ಪುಸ್ತಕ ಲೋಕವೆಂಬ ಬದುಕಿನ ಬುತ್ತಿ

Date: 12-08-2020

Location: ಬೆಂಗಳೂರು


ಕನ್ನಡ ಪುಸ್ತಕಲೋಕದ ಚಿರಕೃತಿಗಳ ಬಗೆಗಿನ ತಮ್ಮ ಓದು-ಅಭಿಪ್ರಾಯಗಳನ್ನು ವಿಮರ್ಶಕ-ಲೇಖಕ ಶ್ರೀಧರ ಹೆಗಡೆ ಭದ್ರನ್‌ ಅವರು ’ಬದುಕಿನ ಬುತ್ತಿ’ ಸರಣಿಯಲ್ಲಿ ದಾಖಲಿಸಲಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ಅಸ್ತಿತ್ವ ಉಳಿಸಿಕೊಂಡಿರುವ ಜೊತೆಗೆ ಜನಪ್ರೀತಿಯನ್ನೂ ಗಳಿಸಿರುವ ಪುಸ್ತಕಗಳ ಬಗ್ಗೆ ಬರೆಯಲಿದ್ದಾರೆ.

ಪುಸ್ತಕಗಳು, ಪುಸ್ತಕ ಸಂಸ್ಕೃತಿ, ಓದುವಿಕೆ ಇವೆಲ್ಲವೂ ನಮ್ಮ ಬದುಕಿನ ಭಾಗಗಳು. ಪುಸ್ತಕಗಳು ಅನ್ನುವಾಗ ಅವುಗಳನ್ನು ಬಿಟ್ಟು ವಿದ್ಯಾವಂತ ಸಮಾಜ ಬದುಕಲು ಸಾಧ್ಯವಿಲ್ಲ. ಒಂದಲ್ಲಾ ಒಂದು ಸಂದರ್ಭದಲ್ಲಿ ನಾವು ಪುಸ್ತಕಗಳ ಜೊತೆಗೆ ಬದುಕು ಮಾಡಬೇಕಾಗುತ್ತದೆ. ಪುಸ್ತಕಗಳು ಇನ್ನೂ ಹುಟ್ಟಲಿರುವ ಜನಾಂಗದ ಆಸ್ತಿಯೆನ್ನುತ್ತಾನೆ- ಜೋಸೆಫ್ ಎಡಿಸನ್. ನಮ್ಮ ಜನಾಂಗ ಇವತ್ತು ಪಡೆದುಕೊಳ್ಳುತ್ತಿರುವ ಜ್ಞಾನ ನಮ್ಮ ಹಿಂದಿನ ತಲೆಮಾರು ಕಟ್ಟಿಕೊಟ್ಟಿರುವ ಜ್ಞಾನ ಪರಂಪರೆಯ ಮೂಲಕ ಪುಷ್ಟಗೊಂಡಿರುವಂಥದ್ದು. ಮತ್ತು ನಮ್ಮ ತಲೆಮಾರೂ ಕೂಡ ಇಂದಿನ ಜ್ಞಾನ ಪರಂಪರೆಯನ್ನು ಪುಸ್ತಕ ರೂಪದಲ್ಲಿ ಇಟ್ಟು ಹೋಗುತ್ತದೆ. ಹಿಂದಿನವರು ಬಿಟ್ಟು ಹೋಗಿರುವುದು, ನಾವು ಮುಂದಿನವರಿಗಾಗಿ ಉಳಿಸಿ ಹೋಗುವ ಜ್ಞಾನದ ನಿರಂತರ ಧಾರೆ ಪುಸ್ತಕ ರೂಪದಲ್ಲಿ ಸಂಗ್ರಹವಾಗಿರುತ್ತದೆ. ಹಳೆಯ ತಲೆಮಾರು ತಮ್ಮ ಜೀವಮಾನದ ಸ್ಮೃತಿ ಸಂಚಯವನ್ನು ಉಳಿಸಿ ಹೋಗುವ ಅತ್ಯುತ್ತಮ ವಿಧಾನ ಬರೆವಣಿಗೆ. ಇದೇ ಮಾತಿನ ಮುಂದುವರಿಕೆಯಾಗಿ ಎಮರ್ಸನ್ ಆಡಿದ ಮಾತು ಧ್ವನಿಸುತ್ತದೆ; ಪುಸ್ತಕಗಳು ಆಯಾ ಕಾಲದ ಸಂಸ್ಕೃತಿಯ ಜೀವಂತ ಪ್ರತೀಕ. ಯಾವುದೇ ಕಾಲದ ಸಂಸ್ಕೃತಿ, ಜನಜೀವನ, ಆಚಾರ, ವಿಚಾರ, ಆ ಕಾಲದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಬದುಕು ಇವೆಲ್ಲವನ್ನೂ ನಾವು ಅರ್ಥಮಾಡಿಕೊಳ್ಳಲು ನಮಗೆ ಅಧಿಕೃತವಾಗಿ ಸಿಗುವ ಆಕರಗಳೆಂದರೆ ಪುಸ್ತಕಗಳು. ನಮ್ಮ ನೆನಪಿನ ಕೋಶದಲ್ಲಿ ಒಯ್ಯಲು ಸಾಧ್ಯವಾಗದ ಅನೇಕ ಜ್ಞಾನ ಕ್ಷೇತ್ರಗಳನ್ನು ಪುಸ್ತಕಗಳ ಮೂಲಕವಾಗಿ ನಮ್ಮ ಹಿಂದಿನವರು ಸೃಜಿಸಿ ಕೊಟ್ಟಿದ್ದಾರೆ.

ಹೀಗಾಗಿ ಸಂಸ್ಕೃತಿಯ ವಿವಿಧ ಮುಖಗಳಲ್ಲಿ ಪುಸ್ತಕಗಳೂ ಸೇರುತ್ತವೆ. ಈ ಮಾತಿಗೆ ಎರಡು ಆಯಾಮಗಳಿವೆ. ಇದು ಸಂಸ್ಕೃತಿಯ ವಾಹಕವೂ ಹೌದು. ಸಂಸ್ಕೃತಿಯ ಬೆಳವಣಿಗೆಗೆ ಸಹಾಯಕವೂ ಹೌದು. ಹತ್ತನೆಯ ಶತಮಾನದ ಬದುಕು ಎನ್ನುವಾಗ ಅದನ್ನು ಗ್ರಹಿಸಲು ನಾವು ಪಂಪ ಮುಂತಾದ ಕವಿಗಳ ಕಾವ್ಯಕ್ಕೆ ಅಥವಾ ಕೆಲವು ಶಾಸನಗಳಿಗೆ ಮೊರೆಹೋಗುತ್ತೇವೆ. ಹೀಗಾಗಿ ಪುಸ್ತಕಗಳು ಸಂಸ್ಕೃತಿಯ ವಾಹಕ. ಮತ್ತೊಂದು ಸಂಸ್ಕೃತಿಯ ಅಭಿವೃದ್ಧಿಗೆ ಪೂರಕ; ಸಾಂಸ್ಕೃತಿಕವಾಗಿ ಕಾಲ ಕಾಲಕ್ಕೆ ಪರಿಷ್ಕೃತಗೊಳ್ಳುವ ಮೌಲ್ಯಗಳನ್ನು ಪುಸ್ತಕಗಳು ತಮ್ಮೊಳಗೆ ನಿಕ್ಷಿಪ್ತಗೊಳಿಸಿಕೊಳ್ಳುತ್ತಾ ಸಾಗುತ್ತವೆ. ಉದಾಹರಣೆಗೆ ರಾಘವಾಂಕನ ಹರಿಶ್ಚಂದ್ರ ಕಾವ್ಯ. ಸತ್ಯ ಎಂಬ ಸಾರ್ವಕಾಲಿಕ ಮೌಲ್ಯಕ್ಕೆ ಸಾಂಸ್ಥಿಕ ರೂಪವನ್ನು ನೀಡಿದ ಕಾವ್ಯವದು. ಹೀಗೆ ಪುಸ್ತಕ ಜಗತ್ತಿನ ಈ ಎರಡೂ ಸಾಧ್ಯತೆಗಳನ್ನು ನಾವು ಗುರುತಿಸಿಕೊಳ್ಳಬೇಕು.

ಯಾವುದೇ ಒಂದು ವಸ್ತು ಸಂಸ್ಕೃತಿಯ ಆಳ ಅಗಲಗಳಲ್ಲಿ ವ್ಯಾಪಿಸಿಕೊಳ್ಳಬೇಕೆಂದರೆ ಅದಕ್ಕೊಂದು ಸಮೃದ್ಧ ಪರಂಪರೆಯೂ ಇರಬೇಕಾಗುತ್ತದೆ. ನಮ್ಮ ಹಳೆಯ ಪರಂಪರೆಯಲ್ಲಿ ಪುಸ್ತಕಗಳ ರಕ್ಷಣೆ, ಪೂಜೆ ಇವೆಲ್ಲಕ್ಕೆ ಬಹಳ ಮಹತ್ವವಿದ್ದುದನ್ನು ಕಾಣುತ್ತೇವೆ. ಹಸ್ತಪ್ರತಿಗಳ ಕಾಲದಲ್ಲಿ ಬಹಳ ಕಠಿಣವಾದ ಹಾಗೂ ಪರಿಶ್ರಮ ಪೂರ್ವಕವಾದ ಕಾರ್ಯವನ್ನು ಪುಸ್ತಕ ನಿರ್ಮಾಣ ಒಳಗೊಳ್ಳುತ್ತಿತ್ತು. ಆಗಿನ ಒಂದು ಮಾತನ್ನು ಗಮನಿಸಬೇಕು;

ಜಲಾದ್ರಕ್ಷೇತ್ ತೈಲಾದ್ರಕ್ಷೇತ್ ರಕ್ಷೇತ್ ಶಿಥಿಲ ಬಂಧನಾತ್

ಮೂರ್ಖಹಸ್ತೇ ನ ದಾತವ್ಯಂ ಏವಂ ವದತಿ ಪುಸ್ತಕಂ//

ಪುಸ್ತಕ ಕೇಳಿಕೊಳ್ಳುತ್ತದಂತೆ: ನನ್ನನ್ನು ನೀರಿನಿಂದ ರಕ್ಷಿಸು, ಎಣ್ಣೆಯಿಂದ ರಕ್ಷಿಸು, ಸಡಿಲವಾಗಿ ಕಟ್ಟುವಿಕೆಯಿಂದ ರಕ್ಷಿಸು, ಮೂರ್ಖನ ಕೈಯಲ್ಲಿ ನನ್ನನ್ನು ಕೊಡಬೇಡ- ಇದು ವಿನಂತಿ. ಇವುಗಳಲ್ಲಿ ಕೊನೆಯ ಕೋರಿಕೆಯಿದೆಯಲ್ಲ; ಯಾರಿಗೆ ಪುಸ್ತಕದ ಮಹತ್ವ ತಿಳಿದಿದೆ ಅವರು ಅದನ್ನು ಗೌರವಿಸಲು ಸಾಧ್ಯ. ಅವರು ಪುಸ್ತಕಗಳನ್ನು ಪ್ರೀತಿಸಲು ಸಾಧ್ಯ. ಇಲ್ಲಿ ಪುಸ್ತಕಗಳು ಹೇಗೆ ಪರಂಪರೆಯಾಗಿ ಬೆಳೆದು ಬಂದಿವೆ ಎನ್ನುವುದು ಕಾಣಸಿಗುತ್ತದೆ. ಪುಸ್ತಕಗಳನ್ನು ಪ್ರತಿ ಮಾಡುವುದು, ಶಾಸ್ತ್ರದಾನ ಮಾಡುವುದು, ವಾಚನ, ಗಮಕ ಮುಂತಾದವೆಲ್ಲಾ ಪುಸ್ತಕ ಪ್ರಸರಣದಲ್ಲಿ ಕಾರ್ಯ ಮಾಡಿರುವ ಪ್ರಾಚೀನ ಸಂಗತಿಗಳು. ಹಾಗೆಯೇ ನಾವು ಪ್ರತಿ ವರ್ಷ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಪುಸ್ತಕಗಳನ್ನು ಪೂಜಿಸುವುದನ್ನು ಕಾಣುತ್ತೇವೆ. ಧರ್ಮಗಳು ವಿಧಿಸುವ ಧರ್ಮಗ್ರಂಥಗಳ ವಾಚನದ ಹಿಂದೆಯೂ ಪುಸ್ತಕಗಳ ಕುರಿತಾದ ಒಂದು ಸಾಂಸ್ಕೃತಿಕ ಎಚ್ಚರ ಕಾಣಸಿಗುತ್ತದೆ.

ಮುದ್ರಣ ಮಾಧ್ಯಮದ ಆವಿಷ್ಕಾರದಿಂದ ನಾವು ಒಂದು ದೊಡ್ಡ ಪುಸ್ತಕ ಜಗತ್ತನ್ನು ಪ್ರವೇಶ ಮಾಡಿದವು. ಪುಸ್ತಕಗಳು ವಿದ್ಯಾವಂತ ಸಮಾಜದ ಅವಿಭಾಜ್ಯ ಅಂಗ ಎಂಬಂತಾಯಿತು. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದ ಓದಾಗಿ, ಜ್ಞಾನ ಸಂಪಾದನೆಗಾಗಿ, ಮನೋಲ್ಲಾಸಕ್ಕಾಗಿ ಹೀಗೆ ಪುಸ್ತಕಗಳು ನಮ್ಮ ಬದುಕನ್ನು ನಿಧಾನವಾಗಿ ಒಳಗೊಳ್ಳುತ್ತಾ ಸಾಗುತ್ತವೆ.

ಪಾಶ್ಚಾತ್ಯ ರಾಷ್ಟ್ರಗಳ ಬಹಳಷ್ಟು ಉಲ್ಲೇಖಗಳನ್ನು ಗಮನಿಸಿದರೆ ಪುಸ್ತಕಗಳು ಜೀವನದ ಅವಿಭಾಜ್ಯ ಅಂಗವಾಗಿರುವುದು ಕಂಡು ಬರುತ್ತದೆ. ಆದರೆ ನಮ್ಮ ಭಾರತೀಯ ಸಮಾಜದಲ್ಲಿ ಪುಸ್ತಕಗಳು ನಮ್ಮ ಬದುಕಿಗೆ ಅನಿವಾರ್ಯವಾದ ವಸ್ತುಗಳು ಎಂದು ಇನ್ನೂ ಅನಿಸಿಲ್ಲದಿರುವುದು ಖೇದದಾಯಕ ಸತ್ಯ. ಅಕ್ಷರಸ್ಥರೇ ಕಡಿಮೆ, ಓದುವ ಹವ್ಯಾಸದವರು ಇನ್ನೂ ಕಡಿಮೆ, ಪದವೀಧರರಾದವರಲ್ಲೂ ಓದುವ ಹವ್ಯಾಸ ಬೆಳೆದಿಲ್ಲ. ಪುಸ್ತಕ ನಮಗೆ ಯಾವಾಗಲೂ ದುಬಾರಿಯ ವಸ್ತು. ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆಯೂ ಏರುತ್ತಿರುತ್ತದೆ. ಆದರೆ ಪುಸ್ತಕಗಳ ಬೆಲೆಯ ಬಗ್ಗೆ ಮಾತ್ರ ನಮ್ಮ ತಕರಾರು. ಇದಕ್ಕೆ ಕಾರಣ ಪುಸ್ತಕಗಳು ನಮ್ಮ ಆದ್ಯತೆ ಅಲ್ಲವಾಗಿರುವುದು. ಪುಸ್ತಕಗಳನ್ನು ಓದುವವರೇ ಕಡಿಮೆ ಎಂದು ಬಡಬಡಿಸುವ ನಾವು ಪುಸ್ತಕ ಸಂಸ್ಕೃತಿಯ ಬೆಳವಣಿಗೆಗೆ ಅಗತ್ಯ ಪರಿಸರವನ್ನು ರೂಪಿಸಿದ್ದೇವೆಯೇ? ಎಂದು ಪ್ರಶ್ನಿಸಿಕೊಳ್ಳಬೇಕು. ಪುಸ್ತಕಗಳು ನಮ್ಮ ಪ್ರತಿಷ್ಠೆಯ ಸಂಕೇತಗಳೆಂದು ನಾವು ತಿಳಿದುಕೊಳ್ಳಬೇಕಾಗಿದೆ. ಮುಂದುವರಿದ ದೇಶಗಳಲ್ಲಿ ಯಾರ ಮನೆಗೆ ಹೋದರೂ ಅಲ್ಲಿ ಭೋಗದ ವಸ್ತುಗಳೊಂದಿಗೆ ಪುಸ್ತಕಗಳೂ ಇರುತ್ತವೆ ಎಂದು ಹಲವರು ಹೇಳುತ್ತಾರೆ. ನಮ್ಮ ಶ್ರೀಮಂತರ ಮನೆಗಳಿಗೆ ಹೋದರೆ ಎಲ್ಲ ಭೋಗದ ವಸ್ತುಗಳೂ ಕಾಣಿಸುತ್ತವೆ. ಆದರೆ ಪುಸ್ತಕಗಳು ಮಾತ್ರ ನಾಪತ್ತೆ! ಹಾಗೇನಾದರೂ ಕೇಳಿದರೆ ಪುಸ್ತಕಗಳು ತಿನ್ನಲು ಬರುತ್ತವೆಯೇ? ಎಂದಾರು. ಮಿಕ್ಕ ಭೋಗದ ವಸ್ತುಗಳಿಗೆ ಯಾಕೆ ಈ ಮಾತು ಅನ್ವಯಿಸುವುದಿಲ್ಲ?

ನಮ್ಮ ನಾಡಿನ ಮಾದರಿ ಪುಸ್ತಕ ಪ್ರೇಮಿಯಾಗಿದ್ದ, ಪುಸ್ತಕ ಸಂಸ್ಕೃತಿಯ ವಕ್ತಾರರಾಗಿದ್ದ ಡಾ. ಹಾ. ಮಾ. ನಾಯಕರು ಒಮ್ಮೆ ಒಂದು ಚಿತ್ರವನ್ನು ಕಟ್ಟಿಕೊಟ್ಟಿದ್ದರು; ವಿದೇಶದಲ್ಲಿ ಪುಸ್ತಕಗಳನ್ನು ಮಾರದ ಅಂಗಡಿಗಳೇ ಅಪರೂಪ ಎನ್ನುತ್ತಾರವರು. ಅವು ಯಾವ ಬಗೆಯ ಪುಸ್ತಕಗಳೇ ಆಗಲಿ, ಅವನ್ನು ಮಾರುವುದು ಬೆಣ್ಣೆ, ಬೇಳೆ, ಬ್ರೆಡ್ ಗಳನ್ನು ಮಾರುವಷ್ಟೇ ಅಗತ್ಯವೆಂದು ಅಲ್ಲಿಯ ಅಂಗಡಿಯವರು ಭಾವಿಸುತ್ತಾರಂತೆ. ಒಂದು ದೊಡ್ಡ ವಿಭಾಗೀಯ ಮಳಿಗೆಗೆ ಮಹಿಳೆಯೊಬ್ಬಳು ಬಂದರೆ; ತಳ್ಳು ಗಾಡಿಯಲ್ಲಿ ಮಗುವನ್ನು ಕೂಡ್ರಿಸಿಕೊಂಡು ತನಗೆ ಬೇಕಾದ ಎಲ್ಲಾ ವಸ್ತುಗಳನ್ನೂ ಕೊಂಡುಕೊಳ್ಳುತ್ತಾಳೆ. ಕೊನೆಗೆ ಬಿಲ್ ಮಾಡಿಸುವಾಗ ಅಲ್ಲೇ ಬೀರುವಿನಲ್ಲಿ ಜೋಡಿಸಿಟ್ಟಿರುವ ಪುಸ್ತಕಗಳ ಸಾಲಿನಿಂದ ತನಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ, ಮಗುವಿನ ಕೈಯಲ್ಲೊಂದು ಬಣ್ಣದ ಚಿತ್ರಗಳಿರುವ ಪುಸ್ತಕಗಳನ್ನು ನೀಡುತ್ತಾಳೆ. ಅವೆರಡೂ ಅವಳ ಬಿಲ್‌ನ ಕೊನೆಯಲ್ಲಿ ಸೇರ್ಪಡೆಯಾಗುತ್ತವೆ. ಅಷ್ಟೇ ಹೊತ್ತಿನಲ್ಲಿ ಅವಳು ಆ ಪುಸ್ತಕದ ಅವಲೋಕನದಲ್ಲಿ ಮಗ್ನಳಾಗಿದ್ದರೆ; ಮಗು ಕಣ್ಣರಳಿಸಿಕೊಂಡು ತನ್ನ ಕೈಯಲ್ಲಿಯ ಪುಸ್ತಕವನ್ನು ತೆರೆಯುತ್ತಿರುತ್ತದೆ. ಪುಸ್ತಕ ಪ್ರೇಮಿಗಳಾದ ನಮಗೆ ಇದೊಂದು ಆಕರ್ಷಕ ಚಿತ್ರಣ. ಇದು ನಮ್ಮಲ್ಲಿಯ ವಾಸ್ತವವೂ ಆಗಬಾರದೆ? ಎಂಬ ಆಸೆ.

ಪುಸ್ತಕಗಳನ್ನು ಯಾಕೆ ಓದಬೇಕು? ಎಂಬುದು ಹಲವು ಜನರು ಕೇಳುವ ಪಶ್ನೆ. ಇದಕ್ಕೆ ಒಂದು ಅಂಕದ ಉತ್ತರ ನೀಡುವುದು ಸಾಧ್ಯವಿಲ್ಲ. ಬದಲಾಗಿ ಒಂದು ಶಿಕ್ಷಣ ಕ್ರಮವನ್ನೇ ನಡೆಸಬೇಕಾದೀತು! ಪುಸ್ತಕಗಳ ಓದಿನಿಂದ ಸಹಜವಾಗಿ ಜೀವನೋತ್ಸಾಹ, ಕ್ರಿಯಾಶೀಲತೆ, ಅಂತಸ್ಸತ್ವಗಳು ಹೆಚ್ಚುತ್ತವೆ. ಲೋಕದರ್ಶನ ಸಾಧ್ಯವಾಗುತ್ತದೆ. ಇದಕ್ಕಾಗಿಯೇ ಇರಬೇಕು; ದೇಶ ನೋಡು ಕೋಶ ಓದು ಎಂಬ ಗಾದೆ ಹುಟ್ಟಿಕೊಂಡಿರುವುದು. ಈ ಶತಮಾನದಲ್ಲಿ ಬದುಕಿದ್ದರೂ ಪ್ರಾಚೀನ ಯುಗಗಳ ಮಹಾವ್ಯಕ್ತಿಗಳನ್ನು ಸಂದರ್ಶಿಸಲು ಸಾಧ್ಯವಾಗುತ್ತದೆ. ಹಿರಿಯರ ಗ್ರಂಥಗಳನ್ನು ಓದುವಾಗ ಅವರೊಂದಿಗೆ ಸಂಭಾಷಿಸುತ್ತಿರುವಂತೆ ಭಾಸವಾಗುತ್ತದೆ. ಅವರು ಗೆಳೆಯರಂತೆ, ಗುರುಗಳಂತೆ, ಹಿರಿಯರಂತೆ ಕಾಣಿಸುತ್ತಾರೆ. ಅವರ ಸುಖ ದುಃಖದ ಅನುಭವ ನಮ್ಮದೂ ಆಗುತ್ತದೆ. ಮನಸ್ಸು ಆನಂದಾನುಭೂತಿಯಲ್ಲಿ ತೇಲಾಡುತ್ತದೆ.

ಹಾಫೀಜ್ ಕವಿಯ ಒಂದು ಚೌಪದಿಯ ಭಾವ ಹೀಗಿದೆ; ಇಬ್ಬರು ಗೆಳೆಯರು, ಎರಡು ಮಡಿಕೆ ತನಿ ಹೆಂಡ, ಕೈಯಲ್ಲೊಂದು ಪುಸ್ತಕ ಹಾಗೂ ಉದ್ಯಾನವೊಂದರ ಮೂಲೆ-ಇವಿಷ್ಟು ಸಿಕ್ಕರೆ ನಾನು ಇಹದಲ್ಲೂ ಪರದಲ್ಲೂ ಉಳಿದ ಎಲ್ಲ ಸುಖ ಸಂತೋಷಗಳನ್ನು ತ್ಯಜಿಸಬಲ್ಲೆ. ಇದರಲ್ಲಿ ಗೆಳೆಯರು-ವೈರಿಗಳಾಗಬಹುದು. ಹೆಂಡ ಮನಸ್ಸು ಕೆಡಿಸುತ್ತದೆ.ಉದ್ಯಾನ ಒಣಗಿ ಹೋಗಬಹುದು. ಆದರೆ ಕೈಯಲ್ಲಿರುವ ಪುಸ್ತಕ ಮಾತ್ರ ಮೋಸ ಮಾಡುವುದಿಲ್ಲ. ಹೀಗಾಗಿಯೇ ಹೇಳುವುದು; ಒಂದು ಒಳ್ಳೆಯ ಪುಸ್ತಕ ಕಷ್ಟಕಾಲದಲ್ಲಿ ಸ್ನೇಹಿತನಾಗುತ್ತದೆ, ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ, ಏಕಾಕಿತನದ ಭಾರವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದು ಎಂತಹ ಆಳವಾದ ದುಃಖವನ್ನೂ ಮರೆಯಲು ಸಹಾಯ ಮಾಡುತ್ತದೆ- ಇವೆಲ್ಲವೂ ಪುಸ್ತಕ ಪ್ರೇಮಿಗಳ ಅನುಭವದ ನುಡಿಸಾರ.

ಇಂಗ್ಲಿಷ್ ಕವಿ ರಾಬರ್ಟ್ ಸದೆಯ Scholar ಎಂಬ ಕವಿತೆಯನ್ನು ನೆನಪು ಮಾಡಿಕೊಳ್ಳಬೇಕು. ಇದನ್ನು ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು; ಕವಿಶಿಷ್ಯ ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ;

ಹೊತ್ತು ಹೋಗುವುದೆನಗೆ ಸತ್ತವರ ಸಂಗದಲಿ

ಬಳಸಿ ಬಂದಿಹರ ಕಾಣುತಿಹೆನು.

ಎತ್ತೆತ್ತ ಸುಲಿವೆನೊ ಈ ಕಣ್ಣನತ್ತತ್ತ

ಹಳಮೆಯ ಮಹಾತ್ಮರನು ಪರಮ ಕವಿಗಳನು

ನನಗವರೆ ಕೈಬಿಡದ ಕೆಳೆಯರಾದವರು

ದಿನದಿನದ ಮಾತುಕಥೆಗೆನಗಿರುವರವರು

ಅವರೊಡನೆ ಸಂತೋಷಪಡುತಿಹೆನು ಸೌಖ್ಯದಲಿ

ಕಷ್ಟದಲಿ ಶಾಂತಿಯರಸುವೆನವರಲಿ...

ಹೀಗೆ ಕವಿತೆ ಮುಂದುವರಿಯುತ್ತದೆ. ಇಡೀ ಕವಿತೆ; ಪುಸ್ತಕಗಳ ಸಾಮೀಪ್ಯ, ಓದು ಒದಗಿಸುವ ಸಂಸ್ಕಾರದ ದರ್ಶನ ಮಾಡಿಸುತ್ತದೆ.

ಓದಿಗೆ ಮುಖ್ಯವಾಗಿ ಎರಡು ಆಯಾಮಗಳಿವೆ. ಮೊದಲನೆಯದು ಪಠ್ಯಪುಸ್ತಕಗಳ ಓದು. ಇದು ಪರೀಕ್ಷೆಗಾಗಿ ಮಾಡುವ ನಿರ್ದಿಷ್ಟ ಓದು. ಇಂತಹ ಓದು ಸ್ವಾರಸ್ಯಕರವೆನ್ನಿಸುವ ಅವಕಾಶಗಳು ತುಂಬಾ ಕಡಿಮೆ. ಇನ್ನೊಂದು ಸಾಮಾನ್ಯ ಓದು. ಇದು ಹಸಿದ ಹೊಟ್ಟೆಗೆ ರುಚಿಯಾದ ಊಟ ದೊರಕಿದಂತೆ ಹರ್ಷದಾಯಕವೆನಿಸುತ್ತದೆ. ಇಂತಹ ಓದಿಗೆ ನಮ್ಮ ಅಭಿರುಚಿ ಮತ್ತು ಆಯ್ಕೆಗಳು ಮುಖ್ಯ ಮಾನದಂಡಗಳಾಗುತ್ತವೆ. ಯಾವುದೇ ಭಾಷೆಯಲ್ಲಿ ಮಾಹಿತಿ ಅಥವಾ ಮನರಂಜನೆ ಈ ಎರಡರಲ್ಲಿ ಒಂದು ದೃಷ್ಟಿಯಿಂದ ಕೆಲವಾದರೂ ಪುಸ್ತಕಗಳು ಅತಿ ಮುಖ್ಯವೆಂಬಂತೆ ಸ್ವೀಕೃತವಾಗಿರುತ್ತವೆ. ಜನಮಾನಸದಲ್ಲಿ ನಿರಂತರವಾಗಿ ನೆಲೆ ನಿಲ್ಲುವ ಅವು ಹಲವಾರು ಮುದ್ರಣಗಳನ್ನು ಕಂಡು ನಿರಂತರವಾದ ಜನಪ್ರೀತಿಯನ್ನು ಗಳಿಸಿಕೊಂಡಿರುತ್ತವೆ. ಕಾಲದ ಕಟ್ಟಿನ ಹಂಗನ್ನು ತೊರೆದು ಅವು ಕಾಲಾತೀತವಾಗಿ ಉಳಿದುಬಂದಿರುತ್ತವೆ. ಸಾಮಾನ್ಯವಾಗಿ ಅವುಗಳನ್ನು ಕ್ಲಾಸಿಕ್ಸ್ ಅಥವಾ ಚಿರಕೃತಿಗಳು ಎಂದು ಕರೆಯಲಾಗುತ್ತದೆ. ಆ ಕ್ಷೇತ್ರದಲ್ಲಿ ಅಂತಹ ಎಷ್ಟೇ ಕೃತಿಗಳು ಪ್ರಕಟವಾದರೂ ಇಂತಹ ಚಿರಕೃತಿಗಳ ಮಹತ್ವ ಮಸಳುವುದಿಲ್ಲ. ಇಂದಿನ ನಮ್ಮ ಓದಿನ ಆದ್ಯತೆಗಳು ಬದಲಾಗಿವೆ ಅಂದಾಕ್ಷಣ ನಮ್ಮ ಚಿರಕೃತಿಗಳ ಅಸ್ತಿತ್ವ ಮರೆಯಾಗಬಾರದು. ಆಗಾಗ ಅವುಗಳ ಮೇಲೆ ಹೊಸ ಬೆಳಕು ಬೀಳುವುದು, ಅವುಗಳ ಮಹತ್ವವನ್ನು ಎತ್ತಿ ಹೇಳುವ ಕಾರ್ಯ ನಡೆಯುತ್ತಲೇ ಇರಬೇಕಾಗುತ್ತದೆ.

ಕನ್ನಡ ಪುಸ್ತಕಲೋಕದಲ್ಲಿ ಅಂತಹ ಹಲವು ಚಿರಕೃತಿಗಳಿದ್ದು, ತಲೆಮಾರಿನಿಂದ ತಲೆಮಾರಿಗೆ ಅವುಗಳ ಅಸ್ತಿತ್ವ ಉಳಿದು, ಬೆಳೆದು ಬಂದಿದೆ. ಒಂದೊಂದು ಪುಸ್ತಕ ಒಂದೊಂದು ಕಾರಣಕ್ಕೆ ಜನಪ್ರೀತಿಯನ್ನು ಪಡೆದುಕೊಳ್ಳಬಹುದು. ಆದರೆ ಚಿರಕೃತಿಗಳು ಏಕಕಾಲಕ್ಕೆ ಹಲವರ ಪ್ರೀತಿಯನ್ನು ಸಂಪಾದಿಸಿರುತ್ತವೆ. ಈ ಜನಪ್ರೀತಿಯೇ ಅವುಗಳ ಸತ್ವವನ್ನು ತೋರಿಸುತ್ತದೆ. ಅಂದಾಕ್ಷಣ ಅವು ಜನಪ್ರಿಯವೆನ್ನಲಾಗುವುದಿಲ್ಲ. ಇವೆರಡರ ಮಧ್ಯೆ ಬದುಕು ಮಾಡುವ ಇಂತಹ ಪುಸ್ತಕಗಳು ಯಾವುದೇ ಭಾಷೆಯ ಸತ್ವವನ್ನು ಹೆಚ್ಚಿಸುತ್ತವೆ, ಜೀವಂತಿಕೆಯನ್ನು ಉಳಿಸುತ್ತವೆ. ಅಂತಹ ಹಲವು ಪುಸ್ತಕಗಳನ್ನು ಹೊಸ ಓದಿಗೆ ಗುರಿಪಡಿಸುವ ಉದ್ದೇಶ ಪ್ರಸ್ತುತ ಮಾಲಿಕೆಯದು. ಬದುಕಿನಲ್ಲಿ ನಾನು ಅತಿಯಾಗಿ ಪ್ರೀತಿಸುವ ಎರಡು ಮೂರು ಸಂಗತಿಗಳಲ್ಲಿ ಪುಸ್ತಕಗಳೂ ಬರುತ್ತವೆ. ಹೀಗಾಗಿ ಪುಸ್ತಕಗಳು ನನ್ನ ಪಾಲಿಗೆ ಬದುಕಿನ ಬುತ್ತಿ. ಅದಕ್ಕಾಗಿಯೇ ಈ ಮಾಲಿಕೆಗೂ ಅದೇ ಹೆಸರು. ಈ ನೆವದಲ್ಲಿ ಪುಸ್ತಕ ಪ್ರಿಯರೊಂದಿಗೆ ಸಂವಾದಿಸುವ ಅವಕಾಶ ನೀಡಿರುವ ಪುಸ್ತಕ ಲೋಕದ ವಕ್ತಾರ ಬುಕ್ ಬ್ರಹ್ಮ ಬಳಗಕ್ಕೆ ಧನ್ಯವಾದ.

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...