ದಿದ್ದ ರೇಶಿಮೆ ಅಂಗಿಯನ್ನೇ ಮಂಜನಿಗೆ ಕೊಟ್ಟರು- ಇದಂತೂ ಅಪ್ಪಾನ ಫ್ಯೂಡಲ್ ಮನೋಧರ್ಮಕ್ಕೆ ಕನ್ನಡಿ ಹಿಡಿದ ಘಟನೆ.

ಮನೆ ಬಿಟ್ಟು ಹೋಗಿದ್ದ ನಿರೂಪಕ ಹೆಂಡತಿ ಮಕ್ಕಳೊಂದಿಗೆ ಈಗ ಊರಿಗೆ ಹೊರಟಿದ್ದಾನೆ. ಇದಕ್ಕೆ ಕಾರಣ ತಮ್ಮ ನಂದೂ ಮೂಲಕ ತಲಪಿದ್ದ ಸಂದೇಶ; ಅವ್ವನಿಗೆ ಅರವು - ಮರೆವು, ಅಪ್ಪಾನಿಗೆ ಅರ್ಧಾಂಗ ವಾಯುವಿನಿಂದ ದೇಹದ ಬಲಭಾಗ ನಿಷ್ಕ್ರಿಯವಾಗಿದೆ ಎಂಬ ವಿಚಾರ. ಇವನು ಬರುವುದನ್ನೇ ಕಾದಿದ್ದ ಪ್ರೇಮಕ್ಕ; “ಅಂಕೋಲಾಕ್ಕೆ ಹೋಗಿ ‘ಪಾರಿವಾಳದ ರಕ್ತ’ ದ ಔಷಧ ತರುವಂತೆ ಒತ್ತಾಯಿಸುತ್ತಾಳೆ. ಹಲವು ಮಗ್ಗುಲಿನ ಕ್ರೌರ್ಯವನ್ನು ಪ್ರದರ್ಶಿಸಿದ್ದ ಅಪ್ಪಾನ ಔಷಧಕ್ಕೆ ಶಾಂತಿಯ ಪ್ರತೀಕವಾದ ‘ಪಾರಿವಾಳದ ರಕ್ತ’ ಬೇಕಾಗುವುದು ಕತೆ ಕಟ್ಟಿಕೊಡುವ ಸಾಂಕೇತಿಕ ವ್ಯಂಗ್ಯ. ಔಷಧ ತರಲು ಹೊರಟು ಅಂಕೋಲಾ ಬಸ್ ಹತ್ತಿದಾಗ ಇನ್ನೊಂದು ಬಸ್ ನಿಂದ ಇಳಿದು ‘ಅಪ್ಪಾ’ನ ಬದುಕಿನಲ್ಲಿ ನಾಟಕದ ಮೂಲಕ ಪ್ರವೇಶ ಪಡೆದಿದ್ದ ಮೋಹಿತೆಯರ ಗೌರಿ ಹೋಗುತ್ತಿರುವುದು ಕಾಣಿಸುತ್ತದೆ. ಅವಳು ಅಲ್ಲಿಯೇ ಇದ್ದಳೇ? ಬೇರೆಡೆಯಿಂದ ಬಂದಳೇ? ಯಾವ ವಿವರವನ್ನೂ ಕತೆ ನೀಡುವುದಿಲ್ಲವಾದರೂ ಸಾಂಕೇತಿಕವಾಗಿ ಅವಳ ಅಸ್ತಿತ್ವವನ್ನು ಸೂಚಿಸುತ್ತದೆ.

‘ಭಾವನಾ’ ಮಾಸಿಕದಲ್ಲಿ ಈ ಕತೆಯನ್ನು ಪ್ರಕಟಿಸಿದ್ದ ಸಂಪಾದಕ ಜಯಂತ ಕಾಯ್ಕಿಣಿಯವರು ‘ಕತೆ’ಯ ಬಗ್ಗೆ ಲೇಖಕರ ಅನಿಸಿಕೆಯನ್ನೂ ಪ್ರಕಟಿಸುತ್ತಿದ್ದರು. ಇಲ್ಲಿ ಮೂಡಿರುವ ಪ್ರೊ. ದುಷ್ಯಂತ ನಾಡಗೌಡರ ಮಾತು ಕಥಾ ಪ್ರಕಾರಕ್ಕೆ ಅವರ ಪ್ರತಿಕ್ರಿಯೆಯಾಗುವುದರೊಂದಿಗೆ ಅವರ ಕತೆಗಳಿಗೆ ಒಂದು ಪ್ರವೇಶಿಕೆಯಾಗಿಯೂ ಕೆಲಸ ಮಾಡಿದೆ; “ನನ್ನ ಪಾಲಿಗೆ ಕಥೆ ಎಂದರೆ; ವಿಸ್ತಾರವಾದ, ವೈವಿಧ್ಯಮಯ, ಕ್ಷಣ ಕ್ಷಣಕ್ಕೂ ಬದಲಾಗುವ ಬದುಕಿನ ಕೆಲವೊಂದು ವಿಶಿಷ್ಟ ಅನುಭವಗಳನ್ನು ಆಯ್ದು, ಅವುಗಳನ್ನು ಭಾಷೆಯಲ್ಲಿ ಮತ್ತೆ ಹುಡುಕಿ ನೋಡಿ, ಎಲ್ಲಿಯಾದರೂ ಏನಾದರೂ ಅರ್ಥ ಸಿಗಬಹುದೋ? ಎಂದು ನೋಡುವುದು” (ಭಾವನಾ- ಜುಲೈ, 2000).

ವಾಡೆಯ ಸರ್ಕಾರರ ಮಗಳು ಅಹಲ್ಯೆ, ಮನೆಯ ಕೆಲಸದ ಬಸವಣ್ಣೆಪ್ಪನ ಮಗ ವೀರಣ್ಣನಲ್ಲಿ ಮೋಹಗೊಂಡಿದ್ದರ ಪರಿಣಾಮ ಇಡೀ ಕತೆಯನ್ನು ವ್ಯಾಪಿಸಿಕೊಳ್ಳುತ್ತದೆ. ಜಾಳಪೋಳ ದಂಗೆಗೆ ಬೆದರಿದ ವಾಡೆಯವರು ಕತ್ತಲಲ್ಲಿ ಮನೆಗೆ ಬೀಗ ಹಾಕಿ ಮನೆ ಖಾಲಿ ಮಾಡುವಾಗ ಒಂದು ಮುಗ್ಧ ಜೀವ ‘ಉಷೆ’ ಎಂಬ ಮಗು ಬಲಿಯಾಯಿತು ಎಂಬ ಉದ್ಗಾರದೊಂದಿಗೆ ಮುಗಿಯುವ ಕತೆ ಅಪೂರ್ಣವೆನಿಸುತ್ತದೆ. ಉಷೆಯ ಕತೆ ಉತ್ತರಾರ್ಧ ಬೇಡಿತ್ತು ಎಂಬ ನಿರೂಪಕರ ಮುಕ್ತಾಯದ ಮಾತೂ ಇದನ್ನೇ ಹೇಳಿದೆ.

‘ಸತ್ತವಳು ಪಾಪಿ’ ಕತೆಯಲ್ಲಿ ಈ ಮೊದಲಿನ ಕಥನ ಮುಂದುವರಿದು ಉಷೆಯ ದುರಂತದ ಸಾವನ್ನು ಚಿತ್ರಿಸುತ್ತದೆ. ವಾಡೆಯ ರಾಮಚಂದ್ರ ಮತ್ತು ಅರೇರ ತುಳಸಾನ ಮನೆಯ ಪಾರೋತಿ ಇವರ ಅಕ್ರಮ ಸಂಬಂಧದ ಚಿತ್ರಣದ ಸುತ್ತ ನಡೆಯುವ ಕತೆಯ ಘಟನೆಗಳು ಸಾಮಾಜಿಕ ಸಂಬಂಧಗಳ ಬಹುವಿನ್ಯಾಸವನ್ನು ತೆರೆದು ತೋರಿಸುತ್ತದೆ. “ವಯಸ್ಸಿಗೆ ಬಂದ ಒಂದು ಗಂಡು ಒಂದು ಹೆಣ್ಣು ಪರಸ್ಪರರನ್ನು ಮೆಚ್ಚಿಕೊಂಡು ತಮ್ಮ ಉಳಿದ ಜೀವನವನ್ನು ಕೂಡಿಯೇ ಕಳೆಯಲು ಸಾಧ್ಯವಾಗುವ ದಿನಗಳು ಎಂದಾದರೂ ಪರಂಪರಾಗತ ಮೌಲ್ಯಗಳ ನಮ್ಮ ಸಮಾಜದಲ್ಲಿ ಬರಬಹುದೋ?” ಎಂಬ ಕತೆಯೊಳಗಿನ ಪಾತ್ರದ ಪ್ರಶ್ನೆ ಕತೆಗಾರನ ಅನುಭೂತಿಯ ಆಳದ ಪ್ರಶ್ನೆಯಾಗಿಯೂ ಕೇಳಿಸುತ್ತದೆ.

ಲೇಖಕ ಪ್ರೊ. ದುಷ್ಯಂತ ನಾಡಗೌಡರು ಬಿ. ಎ. ಕಲಿಯುವಾಗಲೇ ಸ್ನೇಹಿತ ಮಾಧವ ಕುಲಕರ್ಣಿ ಹಾಗೂ ಇತರರೊಂದಿಗೆ ಕೂಡಿಕೊಂಡು ಪ್ರಕಟಿಸಿದ ‘ಹೊಸಗೊಂದಲ’ ಕಥಾ ಸಂಕಲನದಲ್ಲಿ ಪ್ರಕಟವಾದ ಕತೆ – ಎಲ್ಲೋ ಏನೊ ತಪ್ಪಿದೆ. ನವ್ಯ ಕಾಲಘಟ್ಟದ ಉಚ್ಛ್ರಾಯ ಸ್ಥಿತಿಯಲ್ಲಿ ಪ್ರಕಟವಾದ ಕತೆ ಅಸ್ತಿತ್ವವಾದದ ದಟ್ಟ ಛಾಯೆಯನ್ನು ಹೊದ್ದಿದೆ. ಅವ್ಯಕ್ತ ಮತ್ತು ಆದದ್ದು ಹೀಗೆ ಈ ಕತೆಗಳ ಛಾಯೆಯೂ ಇದೇ ಆಗಿದೆ.

ಈ ಮೂರೂ ಕತೆಗಳು ಗಂಡು-ಹೆಣ್ಣಿನ ಸಂಬಂಧಗಳ ಸೂಕ್ಷ್ಮವನ್ನು ಶೋಧಿಸುವ ರೀತಿ ವಿಶೇಷವಾದುದು. ಹಾಗೆ ನೋಡಿದರೆ; ಸಂಕಲನದ ಪ್ರತಿಯೊಂದು ಕತೆಯಲ್ಲೂ ಈ ಗಂಡು-ಹೆಣ್ಣಿನ ಸಂಬಂಧವನ್ನು ಕೇವಲ ‘ಮದುವೆ’ ಎಂಬ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಮಾತ್ರ ಇಟ್ಟು ನೋಡಲು ಲೇಖಕ ಬಯಸುತ್ತಿಲ್ಲ. ಎಲ್ಲ ಚೌಕಟ್ಟುಗಳನ್ನೂ ಮೀರಿ ಬೆಸೆಯುವ ಈ ಸಂಬಂಧಾತರಗಳ ಒಳಸುಳಿಗಳನ್ನು ಗ್ರಹಿಸುವ ಹಾಗೂ ತೋರಿಸುವ ವಿಧಾನ ಅಸಹಜವೆನಿಸುವುದಿಲ್ಲ. ಕತೆಗಳಲ್ಲಿ ಕಾಣಿಸಿಕೊಳ್ಳುವ ಎಷ್ಟೋ ಅಸಹಜ ಸಂಬಂಧಗಳೂ ಅವುಗಳ ಮೈಲಿಗೆಯ ಮಗ್ಗುಲನ್ನೂ ಮೀರಿ ಪಾವಿತ್ಯ್ರದತ್ತ ತುಡಿಯುವ ಮನೋಧರ್ಮವನ್ನು ಕಾಣುತ್ತೇವೆ. ಅಂದರೆ, ಈ ಜೀವನಕ್ರಮ, ಬದುಕಿನ ಪದ್ಧತಿ ಯಾರೋ ನಿರ್ಮಿಸಿಕೊಟ್ಟ ಸಿದ್ಧ ಸ್ವರೂಪದ್ದಲ್ಲ. ಬದಲಿಗೆ ಇದು ಸಹಜವಾಗಿ ಮನುಷ್ಯನ ಅಗತ್ಯವಾಗಿ ರೂಪುಗೊಂಡಿರುವ ವಿನ್ಯಾಸ ಎಂಬ ನಂಬುಗೆಯನ್ನು ಈ ಕತೆಗಳು ಹುಟ್ಟಿಸುತ್ತಿವೆ.

‘ನಿರ್ಮಲೆ’ ಕತೆಯಲ್ಲಿ ಒಂದೆಡೆ; “ಸಂಬಂಧಗಳನ್ನು ಹೇಳುವ ಎಷ್ಟೊಂದು ನಾಮಪದಗಳಿದ್ದರೂ ಪ್ರತಿಯೊಂದು ಗಂಡು-ಹೆಣ್ಣಿನ ಸಂಬಂಧ ಪೂರ್ತಿಯಾಗಿ, ಸಮರ್ಥವಾಗಿ ಹೇಳುವ ನಾಮಪದಗಳು ಇನ್ನೂ ಎಷ್ಟು ಬೇಕೇನೋ!” ಎಂಬ ಮಾತು ಕತೆಗಾರರ ವ್ಯಾಖ್ಯಾನವೇ ಆಗಿದೆ. ಮತ್ತು ಇದು ನಾಡಗೌಡರ ಎಲ್ಲಾ ಕತೆಗಳಿಗೂ ಅನ್ವಯಿಸುವ ಮಾತೂ ಆಗುತ್ತದೆ. ‘ನಿರ್ಮಲೆ’ ಸಂಕಲನಕ್ಕೆ ಹೆಸರು ನೀಡಿರುವ ಸುದೀರ್ಘ ಕತೆ.

ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಭದ್ರೆ ತನ್ನ ಮಗಳು ನಿರ್ಮಲೆಯನ್ನು ವೆಂಕಟರಮಣ ನಾಯಕ ದಂಪತಿಗಳ ಉಡಿಯಲ್ಲಿ ಹಾಕಿ ಹೊರಟು ಹೋಗುತ್ತಾಳೆ. ಅವರು ಬೈಲಹೊಂಗಲ ಬಿಟ್ಟು ಕುಮಟೆಗೆ ಹೋದಾಗಲೂ ಅವರ ಕುಟುಂಬದಲ್ಲಿ ಒಬ್ಬಳಾಗಿ ನಿರ್ಮಲೆಯೂ ಅವರೊಂದಿಗೆ ಹೋಗುತ್ತಾಳೆ. ನಾಯಕರ ಮಗ ಮೋಹನ ಹಾಗೂ ಅವನ ಗೆಳೆಯ ರಂಗನಾಥ ಇವರಲ್ಲಿ ಒಬ್ಬರನ್ನು ವರಿಸಬೇಕೆಂಬ ಆಸೆ ಪೂರೈಸುವುದಿಲ್ಲ. ರಂಗನಾಥನ ಅಪ್ಪ ಶ್ರೀನಿವಾಸನೂ ಹೆಂಡತಿ, ಇಬ್ಬರು ಗಂಡು ಮಕ್ಕಳು ಹಾಗೂ ಮಗಳು ಇದ್ದ ಸಂಸಾರವನ್ನು ಬಿಟ್ಟು ಪಾತರದವಳೊಡನೆ ಇರತೊಡಗಿದ ಮೇಲೆ ಅವರ ಸಂಸಾರದ ಸ್ವರೂಪ ಬದಲಾಗುತ್ತದೆ. ನಿರ್ಮಲೆಗೆ ಮೋಹನನ್ನು ಮದುವೆಯಾಗುವ ಮನಸ್ಸಿದೆ, ಆದರೆ ಅವನು ನೀನು ನನ್ನ ತಂಗಿಯಿದ್ದಂತೆ ಎಂದು ನಿರಾಕರಿಸುತ್ತಾನೆ. ಅವನ ಗೆಳೆಯ ರಂಗನಾಥನನ್ನೂ ಕೇಳಿಕೊಳ್ಳುತ್ತಾಳೆ, ಅವನಿಂದಲೂ ಅದೇ ಉತ್ತರ ಬರುತ್ತದೆ. ಪುಣೆಯಲ್ಲಿದ್ದಾಗ ನಿರ್ಮಲೆಗೆ ಸುಹಾಸ ತಳೇಗಾಂವಕರ ಎಂಬ ಹುಡುಗನ ಪರಿಚಯವಾಗುತ್ತದೆ. ಇಬ್ಬರಿಗೂ ಮದುವೆಯಾಗುವ ಆಸಕ್ತಿಯಿದ್ದರೂ ಸುಹಾಸನ ಮನೆಯವರು ಒಪ್ಪದೇ ಈ ಸಂಬಂಧ ಮುರಿಯುತ್ತದೆ. ಹೀಗೆ ಎಲ್ಲೆಡೆಯಿಂದ ನಿರಾಕರಣೆಗೆ ಒಳಗಾಗುವ ನಿರ್ಮಲೆಯ ‘ಹುಟ್ಟಿನ ಗುಟ್ಟು’ ಎಲ್ಲರನ್ನೂ ಕಾಡುತ್ತದೆ.

ನಿರ್ಮಲೆ ಓದಿದ್ದಾಳೆ, ನೌಕರಿ ಹಿಡಿದಿದ್ದಾಳೆ. ಈಗ ಅಮ್ಮ ಸುಭದ್ರೆ ಅಸಹಾಯಕಳೆಂಬ ಸುದ್ದಿ ತಿಳಿದು ಅವಳೊಂದಿಗೆ ಹೋಗಿ ನಿಲ್ಲುತ್ತಾಳೆ. ನಿರ್ನಲೆ ದುರ್ಬಲಳಲ್ಲ. ಎಲ್ಲವನ್ನೂ ಎದುರಿಸಿ ನಿಂತ ಗಟ್ಟಿ ಹೆಣ್ಣು ಮಗಳು. ಸ್ವಂತ ಕಾಲಮೇಲೆ ನಿಂತು ಅಸಹಾಯಕರಿಗೆ ಸಹಾಯ ಹಸ್ತ ಚಾಚುವಷ್ಟು ಉದಾರಿ. ವೈಯಕ್ತಿಕ ಲಾಭವನ್ನು ನಿರೀಕ್ಷಿಸದೇ ಇನ್ನೊಬ್ಬರ ಸಂತೋಷಕ್ಕಾಗಿ ತಪಿಸುವ ಹೆಣ್ಣಿನ ದೊಡ್ಡಗುಣ ಏನಿದೆ ಅದು ಕತೆಯ ಸ್ಥಾಯಿಯಾಗಿದೆ. ಇಲ್ಲಿಯ ಕತೆಗಳಲ್ಲಿ ಬರುವ ಬಹುತೇಕ ಹೆಣ್ಣು ಮಕ್ಕಳ ವ್ಯಕ್ತಿತ್ವ ‘ತಾನು ಉರಿದು ಉಳಿದವರಿಗೆ ಬೆಳಕು ನೀಡಬೇಕೆಂಬ ಮೇಣದ ಬತ್ತಿಯಂತಹುದು’.

ನಿರ್ಮಲೆ ಕತೆ ನಡೆಯುವ ಬಹುಪಾಲು ಪ್ರದೇಶ; ಕುಮಟೆಯ ಮಣಕಿ ಗ್ರೌಂಡ್, ನೆಲ್ಲಿಕೇರಿ, ಗಿಬ್ ಹೈಸ್ಕೂಲ್, ಹೆರವಟ್ಟಾ, ಕೆನರಾ ಕಾಲೇಜು ಈಗ ಡಾ. ಎ. ವಿ. ಬಾಳಿಗಾ ಕಾಲೇಜು, ದಿವಗಿ ತಾರಿಯಲ್ಲಿ ಬ್ರಿಜ್ ಇಲ್ಲದ ಕಾಲದಲ್ಲಿ ಬಾರ್ಜ್ ಮೂಲಕ ವಾಹನ ದಾಟಿಸುತ್ತಿದ್ದ ವಿವರ ಇವೆಲ್ಲವೂ ನನ್ನ ಊರಿನ ಸುತ್ತಲಿನ ಪರಿಸರವೇ ಆಗಿದ್ದು ವೈಯಕ್ತಿಕವಾಗಿ ತುಂಬಾ ಆತ್ಮೀಯವಾಗಿವೆ. ಹೈಸ್ಕೂಲ ದಿನಗಳಲ್ಲಿ ಲೇಖಕ ನಾಡಗೌಡರೂ ಕುಮಟೆಯಲ್ಲೇ ಇದ್ದವರಾದ್ದರಿಂದ ಅವರ ಆತ್ಮಕಥನದ ತುಣುಕುಗಳಾಗಿಯೂ ಇವು ಭಾಸವಾಗುತ್ತವೆ.

‘ಮತ್ತು ಅದ್ವೈತ’ ಕತೆಯ ವನಿತೆ ಮತ್ತು ರಾಜೇಂದ್ರ ಗಂಡ ಹೆಂಡಿರಲ್ಲ; ಆದರೆ ಅವರ ಪ್ರೀತಿಯ ಕುರುಹಾಗಿ ಹುಟ್ಟಿದ ಗೌತಮಿಯ ಮದುವೆಗೆ ರಾಜೇಂದ್ರ ನಮ್ಮನ್ನು ಆಹ್ವಾನಿಸುವ ಮೂಲಕ ಕತೆ ಆರಂಭವಾಗುತ್ತದೆ. ರಾಘಪ್ಪ ಇಟ್ಟುಕೊಂಡವಳಿಂದ ಮಕ್ಕಳಾಗದಿದ್ದಾಗ ಗುಂಡಕ್ಕನನ್ನು ಮದುವೆಯಾಗುತ್ತಾನೆ. ಅವರ ಸಂತಾನವೇ ವನಿತೆ. ಅಲ್ಲಿಯವರೆಗೆ ಒಂದೇ ಮನೆಯಲ್ಲಿ ಗಂಡ ಇಟ್ಟುಕೊಂಡವಳನ್ನು ಸಹಿಸಿಕೊಂಡಿದ್ದ ಗುಂಡಕ್ಕ; ವನಿತೆ ದೊಡ್ದವಳಾಗುತ್ತಿದ್ದಂತೆ ಇಟ್ಟುಕೊಂಡವಳೊಂದಿಗೆ ಮಲಗುವ ರಾಘಪ್ಪನ ನಡವಳಿಕೆಗೆ ಬೇಸತ್ತು ಅವಳಿಗೆ ಬೇರೆ ಮನೆ ಮಾಡಿ ಇಡುವಂತೆ ಗಂಡನನ್ನು ಒತ್ತಯಿಸುತ್ತಾಳೆ. ಇಲ್ಲದಿದ್ದರೆ ತಾನು ಬಾವಿ ಬೀಳುತ್ತೇನೆ ಎಂದೂ ಹೆದರಿಸುತ್ತಾಳೆ. ರಾಘಪ್ಪನ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣದ ಗುಂಡಕ್ಕ ಬಾವಿಗೆ ಬಿದ್ದು ಸಾಯುತ್ತಾಳೆ.

ವನಿತೆಗೆ ಪದವಿ ಮುಗಿಯುತ್ತಿದ್ದಂತೆ ರಾಘಪ್ಪ ಸಮೀರ ಮುತಾಲಿಕ ಎಂಬ ಮುಂಬೈ ಹುಡುಗನಿಗೆ ಅವಳನ್ನು ಮದುವೆ ಮಾಡಿಕೊಡುತ್ತಾನೆ. ನಿರೂಪಕ ರಾಜೇಂದ್ರನ ಮೇಲೆ ಮನಸ್ಸಿದ್ದ ವನಿತೆ ಉಪಾಯವಾಗಿ ಅವನನ್ನು ಕೂಡಿ ಹೆಣ್ಣು ಮಗುವನ್ನು ಪಡೆಯುತ್ತಾಳೆ. ವನಿತೆಗೆ ಕಾಮಣಿಯಾಗಿ ಸತ್ತಾಗ ಆ ಮಗು- ಗೌತಮಿ ರಾಜೇಂದ್ರನ ಮಗಳಾಗಿ ಸ್ವೀಕೃತಳಾಗುತ್ತಾಳೆ. ಇದೀಗ ಅವಳ ಮದುವೆ.

ಇಂದಿನ ಮೈಕ್ರೋನೈಸೇಷನ್ ಕಾಲದಲ್ಲಿ ವ್ಯಕ್ತಿಗೆ ಔದ್ಯೋಗಿಕ ವ್ಯಕ್ತಿತ್ವ ಇದ್ದರೂ ಸಾಮಾಜಿಕ ಬದುಕು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಇಂತಹ ಕಾಲಘಟ್ಟದಲ್ಲಿ ನಿಂತು ದುಷ್ಯಂತ ನಾಡಗೌಡರ ಕತೆಗಳನ್ನು ಓದುವುದೇ ಒಂದು ಆಹ್ಲಾದಕಾರೀ ಅನುಭವ. ಸಮಾಜದಲ್ಲಿಯ ಸಂಬಂಧಗಳ ಸಂಕೀರ್ಣತೆಯನ್ನು ಅವು ಕಟ್ಟಿಕೊಡುವ ರೀತಿಯೇ ವಿಭಿನ್ನ. ಪ್ರತಿಯೊಂದು ಕತೆಯೂ ಇಂತಹ ಸಾಮಾಜಿಕ ಬದುಕಿನ ಹಲವು ಮಗ್ಗಲುಗಳನ್ನು ಅತ್ಯಂತ ಆಪ್ತ ಭಾಷೆಯಲ್ಲಿ, ಸಾಮಾನ್ಯ ಮನುಷ್ಯರ ಬದುಕಿನ ಯಾವುದೋ ವಿಶಿಷ್ಟ ಘಟ್ಟದ ವಿಲಕ್ಷಣ ಕತೆಯನ್ನು ನಿರೂಪಿಸಲು ತೊಡಗುತ್ತದೆ. ಇಂತಹ ಸಂಕೀರ್ಣತೆಯೇ ಕಾರಣವಾಗಿ ಕಥನದ ನಿರೂಪಣೆಯಲ್ಲಿ ಹಲವು ಗೊಂದಲಗಳು ತಲೆ ಹಾಕುವುದನ್ನೂ ಅಲ್ಲಗಳೆಯಲಾಗದು.

ಸಾಹಿತ್ಯದ ವಿದ್ಯಾರ್ಥಿಯಾದ ಪ್ರೊ. ದುಷ್ಯಂತ ನಾಡಗೌಡರ ಇಂಗ್ಲಿಷ್ ಮಾಸ್ತರಿಕೆಯ ಅನುಭವದ ಫಲವಾಗಿ - ಪರ್ಲ್ ಎಸ್. ಬಕ್, ಕೀಟ್ಸ್, ಮಾರ್ಕೆ್ವಸ್, ರಾಲ್ಫೋ, ವ್ಹಾಲ್ಟ್ ವ್ಹಿಟ್‌ಮನ್, ಆಸ್ಕರ್ ವೈಲ್ಡ್ ಮುಂತಾದ ಲೇಖಕರ ಬರಹಗಳ ಸಾಂದರ್ಭಿಕ ಉಲ್ಲೇಖಗಳು ಬರುತ್ತಲೇ ಸಾಗುತ್ತವೆ. ಹಾಗೆಯೇ ಕರ್ನಾಟಕ ಕಾಲೇಜಿನ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿದ್ದ ಡಾ. ವಿ. ಕೃ. ಗೋಕಾಕ, ವಿ. ಎಂ. ಇನಾಮದಾರ, ಕನ್ನಡ ವಿಭಾಗದ ಸಾಸನೂರ, ಮಳಗಿ ಮುಂತಾದ ಪ್ರಾಧ್ಯಾಪಕರೂ ಸಮಯಾವಕಾಶ ಉಲ್ಲೇಖಗೊಂಡಿದ್ದಾರೆ.

ದುಷ್ಯಂತ ನಾಡಗೌಡರ ಕಥಾ ಸಂಕಲನ ಈಗ ಪ್ರಕಟವಾಗಿದೆಯಾದರೂ ಇಲ್ಲಿಯ ಕಥನಗಳ ಬರಹ ಮತ್ತು ಪ್ರಕಟಣೆಯ ಇತಿಹಾಸವನ್ನು ಗಮನಿಸಿದರೆ ಸುಮಾರು ಅರ್ಧ ಶತಮಾನದ ಜೀವನವಿದೆ. ಕತೆಗಳ ಬರಹ ಮತ್ತು ಪ್ರಕಟಣೆಯಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದರೆ; ಕನ್ನಡದ ಮಹತ್ವದ ಕತೆಗಾರರಲ್ಲಿ ಒಬ್ಬರಾಗುವ ಸಾಧ್ಯತೆ ಇತ್ತು ಎನ್ನುವುದಕ್ಕೆ ಪ್ರಸ್ತುತ ಸಂಕಲನ ತೋರುಬೆರಳಾಗಿದೆ.

ಈ ಅಂಕಣದ ಹಿಂದಿನ ಬರಹಗಳು:
ಎರಡು ಉದಾತ್ತ ಜೀವಗಳೊಡನಾಟ

ಅಪ್ಪ ಮತ್ತು ಮುಪ್ಪು: ಸಮಕಾಲೀನ ಹಾಗೂ ಸಾರ್ವಕಾಲಿಕ ಎರಡು ಸಂಗತಿಗಳು
ಸಮಕಾಲೀನ ಪುಸ್ತಕಲೋಕದ ಅಘಟಿತ ಘಟನೆ
ಮರಾಠಿಯನ್ನು ಮೀರಿ ಕನ್ನಡ ಪತ್ರಿಕೋದ್ಯಮದ ’ಚಂದ್ರೋದಯ’

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...